Infinite Thoughts

Thoughts beyond imagination

ಬಣ್ಣ ಬದಲಿಸುವ ಗೋಸುಂಬೆಗಳು!

ಬಣ್ಣ ಬದಲಿಸುವ ಗೋಸುಂಬೆಗಳು!

ಎಡಪಂಥೀಯರ ಪ್ರಗತಿಪರ ಚಿಂತೆನೆಯ ವಿಧಾನಕ್ಕೆ ಎಲ್ಲರೂ ಅಚ್ಚರಿಪಡುತ್ತಾರೆ. ಅದರಲ್ಲೂ ಭಾರತದ ಕಮ್ಯುನಿಷ್ಟರ ಛದ್ಮವೇಶಗಳು ಜನರಂಜನೆಯ ಸಂಗತಿಗಳಾಗಿವೆ. ಒಂದು ದಿನ ಇವರೆಲ್ಲ ಗಾಂಧೀವಾದಿಗಳಾಗುತ್ತಾರೆ! ಖಾದಿಯನ್ನು ತೊಟ್ಟು ಹರಿಜನ ಪತ್ರಿಕೆಯಲ್ಲಿ, ಯಂಗ್ ಇಂಡಿಯಾದಲ್ಲಿ, ಗಾಂಧೀಜಿಯವರು ಬರೆದ ವಾಕ್ಯಗಳನ್ನು ಉದ್ಧರಿಸಿ ಅವರು ಮಾತನಾಡುತ್ತಿದ್ದರೆ, ಜೀವನವಿಡೀ ಗಾಂಧೀ ತತ್ವಗಳನ್ನು ಬದುಕಿದವರಿಗೂ ಗಾಂಧೀಜಿ ನಿಜವಾಗಿ ಅರ್ಥವಾದದ್ದು ಈ ಭಾಷಣಕಾರರಿಗೇ ಎನ್ನುವ ನಂಬಿಕೆ ಬರುತ್ತದೆ.

ಮರುದಿನ ಈ ಪ್ರಗತಿಪರರು ಆಹಾರ ಸಾರ್ವಭೌಮತ್ವದ ಬಗ್ಗೆ ಮಾತನಾಡುತ್ತ ವಿಧಾನಸೌಧದೆದುರು ಸಾರ್ವಜನಿಕವಾಗಿ ಗೋ-ಮಾಂಸ ತಿನ್ನುತ್ತಾರೆ. ಇದನ್ನು ತಿನ್ನಬಾರದು, ಇದನ್ನು ತಿನ್ನಬೇಕು ಎಂದು ಹೇಳಲು ಪ್ರಜಾಪ್ರಭುತ್ವ ದೇಶದಲ್ಲಿ ಯಾರಿಗೂ ಅಧಿಕಾರವಿಲ್ಲ ಎಂದು ಅಬ್ಬರಿಸುತ್ತಾರೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳನ್ನೂ ತಿಂದು ಬದುಕುವುದೇ ನಿಜವಾದ ಮಾನವೀಯತೆ ಎಂದು ನಂಬಿಸುತ್ತಾರೆ. ಆಗ, ಕದ್ದ ಆಕಳನ್ನು ಕಡಿದು ಮಾರುವ ಕಟುಕನಿಗೂ ಅನ್ನಿಸುತ್ತದೆ, ನಾನೂ ಪ್ರಗತಿಪರನೇ ಇದ್ದೇನೆ ಎಂದು!

ಇನ್ನೊಂದು ದಿನ ಇದೇ ಜನ ಪರಿಸರವಾದಿಗಳಾಗುತ್ತಾರೆ. ಭೂಮಿಯ ತಾಪಮಾನದ ಏರಿಕೆಯ ಬಗ್ಗೆ ಮನುಷ್ಯ ಸಮಾಜದ ಅತಿ ಆಸೆಯೇ ಕಾರಣ, ನಾವು ಸಂಯಮದಿಂದ ಬದುಕದಿದ್ದರೆ ನಮ್ಮ ಮಕ್ಕಳಿಗೆ ಭವಿಷ್ಯವೇ ಇಲ್ಲ ಎನ್ನುತ್ತಾರೆ. ಸರಳವಾಗಿ ಬದುಕುವುದೊಂದೇ ಸುಸ್ಥಿರವಾದ ಭವಿಷ್ಯಕ್ಕೆ ಆಧಾರ ಎನ್ನುತ್ತಾರೆ. ಸಸ್ಯಾಹಾರದಿಂದ ಪರಿಸರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ, ಮಾಂಸಾಹಾರವನ್ನು ಸಿದ್ಧಪಡಿಸಲು ಪರಿಸರ ನಾಶವಾಗುತ್ತದೆ. ಕಾಡು ಕಡಿದು ನಾಡನ್ನು ಕಟ್ಟಿದ ಕ್ರಮವೇ ಒಂದು ಹಿಂಸೆ, ನಗರ-ನಾಗರಿಕತೆ ಎನ್ನುವ ನಮ್ಮ ವ್ಯವಸ್ಥೆಯೇ ನಿಸರ್ಗ ವಿರೋಧಿಯಾದ ಚಿಂತನೆ, ಹಗಲು ರಾತ್ರಿಗಳೆಂಬ ವ್ಯತ್ಯಾಸವನ್ನೇ ಅಳಿಸಿಹಾಕಿದ ಜೀವ ವಿರೋಧಿ ಸಂಗತಿ ಎಂದು ಹೊಸ ವಿಷಯವನ್ನು ಹೇಳುತ್ತಾರೆ ಮತ್ತು ಈ ಹಾಳಾದ ಪರಿಸರಕ್ಕೆ ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳು, ಅಧಿಕಾರದಲ್ಲಿರುವವರೇ ಕಾರಣ ಎಂದು ಅವರನ್ನೆಲ್ಲ ಭಾಷಣದಲ್ಲಿಯೇ ನೇಣಿಗೇರಿಸುತ್ತಾರೆ. ವಿಶೇಷವೆಂದರೆ ಅವರ ಪರಿಸರ ಪ್ರೀತಿಯ ಸಭೆ ಐಷಾರಾಮಿ ಪಂಚ/ಸಪ್ತ ತಾರಾ ಹೋಟೆಲಿನಲ್ಲಿಯೇ ನಡೆದಿರುತ್ತದೆ!

ಮತ್ತೊಂದು ದಿನ, ಬೆಂಗಳೂರಿನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಬಾರ್‌ಗಳನ್ನು ಮುಚ್ಚಬೇಕೆಂಬ ಸರಕಾರದ ಆಜ್ಞೆಯ ವಿರುದ್ಧ ಉಗ್ರ ಹೋರಾಟಕ್ಕಿಳಿಯುತ್ತಾರೆ. ರಾತ್ರಿಯಿಡೀ ಕುಡಿದು ಕುಣಿಯುವ ಅವಕಾಶ ಬೇಕು. ನೈತಿಕತೆಯನ್ನು ನಮಗೆ ಸರಕಾರ ಕಲಿಸಬೇಕಿಲ್ಲ ಎಂದು ಬೊಬ್ಬಿಡುತ್ತಾರೆ. ಹಗಲಿಡೀ ದುಡಿದ ಮೈ ಮನಸುಗಳಿಗೆ ರಾತ್ರಿಯಿಡೀ ಮನರಂಜನೆ ಬೇಡವೇ ಎಂದು ಗೋಳಾಡುತ್ತಾರೆ. ಕುಡಿದವರು ಗದ್ದಲ ಮಾಡುತ್ತಾರೆ ಎನ್ನುವುದು ಜನರನ್ನು ಅವಮಾನಿಸಿದಂತೆ. ಯಾರೋ ಕೆಲವರು ಗದ್ದಲ ಮಾಡಿದರೆ ಎಲ್ಲರಿಗೂ ಯಾಕೆ ಶಿಕ್ಷೆ? ಎಂದು ಪ್ರಶ್ನಿಸುತ್ತಾರೆ. ರಾತ್ರಿ ಇರುವುದು ಕೇವಲ ನಿದ್ದೆ ಮಾಡುವುದಕ್ಕಲ್ಲ ಕುಡಿದು ಕುಣಿದು ಹಾಡಿ ನಲಿಯುವುದಕ್ಕೆ ಎಂದು ಜೀವ ಸ್ವಾತಂತ್ರ್ಯದ ನವೀನ ಸಿದ್ಧಾಂತ ಮಂಡಿಸುತ್ತಾರೆ.

ಇವರ ಬದುಕಿನಲ್ಲಿ ಭಕ್ತಿ ಶ್ರದ್ಧೆಗಳಿಗೆ ಅವಕಾಶವೇ ಇಲ್ಲದಿದ್ದರೂ ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ, ವಿವೇಕಾನಂದರ ಬಗ್ಗೆ ಬಹಳ ಮಾತನಾಡುತ್ತಾರೆ. ಅಷ್ಟೇ ಅಲ್ಲ, ತಮ್ಮನ್ನು ಬಿಟ್ಟು ಮತ್ಯಾರಿಗೂ ಇವರೆಲ್ಲರ ಬಗ್ಗೆ ಮಾತಾಡುವ ಅಧಿಕಾರವೇ ಇಲ್ಲ ಎನ್ನುವಷ್ಟು ಅಹಂಕಾರ ಅವರಿಗಿದೆ. ಮಾಧ್ಯಮಗಳ ಚರ್ಚೆಯಲ್ಲಿ, ಪತ್ರಿಕೆಯ ಲೇಖನದಲ್ಲಿ, ಪುಸ್ತಕದ ವಿಮರ್ಶೆಯಲ್ಲಿ, ವಿಶ್ವವಿದ್ಯಾಲಯದ ಪಠ್ಯದಲ್ಲಿ ಹೀಗೆ ಎಲ್ಲ ಕಡೆ ಇವರದ್ದೇ ಯಜಮಾನಿಕೆ. ಸರಕಾರದ ವಿರುದ್ಧ ಮಾತಾಡುತ್ತಲೇ ಎಲ್ಲ ಸರಕಾರಿ ಸಕಲ ಸವಲತ್ತುಗಳನ್ನು ಅನುಭವಿಸುವ ಕಲೆ ಇವರಿಗೆ ಕರಗತ. ಒಂದು ರೀತಿ ಮಕರ ಸರೋವರ ನ್ಯಾಯದಂತೆ. ಸರೋವರದಲ್ಲಿ ಮೊಸಳೆ ಇದೆ ಎಂಬ ಕಾರಣದಿಂದ ಸರೋವರಕ್ಕೆ ರಕ್ಷೆ, ಸರೋವರದ ನೀರಿನಲ್ಲಿರುವುದರಿಂದ ಮೊಸಳೆಗೂ ಆಶ್ರಯ. ಈ ಪರಸ್ಪರ ಹೊಂದಾಣಿಕೆಯಲ್ಲಿ ಕಳೆದ ಎಪ್ಪತ್ತು ವರ್ಷ ಎಡ ಪಂಥದವರು ಆರಾಮವಾಗಿ ಬದುಕಿ ಬಂದಿದ್ದಾರೆ. ಮೋದಿಯವರ ಆಡಳಿತದಲ್ಲಿ ಅವರಿಗೆ ಇರಿಸುಮುರುಸು ಆರಂಭವಾಗಿದೆ. ಆದ್ದರಿಂದ ಗದ್ದಲ ಹೆಚ್ಚಾಗಿದೆ.

ಎಡಬಿಡಂಗಿಗಳ ನಾಟಕ ಅದೆಷ್ಟು ರಂಜನೀಯವಾಗಿದೆ ಎಂದರೆ ನನಗೆ ಮಹಾಭಾರತದಲ್ಲಿ ಬರುವ ಕಥೆಯೊಂದು ನೆನಪಾಗುತ್ತದೆ. ಇಲ್ವಲ ವಾತಾಪಿಗಳೆಂಬ ಇಬ್ಬರು ರಕ್ಕಸ ಸಹೋದರರಿರುತ್ತಾರೆ. ಅವರಲ್ಲಿ ಯಾರೇ ಹೋದರೂ ಅವರಿಗೆ ವಿಶೇಷ ಆತಿಥ್ಯ ನೀಡುತ್ತಾರೆ. ಆತಿಥ್ಯದ ಕ್ರಮವೆಂದರೆ ಅಣ್ಣ ಇಲ್ವಲ, ತಮ್ಮ ವಾತಾಪಿಯನ್ನು ಆಡನ್ನಾಗಿ ಪರಿವರ್ತಿಸಿ, ಕಡಿದು ಅಡುಗೆ ಮಾಡಿ ಬಂದ ಅತಿಥಿಗೆ ನೀಡುವುದು. ಬಂದ ಅತಿಥಿ ಉಂಡು ‘ತೃಪ್ತನಾದೆ’ ಎಂದಕೂಡಲೆ ತಮ್ಮನ ಹೆಸರು ಹೇಳಿ "ವಾತಾಪಿ ಹೊರಗೆ ಬಾ" ಎಂದು ಕರೆಯುವುದು. ಹೊಟ್ಟೆಯೊಳಗಿರುವ ವಾತಾಪಿ ಅತಿಥಿಯ ಹೊಟ್ಟೆಯನ್ನು ಸೀಳಿಕೊಂಡು ಹೊರಬರುವುದು. ಹೀಗೆ ಬಂದ ಅತಿಥಿಯನ್ನು ಕೊಂದು ಅಣ್ಣ ತಮ್ಮ ತಿನ್ನುತ್ತಿದ್ದರು. ಒಮ್ಮೆ ಅಗಸ್ತ್ಯ ಮಹರ್ಷಿಗಳು ಇಲ್ವಲನ ಆತಿಥ್ಯ ಸ್ವೀಕರಿಸುತ್ತಾರೆ. ಅಗಸ್ತ್ಯರಿಗೆ ಊಟವಾದ ಮೇಲೆ ಇಲ್ವಲ, ವಾತಾಪಿಯನ್ನು ಕರೆಯಲು ಮುಂದಾಗುತ್ತಾನೆ. ಅದನ್ನು ತಿಳಿದ ಅಗಸ್ತ್ಯರು, 'ವಾತಾಪೀ ಜೀರ್ಣೋ ಭವ‛ ಎನ್ನುತ್ತಾರೆ. ವಾತಾಪಿ ಅಗಸ್ತ್ಯರ ಹೊಟ್ಟೆಯಲ್ಲಿ ಕರಗಿಹೋಗುತ್ತಾನೆ.

ಈ ಎಡಬಿಡಂಗಿಗಳೂ ವಾತಾಪಿ ಇಲ್ವಲರ ನಾಟಕವನ್ನೇ ಮಾಡುತ್ತಿದ್ದಾರೆ. ಹಿಂದು ಸಮಾಜ ಅಗಸ್ತ್ಯ ಮಹರ್ಷಿಯಾಗಿ ಇವರನ್ನು ಜೀರ್ಣಿಸಿಕೊಳ್ಳುವ ಅಗತ್ಯವಿದೆ. ಅದಿಲ್ಲವಾದರೆ ನಮ್ಮೆಲ್ಲ ಶ್ರದ್ಧೆ, ಭಕ್ತಿಗಳನ್ನೂ ಅಳಿಸಿ ನಕ್ಸಲ್ ಹಿಂಸೆಯನ್ನು ಬೆಳೆಸುವ ಈ ಗೋಸುಂಬೆಗಳು ಭಾರತದ ಭವಿಷ್ಯಕ್ಕೆ ಕಂಟಕರಾಗುತ್ತಾರೆ!

Related posts