Infinite Thoughts

Thoughts beyond imagination

ಅರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ - ಹೊರ ಬರುವುದೇ ರಹಸ್ಯ!!

ರಮಾನಾಥ್ ರೈ ರಾಜಕೀಯ ಪ್ರವೇಶಿಸಿದಾವತ್ತಿನಿಂದಲೂ ಕಲೆಗಳೇ ಇಲ್ಲದ ಶುಭ್ರ ಬಿಳಿ ಬಟ್ಟೆ ತೊಡುತ್ತಾರೆ. ಅವರು ಧರಿಸುವ ಬಟ್ಟೆಗಳನ್ನು ಒಗೆದು ಶುಭ್ರವಾಗಿಸಿ ಗರಿಗರಿಯಾಗಿ ಇಸ್ತ್ರಿ ಮಾಡಿಕೊಡುವುದು ಬೀಸಿ ರೋಡಿನ ಉದಯ ಲಾಂಡ್ರಿಯವರು. ಲಾಂಡ್ರಿಯಲ್ಲೇ ರಕ್ತದೋಕುಳಿ ಹರಿಯಿತು. ಲಾಂಡ್ರಿಯ ಮಾಲೀಕ ತನಿಯಪ್ಪ ಮಡಿವಾಳ ತನ್ನ ಏಕಮಾತ್ರ ಪುತ್ರ ಶರತ್ ರನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿದ್ದಾರೆ. ಶರತ್ ಆಸ್ಪತ್ರೆಯಲ್ಲಿದ್ದಾಗಲೂ ಹೋಗದ, ಸತ್ತ ಮೇಲೂ ಮನೆಗೆ ಭೇಟಿ ನೀಡದ ರಮಾನಾಥ್ ರೈ, ಶರತ್ ತಂದೆ ಇದನ್ನು ಮಾಧ್ಯಮದವರ ಎದುರು ಹೇಳಿಕೊಂಡ ಮೇಲೆಯೇ ಎಚ್ಚರಗೊಂಡರು. ಕೊನೆಗೂ ರಮಾನಾಥ್ ರೈ, ಮಾಧ್ಯಮದವರನ್ನು, ಸಾರ್ವಜನಿಕರನ್ನು ಯಾರನ್ನೂ ಬರಗೊಡದೆ, ಎಲ್ಲರನ್ನೂ ರಸ್ತೆಯಲ್ಲೇ ನಿಲ್ಲಿಸಿ, ತಾವು ಮಾತ್ರ ತಮ್ಮೆರಡು ಬೆಂಬಲಿಗರೊಂದಿಗೆ ಶರತ್ ಮನೆಗೆ ಹೋದರು. ಮನೆಯೊಳಗೂ ಹೋಗದೆ, ಅಂಗಳದಲ್ಲೇ ತನಿಯಪ್ಪ ಮಡಿವಾಳರನ್ನು ಮಾತಾನಾಡಿಸಿದರು. ದುಖಃದಲ್ಲಿದ್ದ ಶರತ್ ತಾಯಿಯನ್ನು ಮಾತಾನಾಡಿಸುವ ಗೋಜಿಗೂ ಹೋಗಲಿಲ್ಲ. ಕೇವಲ ಮೂರೇ ಮೂರು ನಿಮಿಷದಲ್ಲಿ ಅಲ್ಲಿಂದ ಹೊರಟು, ಕಾಟಾಚಾರಕ್ಕೆ ಮಾಧ್ಯಮಗಳೆದಿರು ಹಲ್ಲು ಗಿಂಜಿದರು.

ಶರತ್ ಮಡಿವಾಳ ಹತ್ಯೆಯಾಗಿ ಸುಮಾರು ಒಂದೂವರೆ ತಿಂಗಳು ಕಳೆದ ಬಳಿಕ ರಾಜ್ಯ ಪೋಲೀಸ್ ಮಹಾನಿರ್ದೇಶಕ ಆರ್ ಕೆ ದತ್ತಾ ಮಂಗಳೂರಿಗೆ ಭೇಟಿ ನೀಡಿ, ಬೀಸಿ ರೋಡ್, ಬಂಟ್ವಾಳ ಮುಂತಾದ ಕಡೆ ಒಂದಷ್ಟು ಸುತ್ತಾಡಿ ಕಲಾಯಿ ಅಶ್ರಫ್ ಮತ್ತು ಶರತ್ ಮಡಿವಾಳರ ಕೊಲೆ ವೈಯಕ್ತಿಕ ದ್ವೇಷದ ಕೊಲೆಗಳೇ ಹೊರತು ಮತೀಯ ಕಾರಣಗಳಿಂದಾದ ಘಟನೆಗಳಲ್ಲ ಅಂತ ಸರಕಾರಕ್ಕೆ ವರದಿ ನೀಡಿದರು. ಪೊಲೀಸ್ ಮಹಾ ನಿರ್ದೇಶಕರೇ ಸ್ವತಃ ತನಿಖೆ ನಡೆಸುವ ನೆಪದಲ್ಲಿ ಬಂದು, ಅವರು ನೀಡಿದ ಹೇಳಿಕೆ ಬಹಳ ವಿಚಿತ್ರವಾಗಿ ಮತ್ತು ಅಸಮಂಜಸವೆಂದೇ ಗೋಚರಿಸಿತು. ಹತ್ಯೆಯಾದ ಶರತ್ ಮಡಿವಾಳರ ಮನೆಗೆ ಭೇಟಿಯನ್ನೇ ನೀಡದೆ, ಕೊನೆ ಪಕ್ಷ ಆತನ ತಂದೆ ತಾಯಿಯನ್ನೂ ಮಾತನಾಡಿಸದೆ ಬೆಂಗಳೂರಿಗೆ ಮರಳಿದ ದತ್ತಾ ಕೊಲೆ ಕೋಮುದ್ವೇಷದ ಕೊಲೆಯಲ್ಲ ಅಂತ ವರದಿ ನೀಡಿಯೇ ಬಿಟ್ಟರು! ಅದು ಹೇಗೆ ಅವರು ತೀರ್ಮಾನಕ್ಕೆ ಬಂದರೋ ಬಗ್ಗೆ ವಿವರಗಳೇನೂ ಹೊರಬರಲಿಲ್ಲ.

ಅತ್ತ ದತ್ತಾ ವರದಿ ನೀಡುತ್ತಿದ್ದಂತೆಯೇ ಇತ್ತ ಪಶ್ಚಿಮ ವಲಯದ ಐಜಿಪಿ ಹರಿಶೇಖರನ್ ಪತ್ರಿಕಾ ಗೋಷ್ಠಿ ನಡೆಸಿ ಶರತ್ ಕೊಲೆ ಆರೋಪಿಗಳನ್ನು ಬಂಧಿಸಿದ್ದೇವೆ ಅಂತ ಹೇಳಿದ್ದಾರೆ. ಕೊಲೆನಡೆಸಿದ ಪ್ರಧಾನ ಆರೋಪಿಗಳನ್ನು ಬಂಧಿಸದಿದ್ದರೂ ಕೊಲೆಗೆ ಸಹಾಯ ಮಾಡಿದ ಆರೋಪಿಗಳೆಂದು ಸಜೀಪಮುನ್ನೂರು ಬಳಿಯ ಆಲಾಡಿಯ ಅಬ್ದುಲ್ ಶಫಿ ಮತ್ತು ಚಾಮರಾಜನಗರದ ಖಲೀಲುಲ್ಲಾ ಎಂಬ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿದ್ದಾಗಿ ಹೇಳಿದರು. ಖಲೀಲುಲ್ಲಾ ಚಾಮರಾಜನಗರದ ಪಿಎಫ್ಐ ಘಟಕದ ಅಧ್ಯಕ್ಷ ಬೇರೆ! ಇದಾಗಿ ಒಂದು ದಿನ ಕಳೆವಷ್ಟರಲ್ಲಿ ಇನ್ನೂ ಮೂರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾಗಿಯೂ ಪೋಲೀಸರು ಹೇಳಿಕೆ ನೀಡಿದರು. ಪಾರೆಂಕಿಯ ರಿಯಾಜ್, ನೆಲ್ಯಾಡಿಯ ಸಾದಿಕ್ ಮತ್ತು ಚಾಮಾರಾಜನಗರದ ಖಲೀಮುಲ್ಲಾ ಬಂಧಿತರು. ಆರೋಪಿಗಳಲ್ಲಿ ಅಬ್ದುಲ್ ಶಫಿ ಶರತ್ ಮನೆಯ ಪರಿಸರದಲ್ಲೇ ವಾಸಿಸುವಾತ, ಮತ್ತು ಖಲೀಲುಲ್ಲಾ ಚಾಮರಾಜನಗರದವನೆಂದು ಹೇಳಿದರೂ ಆತನೂ ಸಜೀಪಮುನ್ನೂರು ಗ್ರಾಮದ ಪಣೋಲಿಬೈಲು ಸಮೀಪದ ಬಳ್ಳಾಯಿ ನಿವಾಸಿಯೇ! ಆತ ಒಂದೆರಡು ವರುಷದ ಹಿಂದಷ್ಟೇ ತನ್ನ ಸ್ವಂತ ಮನೆಯನ್ನು ಮಾರಿ ಚಾಮರಾಜನಗರಕ್ಕೆ ಹೋದಾತ. ಹೀಗೆ ದಕ್ಷಿಣ ಕನ್ನಡದ ಪೋಲೀಸರು ತಾವು ಶರತ್ ಕೊಲೆ ಪ್ರಕರಣವನ್ನು ಬೇಧಿಸಿದ್ದಾಗಿ ಮಾಧ್ಯಮದೆದಿರು ಹೇಳಿದ ಕೂಡಲೇ ಶರತ್ ಕೊಲೆಯಲ್ಲಿ ಮುಸ್ಲಿಮ್ ಮತೀಯವಾದಿ ಸಂಘಟನೆ ಪಿಎಫ್ಐ ಪಾತ್ರವಿರುವುದು ಸ್ಪಷ್ಟವಾದಂತಾಯಿತು.

ಅಲ್ಲಿಗೆ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ ತಮ್ಮದೇ ಇಲಾಖೆಯ ತಮ್ಮ ಕೆಳಗೆ ಕಾರ್ಯ ನಿರ್ವಹಿಸುವ ಐಜಿಪಿ ಹರಿಶೇಖರನ್ ನೀಡಿದ ವರದಿ ಅನ್ವಯ ಅವರ ತನಿಖೆ (?) ಅಥವಾ ಅವರ ಹೇಳಿಕೆ ಸುಳ್ಳೆಂದಾಯಿತು!

ಮತ್ತು ಇದರ ಬಗ್ಗೆ ಜನ ಪ್ರತಿನಿಥಿಗಳಾಗಲಿ ಅಥವಾ ಮಾಧ್ಯಮದವರಾಗಲಿ ಆಕ್ಷೇಪದ ದನಿಯೆತ್ತದಿರುವುದು ಸಹ ಅಕ್ಷಮ್ಯವೆಂದೇ ಭಾವಿಸುತ್ತೇನೆ.

ಆದರೆ ಬಿ.ಸಿ. ರೋಡ್, ಬಂಟ್ವಾಳ ಸುತ್ತಮುತ್ತಲಿನ ನಾಗರಿಕರು ಇದೆಲ್ಲ ಬೆಳವಣಿಗೆಗಳನ್ನೂ ಸಂಶಯದ ದೃಷ್ಟಿಯಲ್ಲೇ ನೋಡುತ್ತಿದ್ದಾರೆ. ಹೊರಗಿನವರಿಗೆ ಪೋಲೀಸರು ಶರತ್ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ ಅಂತ ಕಂಡರೂ, ಸ್ಥಳೀಯರು ಮಾತ್ರ ಇದನ್ನೆಲ್ಲಾ ಪೂರ್ತಿ ನಂಬುತ್ತಿಲ್ಲ! ಮೇಲ್ನೋಟಕ್ಕೆ ಕಲಾಯಿ ಅಶ್ರಫ್ ಎಂಬ ಪಿಎಫ್ಐ ಮುಖಂಡನ ಕೊಲೆಗೆ ಪ್ರತೀಕಾರವಾಗಿಯೇ ಆರೆಸ್ಸೆಸ್ ಮುಖಂಡ ಶರತ್ ಕೊಲೆ ನಡೆಯಿತೆಂಬ ರೀತಿಯೇ ಕಾಣುತ್ತದಾದರೂ ಕೊಲೆಯ ಹಿಂದಿರುವ ಸತ್ಯ ಅಷ್ಟು ಸರಳವಿಲ್ಲ!

ದಕ್ಷಿಣ ಕನ್ನಡದ ಪೋಲೀಸರು ಇದುವರೆಗೂ ಒಂದೇ ಒಂದು ಸಲ ಶರತ್ ಮನೆಗೆ ಭೇಟಿಯೇ ನೀಡಿಲ್ಲ. ಶರತ್ ಕೊಲೆ ಬಗ್ಗೆ ಅವರ ಮನೆಯವರಿಗೆ, ಅವರ ತಂದೆ-ತಾಯಿಗೆ, ಸ್ನೇಹಿತರಿಗೆ ಯಾರ ಮೇಲಾದರೂ ಅನುಮಾನವಿದೆಯೇ ಎಂಬ ಕಡ್ಡಾಯದ ಪ್ರಶ್ನೆಗಳನ್ನು ಸಹ ಪೋಲೀಸರು ಕೇಳಲೇ ಇಲ್ಲ!. Formality ಗಾದರೂ ಶರತ್ ತಂದೆಯನ್ನು ವಿಚಾರಿಸಲೇ ಇಲ್ಲ! ಅದೆಲ್ಲಾ ಹೋಗಲಿ, ಶರತ್ ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ಕೂಡ ಪೋಲೀಸರು ಪರಿಶೀಲಿಸಿಲ್ಲ! ಅದಿನ್ನೂ ಅವರ ಮನೆಯಲ್ಲೇ ಇದೆ. ಆರೋಪಿಗಳ ಬಂಧನದ ವಿಚಾರವನ್ನೂ ಸಹ ಶರತ್ ಮನೆಯವರಿಗೆ ಪೋಲೀಸರು ತಿಳಿಸಲಿಲ್ಲ. ಎಲ್ಲರಂತೆಯೇ ಅವರಿಗೂ ತಮ್ಮ ಮಗನನ್ನು ಹತ್ಯೆಮಾಡಿದವರನ್ನು ಬಂಧಿಸಲಾಗಿದೆ ಅಂತ ತಿಳಿದದ್ದು ಮಾಧ್ಯಮಗಳ ಮೂಲಕವೇ. ಆರೋಪಿಗಳನ್ನು ಪೋಲೀಸರು ಯಾವ ಆಧಾರದ ಮೇಲೆ ಬಂಧಿಸಿದರು ಎಂಬ ಬಗ್ಗೆಯೇ ಅನುಮಾನಗಳಿವೆ.

ಯಾಕಂದರೆ ಇದಕ್ಕೂ ಕಾರಣಗಳಿವೆ. ಕೆಲ ಸಮಯದ ಹಿಂದೆ ಸಜೀಪಮುನ್ನೂರಿನಲ್ಲಿ ಅರೆಸ್ಸೆಸ್ ಪಥಸಂಚಲನದಲ್ಲಿ ಶರತ್ ಭಾಗವಹಿಸಿದ್ದರು. ಪಥಸಂಚಲದಲ್ಲಿ ಭಗವಾ ಧ್ವಜ ಹಿಡಿದು ಸಾಗುತ್ತಿದ್ದ ಶರತ್ ರನ್ನು ಇದೇ ಆರೋಪಿ ಅಬ್ದುಲ್ ಶಫಿ ಸಜೀಪಮುನ್ನೂರು ಬಸ್ ತಂಗುದಾಣದಲ್ಲಿ ನಿಂತುಕೊಂಡು ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಪಿಎಫ್ಐ ಕಾರ್ಯಕರ್ತ ಶಫಿ ಆರೆಸ್ಸೆಸ್ ಪಥ ಸಂಚಲದ ವಿಡಿಯೋ ಮಾಡುತ್ತಿದ್ದುದನ್ನು ಗಮನಿಸಿದ ಕೆಲ ಅರೆಸ್ಸೆಸ್ ಕಾರ್ಯಕರ್ತರು ಸಂಶಯಗೊಂಡು ಇದನ್ನು ಪೋಲೀಸರ ಗಮನಕ್ಕೂ ತಂದಿದ್ದರು. ಅಂದು ಮುಂಜಾಗ್ರತೆ ಕ್ರಮ ಕೈಗೊಳ್ಳದ ಪೋಲೀಸರು, ಈಗ ಅದೇ ಶಫಿಯನ್ನು ಕೊಲೆ ನಡೆದ ನಂತರ, ಸಿನಿಮಾ ಪೊಲೀಸರಂತೆ ಬಂಧಿಸಿದ್ದಾರೆ.

ಪಿಎಫ್ಐ ಕಾರ್ಯಕರ್ತರು ಶರತ್ ಕೊಲೆ ಮಾಡಿರಬಹುದೆಂಬ ಬಲವಾದ ಸಂಶಯ ಮೊದಲಿನಿಂದಲೂ ಇತ್ತಾದರೂ, ಕೊಲೆಯ ಹಿಂದೆ ಆಳದಲ್ಲಿ ರಾಜಕೀಯ ಕಾರಣಗಳೂ ಇರಬಹುದೆನ್ನುವುದು ಇಲ್ಲಿನ ಸ್ಥಳೀಯರ ಅನಿಸಿಕೆ. ಅದಕ್ಕೆ ಸರಿಯಾಗಿ ಈಗ ಬಂಧಿತರಾದವರೆಲ್ಲರೂ ಕೊಲೆ ಮಾಡಿದವರಲ್ಲ, ಬದಲಿಗೆ ಕೊಲೆಗಾರರಿಗೆ ಸಹಾಯ ಮಾಡಿದವರು ಅಂತ ಪೋಲೀಸರೇ ಹೇಳಿದ್ದಾರೆ. ಅಸಲು ಕೊಲೆಗಾರರು ಸಿಕ್ಕಿಹಾಕಿಕೊಳ್ಳದೆ, ಪೋಲೀಸರು ಅವರುಗಳಿಗೆ ಸಹಾಯ ಮಾಡಿದವರನ್ನೇ ಫಿಕ್ಸ್ ಮಾಡಿ ಕೇಸನ್ನು ಹಳ್ಳ ಹಿಡಿಸುತ್ತಾರಾ..... ಎಂಬ ಸಂಶಯ ಅಲ್ಲಿನ ಜನರಿಗಿದೆ. ಅಷ್ಟೇ ಅಲ್ಲ ಸ್ವತಃ ಶರತ್ ತಂದೆಯೇ ಮಾತನ್ನು ಹೇಳುತ್ತಾರೆ. ಇವರೆಲ್ಲರ ಸಂಶಯದ ದೃಷ್ಟಿ ಸಚಿವ ರಮಾನಾಥ ರೈ ಮತ್ತವರ ಬಲಗೈ ಬಂಟ, ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ ಮೇಲೇ ತಿರುಗುತ್ತದೆ.

ಬಂಟ್ವಾಳದ ರಾಜಕೀಯದ ಇತಿಹಾಸ ಬಲ್ಲ ಯಾರೇ ಆದರೂ ಇದೇ ರೀತಿ ಯೋಚಿಸುತ್ತಾರೆ. ಯಾಕೆಂದರೆ ರಮಾನಾಥ ರೈಯವರ ರಾಜಕೀಯ ಇತಿಹಾಸದುದ್ದಕ್ಕೂ ಭೂಗತ ಪಾತಕದ ನೆರಳು ದಟ್ಟವಾಗಿಯೇ ಕಾಣಿಸುತ್ತದೆ. ನೆರಳು ಮಂಗಳೂರಿನಿಂದ ಮುಂಬೈ, ದುಬೈವರೆಗೂ ಚಾಚುತ್ತದೆ. ರಮಾನಾಥ್ ರೈಯವರ ಅಳಿಯ ಮಂಗಳೂರಿನ ಅಮರ್ ಆಳ್ವ ಕೊಲೆಯ ಹಿಂದೆ ಭೂಗತ ಪಾತಕಿ ರಾಕೇಶ್ ಮಲ್ಲಿಯ ಕೈವಾಡವಿತ್ತು. ಅಲ್ಲಿಂದ ಬಳಿಕ ಬಂಟ್ವಾಳದ ರಾಜಕೀಯ ಮಗ್ಗಲು ಬದಲಿಸಿತು. ರಾಕೇಶ್ ಮಲ್ಲಿಗೂ ರಮಾನಾಥ್ ರೈಗೂ ಬದ್ಧ ವೈರತ್ವವುಂಟಾಗಿ ಮುಂದೆ ರಮಾನಾಥ್ ರೈಯವರ ಬೆನ್ನೆಲಬಾಗಿ ನಿಂತವನೇ ತುಂಬೆ ಪ್ರಕಾಶ್ ಶೆಟ್ಟಿ. ಈತ ದಕ್ಷಿಣ ಕನ್ನಡದ ಭೂಗತ ವ್ಯವಹಾರದಲ್ಲೂ ಆಳವಾಗಿ ಬೇರು ಬಿಟ್ಟು, ಅಕ್ರಮ ಮರಳು ದಂಧೆಯ ಕಿಂಗ್ ಪಿನ್ ಆದ. ಇದೆಲ್ಲದಕ್ಕೂ ರಮಾನಾಥ್ ರೈಯವರ ಪೂರ್ಣ ಪ್ರಮಾಣದ ಕೃಪಾಶೀರ್ವಾದವಿತ್ತು.

ತುಂಬೆ ಪ್ರಕಾಶ್ ಶೆಟ್ಟಿಯ ಕ್ರೈಮ್ ಫೈಲ್ ತೆಗೆದು ನೋಡಿದರೆ ಆತ ನಿಜಕ್ಕೂ ರೌಡಿಶೀಟರ್ ಆಗಬೇಕಿತ್ತು. ಆದರಿವತ್ತು ಆತ ಜಿಲ್ಲಾ ಪಂಚಾಯತ್ ಸದಸ್ಯ!

ಶರತ್ ಕೊಲೆಗೂ, ಇದಕ್ಕೂ ಏನು ಸಂಬಂಧ ಅಂತ ಯಾರೇ ಆದರೂ ಸಹಜವಾಗಿಯೇ ಕೇಳಬಹುದು. ಆದರೆ ಬಂಟ್ವಾಳದ ರಾಜಕೀಯವನ್ನು ಹತ್ತಿರದಿಂದ ಗಮನಿಸಿದರೆ ಇದೆಲ್ಲಕ್ಕೂ ಒಂದು ಲಿಂಕ್ ಸಿಗುತ್ತದೆ. ಕಳೆದ ನಾಲ್ಕೂ ಚುನಾವಣೆಗಳಲ್ಲೂ ರಮಾನಾಥ್ ರೈ ತುಂಬಾ ಪ್ರಯಾಸ ಪಟ್ಟರು. ಒಮ್ಮೆ ನಮ್ಮ ಬಿಜೆಪಿಯ ನಾಗರಾಜ ಶೆಟ್ಟರೆದುರು ಸೋತೂ ಹೋದರು. ಇಲ್ಲಿ ರಮಾನಾಥ ರೈ ಗೆಲ್ಲೋದೇ ಮುಸ್ಲಿಮರ ವೋಟಿನಿಂದ. ಹಾಗಾಗಿಯೇ ಇನ್ನಿಲ್ಲದಂತೆ ಮುಸ್ಲಿಮರನ್ನು ಓಲೈಸುವುದು ಅನಿವಾರ್ಯವಾಗಿದೆ ಸನ್ಮಾನ್ಯ ರೈಗಳಿಗೆ!!

ಇಂಥಾ ರಮಾನಾಥ್ ರೈಗೆ, ಈಗೀಗ ದೊಡ್ಡ ತೊಡಕಾದದ್ದು ಪಿಎಫ್ಐ! ಪಾಪ್ಯುಲರ್ ಫ್ರಂಟ್ ರಾಜಕೀಯ ಅಂಗ ಎಸ್ಡಿಪಿಐ ಚುನಾವಣೆಗೆ ನಿಂತು ಕಾಂಗ್ರೆಸ್ಸಿನ ಮುಸ್ಲಿಂ ವೋಟ್ ಬ್ಯಾಂಕ್ ಗೇ ಕನ್ನ ಹಾಕುತ್ತದೆ! ಹೀಗಾಗಿ ರಮಾನಾಥ್ ರೈ ಬಹಿರಂಗವಾಗಿಯೇ ಇವೆರಡು ಸಂಘಟನೆಗಳನ್ನು ಬೈಯುತ್ತಾರೆ. ಮುಂದಿನ ಚುನಾವಣೆಯಲ್ಲಿ ರಮಾನಾಥ್ ರೈ ಗೆಲ್ಲೋದು ಕಷ್ಟವೆಂದೇ, ಬಹುಶಃ ಇದೇ ಕಾರಣಕ್ಕೆ ಮೊನ್ನೆ ನಡೆದ ಕಲ್ಲಡ್ಕದ ಕ್ಷುಲ್ಲಕ ಘಟನೆಗಳನ್ನು ರೈ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದರು ಎಂದೇ ತಿಳಿಯುತ್ತದೆ. ಹಾಗಂತಲೇ ಬಂಟ್ವಾಳ ಕ್ಷೇತ್ರದ ಜನ ಮಾತಾನಾಡಿಕೊಳ್ಳುತ್ತಿದ್ದಾರೆ. ಕಲ್ಲಡ್ಕದ ಚೂರಿ ಇರಿತದ ಘಟನೆ ಹಾಗೆಯೇ ತಣ್ಣಗಾಗಿ ಹೋಗುತ್ತಿತ್ತು. ಆದರೆ ರೈಗೆ ಅದು ಬೇಕಾಗಿರಲಿಲ್ಲ! ಅದಕ್ಕೆ ದೊಡ್ಡ ಮಟ್ಟದ ಕೋಮುಗಲಭೆಯ ಬಣ್ಣ ನೀಡಿ ಸುಮ್ಮನೆ ನಿಷೇಧಾಜ್ಞೆ ಜಾರಿಮಾಡಿ ಪರಿಸ್ಥಿತಿ ಪ್ರಕ್ಷುಬ್ಧವಾಗುವಂತೆ ರೈ ನೋಡಿಕೊಂಡರು. ಡಾ|| ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಟಾರ್ಗೆಟ್ ಮಾಡಿಕೊಂದು ಮಾಧ್ಯಮಗಳಲ್ಲಿ ವಾಚಾಮಗೋಚರವಾಗಿ ನಿಂದಿಸಿದರು. ಇದರಿಂದ ಬಾರಿ ಮುಸ್ಲಿಂ ವೋಟುಗಳು ಕ್ರೋಢೀಕರಣವಾಗಿ ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ.

ಪಿಎಫ್ಐ ಮುಖಂಡ ಕಲಾಯಿ ಆಶ್ರಫ್ ಹತ್ಯೆಯಲ್ಲಿ ಬಜರಂಗದಳದ ಕಾರ್ಯಕರ್ತರೆನ್ನಲಾದ ಮಂದಿಯನ್ನೇ ಬಂಧಿಸಲಾಗಿದೆ........ ಆದರೆ ಹುಡುಗರಲ್ಲಿ ಹೆಚ್ಚಿನವರು ತುಂಬೆ ಪರಿಸರದವರೇ. ಆದುದರಿಂದಲೇ ಇದರ ಹಿಂದೆ ತುಂಬೆ ಪ್ರಕಾಶ್ ಶೆಟ್ಟಿಯ ಕೈವಾಡವನ್ನು ಬಂಟ್ವಾಳ ಪರಿಸರದ ಜನ ಸಂಶಯಿಸುತ್ತಾರೆ. ಕಲ್ಲಡ್ಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿರುವ ಹೊತ್ತಿನಲ್ಲೇ ಬಜರಂಗದಳದ ಹುಡುಗರು ಅಶ್ರಫ್ ನನ್ನು ಹತ್ಯೆಗೈಯುವ ದುಸ್ಸಾಹಸಕ್ಕೆ ಕೈಹಾಕಲಾರರು, ಆದುದರಿಂದ ಪ್ರಕಾಶ್ ಶೆಟ್ಟಿಯ ಭೂಗತ ಲಿಂಕ್ ಗಳೇ ಅಶ್ರಫ್ ಹತ್ಯೆಗೆ ಕಾರಣವಾಗಿ, ಇದನ್ನು ಬಜರಂಗದಳದ ಹುಡುಗರ ತಲೆಗೆ ಕಟ್ಟಲಾಯಿತೆಂದೆ ನನ್ನ ಭಾವನೆ. ಕೆಲ ಬಜರಂಗದಳದೊಂದಿಗೆ ಗುರುತಿಸಿಕೊಂಡ ಹುಡುಗರನ್ನು ಹಣದ ಆಮಿಷ ಒಡ್ಡಿ ಇದರಲ್ಲಿ ಫಿಕ್ಸ್ ಮಾಡಲಾಗಿರಬಹುದು. ಹೀಗೆ ಮಾಡಿ ಕೋಮು ದ್ವೇಷದ ಪರಿಸ್ಥಿತಿಯನ್ನು ಬೇಕೆಂದೇ ಸೃಷ್ಟಿಸಲಾಯಿತು.

ಪಿಎಫ್ಐ ಸಂಘಟನೆಯ ಬಗ್ಗ ಮೊದಲೇ ದ್ವೇಷ ಹೊಂದಿರುವ ರಮಾನಾಥ್ ರೈ ಕೈವಾಡವೇ ಅಶ್ರಫ್ ಹತ್ಯೆಯ ಹಿಂದೆಯೂ ಇರಬಹುದು. ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯೆದರು ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠೀ-ಚಾರ್ಜ್ ಆದ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ರಮಾನಾಥ್ ರೈ ಯವರನ್ನು ತೀರಾ ಅವಹೇಳನಕಾರಿಯಾಗಿ ಬೈದು ವಾಟ್ಸ್ಯಾಪ್ ಸಂದೇಶ ಕಳುಹಿಸಿದ ಘಟನೆಯಿನ್ನೂ ಜನಮಾನಸದಲ್ಲಿ ಹಸಿರಾಗಿಯೇ ಇದೆ. ಸಂದರ್ಭದಲ್ಲಿ ಅಶ್ರಫ್ ಕೊಲೆಯಲ್ಲೂ ತುಂಬೆ ಪ್ರಕಾಶ್ ಶೆಟ್ಟಿಯ ನೆರಳಿದೆ ಅಂತ ಅಲ್ಲಿನ ಜನ ಭಾವಿಸೋದರಲ್ಲಿ ತಪ್ಪಿಲ್ಲ.

ರಮಾನಾಥ್ ರೈ ಕಳೆದೆರಡು ತಿಂಗಳಿಂದ ಆಡುತ್ತಿರುವ ಮಾತುಗಳು, ನೀಡುತ್ತಿರುವ ಹೇಳಿಕೆಗಳೆಲ್ಲಾ ಕೋಮು ದ್ವೇಷವನ್ನು ಇನ್ನಷ್ಟು ಹೆಚ್ಚಿಸುವಂತೆಯೇ ಇದೆ. ಅತಿಯಾದ ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವ ರೈ, ಡಾ|| ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಕಳಪೆ ದರ್ಜೆಯ ಸಮರ ಸಾರಿದ್ದಾರೆ. ರೀತಿ ಕೋಮು ಧ್ರುವೀಕರಣದಿಂದ ಮುಸ್ಲಿಂ ಮತಗಳು consolidate ಆದರೆ, ಅದರ ಲಾಭ ನೇರವಾಗಿ ರಮಾನಾಥ್ ರೈಯವರಿಗೇ ಆಗುತ್ತದೆ. ಅಶ್ರಫ್ ಕೊಲೆಯನ್ನು ಬಜರಂಗದಳದ ತಲೆಗೆ ಕಟ್ಟಿದ ಮೇಲೆ, ಹಿಂದೂ ಮುಖಂಡರ ಹತ್ಯೆಯೊಂದು ನಡೆದರೆ ಅದು ಸೀದಾ ಪಿಎಫ್ಐ ತಲೆಗೇ ಸುತ್ತಿಕೊಳ್ಳುತ್ತದೆ. ಇದಕ್ಕೆ ಒಂದಷ್ಟು ಹಣ ಚೆಲ್ಲಿ ಕೆಲ ಮುಸ್ಲಿಂ ಹುಡುಗರನ್ನೇ ಫಿಕ್ಸ್ ಮಾಡಿದರೆ ಆಗ ಅದರ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತದೆ.......

ಇಲ್ಲೇ ಶರತ್ ಯಾಕೆ ಕೊಲೆಯಾದರು ಅನ್ನೋದಕ್ಕೆ ಒಂದಷ್ಟು ಕಾರಣಗಳನ್ನು ಗ್ರಾಮದ ಜನ, ಸ್ನೇಹಿತರು, ಹಿತೈಷಿಗಳು, ಮತ್ತವರ ಮನೆಯವರೂ ನೀಡುತ್ತಾರೆ. ಶರತ್ ತುಂಬಾ ಜನಾನುರಾಗಿಯಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಪ್ರಿಯರಾಗಿದ್ದರು. ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದ ಅವರಿಗೂ ಮತ್ತು ತುಂಬೆ ಪ್ರಕಾಶ ಶೆಟ್ಟಿಗೂ ಎರಡು ಮೂರು ಸಂದರ್ಭಗಳಲ್ಲಿ ವಾಗ್ವಾದಗಳಾಗಿ, ತುಂಬೆ ಪ್ರಕಾಶ್ ಶೆಟ್ಟಿ ಶರತ್ ಗೆ ಬೆದರಿಕೆಯೊಡ್ಡಿದ್ದೂ ಆಗಿತ್ತು. ಜಿಲ್ಲಾ ಪಂಚಾಯತ್ ವತಿಯಿಂದ ಸಜೀಪ ಮುನ್ನೂರು ಪರಿಸರದಲ್ಲಿನ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಚೆನ್ನಾಗಿರೋ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ, ಹಿಂದೂಗಳಿರುವ ಪ್ರದೇಶಗಳನ್ನು ಕಡೆಗಣಿಸಿದ್ದರ ಬಗ್ಗೆ ಗ್ರಾಮ ಸಭೆಯಲ್ಲಿ ಶರತ್ ಪ್ರಶ್ನಿಸಿದ್ದರು. ಸಂದರ್ಭದಲ್ಲಿ ಸಜೀಪ ಮುನ್ನೂರು ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿಗೂ ಶರತ್ ಗೂ ಜಗಳವಾಗಿತ್ತು. ಅದಕ್ಕೂ ಹಿಂದೆ ನಂದಾವರ ಹನುಮಂತ ದೇವಸ್ಥಾನದ ಬಳಿಯಲ್ಲಿ ನೇತ್ರಾವತಿ ನದಿಯಲ್ಲಿ ತುಂಬೆ ಪ್ರಕಾಶ್ ಶೆಟ್ಟಿ ನಡೆಸುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ದೊಡ್ಡ ಮಟ್ಟದ ಹೋರಾಟವಾಗಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ಇರುವ ರಾಷ್ಟ್ರೀಯ ಹೆದ್ದಾರಿ ಸೇತುವೆ ಮತ್ತು ರೈಲ್ವೇ ಸೇತುವೆಯ ಐನೂರು ಮೀಟರ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಸಬಾರದೆಂಬ ಕಾನೂನಿನನ್ವಯ ಪ್ರಕಾಶ್ ಶೆಟ್ಟಿಯ ದಂಧೆಗೆ ಕಡಿವಾಣ ಬಿತ್ತು. ಆಗಲೂ ಹೋರಾಟದ ಮುಂಚೂಣಿಯಲ್ಲಿ, ಆರೆಸ್ಸೆಸ್ ಸಕ್ರಿಯ ಕಾರ್ಯಕರ್ತರಾಗಿ ಹೆಸರುಗಳಿಸಿದ್ದ ಶರತ್ ಇದ್ದರು. ಆದರೆ ರಾಜಕೀಯದಲ್ಲೇನೂ ಇರಲಿಲ್ಲ. ಒಟ್ಟಿನಲ್ಲಿ ಪ್ರಬಲ ಹಿಂದು ಪ್ರತಿಪಾದಕರೆಂದು ಹೆಸರು ಗಳಿಸಿದ್ದರು. ಅವರ ತಂದೆ ತನಿಯಪ್ಪ ಮಡಿವಾಳ ಸಹ ಆರೆಸ್ಸೆಸ್ ಕಾರ್ಯಕರ್ತರಾಗಿದ್ದು ಹಿಂದೊಮ್ಮೆ ನಂದಾವರದ ವಿನಾಯಕ ದೇವಸ್ಥಾನದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ತುಂಬೆ ಪ್ರಕಾಶ್ ಶೆಟ್ಟಿಯ ಜೊತೆಗೆ ಶರತ್ ವಾಗ್ವಾದ ನಡೆಸಿದ್ದು ಅವರಿಗೂ ಗೊತ್ತಿತ್ತು.

ಅದೇ ವೇಳೆ ಶರತ್ ಮೇಲೆ ಸ್ಥಳೀಯ ಪಿಎಫ್ಐ ಹುಡುಗರಿಗೂ ಅಸಹನೆಯಿತ್ತು. ಪಿಎಫ್ಐ ಸಂಘಟನೆ ಆರೆಸ್ಸೆಸ್ ರೀತಿಯೇ ಶಾಖೆಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದು, ಸಜೀಪಮುನ್ನೂರು ಸಮೀಪದ ಆಲಾಡಿಯ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಿಎಫ್ಐ ಹುಡುಗರು ಶಾಖೆ ನಡೆಸಲು ಪ್ರಾರಂಭಿಸಿದ್ದರು. ಸರಕಾರೀ ಶಾಲೆಯಲ್ಲಿ ರೀತಿ ಪಿಎಫ್ಐ ಶಾಖೆ ನಡೆಸುವುದನ್ನು ಗಮನಿಸಿದ ಶರತ್ ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು, ಮುಂದೆ ಮುಖ್ಯೋಪಾಧ್ಯಾಯರು ಶಾಲೆಯ ಆವರಣಕ್ಕೆ ಗೇಟ್ ಮಾಡಿಸಿ, ಬೀಗ ಹಾಕಿ ಪಿಎಫ್ಐ ಚಟುವಟಿಕೆಗೆ ಕಡಿವಾಣ ಹಾಕಿದ್ದರು. ಇದರಿಂದ ಆಲಾಡಿಯ ಪಿಎಫ್ಐ ಹುಡುಗರು ಶರತ್ ಬಗ್ಗೆ ಇನ್ನಿಲದ ಕ್ರೋಧದಲ್ಲಿ ಕುದಿಯುತ್ತಿದ್ದರು.

ಘಟನೆಯ ಬಳಿಕವೇ ಆಲಾಡಿಯ ಶಫಿ ಅರೆಸ್ಸೆಸ್ ಪಥಸಂಚಲನದ ವೇಳೆ ಭಗವಾಧ್ವಜ ಹಿಡಿದಿದ್ದ ಶರತ್ ವೀಡಿಯೊ ಚಿತ್ರಣ ಮಾಡಿದ್ದು. ಅದನ್ನೇ ಆರೆಸ್ಸೆಸ್ ಸಹಪಾಠಿಗಳು ಪೋಲೀಸರ ಗಮನಕ್ಕೆ ತಂದದ್ದು. ಈಗ ಅದೇ ಶಫಿಯನ್ನು ಪೋಲೀಸರು ಬಂಧಿಸಿದ್ದು ಆತನ ಜೊತೆಗೇ ಇತರ ಆರು ಮಂದಿಯನ್ನೂ ಬಂಧಿಸಿದ್ದಾರೆ. ಆದರೆ ಕೊಲೆ ಮಾಡಿದ ಪ್ರಧಾನ ಆರೋಪಿ ಇನ್ನೂ ಸಿಕ್ಕಿಲ್ಲ. ಕೆಲವರ ಪ್ರಕಾರ ಅದೇ ಆಲಾಡಿಯ ಮಜೀದ್ ಎಂಬಾತ ಕೊಲೆಯನ್ನು ಏಕಾಂಗಿಯಾಗಿ ಮಾಡಿದ್ದಾನೆ. ಆಲಾಡಿಯ ಮುಸ್ಲಿಂ ಹುಡುಗರಿಗೆ ಶರತ್ ಮೇಲಿರುವ ದ್ವೇಷವನ್ನೇ ಬಂಡವಾಳ ಮಾಡಿಕೊಂಡು, ಹಣದ ಆಮಿಷ ಒಡ್ಡಿ, ಸಿಕ್ಕಿ ಬಿದ್ದು ಜೈಲು ಪಾಲಾದರೆ ಕೇಸು ನಡೆಸಲು ಸಹಾಯ ಮಾಡುವ ಮತ್ತು ಕೇಸನ್ನು ಹಾಗೆಯೇ ಹಳ್ಳ ಹಿಡಿಸುವ ಭರವಸೆಯೊಂದಿಗೆ ಕೊಲೆ ಕೃತ್ಯಕ್ಕೆ ಪ್ರೇರೇಪಿಸಿರಬಹುದೇ ಅನ್ನೋ ದಟ್ಟ ಸಂಶಯ ಅಲ್ಲಿನ ಜನಗಳಿಗಿದೆ.

ಮೊನ್ನೆ ಕಲ್ಲಡ್ಕದ ಚಿಕ್ಕದೊಂದು ಘಟನೆಯನ್ನೇ ನೆಪವಾಗಿರಿಸಿಕೊಂಡು ಸಚಿವ ರಮಾನಾಥ್ ರೈ ಅದನ್ನು ಕೋಮುಗಲಭೆಯನ್ನಾಗಿ ಬಿಂಬಿಸಲು ತಮ್ಮ ಪ್ರಭಾವ ಬಳಸಿ ಪೋಲೀಸ್ ಇಲಾಖೆಯನ್ನು ಬಳಸಿಕೊಂಡರು. ಇಂಥಾ ಸಂದರ್ಭದಲ್ಲೇ ಎರಡು ಕೊಲೆಗಳಾಗಿದ್ದು ಮತ್ತು ಜಿಲ್ಲೆಯಲ್ಲಿ ಅಶಾಂತಿಯುಂಟಾದದ್ದು ರಮಾನಾಥ್ ರೈ ತಮ್ಮ ಶಕ್ತಿ ಮೀರಿ ಮುಸ್ಲಿಮರ ಓಲೈಕೆ ಮಾಡಿದರು. ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲೆ ನಡೆದ ಲಾಠೀ-ಚಾರ್ಜ್ ನಿಂದ ತಮಗೆದಿರು ಬಿದ್ದಿದ್ದ ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ಮಾಡಿದರು. ಕಲಾಯಿ ಅಶ್ರಫ್ ಮತ್ತು ಶರತ್ ಎರಡೂ ಕೊಲೆಯಿಂದ ಯಾರಿಗೆ ಲಾಭವಾಗುತ್ತದೆ? ಹೇಗೆ ಲಾಭವಾಗುತ್ತದೆ? ಆದು ರಾಜಕೀಯ ಲಾಭವಾ? ಇದರ ಜೊತೆಗೇ ವೈಯಕ್ತಿಕ ದ್ವೇಷದ ಲೆಕ್ಕಾಚಾರವೂ ಸೇರಿಕೊಂಡಿತಾ?

ಇವತ್ತು ಸರಕಾರ, ಇಲಾಖೆಗಳೆಲ್ಲಾ ಅವರ (ರಮಾನಾಥ್ ರೈ) ಕೈಯಲ್ಲೇ ಇದೆ. ಅವರೇನು ಬೇಕಾದರೂ ಮಾಡುತ್ತಾರೆ. ಶರತ್ ಸತ್ತ ವಿಚಾರವನ್ನು ಜಿಲ್ಲಾಡಳಿತ ಮುಚ್ಚಿಟ್ಟದ್ದೇ ಇದಕ್ಕೆ ಸಾಕ್ಷಿ. ಶರತ್ ತಂದೆ ಒಂದು ವೇಳೆ ತನ್ನ ಮಗ ಬದುಕದಿದ್ದರೆ ಅವರ ಅಂಗಾಂಗ ದಾನ ಮಾಡಲು ಸಿದ್ಧ ಅಂತ ವೈದ್ಯರಲ್ಲಿ ಹೇಳಿದ್ದರು. ಆದರೆ ಜಿಲ್ಲಾಡಳಿತದ ಒತ್ತಡಕ್ಕೆ ಸೋತು ತಂದೆಯಿಂದಲೂ ವೈದ್ಯರು ಸತ್ಯ ಮುಚ್ಚಿಟ್ಟರು! ಶರತ್ ಸತ್ತು ಹೋದ ಬಳಿಕವೂ ಅವರಿಗೆ ಡಯಾಲಿಸಿಸ್ ನಡೆಸಬೇಕು, ಅದಕ್ಕೆ ನಿಮ್ಮ ಅನುಮತಿ ಬೇಕು ಅಂತ ಶರತ್ ತಂದೆಯ ಬಳಿ ವೈದ್ಯರು ಸಹಿ ಹಾಕಿಸಿಕೊಂದ್ದಿದ್ದರು!! ಒಟ್ಟಿನಲ್ಲಿ ಮಾಲೇಗಾಂವ್ ಸ್ಫೋಟ, ಸಂಜೋತಾ ರೈಲು ಸ್ಫೋಟ ಮುಂತಾದ ಪ್ರಕರಣಗಳಲ್ಲಿ ಸುಳ್ಳು-ಸುಳ್ಳೇ ಕೇಸು ದಾಖಲಿಸಿಕೇಸರಿ ಭಯೋತ್ಪಾದನೆಎಂಬ ಮಿಥ್ಯೆಯನ್ನು ಸೃಷ್ಟಿಸಿದ ಹಾಗೆಯೇ ಇಲ್ಲೂ ಕೂಡಾ ಮುಸ್ಲಿಂ ವೋಟ್ ಬ್ಯಾಂಕ್ ಗೋಸ್ಕರ ಎಲ್ಲವನ್ನೂ ಸೃಷ್ಟಿಸಲಾಯಿತು ಎಂದೇ ನನ್ನ ಭಾವನೆ.

ಇದಕ್ಕಾಗಿ ಅಮಾಯಕ ಶರತ್ ಬಲಿ ಪಡೆಯಲಾಯಿತು! ಇದು ಕೋಮು ಗಲಭೆಯಲ್ಲಾ ವೈಯಕ್ತಿಕ ದ್ವೇಷದಿಂದಾದ ಕೊಲೆಗಳು ಅಂತ ಪೋಲೀಸ್ ಮಹಾನಿರ್ದೇಶಕರೇ ನೀಡಿದ ವರದಿಯನ್ನು ನಂಬಬೇಕೋ? ಅಥವಾ ಬಜರಂಗದಳ ಮತ್ತು ಪಿಎಫ್ಐ ಕಾರ್ಯಕರ್ತರು ಕೋಮು ದ್ವೇಷದಿಂದ ಮಾಡಿದ ಕೊಲೆಗಳೆಂದು ನಂಬಬೇಕೋ? ಅಥವಾ ಇದು ಬಹಳ ಯೋಜಿತ ರೀತಿಯಲ್ಲಿ ಮಾಡಿಸಲಾದ ಕಾಂಗ್ರೆಸ್ ರಾಜಕೀಯ ಹತ್ಯೆಗಳೋ?

ಬಂಟ್ವಾಳ ಕ್ಷೇತ್ರದ ನಾಗರಿಕರು ಇಂಥ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ತಮ್ಮ ತಮ್ಮಲ್ಲೇ ಚರ್ಚಿಸುತ್ತಾರಾದರು ಯಾವ ಪ್ರಶ್ನೆಗಳಿಗೂ ಉತ್ತರ ಸಿಗದಿರುವ ಸಂಭವವೇ ಹೆಚ್ಚು. ಯಾಕಂದರೆ ರಮಾನಾಥ್ ರೈಯವರೇ ಮುಂದೆ ಗೃಹಸಚಿವರಾಗಲಿದ್ದಾರೆ. ಎಲ್ಲವೂ ಅವರ ಮೂಗಿನ ನೇರದಡಿಯೇ, ಅವರಿಗೆ ಬೇಕಾದಂತೆ ನಡೆಯುವ ಸಾಧ್ಯತೆಯೇ ಹೆಚ್ಚು. ಕೊಲೆ ಆರೋಪ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಯೂ ತೀರಾ ಕಡಿಮೆಯೇ........ ಅಂತಲೂ ಜನ ಮಾತಾಡಿಕೊಳ್ಳುತ್ತಾರೆ. ಹತ್ಯೆಗೀಡಾದ ಶರತ್ ತಂದೆ ತಾಯಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇವತ್ತಿಗೂ ರಮಾನಾಥ್ ರೈ ಕಲೆಗಳೇ ಇಲ್ಲದ ಶುಭ್ರ ಬಿಳಿ ದಿರಿಸು ತೊಡುತ್ತಾರೆ. ಆದರೆ ಶರತ್ ಮನೆಯವರಿಗೆ ಮತ್ತು ಬಂಟ್ವಾಳದ ಪ್ರಜ್ಞಾವಂತ ನಾಗರಿಕರಿಗೆ ಬಿಳಿ ಬಟ್ಟೆಯಲ್ಲಿ ರಕ್ತದ ಕಲೆಗಳು ಹೇರಳವಾಗಿ ಕಾಣಿಸುತ್ತವೋ ಏನೋ.... .... .... ಯಾರಿಗೆ ಗೊತ್ತು…!!

Related posts