Infinite Thoughts

Thoughts beyond imagination

ಔದಾರ್ಯವೋ? ಆತ್ಮಹತ್ಯೆಯೋ!!

ಆಲಿಘಡ್ ಮುಸ್ಲಿಂ ವಿದ್ಯಾಪೀಠದಲ್ಲಿ ಮಹಮ್ಮದಾಲಿ ಜಿನ್ನಾನ ಫೋಟೋ ಈಗಲೂ ಇದೆ. ಮಹಾತ್ಮಾ ಗಾಂಧೀಜಿ, ಜವಾಹರ ಲಾಲ್ ನೆಹರು, ಮೌಲಾನಾ ಅಬ್ದುಲ್ ಕಲಾಂ ಆಜಾದರ ಫೋಟೋಗಳ ನಡುವೆ ​ಮಹಮ್ಮದಾಲಿ ಜಿನ್ನಾನ ಫೋಟೋ ರಾರಾಜಿಸುತ್ತಿದೆ. ಅದೀಗ ವಿವಾದದ ಕೇಂದ್ರ ಬಿಂದು. ಸ್ವತಂತ್ರ್ಯ ಸ್ವಾಭಿಮಾನಿ ಭಾರತದಲ್ಲಿ ಜಿನ್ನಾನ ಫೋಟೋ ಬೇಕೇ? ಎನ್ನುವ ಪ್ರಶ್ನೆಯನ್ನು ಎತ್ತಿದವರು ಅಲ್ಲಿನ ಸಂಸದರಾದ ಶ್ರೀ ಸತೀಶ ಗೌತಮ. ಭಾರತದ ವಿಭಜನೆಗೆ ಕಾರಣನಾದ, ನೇರ ಕಾರ್ಯಾಚರಣೆಗೆ ಕರೆಗೊಟ್ಟು ಲಕ್ಷಾಂತರ ಹಿಂದೂಗಳ ಕಗ್ಗೊಲೆಗೆ ಮುಸ್ಲಿಮರನ್ನು ಪ್ರಚೋದಿಸಿದ ನರಹಂತಕ ಜಿನ್ನಾನನ್ನು ಆರಾಧಿಸುವ ಅಗತ್ಯವೇನು? ಅದರ ಔಚಿತ್ಯವೇನು? ಎಂಬ ಪ್ರಶ್ನೆ ಈಗ ದೇಶದ ಮುಂದಿದೆ.

ಈ ಫೋಟೋ ಸ್ವಾತಂತ್ರ್ಯ ಪೂರ್ವದಿಂದಲೂ ಅಲ್ಲೇ ಇದೆ, ಈಗೇಕೆ ವಿವಾದ? ಎನ್ನುವ ಪ್ರಶ್ನೆ ರಾಷ್ಟ್ರ ದ್ರೋಹಿಗಳದ್ದು. ಇದು ಹಿಂದೂ ಸಂಘಟನೆಗಳ ಅನವಶ್ಯಕ ತಂಟೆ ಎನ್ನುವುದು ಭಾವಹೀನ ಲದ್ಧಿಜೀವಿಗಳ, ಪುಕ್ಕಲು ಜಾತ್ಯಾತೀತರ ಮಾತು. (ಜಿನ್ನಾ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಅನ್ನುವವರೂ ಇದ್ದಾರೆ!) ಪಾಕಿಸ್ತಾನದಲ್ಲಿ ಭಾರತದ ಮಾನವನ್ನು ಹರಾಜು ಹಾಕಿದ ಮಣಿಶಂಕರ್ ಅಯ್ಯರ್ ಕೇಂದ್ರ ಮಂತ್ರಿಯಾಗಿದ್ದಾಗ ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿದ್ದ ವೀರ ಸಾವರ್ಕರರ ಫೋಟೋ ತೆಗೆಸಿ ಹಾಕಿದರು. ಆಗ ಈ ಸೋಗಲಾಡಿ ಜಾತ್ಯಾತೀತರು, ಪರಮ ಔದಾರ್ಯದ ಲದ್ಧಿಜೀವಿಗಳು ಮೌನವಾಗಿದ್ದರಲ್ಲಾ…! ಸಾವರ್ಕರರ ಫೋಟೋ ಬಹಳ ಕಾಲದಿಂದ ಅಲ್ಲಿದೆ.

।। ಜಗತ್ತಿನ ಶ್ರೇಷ್ಠ ಹೋರಾಟಗಾರರೆಂದು ಗೌರವಿಸಿ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿಯೂ ಸಾವರ್ಕರರ ಫೋಟೋ ಹಾಕಲಾಗಿದೆ ।।

ಈಗೇಕೆ ಅದನ್ನು ತೆಗೆದು ಹಾಕುವುದು? ಅವರೇನು ರಾಷ್ಟ್ರ ದ್ರೋಹಿಯೇ? ಎಂದು ಯಾರು ಅಂದು ಕೇಳಲೇ ಇಲ್ಲ!

ಜಿನ್ನಾನ ಫೋಟೋ ವಿವಾದದಲ್ಲಿ ಉತ್ತರಪ್ರದೇಶ ಸರಕಾರ, ಕೇಂದ್ರ ಸರಕಾರಗಳು ತಮಗೆ ನ್ಯಾಯ ನೀಡದಿದ್ದಲ್ಲಿ, ನಾವು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗುತ್ತೇವೆ ಎಂದು ಅಲಿಘಡ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. (ನರಹಂತಕ ವೀರಪ್ಪನ್ ಕೊಂದು ಹಾಕಿದ ಸಾರ್ವಜನಿಕರ ಬಗ್ಗೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಒಂದೂ ಮಾತಾಡದ ಮಾನವ ಹಕ್ಕುಗಳ ಕಾರ್ಯಕರ್ತರು, ವೀರಪ್ಪನ್ ಸತ್ತಾಗ ಅವನಿಗೆ ಗೌರವದ ಸಾವು ಸಿಗಲಿಲ್ಲ ಎಂದು ಗೋಳಿಟ್ಟಿದ್ದರು!) ಅವರಿಗೆ ಜಿನ್ನಾನ ಫೋಟೋ ಅಲ್ಲೇ ಇರಬೇಕಾಗಿದೆ. ಪಾಕಿಸ್ತಾನ ನಿರ್ಮಾಪಕನ ಆರಾಧನೆ ಅವ್ಯಾಹತವಾಗಿ ಸ್ವತಂತ್ರ ಭಾರತದಲ್ಲೆ ನಡೆಯಬೇಕಾಗಿದೆ…!! ಇದನ್ನು ಸಣ್ಣ ಸಂಗತಿ ಎಂದು ಮರೆತುಬಿಡೋಣವೇ? ಅಥವಾ ರಾಷ್ಟ್ರದಾದ್ಯಂತ ಭಾರತದ ನೈಜ ಅಸ್ಮಿತೆಯ ಕುರಿತು ಮುಕ್ತವಾದ ಚರ್ಚೆಯನ್ನು ಆರಂಭಿಸೋಣವೇ?

ಭಾರತ ವಿಭಜನೆಯ ಮೂಲ ಬೀಜ ಮೊಳಕೆಯೊಡೆದದ್ದೇ ಆಲಿಘಡ್ ಮುಸ್ಲಿಂ ಯುನಿವರ್ಸಿಟಿಯಲ್ಲಿ…! ಅದರ ಸ್ಥಾಪಕರಾದ ಸರ್ ಸಯ್ಯದ್ ಅಹಮದ್ ಖಾನ್ ದ್ವಿರಾಷ್ಟ್ರವಾದದ ಪ್ರತಿಪಾದಕರಾಗಿದ್ದರು. ಬ್ರಿಟಿಷರು ಭಾರತವನ್ನು ಬಿಟ್ಟುಹೋದರೆ ಅಳುವವರು ಯಾರು? ಶೇಕಡಾ ೭೫ರಷ್ಟಿರುವ ಹಿಂದುಗಳೇ? ಶೇಕಡಾ ೨೫ರಷ್ಟಿರುವ ಮುಸ್ಲಿಮರೇ? ಎನ್ನುವ ಪ್ರಶ್ನೆಗಳನ್ನೆತ್ತಿ ಹಿಂದೂ ಬಹುಸಂಖ್ಯಾತ ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿರಲಾರರು, ಎಂಬ ವಿಚಾರವನ್ನು ಹುಟ್ಟು ಹಾಕಿದ್ದರು. ಅದಕ್ಕಾಗಿ ಮುಸ್ಲಿಮರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮದೇ ಆದ ಪ್ರತ್ಯೇಕ ದೇಶವನ್ನು ಪಡೆಯಬೇಕು ಎಂದು ಆಗಲೇ ಸೂಚಿಸಿದ್ದರು. ಆಲಿಘಡ್ ಮುಸ್ಲಿಂ ಯುನಿವರ್ಸಿಟಿ ದ್ವಿರಾಷ್ಟ್ರ ವಾದದ ವೇದಿಕೆಯಾಗಿ, ರಾಷ್ಟ್ರ ವಿಭಜನೆಯ ಹೋರಾಟದ ನೆಲೆಯಾಗಿ ಒದಗಬೇಕೆಂಬ ತಮ್ಮ ಆಶಯಗಳನ್ನು ಅವರೇನೂ ಮುಚ್ಚಿಟ್ಟಿರಲಿಲ್ಲ. ಯುನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿರುವ ನಾಲ್ಕನೇ ಪೀಳಿಗೆಯೂ ಜಿನ್ನಾನ ಫೋಟೋ ಅಲ್ಲೇ ಇರಲಿ ಎಂದು ಈಗ ಹಠ ಮಾಡುತ್ತಿರುವುದನ್ನು ಕಂಡಾಗ ದ್ವಿರಾಷ್ಟ್ರವಾದ ಇನ್ನು ಜೀವಂತವಾಗಿದೆ ಎಂದು ಅನಿಸುತ್ತಿಲ್ಲವೇ? ಹಾಗೆ ಇದು ಇಡೀ ಭಾರತಕ್ಕೆ ಮತ್ತು ಭಾರತದ ಏಕತೆಗೆ ಧಕ್ಕೆ ತರಬಹುದಾದ ವಿಚಾರವಾಗಿದ್ದು ಎಚ್ಚರಿಕೆಯ ಘಂಟೆಯಲ್ಲವೇ?

ಸರದಾರ ಪಟೇಲರು ೧೯೪೭ರಲ್ಲಿ ಎತ್ತಿದ್ದ ಪ್ರಶ್ನೆ ಈಗಲೂ ಪ್ರಸ್ತುತವಾಗಿದೆ. ವಿಭಜನೆ ನಿರ್ಣಯವಾದಾಗ ಅನೇಕ ಮುಸ್ಲಿಮರು ಭಾರತದಲ್ಲೇ ಉಳಿಯುತ್ತೇವೆ ಎಂದರು. ಗಾಂಧೀಜಿಯಾದಿಯಾಗಿ ಹೆಚ್ಚಿನವರೆಲ್ಲ ಅವರ ಈ ನಿರ್ಣಯವನ್ನು ಸ್ವಾಗತಿಸಿದರು. ಆಗ ಸರದಾರ ಪಟೇಲರು ಎತ್ತಿದ ಪ್ರಶ್ನೆ “ಈಗ ಇಲ್ಲೇ ಉಳಿಯುತ್ತೇವೆ ಅಂದವರಲ್ಲಿ ಹೆಚ್ಚಿನವರೆಲ್ಲ ಪ್ರತ್ಯೇಕ ದೇಶಕ್ಕಾಗಿ ಹೋರಾಡಿದವರೇ. ಜನಮತ ಗಣನೆಯಲ್ಲಿ ಪಾಕಿಸ್ತಾನ ಬೇಕು ಅಂದವರು, ಒಂದೇ ದಿನದಲ್ಲಿ ಅವರೆಲ್ಲ ಬದಲಾಗಿಬಿಟ್ಟರೆ? ಇದನ್ನು ನಾವು ನಂಬಬೇಕೆ?” ಈ ಪ್ರಶ್ನೆಗೆ ಈಗಲಾದರೂ ಉತ್ತರ ಕಂಡುಕೊಳ್ಳಬೇಕಲ್ಲವೇ? ಹೆಗ್ಗಣವನ್ನು ಒಳಗೇ ಬಿಟ್ಟು ಹೊರಗಿನಿಂದ ಬಿಲವನ್ನು ಮುಚ್ಚಿದರೆ ಸಮಸ್ಯೆ ಬಗೆ ಹರಿಯುತ್ತದೆಯೇ? ನಮ್ಮ ಔದಾರ್ಯವೇ ನಮಗೇ ಉರುಳಾಗಬಾರದಲ್ಲ!

Pic: Naya Daur Media

Related posts