Infinite Thoughts

Thoughts beyond imagination

ನಾಲ್ಕು ವರ್ಷ ಪೂರೈಸಿದ ಏನ್ ಡಿ ಏ ಸರ್ಕಾರ

ಕೇಂದ್ರದಲ್ಲಿ ಸನ್ಮಾನ್ಯ ನರೇಂದ್ರ ಮೋದಿಜಿಯವರ ನೇತ್ರತ್ವದಲ್ಲಿ ಏನ್ ಡಿ ಏ ಸರ್ಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ. ಅನಂತಕುಮಾರ ಹೆಗಡೆಯವರು ವಿಜಯ ಕರ್ನಾಟಕ ಪತ್ರಿಕೆಗೆ ನೀಡಿದ ತಮ್ಮ ಅಭಿಪ್ರಾಯ ಪ್ರಕಟಗೊಂಡ ಇಂದಿನ ಸಂಚಿಕೆಯ ವರದಿ. ಅದರ ಪೂರ್ಣ ವರದಿ ಇಲ್ಲಿದೆ…..
ಭಾರತದ ಪುನರುತ್ಥಾನ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್‌ ಡಿ ಏ ಸರಕಾರದ ಸಾಧನೆಗಳನ್ನು ಅಂಕೆ ಸಂಖ್ಯೆಗಳಲ್ಲಿ ವಿವರಿಸುವುದಕ್ಕೆ ಬಹಳಷ್ಟಿದೆ. ಆದರೆ ಭಾರತದಲ್ಲಿ ಕಾಣುತ್ತಿರುವ ಗುಣಾತ್ಮಕ ಬದಲಾವಣೆಗಳನ್ನು ಗಮನಿಸದಿದ್ದರೆ ಹಣ್ಣಿನ ಸತ್ವವನ್ನು ಮರೆತು ಸಿಪ್ಪೆಯನ್ನು ವರ್ಣಿಸಿದಂತಾಗುತ್ತದೆ. ಹಣ್ಣು ಪುಷ್ಟವಾದಾಗ ಸಿಪ್ಪೆಯೂ ಹೊಳೆಯುತ್ತದೆ. ಆ ಹೊಳಪು ಸಾಧನೆಯ ಸತ್ವವಲ್ಲ ಅದರ ಹೊರ ಲಕ್ಷಣ ಮಾತ್ರ.
ಪ್ರಾಮಾಣಿಕ ಸಂಕಲ್ಪ-ಪರಿಶ್ರಮದ ಸಾಧನೆ: ಮೋದಿ ಸರಕಾರದ ಸಂಕಲ್ಪವೇ ‘ಸಬ್ ಕಾ ಸಾಥ್; ಸಬ್ ಕಾ ವಿಕಾಸ್’ ಇದು ಎಲ್ಲ ರಂಗಗಳಲ್ಲಿ ಕಂಡುಬಂದಿದೆ. ಸಂಕಲ್ಪದಿಂದ ಸಿದ್ಧಿಯತ್ತ ಸಾಗುವುದಕ್ಕೆ ಪ್ರಧಾನ ಮಂತ್ರಿಗಳಿಂದಾರಂಭಿಸಿ ಎಲ್ಲರೂ ಪಡುತ್ತಿರುವ ಶ್ರಮ ದೊಡ್ಡದು. ಸರಕಾರವೊಂದು ಇಷ್ಟು ಜೀವಂತವಾಗಿ ಕೆಲಸ ಮಾಡುತ್ತದೆ, ಜನರ ಅಗತ್ಯಗಳಿಗೆ ಸ್ಪಂದಿಸುತ್ತದೆ ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ. ಸರಕಾರದ ಯೋಜನೆಗಳ ಕುರಿತು ಜನ ಸಾಮಾನ್ಯರು ಮಾತನಾಡಲು ಆರಂಭಿಸಿರುವುದು ಆಡಳಿತ ಯಂತ್ರವನ್ನು ಜಾಗೃತಗೊಳಿಸಿದೆ. ನೇರವಾಗಿ ಪ್ರಧಾನ ಮಂತ್ರಿಯವರೊಂದಿಗೇ ಮಾತಾಡಬಹುದು ಎನ್ನುವ ವಾತಾವರಣ ನಿರ್ಮಾಣ ಮಾಡಿರುವುದರಿಂದ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎನ್ನುವ ಮಾತಿಗೆ ಬೆಲೆ ಬಂದಿದೆ.
ನಮ್ಮ ದೇಶ-ನಮ್ಮ ಜನ: ಇಡೀ ಭಾರತ ಒಂದು ಎನ್ನುವ ಭಾವ ಎಲ್ಲ ಕಡೆ ಪಸರಿಸಿದೆ. ಭಾರತದ ಮಿತ್ರರು ಯಾರು; ಶತ್ರುಗಳು ಯಾರು ಎನ್ನುವುದು ಎಲ್ಲರಿಗೂ ತಿಳಿಯುತ್ತಿದೆ. ಸ್ವಾತಂತ್ರ್ಯಾ ನಂತರ ಭಾರತ ತನ್ನ ಸಾಂಸ್ಕೃತಿಕ ಸ್ವರೂಪದಲ್ಲಿ ವಿಶ್ವದೆದುರು ಅನಾವರಣಗೊಳ್ಳುತ್ತಿದೆ. ಒಳಗೆ ಆತ್ಮ ವಿಶ್ವಾಸ ಹೆಚ್ಚಾದಂತೆ ಹೊರಗಿನ ಪ್ರಭಾವಳಿಯೂ ಪ್ರಖರವಾಗಿ ಬೆಳಗುತ್ತಿದೆ. ವಿಶ್ವ ಭಾರತವನ್ನೂ, ಮೋದಿಯವರನ್ನೂ ಅಭಿಮಾನದಿಂದ ಗಮನಿಸುತ್ತಿದೆ. ಯೋಗ, ಸಂಸ್ಕೃತಗಳನ್ನು ಸ್ವೀಕರಿಸುತ್ತಿದೆ ಜಗತ್ತು. ಸರಕಾರ, ರಾಜಕಾರಣದ ಕುರಿತು ಸಾಮಾನ್ಯರಲ್ಲಿ ಮನೆಮಾಡಿದ್ದ ಸಿನಿಕತೆಯನ್ನು ಕಳೆದಿರುವುದು ನಮ್ಮ ಸರಕಾರದ ಬಹುದೊಡ್ಡ ಸಾಧನೆ.
ಎಲ್ಲದಕ್ಕೂ ಮೋದಿ ಉತ್ತರಿಸಲಿ ಎಂಬ ನಿರೀಕ್ಷೆ: ದೇಶದ ಯಾವುದೇ ಮೂಲೆಯಲ್ಲಿ ಏನೇ ನಡೆಯಲಿ ಅದಕ್ಕೆಲ್ಲ ಮೋದಿಯವರು ಉತ್ತರಿಸಲಿ ಎಂದು ಒಂದು ವರ್ಗವು ನಿರೀಕ್ಷೆ ಮಾಡುತ್ತಿದೆ. ಕಾರಣ ಮೋದಿಯವರ ಸಂವೇದನಶೀಲತೆ ಮತ್ತು ಬದ್ಧತೆ. ಮೋದಿಯವರು ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬಲ್ಲರು ಎಂಬ ವಿಶ್ವಾಸವೇ ಈ ನಿರೀಕ್ಷೆಯನ್ನು ಹುಟ್ಟಿಸಿದೆ. ಪ್ರತಿ ಪಕ್ಷಗಳೂ, ಬುದ್ಧಿಜೀವಿಗಳೂ “ಮೋದಿ ಉತ್ತರಿಸಲಿ” ಎನ್ನುವುದು ಅದೇ ವಿಶ್ವಾಸದಿಂದ!
ಕೌಶಲ್ಯ ಭಾರತ-ಕೌತುಕ ಭಾರತ: ಎಲ್ಲ ಕೌಶಲ್ಯಾಭಿವೃದ್ಧಿಗೆ ಒತ್ತು ಕೊಡಲಾಗಿದೆ. ಪ್ರತ್ಯೇಕ ಖಾತೆಯನ್ನು ತೆರೆದು ವಿಕಾಸಕ್ಕೆ ಗುಣಾತ್ಮಕ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಒಂದೆರಡು ಉದಾಹರಣೆ ನೀಡುತ್ತೇನೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ನೋಂದಾಯಿಸಿಕೊಂಡವರ ಸಂಖ್ಯೆ ೨೨,೪೮,೬೯೨. ಇವರಲ್ಲಿ ಪ್ರಮಾಣ ಪತ್ರ ಪಡೆದು ಕಾರ್ಯಪ್ರವೃತ್ತರಾದವರು ೧೧,೮೭,೨೯೨. ಕೇವಲ ಎರಡೇ ವರ್ಷಗಳಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅಡಿಯಲ್ಲಿ ತರಬೇತಿ ಹೊಂದಿದ ೫ ಲಕ್ಷಕ್ಕೂ ಹೆಚ್ಚಿನ ಯುವ ಜನತೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಬಹಳಷ್ಟು ಜನ ಸ್ವಂತ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ೧೯೬೧ರ ಅಪ್ರೆಂಟಿಸ್ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ನ್ಯಾಶನಲ್ ಅಪ್ರೆಂಟಿಸ್ ಪ್ರಮೋಶನ್ ಸ್ಕೀಮ್ ನಲ್ಲಿ ನೀಡುವ ತರಬೇತಿಗೆ ಹೊಸತನವನ್ನು ನೀಡಲಾಯಿತು. ಅದರಲ್ಲಿ ನೋಂದಾಯಿತ ಅಭ್ಯರ್ಥಿಗಳ ಸಂಖ್ಯೆ ೨೦೧೬ರಲ್ಲಿ ೧.೧೪ ಲಕ್ಷವಾಗಿದ್ದರೆ ೨೦೧೮ರ ಆರಂಭದಲ್ಲಿ ೧೦ ಲಕ್ಷ ದಾಟಿದೆ. ದೇಶದಲ್ಲಿ ಐಟಿಐಗಳ ಸಂಖ್ಯೆ ಹೆಚ್ಚಾಗಿದೆ, ಅಂತೆಯೇ ೧೨೮ ಬಗೆಯ ಕೌಶಲಗಳನ್ನು ಕಲಿಸುವ ವ್ಯವಸ್ಥಿತ ಪ್ರಯತ್ನ ನಡೆದಿದೆ.
ಪ್ರಗತಿಯ ಈ ವೇಗವನ್ನು ಕಂಡು ವಿಶ್ವಕ್ಕೆ ಕೌತುಕವಾಗಿದೆ, ಭಾರತಕ್ಕೆ ಹೆಮ್ಮೆ ಮೂಡಿದೆ. ಆಲಸ್ಯದ ಕಸವನ್ನು ತೆಗೆದು ಸ್ವಚ್ಛ ಭಾರತವನ್ನೂ, ಕಪ್ಪು ಹಣದ ಮಸಿಯನ್ನು ಕಳೆದು ಶುದ್ಧ ಭಾರತವನ್ನೂ ನಿರ್ಮಿಸುತ್ತಿದೆ. ಗಂಗೆಯನ್ನು ತೊಳೆಯುವ ಸಂಕಲ್ಪ ಮಾಡಿದ ಮೋದಿ ಸರಕಾರ ಎಲ್ಲರ ಸಹಕಾರದಿಂದ ಸಮೃದ್ಧ ಭಾರತವನ್ನು, ಸಾಮರಸ್ಯದ ಭಾರತವನ್ನು ನಿರ್ಮಿಸುವಲ್ಲಿ ಯೋಜಿತ ಹಾದಿಯಲ್ಲಿ ಸಾಗುತ್ತಿದೆ.

Related posts