Infinite Thoughts

Thoughts beyond imagination

ಬೆಂದು ಅರಳಿದ ‘ಭಾರತ ರತ್ನ’

ಬೆಂದು ಅರಳಿದ ‘ಭಾರತ ರತ್ನ’

“ನನ್ನ ಕಾರ್ಯಸೂತ್ರದ ಮೂಲವಿರುವುದು ಧರ್ಮದಲ್ಲಿ.  ನಾನದನ್ನು ಕಲಿತಿರುವುದು ನನ್ನ ಗುರು ಬುದ್ಧ ನೀಡಿರುವ ಶಿಕ್ಷಣದಿಂದ.  ನನ್ನ ಈ ಕಾರ್ಯಸೂತ್ರದಲ್ಲಿ ಉಚ್ಚಸ್ಥಾನವಿರುವುದು ಬಂಧುತ್ವಕ್ಕೆ.  ಬಂಧು ಭಾವವಿರುವಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗೆ ಚ್ಯುತಿ ಬರುವುದಿಲ್ಲ.  ಬಂಧುತ್ವವು ಮಾನವೀಯತೆಗೆ ಪರ್ಯಾಯ ಪದವಾಗಿದೆ.   ನಾನು ಧರ್ಮದ್ವೇಷಿ ಅಲ್ಲ; ನನ್ನ ಸಂಪರ್ಕಕ್ಕೆ ಬಂದಿರುವವರಿಗೆ ಧರ್ಮದ ಬಗ್ಗೆ ನನಗಿರುವ ಶ್ರದ್ಧೆ ಏನೆಂಬುದು ಚೆನ್ನಾಗಿ ತಿಳಿದೇ ಇದೆ.  ಕೇವಲ ಅರ್ಥದಿಂದಾಗುವುದು ಅನರ್ಥವೇ.  ಅರ್ಥದೊಂದಿಗೆ ಧರ್ಮವೂ ಇರಬೇಕು.  ನಾವು ನಮ್ಮ ಮನಗಳನ್ನು ಪವಿತ್ರಗೊಳಿಸಬೇಕಾಗಿದೆ.  ಸದ್ಗುಣಗಳನ್ನು ಆಕರ್ಷಿಸಬೇಕಾದ ಅಗತ್ಯವಿದೆ.  ಈ ರೀತಿಯಲ್ಲಿ ನಾವು ಧಾರ್ಮಿಕರಾಗುವ ಅವಶ್ಯಕತೆಯಿದೆ.  ಶೀಲವು ಧರ್ಮದ ಅತಿ ಮಹತ್ವದ ಮುಖ.  ನಾನೋರ್ವ ಹಿಂದು ಧರ್ಮದ ಶತ್ರು-ವಿಧ್ವಂಸಕ ಇತ್ಯಾದಿ ಮಾತುಗಳು ನನ್ನನ್ನು ಟೀಕಿಸುವವರು ಹೇಳುವಂತಹವು.   ಆದರೆ ನಾನು ಹಿಂದು ಸಮಾಜವನ್ನು ಉಳಿಸಿದವನು ಎಂದು ಜನರು ತಿಳಿಯುವಂತಹ ದಿನಗಳೂ ಮುಂದೆ ಬರಲಿವೆ ಹಾಗೂ ಆಗ ಅವರೇ ನನಗೆ ಆಭಾರ ಸಲ್ಲಿಸಲ್ಲಿದ್ದಾರೆ”

ಇವು, ೧೯೫೦ರ ಜನವರಿ ೧೧ರಂದು ಮುಂಬೈಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಆಡಿದ ಮಾತುಗಳು.  ವರ್ತಮಾನದ ಕಷ್ಟ ಸುಖಗಳನ್ನು ಮೀರಿ ಒಂದು ದೇಶದ ಭವ್ಯ ಭವಿಷ್ಯಕ್ಕಾಗಿ ದುಡಿಯುವ ದ್ರಷ್ಟಾರರು ಮಾತ್ರ ಇಂತಹ ಮಾತಾನಾಡಬಲ್ಲರು.  ಭಾರತದಲ್ಲಿರುವ ಅಸ್ಪೃಶ್ಯ ಬಂಧುಗಳಿಗೆ ಸಾಮಾಜಿಕ ಗೌರವ, ಶೈಕ್ಷಣಿಕ ಉನ್ನತಿ, ರಾಜಕೀಯ ಸ್ಥಾನ ಮಾನಗಳನ್ನು ದೊರಕಿಸಿಕೊಡುವುದರ ಮೂಲಕ ಸಮಗ್ರ ಭಾರತದ ವಿಕಾಸವನ್ನು ಸಾಧಿಸುವುದು ಅವರ ಧ್ಯೇಯವಾಗಿತ್ತು.  

ತಾನು ಅನುಭವಿಸಿದ ಅವಮಾನ ಸಮಾಜದಲ್ಲಿ ಯಾರಿಗೂ ಬಾರದಿರಲಿ ಎನ್ನುವ ಅವರ ಸಂಕಲ್ಪವೇ ಅತ್ಯಂತ ಮಾನವೀಯವಾದದ್ದು.  ಪ್ರತಿಕಾರ ಮನೋಭಾವವಿಲ್ಲದ ಪ್ರಗತಿಪರತೆ ಆತ್ಮೋನ್ನತೆ ಸಾಧಿಸುವುದಿಲ್ಲ.  ಪ್ರತಿಭಟನೆ ಎಷ್ಟೇ ತೀವ್ರವಾಗಿದ್ದರೂ ಒಂದಿನಿತೂ ದ್ವೇಷವಿಲ್ಲದ ಹೃದಯವಂತಿಕೆ.  ಇದನ್ನು ಕಂಡೇ  ಪೂ.ಗುರೂಜಿಯವರು ಅಂಬೇಡ್ಕರ್ ಕುರಿತು ಹೇಳಿದ್ದು; “ಶ್ರೀ ಶಂಕರಾಚಾರ್ಯರ ಕುಶಾಗ್ರ ಬುದ್ಧಿಮತ್ತೆ ಹಾಗೂ ಭಗವಾನ್ ಬುದ್ಧನ ಪರಮಕಾರುಣ್ಯಪೂರ್ಣ ಉದಾರ ಹೃದಯ- ಇವುಗಳ ಸಂಗಮವಾದಾಗಲೇ ಭಾರತ ನಿಜವಾಗಿ ಉದ್ಧಾರವಾಗಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದುಂಟು.  ಬೌದ್ಧಮತವನ್ನು ಸ್ವೀಕರಿಸಿ ಪುರಸ್ಕರಿಸುವ ಮೂಲಕ ಡಾ|| ಅಂಬೇಡ್ಕರ್‌ರು ಸ್ವಾಮೀಜಿ ತೋರಿದ ದಾರಿಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ ಮುಂದಿರಿಸಿದ್ದಾರೆ.” ತಮ್ಮ ಬಾಲ್ಯದ ಕಹಿ ಪ್ರಸಂಗಗಳನ್ನು ಸ್ಮರಿಸುತ್ತ ಬಾಬಾ ಸಾಹೇಬರು ಹೇಳುತ್ತಿದ್ದುದು: “ಓರ್ವ ಅಸ್ಪೃಶ್ಯನಾಗಿದ್ದುದರಿಂದ ಅದಕ್ಕೆ ಸಂಬಂಧಿಸಿದ ಎಲ್ಲ ವಿಧದ ಅವಮಾನ, ಅಗೌರವಗಳ ಅನುಭವ ನನಗಿದೆ.  ಶಾಲೆಯಲ್ಲಿದ್ದಾಗ ಇತರ ಸಹಪಾಠಿಗಳ ಜತೆ ಕೂರುವಂತಿರಲಿಲ್ಲ.  ನನ್ನನ್ನು ಕೂಡಿಸುತ್ತಿದ್ದುದು ಪ್ರತ್ಯೇಕವಾಗಿ ಒಂದು ಮೂಲೆಯಲ್ಲಿ.  ನಾನು ಕೂಡುತ್ತಿದ್ದ ಗೋಣಿ ತಾಟನ್ನು ಶಾಲೆಯ ಆಳು ಸಹ ಮುಟ್ಟುತ್ತಿರಲಿಲ್ಲ.  ಸವರ್ಣೀಯರ ಮಕ್ಕಳು ಬಾಯಾರಿದಾಗ ನಲ್ಲಿ ಬಳಿ ಹೋಗಿ ನೀರು ಕುಡಿಯಬಲ್ಲವರಾಗಿದ್ದರು. ಅವರಿಗಾದರೆ ಅಧ್ಯಾಪಕರಿಂದ ಅನುಮತಿ ಪಡೆಯುವುದಷ್ಟೇ ಸಾಕಾಗಿತ್ತು.  ಆದರೆ ನನಗೆ ಹಾಗಲ್ಲ. ಬಾಯಾರಿದರೂ ನಾನು ನಲ್ಲಿಯನ್ನು ಮುಟ್ಟುವಂತಿರಲಿಲ್ಲ.  ಅಧ್ಯಾಪಕರ ಅನುಮತಿಯಷ್ಟೆ ಸಾಕು ಎಂಬುದು ನನಗೆ ಅನ್ವಯವಾಗುವಂತಹ ಸಂಗತಿಯಾಗಿರಲಿಲ್ಲ.  ಶಾಲೆಯ ಆಳು ಸಹ ನನ್ನ ಜತೆ ಬರಬೇಕಾಗುತ್ತಿತ್ತು.  ಕಾರಣವೆಂದರೆ ನಲ್ಲಿ ತಿರುಗಿಸಬಹುದಾದವರು ಸವರ್ಣೀಯರು ಮಾತ್ರ.  ನನಗಾಗಿ ಅದನ್ನವರು ತೆರೆದುಕೊಟ್ಟಲ್ಲಿ ಮಾತ್ರ ನನಗೆ ನೀರು ಕುಡಿಯಲು ಅವಕಾಶ.  ಹೀಗಾಗಿ ಅಧ್ಯಾಪಕರ ಸೂಚನೆಯಂತೆ ಆಳು ಬಂದು ಬೇರೆ ಯಾವ ಸಹಪಾಠಿಯೂ ಅಲ್ಲ- ನನ್ನ ಸಲುವಾಗಿ ನಲ್ಲಿ ತಿರುಗಿಸಿ ನೀರು ಬಿಡುತ್ತಿದ್ದ.  ನಮ್ಮ ಮನೆಯಲ್ಲೂ ನನ್ನ ಬಟ್ಟೆ ಒಗೆಯುತ್ತಿದ್ದವಳು ನನ್ನ ಅಕ್ಕನೇ.  ನಾವು ಮನೆ ಕೆಲಸಕ್ಕಾಗಿ ಆಳು ಇರಿಸಿಕೊಳ್ಳುವಷ್ಟು ಸ್ಥಿತಿವಂತರೇನೋ ಆಗಿದ್ದೆವು, ಆದರೆ ಅಸ್ಪೃಶ್ಯರೆಂಬ ಕಾರಣಕ್ಕಾಗಿ ನಮ್ಮಲ್ಲಿ ಆಳಾಗಿ ಬರಲು ಯಾರೂ ತಯಾರಿರಲಿಲ್ಲ.  ತಲೆಗೂದಲು ಬೆಳೆದಾಗಲೂ ನಾನೆದುರಿಸುತ್ತಿದ್ದುದು ಇದೇ ಸಮಸ್ಯೆ. ನನ್ನ ಕೂದಲು ಕತ್ತರಿಸಲು ಯಾವ ಕ್ಷೌರಿಕನೂ ಒಪ್ಪುತ್ತಿರಲಿಲ್ಲ.  ಹೀಗಾಗಿ ನಾವು ಸತಾರಾದಲ್ಲಿದ್ದಾಗ ಈ ಕೆಲಸವನ್ನು ಮಾಡುತ್ತಿದ್ದವರು ನನ್ನ ಅಕ್ಕಂದಿರೇ.  ಈ ಕೆಲಸದಲ್ಲಿ ಕ್ರಮೇಣ ಅವರು ಪರಿಣತರೂ ಆದರು.” ( ಭಾ.ಕೃ.ಕೇಳ್ಕರ್ ಬರೆದ ‘ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್’ ಪುಸ್ತಕದ ಪುಟ ೨೨)

ಮುಂದೆ ಅತ್ಯುತ್ತಮ ವಿದ್ಯಾರ್ಥಿಯಾಗಿ ಸ್ನಾತಕ ಪದವಿ ಪಡೆದು ಉದ್ಯೋಗ ಆರಂಭಿಸಿದಾಗಲೂ ಇಂಥದೇ ಅನುಭವ ಅವರನ್ನು ಕಾಡಿದೆ.  ಜೀವನದ ಪ್ರತಿ ಕ್ಷಣದಲ್ಲಿಯೂ ಅಸ್ಪೃಶ್ಯತೆಯ ಭೂತ ಅವರನ್ನು ಬೆನ್ನಟ್ಟಿಯೇ ಇರುತ್ತಿತ್ತು.  ಈ ಅವಮಾನಗಳನ್ನು ಸಹಿಸುತ್ತಲೇ ಬೆಳೆದ ಅಂಬೇಡ್ಕರವರು, ಸುತ್ತಲಿನ ಸಮಾಜದ ಎಲ್ಲರನ್ನೂ ಪ್ರೀತಿಸುವ, ಎಲ್ಲರ ಏಳಿಗೆಗಾಗಿ ದುಡಿಯುವ ಸಂಕಲ್ಪ ಮಾಡಿದರು.  ಅವರ ಆತ್ಮ ವಿಕಾಸದ ಹಂಬಲಕ್ಕೆ, ಮಾನವೀಯ ಪ್ರೀತಿಯ ಎತ್ತರಕ್ಕೆ ಬೇರೆ ಪ್ರಮಾಣ ಬೇಕೆ?  ಬಾಬಾ ಸಾಹೇಬರ ಇಡೀ ಬದುಕು ಅಗ್ನಿದಿವ್ಯ.  ಅವಮಾನದಲ್ಲಿ ಬೇಯುತ್ತಲೇ ಬೆಳೆದರೂ ಅರಳಿ ಅನ್ನವಾದ ಅವರ ಬದುಕಿಗೆ ಶತ ಶತ ನಮನಗಳು.  ಅವರು ಇಡೀ ಭಾರತದ ಕಣ್ಣು ತೆರೆಸಿದವರು.  ಅಭಿಜಾತ ಭಾರತ ರತ್ನ.  ಆದರೆ ಅವರನ್ನು ಭಾರತ ರತ್ನ ಎಂದು ಕರೆದು ಗೌರವಿಸಿದ್ದು ಅವರ ನಿಧನದ ಮೂರೂವರೆ ದಶಕದ ನಂತರ!  ತಾವು ಬದುಕಿದ್ದಾಗಲೇ ತಮಗೇ ಭಾರತ ರತ್ನ ಕೊಟ್ಟುಕೊಂಡ ಅಧಿಕಾರಸ್ಥರಿಗೆ ಬಾಬಾ ಸಾಹೇಬರ ನೆನಪಾಗಲಿಲ್ಲ ಯಾಕೆ?!

ಮುಂದಿನ ಲೇಖನಗಳಲ್ಲಿ, ಬಾರತರತ್ನ ಬಾಬಾಸಾಹೇಬ ಅಂಬೇಡ್ಕರರ ಬದುಕಿನ ಘಟನೆಗಳನ್ನೂ, ಚಿಂತನೆಯ ಮೊನಚನ್ನೂ ನೆನಪುಮಾಡಿಕೊಳ್ಳುತ್ತಲೇ ಮೇಲಿನ ಪ್ರಶ್ನೆಗೂ ಉತ್ತರ ಹುಡುಕೋಣ.

Related posts