ಬಸವನಗುಡಿಯ ಅಬಲಾಶ್ರಮದಲ್ಲಿ ಜಾಗ್ರತಿ ಪ್ರಕಾಶನ ಏರ್ಪಡಿಸಿದ್ದ “ಪುನರೈಕ್ಯಕ್ಕೆ ಗೆಜ್ಜೆ ಹೆಜ್ಜೆ” ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ವರದಿ
“ಸೋತು ಬಸವಳಿದಿದ್ದ ಷಂಡ ನಾಯಕತ್ವ ಅಂದು ಕೇವಲ ತಮ್ಮ ಅಧಿಕಾರದ ಲಾಲಸೆಗಾಗಿ, ಸ್ವಾತಂತ್ರ್ಯದ ನೆರಳಲ್ಲಿ ದೇಶವನ್ನು ಇಬ್ಬಾಗ ಗೊಳಿಸಿದರು. ದೇಶ ಸ್ವಾತಂತ್ರಗೊಂಡರು ಆ ದಿನಗಳಲ್ಲಿ ನಡೆದಂತ ಅಸಂಖ್ಯಾತ ನಮ್ಮ ಬಂಧು-ಬಳಗದವರ ಕ್ರೂರ ಹತ್ಯೆ-ನರಮೇಧ, ಸಾಮೂಹಿಕ ಅತ್ಯಾಚಾರ ಇನ್ನು ಸಹ ನಮ್ಮಲ್ಲಿ ಹಸಿಯಾಗಿಯೇ, ನಮ್ಮ ನೆತ್ತರನ್ನು ಬಿಸಿಗೊಳಿಸುತ್ತಿದೆ. ರಾಜಕೀಯವಾಗಿ ನಾವು ಸ್ವಾತಂತ್ರಗೊಂಡರು, ಸಾಂಸ್ಕೃತಿಕವಾಗಿ ನಾವು ನಮ್ಮತನವನ್ನು ಬಲಿಗೊಟ್ಟ ದಿನವದು. ನಮ್ಮ ರಾಮನ ಮಗ ಲವ ಕಟ್ಟಿದ ಲಾಹೋರ್ ನಗರವನ್ನು ಕಳೆದುಕೊಂಡೆವು. ನಮ್ಮ ಪೂಜನೀಯ ಢಾಕೇಶ್ವರಿಯನ್ನು ಸಹ ನಾವು ಮರೆತೆವು. ಗಾಂಧಾರಿಯ ಕಂದಹಾರವನ್ನು ಸಂಪೂರ್ಣವಾಗಿ ಕೈ ಬಿಟ್ಟೆವು. ನಮ್ಮ ಪೂಜನೀಯ ಮಠ-ಮಂದಿರಗಳನ್ನು ನಮ್ಮ ಜೀವಿತಾವಧಿಯಲ್ಲೇ ನೆಲಸಮಗೊಂಡದ್ದನು ಸಾಕ್ಷೀಕರಿಸಿದೆವು. ಸುಮಾರು ಶೇಕಡಾ ೨೫ರಷ್ಟು ಹಿಂದುಗಳಿದ್ದ ಪಾಕಿಸ್ತಾನವಿಂದು ಕೇವಲ ಶೇ. ೧-೨ರಷ್ಟು ಮಾತ್ರವಿರುವಂತೆ ಮಾಡಿದ ಸಾಮೂಹಿಕ ಮಾರಣಾಂತಿಕ ವ್ಯವಸ್ಥೆಯನ್ನು ನಾವು ಒಪ್ಪಬೇಕೇ? ನಾವು ತುಂಡು ಮಾಡಿದ ಭಾರತವನ್ನು ಒಪ್ಪುವ ಪ್ರಶ್ನೆಯೇ ಇಲ್ಲ! ಇಂದಲ್ಲ… ನಾಳೆ ….. ನಾವು ಅಖಂಡ ಭಾರತದ ಕನಸನ್ನು ನನಸು ಮಾಡುವಂತೆ ಪ್ರತಿಜ್ಞೆ ಕೈಗೊಳ್ಳಬೇಕು. ನಮ್ಮ ಜೀವಿತಾವಧಿಯಲ್ಲಿ ಆಗದಿದ್ದರು, ನಮ್ಮ ಮುಂದಿನ ಜನಾಂಗದವರಿಗೆ ನಮ್ಮ ಕನಸನ್ನು ಮತ್ತು ನಮ್ಮ ಸಂಕಲ್ಪವನ್ನು ಧಾರೆಯೆರೆಯೋಣ…. ಇದೆ ನಮ್ಮ ಇತಿಹಾಸ”
“ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕನ್ನು ಅನೇಕ ವಿಚಾರಗಳೊಂದಿಗೆ ಕಟ್ಟಿಕೊಂಡಿರುತ್ತಾನೆ. ಆ ವಿಚಾರಗಳ ಮಟ್ಟ ಹೇಗಿರುತ್ತದೆ ಎಂಬುದು ಗೊತ್ತಿರುವುದಿಲ್ಲ. ಆದರೆ ಪ್ರತಿ ಒಬ್ಬ ವ್ಯಕ್ತಿಗೆ ಕೆಲವು ವಿಚಾರಗಳು ಹುಟ್ಟಿನಿಂದಲೇ ಇರುತ್ತವೆ. ಆ ವಿಚಾರಗಳು ಸಾಮಾಜಿಕ ವಿಚಾರಗಳಾಗಿರಬಹುದು, ಧಾರ್ಮಿಕ ವಿಚಾರಗಳಾಗಿರಬಹುದು, ವ್ಯಯಕ್ತಿಕ ವಿಚಾರಗಳಾಗಿರಬಹುದು ಅಥವಾ ಆಧ್ಯಾತ್ಮಿಕ ವಿಚಾರಗಳಾಗಿರಬಹುದು. ಅವರವರ ವಿಚಾರಕ್ಕೆ ತಕ್ಕಂತೆ ಅವರವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ.”
“ಶಬ್ದಗಳು ಎಲ್ಲಿ ಶಕ್ತಿ ಕುಂಚಗಳಾಗಿ ಹೊರಬರುತ್ತವೋ, ಅಲ್ಲಿ ಬದುಕಿಗೆ ಧಾರೆ ಎರೆದ ಹಾಗೆ. ಅತ್ಯಂತ ಶ್ರೇಷ್ಟವಾದ ಮಂತ್ರಗಳು ವಿಶ್ವಾಮಿತ್ರನ ಬಾಯಲ್ಲಿ ಬಂದಾಗ ಜಗತ್ತನ್ನು ಸಮಾನಿಷ್ಟಗೊಳಿಸುವಂತ ಶಕ್ತಿ ಹೊಂದಿರುತ್ತವೆ. ಅದೇ ಮಂತ್ರಗಳನ್ನು ನಾವು ಬಳಸಿದರೆ ಆ ಶಬ್ದಗಳಲ್ಲಿ ಶಕ್ತಿ ಇರುವುದಿಲ್ಲ. ಸಾಧನೆಯ ಮಹಾಪ್ರವಾಹ ಹರಿದಾಗ ಆ ಶಬ್ದಗಳಲ್ಲಿ ಶಕ್ತಿ ತುಂಬುತ್ತದೆ. ಬದಲಾಗಿ ಇಂದಿನ ಹೊಸ ಕವಿಗಳು ಸಮಯ ಜಾರುವುದಕ್ಕಾಗಿ ಬರೆಯುವಂಥ ಶಬ್ದಗಳಿಗೆ ಶಕ್ತಿ ಇರುವುದಿಲ್ಲ.”
“ಇತಿಹಾಸ ಅನ್ನೋದು ಒಂದು ಕಾದಂಬರಿ ಅಲ್ಲ. Time-pass ಗೆ ಓದುವಂತದ್ದಲ್ಲ. ಹಿಂದಿನ ನಮ್ಮ ಬದುಕಿನಲ್ಲಿ ನಡೆದಿರುವಂತ ಒಳ್ಳೆಯದು, ಕೆಟ್ಟದ್ದು, ಆದರ್ಶಗಳು ಅಥವಾ ಅನಾಹುತಗಳು ಇದನೆಲ್ಲ ನೆನೆದುಕೊಂಡು ನಮ್ಮ ಮುಂದಿನ ಬದುಕನ್ನು ರೂಪಿಸಿಕೊಳ್ಳುವಂತ ಒಂದು ಸುಸಂಧರ್ಭ. ಇತಿಹಾಸದ ಅಧ್ಯಯನ ಅಂದರೆ ನಮ್ಮ ಹಿನ್ನಲೆ ಮತ್ತು ಮುನ್ನಲೆ ತಿಳಿದುಕೊಳ್ಳುವುದು. ಇದರ ಮಧ್ಯದ ಮಾರ್ಗದರ್ಶನ ನಮಗೆ ಸಿಕ್ಕಿರುವಂತ ಒಂದು ಅವಕಾಶ. ಇದನ್ನು ಬಿಟ್ಟರೆ ಬದುಕಲು ಸಾಧ್ಯವಿಲ್ಲ.”
“ಬೋಧಿಧರ್ಮ ಚೀನಾಕ್ಕೆ ಹೋದಾಗ ಅವನ ಹಿಂದೆ ಸೈನ್ಯವಿರಲಿಲ್ಲ. ಅವರು ಭಾರತಕ್ಕೆ ವಾಪಸ್ ಬರಲಿಲ್ಲ, ಆದರೆ ಇಡೀ ಚೀನಾ ಭಾರತಕ್ಕೆ ತಲೆಬಾಗಿ ಬಂದಿತ್ತು. ಕತ್ತಿಯಿಂದ ನಾವು ಚೀನಾವನ್ನು ಗೆಲ್ಲಲಿಲ್ಲ, ಬದಲಾಗಿ ನಮ್ಮ ಸಂಸ್ಕೃತಿಯಿಂದ ನಾವು ಗೆದ್ದೆವು. ಇದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸದ ಪಾರಂಪರೆ.”
“ಕೆಲವರು ಕೇಳುತ್ತಾರೆ ಜ್ಞಾನ ಮತ್ತು ವಿಜ್ಞಾನ ಈ ಎರಡರ ನಡುವಿನ ವ್ಯತ್ಯಾಸವೇನು ಎಂದು? ಕಣ್ಣಿಗೆ ಕಾಣುವುದು, ನಮ್ಮ ಭೌತಿಕ ಶಕ್ತಿಯ ಅನುಭವಕ್ಕೆ ಬರುವುದು ವಿಜ್ಞಾನ. ಜ್ಞಾನ ಕಣ್ಣಿಗೆ ಕಾಣುವುದಿಲ್ಲ ಆದರೆ ಅದು ಸತ್ಯವಾಗಿ ಇರುತ್ತದೆ. ನಮಗೆ ಭಗವಂತ ಒಂದು ಶರೀರವನ್ನು ಕೊಟ್ಟಿದ್ದಾನೆ. ಅದು ನಮ್ಮ ಕಣ್ಣಿಗೆ ಕಾಣುತ್ತದೆ. ಆದರೆ ಜೀವ ಕಾಣುತ್ತದಾ? ಇದರ ಅರ್ಥ ಜೀವ ಇಲ್ಲವೆಂತಲ್ಲ. ಒಳಗಿರುವಂತ ಜೀವ ಇಲ್ಲ ಅಂದರೆ ಈ ಶರೀರಕ್ಕೆ ಅರ್ಥ ಇರುವುದಿಲ್ಲ. ಕಣ್ಣಿಗೆ ಕಾಣುವಂತ ಜಗತ್ತು ತುಂಬಾ ಚಿಕ್ಕದು. ಒಳಗಿನ ಜಗತ್ತನ್ನು, ಜಗತ್ತಿಗೆ ತೋರಿಸುವಂತ ಒಂದು ಅದ್ಬುತ ಶಕ್ತಿ ಭಾರತೀಯರಿಗಿದೆ. ಹೊರ ಜಗತ್ತಿನವರಿಗೆ ಇದ್ಯಾವುದೂ ಅರ್ಥವಾಗುತ್ತಿರಲಿಲ್ಲ. ಅವರಿಗೆ ಕಾಣುತ್ತಿದ್ದದ್ದು ಈ ದೇಶದ ಸಂಪತ್ತು, ವೈಭವ ಮಾತ್ರ. ಈ ದೇಶದ ಆಂತರಿಕ ಶಕ್ತಿ ಅವರಿಗೆ ಕಾಣುತ್ತಲೇ ಇರಲಿಲ್ಲ.”
“ಎಂದೂ ಅಳಿಯದ ಅಕ್ಷರಗಳನ್ನು ಬರೆಯುವ ಯೋಗ್ಯತೆ ಇರುವುದು ಭಾರತೀಯರಿಗೆ ಮಾತ್ರ. ಅಂಥಾ ಸಂಸ್ಕಾರ ನಮ್ಮದು”
“ನನ್ನ ಪಾರಂಪರೆಗೆ ನನ್ನ ರಕ್ತದ ಗುರುತಿದೆ. ನಾನೊಬ್ಬ ಹಿಂದೂ. ಇದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ”
“ರಾಜಕಾರಣಕ್ಕೆ ನನ್ನನ್ನ ಎಳೆದು ತರಲಾಯ್ತು..!!! ನನಗೆ ರಾಜಕಾರಣದ ಬಗ್ಗೆ ಏನು ಗೊತ್ತಿರಲಿಲ್ಲ, ಕಲ್ಪನೆ ಕೂಡಾ ಇರಲಿಲ್ಲ…. ಈ ಹಿಂದೆ ರಾಜಕಾರಣಕ್ಕೆ ಬರುವ ಮುನ್ನ ಹೀಗೆ ಕವನ ಗೀಚುವ ಹವ್ಯಾಸವಿದ್ದುದರಿಂದ ನನ್ನನ್ನು ನಾನು ಪರಿಚಯಿಸಿಕೊಂಡು ಅರ್ಥೈಸಿದ ರೀತಿ –
ತಲೆ ತಗ್ಗಿಸಿ ಹೋಗುತ್ತಿರಬೇಕಾದರೆ ಉದ್ಭವಗೊಂಡ ಕೆಲವು ಪ್ರಶ್ನೆಗಳು….
ಹೋಗುವುದು ಎಲ್ಲಿಗೆ …….? ಹೋದಲ್ಲಿಗೆ…..
ಎಲ್ಲಿಂದ……? ಹೊರಟಲ್ಲಿಂದ……..
ಯಾಕೆ…….? ಗೊತ್ತಿಲ್ಲ…….
ಹಾಗಾದರೆ, ನೀನು ಯಾರು…….. ? ದೇಹವೋ? ಮನಸ್ಸೋ? ಬುದ್ದೀನೋ? ಆತ್ಮವೋ?
ನಾನು…… ನಾನೇ, ಅನಂತ ……… !!!
ಬಹುತೇಕ ಕೆಂಪಂಗಿ ಬುದ್ದಿ ಜೀವಿಗಳಿಗೆ ಈ ಕವನ ಬಹಳ ಸ್ವಾರಸ್ಯಕವಾಗಿ ಹೊಂದಬಹುದು. ಅವರು ಏನು ಮಾಡುತ್ತಾ ಇದ್ದಾರೆಂದು ಅವರಿಗೆ ಗೊತ್ತಿಲ್ಲ. ಒಟ್ಟಿನಲ್ಲಿ, ಏನೋ ಗೀಚಬೇಕು, ಬರೀಬೇಕು….. ಬರೀತಾರೆ ಅಷ್ಟೇ. ಅವರ ಸಾಹಿತ್ಯದಲ್ಲಾಗಾಗಲಿ ಅಥವಾ ಅವರ ಬದುಕಿನಲ್ಲಿ ಅರ್ಥವಿರುವುದಿಲ್ಲ. ಆದರೆ ಒಂದು ವಿಚಾರವನ್ನು ಸೂಕ್ಷ್ಮ ಹಾಗು ಸಾಂಸ್ಕೃತಿಕ ದೃಷ್ಟಿಯಿಂದ ದೇಶವನ್ನು, ಧರ್ಮವನ್ನು ಓದಿಕೊಂಡು ಬರೆಯುವಂತ ಶಬ್ದಗಳಿಗೆ ಹೆಚ್ಚಿನ ಮೌಲ್ಯವಿರುತ್ತದೆ!”
“ಹೊರದೇಶದವರ ಕಣ್ಣಲ್ಲಿ ಭಾರತ ಒಂದು ಬಂಗಾರದ ಖಜಾನೆ, ರತ್ನಗರ್ಭಾವಸುಂಧರ. ಕೆಲವರ ದೃಷ್ಟಿಯಲ್ಲಿ ಇದೊಂದು ಜ್ಞಾನದ ದೇಗುಲ, ಆಧ್ಯಾತ್ಮದ ಒಂದು ಗುಡಿ. ಯಾರಿಗೆ ಈ ವೈಭವವನ್ನ ಸಹಿಸಿಕೊಳ್ಳುವ ಯೋಗ್ಯತೆ ಇರಲಿಲ್ಲವೋ, ಉದಾರತೆ ಇರಲಿಲ್ಲವೋ, ಅವರು ಈ ದೇಶವನ್ನು ಲೂಟಿ ಮಾಡುವುದು ಹೇಗೆ ಅಂತ ಯೋಚಿಸಲು ಪ್ರಾರಂಭಿಸಿದರು.”
“ಜಗತ್ತಿನ ಮುಂದುವರಿದ ದೇಶಗಳಿಗೆ, ಭಾರತ ಇನ್ನೂ ಅರ್ಥವಾಗದ ಒಂದು ದೇಶ. ಸುಮಾರು ೨-೩ ವರ್ಷಗಳ ಹಿಂದೆ ನಾನು ಜರ್ಮನೀಯಲ್ಲಿ ಒಂದು ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿನ ಅಧ್ಯಕ್ಷರು ಮಾತಾಡುವಾಗ ನನ್ನನ್ನು ಹೀಗೆ ಕೇಳಿದರು, still we could not understand what is India!! ಅದಕ್ಕೆ ನಾನು ಹೇಳಿದೆ, you cannot understand India because you are not born in India”.
“ಬೇರೆ ದೇಶದವರು ನಮ್ಮ ಭಾರತವನ್ನು ನೋಡಿದಾಗ, ಅವರಿಗೆ ನಾವು ಭಾರತದವರಿಗಿಂತ ದೊಡ್ಡವರಾಗಬೇಕು ಅನ್ನುವ ಯೋಚನೆ ಬಂದಿತು. ಅವರಿಂದ ಅದು ಸಾಧ್ಯವಾಗಲಿಲ್ಲ. ಭಾರತವನ್ನು ಲೂಟಿ ಮಾಡಲು ಪ್ರಾರಂಭಿಸಿದರು. ಎಷ್ಟು ಸಂಪತ್ತನ್ನು ದೋಚಿದರು ಅವರಿಗೆ ತೃಪ್ತಿ ಸಿಗಲಿಲ್ಲ, ಭಾರತವನ್ನು ಶೋಷಣೆಗೆ ಒಳಪಡಿಸಲು ಪ್ರಾರಂಭಿಸಿದರು. ಇಲ್ಲಿನ ಕೈಗಾರಿಕೆಗಳನ್ನ ನಾಶ ಮಾಡಿದರು, ಇಲ್ಲಿನ ವಿಚಾರಗಳನ್ನ ಹತ್ತಿಕ್ಕಲು ಪ್ರಾರಂಭ ಮಾಡಿದರು”.
“೧೮೫೭ರ ಸ್ವಾತಂತ್ರ ಸಂಗ್ರಾಮದ ನಂತರ ಬ್ರಿಟಿಷರಿಗೆ ಅನಿಸಿತು, ಈ ದೇಶವನ್ನು ನಾವು ಗೆಲ್ಲಲು ಆಗುವುದಿಲ್ಲವೆಂದು. ಎಲ್ಲಿಯ ತನಕ ನಮ್ಮ ದೇಶದ ಬೇರನ್ನು ನಾವು ಇಲ್ಲಿ ಊರುವುದಿಲ್ಲ, ಅಲ್ಲಿಯ ತನಕ ಈ ದೇಶವನ್ನು ನಾವು ಗೆಲ್ಲಲು ಸಾಧ್ಯವಿಲ್ಲವೆಂದು ಅವರು ನಿರ್ಧರಿಸಿದರು. ಇದರಿಂದ ಉದ್ಭವಿಸಿದ ಒಂದು ಚಿಂತನೆಯ ಫಲವೇ ನಮ್ಮ ಇಂದಿಗೂ ಮುಂದುವರಿದಿರುವ ಶಿಕ್ಷಣ ಪದ್ದತಿ”