Latest News

Happenings & Events

ಶಿರಸಿಯಲ್ಲಿ ಜರುಗಿದ ಸಸ್ಯಾರೋಹಣ ಕಾರ್ಯಕ್ರಮದಲ್ಲಿ ಶ್ರೀ ಅನಂತಕುಮಾರ ಹೆಗಡೆಯವರು ಕದಂಬ ಸಸಿ ನೆಡುವ ಮೂಲಕ ಚಾಲನೆ ನೀಡಿದರು

"ಇತ್ತೀಚಿಗೆ ಸಂಭವಿಸಿದ ಭಾರಿ ಪ್ರಮಾಣದ ನೆರೆಯು ಕ್ಷೇತ್ರದಾದ್ಯಂತ ಬಹಳ ಹಾನಿಯುಂಟು ಮಾಡಿದೆ.  ಜಿಲ್ಲೆಯಲ್ಲಿ ಸಹ ಇಂತಹ ಮಳೆಯೂ  ೮-೧೦ ವರ್ಷಗಳಿಂದಲೂ ಸುರಿದಿರಲಿಲ್ಲ.  ಆದರೆ ಈ ಬಾರಿ ಬಂದದ್ದು ಎಲ್ಲೆಡೆ ಜನರ ಜೀವನ ತತ್ತರಿಸಿದೆ.  ಜನರು ಮರ ಕಡಿದರೆ ಮಳೆ ಆಗುವುದಿಲ್ಲ ಎಂದು ಹೇಳುತ್ತಾರೆ, ಆದರೆ ನನ್ನ ಅನಿಸಿಕೆ ಪ್ರಕಾರ ಮರ ಕಡಿದರೆ ಒಂದೋ ಈ ರೀತಿಯ ಅತಿವೃಷ್ಟಿ ಇಲ್ಲವಾದರೆ ಮಳೆಯೇ ಬರುವುದಿಲ್ಲ.  ಸರಿ ಸುಮಾರು ೮-೧೦ ವರ್ಷಗಳ ಹಿಂದೆ ಈ ರೀತಿಯ ಮಳೆ ಸಂಭವಿಸಿತ್ತು, ಅಂದಿನಿಂದ ಇಲ್ಲಿಯವರೆಗೂ ಅದೆಷ್ಟು ಮರಗಳನ್ನು ಕಡೆದಿದ್ದೇವೆ.  ಇತ್ತೀಚಿಗೆ ಅಮೆರಿಕಾದ್ಯಂತ ಶೀತ ಮಾರುತ ಪ್ರಾರಂಭವಾಗಿತ್ತು, ಆಗ ಅಮೆರಿಕಾದ ಅಧ್ಯಕ್ಷರಾದ ಟ್ರಂಪ್ ರವರು, ಗ್ಲೋಬಲ್ ವಾರ್ಮಿಂಗ್ (Global Warming) ಇರುವಿಕೆಯ ಬಗ್ಗೆ ಪ್ರಶ್ನಿಸಿದರು.  ಆದರೆ ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಭಾರತದ ಒಂದು ಹುಡುಗಿ ಟ್ರಂಪ್ ರಿಗೆ ವಿಷಯ ಗೊತ್ತಿಲ್ಲದೇ ಇದ್ದಲ್ಲಿ ಸುಮ್ಮನೆ ಮಾತನಾಡಬೇಡಿ ಎಂದು ಬಹಿರಂಗವಾಗಿ ಹೇಳಿದ್ದರು.

ಇತ್ತೀಚಿಗೆ ಒಂದು ರಿಪೋರ್ಟ್ ಓದುತಿದ್ದೆ, ಯುರೋಪ್ ಹಾಗು ಅಮೆರಿಕಾ ಖಂಡದಾದ್ಯಂತ ಬೇಸಿಗೆಯಲ್ಲಿ ವಿಪರೀತ ಬಿಸಿಲು ಹಾಗೆಯೇ ಚಳಿಗಾಲದಲ್ಲಿ ವಿಪರೀತ ಚಳಿ.  ಒಂದು ಅಧ್ಯಯನ ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ಪ್ರವಾಹ ಹೀಗೆ ಹೆಚ್ಚುತ್ತದೆ.  ಹಾಗೆಯೇ, ಇದೆ ರೀತಿ ನಮ್ಮ ಪಶ್ಚಿಮ ಘಟ್ಟದ ಭಾಗದಲ್ಲಿ ಮರ ಕಡಿಯುವುದು ಮುಂದುವರಿದರೆ ಕೇವಲ ೧೫೦ ವರ್ಷದಲ್ಲಿ ಈ ಪ್ರದೇಶವು ಮರಭೂಮಿಯಾಗಲಿದೆ.  ಗ್ರೀನ್ ಲ್ಯಾಂಡಿನ ಒಂದು ವರದಿಯ ಪ್ರಕಾರ ೨ ಬಿಲಿಯನ್ ಕ್ಯೂಬಿಕ್ ಮೀಟರ್ (2 Billion Cubic Meter)  ಅಷ್ಟು ಮಂಜುಗಡ್ಡೆ ಕರಗಿದೆ, ಇದರಿಂದ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಿದೆ.  ಹೀಗೆ ಮುಂದುವರೆದಲ್ಲಿ ಭಾರಿ ಪ್ರಮಾಣದ ಪ್ರವಾಹವು ಖಚಿತ.  ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರಬಹುದು, ನಾವೆಲ್ಲರೂ ಸಣ್ಣವರಿದ್ದಾಗ ಫ್ಯಾನ್ ನಿನ ಅಭ್ಯಾಸವೇ ಇರಲಿಲ್ಲ, ಆದರೆ ಈಗ ಫ್ಯಾನ್ ಇಲ್ಲದಿದ್ದರೆ ನಮಗೆ ಕೂಡುವುದಕ್ಕೆ ಸಾಧ್ಯವಿಲ್ಲ.  

ನಾನು ಒಂದು ಮರ ಕಡಿದರೆ ಏನಾಗುವುದಿಲ್ಲ ಎಂದು ಅಂದುಕೊಳ್ಳುತ್ತೇವೆ; ಆದರೆ ಅದೇ ರೀತಿ ೧೦೦೦ ಜನರು ಸಾವಿರಾರು ಮರ ಕಡಿದರೆ ಹೇಗಾಗುತ್ತದೆ?  ಪಶ್ಚಿಮ ಘಟ್ಟ ಭಾರತದ ಹೃದಯ, ಇಲ್ಲಿ ಮರಗಳನ್ನು ಕಡಿದರೆ ಭಾರತವಿಡಿ ಮಳೆ ಹಾಗು ನೀರಿನ ಅಭಾವ ಉಂಟಾಗುತ್ತದೆ.  ನಾವು ಇನ್ನು ಸಹ ಗಣಿ ಹಾಗು ಮತ್ತಿತರ ಚಟುವಟಿಕೆಗೋಸ್ಕರ ಮರಗಳನ್ನು ಕಡಿದರೆ ದೊಡ್ಡ ಅನಾಹುತವೇ ಸಂಭವಿಸಬಹುದು.  ಈಗ ಬಂದಂತಹ ಪ್ರವಾಹವು ನಮ್ಮಿಂದಲೇ ಆಗಿರುವುದು ನಮ್ಮ ದುರಾಸೆಯಿಂದಲೇ.....  ಇದನ್ನು ಸುಧಾರಿಸಲು ಅರಣ್ಯ ಇಲಾಖೆ ಹಾಗು ಕದಂಬ ಫೌಂಡೇಶನ್, ಒಂದು ಯೋಜನೆಯನ್ನು ರೂಪಿಸಿಕೊಂಡಿದೆ.  ಕಳೆದ ವರ್ಷ ನಾವೇನು ಕಾರ್ಯಕ್ರಮ ಮಾಡಿದ್ದೇವೋ ಅದರ ಎರಡನೆ ವರ್ಷ ಇಂದು.  ನಾವು ಅರಣ್ಯಾಧಿಕಾರಿಗಳ ಜೊತೆಗೆ ಮಾತನಾಡಿದ್ದೆವು, ಮುಂದಿನ ವರ್ಷದ ಒಳಗೆ ನಮ್ಮ ಕ್ಷೇತ್ರದಲ್ಲಿ ೫ ಲಕ್ಷ ಗಿಡಗಳನ್ನು ನೆಡಬೇಕೆಂಬ ಗುರಿಯ ಬಗ್ಗೆ... ಇದೊಂದು ಕೇವಲ ಗುರಿಯಲ್ಲ, ಇಲ್ಲಿ ನಮ್ಮ ಕಾರ್ಯಕರ್ತರು, ಪಂಚಾಯತಿ ಸದಸ್ಯರು, ಅರಣ್ಯಾಧಿಕಾರಿಗಳು, ಪ್ರಮುಖರು  ಎಲ್ಲರು ಉಪಸ್ಥಿತರಿದ್ದೀರಿ..... ಇದು ನಿಮಗೆಲ್ಲ ಟಾಸ್ಕ್ ಇದ್ದ ಹಾಗೆ, ಗಿಡಗಳನ್ನು ಅರಣ್ಯಾಧಿಕಾರಿಗಳು ಕೊಡುತ್ತಾರೆ, ನಿಮ್ಮ ಕೆಲಸ ಅದನ್ನು ನೆಡುವುದು, ನಿಮ್ಮ ಜಾಗದಲ್ಲಿ ಅಂತ ಅಲ್ಲ,  ಕಾಡಿನಲ್ಲಿಯೂ ಮರವಿಲ್ಲದಿದ್ದಲ್ಲಿ ನೆಡಬಹುದು, ಇದಕ್ಕೆ ಅಧಿಕಾರಿಗಳ ಸಮ್ಮತಿಯೂ ಇದೆ.

ಅಂಟ್ವಾಳ ಕಾಯಿ, ಹಲಸಿನ ಹಣ್ಣು ಮುಂತಾದ ಗಿಡಗಳನ್ನು ನೆಡಬೇಕು, ಇದನ್ನು ಬೆಳೆಯಿರಿ, ಬೆಳೆದಿರುವ ಮರಗಳಿಂದ ಬರುವ ಫಲಗಳನ್ನು ನೀವೇ ತಗೆದುಕೊಳ್ಳಬಹುದು.... ಅದಕ್ಕೆ ಅರಣ್ಯ ಇಲಾಖೆ, ಒಂದು nominal tender fee ತಗೆದುಕೊಂಡು ಗ್ರಾಮ ಸಭೆಗೆ ಕೊಡುತ್ತಾರೆ.  ಇದೆ ಒಂದು ಉದ್ಯಮದ ಹಾಗೆ ರೂಪಾಂತರಗೊಳ್ಳಬೇಕು.  ನಮ್ಮ ಪ್ರಕಾರ ಉದ್ಯಮ ಎಂದರೆ ದೊಡ್ಡ ಕಾರ್ಖಾನೆ ಹಾಗು ಒಂದು ನಾಲ್ಕು ಮಂದಿಗೆ ಕೆಲಸ ಕೊಡುವುದು  ಅಂತಲೇ ಇದೆ......., ಆದರೆ ಅದರಿಂದ ಆಗುವ ದುಷ್ಪರಿಣಾಮವನ್ನು ಅನುಭವಿಸುವವರು ಯಾರು...??  ಮರ ಬೆಳೆಯುವುದರಿಂದಲೂ ಉದ್ಯೋಗ ಹಾಗು ಉದ್ಯಮವನ್ನು ಸೃಸ್ಟಿಸಬಹುದು.  ಹೇಗೆಂದರೆ ಉದಾಹರಣೆಗೆ ಹಲಸಿನ ಹಣ್ಣಿನಿಂದ ಕ್ರೀಮ್ ಅನ್ನು ತಗೆದು ಐಸ್ ಕ್ರೀಮ್ ಕಂಪನಿಗಳಿಗೆ ಮಾರಬಹುದು.  ಅಮುಲ್ ಅಂತಹ ಒಂದು ಸಂಸ್ಥೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಅಷ್ಟೂ ರೈತರಿಂದ ಪೂರೈಸಲು ಸಾಧ್ಯವಿಲ್ಲ....  ಅಷ್ಟು ಕ್ರೀಮ್ ನ ಅವಶ್ಯಕತೆ ಇದೆ.  ಇದು ಉದ್ಯಮ.  ಅರಣ್ಯ ಇಲಾಖೆಗೆ ಗಿಡಗಳನ್ನು ಕೊಡುವುದಕ್ಕೆ ಬೇಕಾಗಿರುವ ಹಣ ಹಾಗು ನೀವು ಆ ಗಿಡಗಳನ್ನು ಗುಂಡಿ ತೋಡಿ ನೆಡುವುದಕ್ಕೆ ಬೇಕಾಗಿರುವ ಶ್ರಮಕ್ಕೆ ಸಲ್ಲಬೇಕಾದ ಹಣವನ್ನು ಕೂಡ ನಾವು ತರೆಸಿಕೊಡುತ್ತೇವೆ.  ಇಂತಹದೊಂದು  ಆಂದೋಲನವನ್ನು ನಾವು ಇಂದು ಬನವಾಸಿಯಲ್ಲಿ ಪ್ರಾರಂಭಿಸಿದ್ದೇವೆ ಇದು ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ  ಹರಡಬೇಕು.  ನಮ್ಮ ಕ್ಷೇತ್ರ ಪರಿಸರ ಸಂರಕ್ಷಣೆಗೆ ಮಾದರಿಯಾಗಿ ಹೊರಹೊಮ್ಮ ಬೇಕು."

#ಅನಂತಕುಮಾರಹೆಗಡೆ

 

ಶುಕ್ರವಾರದಂದು  ಶಿರಸಿ ತಾಲೂಕಿನ ಬನವಾಸಿಯಲ್ಲಿ ಅರಣ್ಯ ಇಲಾಖೆ ಹಾಗು ಕದಂಬ ಫೌಂಡೇಶನ್‍ ವತಿಯಿಂದ  ಜರುಗಿದ "ಸಸ್ಯಾರೋಹಣ" ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು  ಕದಂಬ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಎಸಳೆ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ,  ಶ್ರೀ ಚಂದ್ರು ಎಸಳೆ, ತಾಲೂಕ ಪಂಚಾಯತ ಸದಸ್ಯರು, ಶ್ರೀ ಶಿವಕುಮಾರಗೌಡ ರುದ್ರಗೌಡ್ರು, ಎಪಿಎಂಸಿ ಸದಸ್ಯರು, ಶ್ರೀ ಗಣೇಶ ಸಣ್ಣಲಿಂಗಣ್ಣ, ಬನವಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts