ವಿವೇಕ ಬ್ಯಾಂಡ್ ಧಾರಣ
ಶಿರಸಿಯಲ್ಲಿ ಕಳೆದ ವಾರ ನಡೆದ ವಿವೇಕ ಬ್ಯಾಂಡ್ ಧಾರಣ ಸಮಾರಂಭದಲ್ಲಿ ನನ್ನ ಸಂಪೂರ್ಣ ಭಾಷಣದ ಪ್ರತಿ ಇಲ್ಲಿದೆ.
" ಎಲ್ಲ ಬಂಧುಗಳೇ, ನನ್ನೆಲ್ಲಾ ಮಿತ್ರರೇ ಹಾಗು ಸಹಕಾರಿಗಳೇ,
ವಿವೇಕ್ ಬ್ಯಾಂಡ್ ಧರಿಸುವಂಥ ಅಭಿಯಾನ... ಕೈಗೆ ಹಾಕಿಕೊಳ್ಳ ತಕ್ಕಂಥ ಅಭಿಯಾನ. ಇಡೀ ರಾಜ್ಯದಾದ್ಯಂತ ನಡೆದಿದೆ ಚಿಕ್ಕದಾದರೂ ತುಂಬ ಒಳ್ಳೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಎಷ್ಟು ದೊಡ್ಡದಾಗಿ ಮಾಡ್ತೀವಿ ಅನ್ನೋದಕ್ಕಿಂತ ಎಷ್ಟು ಪ್ರಭಾವಶಾಲಿಯಾಗಿ ಮಾಡ್ತೀವಿ ಅನ್ನುವಂಥದ್ದು ತುಂಬಾ ಮುಖ್ಯ. ಈ ಕಾರಣದಿಂದ ಇವತ್ತು ಇಲ್ಲಿ ಸೇರಿರತಕ್ಕಂಥ ಒಂದು ಚಿಕ್ಕ ಸಮುದಾಯ ನಾಡಿಗೆ ವಿವೇಕ ಬ್ಯಾಂಡ್, ಈ ಅಭಿಯಾನದ ಮಹತ್ವ, ಇದರ ವೈಶಿಷ್ಟ್ಯತೆ, ಇದನ್ನ ತಿಳಿಸೋದ್ರಲ್ಲಿ ಸಫಲ ಆಗತ್ತೆ ಅನ್ನೋ ಒಂದು ಭಾವನೆ ನನ್ನಲ್ಲಿದೆ.
ನಮ್ಮ ದೇಶದಲ್ಲಿ ಎರಡೂ ರೀತಿಯ ಪೂಜೆಗಳನ್ನ ನಾವು ಮಾಡ್ತೀವಿ. ಒಂದು ವ್ಯಕ್ತಿ ಪೂಜೆ ಮತ್ತೊಂದು ವ್ಯಕ್ತಿತ್ವದ ಪೂಜೆ. ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಾಣೋದು ವ್ಯಕ್ತಿ ಪೂಜೆ ನಮ್ಮಲ್ಲಿ. ವಿವೇಕ್ ಬ್ಯಾಂಡ್ ಧರಿಸ್ತೀವಿ, ವಿವೇಕಾನಂದರ ಬಗ್ಗೆ ಮಾತಾಡ್ತೀವಿ. ವಿವೇಕಾನಂದರ ಬಗ್ಗೆ ಏನು ಮಾತಾಡ್ಬೇಕು? ವ್ಯಕ್ತಿ ಬಗ್ಗೆ ಮಾತಾಡ್ಬೇಕೋ? ವ್ಯಕ್ತಿತ್ವದ ಬಗ್ಗೆ ಮಾತಾಡ್ಬೇಕೋ? ಎರಡರಲ್ಲೂ ತುಂಬಾ ಅಂತರಗಳಿದೆ. ನಾಡಿನಲ್ಲಿ ಅನೇಕ ಸಂತ - ಮಹಾಂತರು ಆಗಿಹೋಗಿದ್ದಾರೆ. ಅವರ ಮಧ್ಯದಲ್ಲಿ ವಿವೇಕಾನಂದರು ಇವತ್ತು ಎದ್ದು ಕಾಣುತ್ತಾರೆ. ಇಂದಿಗೂ ಕೂಡ ನವನವೀನವಾಗಿರತಕ್ಕಂಥ ಉತ್ಸಾಹದ ಚಿಲುಮೆ ಅವರು. ಅವರ ಮಾತುಗಳನ್ನ ಕೇಳಿದಾಗ, ಅವರ ಜೀವನದ ಅನೇಕ ಘಟನಾವಳಿಗಳನ್ನು ಅವಲೋಕನ ಮಾಡಿದಾಗ, ನಾವು ಈ ಬದುಕನ್ನು ಹೇಗೆ ನೋಡಬೇಕು ಅನ್ನುವ ಹೊಸ ಆಯಾಮವೊಂದು ನಮ್ಮೆದಿರು ತೆರೆದು ನಿಂತುಕೊಳ್ಳುತ್ತೆ.
ಸಾಂಪ್ರದಾಯಿಕ ಗೋಡೆಗಳಿಂದ ಹೊರಗಡೆ ಜಿಗಿದು, ಅವತ್ತಿನ ವರ್ತಮಾನಕ್ಕೆ ತಕ್ಕಂಥ ಅಗತ್ಯತೆ ಇರುವ ರೀತಿಯಲ್ಲಿ ಸಂತರು ಹೇಗೆ ಬದುಕಬೇಕು ಅನ್ನೋದಕ್ಕೆ ವಿವೇಕಾನಂದರು ಒಂದು ಮಾರ್ಗದರ್ಶನ. ಆತ್ಮದ ಬಗ್ಗೆ, ದ್ವೈತದ ಬಗ್ಗೆ, ಅದ್ವೈತದ ಬಗ್ಗೆ, ಮೋಕ್ಷದ ಬಗ್ಗೆ ಮಾತಾಡ್ತಾ ಕೂತ್ಕೊಳ್ಳದೇನೆ ದೇಶದ ಬಗ್ಗೆ, ಶೌರ್ಯದ ಬಗ್ಗೆ, ಪೌರುಷದ ಬಗ್ಗೆ, ಪುರುಷಾರ್ಥದ ಬಗ್ಗೆ ಮಾತಾಡಿರತಕ್ಕಂಥ ಒಬ್ಬ ವೀರೋಚಿತ ಸನ್ಯಾಸಿ. ಸನ್ಯಾಸಿಗಳು ಅಂತಂದ್ರೆ ಆತ್ಮದ ಬಗ್ಗೆ ಮಾತಾಡ್ತಾರೆ, ಮೋಕ್ಷದ ಬಗ್ಗೆ ಮಾತಾಡ್ತಾರೆ, ಧಾರ್ಮಿಕ ಆಚರಣೆಗಳ ಬಗ್ಗೆ ಮಾತಾಡ್ತಾರೆ, ಕಟ್ಟುಪಾಡುಗಳ ಬಗ್ಗೆ ಮಾತಾಡ್ತಾರೆ, ಧಾರ್ಮಿಕ ವಿಚಾರಗಳ ಬಗ್ಗೆ ಮಾತಾಡ್ತಾರೆ... ಇದು ಸರ್ವೇ ಸಾಮಾನ್ಯ. ಎಲ್ಲೆಯನ್ನ ಮೀರಿ ಒಂದು ಹೊಸ ದಿಗಂತದಾಚೆ ಈ ಸಮುದಾಯವನ್ನ ತೆಗೆದುಕೊಂಡು ಹೋಗತಕ್ಕಂತಹ ನಿಟ್ಟಿನಲ್ಲಿ ವಿವೇಕಾನಂದರು ತೆಗೆದುಕೊಂಡಂಥ ನಿಲುವು ಬಹುತೇಕ ಒಂದು ಮಾರ್ಗದರ್ಶಿ ಸೂತ್ರಗಳಿಗೆ ನಾಂದಿ ಹಾಡುತ್ತೆ.
ನಮ್ಮಲ್ಲಿ ಒಂದು ಸಂಪ್ರದಾಯ ಇದೆ. ಈ ಸಂಪ್ರದಾಯ ಬೆಳೆದು ಬಂದಿರತಕ್ಕಂಥದ್ದು. ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಪ್ರದಾಯ. ಪ್ರತಿಯೊಂದಕ್ಕೂ ಒಂದು ಚೌಕಟ್ಟನ್ನ ನಾವು ನಿರ್ಧಾರ ಮಾಡಿಬಿಟ್ಟಿದೀವಿ... ಇದು ಹೀಗೇ ಇರಬೇಕು ಅಂತ. ವಿದ್ಯಾರ್ಥಿ ಜೀವನ, ಇದು ಹೀಗೇ ಇರಬೇಕು, ಗೃಹಸ್ಥ ಜೀವನ, ಇದು ಹೀಗೇ ಇರಬೇಕು, ವಾನಪ್ರಸ್ಥ ಜೀವನ, ಇದು ಹೀಗೇ ಇರಬೇಕು, ಸನ್ಯಾಸ ಜೀವನ, ಇದು ಹೀಗೇ ಇರಬೇಕು, ಹೀಗೆ ಒಂದು ಚೌಕಟ್ಟನ್ನ ನಾವು ನಿರ್ಧಾರ ಮಾಡಿಕೊಂಡು ಬಿಟ್ಟಿದ್ದೀವಿ. ಇದಕ್ಕೆ ಸಂವಿಧಾನ ಇದೆ ಅಂತಲ್ಲ. ಅದು ನಮ್ಮ ನಡವಳಿಕೆಯ ಪರಿಣಾಮವಾಗಿ, ಸಾವಿರ ಸಾವಿರ ವರ್ಷಗಳ ನಡವಳಿಕೆಯ ಪರಿಣಾಮವಾಗಿ ಅದು ಮೊಡಿ ಬಂದಿದೆ. ಎಲ್ಲಿಯು ಕೂಡಾ ಗೃಹಸ್ಥ ಹೀಗೆಯೇ ಇರಬೇಕು ಎನ್ನುವ ಕಾನೂನು ನಮ್ಮ ದೇಶದಲ್ಲಿ ಎಲ್ಲಿಯು ಇಲ್ಲ. ಆದರೂ ಅದೊಂದು ಸಂಪ್ರದಾಯ. ಅಲಿಖಿತವಾಗಿರುವಂಥ ಒಂದು ಕಾನೂನು. ಸನ್ಯಾಸಿಗಳು ಕೂಡ ಹೀಗೇ ಇರಬೇಕು ಅನ್ನೋದರ ಬಗ್ಗೆ ಒಂದು ಚೌಕಟ್ಟಿತ್ತು. ಬಹುತೇಕ ತುಂಬಾ ಜನರಿಗೆ, ಇತಿಹಾಸವನ್ನು ತಿಳಿದುಕೊಂಡಿರತಕ್ಕಂಥವರಿಗೆ ಅದು ಅರ್ಥ ಆಗುತ್ತೆ.
ಶಂಕರಾಚಾರ್ಯರು ಹುಟ್ಟೋದಕ್ಕಿಂತ ಮುಂಚೆ ಪೀಠ ಪರಂಪರೆಯು ಇರಲಿಲ್ಲ. ಋಷಿ ಪರಂಪರೆ ಇತ್ತು. ಶಂಕರಾಚಾರ್ಯರನ್ನ ನಾವು ಯಾಕೆ ಒಂದು ಹೊಸ ಮಾದರಿಯ ಸನ್ಯಾಸತ್ವದ ಒಂದು ನಿರ್ಮಾಪಕರು ಅಂತ ಕರೀತೀವಿ? ಶಂಕರಾಚಾರ್ಯರಿಗಿಂತ ಮುಂಚೆ ನಮ್ಮ ಇಡೀ ಪರಂಪರೆಯಲ್ಲಿ ಪೀಠ ಪರಂಪರೆ ಇರಲಿಲ್ಲ. ಶಂಕರಾಚಾರ್ಯರು ನಾಲ್ಕು ಪೀಠಗಳನ್ನು ಪ್ರಾರಂಭ ಮಾಡುವ ಮುಖಾಂತರ ಪೀಠ ಪರಂಪರೆಗೆ ನಾಂದಿ ಹಾಡಿದ್ರು. ಅಷ್ಟೇ ಅಲ್ಲ, ಮುಂಚೆ ಕೇವಲ ಒಂದು ಋಷಿ ಪರಂಪರೆ ಮಾತ್ರ ಇತ್ತು. ನಂತರದಲ್ಲಿ ಸಾಧನೆಯ ಹತ್ತು ಹಲವು ಮಜಲುಗಳನ್ನು ಗುರುತಿಸಿ, ಅವರು ಎಲ್ಲರಿಗೂ ಕೂಡಾ ಸಂಪ್ರದಾಯವನ್ನ ಹಾಕಿಕೊಟ್ರು. ಎಷ್ಟೋ ಜನ ಚೌಕಟ್ಟಿನಲ್ಲಿ, ತುಂಬಾ ಸಣ್ಣ ಚೌಕಟ್ಟಿನಲ್ಲಿ ಶಂಕರಾಚಾರ್ಯರನ್ನ ಗುರುತಿಸ್ತಾರೆ... ನಾಲ್ಕು ಪೀಠಗಳನ್ನು ಸ್ಥಾಪನೆ ಮಾಡಿದ್ರು ಅಷ್ಟೇ ಅಂತ. ನಾಲ್ಕು ಶಂಕರ ಪೀಠಗಳನ್ನ ಸ್ಥಾಪನೆ ಮಾಡಿದ್ರು. ಸರ್ವಜ್ಞ ಪೀಠದ ಮೇಲೆ ಅಲಂಕೃತರಾದ್ರು. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮಹಾನ್ ಗ್ರಂಥಗಳನ್ನು ರಚನೆ ಮಾಡಿದ್ರು. ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ್ರು. ಇಷ್ಟೇ ಅಲ್ಲ ಸ್ವಾಮಿ... ಇವತ್ತು ದೇಶಾದ್ಯಂತ ಯಾವ್ಯಾವೆಲ್ಲ ಪರಂಪರೆಗಳನ್ನ ನಾವು ನೋಡ್ತಾ ಇದ್ದೀವೋ... ಅದು ಅವಧೂತ ಪರಂಪರೆ ಇರ್ಲಿ, ನಾಗಾ ಪರಂಪರೆ ಇರ್ಲಿ, ಅಥವಾ ಇತರ ಅನೇಕ ಪರಂಪರೆಗಳು, ಆ ಎಲ್ಲಾ ಪರಂಪರೆಗಳಿಗೆ ಒಂದು ಮೊಲಭೂತ ಚೌಕಟ್ಟನ್ನ ಹಾಕಿಕೊಟ್ಟವರು ಶಂಕರಾಚಾರ್ಯರು. ಹಾಗೇನೇ ಒಂದು ಸಾಂಪ್ರದಾಯಿಕ ಎಲ್ಲೆಯನ್ನ ಮೀರಿ, ಸಮುದಾಯದ ಅಭಿವೃದ್ಧಿ, ಅಭ್ಯುತ್ಥಾನ, ಸಮುದಾಯದಲ್ಲಿ ಜಾಗೃತಿಯನ್ನ ಮೊಡಿಸತಕ್ಕಂಥ ಒಂದು ಹೊಸ ಹೆಜ್ಜೆಯನ್ನ ಇಟ್ಟಿರತಕ್ಕಂಥವರು ವಿವೇಕಾನಂದರು.
ಅವರ ಭಾಷಣ ಎಷ್ಟು ಪ್ರಸಿದ್ಧವೋ, ಅವರ ನಡವಳಿಕೆ ಕೂಡಾ ನಾವು ಹತ್ತಿರದಿಂದ ಗಮನಿಸತಕ್ಕಂಥಾದ್ದೇ. ಅವರ ಭಾಷಣದಿಂದ ಅವರು ಜಗತ್ಪ್ರಸಿದ್ಧರಾದ್ರು. ಆದ್ರೆ ಅವರ ನಡವಳಿಕೆಯಿಂದ ಬಹುತೇಕ ಈ ಹಿಂದೆ ಗತಿಸಿಹೋದ ಒಂದೆರಡು ಮೊರು ತಲೆಮಾರುಗಳ ಜೋತೆಜೊತೆಯಲ್ಲೇ ಮುಂದಿನ ನೂರಾರು ತಲೆಮಾರುಗಳಿಗೂ ಕೂಡ ಅವರು ಆದರ್ಶ ಪುರುಷರೇ... ಯಾಕೆಂದರೆ ... ಅವರು ಇಟ್ಟಿರತಕ್ಕಂಥ ಹೆಜ್ಜೆ. ಕಣ್ಣು ಮುಚ್ಚಿಕೊಂಡು ಧ್ಯಾನಕ್ಕೆ ಕೂತುಕೊಳ್ಳಿ ಅಂತ ಅವರು ಹೇಳಲಿಲ್ಲ. ಮೋಕ್ಷ ಒಂದೇ ದಾರಿ ಅಂತ ಅವರು ಹೇಳಲಿಲ್ಲ. ಬದಲಾಗಿ... ಪೌರುಷವನ್ನು ಆರಾಧನೆ ಮಾಡಿ ಅಂತಂದ್ರು. ದೇವಸ್ಥಾನದಲ್ಲಿ ಹೋಗಿ ಕುತ್ಕೊಂಡು ಗಂಟೆ ಅಲ್ಲಾಡಿಸ್ತಾ ಪೂಜೆ ಮಾಡೋ ಪೂಜಾರಿಗಳಿಗಿಂತ ಕಾಲ್ಚೆಂಡು ಅದೋ ಹುಡುಗರು ಇವತ್ತು ನಮಗೆ ಬೇಕು ಅಂತ ಅಂದ್ರು. ಅದನ್ನ ನಾವು ಅರ್ಥ ಮಾಡ್ಕೋಬೇಕು. ಮೇಲ್ನೋಟಕ್ಕೆ ಸಂಪ್ರದಾಯದ ವಿರೋಧಿ ವಿವೇಕಾನಂದರು... ಆದ್ರೆ ಅದರ ಹಿಂದುಗಡೆ ಮಾರ್ಮಿಕವಾದಂಥ ಒಂದು ಅರ್ಥ ಇತ್ತು. ಜಗತ್ತಿಗೆ ಬೇಕಾಗಿರತಕ್ಕಂಥದ್ದು ಇದೇನೇ ಇವತ್ತು. ನೂರಾರು ವರ್ಷಗಳ ಗುಲಾಮಿತನದ ಒಂದು ಮಾನಸಿಕತೆಯಿಂದ ಈ ಸಮುದಾಯ ಹೊರಗಡೆ ಬರಬೇಕಾದರೆ... ಪೌರುಷದ ಆರಾಧನೆ ಇವತ್ತು ಅನಿವಾರ್ಯ.
ನಮ್ಮಲಿ ಎಷ್ಟೋ ಜನ್ರನ್ನ ನೋಡ್ತೀವಿ ನಾವು... ಸಮಾಜದಲ್ಲಿ ಗೌರವಸ್ಥರು... ನನ್ನ ಮಾತನ್ನ ತಪ್ಪು ತಿಳ್ಕೋಬೇಡಿ... ಹೇಳ್ಬೇಕು ಅಂತ ಅನ್ಸುತ್ತೆ. ಹೇಳಿದ್ರೆ ಬೇಸರ ಆಗುತ್ತೆ ಅನ್ನೋದೂ ನನಗೆ ಗೊತ್ತಿದೆ... ಅದಕ್ಕೋಸ್ಕರವೇ ಹೇಳ್ತಾ ಇದ್ದೀನಿ.
ಸಮಾಜದಲ್ಲಿ ಗೌರವಸ್ಥರು ಅಂತನ್ನೋ ಒಂದು ಸಂಪ್ರದಾಯವಿದೆ... ಸಮಾಜದಲ್ಲಿ ಸುತ್ತಮುತ್ತಲೂ ಅನ್ಯಾಯ ನಡೀತಾ ಇದ್ರೂ ಕೂಡಾ... ಅದನ್ನು ಸಹಿಸ್ಕೊಂಡು ಹೋಗ್ತಾ ಇರತಕ್ಕಂಥದ್ದೇ ಸಜ್ಜನಿಕೆ... ಅದರ ವಿರುದ್ಧ ಮಾತಾಡದೇ ಇರುವಂಥದ್ದೇ ಸಜ್ಜನಿಕೆ... ಇದೇ ನಮಗೆ ಶೋಭೆಯನ್ನ ಕೊಡುತ್ತೆ... ಸಮಾಜದಲ್ಲಿ ಅನ್ಯಾಯ ನಡೀತಾ ಇದ್ರೂ ಕೂಡ ಅದನ್ನ ಮೆಟ್ಟಿ ನಿಲ್ಲತಕ್ಕಂಥ ಧಾರ್ಷ್ಟ್ಯವನ್ನ ತೋರಿಸಿದ್ರೆ... ಬಹುತೇಕ ಜನ ನನ್ನನ್ನ ಗೂಂಡಾ ಅಂತ ಕರೆದಾರು... ಅದಕ್ಕೋಸ್ಕರ ಅದು ಬೇಡ... ನಾನು ಸಭ್ಯ, ನಾನು ಸುಸಂಸ್ಕೃತ, ನಾನು ಸಜ್ಜನ, ಅದಕ್ಕೋಸ್ಕರ ಸಜ್ಜನಿಕೆಯ, ಸೋಗಲಾಡಿತನದ ಪರದೆಗೆ ಭಂಗ ತರದ ರೀತಿಯಲ್ಲಿ... ಷಂಡತನದ ಪರಮಾವಧಿಯಲ್ಲೇ ನಾನು ಬದುಕಬೇಕು ಅನ್ನತಕ್ಕಂಥ ಸಂಪ್ರದಾಯವನ್ನು ಹಾಕಿಕೊಂಡಿರತಕ್ಕಂಥ ಸಾವಿರ ಸಾವಿರ ಸೋಗಲಾಡಿ ಸಜ್ಜನರನ್ನ ನಾವು ನೋಡ್ತಾ ಇದ್ದೀವಿ.
ವಿವೇಕಾನಂದರು ಕೂಡಾ ಅದನ್ನೇ ಬಯಸಿಬಿಡಬಹುದಿತ್ತು. ವಿವೇಕಾನಂದರು ಕೂಡ ಅದೇ ಮೇಲ್ಪಂಕ್ತಿಯಲ್ಲಿ ಹೋಗಿಬಿಡಬಹುದಿತ್ತು.
ಒಂದು ಶ್ಲೋಕ ಇದೆ ಸಂಸ್ಕೃತದಲ್ಲಿ ...
"ತ್ಯಜೇದೇಕಂ ಕುಲಸ್ಯಾರ್ಥೇ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ ಗ್ರಾಮಂ ಜನಪದಸ್ಯಾರ್ಥೇ ಮೋಕ್ಷಾರ್ಥೇ ಪೃಥಿವೀಮ್ ತ್ಯಜೇತ್ " ಅಂತ.
ಒಂದು ಕುಟುಂಬಕ್ಕೋಸ್ಕರ ಒಬ್ಬನನ್ನು ಬಲಿ ಕೊಡಬಹುದಂತೆ. ಒಂದು ಗ್ರಾಮಕ್ಕೊಸ್ಕರ ಒಂದು ಕುಲವನ್ನು ಬೇಕಾದ್ರೂ ಬಲಿ ಕೊಡಬಹುದಂತೆ. ಒಂದು ದೇಶಕ್ಕೋಸ್ಕರ , ಒಂದು ನಾಡಿಗೋಸ್ಕರ ಒಂದು ಊರನ್ನು ಬೇಕಾದ್ರೂ ಬಲಿ ಕೊಡಬಹುದಂತೆ. ಆದರೆ ಇದೆಲ್ಲಕ್ಕಿಂತ ಜಾಸ್ತಿ ಮೋಕ್ಷಕ್ಕೊಸ್ಕರ ಇಡೀ ಜಗತ್ತನ್ನೇ ಬಿಟ್ಟು ಹೋಗಬಹುದಂತೆ. ವಿವೇಕಾನಂದರಿಗೆ ಇದು ಗೊತ್ತಿರ್ಲಿಲ್ಲಾಂತ ಅಲ್ಲ. ಬದಲಾಗಿ ಈ ಒಂದು ಮೋಕ್ಷದ ಈ ಸೀಮಿತ ಚೌಕಟ್ಟಿನಲ್ಲಿ ನಾನೊಬ್ಬ ಆತ್ಮಚಿಂತನೆಯನ್ನು ಮಾಡಿಕೊಂಡು ಗೂಡಿನೊಳಗೆ ಕೂತ್ಕೊಳ್ಳೋದಕ್ಕಿಂತ ಸಾವಿರಾರು ಯುವಕರಿಗೆ, ಈ ಸಮುದಾಯಕ್ಕೆ, ಈ ಜನಮಾನಸಕ್ಕೆ, ಈ ದೇಶದ ಸಾವಿರಾರು ಜನರಿಗೆ ಪೌರುಷದ ನೆಲೆಯಲ್ಲಿ ಮೋಕ್ಷವನ್ನು ಕಂಡುಕೊಳ್ಳುವಂಥ ಮಾರ್ಗವನ್ನು ನಾನು ಹಾಕಿಕೊಡಬೇಕು ಅಂತ ಅನ್ನಿಸಿತು, ಅದಕ್ಕೋಸ್ಕರ ಅವರು ಸಂಪ್ರದಾಯವನ್ನ ಮೀರಿ ನಿಂತರು.
ಜಗತ್ತಿನಲ್ಲಿ ಯಾರು ಗೆರೆಯನ್ನ ದಾಟಿದ್ದಾರೆ... ಅವರೇ ಇತಿಹಾಸದ ನಿರ್ಮಾಪಕರಾಗಿದ್ದಾರೆ. ಯಾರಿಗೆ ಗೆರೆಯನ್ನ ದಾಟುವ ಒಂದು ಧಾರ್ಷ್ಟ್ಯ ಇಲ್ಲವೋ ಅವರು ಚೌಕಟ್ಟಿನಲ್ಲಿ ಸಜ್ಜನರಾಗಿ ಕೂತ್ಕೊಂಡಿದ್ದಾರೆ. ಗೆರೆಯನ್ನು ದಾಟತಕ್ಕಂಥದ್ದು ಇತಿಹಾಸದ ಸೃಷ್ಟಿ. ದಾಟಬೇಕಾದ್ರೆ ಒಂದು ಸ್ವಲ್ಪ ಮಟ್ಟಿಗೆ ಗುಂಡಿಗೆ ಗಟ್ಟಿಬೇಕಾಗುತ್ತೆ. ಇಲ್ಲಿ ತನಕ ಮಾತ್ರ ಹೋಗಿದ್ದಾರೆ. ಅಲ್ಲಿಂದ ಆಚೆ ಹೋಗತಕ್ಕಂಥದ್ದು ನಮ್ಮ ಪರಿಪಾಠ ಅಲ್ಲ ಅಂತ ನಮ್ಮ ಹಿರಿಯರು ಹೇಳ್ತಾರೆ. ಯಾಕೆಂದ್ರೆ ಇಲ್ಲಿ ತನಕ ಮಾತ್ರ ಹೋಗಿದ್ದಾರೆ ಎಲ್ರು ಕೂಡ. ಅದಕ್ಕಿಂತ ದಾಟಿಲ್ಲ. ಅದಕ್ಕೋಸ್ಕರ ... ದಾಟಬಾರದು ... ಅಂತ ಮತ್ತೊಂದು ಹೊಸ ಸಂಪ್ರದಾಯದ ಗೆರೆಯನ್ನು ಎಳೆದರು... ಬೇರೇನಿಲ್ಲ.
ದಾಟತಕ್ಕಂಥದ್ದೇ ನಮ್ಮ ಗುರಿ... ಎಷ್ಟೋ ಸಲ ನಾವು ನೋಡತೀವಿ... ಕಾರ್ಪೊರೇಟ್ ಪ್ರಪಂಚದಲ್ಲಿ ಇರಬಹುದು, ಅಥವಾ ನಮ್ಮ ವಿದ್ಯಾಭ್ಯಾಸದಲ್ಲಿ ಇರಬಹುದು, ಅಥವಾ ನಮ್ಮ ಉದ್ಯೋಗದಲ್ಲಿರಬಹುದು, ಎಲ್ಲದರಲ್ಲೂ ನಾವು ನೋಡತೀವಿ.. ನಾವೊಂದು ಗುರಿಯನ್ನ ಇಟ್ಟ್ಕೊಂತೀವಿ. ಈ ವರ್ಷ ಹತ್ತು ಲಕ್ಷ ಲಾಭ ಮಾಡಬೇಕು. ಈ ವರ್ಷ ನನ್ನ ಸ್ಕೋರ್ ೯೦ ಪರ್ಸೆಂಟ್ ಮಾಡಬೇಕು. ಗುರಿಯನ್ನ ಮುಟ್ಟಲಿಕ್ಕೋಸ್ಕರ ತಿಣುಕಾಡ್ತೀವಿ. ಯಾರಲ್ಲಿ ಗುರಿ ದಾಟತಕ್ಕಂಥ ಒಂದು ಧಾರ್ಷ್ಟ್ಯ ಇದೆ, ಅವನು ಖಂಡಿತವಾಗಿ ಗುರಿಯನ್ನ ಮುಟ್ಟುತ್ತಾನೆ. ಯಾರಿಗೆ ಗುರಿ ಮುಟ್ಟಬೇಕೆಂಬ ಸೀಮಿತತೆ ಇದೆ, ಖಂಡಿತ ಗುರಿ ಒಳಗೇ ಇರುತ್ತಾನೆ ಅವನು. ಗುರಿಯನ್ನ ದಾಟತಕ್ಕಂಥ ಧಾರ್ಷ್ಟ್ಯ ಇದೆಯಾ ನಮಗೆ? ಪರಂಪರೆ ಎಳೆದಿರತಕ್ಕಂಥ ಗೆರೆಯನ್ನು ದಾಟಿ ಮುಂದೆ ನಿಂತ್ಕೊಂಡು ಹೊಸ ಸಂಪ್ರದಾಯವನ್ನ ಹಾಕಿಕೊಡ್ತೀವಿ ಅನ್ನೋ ಯೋಗ್ಯತೆ ಇದ್ಯಾ? ಆಗ ಮಾತ್ರ ಈ ರೀತಿಯ ಒಂದು ಹೊಸ ಇತಿಹಾಸಕಾರರನ್ನ ನೆನೆಸಿಕೊಳ್ಳಲಿಕ್ಕೆ, ಅವರನ್ನ ಆರಾಧನೆ ಮಾಡಲಿಕ್ಕೆ ನಮಗೊಂದು ಯೋಗ್ಯತೆ ಬಂದಾಗಾಗ್ತದೆ.
ಸಂಸ್ಕೃತದಲ್ಲಿ ಮತ್ತೊಂದು ಮಾತನ್ನು ಹೇಳ್ತಾರೆ...
"ಶಿವೋಭೂತ್ವಾ ಶಿವಂ ಯಜೇತ್" ಶಿವನಾಗಿ ಶಿವನನ್ನು ಆರಾಧನೆ ಮಾಡೋಣ... ಇಲ್ಲಾಂತಂದ್ರೆ ಅರ್ಥ ಆಗೋದಿಲ್ಲ ಶಿವ. ಹೋಗಿ ಕೈ ಮುಗಿದರೆ ಶಿವ ಅರ್ಥ ಆಗೋದಿಲ್ಲ. ಹಣತೆಯ ಮಾಡಿದರೆ ಶಿವ ಅರ್ಥವಾಗುವುದಿಲ್ಲ. ಅಡ್ಡ ಬಿದ್ದರೆ ಶಿವ ಅರ್ಥ ಆಗೋದಿಲ್ಲ. ಶಿವನನ್ನು ಅರ್ಥ ಮಾಡ್ಕೋಬೇಕಾದ್ರೆ ಮೊದ್ಲು ನೀನು ಶಿವನಾಗಬೇಕು. "ಶಿವೋಭೂತ್ವಾ ಶಿವಂ ಯಜೇತ್"... ಒಬ್ಬ ಪುರುಷಾರ್ಥದ ಕಲ್ಪನೆಗೆ ಹೊಸ ಆಯಾಮವನ್ನು ಕೊಟ್ಟಿರತಕ್ಕಂಥ ಮಹಾನ್ ಪುರುಷನನ್ನು ಆರಾಧನೆ ಮಾಡಬೇಕೂಂತಂದ್ರೆ ಒಳಗಡೆ ಇರತಕ್ಕಂಥ ಒಂದು ದಾವಾಗ್ನಿ ಏಳಬೇಕು ಮೇಲ್ಗಡೆ. ಈ ಸಮಾಜದಲ್ಲಿ, ಈ ಒಂದು ಬದುಕಿನಲ್ಲಿ ಇರತಕ್ಕಂಥ ಅನ್ಯಾಯ ಅನಾಚಾರಗಳನ್ನ ಮೆಟ್ಟಿ ನಿಲ್ಲತಕ್ಕಂಥ ಧಾರ್ಷ್ಟ್ಯವನ್ನ ಇವರು ತೋರಿಸಬಹುದಾದ್ರೆ ಖಂಡಿತವಾಗಿಯೂ ಒಂದು ಹೊಸ ಹೆಜ್ಜೆಯನ್ನ ನಾವು ಇಟ್ಟಹಾಗಾಗ್ತದೆ.
ಬಂಧುಗಳೇ, ಹೇಳ್ತಾ ಹೋದರೆ ಬಹುತೇಕ ಗಂಟೆಗಳ ಕಾಲ ಆ ಒಂದು ಹೊಸ ಹೆಜ್ಜೆಯ ಗುರುತುಗಳನ್ನು ಗಮನದಲ್ಲಿಟ್ಕೊಂಡು ನಾವು ಮಾತಾಡಬಹುದು. ಆದರೆ ಅದಕ್ಕಿಂತ ಜಾಸ್ತಿ ಇವತ್ತು ಅಗತ್ಯತೆ ಇರತಕ್ಕಂಥಾದ್ದು ಅವರು ಹೇಳಿರತಕ್ಕಂಥಾ ಒಂದೆರಡು ವಿಷಯಗಳನ್ನ.... ಈಗ ಹೇಳಿದ್ರು... ಮಾತಾಡಬೇಕಾದ್ರೆ... 'ಒಳ್ಳೆಯವನಾಗು.... ಮತ್ತು ಉಪಕಾರವನ್ನು ಮಾಡು' ಅಂತ. ಇದು ವಿವೇಕಾನಂದರ ಧ್ಯೇಯ ವಾಕ್ಯ ಅಂತ. ... ಸ್ವಾಮೀ... ಎಷ್ಟು ನಿಧಾನವಾಗಿ ಯೋಚಿಸುವ ಪರಿಪಾಠ ನಮ್ಮಲ್ಲಿ ಬಂದಿದೆ ಅಂತ. ಹಿರಿಯರು ಹೇಳ್ತಾರೆ ' ತಣ್ಣೀರಾದ್ರು ತಣಿಸಿಕೊಂಡು ಕುಡಿ' ಅಂತ. ವಿವೇಕಾನಂದರ ಆ ಒಂದು ವ್ಯಕ್ತಿತ್ವಕ್ಕೆ ತಕ್ಕ ಹಾಗೆ ನಮ್ಮ ಘೋಷ ವಾಕ್ಯ ಇರಬೇಕು. ಅವರು ಹೇಳಿದ್ದು...' ಒಳ್ಳೆಯವನಾಗು.... ಉಪಕಾರ ಮಾಡು...' ಅಂತ ಅಷ್ಟೇ ಹೇಳಿದ್ದಾ?
'ಏಳಿ... ಎದ್ದೇಳಿ... ಗುರಿ ಮುಟ್ಟುವ ತನಕ ನಿಲ್ಲದಿರಿ... '
"ಕ್ಲೈಭ್ಯಮ್ ಮಾ ಸ್ಮ ಗಮಃ ಪಾರ್ಥ .... ನೈತತ್ವಾಯ ಉಪಪದ್ಯತೇ ... ಕ್ಷುದ್ರಂ ಹೃದಯ ದೌರ್ಬಲ್ಯಮ್... ತ್ಯಕ್ಟ್ವೋತ್ತಿಷ್ಠಾ ಪರಾಂತಪಾ..."
ಇದನ್ನು ಅವರು ಹೇಳಿದ್ರು. ಭಗವದ್ಗೀತೆಗೆ ಒಂದು ಹೊಸ ಕಲ್ಪನೆಯನ್ನು ಕೊಟ್ಟರು. ಪುಣ್ಯಕ್ಕೋಸ್ಕರ ದೇವಸ್ಥಾನಕ್ಕೆ ಹೋದವರಿದ್ದಾರೆ.
ಪುಣ್ಯಕ್ಕೋಸ್ಕರ ಭಗವದ್ಗೀತೆಯನ್ನ ಆರಾಧನೆ ಮಾಡಿದವರಿದ್ದಾರೆ. ಭಗವದ್ಗೀತೆಯನ್ನ ಹೇಳತಕ್ಕಂಥವರು ಇದ್ದಾರೆ. ಪುಣ್ಯಕ್ಕೋಸ್ಕರ ಮಾಡತಕ್ಕಂಥದ್ದಲ್ಲ. ಬದಲಾಗಿ, ಅದನ್ನ ಧಾರಣೆ ಮಾಡಲಿಕ್ಕೋಸ್ಕರ, ಪೌರುಷದ ಆರಾಧನೆ ... ಇದು ಪುಣ್ಯಕ್ಕೋಸ್ಕರ ಅಲ್ಲ. ಶಕ್ತಿಯ ಆರಾಧನೆ ಅದು ಪುಣ್ಯಕ್ಕೋಸ್ಕರ ಅಲ್ಲ, ಬದಲಾಗಿ ಆಚರಣೆಗೋಸ್ಕರ... ಧಾರಣೆಗೋಸ್ಕರ... ಇದನ್ನು ಹೇಳಿಕೊಟ್ಟಿರತಕ್ಕಂಥದ್ದು ವಿವೇಕಾನಂದರು. ಅವರ ಹಾದಿಯಲ್ಲಿ ಹೋಗಬೇಕಾದ್ರೆ... ಸ್ವಲ್ಪ ಮಟ್ಟಿಗೆ ಧೈರ್ಯಾನೂ ಬೇಕು. ಶಕ್ತೀನೂ ಬೇಕು. ಕೇವಲ ಶ್ರದ್ಧೆ ಮತ್ತು ಭಕ್ತಿ ಎರಡಿದ್ದರೆ ಆಗೋದಿಲ್ಲ. ಶ್ರದ್ಧೆ ಮತ್ತು ಭಕ್ತಿ ಮೊದಲ ಹಂತದಲ್ಲಿ ನಮಗೆ ಪ್ರವೇಶವನ್ನು ಕೊಡುತ್ತೆ. ನಂತರದಲ್ಲಿ ಸಾಧನೆಯನ್ನು ಮಾಡಬೇಕಾದರೆ ಶಕ್ತಿ ಮತ್ತು ಒಂದು ಹೊಸ ಕಲ್ಪನೆ ಬೇಕಾಗುತ್ತೆ.
ಆ ಆಯಾಮವನ್ನ ದಾಟಲಿಕ್ಕೋಸ್ಕರ ವಿವೇಕ್ ಬ್ಯಾಂಡ್ ..."ಒಳ್ಳೆಯವನಾಗು.... ಮತ್ತು ಉಪಕಾರವನ್ನು ಮಾಡು"... ಅಷ್ಟೇ ಅಲ್ಲ ಸ್ವಾಮೀ ... ಮತ್ತೊಂದು ಮಾತನ್ನು ಹೇಳಿದ್ದಾರೆ ವಿವೇಕಾನಂದರು.
ಕ್ರಿಶ್ಚಿಯನ್ ಮಿಷನರಿಗಳು ಹೇಳ್ತಾರೆ... ಅವರು ಜನರನ್ನು ನೋಡಿದ ತಕ್ಷಣ...'ಹೇ ಪಾಪಿಗಳೇ ... ' ಅಂತ ಕರೀತಾರೆ. ಈ ಪಾಪಿಗಳನ್ನ ಉದ್ಧಾರ ಮಾಡಲಿಕ್ಕೋಸ್ಕರವೇ ಯೇಸು ಪರಮಾತ್ಮ ಅವತರಿಸಿ ಬಂದಿದ್ದಾನೆ ಅಂತ ಹೇಳ್ತಾರೆ. ನಾವು ಹಾಗೆ ಹೇಳಲಿಲ್ಲ...
"ಅಮೃತಸ್ಯ ಪುತ್ರಾಹ ..."... ಅಂತ ಕರೆದ್ವಿ ನಾವು.
'ನೀವು ಅಮೃತ ಪುತ್ರರು' ಅಂತ ಕರೆದ್ವಿ.
ನಿಮ್ಮ ಎದೆಯಲ್ಲಿರ್ತಕ್ಕಂತಹ ಶಕ್ತಿಗೆ ಸೀಮೆ ಇಲ್ಲದೆ ಇರತಕ್ಕಂಥ ಅಸಾಮಾನ್ಯವಾದ ಒಂದು ಬಲ ಇದೆ ಅಂತ ನಾವು ಕರೆದ್ವಿ. ಅದನ್ನ ವಿವೇಕಾನಂದರು ಹೇಳಿದ್ರು. ಪಾಪಿಗಳನ್ನ ಉದ್ಧಾರ ಮಾಡಲಿಕ್ಕೆ ಮಂತ್ರೋಪದೇಶವನ್ನ ಮಾಡಲಿಲ್ಲ. ಬದಲಾಗಿ ಹೃದಯದೊಳಗಡೆ ಇರತಕ್ಕಂಥ ಒಂದು ಕಪ್ಪು ಅಂಧ ಶ್ರದ್ಧೆಯನ್ನ ಕಳೆದು ಹೊಸದೊಂದು ಬೆಳಕಿನತ್ತ ಹೆಜ್ಜೆಯನ್ನ ಇಡಲಿಕ್ಕೆ, ಜಯದತ್ತ ಹೆಜ್ಜೆಯನ್ನ ಇಡಲಿಕ್ಕೆ ವಿವೇಕಾನಂದರು ಮಾರ್ಗದರ್ಶಿಯಾದರು.
ಜಗತ್ತನ್ನ ಗೆಲ್ಲಬೇಕು, ಗೆಲ್ಲೆಲಿಕ್ಕೋಸ್ಕರವೇ ನಾವು ಹುಟ್ಟಿರತಕ್ಕಂಥದ್ದು. "BORN TO RULE... BORN TO WIN..." ಇದಕ್ಕೋಸ್ಕರವೇ ನಮ್ಮ ಜನ್ಮ ಆಗಿದೆ. ಯಾರಿಗೆ.. ತನ್ನ ಬದುಕಿನ ಧ್ಯೇಯ ತನಗೇ ಗೊತ್ತಿರುವುದಿಲ್ಲವೋ... ಅಂಥವರು ಮತ್ತೊಬ್ಬರ ಬದುಕಿನ ಧ್ಯೇಯ ವಾಕ್ಯವನ್ನು ಉಚ್ಛರಿಸುವುದರಲ್ಲಿ ಅರ್ಥವೇ ಇಲ್ಲ. ನನ್ನ ಬದುಕಿನ ಧ್ಯೇಯ ವಾಕ್ಯ ನನಗೆ ಗೊತ್ತಾಗಬೇಕು. ನಾನು ಯಾಕೋಸ್ಕರ ಹುಟ್ಟಿದ್ದೇನೆ? ನನ್ನ ಅಮ್ಮ ನಂಗೆ ಯಾಕೆ ಜನ್ಮ ಕೊಟ್ಟಿದ್ದಾಳೆ? ನನ್ನ ಅಪ್ಪ ಯಾಕೆ ನಂಗೆ ಜನ್ಮ ಕೊಟ್ಟಿದ್ದಾನೆ? ಅದು ಅರ್ಥ ಮಾಡಿಕೊಳ್ಳದೇನೇ ಮತ್ತೊಬ್ಬರನ್ನ ಆರಾಧನೆ ಮಾಡತಕ್ಕಂಥ ವ್ಯಕ್ತಿತ್ವ ಏನಿದೆ ... ಅದು ಸವಕಲು ವ್ಯಕ್ತಿತ್ವ... ಅದು ಜೆರಾಕ್ಸ್ ಕಾಪಿ ಅದು... ನಂದು ಒರಿಜಿನಲ್ ಕಾಪಿ ಕಣ್ರೀ... ಅದಕ್ಕೋಸ್ಕರ ಬದುಕಬೇಕು ನಾವು... ಒರಿಜಿನಲ್ ಕಾಪಿಗಳಾಗಿ ನಾವು ಜಗತ್ತಿನಲ್ಲಿ ರಾರಾಜಿಸಬೇಕು... ಒರಿಜಿನಲ್ ಕಾಪಿಗಳಾಗಬೇಕಾದ್ರೆ ಸಂಪ್ರದಾಯದ ಗೆರೆಯನ್ನ ದಾಟಬೇಕು... ಎಷ್ಟೋ ಸಲ ಅನ್ನಿಸುತ್ತೆ... ನಡೀತಾ ಇರತಕ್ಕಂಥ ಅನ್ಯಾಯವನ್ನ ಅತ್ಯಾಚಾರವನ್ನ ನೋಡ್ಕೊಂಡು ಕೂಡಾ ಸಜ್ಜನಿಕೆಯ ಹೆಸರಿನಲ್ಲಿ ನನಗೆ, ನನ್ನ ಗೌರವಕ್ಕೆ ಚ್ಯುತಿ ಬರದಂತೆ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳೀತಕ್ಕಂಥ ಮೂಢ ನಂಬಿಕೆಯಿಂದ ಕೈಕಟ್ಟಿ ಕೂತ್ಕೊಳ್ತಾರಲ್ಲಾ... ಧಿಕ್ಕಾರ ಅಂತ ಹೇಳಬೇಕೋ ಅಂತ ವ್ಯಕ್ತಿತ್ವಗಳಿಗೆ...? ಅಥವಾ ಅಂಥವರನ್ನ ನಮ್ಮ ಸಜ್ಜನರು ಅಂತ ಗೌರವಿಸಬೇಕೋ...? ವಿವೇಕಾನಂದರು ಖಂಡಿತವಾಗಿಯೂ ಅಂತ "ಗೌರವಾನ್ವಿತ"(?) ವ್ಯಕ್ತಿಗಳಿಗೆ ಬೆಲೆಯನ್ನೇ ಕೊಟ್ಟಿಲ್ಲ....! ಪೌರುಷದ ಆರಾಧನೆಯನ್ನು ಯಾರು ಮಾಡ್ತಾರೋ ಅಂಥವರನ್ನೇ ವಿವೇಕಾನಂದರು ಒಪ್ಪಿರತಕ್ಕಂಥದ್ದು... ಅಂಥವರೇ ಬರಲಿ ಅಂತ ಕರೆದ್ರು...
ಬಂಧುಗಳೇ ... ಮಾತಿಗೆ ಕೊನೆ ಇರೋದಿಲ್ಲ... ಎಲ್ಲೋ ಒಂದು ಕಡೆ ಕೃತಿ ಪ್ರಾರಂಭ ಆಗಬೇಕು... ಈ ನಿಟ್ಟಿನಲ್ಲಿ ಇಲ್ಲಿರತಕ್ಕಂಥ ಯುವ ಸಮುದಾಯ ಎಲ್ಲೋ ಒಂದು ಕಡೆ ವಿವೇಕಾನಂದರ ದಾರಿಯಲ್ಲಿ ಒಂದು ಹೆಜ್ಜೆಯನ್ನಾದ್ರೂ ಮುಂದಿಟ್ಟರೆ ಖಂಡಿತವಾಗಿಯೂ ವಿವೇಕಾನಂದರ ಬದುಕಿಗೆ ನಾವು ಗೌರವವನ್ನು ಕೊಟ್ಟ ಹಾಗಾಗುತ್ತೆ. ಪುರುಷಾರ್ಥದ ಚಿಂತನೆಯಲ್ಲಿ ಪೌರುಷದ ಹೆಜ್ಜೆಯನ್ನ ಇಡತಕ್ಕಂಥ ಅಗತ್ಯತೇ ಇವತ್ತಿಗೆ ಇದೆ ಅಂತ ಅನ್ನತಕ್ಕಂಥ ಮಾತಿನೊಂದಿಗೆ ಇಲ್ಲಿ ಸೇರಿರತಕ್ಕಂಥ ಎಲ್ಲ ಬಂಧುಗಳಿಗೆ ವಂದಿಸಿ ನನ್ನ ಮಾತುಗಳನ್ನ ಮುಗಿಸ್ತೀನಿ...
ಭಾರತ್ ಮಾತಾ ಕಿ ಜೈ ..... "