Infinite Thoughts

Thoughts beyond imagination

ರಾಜ ನೀತಿಜ್ಞನ ನೀರವ ನಿರ್ಗಮನ

ಯಾರ ಮಾತನ್ನು ಆಲಿಸಲು ಇಡೀ ದೇಶ ಕಿವಿದೆರೆದು ಕಾಯುತ್ತಿತ್ತೋ, ಆ ಮಾತುಗಾರ ಮೌನ ಧರಿಸಿ ವರ್ಷಗಳೇ ಕಳೆದಿದ್ದವು. ಈಗಲೂ ಅವರ ಮಾತುಗಳು ನಮ್ಮ ಕಿವಿಯಲ್ಲಿವೆ ಆದರೆ ಮಾತುಗಾರನನ್ನು ಕಳೆದು ಕೊಂಡಿದ್ದೇವೆ. ಭಾಷೆಯೊಡನೆ ಆಟವಾಡುತ್ತ ಭಾವದೊಂದಿಗೆ ಸ್ಪಂದಿಸುತ್ತಿದ್ದ ನಮ್ಮೆಲರ ಪ್ರೀತಿಯ ಅಟಲ್ ಜೀ, ಮಾನನೀಯ ಶ್ರೀ ಅಟಲ್ ಬಿಹಾರಿ ವಾಜಪೇಯೀ ಈ ಜಗತ್ತಿನಿಂದ ನಿರ್ಗಮಿಸಿದ್ದಾರೆ. ಅವರ ನೇತ್ರತ್ವದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಿದ್ದ ನನಗೀಗ ನನ್ನ ಪ್ರೇರಣೆಯ ಸ್ರೋತವೇ ಬತ್ತಿದ ಅನುಭವವಾಗುತ್ತಿದೆ. ಭಾರತ ಮಾತೆ ಶ್ರೇಷ್ಠ ಪುತ್ರನೊಬ್ಬನನ್ನು ತನ್ನ ಮಣ್ಣ-ಮಡಿಲೊಳಗೆ ಕರೆದುಕೊಂಡಿದ್ದಾಳೆ.

ಈ ದೇಶದ ಮಣ್ಣು ಶ್ರೀ ಗಂಧ, ಪ್ರತಿ ಗ್ರಾಮವು ತಪೋ ಭೂಮಿ, ಹೆಣ್ಣು ಮಕ್ಕಳೆಲ್ಲ ದೇವಿಯ ಪ್ರತಿರೂಪ, ಪುರುಷರೆಲ್ಲ ಶ್ರೀ ರಾಮನಂತೆ ಎಂದು ಹಾಡಿದ್ದ ಕವಿಹೃದಯದ ದೇಶ ಪ್ರೇಮ ಅದೆಷ್ಟು ಉನ್ನತವಾದದ್ದು, ಉಜ್ವಲವಾದದ್ದು! ನನ್ನ ಜನರನ್ನು ಮುಟ್ಟಲಾಗದ ಎತ್ತರಕ್ಕೆ ನನ್ನನು ಎತ್ತರಿಸಬೇಡ, ನನ್ನ ದೇಶ ಬಾಂಧವರ ಮಾತು ಕೇಳಲಾಗದಷ್ಟು ದೂರಕ್ಕೆ ನನ್ನನ್ನು ನಿಲ್ಲಿಸಬೇಡ ಎಂದು ದೇವರಲ್ಲಿ ಮೊರೆಯಿಟ್ಟ ನೇತಾರನ ವಿನಯ ಅಪೂರ್ವವಾದದ್ದು!

ಗೌರವರ್ಣದ ಅಜಾನುಬಾಹು,
ಮುಗ್ಧ ನಗೆಯ ತುಂಬು ಮುಖ,
ಅಗಲವಾದ ಹಣೆಗೆ ಅಲಂಕರಿಸಿದಂತೆ ಒತ್ತಾದ ಕೇಶ ರಾಶಿ,
ಕಣ್ಣು ಹುಬ್ಬು, ಕುತ್ತಿಗೆ ಭುಜ ಹಸ್ತಗಳೆಲ್ಲ ಮಾತಾಡುತ್ತಿವೆ ಎನ್ನುವ ಭಾವದ ಓಘಕ್ಕೆ ಒತ್ತು ಕೊಡುವ ಸುಂದರವಾದ ಅಂಗ ಭಾಷೆ,
ಮಾತಿನ ಮೆರವಣಿಗೆಯ ಮಧ್ಯೆ ಮೌನದ ಕುತೂಹಲ,
ಶಬ್ದ-ಶಭ್ದಗಳ ಜೋಡಣೆಯಲ್ಲಿ ಕಾವ್ಯದ ಕಾಂತಿ,
ವಿಷಯದ ಗಾಂಭೀರ್ಯಕ್ಕೆ ಭಂಗಬಾರದಂತೆ ತಿಳಿ ಹಾಸ್ಯದ ಸ್ಪರ್ಶ,
ಜನರ ಹೃದಯವನ್ನೇ ಗೆಲ್ಲಬಲ್ಲ ಸಂವೇದನಶೀಲ ಯೋಧ,
ಪ್ರತಿ ಮಾತೂ ಬುದ್ಧಿ ಭಾವಗಳ ವಿದ್ಯಾದಾಲಿಂಗನದಂತೆ ಹೊಸ ಹೊಳಹಿನ ಬೋಧ.

ಅಟಲಜೀ ಭಾರತೀಯ ರಾಜಕಾರಣ ಆಗಸದ ಹುಣ್ಣಿಮೆಯ ಚಂದ್ರ!

ಕವಿಗೂ ರಾಜಕಾರಣಿಗೂ ಏನು ವ್ಯತ್ಯಾಸ? ಎಂದು ಪತ್ರಕರ್ತನೊಬ್ಬ ಪ್ರಧಾನಿ ಅಟಲ್ ಜಿಗೆ ಪ್ರಶ್ನೆ ಕೇಳಿದ್ದ. ಅದಕ್ಕವರ ಉತ್ತರ “ಕವಿ ಪ್ರತಿಭಟಿಸುತ್ತಾನೆ; ರಾಜಕಾರಣಿ ರಾಜಿ ಮಾಡಿಕೊಳ್ಳುತ್ತಾನೆ” ಎಂಬುದು. ಇಪ್ಪತ್ತನಾಲ್ಕು ಪಕ್ಷಗಳ ಒಕ್ಕೂಟದ ನೇತಾರರಾಗಿದ್ದ ಅವರು, ಎಷ್ಟು ರಾಜಿ ಮಾಡಿ ಕೊಂಡಿರಬಹುದು ಎನ್ನುವುದು ನಮ್ಮ ನಿರೀಕ್ಷೆಗಳಿಗೆ ನಿಲುಕುವುದಿಲ್ಲ. ವ್ಯವಹಾರದ ವೈಖರಿಯಲ್ಲಿ ಮಾತ್ರ ಬದಲಾವಣೆಯಿತ್ತು, ನಂಬಿದ ಮೌಲ್ಯಗಳ ವಿಷಯದಲ್ಲಿ ರಾಜಿ ಮಾಡಿ ಕೊಂಡವರಲ್ಲ. ಅಟಲ್ ಜೀ ರಾಷ್ತ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು, ಜನಸಂಘದ ಸ್ಥಾಪಕರಲೊಬ್ಬರಾದ ರಾಜನೀತಿಜ್ಞರು. ಅವರು ಹಲವು ಪಕ್ಷಗಳ ಒಕ್ಕೂಟದ ನಾಯಕರಾದಾಗ ಎಷ್ಟು ರಾಜಿ ಮಾಡಿಕೊಂಡಿರಿ ಎನ್ನುವ ಪ್ರಶ್ನೆಯನ್ನು ಎದುರಿಸಿದರು. ಆಗ ಅವರು ಹೇಳಿದ್ದು “ಮೈ ಅಟಲ್ ಹ್ಞೂ, ಬಿಹಾರಿ ಭೀ ಹ್ಞೂ” (ಮೌಲ್ಯಗಳ ವಿಚಾರದಲ್ಲಿ ನಾನು ಅಚಲನಾಗಿದ್ದೇನೆ; ಹೋರಾಟದಲ್ಲಿ ಒರಟನು (ಬಿಹಾರಿ) ಇದ್ದೇನೆ” ಇಂತಹ ಶಾಂತ ಗಂಭೀರ ವ್ಯಕ್ತಿತ್ವ.

ಭಾಷೆಯ ಬಂಧದಲ್ಲಿ ಭಾವದ ಔದಾರ್ಯದಲ್ಲಿ, ಜಗತ್ತನ್ನೇ ಗೆದ್ದರು ಚುನಾವಣೆಯ ಜೂಜಿನಲ್ಲಿ ಸೋಲನ್ನು ಕಂಡವರವರು. ೧೯೮೪ರಲ್ಲಿ ಇಂದಿರಾ ಗಾಂಧಿಯವರ ಕಗ್ಗೊಲೆಯ ನಂತರ ನಡೆದ ಚುನಾವಣೆಯಲ್ಲಿ ಅಟಲ್ ಜೀಯವರು ಸೋತಿದ್ದರು. ಬಿಜೆಪಿಗೆ ಲೋಕಸಭೆಯಲ್ಲಿ ಸಿಕ್ಕಿದ್ದು ಕೇವಲ ೨ ಸ್ಥಾನ. ಕಾರ್ಯಕರ್ತರೆಲ್ಲ ನಿರಾಶೆಗೆ ಜಾರಿ ಕೈಸೋತು ಕುಳಿತಾಗ, ಅಟಲ್ ಜೀ ಹೇಳಿದ ಮಾತು “ನ ಧೈನ್ಯ೦; ನ್ ಪಲಯಾನಂ” – ನಾವು ಮಾಡುವ ಕಾರ್ಯದಲ್ಲಿ ನಮಗೆ ಧೈನ್ಯವಿಲ್ಲ, ಸೋಲಿಗೆ ಹೆದರಿ ಓಡಿಹೋಗುವುದಿಲ್ಲ..!

೧೯೯೬ರಲ್ಲಿ ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷದ ನಾಯಕರಾಗಿ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಬೇರೆ ಪಕ್ಷಗಳು ಬೆಂಬಲ ಕೊಡಲು ನಿರಾಕರಿಸಿದಾಗ ರಾಜೀನಾಮೆ ನೀಡಿ ಗೌರವಯುತವಾಗಿ ಹೊರ ಬಂದರು. ವಿಶ್ವಾಸ ಗೊತ್ತುವಳಿಯ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕೆಲವರು, “ಸಂಖ್ಯಾ ಬಲವಿಲ್ಲದೆ, ಸರ್ಕಾರ ರಚಿಸುವ ಆಸೆ ನಿಮ್ಮದು” ಎಂದು ಕುಹುಕವಾಡಿದರು. ಆಗ ಅಟಲ್ ಜೀಯವರು ಹೇಳಿದ ಮಾತು ಈಗ ನಿಜವಾಗಿದೆ. ಅವರಾಗ ಹೇಳಿದ್ದರು “ಇಂದು ನೀವು ಕುಹುಕವಾಡುತ್ತಿದ್ದೀರಿ, ನೆನಪಿಡಿ ನಮ್ಮ ಪಕ್ಷ ಮುಂದೊಂದು ದಿನ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ”.

೧೯೯೯ರಲ್ಲಿ ಒಂದು ಮತದ ಅಂತರದಿಂದ ಅವಿಶ್ವಾಸ ಗೊತ್ತುವಳಿಯಲ್ಲಿ ಅಟಲ್ ಜೀ ಸರ್ಕಾರ ಸೋತಿತು. ಆ ಚರ್ಚೆಯಲ್ಲಿ ಅವರು ಹೇಳಿದರು “ಮಾರುಕಟ್ಟೆಯಲ್ಲಿ ಮಾರಿಕೊಳ್ಳುವವರು ಇದ್ದಾರೆ; ಆದರೆ ನಾನು ಕೊಳ್ಳಲು ಸಿದ್ಧನಿಲ್ಲ”. ಸಂಸದರನ್ನು ಖರೀದಿಸಿ ಸರ್ಕಾರ ನಡೆಸುವ ಅವಕಾಶ ನನ್ನೆದೆರುಗಿದೆ, ಆದರೆ ನಾನು ಅದಕ್ಕೆ ಸಿದ್ಧನಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ವ್ಯವಹಾರದಲ್ಲಿ ಹೊಂದಿಕೊಳ್ಳಬಹುದು, ಮೌಲ್ಯದಲಲ್ಲ ಎನ್ನುವುದನ್ನು ಮತ್ತೆ ಮತ್ತೆ ತೋರಿಸಿದ್ದಾರೆ.

ಅರ್ಧ ಶತಮಾನಗಳ ಕಾಲ ಭಾರತೀಯ ರಾಜಕಾರಣದ ಕ್ಷೇತ್ರದ ವಿಚಕ್ಷಣ ತಾರೆಯಾಗಿ ಮೆರೆದ ಅಟಲ್ ಬಿಹಾರಿ ವಾಜಪೇಯೀಯವರು ಈಗ ನಮ್ಮ ನೆನಪು. ಅವರು ಕನಸ್ಸಿನ ಸುವರ್ಣ ಚತುಷ್ಪಥದಲ್ಲಿ ಓಡಾಡುವ ನಮಗೆ ಅವರು ನಡೆದು ತೋರಿದ ಹಾದಿ ನಿತ್ಯ ಸ್ಪೂರ್ತಿಯ ತಾಣ. ಅವರು ಗಳಿಸಿದ ಲೋಕ ಪ್ರೀತಿ ಅನನ್ಯವಾದದ್ದು. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ಭಾರತೀಯ ಜೀವನ ದರ್ಶನವನ್ನು ಬಾಳಿ ಬದುಕಿದ ಆ ಮಹಾಮಹಿಮನ ಆತ್ಮಕ್ಕೆ ಸದ್ಗತಿ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ರಾಜನೀತಿಜ್ಞನ ನೀರವ ನಿರ್ಗಮನಕ್ಕೆ ಪ್ರಕೃತಿಯ ಕಂಬನಿಯೊಂದಿಗೆ ಅಂತಿಮ ನಮನ ಹೇಳುತ್ತಿದ್ದೇನೆ.

Related posts