ನಮ್ಮ ಹೆಮ್ಮೆಯ ವೀರ ಸಾವರ್ಕರ್ ಅವರ ಜನ್ಮದಿನ
“ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು”
~ ವಿನಾಯಕ ದಾಮೋದರ ಸಾವರ್ಕರ್
ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಬುದ್ಧಿಜೀವಿ, ಮತ್ತು ಸಮಾಜಸೇವಕ ರಾಗಿದ್ದರು ನಮ್ಮ ಹೆಮ್ಮೆಯ ವೀರ ಸಾವರ್ಕರ್! ಇಂದು ಅವರ ಜನ್ಮದಿನ. ನಮ್ಮ ಪ್ರಸಕ್ತ ಜನತೆ ಸ್ವಾತಂತ್ರ್ಯದ ಸವಿಯನ್ನು ಸವಿಯುತ್ತಿರುವುದೇ ಆದಲ್ಲಿ ಅದಕ್ಕೆ ಕಾರಣ ಈ ಕೆಚ್ಚೆದೆಯ ಕಲಿ. ಇಂಥವರನ್ನು ನೆನೆಯುವುದು ನಮ್ಮ ಕರ್ತವ್ಯವು ಹೌದು…. ಕೃತಜ್ಞತೆಯು ಹೌದು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಗೂರು ಎಂಬುದು ಒಂದು ಚಿಕ್ಕ ಹಳ್ಳಿ. 1883ರ ಮೇ ತಿಂಗಳ 28 ನೇ ತಾರೀಖಿನಂದು ಭಗೂರು ಗ್ರಾಮದಲ್ಲಿದ್ದ ದಾಮೋದರಪಂತ್ ಸಾವರ್ಕರ ಮತ್ತು ರಾಧಾಬಾಯಿಯವರ ಅನುರೂಪ ದಾಂಪತ್ಯದ ಕುರುಹಾಗಿ ಹುಟ್ಟಿದವರೇ ವೀರ ವಿನಾಯಕ ಸಾವರಕರ್. ಭಾರತದಲ್ಲಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ವೀರರು ನಿತ್ಯವೂ ಬಲಿದಾನವನ್ನರ್ಪಿಸಿ ತಮ್ಮ ಹೋರಾಟದ ಕಿಚ್ಚನ್ನು ದೇಶದ ಉದ್ದಗಲಕ್ಕೂ ಹಬ್ಬಿಸುತ್ತಿದ್ದರು. ಎಳವೆಯಲ್ಲೇ ಸ್ವಾತಂತ್ರ್ಯ ಹೋರಾಟದೆಡೆಗೆ ಸೆಳೆಯಲ್ಪಟ್ಟಿದ್ದ ಸಾವರ್ಕರರನ್ನ ಪೂರ್ಣವಾಗಿ ಸೆಳೆದುಕೊಂಡಿದ್ದು ಚಾಪೇಕರ್ ಸೋದರರ ಬಲಿದಾನ. ಆ ನಂತರ ಸಂಪೂರ್ಣ ಕ್ರಾಂತಿಕಾರಿಯಾದ ಸಾವರ್ಕರ್ ತಮ್ಮ ಲೇಖನ, ಕವನಗಳಿಂದ ಈ ಕಿಚ್ಚನ್ನು ವಿಸ್ತರಿಸುತ್ತಲೇ ಹೊರಟರು. ಇವರ ಬೆಳವಣಿಗೆಯ ಪರಿ ಬ್ರಿಟಿಷರನ್ನು ಮತ್ತು ರಾಷ್ಟ್ರದ್ರೋಹಿ ನಾಯಕರನ್ನು ಎಂಥಹಾ ಪರಿ ಬೆಚ್ಚಿಬೀಳಿಸಿತೆಂದರೆ, ಬ್ರಿಟನ್ ಸರಕಾರವು ಇವರನ್ನು ಹಿಡಿದು ಕೊಟ್ಟಲ್ಲಿ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿತು. ಮಂದಗಾಮಿ ಯೋಚನೆಗಳಿಂದ ಸ್ವಾತಂತ್ರ್ಯ ಎಂದು ದಕ್ಕುವುದಿಲ್ಲ ಎಂಬುದನ್ನು ಅರಿತಿದ್ದ ಸಾವರ್ಕರರು, ಕ್ರಾಂತಿಕಾರಿಯಾಗಿಯೇ ಹೆಸರಾದವರು. ಎರಡು ಜೀವಾವಧಿಯ ಕರಿನೀರು ಶಿಕ್ಷೆಯನ್ನು ಅನುಭವಿಸುತ್ತಲೇ ಅನೇಕ ಕಾವ್ಯವನ್ನು ಸೆರೆಮನೆಯಲ್ಲೇ ಹುಟ್ಟು ಹಾಕಿದ ಅಗಾಧ ತಾಳ್ಮೆಯ ರಾಜರ್ಷಿಯಾಗಿದ್ದರು ಅವರು.
ಇಂದಿನ ಪೀಳಿಗೆಗೇ ಅವರು ಪರಿಚಿತರಾಗಬಾರದೆಂದು ಅವರ ವಿಷಯವನ್ನು ತಿಳಿದುಕೊಳ್ಳದಂತೆ ಸ್ವಾತಂತ್ರ್ಯಾ ನಂತರದ ಸರ್ಕಾರ ಅವರನ್ನು ಇತಿಹಾಸದಿಂದ ಅಳಿಸಲು ಬಹಳಷ್ಟು ಪ್ರಯತ್ನಿಸಿತು. ಎಲ್ಲಿಯೂ ಅವರ ಹೆಸರಿನ ಪಠ್ಯವಿಲ್ಲ. ಅವರು ತಮ್ಮ ಜೀವವನ್ನು ದೇಶಕ್ಕಾಗಿ ತೇಯ್ದು ಭಾರತದ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆಗೆ ಕಾಂಗ್ರೆಸ್ ಸರಕಾರ ಸೂಕ್ತ ಗೌರವವನ್ನೇ ನೀಡಲಿಲ್ಲ. ಆದರೆ ಲಂಡನ್ನಿನ ಹಾಲ್ ಆಫ್ ಫೇಮ್ ನಲ್ಲಿ, ಇವತ್ತು ಅವರ ಕುರಿತಾದ ಇತಿಹಾಸ ವಿರಾಜಮಾನವಾಗಿದೆ….. ಅಂಡಮಾನಿಗೆ ಭೇಟಿಕೊಟ್ಟ ಪ್ರತಿಯೊಬ್ಬ ಪ್ರಜೆಯಲ್ಲೂ ಸಾವರ್ಕರರು ಕಿಡಿ ಹೊತ್ತಿಸುತ್ತಲೇ ಇರುತ್ತಾರೆ. ಅವರ ಭಾಷೆಯಲ್ಲೇ ಹೇಳುವುದಾದರೆ
“ನೀವು ಕೈಗೊಂಡ ಕಾರ್ಯ ಅರ್ಧಕ್ಕೆ ಉಳಿಯಿತು ಎಂಬ ನಿರಾಶೆ ಬೇಡ ! ಅದನ್ನು ಮುಂದುವರಿಸಲು ನಾವಿದ್ದೇವೆ; ಇದಕ್ಕೆ ಸಂದೇಹವಿಲ್ಲ!! ”
ಈ ಪ್ರಾತಃ ಸ್ಮರಣೀಯ ಚೇತನರಿಗೆ ನನ್ನ ಪ್ರಣಾಮಗಳು!