Infinite Thoughts

Thoughts beyond imagination

ರಾಜ್ಯ ಸರಕಾರ – ರಾಕ್ಷಸ ಸರಕಾರ । ಬದುಕಿಗೆ ರಕ್ಷಣೆಯಿಲ್ಲ, ಸಾವಿಗೆ ತನಿಖೆಯಿಲ್ಲ

ಶಾಂತಿ, ಸಹಿಷ್ಣುತೆ ಮತ್ತು ಸಮೃದ್ಧಿಯ ರಾಜ್ಯವೆಂದೇ ಪ್ರಸಿದ್ಧಿ ಪಡೆದಿದ್ದ ಕರ್ನಾಟಕಕ್ಕೆ ಗೂoಡಾ ರಾಜ್ಯ ಎಂಬ ಕುಖ್ಯಾತಿಯನ್ನು ತಂದುಕೊಟ್ಟದ್ದು ಕಾಂಗ್ರೆಸ್ ಸರಕಾರದ ಐದು ವರ್ಷಗಳ ಸಾಧನೆಯಾಗಿದೆ. ವರ್ಷ ೨೦೧೨ರಲ್ಲಿ ದಾಖಲಾದ ಅಪರಾಧಗಳ ಪ್ರಕರಣಗಳ ಸಂಖ್ಯೆ ೩,೭೦,೦೦೦. ೨೦೧೭ರಲ್ಲಿ ದಾಖಲಾದ ಅಪರಾಧಗಳ ಒಟ್ಟು ಸಂಖ್ಯೆ ೧೧,೩೦,೦೦೦. ಅಪಹರಣದ ಪ್ರಕರಣಗಳು ೨೦೧೨ರಲ್ಲಿ ೨,೮೦೦ ದಾಖಲಾಗಿದ್ದಾರೆ, ೨೦೧೭ರಲ್ಲಿ ೧೧,೦೦೦ ಪ್ರಕರಣಗಳು ದಾಖಲಾಗಿದ್ದವು. ಅತ್ಯಾಚಾರ ಪ್ರಕರಣಗಳು ೨೦೧೨ರಲ್ಲಿ ೧,೩೦೦ ದಾಖಲಾಗಿದ್ದು, ಮುಂದೆ ೨೦೧೭ರಲ್ಲಿ ೩,೮೦೦ ಪ್ರಕರಣಗಳನ್ನು ಈ ರಾಜ್ಯ ಕಂಡಿದೆ. ಕೊಲೆ ಪ್ರಕರಣಗಳು ೨೦೧೨ರಲ್ಲಿ ೩೫೦೦ ಇದ್ದು, ೨೦೧೭ರಲ್ಲಿ ೭೭೦೦ ಕ್ಕೆ ಏರಿಕೆ ಕಂಡಿದೆ. ಎಲ್ಲ ರೀತಿಯ ಅಪರಾಧ ಪ್ರಕರಣಗಳು ಮೂರೂ ಪಟ್ಟು ಹೆಚ್ಚಳವಾಗಿದೆ. ಇದು ಸರಕಾರವೇ ನೀಡಿದ ಅಂಕೆ ಸಂಖ್ಯೆ. ಇದರಲ್ಲಿ ಮಂತ್ರಿ ಮಹೋದಯರ, ಅವರ ಮಕ್ಕಳ, ಬೆಂಬಲಿಗರ ಅಪರಾಧ ಪ್ರಕರಣಗಳು ದಾಖಲಾಗಲೇ ಇಲ್ಲ…!! ಬಹುಶಃ ಅವುಗಳ ಲೆಕ್ಕ ಯಾರಿಗೂ ಸಿಕ್ಕಿಲ್ಲ!

ಅಪರಾಧ ಪ್ರಕರಣಗಳ ಈ ದಿಢೀರ್ ಏರುವಿಕೆಗೆ ಆಳುವ ಸರಕಾರದ ದಕ್ಷತೆಯ ಕೊರತೆಯೇ ಕಾರಣ. ಗೂಂಡಾಗಳು ತಮ್ಮ ಬಾಲ ಬಿಚ್ಚಲು ಕಾರಣ ಅನೇಕ ಮಂತ್ರಿಗಳ ಅಪ್ತರೆಲ್ಲ ಅವರೇ ಆಗಿರುವುದು. ದಕ್ಷ ಪೊಲೀಸ್ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗುವುದು ಈ ಆಪ್ತವಲಯದ ಗುಂಡಾಗಳು. ಕೊಲೆ ದರೋಡೆ ಪಾತಕಗಳಿಗೆ ರಾತ್ರಿಯಾಗುವುದನ್ನು ಕಾಯುವ ಅವಶ್ಯಕತೆಯೇ ಅವರಿಗೆ ಬೀಳಲಿಲ್ಲ. ಹಾಡುಹಗಲೇ ಕೊಲೆಗೈದರು ಶಿಕ್ಷೆಯ ಭಯವಿಲ್ಲದೆ ಓಡಾಡುವ “ಪಾತಕ ಭಾಗ್ಯ”ವನ್ನು ಸರಕಾರವೇ ಕಲ್ಪಿಸಿದೆ. ಕರ್ನಾಟಕ ಲೋಕಾಯುಕ್ತರ ಮೇಲೆ ನಿಚ್ಚಳ ಹಗಲಿನಲ್ಲೇ ಹಲ್ಲೆಯಾಯಿತು. ಇಂಥಾದ್ದು ದೇಶದಲ್ಲಿಯೇ ಮೊದಲ ಪ್ರಕರಣ ಎಂದು ಹೆಗ್ಗಳಿಕೆಯನ್ನು ಕರ್ನಾಟಕಕ್ಕೆ ತಂದುಕೊಟ್ಟವರು, ಸನ್ಮಾನ್ಯ ಸಿದ್ಧರಾಮಯ್ಯನವರು!

ದಲಿತರ ಉದ್ಧಾರ ನಮ್ಮ ಗುತ್ತಿಗೆ, ನಮ್ಮಿಂದಲೇ ಅವರ ಪ್ರಗತಿಯಾಗಬೇಕು ಎಂದು ಡಂಗುರ ಹೊಡೆಯುತ್ತಿದ್ದ ‘ಅಹಿಂದ’ ಮುಖ್ಯಮಂತ್ರಿಗಳ ರಾಜ್ಯಬಾರದಲ್ಲಿ ದಲಿತರ ಮೇಲಾದ ದೌರ್ಜನ್ಯದ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ನಮಗೆ ಗಾಬರಿಯಾಗುತ್ತದೆ. ೨೦೧೨ರಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ೨೯೦೦ ಆಗಿತ್ತು. ೨೦೧೭ರಲ್ಲಿ ಆ ಸಂಖ್ಯೆ ೯೧೦೦ಕ್ಕೆ ಏರಿದೆ..!! ಹೀಗೆ ಎಲ್ಲ ರೀತಿಯ ಪಾತಕಗಳಲ್ಲೂ ದಾಖಲೆ ಸೃಷ್ಟಿಸಿದ ರಾಜ್ಯ ಸರಕಾರವನ್ನು ರಾಕ್ಷಸ ಸರಕಾರವೆನ್ನದೆ ಬೇರೇನೂ ಹೇಳಲು ಸಾಧ್ಯ…..?! ಈ ಸರಕಾರದ ಅವಧಿಯಲ್ಲಿ ಯಾರ ಬದುಕಿಗೂ ರಕ್ಷಣೆಯಿಲ್ಲ.

ನಾಡಿನ ಹಿರಿಯ ಸಂಶೋಧಕರಾದ ಡಾ। ಎಂ ಎಂ ಕಲಬುರ್ಗಿಯವರ ಹತ್ಯೆಯಾದಾಗ ಅದನ್ನು ಹೇಗಾದರೂ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರ ತಲೆಗೆ ಕಟ್ಟಲು ಸರಕಾರವೂ, ಎಡಪಂಥೀಯ ವಿಚಾರವಾದಿಗಳೂ, ಅನೇಕ ಸಿದ್ಧರಾಮಯ್ಯ ಕೃಪಾಪೋಷಿತ ಸಂಘಟನೆಗಳೂ, ಇನ್ನಿಲ್ಲದ ಪ್ರಯತ್ನ ಮಾಡಿದವು. ಸರಕಾರ ಈ ಹತ್ಯೆಯ ತನಿಖೆಯನ್ನು ಮಾಡಿತೇ ಬಿಟ್ಟಿತೇ ಅನ್ನುವುದು ಇನ್ನೂ ಜನತೆಗೆ ತಿಳಿದಿಲ್ಲ….! ಪ್ರಜೆಗಳ ರಕ್ಷಣೆಯ ಹೊಣೆ ರಾಜ್ಯಸರ್ಕಾರದ್ದೂ ಅನ್ನುವ ಪ್ರಾಥಮಿಕ ತಿಳುವಳಿಕೆಯು ಇಲ್ಲದ ಎಡಚರು, ಇಂತಹ ಪ್ರಕರಣಗಳಿಗೆಲ್ಲ ಪ್ರಧಾನಿಯವರು ಉತ್ತರ ಕೊಡಲಿ ಎನ್ನುತ್ತಾರೆ! ಹಾಗೆ ಪತ್ರಕರ್ತೆ ಎಂದು ಹೇಳಿಕೊಳ್ಳುತ್ತಿದ್ದ ಗೌರಿ ಲಂಕೇಶ್ ಕೊಲೆಯಾಯಿತು. ಅದರ ತನಿಖೆಯೂ ಅಡ್ಡ ದಾರಿ ಹಿಡಿದಿದೆ. ನಕ್ಸಲರೊಡನೆಯೇ ಒಡನಾಟದಲ್ಲಿದ್ದ ಗೌರಿಯವರ ಕೊಲೆಗುಡುಕರನ್ನು ಬಂದೂಕುಧಾರಿಗಳಲ್ಲಿ ಹುಡುಕುವುದು ಬಿಟ್ಟು, ತಿಲಕಧಾರಿಗಳನ್ನು ಗುರಿಯಾಗಿಸಿಕೊಂಡದ್ದರಿಂದ ಅದರ ತನಿಖೆಯು ಹಾದಿ ತಪ್ಪಿದೆ. ಕಾನೂನು ಸುರಕ್ಷೆ ರಾಜ್ಯ ಸರಕಾರದ ಹೊಣೆ ಎಂಬ ಅರಿವಿಲ್ಲದ ಖಳನಾಯಕರು ಮೋದಿ ಮೌನ ಮುರಿಯಲಿ ಎಂದು ರಾಜ್ಯದ ತುಂಬಾ ಬೊಬ್ಬಿಡುತ್ತಿದ್ದಾರೆ. ರಾಕ್ಷಸ ಸರಕಾರದಲ್ಲಿ ಖಳನಾಯಕರು ಕಥಾನಾಯಕರಾಗಿ ಪ್ರಕಾಶಿಸುವುದು ಸಹಜವಲ್ಲವೇ?

ಈ ರಾಕ್ಷಸ ರಾಜ್ಯವನ್ನು ಕೊನೆಗಾಣಿಸಲು ನಾಗರಿಕರಿಗೆ ಚುನಾವಣೆ ಅವಕಾಶ ಒದಗಿಸಿದ್ದು, ಪ್ರತಿ ಮತವೂ ದೈತ್ಯರ ವಿರುದ್ಧದ ರಾಮಬಾಣವಾಗಲಿದೆ. ಪಾತಕ ಸರಕಾರದ ವಿರುದ್ಧ ಸಜ್ಜನರ ಸಂಕಲ್ಪ ಕಾರ್ಯಗತವಾದರೆ ರಾಜ್ಯದ ಭವಿಷ್ಯ ಸೂರ್ಯನ ಕಿರಣಕ್ಕೆ ನಗುವ ಕಮಲದಂತೆ ಅರಳಲಿದೆ!

Related posts