Infinite Thoughts

Thoughts beyond imagination

ನಾವೆಲ್ಲರೂ ಬಲಿದಾನ ಗೈದ ಸೈನಿಕರನ್ನು ನೆನೆಯುವುದರ ಸಂಗಡ ಈಗಿರುವ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಸಂಕಲ್ಪ ಮಾಡಬೇಕು.

ಕಲ್ಲು ಹೊಡೆಯುವುದು ಧಾರ್ಮಿಕ ಕರ್ತವ್ಯವಾದ ಮತಧರ್ಮವೊಂದಿದೆ. ಅಂತೆಯೇ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡುವ ಮತಧರ್ಮವೊಂದಿದೆ! ಅಕ್ಷಮ್ಯ ಅಪರಾಧವೆಸಗಿದವರಿಗೂ ಗಲ್ಲು ಶಿಕ್ಷೆ ನೀಡಬಾರದು ಎನ್ನುವ ಮಾನವತಾವಾದಿಗಳು ಕಲ್ಲು ಹೊಡೆದು ಕೊಲ್ಲುವ ಧಾರ್ಮಿಕತೆಯ ವಿರುದ್ಧ ಮಾತಾಡಿದ್ದನ್ನು ನಾನು ಕೇಳಿಲ್ಲ! ಈಗಲೂ ಈ ಜಗತ್ತಿನಲ್ಲಿ ಇಂತಹದೊಂದು ಕಾಡಿನ ನ್ಯಾಯದ ಬೆಂಬಲಿಗರಿದ್ದಾರೆ. ಮನುಷ್ಯ ರೂಪಿ ಪ್ರಾಣಿಯ ಕೈಗೆ ಸಿಕ್ಕ ಮೊದಲ ಆಯುಧ ಕಲ್ಲೇ ಅಲ್ಲವೆ. ಈಗಲೂ ಅದೇ ಆಯುಧವನ್ನು ಬಳಸುವ ಆಧುನಿಕರೂ ಇದ್ದಾರೆ. ಅದನ್ನು ಬೆಂಬಲಿಸುವ ಸಂಸದರೂ, ಸಾಮಾಜಿಕ ನಾಯಕರೂ ಇದ್ದಾರೆ. ಇವತ್ತಿಗೂ ಭಯೋತ್ಪಾದನೆಯ ಮೂಲ ರೂಪ ಹಾಗೆಯೇ ಇದೆ. ಅದನ್ನು ಧರ್ಮ ಎನ್ನುವವರು, ಧರ್ಮ ಯುದ್ಧ(ಜಿಹಾದ್) ಎನ್ನುವವರು ಇದ್ದಾರೆ. ಇದು ಮತ್ತೆ ಮತ್ತೆ ಯಾಕೆ ನೆನಪಾಗುತ್ತದೆಂದರೆ ಕಾರ್ಗಿಲ್ ವಿಜಯದ ವೀರ ಇತಿಹಾಸದೊಡನೆ ಕಲ್ಲೊಗೆಯುವ ಕಾಶ್ಮೀರದ ವರ್ತಮಾನವೂ ಇದೆಯಲ್ಲ!

ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಹಿಂದೆ ಪಾಕಿಸ್ತಾನದ ಬೆಂಬಲವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲಿರುವ ಭಯೋತ್ಪಾದನಾ ಪಡೆಯ ನಾಯಕರು ದಿನ ಬೆಳಗಾದರೆ ಭಾರತದ ವಿರುದ್ಧ ದ್ವೇಷ ಕಾರುವುದನ್ನು ನೋಡಿದರೆ ನಮ್ಮೆಲ್ಲರ ರಕ್ತ ಕುದಿಯುತ್ತದೆ. ಪಾಕಿಸ್ತಾನದ ಸೈನಿಕರು ಕದ್ದು ಮುಚ್ಚಿ ನುಸುಳಿ ಬಂದು ನಮ್ಮ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದರು. ಆದ್ದರಿಂದ ಕಾರ್ಗಿಲ್ ಯುದ್ಧವಾಯಿತು. ೫೩೦ ಸೈನಿಕರು ದೇಶಕ್ಕಾಗಿ ಪ್ರಾಣ ತೆತ್ತರು. ಅವರೆಲ್ಲರನ್ನು ನೆನೆದಾಗ ಶೌರ್ಯ ಉಕ್ಕೇರುತ್ತದೆ. ವೈರಿಗಳ ಸಮೂಲ ನಾಶ ಮಾಡಿದಲ್ಲದೆ ಯಶಸ್ಸು ಪೂರ್ಣವಾಗುವುದಿಲ್ಲ ಎಂಬ ಚಾಣಕ್ಯನ ಮಾತು ನೆನಪಾಗುತ್ತದೆ. ನೇರ ಯುದ್ಧ ಮಾಡಲಾಗದ ಹೇಡಿಗಳು ಪ್ರಚ್ಛನ್ನ ಯುದ್ಧ(ಪ್ರೊಕ್ಸಿ ವಾರ್) ಮಾಡುತ್ತಿದ್ದಾರೆ. ಯುದ್ದದಲ್ಲಿ ಪ್ರಾಣ ತೆತ್ತ ಸೈನಿಕರಿಗಿಂತ ಪಾಕಿಸ್ತಾನದ ಗಡಿಯಲ್ಲಿ ಪ್ರಚ್ಛನ್ನ ಯುದ್ಧದಲ್ಲಿ ಅಸು ನೀಗಿದ ಸೈನಿಕರ ಸಂಖ್ಯೆ ದೊಡ್ಡದು!

ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಲೆಫ್ಟಿನಂಟ್ ಮನೋಜಕುಮಾರ ಪಾಂಡೆಗೆ ೨೪ರ ಹರೆಯ. ತನ್ನ ಪಡೆಯನ್ನು ಮುನ್ನಡೆಸಿದ ಅವರ ಸಾಹಸಕ್ಕೆ ಪರಮ ವೀರ ಚಕ್ರದ ಪದವಿ ನೀಡಿ ಗೌರವಿಸಲಾಯಿತು. ಅವರಂತೆಯೆ ಸಾಹಸವನ್ನು ಮೆರೆದ ಕ್ಯಾ. ವಿಕ್ರಂ ಬಾತ್ರಾ, ಕ್ಯಾ. ಅನುಜ ನಯ್ಯರ್, ಮೇಜರ್ ಮರಿಯಪ್ಪನ್ ಸರವಣನ್ ಎಲ್ಲರೂ ನೆನಪಾಗುತ್ತಾರೆ. ಎಲ್ಲ ೫೩೦ ಸೈನಿಕರದೂ ಬಲಿದಾನವೇ ಹೌದು. ನಾವು ಯುದ್ಧವನ್ನು ಗೆಲ್ಲ ಬಲ್ಲೆವು ಆದರೆ ಕಲ್ಲೊಗೆಯುವವರನ್ನು ಗೆಲ್ಲುವುದು ಹೇಗೆ ಎಂಬುದು ಪ್ರಶ್ನೆ! ಸರ್ಜಿಕಲ್ ಸ್ಟ್ರೈಕ್ ಮಾಡಿದರೆ ಅದನ್ನೂ ಸುಳ್ಳೆಂದು ಹೇಳುವ ಜನನಾಯಕರು ನಮ್ಮಲ್ಲಿದ್ದಾರೆ. ಕಲ್ಲೊಗೆಯುವವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಣ್ಣಿಸುವ ಪತ್ರಕರ್ತರಿದ್ದಾರೆ. ಭಯೋತ್ಪಾದನೆಗೆ ನೆರವು ನೀಡುವ ಎಲ್ಲರನ್ನೂ ಮುಗ್ಧರೆಂದೇ ಪರಿಗಣಿಸುವ ಮಾನವತಾವಾದಿಗಳಿದ್ದಾರೆ. ಇವರೆಲ್ಲರೂ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಬದಲು ಸೈನಿಕರೇ ಭಯೋತ್ಪಾದಕರು ಎನ್ನುವಂತೆ ಚಿತ್ರಿಸುತ್ತಾರೆ. ಈ ರೀತಿಯ ವಿತಂಡ ವಕ್ರತೆಯನ್ನು ಅಭಿಪ್ರಾಯ ಸ್ವಾತಂತ್ರ್ಯದ ಹೊದಿಕೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ! ಇಷ್ಟು ವರ್ಷ ನಮ್ಮ ಮಕ್ಕಳ ಪಠ್ಯಪುಸ್ತಕಗಳನ್ನು ಬರೆದವರು ಇಂತಹ ಎಡಬಿಡಂಗಿಗಳೇ. ಆದರೂ ನಮ್ಮ ಮಕ್ಕಳ ಮೈಯಲ್ಲಿ ದೇಶ ಭಕ್ತಿಯ ರಕ್ತ ಹರಿಯುತ್ತಿರುವುದು ಆಶ್ಚರ್ಯವಾದರೂ ಸತ್ಯ. ಮತ್ತು ದೇಶಭಕ್ತಿಯ ರಕ್ತವೇ ನಮ್ಮನ್ನು ಉಳಿಸುವ ಭರವಸೆಯಾಗಿದೆ.

ಕಾಶ್ಮೀರ ಭಾರತಾಂಬೆಯ ಕಿರೀಟ. ಅದನ್ನು ತಲೆನೋವಿನ ಸಮಸ್ಯೆಯಾಗಿ ಮಾಡಿಟ್ಟವರು ನಮ್ಮನ್ನಾಳಿದವರೆ! ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದ ನಾಯಕರು ದೇಶ ವಿಭಜನೆಗೂ ಒಪ್ಪಿದರು. ಸರದಾರ ಪಟೇಲರು ಒಗ್ಗೂಡಿಸಿದ ಭಾರತಕ್ಕೆ ಕೀರೀಟದಲ್ಲಿ ಹಾವನ್ನು ಬಿಟ್ಟರು. ಅವರ ವಂಶಾಡಳಿತದಲ್ಲಿ ಕಾಶ್ಮೀರ ಸಮಸ್ಯೆಯನ್ನು ಸಾಕಿಕೊಂಡು ಬಂದರು. ಇಂದಿಗೂ ನಮ್ಮ ಕಾಶ್ಮೀರದ ಒಂದಷ್ಟು ಭಾಗ ಪಾಕ್ ಆಕ್ರಮಿತವಾಗಿದೆ. ಅದನ್ನು ನಮ್ಮದಾಗಿಸಿಕೊಳ್ಳುವ ಅವಕಾಶಗಳು ಬಂದಾಗಲೂ ಅಧಿಕಾರದಲ್ಲಿದ್ದವರು ಸೇನೆಯ ವಿಜಯವನ್ನು ಅಪಮೌಲ್ಯಗೊಳಿಸಿದರು. ಸಮಸ್ಯೆಯನ್ನು ಬೆಳೆಸಿದರು.

ಕಾರ್ಗಿಲ್ ವಿಜಯದ ನೆನಪನ್ನು ತರುವ ಈ ದಿನ ನಾವೆಲ್ಲರೂ ಬಲಿದಾನ ಗೈದ ಸೈನಿಕರನ್ನು ನೆನೆಯುವುದರ ಸಂಗಡ ಈಗಿರುವ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಸಂಕಲ್ಪ ಮಾಡಬೇಕು. ಕಾಶ್ಮೀರದಲ್ಲಿ ಸೈನಿಕರ ಮೇಲೆ, ಪ್ರವಾಸಿಗಳ ಮೇಲೆ ಬೀಳುವ ಪ್ರತಿ ಕಲ್ಲಿಗೂ ಪ್ರತ್ಯುತ್ತರ ಕೊಡುವ ಬದ್ಧತೆ ನಮ್ಮದಾಗಬೇಕು. ದೇಶ ವಿರೋಧಿ ಚಟುವಟಿಕೆಗಳ ಎಲ್ಲ ಎಡವಟ್ಟುಗಳನ್ನೂ ಮೆಟ್ಟಿ ನಿಲ್ಲುವ ಛಲ ನಮ್ಮದು. ಹೊರಗಿನ ಅಪಾಯವನ್ನೂ ಒಳಗಿನ ಆತಂಕಗಳನ್ನೂ ಬಗೆಹರಿಸುವ ಸಾಮರ್ಥ್ಯ ನಮಗಿದೆ. ನಮ್ಮ ವಿಜಯ ಸೀಮೋಲ್ಲಂಘನೆಯಲ್ಲಿಯೇ ಪೂರ್ಣಗೊಳ್ಳುವುದು.

Image Courtesy: Google

Related posts