Infinite Thoughts

Thoughts beyond imagination

ಮೈತ್ರಿ ಸರಕಾರದ ಮತಾಂಧ ಜಯಂತಿ!

ಮೈತ್ರಿ ಸರಕಾರದ ಮತಾಂಧ ಜಯಂತಿ!

ದೀಪಾವಳಿಯ ಸಂಭ್ರಮಕ್ಕೆ ಸಂಕಟದ ನೆನಪನ್ನು ಹಚ್ಚುವ ಕರ್ನಾಟಕ ಸರಕಾರದ ಹಠಕ್ಕೆ ಏನೆನ್ನಬೇಕು! ನರಕ ಚತುರ್ದಶಿ ಕಳೆದರೂ ರಾಜ್ಯದ ಜನತೆಗೆ ನರಕದ ನೆನಪು ಕಳೆಯುವುದಿಲ್ಲ. ಮಂಡ್ಯದ ಅಯ್ಯಂಗಾರರು ಎಂದೂ ದೀಪಾವಳಿಯನ್ನು ಆಚರಿಸದಂತೆ ಮಾಡಿದ ಟಿಪ್ಪುವಿನ ಆರಾಧನೆಯ ರೋಗ ಮೈತ್ರಿ ಸರಕಾರಕ್ಕೂ ಅಂಟಿಕೊಂಡಿದೆ. ದಿನ ಬೆಳಗಾದರೆ ದೇವಾಲಯ ದರ್ಶನವೇ ಸರಕಾರದ ಕೆಲಸ ಎಂದುಕೊಂಡಿರುವವರಿಗೂ ಮತಾಂಧನ ಮೇಲೆ ಅದೆಷ್ಟು ಪ್ರೀತಿ!

ಕರ್ನಾಟಕ ಹೆಮ್ಮೆಪಡಬೇಕಾದ ಸಾಮ್ರಾಜ್ಯವನ್ನು ಕಟ್ಟಿ ಆಳಿದವರು ವಿಜಯನಗರದ ಸಮ್ರಾಟರು. ಸಂಪತ್ತು, ಸಂಸ್ಕೃತಿ, ಸಾಮರಸ್ಯ, ನೆಮ್ಮದಿ ಎಲ್ಲವನ್ನೂ ಸಾಧಿಸಿದವರ ನೆನಪು ಜಾತ್ಯತೀತರಿಗೆ
ಇಷ್ಟವಾಗುವುದಿಲ್ಲ. ಕೊಲೆ ಸುಲಿಗೆ ಮತಾಂತರ ಅತ್ಯಾಚಾರಗಳೊಂದಿಗೆ ಆಡಳಿತ ಮಾಡಿದ ಟಿಪ್ಪು ಇವರ ಪಾಲಿನ ದೇವರಾಗುತ್ತಾನೆ! ಮೌಲ್ಯಯುತವಾದ ಸಂಸ್ಕೃತಿಯನ್ನು ರೂಢಿಸಿದ, ಜನಾನುರಾಗದ ಆಡಳಿತ ನೀಡಿದ ಮೈಸೂರು ಅರಸರ ಕುರಿತು ಮಾತಾಡಿದರೆ ಆಳರಸರನ್ನು ಹೊಗಳುವ ಪ್ರತಿಗಾಮಿಗಳೆನ್ನುವ ಬಿರುದು ಸಿಗುತ್ತದೆ. ವಿಶ್ವಾಸ ದ್ರೋಹಿ, ಕ್ರೂರಿ, ಮತಾಂಧ ಮುಸ್ಲಿಮನನ್ನು ವೈಭವೀಕರಿಸಿದರೆ ಅಪ್ಪಟ ಪ್ರಗತಿಪರರೆಂಬ ಪಟ್ಟ ಸಿಗುತ್ತದೆ.

ನವೆಂಬರ್ ತಿಂಗಳೆಂದರೆ ಕರ್ನಾಟಕ ರಾಜ್ಯೋತ್ಸವದ ತಿಂಗಳು. ರಾಜ್ಯದೆಲ್ಲೆಡೆ ಕನ್ನಡದ ಪ್ರಾಚೀನತೆ, ಕನ್ನಡದ ಶ್ರೇಷ್ಟತೆ, ಕನ್ನಡದ ವಿಶೇಷತೆಗಳ ಬಗ್ಗೆ ಭಾಷಣ ಚರ್ಚೆ ನಡೆಯುತ್ತವೆ. ಹಾಡು,
ಕುಣಿತ, ಮನರಂಜನೆ ಎಲ್ಲೆಡೆ ಕನ್ನಡದ ಕಂಪು. ಆಡಳಿತ ಭಾಷೆಯಾಗಿ ಕನ್ನಡ ಹೇಗೆ ಬಳಸಲ್ಪಡಬೇಕೆಂಬ ಚಿಂತನೆ ಗರಿಗೆದರುತ್ತದೆ. ಆದರೆ, ಆ ಎಲ್ಲ ಸಂಭ್ರಮಕ್ಕೆ, ಸಂತೋಷಕ್ಕೆ ಮಸಿಬಳಿದಂತೆ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ. ಈ ಟಿಪ್ಪು ಕನ್ನಡವನ್ನು ಕೊಲ್ಲುವುದಕ್ಕೆ ವ್ಯವಸ್ಥಿತ ಪ್ರಯತ್ನ ನಡೆಸಿದವನು. ಮೈಸೂರು ಅರಸರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ ಪಾರ್ಸಿ ಭಾಷೆಯನ್ನು ಹೇರಿದವನು.

ಕರಾವಳಿಯನ್ನು 'ಯಾಮ್ ಸುಬಾ', ಮಲೆನಾಡನ್ನು 'ತರನ್ ಸುಬಾ', ಬಯಲು-ಸೀಮೆಯನ್ನು 'ಘಬ್ರಾ ಸುಬಾ' ಎಂದು ಕರೆದು ಸ್ಥಳೀಯ ಅಸ್ಮಿಯತೆಯನ್ನೇ ಅಳಿಸಿ ಹಾಕುವ ಹುನ್ನಾರ ಮಾಡಿದವನು. ಆಡಳಿತದ ದಾಖಲೆಗಳಲ್ಲಿ ತಾನಿಟ್ಟ ಹೆಸರುಗಳೇ ಬಳಕೆಯಾಗುವಂತೆ ಆಗ್ರಹ ಮಾಡಿದವನು. ಇಂದಿಗೂ ನಮ್ಮ ಕಂದಾಯ ವಿಭಾಗದಲ್ಲಿ ಬಳಕೆಯಲ್ಲಿರುವ; "ಖಾತೆ, ಖಿರ್ದಿ, ಪಹಣಿ, ಖಾನೇಶುಮಾರಿ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಜಮಾಬಂದಿ, ಅಹವಾಲು" ಈ ತರದ ಶಬ್ದಗಳೆಲ್ಲ ಟಿಪ್ಪು ಶಾಸನದ ಪರಿಣಾಮಗಳೇ ಆಗಿವೆ. ಕನ್ನಡ ಶಾಸ್ತ್ರೀಯ ಭಾಷೆ ಎಂದು ಘೋಷಣೆಯಾದರೆ ಸಾಕೆ, ನಮ್ಮ ಬದುಕಿನ ಬಳಕೆಯಲ್ಲಿ ಕನ್ನಡ ಶಬ್ದಗಳು ಬರಬೇಕಲ್ಲ. "ಖಾವಂದರು, ಶಿರಸ್ತೇದಾರರು, ತಹಸೀಲ್ದಾರರು" ಬದಲಾಗುವುದು ಯಾವಾಗ?

ಪಕ್ಕದ ಕೇರಳ ತಮಿಳುನಾಡುಗಳಲ್ಲಿ ಮುಸಲ್ಮಾನರು ಮಲಯಾಳಿ, ತಮಿಳಿನಲ್ಲೇ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಉರ್ದುವಿಗೇ ಗಂಟುಬೀಳುತ್ತಾರೆ. ಇದಕ್ಕೆಲ್ಲ ಅಡಿಪಾಯ ಹಾಕಿದವನು ಟಿಪ್ಪು. ಇಸ್ಲಾಮಿನ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಹೊಂದಿದ್ದ ಅವನು ಈ ಮಣ್ಣಿನ ಗಂಧವಿರುವ ಎಲ್ಲವನ್ನೂ ವಿರೋಧಿಸಿದ್ದ. ಒಡೆದು ಆಳುವುದು, ವಿಶ್ವಾಸ ದ್ರೋಹ ಮಾಡುವುದು ಅವನಿಗೆ ಸ್ವಭಾವವೇ ಆಗಿತ್ತು. ಕೊಡವರನ್ನು ಸಂಧಾನಕ್ಕೆ ಕರೆದು, ಬರಿಗೈಯಲ್ಲಿ ಬಂದವರನ್ನು ಕತ್ತಲೆಯಲ್ಲಿ ಕತ್ತರಿಸಿ ಹಾಕಿದ್ದ.

ಟಿಪ್ಪುವಿನ ಗುಣಗಾನ ಮಾಡುವ, ಪ್ರಗತಿಪರರೆಂದುಕೊಳ್ಳುವ ಆತ್ಮವಂಚಕರಿಗೆ ಟಿಪ್ಪುವಿನ ಮಾನವೀಯ ಕಾರ್ಯಗಳನ್ನೊಂದಿಷ್ಟು ನೆನಪು ಮಾಡಿಕೊಡಬೇಕು.

ದೀಪಾವಳಿಯ ದಿನ ಮೇಲುಕೋಟೆಯಲ್ಲಿ ೭೦೦ಕ್ಕೂ ಹೆಚ್ಚು ಅಯ್ಯಂಗಾರ್ ಗಂಡಸರನ್ನು ಕೊಚ್ಚಿಹಾಕಿದ್ದು,
ಮದಕರಿ ನಾಯಕನನ್ನು ವಂಚಿಸಿ ಸೆರೆಹಿಡಿದದ್ದು,
ಅವನ ಸೈನಿಕರನ್ನು ಬಲವಂತದಿಂದ ಮತಾಂತರ ಮಾಡಿದ್ದು,
ಮಂಗಳೂರಿನ ಕ್ರಿಶ್ಚಿಯನ್ ಸಮುದಾಯವನ್ನು ನಿರ್ದಯವಾಗಿ ಹತ್ಯೆ ಮಾಡಿದ್ದು
ಅಳಿದುಳಿದವರನ್ನು ಮತಾಂತರ ಮಾಡಿದ್ದು,
ಮೈಸೂರು ಅರಸು ಮನೆತನದವರನ್ನು ಸೆರೆಹಿಡಿದು ಮತಾಂತರ ಮಾಡಿದ್ದು

ಒಂದೇ ಎರಡೇ ಕ್ರೌರ್ಯದಲ್ಲಿ ಸಂತೋಷಪಡುತ್ತಿದ್ದ, ಹಿಂಸಾರತಿ ಅವನಿಗೆ ಮನರಂಜನೆಯಾಗಿತ್ತು. ಇದು ಕೇವಲ ಉದಾಹರಣೆಯಷ್ಟೇ! ಕೇವಲ ೨೦೦+ ವರ್ಷಗಳ ಹಿಂದೆ ಘಟಿಸಿದ ಈ ಕ್ರೌರ್ಯದ ಪರಿಚಯ ಸುವಿಸ್ಥಾರವಾಗಿ ಆಗಬೇಕಾದರೆ, ಇತಿಹಾಸದ ಪುಟ ತಿರುಗಿಸಿ ನೋಡಿದರೆ ಈ ಮೇಲೆ ಹೇಳಿದ ಘಟನೆಗಳಲ್ಲದೆ ಇನ್ನು ಹೀನ ಹಾಗು ಭೀಬತ್ಸ ದುರಂತಗಳನ್ನು ಗೋಚರಿಸುತ್ತದೆ. 

ಇಂತಹ ಕ್ರೂರ ಮತಾಂಧನನ್ನು, ಅಮಾನವೀಯ ಆಡಳಿತಗಾರನನ್ನು ಯಾವ ಪುರುಷಾರ್ಥಕ್ಕಾಗಿ ಸರಕಾರ ಜನರ ತೆರಿಗೆಯ ಹಣದಲ್ಲಿ ಆರಾಧಿಸುತ್ತಿದೆ? ರಾಜಕೀಯವೇ ಆದರೂ
ಮುಸ್ಲಿಮರಲ್ಲಿ ಒಳ್ಳೆಯವರು ಯಾರೂ ಸಿಗಲಿಲ್ಲವೇ? ದೀಪಾವಳಿಯ ಹರ್ಷವನ್ನು ಹಾಳುಮಾಡುವ, ಕನ್ನಡದ ನುಡಿಹಬ್ಬಕ್ಕೆ ಅವಮಾನ ಮಾಡುವ ಟಿಪ್ಪು ಜಯಂತಿ ಎನ್ನುವ ರಾಜಕೀಯ ಪ್ರಹಸನಕ್ಕೆ ಒಂದು ಕೊನೆ ಬರಲೇಬೇಕಲ್ಲವೆ!


ಟಿಪ್ಪು ವ್ಯಂಗ್ಯ ಚಿತ್ರ ಕೃಪೆ: ಶ್ರೀ ಸತೀಶ್ ಆಚಾರ್ಯ

Related posts