Infinite Thoughts

Thoughts beyond imagination

ಹೆತ್ತು-ಹೊತ್ತು ಸಲಹಿದವಳ ನೋವ ನೆನೆವ ಹೊತ್ತು

या देवी सर्व-भूतेषु मातृ-रूपेण संस्थिता
नमः तस्यै नमः तस्यै नमः तस्यै नमो नमः

ಲೋಕದ ಸಮಸ್ತ ಚರಾಚರಗಳಲ್ಲೂ ತಾಯಿಯ ರೂಪದಲ್ಲಿ ಸ್ಥಿತಳಾಗಿರುವ ದೇವತೆಗೆ ನಾನು ಶಿರಬಾಗಿ ನಮಿಸುತ್ತೇನೆ, ವಂದಿಸುತ್ತೇನೆ,ಪ್ರಾರ್ಥಿಸುತ್ತೇನೆ ಅಂತ ಶ್ಲೋಕದ ಅರ್ಥ.

ಎಲ್ಲವನ್ನೂ ಮಾತೃ ರೂಪದಲ್ಲೇ ಕಾಣುವ ಭಾರತೀಯ ದೃಷ್ಟಿ ಕೋನದ ಪ್ರತಿರೂಪ ಶ್ಲೋಕ. ಬಾಲ್ಯದಿಂದ್ಲೇ ಭಾರತೀಯ ಸಂಸ್ಕೃತಿಯ ಪಾಠ ಹೇಳಿಸಿಕೊಂಡು ಬೆಳೆದ ನನ್ನಂಥವರಿಗೆ ಇದು ಸಹಜವಾಗಿಯೇ ರಕ್ತಗತವಾಗಿದೆ. ನಮ್ಮನ್ನು ಹೊತ್ತು ಹೆತ್ತು ಸಲಹಿದ ತಾಯಿ ದೇವರಿಗೆ, ನಮ್ಮನ್ನು ಪೊರೆಯುವ ತಾಯಿನಾಡಿಗೆ ಒಂಚೂರು ನೋವಾದ್ರೂ ನನ್ನಂಥವರು ವಿಲವಿಲ ಅಂಥ ಒದ್ದಾಡಿ ಬಿಡುತ್ತೇವೆ. ಹೃದಯವೇ ಹಿಂಡಿಹೋದಂತಾಗುವ ಪರಿಸ್ಥಿತಿ ಏರ್ಪಟ್ಟಾಗ ಭಾವನೆಗಳು ಹಿಡಿತಕ್ಕೆ ಸಿಗುವುದು ಕೊಂಚ ಕಷ್ಟವೇ. ಜನನಿ ಮತ್ತು ಜನ್ಮಭೂಮಿಯ ವಿಷಯ ಬಂದಾಗ ರಾಜಿಯಾಗೋದು ನನಗಂತೂ ಅಸಾಧ್ಯವಾದ ಮಾತು. ಅದು ನನ್ನ ರಕ್ತಕ್ಕಂಟಿದ ಗುಣ.

अपि स्वर्णमयी लङ्का मे लक्ष्मण रोचते जननी जन्मभूमिश्च स्वर्गादपि गरीयसी-

ರಾಮಾಯಣದಲ್ಲಿ ರಾವಣ ಸಂಹಾರವಾದ ನಂತರ ತನ್ನ ವಾನರ ಸೇನೆಯೊಂದಿಗೆ ವಿಭೀಷಣನ ಆಹ್ವಾನದ ಮೇರೆ ಲಂಕೆ ಪ್ರವೇಶಿಸುವ ಹೊತ್ತಿಗೆ ರಾಮ ಹೇಳಿದ ಮಾತುಗಳಿವು - " ಹೊತ್ತಿನಲ್ಲಿ ಸ್ವರ್ಣಮಯವಾದ ಲಂಕೆಯೂ ಕೂಡಾ ನನ್ನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ಲಕ್ಷ್ಮಣಾ... ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಶ್ರೇಷ್ಠ". ವಾಕ್ಯ ಪ್ರತಿಯೊಬ್ಬ ಭಾರತೀಯನ ಮನಸಿನಲ್ಲೂ ಅಚ್ಚೊತ್ತಿದಂತೆ ಕೂತಿದೆ. ಹಾಗಾಗಿ ಭಾರತೀಯರಿಗೆ ಮಾತೃಭಕ್ತಿ ಮತ್ತು ಮಾತೃಭೂಮಿಭಕ್ತಿ ಎಂಬುದು ದೈವದತ್ತವಾಗಿಯೇ ಬಂದಿರುವಂಥ ಶಕ್ತಿ.

ವಯೋವೃದ್ಧೆಯಾದ ಹೆತ್ತಮ್ಮ ಸಹಿಸಲಸಾಧ್ಯ ನೋವಿನಲ್ಲಿ ನರಳುತ್ತಾ ಕಣ್ಣೀರಿಡುವಾಗ ಆಳುದ್ದ ಬೆಳೆದ ಮಗ ಏನೆಲ್ಲಾ ಪದವಿ, ಅಧಿಕಾರವಿದ್ದರೂ ಸ್ವಂತ ತಾಯಿಗೇ ಸರಿಯಾದ ಚಿಕಿತ್ಸೆ ಕೊಡಿಸಲಾಗದಿದ್ದರೆ? ಅದರಲ್ಲೂ ನೆರವು ಶುಶ್ರೂಷೆ ನೀಡಬೇಕಾದವರೇ ನಿರ್ಲಕ್ಶ್ಯ ತೋರಿಸಿದಾಗ ಸುಮ್ಮನೇ ಕೈಕಟ್ಟಿ ಕೂರಲು ಸಾಧ್ಯವೇ? ಇಂಥದ್ದೊಂದು ಸಂದರ್ಭವನ್ನು ನೆನೆಸಿಕೊಂಡರೇ ಮೈಯುರಿದು ಹೋಗುತ್ತದೆ. ಪಕ್ಕಾ ಅಸಹಾಯಕನಂತೆ ನಿಂತು ಅನ್ಯಾಯವನ್ನು ಬಾಯಿಮುಚ್ಚಿ ಸಹಿಸಿಕೊಳ್ಳುವ ಸೋಗಲಾಡಿತನವಿಲ್ಲ ನನ್ನಲ್ಲಿ.

ತಾಯಿ ಮತ್ತು ತಾಯಿನಾಡು ಎರಡು ವಿಷಯದ ಕುರಿತು ಯಾರೇ ಆಗಲಿ ಒಂದಿಷ್ಟು ತಪ್ಪಿ ಮಾತಾಡಿದರೂ ಸಹಿಸುವವನಲ್ಲ ನಾನು. ಅಂಥಾದ್ರಲ್ಲಿ ನನ್ನ ತಾಯಿಗೇ ನನ್ನ ಕಣ್ಣೆದುರೇ ಹೀಗಾದಾಗ ಹೃದಯದೊಳಗೆ ಅವತ್ತು ಸ್ಪೋಟಿಸಿದ್ದು ಕುದಿಯುವ ಲಾವಾರಸ! ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಅನ್ನುವವ ನಾನಲ್ಲ; ಯಾಕೆಂದರೆ ಏಸುಕ್ರಿಸ್ತ ನನ್ನ ದೇವರಲ್ಲ ಮತ್ತು ಗಾಂಧೀಜಿಯ ಬಗ್ಗೆ ನನಗೆ ಅಪಾರ ಗೌರವದರಗಳಿದ್ದರೂ, ಅವರ ಎಲ್ಲಾ ಸಿದ್ಧಾಂತಗಳನ್ನು ನಾನು ಒಪ್ಪೋದಿಲ್ಲ. ಹೀಗೆ ಹೇಳುವ ಅಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ಮತ್ತು ನನ್ನ ಸಂವಿಧಾನ ನನಗೆ ನೀಡಿದೆ.

ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವನು. ಹಿಂದೂ ದೇವಗಣಗಳನ್ನು ನಂಬಿ ಪೂಜಿಸುವವನು. ನಮ್ಮ ದೈವ ದೇವರುಗಳ ಕೈಯಲ್ಲಿ ದುಷ್ಟಶಿಕ್ಷಣೆಗಾಗಿ ಆಯುಧಗಳಿವೆ. ಶರಣಾಗಿ ಬಂದವರಿಗೆ ಅಭಯ ಹಸ್ತದ ಆಶೀರ್ವಾದವೂ ಇದೆ. ಆದರೆ 'ಶಾಂತಿ" ಎಂಬ ಸೋಗಲಾಡಿತನದ ಮಾತು ಹೇಳುತ್ತಾ ಬೆನ್ನಿಗಿರಿಯುವ ಬುದ್ಧಿ ನಮ್ಮಲ್ಲಿ ಇಲ್ಲ. ಅದನ್ನು ನಮಗೆ ನಮ್ಮ ಧರ್ಮ ಕಲಿಸಿಕೊಡುವುದೂ ಇಲ್ಲ. ನೇರವಂತಿಕೆ, ಹೃದಯವೈಶಾಲ್ಯತೆ ನಮ್ಮ ಧರ್ಮದ ರಕ್ತದ ಗುಣ.

सर्व-तीर्थमयी माता सर्व-देवमयः पिता

मातरं पितरं तस्मात् सर्व-यत्नेन पूजयेत्

ಎಲ್ಲಾ ಪುಣ್ಯ ಕ್ಷೇತ್ರಗಳನ್ನೂ ತಾಯಿಯಲ್ಲೇ ಕಾಣಬೇಕು - ಎಲ್ಲಾ ದೇವರನ್ನೂ ತಂದೆಯಲ್ಲೇ ಕಾಣಬೇಕು. ಹಾಗಾಗಿ ಏನೇ ಆದರೂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿ ತಂದೆ-ತಾಯಿಯನ್ನು ಪೂಜಿಸಬೇಕು ಅನ್ನುವ ತಾತ್ಪರ್ಯ ಶ್ಲೋಕದ್ದು. ಇದನ್ನೇ ನಮ್ಮ ಧರ್ಮ ನಮಗೆ ಕಲಿಸಿ ಕೊಟ್ಟಿದೆ. ಇದು ಸ್ವಭಾವ ಸಹಜವಾಗಿ ನಮಗೆ ಬಂದಿದೆ.

ಹಾಗಾಗಿ ನಮ್ಮ ತಾಯಿ-ತಂದೆಗೋಸ್ಕರ ನಾವೇನೇ ಮಾಡಿದರೂ ಅದಕ್ಕೆ ನಾವು ಪಶ್ಚಾತ್ತಾಪ ಪಡಬೇಕಾದ ಅಗತ್ಯವಿಲ್ಲ.

माता शपते पुत्रं दोषं लभते मही

ಯಾವ ತಾಯಿಯೂ ತನ್ನ ಮಗನನ್ನು ಶಪಿಸುವುದಿಲ್ಲ. ಭೂಮಿತಾಯಿಗೆ ಯಾವುದೇ ರೀತಿಯ ಅಪವಾದದ ಕಳಂಕವೂ ತಟ್ಟುವುದಿಲ್ಲ ಎಂಬ ಸುಭಾಷಿತ ಶ್ಲೋಕವೊಂದು ನನಗೆ ನೆನಪಾಗುತ್ತಿದೆ. ಹೆತ್ತಮ್ಮನ ಆಶೀರ್ವಾದ ನನ್ನ ಮೇಲೆ ಇರುವವರೆಗೂ, ಯಾರೇ, ಏನೇ, ಕಳಂಕ, ಅಪವಾದ ಹೊರಿಸಿದರೂ ನನಗದು ತಟ್ಟುವುದಿಲ್ಲ. ನನ್ನ ಆತ್ಮ ಸಾಕ್ಷಿ ಪರಿಶುದ್ಧವಾಗಿದೆ.

Related posts