ಹುಟ್ಟುಗುರುಡರಿಗೆ ಕನ್ನಡಿಯ ಚಿಂತೆ
ಹುಟ್ಟುಗುರುಡರಿಗೆ ಕನ್ನಡಿಯ ಚಿಂತೆ
ಸ್ವಂತಕ್ಕೆ ಶ್ರದ್ಧೆಯಿಲ್ಲದವರು ಮತ್ತೊಬ್ಬರ ದೇವರ ಬಗ್ಗೆ ಕಾಳಜಿವಹಿಸುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಮೇಲ್ನೋಟಕ್ಕೆ ಮಾನವೀಯತೆ ಎಂದರೆ ಇದೇ ಆಗಿರಬೇಕು ಎನ್ನುವ ಭ್ರಮೆ ಹುಟ್ಟಿಸುತ್ತಾರೆ. ಸಂವಿಧಾನದತ್ತ ಹಕ್ಕುಗಳ ರಕ್ಷಣೆ ತಮ್ಮಿಂದ ಮಾತ್ರ ಸಾಧ್ಯ ಎನ್ನುವುದನ್ನು ನಂಬಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮನೆಯವರನ್ನೂ ಸಂಬಂಧಿಗಳನ್ನೂ ನಂಬಬೇಡಿ, ಅವರೆಲ್ಲ ನಿಮ್ಮನ್ನು ಶೋಷಣೆ ಮಾಡುತ್ತಿದ್ದಾರೆ, ನಾವೇ ನಿಮ್ಮ ನಿಜವಾದ ಹಿತರಕ್ಷಕರು ಎಂದು ಘೋಷಿಸುತ್ತಾರೆ. ಹೌದು ಎಂದುಕೊಂಡು ಅವರನ್ನು ನಂಬಿದರೆ ನೀವು ಮೋಸಹೋದದ್ದು ಗೊತ್ತಾಗುವಾಗ ಬಹಳ ತಡವಾಗಿರುತ್ತದೆ.
ನಾನು ಹೇಳುತ್ತಿರುವುದು ನಮ್ಮ ಎಡಬಿಡಂಗಿ ಹೋರಾಟಗಾರರ ಬಗ್ಗೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಹತ್ತು ವರ್ಷಕ್ಕೆ ಮೇಲ್ಪಟ್ಟ ಐವತ್ತು ವರ್ಷ ಒಳಗಿನ ಹೆಣ್ಣುಮಕ್ಕಳಿಗೆ ಪ್ರವೇಶಕೊಡಿಸುವ ಅವರ ಪ್ರಯತ್ನದ ಬಗ್ಗೆ. ಇದು ಮೇಲ್ನೋಟಕ್ಕೆ ಸಮಾನತೆಯ ಕುರಿತಾದ ಹೋರಾಟವೆಂದು ಕಾಣುತ್ತದೆ. ಇಷ್ಟದೇವತೆಯನ್ನು ಪೂಜೆಮಾಡುವ ಮೂಲಭೂತ ಹಕ್ಕು ಹೆಣ್ಣುಮಕ್ಕಳಿಗೂ ಇದೆ ಎನ್ನುವ ಸಂವಿಧಾನದ ಆಶಯವನ್ನು ಅನುಷ್ಠಾನಗೊಳಿಸುವ ಯತ್ನವಾಗಿ ಭಾಸವಾಗುತ್ತದೆ. ಈ ಅವಕಾಶದ ಕುರಿತು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ, ಅದರ ಮರು ಪರಿಶೀಲನೆಗಾಗಿ ಭಕ್ತರು ಒತ್ತಾಯಿಸುತ್ತಿದ್ದಾರೆ. ನ್ಯಾಯಾಲಯದ ವಿವೇಕವನ್ನು ನಾನು ಪ್ರಶ್ನಿಸುವುದಿಲ್ಲ. ನನ್ನ ಕುತೂಹಲ ಕಾಳಜಿಗಳೆಲ್ಲ ಈ ಚಳುವಳಿಯನ್ನು ಹತ್ತಿಕ್ಕುವ ಹಿಂದಿನ ಹುನ್ನಾರದ ಬಗ್ಗೆ.
ಧರ್ಮ ಎನ್ನುವುದು ಅಫೀಮು, ಭಕ್ತಿ ಎನ್ನುವುದು ಶೋಷಣೆಗೆ ಒಪ್ಪಿಸಿಕೊಳ್ಳುವ ವಿಧಾನ, ಜಪ ತಪ ಪೂಜೆಗಳೆಲ್ಲ ನಾಟಕ, ಮನುಷ್ಯರು ಬದುಕಲು ದೇವರು ಬೇಕಾಗಿಲ್ಲ, ಎಂದು ಶತಮಾನಗಳಿಂದ ಹೇಳುತ್ತ ಬಂದ ಕಮ್ಯುನಿಷ್ಟರು ಹಿಂದು ದೇವರು ಮತ್ತು ಪೂಜಾ ಪದ್ಧತಿಗಳ ವಿಷಯದಲ್ಲಿ ಯಾಕಿಷ್ಟು ಆಸಕ್ತಿವಹಿಸುತ್ತಿದ್ದಾರೆ? ಮತ್ತು ಬೇರೆ ಮತದ ಆಚರಣೆಗಳ ಕುರಿತು ಎಂದೂ ಮಾತಾಡುವುದಿಲ್ಲ, ಯಾಕೆ!
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆಂಬ ಭಕ್ತರ ಬೇಡಿಕೆಗೆ ಕೇರಳದ ಕಮ್ಯೂನಿಷ್ಟ್ ಸರಕಾರ ಸ್ಪಂದಿಸುತ್ತಿಲ್ಲ. ಅದೇ ಸಂದರ್ಭದಲ್ಲಿ ಕಮ್ಯೂನಿಷ್ಟ್ ವಿಚಾರಧಾರೆಯ ನಾಸ್ತಿಕರು ದೇವಾಲಯ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಸಕಲ ರಕ್ಷಣೆಯನ್ನೂ ಕೊಡುವ ಹೊಣೆಹೊತ್ತಿದೆ ಕಮ್ಮಿನಿಷ್ಠೆಯ ಸರಕಾರ. ನಿಜವಾದ ಭಕ್ತರು ಹಾದಿಯಲ್ಲಿ ಭಜನೆ ಮಾಡುತ್ತಿದ್ದಾರೆ. ಸಮಾನತೆಯ ಸೋಗಿನವರು ದೇವಾಲಯ ಪ್ರವೇಶಕ್ಕೆ ಬೇರೆ ಬೇರೆ ವೇಷದಲ್ಲಿ ಬರುತ್ತಿದ್ದಾರೆ. ಹೀಗೆ ಬರುವವರು ಶ್ರದ್ಧಾವಂತರೇ ಆಗಿದ್ದರೆ ಅವರೊಡನೆ ಸಂವಾದ ಸಾಧ್ಯವಾಗುತ್ತಿತ್ತು. ಅದು ಸಾಧ್ಯವಾಗದೇ ಇರುವುದಕ್ಕೆ ಕಾರಣ ಸೋಗಿನ ಭಕ್ತರ ರಾಜಕಾರಣ. ಇದರಲ್ಲಿ ಕಮ್ಯುನಿಷ್ಟ್ ರಾಜಕಾರಣ ಎಲ್ಲಿ ಬಂತು ಎಂದು ಅನೇಕರಿಗೆ ಅಚ್ಚರಿಯಾಗಬಹುದು.
ಆದರೆ ಅದೇ ನಿಜವಾದ ವಿಷಯ. ಭಾರತೀಯರ ಶ್ರದ್ಧೆಯನ್ನು ಗೇಲಿಮಾಡುವ, ಅಣಕಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿರುವ ಎಡಪಂಥೀಯರಿಗೆ ನಮ್ಮ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವಲ್ಲಿ ಎಲ್ಲಿಲ್ಲದ ಉತ್ಸಾಹ.
ದಕ್ಷಿಣ ಭಾರತದ ಇಡೀ ಹಿಂದು ಸಮಾಜ ತಮ್ಮೆಲ್ಲ ಭೇದಗಳನ್ನೂ ಮರೆತು ಭಕ್ತಿಯಲ್ಲಿ ಒಂದಾಗಿ ಸೇರುವ ತಾಣ ಶಬರಿಮಲೈ. ಎಲ್ಲರೂ ೪೧ ದಿನಗಳ ಕಠಿಣ ವ್ರತ ಪಾಲನೆಮಾಡಿ ದೇವ ದರ್ಶನ ಪಡೆಯುವ, ಸಾಮೂಹಿಕ ಸಂಯಮದ ಅಪರೂಪದ ನಿದರ್ಶನ. ಬದುಕಿನಲ್ಲಿ ಶೀಲ ಸಂಯಮದ ಮಹತ್ವವನ್ನೇ ತಿಳಿಯದ ಎಡಬಿಡಂಗಿಗಳಿಗೆ ಶಬರಿಮಲೆಯಲ್ಲಿ ಕಾಣುವ ಹಿಂದು ಏಕತೆ ಕಣ್ಣು ಕುಕ್ಕುತ್ತಿದೆ. ಅದನ್ನು ಹತ್ತಿಕ್ಕುವ, ಅದರ ಪಾವಿತ್ರತೆಯವನ್ನು ಕೆಡಿಸುವ ಕಮ್ಯೂನಿಷ್ಟ್ ಪ್ರಯತ್ನ ನಿರಂತರವಾಗಿ ನಡೆದಿದೆ.
ಶಬರಿಮಲೆ ಅಯ್ಯಪ್ಪನ ದೇವಾಲಯದ ಆಡಳಿತಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (Travancore Devosvam Board) ಇದೆ. ಅದರಲ್ಲಿ ಸರಕಾರ ನೇಮಿಸಿದ ಸದಸ್ಯರು ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿಯವರೆಗೆ ಆ ಮಂಡಳಿಗೆ ಹಿಂದುಗಳಲ್ಲಿ ಯಾರನ್ನಾದರು ನೇಮಿಸುವುದು ಎಂಬ ನಿಯಮವಿತ್ತು. ಕೇರಳದಲ್ಲಿರುವ ವರ್ತಮಾನದ ಕಮ್ಯುನಿಷ್ಟ್ ಸರಕಾರಕ್ಕೆ ಇದನ್ನು ಸಹಿಸಲಾಗಲಿಲ್ಲ. ತಮಗೆ ಬೇಕಾದಂತೆ ಆ ನಿಯಮಕ್ಕೆ ತಿದ್ದುಪಡಿಯನ್ನು ತಂದಿದೆ.
ತಿರುವಾಂಕೂರು-ಕೊಚ್ಚಿ ಹಿಂದು ಧಾರ್ಮಿಕ ಸಂಸ್ಥೆಗಳ ತಿದ್ದುಪಡಿ ಕಾಯಿದೆ-೨೦೧೮(The Travancore-Cochin Hindu Religious Institutions (Amendment) Act, 2018) ಈ ಕಾಯಿದೆಯ ಸೆಕ್ಶನ್ 29(2)ಕ್ಕೆ ತಿದ್ದುಪಡಿ ತರಲಾಗಿದೆ. ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿಗೆ ಹಿಂದುಗಳನ್ನು ನೇಮಿಸಬೇಕು ಎಂಬುದನ್ನು ಬದಲಿಸಿ ಯಾರನ್ನು ಬೇಕಾದರೂ ನೇಮಿಸಬಹುದು ಎಂದು ತಿದ್ದುಪಡಿ ಮಾಡಿದೆ.
ಇಲ್ಲಿ ಅದರ ಹುನ್ನಾರ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸದ್ಯ ಈ ತಿದ್ದುಪಡಿಯ ವಿರುದ್ಧ ಕೇರಳ ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರಾದ ಶ್ರೀ ಶ್ರೀಧರನ್ ಪಿಳ್ಳೈಯವರು ಅಲ್ಲಿಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಸರ್ಕಾರಕ್ಕೆ ಬೆವೆರು ಇಳಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಕಮ್ಮಿನಿಷ್ಠೆ ಸರ್ಕಾರ ದೇವಸ್ವಂ ಮಂಡಳಿಗೆ ಹಿಂದುಯೇತರ ವ್ಯಕ್ತಿಯನ್ನು ನೇಮಿಸುವುದಿಲ್ಲವೆಂದು ಘೋಷಣೆ ಮಾಡಬೇಕಾಯ್ತು.
ಒಂದು ಕಡೆ ದೇವಸ್ವಂ ಮಂಡಳಿಗೆ ಹಿಂದೂಗಳು ಅಲ್ಲದವರನ್ನು ನೇಮಕ ಮಾಡುವದಕ್ಕೆ ಕೈ ಹಚ್ಚುವ ಈ ಎಡಬಿಡಂಗಿಗಳು, ಇನ್ನೊಂದು ಕಡೆ ಹಿಂದುಗಳಲ್ಲದ ಶೀಲಗೆಟ್ಟವರನ್ನು ಶಬರಿಮಲೈ ದೇವಸ್ಥಾನದ ಪಾವಿತ್ರತೆ ಹಾಳುಗೆಡವಲು ರಕ್ಷಣೆ ನೀಡುತಿದ್ದಾರೆ.
ಸೆಕ್ಯೂಲರ್ ಭಾರತದಲ್ಲಿ ಹಿಂದು ದೇವಾಲಯಗಳ ಆಡಳಿತ ರಾಜ್ಯ ಸರಕಾರದ ಕೈಯಲ್ಲಿದೆ!
ಕೇರಳದಲ್ಲಿ ಕಮ್ಯೂನಿಷ್ಟ್ ಸರಕಾರದ ಕೈಯಲ್ಲಿದೆ. ಹಿಂದು ದೇವಾಲಯವೊಂದರ ಆಡಳಿತ ಮಂಡಳಿಯಲ್ಲಿ ಹಿಂದುಯೇತರ ವ್ಯಕ್ತಿಯನ್ನು ನೇಮಿಸುವುದರ ಹಿಂದಿನ ಉದ್ದೇಶವಾದರೂ ಏನು? ಇದರಿಂದ ಕೇರಳ ಸರಕಾರ ಏನನ್ನು ಸಾಧಿಸಲು ಹೊರಟಿದೆ? ದೇವಾಲಯದಲ್ಲಿ ನಂಬುಗೆಯಿಲ್ಲದ, ದೇವರಲ್ಲಿ ಶ್ರದ್ಧೆಯಿಲ್ಲದ, ಸಂಪ್ರದಾಯಗಳಲ್ಲಿ ನಿಷ್ಠೆಯಿಲ್ಲದ ಅನ್ಯ ಮತೀಯನನ್ನು ದೇವಾಲಯದ ಆಡಳಿತ ಮಂಡಳಿಯಲ್ಲಿ ನೇಮಿಸುವ ಹುನ್ನಾರವನ್ನು ಕುಹಕತನ ಎನ್ನದೇ ಬೇರೆ ಯಾವ ಶಬ್ದಗಳಲ್ಲಿ ಕರೆಯಬೇಕು? ಈ ವಿಷಯ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ತಿಳಿದೇ ಇಲ್ಲ. ಈ ರೀತಿಯ ವಂಚನೆಯನ್ನು ಅದೆಷ್ಟು ದಿನ ನಾವು ಸಹಿಸುವುದು!
ಅಹಂಕಾರ ತೃಪ್ತಿಯನ್ನು ಮೀರಿ, ಆತ್ಮ ತೃಪ್ತಿಯ ಬದುಕಿಗಾಗಿ ಅಧ್ಯಾತ್ಮದ ಕನ್ನಡಿಯಲ್ಲಿ ನಮ್ಮನ್ನು ನೋಡಿಕೊಳ್ಳುವುದಕ್ಕೆ ನಾವು ಶ್ರದ್ಧೆಯನ್ನು, ಭಕ್ತಿಯನ್ನು ಅವಲಂಬಿಸಿದ್ದೇವೆ. ವ್ರತಧಾರಿಗಳಾಗಿ ಸಂಯಮವನ್ನು ಆಚರಿಸುತ್ತೇವೆ. ತಮ್ಮ ವ್ಯಯಕ್ತಿಕ ಜೀವನದಲ್ಲಿ ಶ್ರದ್ಧೆ ಭಕ್ತಿ ಇಲ್ಲದ ಜನ ನಮಗೆ ದೇವಾಲಯ ಹೇಗಿರಬೇಕು, ಭಕ್ತಿಯ ಆಚರಣೆ ಹೇಗಿರಬೇಕು ಎಂದು ಉಪದೇಶ ಮಾಡುತ್ತಿದ್ದಾರೆ. ಭಕ್ತಿಯ ವಿಷಯದಲ್ಲಿ, ಅಂತರಂಗದ ಅಧ್ಯಾತ್ಮದ ವಿಷಯದಲ್ಲಿ ಎಡಬಿಡಂಗಿಗಳು ಹುಟ್ಟುಕುರುಡರು. ಅವರು ನಮಗೆ ಭಕ್ತಿಯ ಕನ್ನಡಿಯನ್ನು ಹೇಗಿಟ್ಟಕೊಳ್ಳಬೇಕೆಂಬ ಪಾಠ ಮಾಡುತ್ತಿದ್ದಾರೆ. ಹಿಂದುಗಳಲ್ಲಿ ಬುದ್ಧಿ ಭೇದ ಮಾಡುವ ಎಡಬಿಡಂಗಿಗಳ ವಂಚನೆಯನ್ನು ಬಯಲುಮಾಡಬೇಕು. ಈ ವಿಷಯದಲ್ಲಿ ಇನ್ನಷ್ಟು ವಿಷಯಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.