Infinite Thoughts

Thoughts beyond imagination

Happy Indian Navy Day...!!

ಆ ತ್ರಿಶೂಲದೇಟು... ಪಾಕಿಸ್ತಾನ್ ಸೈನ್ಯದ ಬುಡಕ್ಕೆ ಬಿದ್ದಿತ್ತು...
ಭಾರತದ ನೌಕಾಪಡೆಯ ದಾಳಿಗೆ ಕರಾಚಿ ಕರಟಿ ಹೋಗಿತ್ತು...

Happy Indian Navy Day...!!

ಅವತ್ತು ಡಿಸೆಂಬರ್ ನಾಲ್ಕನೇ ತಾರೀಕು... ೧೯೭೧ನೇ ಇಸವಿ. ಬಾಂಗ್ಲಾ ವಿಮೋಚನೆಗಾಗಿ ಭಾರತ ಪಾಕಿಸ್ತಾನದ ಮಧ್ಯೆ ಹಿಂದಿನ ದಿನವಷ್ಟೆ ಯುದ್ಧ ಶುರುವಾಗಿತ್ತು. ಪಾಕಿಸ್ತಾನೀ ನೌಕಾಪಡೆ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿತ್ತು. ಆಗ ನಮ್ಮ ನೌಕಾಸೇನೆಯ ಮುಖ್ಯಸ್ಥರಾಗಿದ್ದ ಸರ್ದಾರೀಲಾಲ್ ಮಾಥುರ್ ದಾಸ್ ನಂದಾ ಅಪಾಯದ ಮುನ್ಸೂಚನೆಯರಿತು, ಪಾಕಿಸ್ತಾನಕ್ಕಿಂತಲೂ ಮೊದಲೇ ಭಾರತವೇ ದಾಳಿ ಮಾಡುವ ಯೋಜನೆ ರೂಪಿಸಿದರು. ಪಾಕಿ ನೌಕಾಪಡೆಯ ಹೆಡ್ ಕ್ವಾರ್ಟರ್ಸ್ ಕರಾಚಿ ಬಂದರಿನಲ್ಲಿದ್ದುದರಿಂದ, ಅದರ ಮೇಲೆಯೇ ದಾಳಿ ನಡೆಸಿ ನಾಶ ಮಾಡಿದರೆ, ಅಲ್ಲಿಗೆ ಪಾಕಿಸ್ತಾನದ ಬಲ ಸಂಪೂರ್ಣ ಕುಗ್ಗುತ್ತದೆ ಎಂಬುದನ್ನು ಅರಿತಿದ್ದ ಅಡ್ಮಿರಲ್ ನಂದಾ ಅದಕ್ಕಾಗಿ ಒಂದು ಅಭೂತಪೂರ್ವ ತಂತ್ರ ರೂಪಿಸಿದರು. ಭಾರತೀಯ ನೌಕಾಸೇನೆಯ ಸೋವಿಯತ್ ರಷ್ಯಾ ನಿರ್ಮಿತ ಸ್ಟಿಕ್ಸ್ ಕ್ಷಿಪಣಿಗಳಿದ್ದ ಮೂರು ಮಿಸೈಲ್ ಬೋಟುಗಳನ್ನು ಕಾರ‍್ಯಾಚರಣೆಗೆ ನಿಯೋಜಿಸಿದರು.

ರಾತ್ರಿ ಕತ್ತಲ್ಲಲಿ ಕರಾಚಿ ಬಂದರಿನ ಬಳಿ ಸದ್ದಿಲ್ಲದೆ ತೆರಳಿದ ಭಾರತೀಯ ಮಿಸೈಲ್ ಬೋಟುಗಳು ನಡೆಸಿದ ದಾಳಿಗೆ ಪಾಕಿಸ್ತಾನದ ನಾಲ್ಕು ಯುದ್ಧ ನೌಕೆಗಳು ಪಿ.ಎನ್.ಎಸ್.ಖೈಬರ್, ಪಿ.ಎನ್.ಎಸ್. ಶಹಜಾನ್, ಪಿ.ಎನ್.ಎಸ್. ಮುಹಾಫಿಝ್ಮತ್ತು ಪಿ. ಎನ್. ಎಸ್. ಟಿಪ್ಪು ಸುಲ್ತಾನ ಸ್ಪೋಟಗೊಂಡು ಮುಳುಗಿದವು. ಪಾಕಿ ಸೈನ್ಯಕ್ಕೆ ಮದ್ದುಗುಂಡು ಹೊತ್ತು ತಂದಿದ್ದ ಎಂ.ವಿ.ವೀನಸ್ ಎಂಬ ಹಡಗು ಕೂಡಾ ಸ್ಪೋಟಿಸಿ ಅಲ್ಲೋಲಕಲೋಲ ಉಂಟಾಯಿತು. ಅಡ್ಮಿರಲ್ ನಂದಾಗೆ ಕರಾಚಿ ಬಂದರಿನ ಇಂಚಿಂಚು ಜಾಗವೂ ಅಂಗೈ ರೇಖೆಯಷ್ಟೆ ಸಷ್ಟ. ಹಾಗಾಗಿ ಅವರ ತಂತ್ರದ ಪ್ರಕಾರ ಕರಾಚಿ ಬಂದರಿನಲ್ಲಿದ್ದ ಪೆಟ್ರೋಲ್ ದಾಸ್ತಾನಿದ್ದ ಟ್ಯಾಂಕರ್‌ಗಳ ಮೇಲೂ ಕ್ಷಿಪಣಿ ದಾಳಿ ನಡೆಯಿತು. ದಾಳಿಗೆ ತೆರಳಿದ್ದು ಮೂರೇ ಮಿಸೈಲ್ ಬೋಟುಗಳು! ಹಾರಿಸಿದ್ದು ಆರೇ ಕ್ಷಿಪಣಿ! ಆದರೆ ಕರಾಚಿ ಬಂದರಿನಲ್ಲಿದ್ದ ಪಾಕ್ ನೌಕಾಪಡೆಯ ಹೆಡ್ ಕ್ವಾರ್ಟರ್ಸ್ ಸಂಪೂರ್ಣ ಧ್ವಂಸವಾಯಿತು. ಕರಾಚಿ ಬಂದರು ಮೂರುದಿನಗಳ ಕಾಲ ಉರಿದು ಕರಟಿ ಹೋಯಿತು....! 

ಇದು ಭಾರತೀಯ ನೌಕಾಪಡೆಯ ಪಾಲಿನ ಅಮೋಘ ಜಯ. ಹಾಗಾಗಿಯೇ ಡಿಸೆಂಬರ್ ನಾಲ್ಕನೇ ತಾರೀಕು... ಭಾರತೀಯರೆಲ್ಲರೂ ಹೆಮ್ಮೆ ಪಡುವ 'ಇಂಡಿಯನ್ ನೇವೀ ಡೇ' 

ಅಂದಹಾಗೆ ಅಡ್ಮಿರಲ್ ನಂದಾ ಈ ಕಾರ‍್ಯಾಚರಣೆಗೆ ಇತ್ತ ಹೆಸರು "ಆಪರೇಷನ್ ಟ್ರೈಡೆಂಟ್"...... ಟ್ರೈಡೆಂಟ್ ಅಂದರೆ ತ್ರಿಶೂಲ ಅಂತ ಅರ್ಥ..!!

Related posts