Infinite Thoughts

Thoughts beyond imagination

ಛತ್ರಪತಿ ಶಿವಾಜಿ ಮಹಾರಾಜರು ಭರತಖಂಡದಲ್ಲಿ ಜನಿಸಿದ ಪುಣ್ಯ ದಿನ ಈದಿನ

ಹಿಂದವೀ ಸ್ವರಾಜ್ಯದ ಪರಿಕಲ್ಪನೆಯನ್ನು ಮೊಟ್ಟಮೊದಲು ನೀಡಿದ ಮಹಾತ್ಮ... 

ಛತ್ರಪತಿ ಶಿವಾಜಿ ಮಹಾರಾಜರು ಭರತಖಂಡದಲ್ಲಿ ಜನಿಸಿದ ಪುಣ್ಯ ದಿನ ಈದಿನ....

ನಾವು, ಹಿಂದೂಸ್ತಾನದ ಪ್ರಜೆಗಳು ಪರಕೀಯರ ಆಳ್ವಿಕೆಯಿಂದ ಮುಕ್ತರಾಗಬೇಕು, ಹೊರಗಿನಿಂದ ಬಂದವರು, ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದವರು ನಮ್ಮನ್ನು ಅಳುವ ಅಗತ್ಯವಿಲ್ಲಾ, ನಮ್ಮನ್ನು ನಾವೇ ಆಳಿಕೊಳ್ಳಬೇಕು. ನಮಗೆ "ಸ್ವರಾಜ್" ಬೇಕು.... ಅಂತ ಆರ್ಯ ಸಮಾಜದ ಸ್ಥಾಪಕ ಶ್ರೀ ಸ್ವಾಮೀ ದಯಾನಂದ ಸರಸ್ವತಿಯವರು ಈ 'ಸ್ವರಾಜ್' ಎಂಬ ಶಬ್ದವನ್ನು ತಮ್ಮ ಗ್ರಂಥ 'ಸತ್ಯಾರ್ಥ ಪ್ರಕಾಶ' ದಲ್ಲಿ ಉಪಯೋಗಿಸಿದರು. ಇದೆ ಸ್ವರಾಜ್ ಶಬ್ದವನ್ನು ಬಳಿಕ ದಾದಾಭಾಯಿ ನವರೋಜಿ ಬಳಸಿದರು. ಅದಾದ ಬಳಿಕ ಲೋಕಮಾನ್ಯ ಬಾಲಗಂಗಾಧರ ತಿಲಕರು "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು" ಅಂತ ಘರ್ಜಿಸುವ  ಮೂಲಕ ಬ್ರಿಟಿಷ್ ಆಡಳಿದ ವಿರುದ್ಧ ಸಮರ ಸಾರಿದ್ದರು. ಬಳಿಕ ಮಹಾತ್ಮಾ ಗಾಂಧೀಜಿ  ಕೂಡಾ "ಸ್ವರಾಜ್ಯ" ಶಬ್ದವನ್ನು ಬಳಸಿದರು. ನೇತಾಜಿ ಕೂಡಾ 'ಸಂಪೂರ್ಣ ಸ್ವರಾಜ್ಯ' ವನ್ನು ೧೯೨೮ರಲ್ಲೇ ಪ್ರತಿಪಾದಿಸಿದ್ದರು... ಹೀಗೆ 'ಸ್ವರಾಜ್ಯ' ಎಂಬ ಪದವನ್ನು ಭಾರತೆಯಾ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೆಚ್ಚಿನೆಲ್ಲಾ ನಾಯಕರೂ ಬಳಸಿದರು....ನಮ್ಮ ದೇಶದ ಪ್ರಜೆಗಳು ಪರಕೀಯರ ಆಳ್ವಿಕೆಯಿಂದ ಮುಕ್ತರಾಗಿ, ಸ್ವತಂತ್ರರಾಗಿ  ತಮ್ಮನ್ನು ತಾವೇ ಆಳಿಕೊಳ್ಳಬೇಕು ಎಂಬುದೇ ಈ ಸ್ವರಾಜ್ಯ ಎಂಬುವುದರ ಹಿಂದಿದ್ದ ಆಶಯ...! 

ಈ 'ಸ್ವರಾಜ್ಯ' ಎಂಬ ಪದವನ್ನು ಮೊದಲು ಅಧಿಕೃತವಾಗಿ ಬಳಸಿದ್ದು ಯಾರು..? ಯಾಕಾಗಿ ಬಳಸಿದರು ? ಅಂತ ತಿಳಿದರೆ ನಿಮಗೊಮ್ಮೆ ರೋಮಾಂಚನವಾಗುವುದು ಖಚಿತ...! ಹೌದು... ದೇಹದ ಹೊರಗಿನಿಂದ ದಾಳಿಕೋರರಾಗಿ ನಮ್ಮ ದೇಶವನ್ನು ಲೂಟಿ ಮಾಡಲು ಬಂದವರೇ ನಮ್ಮ ದೇಶವನ್ನು ಅಳುವಂಥ ದೌರ್ಭಗ್ಯಕರ ಪರಿಸ್ಥಿತಿ ಇದ್ದಾಗ,  ಓರ್ವ ಹದಿಹರೆಯದ ಸ್ವಾಭಿಮಾನೀ ಯುವಕನೋರ್ವ 'ನಮ್ಮ ದೇಶ, ನಮ್ಮ ಜನ ಹೀಗೆ  ಪರಕೀಯರಿಂದ ಅಳಿಸಿಕೊಳ್ಳುವುದು ಅದೆಂಥಾ ಅವಮಾನ... ನಮ್ಮನ್ನು ನಾವೇ ಆಳಿಕೊಳ್ಳಬೇಕು, ನಮಗೆ ಪರಕೀಯರ ಆಳ್ವಿಕೆ ಬೇಡ... ನಮಗೆ ನಮ್ಮದೇ ರಾಜ್ಯ ಬೇಕು, ಅದರಲ್ಲಿ ನಮ್ಮದೇ ರಾಜ್ಯಭಾರ ಬೇಕು, ನಮ್ಮ ರಾಜ್ಯ ನಮ್ಮ ಸ್ವಂತದ್ದೇ, ನಮ್ಮದೇ ಆದ ಸ್ವರಾಜ್ಯ.." ಎಂಬ ಕನಸು ಕಾಣುತ್ತಿದ್ದ. 

ಆಗಿನ್ನೂ ಆ ಮಹಾತ್ಮನಿಗೆ ಕೇವಲ ಹದಿನೈದರ ಹರೆಯ...! ತನ್ನ ಸಹಪಾಠಿ ಹುಡುಗರೊಂದಿಗೆ ಆಟವಾಡುತ್ತ ಕಾಲಕಳೆಯುವ ಹದಿವಯಸ್ಸು. ಆದರೆ ಶಿವಾಜಿ ಎಂಬ ಭರತಮಾತೆಯ ಆ  ವೀರಪುತ್ರನಲ್ಲಿ ತನ್ನ ತಾಯಿನಾಡನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಬೇಕೆಂಬ ನಿಷ್ಠೆ ಅಚಲವಾಗಿತ್ತು, ಛಲ ಅದಮ್ಯವಾಗಿತ್ತು. 

೧೬೪೫ ನೇ ಇಸವಿಯ ಏಪ್ರಿಲ್ ೧೭ ತಾರೀಕು ರೋಹಿದ್ ಕೋರೆ ಯ ದೇಶಪಾಂಡೆಯಾಗಿದ್ದ ದಾದಾಜಿ ನರಸ ಪ್ರಭು ಎಂಬಾತ ನಿಗೆ ಬರೆದ ಪಾತ್ರದಲ್ಲಿ ಶಿವಾಜಿ ಮಹಾರಾಜರು ಈ "ಹಿಂದವೀ ಸ್ವರಾಜ್ಯ" ಎಂಬ ಪದವನ್ನು ಮೊಟ್ಟಮೊದಲು ಬಳಸಿದ್ದರು.  ಅಂದರೆ ಇವತ್ತಿಗೆ  ಸರಿಯಾಗಿ  ಮುನ್ನೂರಾ ಎಪ್ಪತ್ತಾರು ವರ್ಷಗಳಷ್ಟು ಹಿಂದೆಯೇ ತಮ್ಮ ಹದಿನೈದರ ಹರೆಯದಲ್ಲೇ  ಶಿವಾಜು ಮಹಾರಾಜರಿಗೆ ತಮ್ಮ ದೇಶವನ್ನು ಪರಕೀಯ ದಾಸ್ಯದಿಂದ ವಿಮುಕ್ತಗೊಳಿಸಿ ಸ್ವಾತಂತ್ರ್ಯ ಪಡೆಯಬೇಕೆಂಬ ಮಹದಾಸೆಯಿತ್ತು..! 

ಅದಕ್ಕೆ ತಕ್ಕ ಹಾಗೆ  ಮರಾಠಾ ಸಾಮ್ರಾಜ್ಯ ಕಟ್ಟಲು,  ಹಿಂದೂ ಸ್ವರಾಜ್ಯ ಪಡೆಯಲು, ಮೊಟ್ಟಮೊದಲ  ಅಡಿಪಾಯ ಹಾಕಿಕೊಟ್ಟ ಶಿವಾಜಿ ಮಹಾರಾಜರ ಕನಸು ಕಾಲಾಂತರದಲ್ಲಿ ನನಸಾಗಿತ್ತು. ಆದರೆ ಮೊಟ್ಟಮೊದಲು "ಸ್ವರಾಜ್ಯ" ದ ಪರಿಕಲ್ಪನೆಯನ್ನು ಕೊಟ್ಟದ್ದು ಛತ್ರಪತಿ ಶಿವಾಜಿ ಮಹಾರಾಜರು ಎಂಬ ಸತ್ಯ ಮಾತ್ರ ಜನಮಾನಸದಿಂದ ಮರೆಯಾಯಿತು. 

"ಹಿಂದವೀ ಸ್ವರಾಜ್ಯದ" ಕನಸನ್ನು ಕೊಟ್ಟ  ಮಹಾತ್ಮ, ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ಪುಣ್ಯದಿನ. ಇವತ್ತಿನ ದಿನ ಆ ಪುಣ್ಯಾತ್ಮನನ್ನು  ಮನಸಾರೆ ಸ್ಮರಿಸೋಣ... ಆತನ ದಿವ್ಯಮೂರ್ತಿಯನ್ನು ಮನದಲ್ಲಿ ಪ್ರತಿಷ್ಠಾಪಿಸೋಣ... ಆತನ ಧೈರ್ಯ ಸಾಹಸಗಳ ಇತಿಹಾಸವನ್ನು, ಸತ್ಯ ಕತೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡೋಣ... 

ಜೈ ಭವಾನಿ...

#ಅನಂತಕುಮಾರಹೆಗಡೆ  #ಶಿವಾಜಿಜಯಂತಿ 

 

Related posts