Infinite Thoughts

Thoughts beyond imagination

ಆಶಾ ಕಾರ್ಯಕರ್ತೆಯರಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಮತ್ತು ಶುಭಾಶಯಗಳು!

೨೦೦೫ರಲ್ಲಿ ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಯೋಜನೆ ಅನ್ವಯ, ಗ್ರಾಮೀಣ ಭಾಗದ ಜನರ ಆರೋಗ್ಯದ ಮಟ್ಟ ಸುಧಾರಣೆಗಾಗಿ ಜೋಡಿಸಲ್ಪಟ್ಟ ಸ್ವಯಂಪ್ರೇರಿತ ಕಾರ್ಯಪಡೆಯೇ, ಇಂದು ಬೃಹದಾಕಾರವಾಗಿ ಬೆಳೆದು ನಿಂತಿರುವ ಆಶಾ ಕಾರ್ಯಕರ್ತೆಯರ ಪಡೆ. ಅಂದಿನಿಂದ ೧ ದಶಕಕ್ಕೂ ಹೆಚ್ಚು ಕಾಲ ಇಡೀ ದೇಶದಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗಾಗಿ ಈ ಕಾರ್ಯಪಡೆ ಬಹಳಷ್ಟು ಶ್ರಮ ವ್ಯಯಸಿದೆ. ಹಾಗೆ ಈ ವಲಯದಲ್ಲಿ ಗ್ರಾಮೀಣ ಜನರ ಆರೋಗ್ಯ ಮಟ್ಟ ಸಹ ಬಹಳಷ್ಟು ಸುಧಾರಣೆ ಕಂಡಿದ್ದು, ಅದರ ಸಿಂಹಪಾಲಿನ ಶ್ರೇಯಸ್ಸು ಆಶಾ ಕಾರ್ಯಕರ್ತೆಯರಿಗೆ ಸಲ್ಲಬೇಕು. ಇದಕ್ಕೂ ಹಿಂದೆ, ಅಂದರೆ ಸುಮಾರು ೧೯೭೫ರಲ್ಲಿ ಮಕ್ಕಳ ಆರೋಗ್ಯ ಸುಧಾರಣೆ ಮತ್ತು ಅದರಲ್ಲೂ ಅಪೌಷ್ಟಿಕತೆಯನ್ನು ತಡೆಗಟ್ಟಲು ಸಮುದಾಯ ಮಟ್ಟದಲ್ಲಿ ನಿಯೋಜಿತಗೊಂಡ ಅಂಗನವಾಡಿ ಕಾರ್ಯಕರ್ತರೊಂದಿಗೆ ಆಶಾ ಕಾರ್ಯಕರ್ತೆಯರ ಜೋಡಣೆ, ಗ್ರಾಮೀಣ ಭಾರತದಲ್ಲಿ ಬಹುದೊಡ್ಡ ಆರೋಗ್ಯ ಸುಧಾರಣೆ ಆಂದೋಲನಕ್ಕೆ ನಾಂದಿ ಹಾಡಿತು. ICDS (ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು) ಕಾರ್ಯಕ್ರಮದೊಳಗೆ ಅಂತರ್ಗತಗೊಂಡ ಈ ಕಾರ್ಯಕ್ರಮ, ಪ್ರಪಂಚದಲ್ಲೇ ಸಮುದಾಯ ಮಟ್ಟದ ಬಹುದೊಡ್ಡ ಯೋಜನೆಯಾಗಿದೆ.

ಈ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಯಶೋಗಾಥೆಯನ್ನು, ಇಷ್ಟೂ ವರ್ಷಗಳ ಕಾಲ ಸರ್ಕಾರಗಳು ಮನ್ನಿಸಿ ಅವರ ಕಷ್ಟ-ಸುಖಗಳ ವಿಚಾರಗಳಿಗೆ ಎಂದೂ ಸ್ಪಂದಿಸಿದ ಉದಾಹರಣೆ ನಮಗೆ ಸಿಗುತ್ತಿಲ್ಲ. ಹೆಚ್ಚಿನ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ, ಈ ಸದ್ದಿಲ್ಲದೇ ಸಮಾಜದ ಸೇವೆಗೆ ಅರ್ಪಿತಗೊಂಡ ಈ ಬಹು ದೊಡ್ಡ ಕಾರ್ಯ ಪಡೆಯ ಬಗ್ಗೆ ದಿವ್ಯ ನಿರ್ಲಕ್ಷ್ಯ! ಯಾವುದೇ ಚಳುವಳಿ ನಡೆಯಬೇಕಿದ್ದರು, ದೇಶದ ಕಮ್ಯುನಿಸ್ಟ್ ಪಕ್ಷಗಳಿಗೆ ಮೂಲಭೂತವಾಗಿ ಹೋರಾಟದ ಸ್ವರೂಪವಾಗಿ ನಿಲ್ಲುತ್ತಿದ್ದ ಪಡೆಯೇ ಈ ಕಾರ್ಯಕರ್ತೆಯರು! ಆದರೂ ಈ ಕಮ್ಯುನಿಸ್ಟ್ ಪಕ್ಷಗಳೇ ಆಡಳಿತ ನಡೆಸುತ್ತಿರುವ ಕೇರಳ, ಬಂಗಾಳ ಮತ್ತು ತ್ರಿಪುರ ರಾಜ್ಯಗಳಲ್ಲಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಏನೊಂದು ವಿಶೇಷ ಸವಲತ್ತು ಕೊಡುವ ಯೋಜನೆಯಾಗಲಿ ಅಥವಾ ಅವರ ಕಾರ್ಯ ಗುರುತಿಸುವ ವ್ಯವಸ್ಥೆ ಮಾಡದಿದ್ದದು ಮಾತ್ರ ದೊಡ್ಡ ದುರಂತ! ಯಾಕೆಂದರೆ ತಳಮಟ್ಟದಲ್ಲಿ ಬಡ ಜನರ ಯೋಗಕ್ಷೇಮದ ಬಗ್ಗೆ ಸದಾ ಜಪ ಮಾಡುತ್ತಾ ಅವರ ಬಗ್ಗೆ ಒಣ ಕಾಳಜಿ ವ್ಯಕ್ತಪಡಿಸಿದ ಪಕ್ಷಗಳ ಹಣೆಬರಹವಿದು.

ಇದೀಗ ನಮ್ಮ ಬಿ ಜೆ ಪಿ ನೇತ್ರತ್ವದ ಏನ್ ಡಿ ಏ ಸರ್ಕಾರ, ಮಾನ್ಯ ಪ್ರಧಾನ ಮಂತ್ರಿಗಳ ನೇರ ಮುತುವರ್ಜಿಯಿಂದ ಅಂಗನವಾಡಿ/ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಹಾಯಕಿಯರ ಗೌರವಧನ ಹೆಚ್ಚಳ ಮಾಡಿ ಮತ್ತು ಇನ್ನಿತರ ಪ್ರೋತ್ಸಾಹ ಯೋಜನೆಗಳ ಮೂಲಕ ಅವರ ಕಾರ್ಯಕ್ಷಮತೆಗೆ ಹೆಚ್ಚಿನ ಮೌಲ್ಯ ಒದಗಿಸಿ ಕೊಟ್ಟಿದ್ದಾರೆ. ಸುಮಾರು ೧೨.೯ ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದು, ಸರಿಸುಮಾರು ೧೧.೬ ಲಕ್ಷದಷ್ಟು ಆರೋಗ್ಯ ಸಹಾಯಕಿಯರು ಮತ್ತು ಸುಮಾರು ೧೦.೨೫ ಲಕ್ಷದಷ್ಟು ಆಶಾ ಕಾರ್ಯಕರ್ತೆಯರ ಈ ಬಹುದೊಡ್ಡ ಕಾರ್ಯಪಡೇ, ಸುಮಾರು ೧೪ ಲಕ್ಷ ಅಂಗನವಾಡಿ ಕೇಂದ್ರಗಳನ್ನು ದೇಶವ್ಯಾಪಿ ನಡೆಸುತ್ತಿದ್ದಾರೆ.

ಮಾನ್ಯ ಪ್ರಧಾನಿಗಳು ಮೊನ್ನೆಯ ದಿನ ಪ್ರಕಟಿಸಿದಂತೆ ಆಶಾ/ಅಂಗನವಾಡಿ ಕಾರ್ಯಕರ್ತೆಯರಿಗೆ ಹಲವು ರೀತಿಯಲ್ಲಿ ಅವರ ಕಾರ್ಯಕ್ಕೆ ಸೂಕ್ತ ಮನ್ನಣೆ ನೀಡಿದ್ದಾರೆ.
ಗೌರವಧನ ಹೆಚ್ಚಳ
ಸರ್ಕಾರಿ ಪ್ರಾಯೋಜಿತ ಜೀವ ವಿಮೆ
ಶೇ. ೫೦ರಷ್ಟು ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ ಕಾರ್ಯಕರ್ತೆಯರ ನೇಮಕ
ಸ್ಮಾರ್ಟ್ ಫೋನ್ ಗಳ ಬಳಕೆ
ಆಶಾ/ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ. ೩೦೦೦/- ದಿಂದ ರೂ. ೪೫೦೦/-, ಕಿರು ಕಾರ್ಯಕರ್ತೆಯರಿಗೆ ರೂ. ೨೨೫೦/- ರಿಂದ ರೂ. ೩೫೦೦/- ಮತ್ತು ಸಹಾಯಕಿಯರಿಗೆ ರೂ. ೧೫೦೦/- ದಿಂದ ರೂ. ೨೨೫೦/- ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಪ್ರಮಾಣ, ಸರಿಸುಮಾರು ಶೇ. ೫೦ಕ್ಕಿಂತಲೂ ಹೆಚ್ಚಾಗಿದೆ. ಇದಲ್ಲದೆ ಪ್ರೋತ್ಸಾಹ ಧನ ಕೂಡ ರೂ. ೨೫೦/- ರಿಂದ ರೂ. ೫೦೦/- ವರೆಗೂ ಹೆಚ್ಚಿಸಲಾಗಿದೆ.

ಇದಲ್ಲದೆ ಸರ್ಕಾರಿ ಪ್ರಾಯೋಜಿತ ಪ್ರಧಾನ ಮಂತ್ರಿ ಸುರಕ್ಷಿತ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಅನ್ವಯ ಈ ಕಾರ್ಯಕರ್ತೆಯರು ವಿಮೆಗೆ ಒಳಪಟ್ಟಿರುತ್ತಾರೆ. ಎರಡು ಯೋಜನೆ ಅನ್ವಯ ರೂ. ೪ ಲಕ್ಷದಷ್ಟು ವಿಮೆ ಹಣಕ್ಕೆ ಪ್ರತಿಯೊಬ್ಬ ಕಾರ್ಯಕರ್ತೆ ಅರ್ಹರಾಗಿರುತ್ತಾರೆ. ಪ್ರಾಜೆಕ್ಟ್ ಆಫೀಸರ್ಸ್ ಹುದ್ದೆಯಲ್ಲಿ ಸಹ ಶೇ. ೫೦ರಷ್ಟು ಕಾರ್ಯಕರ್ತೆಯರನ್ನೇ ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ಈ ಕಾರ್ಯಕರ್ತೆಯರ ಕಾರ್ಯದಕ್ಷತೆ ಮತ್ತು ವೃತ್ತಿ ಬೆಳವಣಿಗೆ ಮತ್ತಷ್ಟು ಹೆಚ್ಚಲಿದೆ. ಇವರೆಲ್ಲರ ಕಾರ್ಯ ಕುಶಲತೆ ಬೆಳೆಯಲು ಮತ್ತು ಡಿಜಿಟಲ್ ಮಾಧ್ಯಮವನ್ನು ಸದುಪಯೋಗ ಪಡಿಸಿಕೊಳ್ಳಲು, ಈ ಎಲ್ಲ ಕಾರ್ಯಕರ್ತೆಯರಿಗೂ ಇನ್ನು ಮುಂದೆ ತಮ್ಮ ಹಾಜರಾತಿ ಮತ್ತಿತರ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಮಂಡಿಸಲು ಸ್ಮಾರ್ಟ್ ಫೋನ್ ಗಳನ್ನೂ ಸಹ ಪಡೆಯಲಿದ್ದಾರೆ.

ಇಂತಹ ಸ್ವಾಗತಾರ್ಹ ಕಲ್ಯಾಣಕಾರಿ ಹೆಜ್ಜೆ ಇಟ್ಟರು ಸಹ, ಅವರ ಪರವಾಗಿ ಧ್ವನಿ ಎತ್ತುತ್ತೇವೆ ಎನ್ನುವ ಪಕ್ಷಗಳ ನಿಲುವು ಮಾತ್ರ ದಿವ್ಯ ಮೌನ!!!

ಒಟ್ಟಾರೆ ಈ ಜಗತ್ತಿನ ಅತಿ ದೊಡ್ಡ ಕಾರ್ಯ ಪಡೆಯ ಮಾನವ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ಬಳಸಿ ಕೊಂಡು, ಆ ಪಡೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆ ನಮ್ಮ ಪ್ರಧಾನ ಮಂತ್ರಿಗಳು ತೆಗೆದುಕೊಂಡಿರುವ ಈ ದಿಟ್ಟ ಕ್ರಮದಿಂದಾಗಿ ಮತ್ತು ಈ ಸರ್ಕಾರದ ಭಾಗವಾಗಿರುವುದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಗ್ರಾಮೀಣ ಭಾರತದ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಈ ಕಾರ್ಯಕರ್ತೆಯರಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಮತ್ತು ಶುಭಾಶಯಗಳು!

Related posts