Infinite Thoughts

Thoughts beyond imagination

ಒಕ್ಕಲಿಗರು ಅನ್ನದಾತರು!

ಸಾಕ್ಷಾತ್ ಅನ್ನಪೂರ್ಣೇಶ್ವರಿಯನ್ನು ಹೇಗೆ ಸ್ಮರಿಸಿಕೊಳ್ಳುತ್ತೇವೋ, ಹಾಗೆಯೆ ಒಕ್ಕಲಿಗ ಸಮುದಾಯವನ್ನು ನಾವು  ಪೂಜ್ಯ ಭಾವನೆಯಲ್ಲಿ ನಮ್ಮೆಲ್ಲರ ಅನ್ನದಾತರೆಂದೇ ನೋಡುತ್ತೇವೆ.  ಈ ನೇಗಿಲಯೋಗಿಗಳು ನಮ್ಮ ಹಿಂದೂ ಸಮಾಜದ ಒಂದು ಜೀವಾತ್ಮಕ ಕೊಂಡಿ.  ಮಣ್ಣಿನ ನಂಟು ಆ ಸಮುದಾಯದವರಿಗೆ ಸ್ವಾಭಾವಿಕವಾಗಿ ಬಂದ ಬಳುವಳಿ.  ಅವರ ಕರ್ಮಣ್ಯದ ಫಲವೇ ಸಮಾಜದ ವಿವಿಧ ಸಮುದಾಯಗಳ ಸಮನ್ವಯತೆ, ಸಹಕಾರ ಮತ್ತು ಒಟ್ಟು ಸಮಾಜದ ಏಕತೆಯ ಸಂಕೇತ.  ಇಂತಹ ಒಕ್ಕಲಿಗರನ್ನು ಒಂದು ಜಾತಿಯೆಂದು ಸೀಮಿತಗೊಳಿಸಿ ಸಂಕುಚಿತ ಭಾವನೆಯಿಂದ ನೋಡುವುದೇ ಅಕ್ಷಮ್ಯ!  ಈ ಮಣ್ಣಿನ ಮಕ್ಕಳ್ಳಿಲ್ಲದೆ ನಮ್ಮ ಸಮಾಜ ಪರಿಪೂರ್ಣಗೊಳ್ಳುವುದಾದರೂ ಹೇಗೆ!
 
ಇಂದು ನಾವು ಬೆಂಗಳೂರಿನ ಪುರ-ಸಂಸ್ಥಾಪಕ ಮಾಗಡಿ ಕೆಂಪೇಗೌಡರನ್ನು ಗೌರವಿಸುವುದು ಅಂದು ಅವರು ಪಾಲಿಸಿಕೊಂಡು ಬಂದ ರಾಜಧರ್ಮದಿಂದಾಗಿಯೇ ಹೊರತು ಅವರ ಜಾತಿಯಿಂದಾಗಿಯಲ್ಲ.  ಅವರ ನಡತೆ, ಆಡಳಿತ ದಕ್ಷತೆ ಮತ್ತು ಅವರ ದೂರಗಾಮಿ ಯೋಚನೆಯಿಂದ ಅಂದಿನ ಬೆಂಗಳೂರನ್ನು ಸ್ಥಾಪಪಿಸಿದ್ದರು.  ಇಂದು ನಾವು ಅವರೇ ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನೆಡೆದಿದ್ದರೆ ಬೆಂಗಳೂರನ್ನು ಇನ್ನಷ್ಷ್ಟು ಸುಂದರಗೊಳಿಸಬಹುದಿತ್ತು.
 
ಹಾಗೆಯೇ ಅಂದು ನಾವು ಸನ್ಮಾನ್ಯ ದೇವೇಗೌಡರನ್ನು ನಮ್ಮೆಲ್ಲರ ಪ್ರಧಾನಿಯೆಂದೇ ಸ್ವೀಕರಿಸಿದ್ದೆವು.  ಸಿದ್ಧರಾಮಯ್ಯನವರನ್ನು ಕುರುಬ ಮುಖ್ಯಮಂತ್ರಿಯೆಂದು, ಕೃಷ್ಣರವರನ್ನು ಒಕ್ಕಲಿಗ ಮುಖ್ಯಮಂತ್ರಿಯೆಂದು, ಯಡಿಯೂರಪ್ಪನವರನ್ನು ವೀರಶೈವ ಮುಖ್ಯಮಂತ್ರಿಯೆಂದು ಪರಿಗಣಿಸಲೇ ಇಲ್ಲ.  ಅವರೆಲ್ಲರನ್ನು ನಾವು ಈ ರಾಜ್ಯದ ಸಮಸ್ತ ಜನತೆಯ ಮುಖ್ಯಮಂತ್ರಿಯೆಂದೇ ಕಂಡೆವು.  ಆದರೆ ಇಂದು ನಮ್ಮ ಸನ್ಮಾನ್ಯ ಕುಮಾರಸ್ವಾಮಿಯವರು ಅವರೇ ಹೇಳಿದ ಹಾಗೆ ಅವರೊಂದು ಸಾಂದರ್ಭಿಕ ಶಿಶು!  ಸೂಕ್ತವಾದ ಮತದಾರರ ಆದೇಶವಿಲ್ಲವೆಂದ ಕೂಡಲೇ ಜಾತಿ ಆಧಾರಿತ ಕೀಳು ಮಟ್ಟದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದು ಮಾತ್ರ ತೀವ್ರ ಶೋಚನೀಯ.
 
ಆದರೆ ಇಂದಿನ ಕೀಳುಮಟ್ಟದ ರಾಜಕಾರಣ ಹೇಗಿದೆ ಎಂದರೆ, ಸಿದ್ದರಾಮಯ್ಯನವರನ್ನು ತಮ್ಮ ಉಡಾಫೆ ವರ್ತನೆಗೆ ಟೀಕಿಸಿದಕ್ಕೆ, ಕುರುಬ ಭಾಂದವರನ್ನು ಎತ್ತಿ ಕಟ್ಟುವ ಹೀನ ಕಾರ್ಯ ನಡೆದ್ದದ್ದನ್ನು ನಾವೆಲ್ಲಾ ನೋಡಿದೆವು.  ಅದು ಮುಂದುವರಿದು ಈಗ ಕುಮಾರಸ್ವಾಮಿಯವರ ಬಾಲಿಶ ವರ್ತನೆಯನ್ನು ಖಂಡಿಸಿದರೆ, ಒಕ್ಕಲಿಗ ಭಾಂದವರನ್ನು ಟೀಕಿಸಿದೆ ಎಂದು ಬಾಯಿ ಬಡಿದುಕೊಳ್ಳುವ ದರಿದ್ರ ಮಾನಸಿಕ ರೋಗಿಗಳಿಗೆ ನನ್ನ ಸಣ್ಣ ಕನಿಕರವಲ್ಲದೇ ಮತ್ತೇನನ್ನು ವ್ಯಕ್ತಪಡಿಸಲು ಸಾಧ್ಯ?!
 
ಜಾತಿ ರಾಜಕಾರಣ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಹೊಲಸಾಗಿದ್ದು ಅತ್ಯಂತ ರೇಜಿಗೆ ಹುಟ್ಟಿಸುತ್ತಿದೆ.  ಜಾತಿ ಕೇಂದ್ರಿತ ರಾಜಕೀಯ ಮಾಡುವ ಸಂಕುಚಿತ ಮನಸ್ಸುಗಳ ಬಗ್ಗೆ ಜನರು ಇಂದು ಹೆಚ್ಚು ಎಚ್ಚರದಿಂದ ಇರಬೇಕಾದ ತುರ್ತು ಅಗತ್ಯವಿದೆ.  ಮತ್ತು ಇಂತಹ ಕ್ಷುದ್ರ ಮನಸ್ಸುಗಳನ್ನು ಪೋಷಿಸಿಕೊಂಡು ಬರುತ್ತಿರುವ ಹೀನ ರಾಜಕಾರಣಿಗಳಿಗೆ ದೊಡ್ಡ ಧಿಕ್ಕಾರ ಕೂಗಲೇಬೇಕಾಗಿದೆ.
 
ಪ್ರಜಾಪ್ರಭುತ್ವದಲ್ಲಿ ಹಾಗು ಸಾರ್ವಜನಿಕ ಜೀವನದಲ್ಲಿರುವವರಿಗೆ ಟೀಕೆ-ಟಿಪ್ಪಣಿಯನ್ನು ಸಹಿಸಿಕೊಂಡು ಜನಸೇವೆ ಮಾಡಬೇಕಾದ ಅಗತ್ಯವಿದೆ.  ಸಮಾಜ, ಸಮುದಾಯಗಳ ನಡುವೆಯೇ  ವೈರತ್ವ ಮೂಡಿಸಿ ಅಧಿಕಾರ ಹಿಡಿಯಬೇಕಾದ ನೀಚತನ ಕೇವಲ ಸಾಂದರ್ಭಿಕ ಶಿಶುಗಳಿಗೆ ಮಾತ್ರ ಸಾಧ್ಯ.
 
ನಾವೆಂದೂ ಯಾವುದೇ ಜಾತಿ ಮೇಲು ಅಥವಾ ಇನ್ಯಾವುದೋ ಕೀಳು ಎಂದು ಪರಿಗಣಿಸಿದವರೇ ಅಲ್ಲ…. ಎಲ್ಲವೂ ಒಟ್ಟು ಸೇರಿದರೆ ಮಾತ್ರ ಹಿಂದೂ ಸಮಾಜ ಪರಿಪೂರ್ಣ ಮತ್ತು ಸುಭದ್ರ ಎಂದು ನಂಬಿಕೆ ಇಟ್ಟವರು ನಾವು.  ಜಾತಿಗಳು ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ನಮ್ಮತನವನ್ನು ಭ್ರಷ್ಟಗೊಳಿಸಿದ್ದಲ್ಲಿ, ಅದನ್ನು ಭವಿಷ್ಯದಲ್ಲಿ ಸರಿದೂಗಿಸಿಕೊಂಡು ಹೋಗುವ ಮುತ್ಸದಿ ಹಾಗು ದಾರ್ಶನಿಕ ನಾಯಕತ್ವ ಇಂದಿನ ಅನಿವಾರ್ಯವಾಗಿದೆ!  ಆದರೆ ಸಿಕ್ಕಿರುವುದು ಸಾಂದರ್ಭಿಕ ಶಿಶುಗಳ ನಾಯಕತ್ವ!!!

Related posts