Infinite Thoughts

Thoughts beyond imagination

ಶ್ರದ್ಧೆಯನ್ನು ಕೆಡಿಸುವ ಶನಿ ಸಂತಾನ!

ಶ್ರದ್ಧೆಯನ್ನು ಕೆಡಿಸುವ ಶನಿ ಸಂತಾನ!

ಭಾರತದ ಶಾಂತಿ, ಸಮೃದ್ಧಿಗಳು ವಿದೇಶಿ ಆಕ್ರಮಣಕಾರರನ್ನು ಕೈ ಬೀಸಿ ಕರೆದವು. ಹತ್ತನೇ ಶತಮಾನದವರೆಗೆ ನಮ್ಮ ನೆಲದಲ್ಲಿ ಕಾಲೂರಲು ಹೊರಗಿನವರಿಗೆ ಅವಕಾಶ ಸಿಗಲಿಲ್ಲ. ಮುಂದೆಯೂ ಬಂದ ಶಕರು, ಹೂಣರು, ಮಂಗೋಲಿಯನ್ನರೆಲ್ಲ ಭಾರತದ ಸಾಂಸ್ಕೃತಿಕ ಸಮುದ್ರದಲ್ಲಿ ಸೇರಿಹೋದರು. ಇಲ್ಲಿ ಬಂದು ಪ್ರತ್ಯೇಕವಾದ ಅಸ್ತಿತ್ವವಾದವರು ಮುಸ್ಲಿಮರು ಮತ್ತು ಕ್ರೈಸ್ತರು, ಮಾತ್ರ. ಐದಾರು ಶತಮಾನ ಭಾರತದಲ್ಲಿ ಮುಸಲ್ಮಾನರ ಆಡಳಿತ ನಡೆಯಿತು ಹಾಗೆ ಬ್ರಿಟಿಷರು ಎರಡು ಶತಮಾನ ಆಳಿದರು.

ಏಕ ದೇವೋಪಾಸನೆಯ ಮತಗಳು ಆಡಳಿತ ನಡೆಸಿದಾಗ ಮತಾಂತರ ದೊಡ್ಡ ಪ್ರಮಾಣದಲ್ಲಿಯೇ ನಡೆಯಿತು. ಅದರಲ್ಲೂ‚ “ಬ್ರಿಟಿಷ ಸೈನ್ಯದಲ್ಲಿ ನಾಲ್ಕು ವಿಭಾಗಗಳು. ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಚರ್ಚು” ಎಂದು ಗಾಂಧೀಜಿಯವರ ಅನುಯಾಯಿ ಜೆ.ಸಿ.ಕುಮಾರಪ್ಪನವರು ಹೇಳಿದ್ದಾರೆ. ಈ ಮತಾಂತರಗಳು ನಡೆಯುವಾಗಲೆಲ್ಲ ಭಾರತದ ಪರಂಪರೆಯ ದೇವರು, ಪೂಜಾ ಪದ್ಧತಿಗಳನ್ನು ಹೀಗಳೆಯುವುದು ಸಾಮಾನ್ಯವಾಗಿತ್ತು. ಬಲವಂತದ ಮತಾಂತರದಲ್ಲಿ ಈ ಸಮರ್ಥನೆಗಳ ಅಗತ್ಯವಿರಲಿಲ್ಲ, ಎನ್ನಿ!

ಸ್ವತಂತ್ರ ಭಾರತದಲ್ಲಿ ಮತಾಂತರ ನಿಷೇಧ ಜಾರಿಯಾಗಬೇಕೆಂದು ಗಾಂಧೀಜಿ ಬಯಸಿದ್ದರು. ಮನುಷ್ಯನ ಶ್ರದ್ಧೆಗೆ ಮತದ ಗಡಿ ಬೇಡ ಎಂದ ವಿಭೂತಿ ಪುರಷರನೇಕರು ನಮ್ಮ ನೆಲದಲ್ಲಿ ಹುಟ್ಟಿ ಬೆಳಗಿದರು. ಆದರೆ ಈ ಶ್ರದ್ಧೆಯನ್ನೇ ಅಲ್ಲಗಳೆಯುವ ಒಂದು ಪಂಥ ಭಾರತದಲ್ಲಿ ಪ್ರಭಾವಿಯಾಗಿ ಬೆಳೆಯುತ್ತದೆ ಎಂದು ಯಾರಿಗೂ ನಿರೀಕ್ಷೆಯಿರಲಿಲ್ಲ. ಅದೇ ಕಮ್ಯೂನಿಸಂ. ಸಮತಾವಾದ ಎಂದು ಅದಕ್ಕೆ ಅನುವಾದವನ್ನು ಹೇಳಲಾಗಿದೆಯಾದರು, ಆದರದ್ದು ಆತ್ಮಘಾತಕ ವಾದವಾಗಿದೆ. ಮನುಷ್ಯನಿಗೆ ಆತ್ಮದ ಹಸಿವೆಯೊಂದು ಇರುತ್ತದೆ ಎನ್ನುವುದನ್ನೇ ಒಪ್ಪದ ಲೌಕಿಕ ವಾದ ಅದು. ಭಾರತದ ಅಧ್ಯಾತ್ಮಿಕ ಪರಂಪರೆಯನ್ನು ತಿರಸ್ಕರಿಸಿದ ಅರ್ಥ ಸಿದ್ಧಾಂತವದು. ಪಶುತ್ವದಿಂದ ಮನುಷ್ಯತ್ವಕ್ಕೆ ಏರುವ ಮಾನವ ಉನ್ನತಿಯನ್ನೇ ಅರ್ಥಮಾಡಿಕೊಳ್ಳಲಾಗದ ನಾಸ್ತಿಕವಾದ. ಅಂತರಂಗದ ವಿಕಾಸವನ್ನು ಅಲ್ಲಗಳೆದು, ಬಹಿರಂಗದ ಒತ್ತಡದಿಂದಲೇ ಸಮಾಜದ ನೈತಿಕತೆಯನ್ನು ಸಾಧಿಸುವ ಒತ್ತಡ ವಾದವದು.

ಹಿಂದು ಶ್ರದ್ಧೆಯನ್ನು ಅಲ್ಲಗಳೆಯುವಲ್ಲಿ; ಆರು ಶತಮಾನಗಳ ಮುಸ್ಲಿಂ ಅರಸರ ಆಡಳಿತ, ಎರಡು ಶತಮಾನಗಳ ಬ್ರಿಟಿಷರ ಆಡಳಿತ ಮಾಡಲಾಗದ ಸಾಧನೆಯನ್ನು ಕಮೂನಿಷ್ಟರು ಸ್ವತಂತ್ರ ಭಾರತದಲ್ಲಿ ಮಾಡಿದ್ದಾರೆ. ಬುದ್ಧಿ ಭೇದ ಮಾಡಿ ಹಾದಿ ತಪ್ಪಿಸುವುದೇ ಅವರ ಕಾರ್ಯತಂತ್ರ. ನಮ್ಮ ಎಲ್ಲ ಸಮಸ್ಯೆಗಳಿಗೆ ನಮ್ಮ ಧರ್ಮವೇ ಕಾರಣ ಎಂದು ನೀತಿಪ್ರಜ್ಞೆಯನ್ನು ಕೆಡಿಸಿದರು. ನಮ್ಮ ಪರಂಪರೆಯ ವಿವೇಕವೆಲ್ಲ ಜೀವ ವಿರೋಧಿಯಾದದ್ದು ಎಂದು ಬರೆದರು. ನಮ್ಮ ಅಜ್ಜ ಅಜ್ಜಿಯರ ಜೀವನ ಪ್ರೀತಿ ಮಾನವ ವಿರೋಧಿಯಾದದ್ದೆಂದು ನಮ್ಮನ್ನೇ ನಂಬಿಸಿದರು. ಭಾರತೀಯವಾದ ಎಲ್ಲವೂ ಕಾಲಬಾಹ್ಯವಾದದ್ದೆಂದು ಪ್ರಚುರಪಡಿಸಿದರು. ಅದಕ್ಕೆ ಬೇಕಾಗಿ ಸುಳ್ಳು ಇತಿಹಾಸವನ್ನು ಬರೆದರು. ನಮ್ಮ ವೇದಗಳು, ಕಾವ್ಯಗಳು, ಪುರಾಣಗಳು ಎಲ್ಲವೂ ತಲೆಕೆಟ್ಟವರ ಅಪಾಲಾಪ, ಅದಕ್ಕೆ ವೈಜ್ಞಾನಿಕ ಸ್ಪರ್ಶವಿಲ್ಲ ಎಂದರು. ಅದನ್ನೇ ಶಿಕ್ಷಣದ ಪಠ್ಯವಾಗಿಸಿದರು. ತೋರಿಕೆಯ ಸಮಾನತೆಯೊಂದೇ ಬದುಕಿನ ಮೌಲ್ಯ ಎಂದು ಬಿಂಬಿಸಿದರು. ಮನೆಯಲ್ಲಿ ಅಪ್ಪ-ಅಮ್ಮನನ್ನು ಅಸಡ್ಡೆಯಿಂದ ನೋಡುವುದು, ಶಾಲೆಯಲ್ಲಿ ಶಿಕ್ಷಕರನ್ನು ಅಗೌರವದಿಂದ ಕಾಣುವುದು, ಸಮಾಜದಲ್ಲಿ ಹಿರಿಯರ ಅಭಿಪ್ರಾಯಗಳನ್ನು ಅಲ್ಲಗಳೆಯುವುದೇ ಪ್ರಗತಿಪರತೆ ಎನ್ನುವುದನ್ನು ರೂಢಿಸಿದರು.

ಹೇಳುವುದಕ್ಕಿದು ಸಾಮ್ಯವಾದ; ಮಾಡಿದ್ದೆಲ್ಲ ವೈಷಮ್ಯವನ್ನು ಹೆಚ್ಚಿಸುವ ಕೆಲಸ. ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕುವುದಕ್ಕೆ ಕ್ರಾಂತಿ ಎಂದು ಕರೆದರು. ನೆಮ್ಮದಿಯ ಸಾಮಾಜಿಕ ಬದುಕನ್ನು ಜಡತ್ವವೆಂದರು. ಅರಾಜಕತೆ, ಅಶಾಂತಿ ಅವರ ಆರಾಧನೆಯ ಸಂಗತಿಗಳು. ಭಾರತದ ಬದುಕಿನ ಶಾಂತಿ ಸಮೃದ್ಧಿಗಳು ನಮ್ಮ ಲೋಕೋತ್ತರ ಶ್ರದ್ಧೆಯನ್ನೇ ಅವಲಂಬಿಸಿವೆ. ಆದ್ದರಿಂದ ಹಿಂದು ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ, ಧ್ವಂಸಗೊಳಿಸುವ ಯೋಜನೆ ಈ ಎಡಬಿಡಂಗಿಗಳದ್ದು. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕೋರಿ ಕೋರ್ಟಿಗೆ ಹೋದವರು ಹಿಂದು ಭಕ್ತರಲ್ಲ, ಅವಕಾಶ ವಂಚಿತ ಮಹಿಳಾ ಭಕ್ತರಲ್ಲ. ಸಮಾಜದ ನೆಮ್ಮದಿಯನ್ನು ಕೆಡಿಸಲು ಕಾರಣ ಹುಡುಕುವ ಶನಿ ಸಂತಾನದವರು. ಕೋರ್ಟಿನ ತೀರ್ಮಾನ ಬಂದಮೇಲೆ ಆ ಅವಕಾಶವನ್ನು ಬಳಸಿಕೊಂಡು ದೇವ ದರ್ಶನಕ್ಕೆ ಮುಂದಾದವರೂ ಶ್ರದ್ಧಾವಂತ ಹಿಂದು ಮಹಿಳೆಯರಲ್ಲ. ಮತ್ತೊಬ್ಬರಿಗೆ ನ್ಯಾಯ ಕೊಡಿಸುವ ಪ್ರಗತಿಪರರೆಂಬ ದಲ್ಲಾಲಿಗಳು. ಅವರ ಈ ಹೋರಾಟಕ್ಕೆ ಬೆಂಬಲವಾದವರು ಎಡಬಿಡಂಗಿ ಮಾಧ್ಯಮಗಳು, ಕೇರಳದ ಎಡಪಂಥೀಯ ಸರಕಾರ ಮತ್ತು ಇಂತಹ ಪ್ರತಿ ಹೋರಾಟಕ್ಕೂ ಬೆಲೆ ನಿಗದಿಮಾಡಿ ಹಣ ನೀಡುವ ಕಾಣದ ಕೈಗಳು.

ಸುಪ್ರಿಂ ಕೋರ್ಟ್ ಹೇಳಿದ್ದು ‘ಶಬರಿಮಲೆ ದೇಗುಲ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಅವಕಾಶ ಸಿಗಲಿ’ ಎಂದು ಮಾತ್ರ. ಹಾಗೆಂದ ಮಾತ್ರಕ್ಕೆ ಅಲ್ಲಿನ ಸಂಪ್ರದಾಯವನ್ನು ಧಿಕ್ಕರಿಸಿ ಒಳನುಗ್ಗಲು ಅನುಮತಿ ನೀಡಿಲ್ಲ. ದೇಗುಲದ ಪಾವಿತ್ರ್ಯವನ್ನು ಹಾಳುಮಾಡಲು ಹೇಳಿಲ್ಲ. ಅಲ್ಲದೇ ಹಿಂದು ಶ್ರದ್ಧಾಕೇಂದ್ರದಲ್ಲಿ ನುಸುಳಲು ಅನ್ಯಮತೀಯರಿಗೆ ನೀಡಿದ ಅನುಮತಿಯೂ ಅದಲ್ಲ. ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಆಸೆಯಿದ್ದರೆ ಅದಕ್ಕೊಂದು ಕ್ರಮವಿದೆ. ೪೧ ದಿನಗಳ ದೇಹದಂಡನೆಯ ವೈಯಕ್ತಿಕ ಶುದ್ಧಿಯ ವ್ರತವಿದೆ. ಅವಕಾಶಕ್ಕಾಗಿ ನ್ಯಾಯಲಯದ ಬಾಗಿಲು ತಟ್ಟಿದರೂ, ದೇವರ ಬಳಿಗೆ ಹೋಗುವಾಗ ಭಕ್ತಿಯಿಂದ ಹೋಗಬೇಕೆ ವಿನಾ ಅಧಿಕಾರ ಸ್ಥಾಪಿಸುವುದಕ್ಕಲ್ಲ. ಪ್ರವೇಶದ ಅಧಿಕಾರ ಸ್ಥಾಪಿಸುವ, ಆ ಮೂಲಕ ದೇವಾಲಯವನ್ನು ಅಪವಿತ್ರಗೊಳಿಸುವ ಅಶ್ರದ್ಧೆಯ ಪ್ರಗತಿಪರರ ಸಂಕಲ್ಪದ ಹಿಂದೆ ಎಡಬಿಡಂಗಿಗಳ ದುರಾಲೋಚನೆ ಎಂಥದಿರಬಹುದು ಎನ್ನುವುದನ್ನು ಮುಂದಿನ ಲೇಖನದಲ್ಲಿ ನೋಡೋಣ.

Image Courtesy : Shtoons

Related posts