Infinite Thoughts

Thoughts beyond imagination

ದೀಪ, ಬೆಳಕು, ಪ್ರಕಾಶ ಮತ್ತು ಧಾರ್ಮಿಕತೆ - ಭಾಗ ೧

ದೀಪ, ಬೆಳಕು, ಪ್ರಕಾಶ ಮತ್ತು ಧಾರ್ಮಿಕತೆ - ಭಾಗ ೧ 

ದೀಪ  ಸನಾತನ ಹಿಂದೂ ಪರಂಪರೆಯ ಧಾರ್ಮಿಕ ಸಂಕೇತ. ದೀಪ ಅಂದರೇ ಬೆಳಕು. ಈ ಬ್ರಹ್ಮಾಂಡದಲ್ಲಿ ಅಂಧಕಾರ ಅಥವಾ ಕತ್ತಲೆ ಎಂಬುದೇ  ವ್ಯಾಪಕ. ಅಂದರೆ ಇಡೀ ವಿಶ್ವದಲ್ಲಿ ಕತ್ತಲೆಯೇ ಒಂದು ರೀತಿಯ ಶಾಶ್ವತ ಸ್ಥಿತಿ. ಒಂದು ಚಿಕ್ಕ ಬೆಳಕಿನ ಕಿಡಿ ಕತ್ತಲೆಯನ್ನು ಓಡಿಸುತ್ತದೆ. ಬೆಳಕಿನ ಪ್ರಕಾಶದಲ್ಲಿ ಅಂಧಕಾರದಲ್ಲಿದ್ದದ್ದರ ದರ್ಶನವಾಗುತ್ತದೆ. ಅಂಧಕಾರ ಅಂದರೆ ಅದು ಕುರುಡುತನವೇ... ನಮ್ಮ ದೃಷ್ಟಿಗೆ ಯಾವುದೂ ಗೋಚರವಾಗದ ಸ್ಥಿತಿ. ಆದರೆ ಬೆಳಕು ಅಂಧಕಾರವನ್ನು ದೂರಮಾಡಿ ನಮಗೆ ದೃಷ್ಟಿಯನ್ನು ನೀಡುತ್ತದೆ. ವಿಶ್ವದಲ್ಲಿ ಅಥವಾ ಈ ಬ್ರಹ್ಮಾಂಡದಲ್ಲಿ ನಕ್ಷತ್ರಗಳೇ ಬೆಳಕಿನ ಮೂಲಗಳು. ನಕ್ಷತ್ರಗಳಿಲ್ಲದಿದ್ದಲ್ಲಿ ಅಂಧಕಾರವೇ ಶಾಶ್ವತ. ಬ್ರಹ್ಮಾಂಡದಲ್ಲಿ ಕೋಟಿ  ಕೋಟಿ  ನಕ್ಶತ್ರಪುಂಜಗಳು... ಒಂದೊಂದು ನಕ್ಷತ್ರಪುಂಜಗಳೊಳಗೂ ಕೋಟಿ  ಕೋಟಿ ನಕ್ಷತ್ರಗಳು... ನಮ್ಮ ಸೂರ್ಯನೂ ಒಂದು ನಕ್ಷತ್ರ ... ಆದರೆ ಸೂರ್ಯಗಿಂತ  ನೂರಾರು ಸಾವಿರಾರು ಪಟ್ಟು ದೊಡ್ಡ ನಕ್ಷತ್ರಗಳು ಅಗಣಿತ ಪ್ರಮಾಣದಲ್ಲಿ ಇವೆ. ನಾವು ಅಂದರೆ ನಮ್ಮ ಸೂರ್ಯ ಮತ್ತು  ಅವನ ಸೌರ ಮಂಡಲ  ಇರುವುದು ಈ  ಆಕಾಶಗಂಗಯ ನಕ್ಷತ್ರ ಪುಂಜವೊಂದರಲ್ಲಿ  ಅಥವಾ ಗ್ಯಾಲಕ್ಸಿಯಲ್ಲಿ. ಬ್ರಹ್ಮಾಂಡದಲ್ಲಿ ಇಂಥಾ ಗ್ಯಾಲಕ್ಸಿಗಳು ಅದೆಷ್ಟಿರಬಹುದು ಎಂಬ ಲೆಕ್ಕಾಚಾರವನ್ನೇ ಇನ್ನೂ ಮನುಷ್ಯನಿಗೆ ಮಾಡಲು ಸಾಧ್ಯವಾಗಿಲ್ಲ. ತೀರಾ ಇತ್ತೀಚಿನ ಒಂದು ಅಂದಾಜಿನ ಪ್ರಕಾರ ನಾವು ಮನುಷ್ಯರು ತಯಾರಿಸಿದ ಹಬಲ್ ನಂಥಾ ಅತ್ಯಂತ ಶಕ್ತಿಶಾಲೀ ದೂರದರ್ಶಕಕ್ಕೆ ನಿಲುಕಬಹುದಾದ  ನಕ್ಷತ್ರ ಪುಂಜ ಅಥವಾ ಗ್ಯಾಲಕ್ಸಿಗಳ ಸಂಖ್ಯೆ ಸುಮಾರು ಇನ್ನೂರು ಬಿಲಿಯನ್..! ಒಂದು ಬಿಲಿಯನ್ ಅಂದರೆ ನೂರು ಕೋಟಿ! ಅಂದರೆ ಇವತ್ತು ಮನುಷ್ಯ ಸಾಮರ್ಥ್ಯಕ್ಕೆ ಅಂದಾಜು ಮಾಡಬಹುದಾದ ನಕ್ಷತ್ರ ಪುಂಜಗಳ ಸಂಖ್ಯೆಯೇ ಸಾವಿರಾರು ಕೋಟಿ. ಅಂದರೆ ಇಡೀ ಸೌರಮಂಡಲಕ್ಕೇ ಬೆಳಕು ನೀಡುವ ಸೂರ್ಯ, ಭೂಮಿಯನ್ನೇ ಸುಡುವಷ್ಟು ಬಿಸಿಲನ್ನು ನೀಡುವ ಸೂರ್ಯ ಬ್ರಹ್ಮಾಂಡದಲ್ಲಿರುವ ಅಗಣಿತ ಅಸಂಖ್ಯ ಅನಂತ ನಕ್ಷತ್ರಗಳ ಎದುರು ಲೆಕ್ಕಕ್ಕೆ ಸಿಗುವುದಿಲ್ಲ... ಅದು ಹೋಗಲಿ ಮನುಷ್ಯ ಇದುವರೆಗೆ ಅನ್ವೇಷಣೆ ಮಾಡಿದ್ದರಲ್ಲಿ ತಿಳಿದುಕೊಂಡದ್ದೇನೆಂದರೆ ನಮ್ಮ ಆಕಾಶಗಂಗೆ ನಕ್ಷತ್ರಪುಂಜದಲ್ಲೇ ಇದುವರೆಗೆ ಸೂರ್ಯನಿಗಿಂತ ಲಕ್ಷಾಂತರ ಪಟ್ಟು ದೊಡ್ಡದಾದ ನಕ್ಷತ್ರಗಳು ಹಲವಾರಿವೆ. ವಿ ವೈ ಕ್ಯಾನಿಸ್ ಮೇಜೋರಿಸ್ ಎಂಬ ನಕ್ಷತ್ರ ಮನುಷ್ಯ ಇದುವರೆಗೆ ಆಕಾಶ ಗಂಗೆ ನಕ್ಷತ್ರಪುಂಜದಲ್ಲಿ ಅಂದರೆ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಕಂಡು ಹಿಡಿದ ಅತ್ಯಂತ ದೊಡ್ಡ ನಕ್ಷತ್ರ... ಅದೆಷ್ಟು ದೊಡ್ಡದಿದೆಯೆಂದರೆ ನಮ್ಮ ಇಡೀ ಸೌರಮಂಡಲವನ್ನೇ   ಮುಕ್ಕಾಲುಭಾಗ ಆವರಿಸುವಷ್ಟು...! 

ಈ ನಕ್ಷತ್ರಗಳೆಲ್ಲಾ ನಿರಂತರವಾಗಿ ಲಕ್ಷಾಂತರ ವರ್ಷ ಉರಿಯುತ್ತಲೇ ಇರುವಂಥ ಆಕಾಶ ಕಾಯಗಳು... ನಮ್ಮ ಒಂದು ಸೂರ್ಯನ ಶಾಖವನ್ನೇ ನಮಗೆ ತಡೆದುಕೊಳ್ಳಲು ಆಗುವುದಿಲ್ಲ... ಹಾಗಾದರೆ ಈ ಬ್ರಹ್ಮಾಂಡದಲ್ಲಿ ಇರುವ ಅನಂತ  ಕೋಟಿ ಕೋಟಿ ಕೋಟಿ ನಕ್ಷತ್ರಗಳಿಂದ ಹೊರಸೂಸಬಹುದಾದ ಬೆಳಕು ಮತ್ತು ಶಾಖವನ್ನು ಒಮ್ಮೆ ಊಹಿಸಿಕೊಳ್ಳಿ...! ಆದರೆ ಬ್ರಹ್ಮಾಂಡದಲ್ಲಿ ಇಷ್ಟೆಲ್ಲಾ ಬೆಂಕಿ, ಬೆಳಕು, ಪ್ರಕಾಶಗಳಿದ್ದರೂ ಬ್ರಹ್ಮಾಂಡವನ್ನಾವರಿಸಿರುವ ಗಾಢಾಂಧಕಾರವನ್ನು ಹೊಡೆದೋಡಿಸಲು, ಬ್ರಹ್ಮಾಂಡವನ್ನೇ ಸಂಪೂರ್ಣವಾಗಿ ಬೆಳಗಲು ಸಾಧ್ಯವೇ ಆಗಿಲ್ಲ ... ಅಂದರೆ ಈ ಬ್ರಹ್ಮಾಂಡದಲ್ಲಿ  ಅನಂತ  ಕೋಟಿ ಕೋಟಿ ಕೋಟಿ ನಕ್ಷತ್ರಗಳಿದ್ದರೂ ನಮಗೆ ಅವು ಅಲ್ಲಲ್ಲಿ ಮಿನುಗುವ ಚಿಕ್ಕ ಚಿಕ್ಕ ದೀಪಗಳಂತೆ ಮಾತ್ರ ಕಾಣುತ್ತವೆ. ಈ ನಕ್ಷತ್ರಗಳ ಬೆಳಕಿನಲ್ಲಿ ನಮಗೇನು ಕಾಣಿಸುತ್ತದೋ... ನಮ್ಮ ದೃಷ್ಟಿಗೇನು ಗೋಚರವಾಗುತ್ತದೋ... ಅದು ಮಾತ್ರ ನಮ್ಮ ಅರಿವಿನಲ್ಲಿರುವ ಬ್ರಹ್ಮಾಂಡ... ಉಳಿದದ್ದೆಲ್ಲವೂ ಸಂಪೂರ್ಣ ಕತ್ತಲೆ...ಗಾಢ ಅಂಧಕಾರ...! ಈ ಮಹಾನ್ ಅಂಧಕಾರದ  ವ್ಯಾಪ್ತಿ ಎಷ್ಟು..? ಉಹೂಂ ಅದನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ... ಹಾಗಾಗಿಯೇ ಅದನ್ನು ಇನ್ಫಿನಿಟಿ ಎಂದು ಆಂಗ್ಲಭಾಷೆಯಲ್ಲೂ ಅನಂತ ಎಂದು ಸಂಸ್ಕೃತದಲ್ಲೂ ಕರೆದಿರುವುದು. ಅಂದರೆ ಈ ಬ್ರಹ್ಮಾಂಡದ ಗಾತ್ರ ಅದೆಷ್ಟು ಅನಂತವೋ ಅದರಷ್ಟೇ ಅನಂತ ಇಡೀ ಬ್ರಹ್ಮಾಂಡವನ್ನಾವರಿಸಿರುವ ಅಂಧಕಾರದ್ದೂ ...! 

ಅಲ್ಲಲ್ಲಿ ದೀಪಗಳಂತೆ ಮಿನುಗುವ ನಕ್ಷತ್ರಗಳು ಮತ್ತು  ಈ ನಕ್ಷತ್ರಗಳ ಬೆಳಕಿನಲ್ಲಿ ಗೋಚರವಾಗುವ ಗೃಹಗಳು ಮಾತ್ರವೇ ಈ ಬ್ರಹ್ಮಾಂಡದಲ್ಲಿ ನಮ್ಮ ಕಣ್ಣಿಗೆ ಕಾಣಿಸುತ್ತವೆ. ಉಳಿದ ಅಷ್ಟೂ ಜಾಗ ಅಥವಾ ಆಕಾಶ ಅಥವಾ ಅವಕಾಶ ವೇ ಅಂತರಿಕ್ಷ ಅಥವಾ ನಾವು ಸ್ಪೇಸ್ ಅಂತ ಕರೆಯುವ ಖಾಲೀ ಜಾಗ... ಅಂದರೆ ಈ ಬ್ರಹ್ಮಾಂಡದಲ್ಲಿ ನಕ್ಷತ್ರಗಳು, ಗ್ರಹಗಳು, ಉಲ್ಕೆಗಳು, ಧೂಮಕೇತುಗಳು, ಹೀಗೆ ಈ ಎಲ್ಲಾ ಆಕಾಶಕಾಯಗಳನ್ನು ಹೊರತು ಪಡಿಸಿ ಇರುವ ಅಗಾಧವಾದ ಅಂತರಿಕ್ಷವನ್ನೇ ನಮ್ಮ ಸನಾತನ ಹಿಂದೂ ಧರ್ಮ "ಶೇಷ" ಅಂತ ಕರೆದಿರುವುದು. ಶೇಷ ಅಂದರೆ "ಉಳಿದದ್ದು" ಅಂತ ಅರ್ಥ.... ಅಂದರೆ ಅದುವೇ ಸ್ಪೇಸ್.  ನಮ್ಮ ಸನಾತನ ಹಿಂದೂ ದರ್ಶನಗಳು ಈ "ಶೇಷ" ವನ್ನೇ "ಮಹಾಶೇಷ" ಅಂತ ಕರೆದದ್ದು. ಈ ಮಹಾಶೇಷ ಬ್ರಹ್ಮಾಂಡ ಹುಟ್ಟುವುದಕ್ಕಿಂತಲೂ ಮೊದಲೇ ಅಂದರೆ ಸೃಷ್ಟಿಕಾರ್ಯ ಆರಂಭ ಆಗುವುದಕ್ಕಿಂತಲೂ ಮೊದಲೇ ಇತ್ತು... ಅಂದರೆ ಆದಿಯಲ್ಲೇ ಇತ್ತು.. ಹಾಗಾಗಿಯೇ ಇದು "ಆದಿ ಶೇಷ..!" . ಈ ಆದಿ ಶೇಷ ಅಥವಾ ಮಹಾಶೇಷ ಅದೆಷ್ಟು ದೊಡ್ಡದು, ಅದರ ಗಾತ್ರ ಎಷ್ಟು ಅಂತ ಅಂದರೆ ಅದನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಅದನ್ನು ಅಂಕೆ ಸಂಖ್ಯೆಗಳಲ್ಲಿ ಅಳೆಯಲು ಸಾಧ್ಯವೇ ಇಲ್ಲ... ಹಾಗಾಗಿಯೇ... ಅದು ಅನಂತ....! 

ನಮ್ಮ ಹಿಂದೂ ಧಾರ್ಮಿಕ ನಂಬಿಕೆಗಳು, ನಮ್ಮ ಪೌರಾಣಿಕ ಕಥೆಗಳು, ಕಲ್ಪನೆಗಳು, ಇವುಗಳನ್ನೆಲ್ಲಾ ಆಧುನಿಕ ವಿಜ್ಞಾನದ ಮುಂದೆ ತುಲನೆ ಮಾಡಿ ನಮ್ಮದೆಲ್ಲಾ  ಮೂಢನಂಬಿಕೆಗಳೆಂದು ಲೇವಡಿ ಮಾಡುವ, ಗೊಡ್ಡು ಪುರಾಣಗಳೆಂದು ಮೂದಲಿಸುವ ಮಂದಿಗೇನು ಗೊತ್ತು ನಮ್ಮ ನಂಬಿಕೆ ಆಚರಣೆಗಳ ಹಿಂದೆ ಹುದುಗಿರುವ ಸಾಂಕೇತಿಕ, ತಾತ್ವಿಕ ಅರ್ಥ ಮತ್ತು ವೈಜ್ಞಾನಿಕ ಮಹತ್ವ..? ನಮ್ಮಲ್ಲಿನ ಆದಿಶೇಷ.. ಮಹಾಶೇಷನ  ಕಲ್ಪನೆಗಳೇ ಅದ್ಭುತ. ಜಗತ್ತಿನ ಇತರ ಯಾವುದೇ ಧರ್ಮಗಳಲ್ಲೂ ಕಂಡು ಬಾರದ ಆಳವಾದ ವೈಜ್ಞಾನಿಕ ಚಿಂತನೆ ಇದೆಲ್ಲದರ ಹಿಂದಿದೆ.  ಶೇಷ ಅಂದರೆ ಅದು ಅಳೆಯಲು ಸಾಧ್ಯವೇ ಇಲ್ಲದ ಅನಂತ ಎಂಬ ಸಾಂಕೇತಿಕತೆ ನಮ್ಮಲ್ಲಿ ಹೇಗಿದೆಯೋ ಅದೇ ರೀತಿ ಶೇಷ ಅಂದರೆ  ಅದು ಅಂಧಕಾರದ ಸಂಕೇತವೂ ಹೌದು... ಅಂಧಕಾರವೆಂದರೆ ಅದು ಅಜ್ಞಾನ... ಅಜ್ಞಾನ ಎಂದರೆ ನಮಗೆ ತಿಳಿದಿಲ್ಲದಿರುವುದು... ಅಂಧಕಾರವೆಂದರೆ ಅದು ಕಪ್ಪು... ಅಂಧಕಾರವೆಂದರೆ ಅದು ಒಂದು ರೀತಿಯಲ್ಲಿ ವಿಷ...! ಹೌದು ಬೆಳಕು, ಪ್ರಕಾಶ ಎಂಬುದು ಜ್ಞಾನದ ಸಂಕೇತ, ಅಂದರೆ ಜೀವನದ ಸಂಕೇತ, ಅಂದರೆ ಅಮೃತತ್ವದ ಸಂಕೇತವಾಗುವ ಹಾಗೆಯೆ ಕತ್ತಲೆ, ಅಂಧಕಾರ, ಅಜ್ಞಾನ, ಎಂಬುದು ಬೆಳಕಿಗೆ, ಪ್ರಕಾಶಕ್ಕೆ, ಜ್ಞಾನಕ್ಕೆ ಅಮೃತತ್ವಕ್ಕೆ ವಿರುದ್ಧವಾದದ್ದು. ಅಮೃತಕ್ಕೆ ವಿರುದ್ಧವಾದದ್ದು ವಿಷವೇ.. ಕಪ್ಪು ಕಡು ವರ್ಣಕ್ಕೆ, ವಿಷಕ್ಕೆ.... ಸರ್ಪವೇ  ಸಂಕೇತ... ಹಾಗಾಗಿ ಶೇಷ ಅಂದರೆ ಅದು ಸಾಂಕೇತಿಕವಾಗಿ ಸರ್ಪವೇ ... ಘಟಸರ್ಪವೇ ..! 

ನಮ್ಮ ಪುರಾಣಗಳು ಭಗವಾನ್ ವಿಷ್ಣುವನ್ನು ಶೇಷಶಯನ ಅಂತ ಹೇಳಿದೆ... ಶೇಷನನ್ನು ಆದಿಶೇಷ ಅಂತಲೂ ಮಹಾಶೇಷ ಅಂತಲೂ ಕರೆಯುತ್ತೇವೆ... ವಿಷ್ಣು ಎಂಬ ಪದದ ಅರ್ಥವೇ ಸರ್ವಾಂತರ್ಯಾಮಿ ಅಂತ... ಅಂದರೆ ಎಲ್ಲೆಲ್ಲೂ ಇರುವವನು ಅಂತ ಅರ್ಥ. ಎಲ್ಲ ಕಡೆಯೂ ವ್ಯಾಪಿಸಿರುವವನು, ಶಕ್ತಿಸ್ವರೂಪನಾದವನು ಯಾರು ಅಂದರೆ ಅವನೇ ಭಗವಂತ, ಪರಮಾತ್ಮ... ಈ ಪರಮಾತ್ಮ ಎಲ್ಲಿರುತ್ತಾನೆ ಅಂತಂದರೆ ಅವನು ಆದಿಶೇಷನ ಮೇಲೆ, ಅಥವಾ ಮಹಾಶೇಷನ ಮೇಲೆ ಪವಡಿಸಿರುತ್ತಾನೆ...! ಹಾಗಾಗಿಯೇ ಅವನನ್ನು ಶೇಷಶಯನ ಅಂದರೆ ಶೇಷನ ಮೇಲೆ ಮಲಗಿರುವವನು ಅಂತ ಕರೆದದ್ದು..!  

ಶೇಷ, ಆದಿಶೇಷ, ಮಹಾಶೇಷ  ಎಂಬುದು ಅದೆಷ್ಟು ವ್ಯಾಪಕವಾಗಿದೆ ಅಂದರೆ ಅದರ ಆಳ ವಿಸ್ತಾರಗಳನ್ನು ಅಳತೆಮಾಡುವುದಕ್ಕೇ ಸಾಧ್ಯವಿಲ್ಲ... ಹಾಗಾಗಿಯೇ ಅದು ಅನಂತ... ಶೇಷ ಎಂಬುದು ಅನಂತ ಎಂದ ಮೇಲೆ ಶೇಷಶಯನ ಮತ್ತು ಅನಂತಶಯನ ಒಂದೇ ಅಲ್ಲವೇ..? ಹಾಗಾಗಿಯೇ ಬೆಳಕಿನ ಕಿರಣದಂತಿರುವ ಪರಮಾತ್ಮ ಸ್ವರೂಪ ವಿಷ್ಣು ಎಲ್ಲಿರುತ್ತಾನೆ ಅಂದರೆ ಆತ ಶೇಷನ ಮೇಲೆ ಮಲಗಿರುತ್ತಾನೆ... ಅಥವಾ ಶೇಷಶಯನನಾಗಿರುತ್ತಾನೆ... ಅಂದರೆ ಅನಂತಶಯನನಾಗಿರುತ್ತಾನೆ... 

ಹಿಂದೂ ಧಾರ್ಮಿಕ ನಂಬಿಕೆಗಳೆಲ್ಲವೂ ಮೂಢನಂಬಿಕೆಗಳೆಂದು ಜರೆಯುವ ಮಂದಿಗೆ ಆದಿಶೇಷನ ಮೇಲೆ ಮಲಗಿರುವಂಥ ನಮ್ಮ ವಿಷ್ಣುವಿನ ಮೂರ್ತಿ ತಮಾಷೆಯ ವಸ್ತುವೆಂದು ತೋರುತ್ತದೆ...ಶೇಷಶಯನನೇ ಅನಂತಶಯನ ... ಇದರ ಹಿಂದೆ ಬಹಳ ಗಾಢವಾದ ವೈಜ್ಞಾನಿಕ ತತ್ವ ಅಡಗಿದೆ ಅಂತ ಹೇಳಿದರೂ ಇವರು ಉಡಾಫೆ ಮಾಡಿಯಾರು... ಅದೇ ಸಂಸ್ಕೃತ ಬಿಟ್ಟು ಅನಂತಶಯನ ಎಂಬುದನ್ನೇ ತರ್ಜುಮೆ ಮಾಡಿ  "God...  he dwells in infinity" ಎಂಬ ಒಂದೇ  ಒಂದು ಇಂಗ್ಲಿಷ್ ವಾಕ್ಯ ಹೇಳಿನೋಡಿ..! ಆ ಕೂಡಲೇ ಅದು ಪರಮಸತ್ಯ ಅಂತ ಇದೇ  ಮಂದಿ ಒಪ್ಪಿಕೊಳ್ಳುತ್ತಾರೆ..! 

ಭಾರತೀಯ ತತ್ವದರ್ಶನ ಪರಮಸತ್ಯವನ್ನು... ಪಾರಮಾರ್ಥಿಕ ಸತ್ಯವನ್ನು ಅದೆಂದೋ ಕಂಡುಕೊಂಡಿದೆ... ನಮ್ಮ ತಾತ್ವಿಕತೆ ಅದು ತೀರಾ ವೈಜ್ಞಾನಿಕವಾಗಿಯೇ  ಇದೆ.  ಬೆಂಕಿ, ಬೆಳಕು, ಪ್ರಕಾಶ ಇತ್ಯಾದಿ  ಅದು ಜೀವತ್ವದ ಸಂಕೇತ, ಅಮೃತತ್ವದ ಸಂಕೇತ, ಅದು ಜ್ಞಾನದ ಸಂಕೇತ. ಹಾಗಾಗಿಯೇ ಬೆಳಕನ್ನುಂಟುಮಾಡುವುದು ಅಂದರೆ ದೀಪವನ್ನು ಹಚ್ಚುವುದು ಭಾರತೀಯ ಸಂಸ್ಕೃತಿಯ, ಧಾರ್ಮಿಕತೆಯ, ನಂಬಿಕೆಯ ಭಾಗವಾಗಿದೆ. 

ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಸೂರ್ಯನನ್ನು ಹೊರತು ಪಡಿಸಿದ ನೈಸರ್ಗಿಕವಾದ ಬೆಳಕಿನ ಮತ್ತು ಶಾಖದ ಸಹಜ ಮೂಲಗಳು  ಬೇರೆ ಇಲ್ಲ...ಒಂದು ವೀಲ್ ಭೂಗರ್ಭದೊಳಗಿನ ಬೆಂಕಿ ಅಂದರೆ ಲಾವಾರಸ ಶಾಖ ಅಥವಾ ಬೆಂಕಿಯ ಮೂಲವೆಂಬ ವಾದ ಮುಂದಿಟ್ಟರೂ ಅದು ಸಹಜ ಮೂಲ ಎಲ್ಲ, ಬೇಕೆಂದಾಗ ದೊರಕುವಂಥದ್ದೂ ಅಲ್ಲ.   ಹಾಗಾಗಿಯೇ ಬೆಂಕಿ ಎಂಬುದಕ್ಕೆ ಮನುಕುಲ ಅಷ್ಟೊಂದು ಮಹತ್ವದ ಸ್ಥಾನ ಕೊಟ್ಟದ್ದು. ಸೂರ್ಯನ ಮೂಲ ಬಿಟ್ಟರೆ ಬೆಳಕು ಮತ್ತು ಶಾಖದ ಮೂಲ ಬೆಂಕಿಯೇ...ಬೆಂಕಿ ಅಂದ್ರೆ 'ಅಗ್ನಿ' ನಮ್ಮ ಸನಾತನ ಹಿಂದೂ ಧರ್ಮ ಮೂಲದಲ್ಲಿ ಆರಾಧಿಸಿದ್ದು ಈ ಪವಿತ್ರವಾದ ಅಗ್ನಿಯನ್ನೇ...   ಹಾಗಾಗಿಯೇ ವೇದಕಾಲದಲ್ಲಿ ಅಗ್ನಿಯ ಆರಾಧನೆಯ ಪ್ರಧಾನವಾಗಿತ್ತು. ಅಗ್ನಿಹೋತ್ರವೇ  ಶ್ರೇಷ್ಠವಾಗಿತ್ತು. 

ನಮ್ಮೆಲ್ಲ ಧಾರ್ಮಿಕ ಆಚರಣೆಗಳಲ್ಲಿ ಅಗ್ನಿ ಎಂಬುದು ಮೂಲ ಮತ್ತು ಅವಿಭಾಜ್ಯ ಅಂಗವಾಗಿದೆ... ಅಗ್ನಿಯ ಮತ್ತೊಂದು ರೂಪವೇ ದೀಪಗಳು. ದೀಪಗಳು ಕೂಡಾ ನಮ್ಮ ಧರ್ಮದ ಮತ್ತು ನಮ್ಮ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ.  ಅಗ್ನಿಯನ್ನು ಆರಾಧಿಸುವುದರ ಜೊತೆಗೆ ಅದನ್ನು ಅವಿರತವಾಗಿ ಕಾಪಾಡಬೇಕಾದದ್ದು ಕೂಡಾ ಪ್ರಾಚೀನರ ಅವಶ್ಯಕತೆಯೂ ಆಗಿತ್ತು. ಬೆಂಕಿಗೆ ಅಗ್ನಿದೇವ ಎಂದೇ ಕರೆದವರು ನಾವು. ಸಾಮಾನ್ಯವಾಗಿ ಆಲದ ಮರದ ಕಟ್ಟಿಗೆಯಿಂದ ಮಾಡಲಾದ ಅರಣಿ ಎಂಬ ಯಂತ್ರದ ಸಹಾಯದಿಂದ ಅಗ್ನಿಮಂಥನದ ಮೂಲಕ ಬೆಂಕಿಯನ್ನು ಪಡೆಯುವುದು ನಮ್ಮ ಪ್ರಾಚೀನ ಸಂಪ್ರದಾಯವಾಗಿತ್ತು ಮತ್ತು ಈಗಲೂ ಹವನಗಳಿಗೆ ಅಗ್ನಿಯನ್ನು ಮಂಥನದ ಮೂಲಕವೇ ಪಡೆಯುತ್ತಾರೆ.  

ದೀಪಾವಳಿ ಎಂಬುದು ದೀಪಗಳ ಉತ್ಸವ, ಬೆಳಕಿನ ಆರಾಧನೆ, ಜ್ಯೋತಿಯ ಉಪಾಸನೆ. ದೀಪಾವಳಿ ಅಂದರೆ ಹಣತೆಗಳ ಸರಣಿ ಎಂದೇ ಅರ್ಥ... ದೀಪಾವಳಿಯ ಆಚರಣೆಯ ಪ್ರಾಚೀನತೆಯ ಬಗ್ಗೆ ಹಲವು ಪಂಡಿತರು ಹಲವು ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಇವತ್ತು ನಾವು ನರಕಚತುರ್ದಶಿ ಎಂಬ ಹೆಸರಿನಲ್ಲಿ ಆಚರಣೆ ಮಾಡುವ ಪರ್ವ ದಿನ ದ್ವಾಪರಯುಗದಲ್ಲೇ ಪ್ರಾರಂಭವಾದದ್ದಲ್ಲ ಅದಕ್ಕಿಂತಲೂ ಹಿಂದೆ ಪ್ರಭು ಶ್ರೀರಾಮಚಂದ್ರನ ಅವತಾರಕ್ಕಿಂತಲೂ ಹಿಂದೆಯೇ ಬಲಿ ಚಕ್ರವರ್ತಿಯನ್ನು ತುಳಿದ ವಾಮನಾವತಾರದ ತ್ರೇತಾಯುಗದ ಪುರಾಣವಿದೆ. ಬಲಿಚಕ್ರವರ್ತಿಯನ್ನು ಮತ್ತೆ ಭೂಮಿಗೆ ಬಾ ಎನ್ನುವ ಸಂಪ್ರದಾಯವೇ ಬಲಿಪಾಡ್ಯಮಿ... ಶ್ರೀರಾಮಚಂದ್ರ ಸೀತಾಮಾತೆಯ ಜೊತೆಗೆ ರಾವಣ ಸಂಹಾರದ ನಂತರ, ಹದಿನಾಲ್ಕು ವರ್ಷ ವನವಾಸದ ಅವಧಿ ಮುಗಿಸಿ ಮರಳಿ ಅಯೋಧ್ಯೆಗೆ ಬಂದ ದಿನವೂ ದೀಪಾವಳಿಯೇ... ಹಾಗಾಗಿ ದೀಪಾವಳಿ ದ್ವಾಪರಯುಗದಲ್ಲಿ ಶುರುವಾದದ್ದೇನಲ್ಲ 

ಹಿಂದೂ ಧರ್ಮದಲ್ಲಿ ದೀಪಗಳು ಅವಿಭಾಜ್ಯ ಅಂಗ. ಇವತ್ತಿಗೂ ವಿಶ್ವದಾದ್ಯಂತ ದೀಪಾವಳಿ ಆಚರಿಸದ   ಹಿಂದೂ ಮನೆಯೇ ಇರಲಿಕ್ಕಿಲ್ಲ. ಆದ್ರೆ ಜಗತ್ತಿನ ಬೇರೆ ಧರ್ಮಗಳಲ್ಲಿ ಬೆಂಕಿ, ದೀಪ, ಬೆಳಕುಗಳಿಗೆ ಅದೆಷ್ಟು ಧಾರ್ಮಿಕ ಪ್ರಾಧಾನ್ಯತೆ ಇದೆ ಎಂಬುದನ್ನು ಅವಲೋಕಿಸಿದಾಗಲೇ ನಮಗೆ ಹಿಂದೂ ಧರ್ಮ ಅಗ್ನಿಗೆ ನೀಡಿದ ಮಹತ್ವದ ಅರಿವಾಗುತ್ತದೆ. 

ಜಾಗತಿಕವಾಗಿ ಬೆಳಕನ್ನು, ಜಗತ್ತಿಗೆ ಬೆಳಕಿನ ಮೂಲವಾಗಿರುವ ಸೂರ್ಯನನ್ನು, ಅಗ್ನಿಯನ್ನು ಪೂಜಿಸುವ ಆರಾಧಿಸುವ ಅತ್ಯಂತ ಪ್ರಾಚೀನ ಮತಧರ್ಮಗಳ ಇತಿಹಾಸ ಅಚ್ಚರಿ ಹುಟ್ಟಿಸುವಂತಿದೆ. ಇಂಥ ಹೆಚ್ಚಿನ ಮತ ಧರ್ಮಗಳಿಗೆ ಭಾರತವೇ ಮೂಲವಾಗಿರುವ ಕುರುಹುಗಳೂ ಗೋಚರಿಸುತ್ತವೆ. ಬೆಳಕನ್ನು, ಸೂರ್ಯನನ್ನು,  ಬೆಂಕಿಯನ್ನು, ದೇವರ ರೂಪವಾಗಿಯೋ ಅಥವಾ ಶ್ರದ್ಧೆಯ ಕೇಂದ್ರವಾಗಿಯೋ ಪೂಜಿಸುವ ಹಲವಾರು ಚಿಕ್ಕ ಪುಟ್ಟ ಮತಧರ್ಮಗಳ ಇತಿಹಾಸ ತದನಂತರ ವ್ಯಾಪಿಸಿದ ಸೆಮೆಟಿಕ್ ಮತಗಳ ಕಾರಣದಿಂದ ನಷ್ಟವಾಗಿದೆ. ಭಾರತೀಯ ಮೂಲದ ಜೈನ, ಬೋಧೀ ಧರ್ಮಗಳಲ್ಲಿ ಬೆಳಕು ಮತ್ತು ಅಗ್ನಿಯ ಧಾರ್ಮಿಕ ಮಹತ್ವ ಹಿಂದೂ ಧರ್ಮದಷ್ಟೇ ವ್ಯಾಪಕವಾಗಿದೆ. ಆದರೆ ಯಹೂದೀ, ಕ್ರಿಶ್ಚಿಯನ್, ಇಸ್ಲಾಮಿಕ್ ಮುಂತಾದ ಸೆಮೆಟಿಕ್ ಮತಗಳಲ್ಲಿನ ಆಚರಣೆಗಳ ಮೂಲದಲ್ಲಿ ಅದಕ್ಕೂ ಸಾವಿರಾರು ವರ್ಷ ಹಿಂದಿನ ಈಜಿಪ್ಟ್ ಗ್ರೀಕ್ ರೋಮನ್ ಆಚರಣೆಗಳ ಕುರುಹು ಇದೆ. ಸೆಮೆಟಿಕ್ ಮತಗಳು ಹುಟ್ಟುವುದಕ್ಕಿಂತ ಮೊದಲಿನ ಧಾರ್ಮಿಕ ಗುಂಪುಗಳು, ಪಂಗಡಗಳು ಮತ್ತವುಗಳ ಧಾರ್ಮಿಕ ಆಚರಣೆಗಳ ಕುರಿತು ತುಂಬಾ ಸಂಶೋಧನೆಗಳು ನಡೆದಿದ್ದು ಆ ಇತಿಹಾಸದ ಬಗ್ಗೆ ಪ್ರಸಕ್ತ ತಿಳುವಳಿಕೆ ಬೆಳಕು ಮತ್ತು ಅಗ್ನಿಯನ್ನು ಧಾರ್ಮಿಕ ಸಂಕೇತಗಳಾಗಿ ಬಳಸುತ್ತಿದ್ದ ಪಂಗಡಗಳ ಕುರಿತು ಆಶ್ಚರ್ಯಕರ ಮಾಹಿತಿಯನ್ನೊದಗಿಸುತ್ತದೆ. ಆದರೆ ಇವುಗಳ ಬಗ್ಗೆ ನಮ್ಮ ಭಾರತೀಯ ಮೂಲದ ಪ್ರಾಕ್ತನ ಶಾಸ್ತ್ರಜ್ಞರೂ, ಇತಿಹಾಸಕಾರರೂ ನಮ್ಮ ಮೂಲ ಭಾರತೀಯ ಆಚರಣೆಗಳನ್ನು ಹೋಲಿಸಿ  ಒಂದು ಸುಧೀರ್ಘ ತುಲನಾತ್ಮಕ ಅಧ್ಯಯನ ನಡೆಸುವ ಅಗತ್ಯವಿದೆ... ಈ ಹಿಂದಿನ ಪಾಶ್ಚಾತ್ಯ ಸಂಶೋಧಕರು ಮಾಡಿದ್ದ ವೇದಕಾಲ ನಿರ್ಣಯವೂ, ಆರ್ಯ ಆಕ್ರಮಣ ಸಿದ್ಧಾಂತವೂ ಇತ್ತೀಚೆಗೆ ದೊರಕಿದ ಉತ್ಖನನದ ಪುರಾವೆಗಳಿಂದ ಸುಳ್ಳೆಂದು ಸಾಬೀತಾಗಿದೆ. (ಅನಂತಾದರೂ  ಅದನ್ನೇ ಸತ್ಯ ಎಂದು ನಮ್ಮ ಇತಿಹಾಸದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ಶತಮೂರ್ಖ, ಮೂಢ ಡಾಕ್ಟರೇಟ್ಗಳು ಇನ್ನೂ ನಮ್ಮ ವಿಶ್ವವಿದ್ಯಾಲಗಳಲ್ಲಿ ಇರುವುದು..ನಮ್ಮ ದುರ್ದೈವ )

ಈಗಾಗಲೇ ನಡೆದಿರುವ ಅಧ್ಯಯನಗಳು ಬೆಳಕಿನ ಹಾಗೂ  ಅಗ್ನಿಯ ಉಪಾಸನೆ, ಆರಾಧನೆಗಳು ಭಾರತೀಯ ಮೂಲದಿಂದಲೇ ಜಾಗತಿಕವಾಗಿ ಪಸರಿಸಿತು ಎಂಬುದರ ಕಡೆಗೆ ಬೆಟ್ಟು ಮಾಡುತ್ತಿವೆ... ಮುಂದಿನ ಭಾಗದಲ್ಲಿ ಈ ಬಗ್ಗೆ ಇನ್ನಷ್ಟು ಕುತೂಹಲಕರ ವಿಚಾರಗಳನ್ನುತಿಳಿಯೋಣ..  

Related posts