Infinite Thoughts

Thoughts beyond imagination

ಡಾ| ನಾರಾಯಣ ಹೊಸಮನೆಯವರಿಗೆ ಜನುಮ ದಿನದ ಶುಭಾಶಯಗಳು

ನಮ್ಮ ಉತ್ತರ ಕನ್ನಡ ಜಿಲ್ಲೆ ಹಲವು ಬೌದ್ಧಿಕ ಮತ್ತು ವಿದ್ವತ್ ಪೂರಕ ವ್ಯಕ್ತಿಗಳ ಮೂಲ ಆವಾಸ ಹಾಗು ಉಗಮ ಸ್ಥಳ. ನಮ್ಮಲ್ಲಿಯ ಪ್ರತಿಭಾವಂತರು ಪ್ರಪಂಚದ ಮೂಲೆ-ಮೂಲೆಗೂ ಪಸರಿಸಿ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಶ್ರೇಷ್ಠ ಪ್ರಾಬಲ್ಯ ಮೆರೆದಿದ್ದಾರೆ. ಸಾರಸ್ವತ ಲೋಕವಂತೂ ಬಹಳ ಸಮೃದ್ಧವಾಗಿ ಬೆಳೆದು ಈ ನೆಲದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಲೇ ಬಂದಿದೆ. ವೈಚಾರಿಕತೆ ಸಹ ಬಹಳ ಪ್ರಭುದ್ಧ, ಆರೋಗ್ಯಪೂರಕವಾಗಿ ಮತ್ತು ವೈವಿಧ್ಯತೆಯಿಂದ ಕೂಡಿದೆ. ಒಟ್ಟಿನಲ್ಲಿ ಜ್ಞಾನಾಧಾರಿತ ಸಮಾಜಕ್ಕೆ ಮಾದರಿ ನಮ್ಮ ಉತ್ತರ ಕನ್ನಡ ಜಿಲ್ಲೆಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಎನಿಸುತ್ತದೆ.

ನಮ್ಮ ಹಿರಿಮೆಗೆ ಮತ್ತೊಂದು ಕಿರೀಟಪ್ರಾಯವೆಂಬಂತೆ ನಮ್ಮ ಜಿಲ್ಲೆಯ ಗೋಕರ್ಣ ಮೂಲದ ಶ್ರೀ ಡಾ| ನಾರಾಯಣ ಹೊಸಮನೆ ಯವರನ್ನು, ಅಮೆರಿಕಾದ ಸುಪ್ರಸಿದ್ಧ ರಾಸಾಯನಿಕ ಕ್ಷೇತ್ರದ ಪತ್ರಿಕೆಯಾದ, Journal of Organometallic Chemistry, ಅತ್ಯಂತ "ಅಪರೂಪದ ವಿಜ್ಞಾನಿ" ಎಂದು ಗುರುತಿಸಿದೆ. ಪತ್ರಿಕೆಯು, ಡಾ| ನಾರಾಯಣ ಹೊಸಮನೆಯವರ ಗೌರವಾರ್ಥವಾಗಿ ತನ್ನ ಇತ್ತೀಚಿನ ಸಂಚಿಕೆಯನ್ನು ಅವರಿಗೆ ಸಮರ್ಪಿಸಿದೆ. ಕ್ಯಾನ್ಸರ್ ರೋಗದ ನಿವಾರಣಾ ಕ್ಷೇತ್ರದಲ್ಲಿ ಇವರು ಪರಿಚಯಿಸಿದ boron chemistry ಇಂದು ಬಹಳ ಉಪಯುಕ್ತತೆಯನ್ನು ಕಂಡಿದ್ದು, ಅದು ಹಲವು ಪರಿಹಾರಗಳತ್ತ ಮುಖಮಾಡಿದೆ. ವಿಶೇಷ ಸಂಶೋಧಕರಾಗಿ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣ ಹೊಸಮನೆಯವರು, ಈ ಕ್ಷೇತ್ರದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಸಂಶೋಧನಾ ಪ್ರಭಂದಗಳನ್ನು ಪ್ರಕಟಿಸಿದ್ದಾರೆ. ನಮ್ಮ ಬೌದ್ಧಿಕ ಸಂಪತ್ತಿನ ವಿಶೇಷ ಪ್ರತಿಭೆಯಾದ ಶ್ರೀಯುತರನ್ನು ಈ ಸಂದರ್ಭದಲ್ಲಿ ಹೃದಯಪೂರಕವಾಗಿ ಅಭಿನಂದಿಸುತ್ತೇನೆ. ಅವರ ಸಂಶೋಧನೆ ಇನ್ನಷ್ಟು ಹೆಚ್ಚಿನ ಸಾರ್ಥಕ್ಯ ಪಡೆದು ಲೋಕ-ಕಲ್ಯಾಣಕ್ಕೆ ಸಾಕ್ಷಿಯಾಗಲಿ ಎಂದು ಮನದಾಳದಿಂದ ಹಾರೈಸುತ್ತಿದ್ದೇನೆ.

ಇಂದು ಅವರು ಹುಟ್ಟಿದ ದಿನ; ೭೦ರ ಪ್ರಾಯ ದಾಟಿದೆ! ಅವರಿಗೆ ಸರ್ವಶಕ್ತನಾದ ಆ ಗೋಕರ್ಣದ ಮಹಾಬಲೇಶ್ವರನು ಸರ್ವ ರೀತಿಯಲ್ಲೂ ಅರೋಗ್ಯ, ಸುಖ, ಶಾಂತಿ ನೆಮ್ಮದಿಯನ್ನು ನೀಡಲೆಂದು ಕೇಳಿಕೊಳ್ಳುತ್ತೇನೆ. ಈ ದಿನ, ನಮ್ಮ ದೇಶ… ನಮ್ಮ ಜಿಲ್ಲೆ…. ನಮ್ಮ ಜನ, ಒಟ್ಟಾಗಿ ಡಾ| ನಾರಾಯಣ ಹೊಸಮನೆಯವರನ್ನು ಬಹಳ ಹೆಮ್ಮೆಯಿಂದ ನಮ್ಮವರೆಂದು ಸಂಭ್ರಮಿಸುತ್ತಿದ್ದೇವೆ. ಇದಕ್ಕೆ ಸಾಕ್ಷಿಎಂಬಂತೆ ಗೋಕರ್ಣದ ಮತ್ತೊಬ್ಬ ಪ್ರತಿಭಾನ್ವಿತ ಗೆಳಯ ರವಿ ಗುನಗ ಬಹಳ ಸಂತೋಷದಿಂದ ಚಿತ್ರಿಸಿದ ಅವರ ತೈಲ ಚಿತ್ರ, ಇಂದು ನನ್ನ ಗೋಡೆಯನ್ನು ಅಲಂಕರಿಸಿದೆ. ಅವರ ಕೀರ್ತಿ ಅನಂತವಾಗಲಿ!

Related posts