ಕನಕ ಜಯಂತಿಯ ಶುಭಾಶಯಗಳು!
"ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ....
ನೀ ದೇಹದೊಳಗೊ, ನಿನ್ನೊಳು ದೇಹವೊ...."
ಎಂಬ ಕೀರ್ತನೆಯಿಂದ ಜಗತ್ತಿನ ಕಣ್ಣು ತೆರೆಸಲು ಪ್ರಯತ್ನಿಸಿದ ತಿಮ್ಮಪ್ಪ ನಾಯಕ ಜನ್ಮ ನಾಮಾಂಕಿತ ಶ್ರೀ ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಜೀವನದಲ್ಲಿ ವೈರಾಗ್ಯವನ್ನೇ ಧರಿಸಿದ ಇವರು, ಭಕ್ತಿ ಪಥವನ್ನು ಅನುಸರಿಸಿ ಹಲವಾರು ಕೀರ್ತನೆ ಭಜನೆಗಳನ್ನು ರಚಿಸಿ ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೇಷ್ಠ ಕವಿಪುಂಗವರೆಂದೇ ಕರೆಸಿಕೊಂಡರು.
ಕನಕರು ಕುರುಬ ಜನಾಂಗದಲ್ಲಿ ಹುಟ್ಟಿದರೂ ಪ್ರಾರಂಭದ ವೃತ್ತಿ ಕ್ಷತ್ರಿಯ ಸಮುದಾಯದವರದಾಗಿತ್ತು. ಇವರು, ಮುಂದೆ ಮಧ್ವ-ಬ್ರಾಹ್ಮಣರ ಯತಿಗಳಾದ ವ್ಯಾಸರಾಯರಿಂದ ಪ್ರಭಾವಿತರಾಗಿ ಅವರನ್ನು ಗುರುವಾಗಿ ಸ್ವೀಕರಿಸುತ್ತಾರೆ. ಹೀಗೆ ವಿವಿಧ ಸಮುದಾಯಗಳ ನಡುವೆ ಬಾಳಿ ಬೆಳಗಿದ ಕನಕರು ನಮ್ಮೆಲ್ಲರ ಹೆಮ್ಮೆಯ ಆಸ್ತಿ!
ವೇದ ಉಪನಿಷತ್ತು, ವೈಷ್ಣವ ಧರ್ಮ ಮುಂತಾದವುಗಳ ಬಗ್ಗೆ ಕನಕದಾಸರು ಅಪಾರ ಜ್ಞಾನ ಸಂಪಾದಿಸಿದ್ದರು. ಅವರ ಕೀರ್ತನೆ ಮತ್ತು ಉಗಾಭೋಗಗಳಿಂದ ಜನತೆಯಲ್ಲಿ ಜಾತಿಯ ಮೇಲುಕೀಳುಗಳನ್ನು ಹೋಗಲಾಡಿಸುವ ಬಗ್ಗೆ ಅಂದಿನ ಕಾಲದಲ್ಲೇ ದೊಡ್ಡ ಜಾಗೃತಿ ಉಂಟುಮಾಡಿದ್ದರು.
ಜಾತಿ, ಪಂಗಡವೆನ್ನುವ ಭೇಧವಿಲ್ಲದ ಸಂಸ್ಕೃತಿ ನಮ್ಮದಾಗಿತ್ತು. ನಮ್ಮ ವಿಶಾಲ ರಾಷ್ಟ್ರದಲ್ಲಿ, ಈ ಜಾತಿಯ ಮೇಲು-ಕೀಳೆನ್ನುವ ಕಿಡಿಯನ್ನು ಹಚ್ಚಿದವರು ಬ್ರಿಟೀಷರು ಮತ್ತು ಅದಕ್ಕಿಂತ ಮೊದಲಿಗೆ ಮುಸಲ್ಮಾನರು. ನಮ್ಮಲ್ಲಿದ್ದ ಏಕತೆಯ ಮನೋಭಾವವನ್ನು ಸಹಿಸಲಾಗದ ಬ್ರಿಟೀಷರು, ಕೆಲ ಸಮುದಾಯದವರನ್ನು ತಮ್ಮ ಕಡೆಗೆ ಸೆಳೆದು, ಇನ್ನು ಕೆಲವರನ್ನು ಅವರ ವಿರುದ್ಧ ಎತ್ತಿಕಟ್ಟುವ ಸಮಾಜ ಒಡೆಯುವ ಕೆಲಸ ಮಾಡಿದರು. ಅವರು ಮೇಲು ಜಾತಿಯವರು ಹಾಗು ಉಳಿದವರು ಕೀಳೆನ್ನುವ ಕಿಚ್ಚನ್ನು ಹುಟ್ಟಿಸಿದರು. ಅಲ್ಲಿಂದ ಶುರುವಾದ ಜಾತಿಬೇಧದ ಕಿಡಿ, ಮುಂದೆ ನಮ್ಮದೇ ವ್ಯವಸ್ಥೆಯಲ್ಲಿ ಇಂದಿಗೂ ಮುಂದುವರಿದಿದ್ದು, ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸುಡುತ್ತಿದೆ.
ಮೇಲು-ಕೀಳು ಎಂದು ಅರ್ಥವಿಲ್ಲದ ಹೋರಾಟ ನಡೆಸುತ್ತಿರುವ ಜನರಿಗೆ ಕನಕದಾಸರು ಅವರ ರಾಮಧಾನ್ಯ ಚರಿತೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಮೇಲು ಜಾತಿ ಎನ್ನುವವರನ್ನು ಅಕ್ಕಿಗೆ ಹೋಲಿಸಿ, ಕೆಳ ಜಾತಿ ಎಂದು ಪರಿಗಣಿಸಲ್ಪಡುತ್ತಿದ್ದವರನ್ನು ರಾಗಿಗೆ ಹೋಲಿಸಿ ಎರಡು ಧಾನ್ಯಗಳಿಂದ ಸಮಾಜಕ್ಕೆ ಒಂದು ಸಂದೇಶವನ್ನು ಕೊಟ್ಟರು. ಒಂದು ದಿನ ಅಕ್ಕಿ ಹಾಗು ರಾಗಿ ಶ್ರೀರಾಮನ ಎದುರು ತಮ್ಮ ತಮ್ಮ ಮೇಲರಿಮೆಯನ್ನು ತೋರಿಸಲು ಬರುತ್ತವೆ. ಅವುಗಳ ವಾದವನ್ನು ಆಲಿಸಿದ ರಾಮನು ಇಬ್ಬರನ್ನೂ ಬಂಧಿಸುವಂತೆ ಆಜ್ಞೆ ನೀಡುತ್ತಾನೆ. ತಾನು ಮೇಲೆನ್ನುತ್ತಿದ್ದ ಅಕ್ಕಿ ದಿನಕಳೆದಂತೆ ಕಾರಾಗೃಹದಲ್ಲಿ ಕೊಳೆಯುತ್ತಿದ್ದರೆ, ಆತ್ತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದ ರಾಗಿ ಶ್ರೀರಾಮನ ಆಶೀರ್ವಾದಕ್ಕೆ ಪಾತ್ರವಾಗುತ್ತದೆ. ರಾಗಿ ಶ್ರೇಷ್ಟ ಅಥವಾ ಅಕ್ಕಿ ಕೀಳು ಎಂದು ತರವಲ್ಲ ಅಂದರು ದಾಸ ಶ್ರೇಷ್ಠ ಕನಕರು. ಅಕ್ಕಿ ಮತ್ತು ರಾಗಿಗೆ ಅದರದೇ ಆದ ಶ್ರೇಷ್ಟತೆ ಇದ್ದೆ ಇರುತ್ತದೆ. ತನ್ನತ್ವವನ್ನು ತಿಳಿದು ತಾನು ಬದುಕಿದ್ದರೆ ಅಕ್ಕಿಗೆ ಕೊಳೆಯುವ ಸ್ಥಿತಿ ಬರುತ್ತಿರಲಿಲ್ಲ. ಇದು ಮನುಷ್ಯರಿಗೂ ಅನ್ವಯವಾಗುತ್ತದೆ. ಜಗತ್ತಿನಲ್ಲಿ ಯಾವ ವೃತ್ತಿಯೂ ಮೇಲಲ್ಲಾ, ಅಥವಾ ಯಾವುದೂ ಕೀಳಲ್ಲ. ನಮ್ಮ ವೃತ್ತಿಯ ಪ್ರಕಾರ ಸಹಬಾಳ್ವೆಯಿಂದ ನಾವು ಬದುಕಿದರೆ, ಯಾವ ಜಾತಿಯೆಂಬ ಕಿಡಿ ನಮ್ಮನ್ನು ಸುಡಲಾರದು.
ಇದರಿಂದ ನಾವು ತಿಳಿಯಬೇಕಾಗಿರುವುದು, ಜಾತಿಯನ್ನುವುದು ಹುಟ್ಟಿನಿಂದಲ್ಲ ಹಾಗೂ ಅದರ ಭೇದ-ಭಾವ ನಮ್ಮ ಸಂಸ್ಕೃತಿಯಲ್ಲಿ ಇಲ್ಲ.
ಯಾರಿಗೆ ಅವರ ರಕ್ತದ ಪರಿಚಯವಿರುತ್ತದೆಯೋ ಅವರು ಕುತಂತ್ರಿಗಳು ಬೀಸುವ ಜಾತಿಯ ಬಲೆಗೆ ಎಂದಿಗೂ ಬೀಳುವುದಿಲ್ಲ.
ನಾವು ಎಂದಿಗೆ ಕನಕದಾಸರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆಯೋ, ಅಂದು ಕನಕದಾಸ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆ.
ಕನಕ ಒಂದು ನಿರ್ದಿಷ್ಟ ಸಮುದಾಯವನ್ನು ಮೀರಿ ಎಲ್ಲ ಸಮುದಾಯದವರಿಗೂ ಪ್ರಾತಃಸ್ಮರಣೀಯ ಮೇರು ಸಂತ!
ಕನಕ ಜಯಂತಿಯ ಶುಭಾಶಯಗಳು!