ಬಜೆಟ್ ನೊಳಗಿದೆ ಕೆಲವೊಂದು ಗುಟ್ಟು - ಕಾಳ ಧನಿಕರ ಮೂಲಕ್ಕೇ ಬೀಳಲಿದೆ ಪೆಟ್ಟು.
ನೋಟು ರದ್ದತಿಯ ಬಳಿಕ ಒಂದೇ ತಿಂಗಳಲ್ಲಿ ಬಂದ ಕೇಂದ್ರ ಬಜೆಟ್ ನಲ್ಲಿ ದೇಶದಲ್ಲಿನ ಕಪ್ಪು ಹಣದ ಹುಟ್ಟಡಗಿಸಲು, ಭ್ರಷ್ಟಾಚಾರವನ್ನು ತೊಡೆದು ಹಾಕಲು ಏನೇನು ಕ್ರಮಗಳಿರಬಹುದು ಎಂಬ ಕುತೂಹಲ ಜನಕ್ಕಿತ್ತು. ಈಗ ಬಜೆಟ್ ಮಂಡನೆಯಾದ ಮೇಲೆ ಇದರ ಬಗ್ಗೆ ಸಣ್ಣದೊಂದು ಚರ್ಚೆ ಶುರುವಾಗಿದೆ. ಆರ್ಥಿಕ ವಿಷಯಗಳ ಬಗ್ಗೆ ವರದಿ ಮಾಡುವ ಹೆಚ್ಚಿನ ಪತ್ರಿಕೆಗಳು, ಸುದ್ದಿ ಮಾಧ್ಯಮಗಳು ಕಾಳಧನ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರ ಸರಿಯಾದ ರೀತಿಯಲ್ಲೇ ಹೆಜ್ಜೆ ಇಟ್ಟಿದೆ ಅಂತ ಹೇಳಿದ್ದಾವೆ.
ಆದರೆ ಬಫೂನ್ ಗಳಂತಾಡುವ ನಮ್ಮ ದೇಶದ ವಿರೋಧ ಪಕ್ಷದ ನೇತಾರರಿಗೆ ಮಾತ್ರ ಒಳ್ಳೇದ್ಯಾವುದೂ ಕಣ್ಣಿಗೆ ಕಾಣಿಸೋದೇ ಇಲ್ಲ. ಈ ಹಗಲುಗುರುಡರ ಸಾಲಿನಲ್ಲಿ ಕೆಲ ಎಡಚ ಪತ್ರಕರ್ತರೂ ಇರೋದು ಮಾತ್ರ ತೀರಾ ಶೋಚನೀಯ. ಜೇಟ್ಲಿಯವರ ಬಜೆಟ್ ಭಾಷಣವನ್ನು ಸಂಸತ್ತಿನಲ್ಲಿ ಕುಳಿತು ಆಸಕ್ತಿಯಿಂದ ಆಲಿಸುತ್ತಾ, ಕೆಲ ಪ್ರಮುಖ ಅಂಶಗಳನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದಾಗ ಕೆಲವೊಂದು ನಿರ್ದಿಷ್ಟ ವಿಷಯಗಳ ಕುರಿತು ಜೇಟ್ಲಿಯವರು ವಿಶೇಷ ಗಮನ ಹರಿಸಿದ್ದಾರೆ ಅಂತ ಅನ್ನಿಸಿತು. ಆದರೆ ಭಾಷಣದಲ್ಲಿ ಮಾತ್ರ ಈ ಕೆಲ ಅಂಶಗಳು ಸಾಮಾನ್ಯವೆಂಬಂತೆ ಮೂಡಿ ಮರೆಯಾದವು. ಆಶ್ಚರ್ಯವೆಂದರೆ ಈ ಅಂಶಗಳ ಬಗ್ಗೆ ದೇಶಾದ್ಯಂತ ಮಾಧ್ಯಮಗಳಲ್ಲೂ ಹೆಚ್ಚಿನ ಚರ್ಚೆ ಆಗಲಿಲ್ಲ! ಮೋದೀಜಿ ಮತ್ತು ಜೇಟ್ಲಿಜಿ ತುಂಬಾ ಕೂಲ್ ಆಗಿಯೇ ಕೆಲ ಅದ್ಭುತವೆನ್ನಿಸುವಂಥ ನಿರ್ಧಾರಗಳನ್ನು ಸದ್ದೇ ಇಲ್ಲದೆ ಕೈಗೊಂಡಿದ್ದರು. ಬಜೆಟ್ ಭಾಷಣ ಆರಂಭಿಸುವಾಗಲೇ TEC India ( Transformation- Energise- Clean India) ಅಂತ ಹೆಸರಿಟ್ಟು ಮೋಡಿ ಮಾಡಿದ ಜೇಟ್ಲಿಯವರು, ನಂತರದಲ್ಲಿ ಕೆಲವೊಂದು ಗಹನ ವಿಷಯಗಳನ್ನು ಭಾವೋದ್ವೇಗವಿಲ್ಲದೇ ಹೇಳಿದ್ದರು. ಆದರೆ ಗಮನವಿಟ್ಟು ಕೇಳಿದಾಗ ಕಪ್ಪು ಹಣದ ಮತ್ತು ಭ್ರಷ್ಟಾಚಾರದ ಮೂಲಕ್ಕೇ ಪೆಟ್ಟು ಬೀಳುವಂಥ ಹಲವು ಗುಟ್ಟುಗಳು ಬಜೆಟ್ ನೊಳಗಿರೋದು ತಿಳಿಯುತ್ತದೆ. ಈ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಈ ಲೇಖನ ಬರೆಯಲು ತೊಡಗಿದೆ.
ಅಂದ ಹಾಗೆ ಈ ಗುಟ್ಟುಗಳ ಬಗ್ಗೆ ತಿಳಿಯೋದಕ್ಕಿಂತ ಮೊದಲು, ಹಿನ್ನೆಲೆಯಾಗಿ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನ ಹರಿಸಬೇಕಿದೆ. ದೇಶದಲ್ಲಿ ಇನ್ ಕಮ್ ಟ್ಯಾಕ್ಸ್ ಪಾವತಿಸುವ ಜನರ ಬಗ್ಗೆ ವಿವರ ನೀಡುತ್ತಾ ಜೇಟ್ಲಿಯವರು ಕೆಲ ಕುತೂಹಲಕಾರಿ ಸಂಗತಿಗಳನ್ನು ಹೇಳಿದರು.
ಅಂದಾಜು ನೂರಾಮೂವತ್ತು ಕೋಟಿಯಷ್ಟು ಜನಸಂಖ್ಯೆಯಿರುವ ಈ ದೇಶದಲ್ಲಿ, ವೈಯಕ್ತಿಕ ನೆಲೆಯಲ್ಲಿ ಆದಾಯ ತೆರಿಗೆ ಪಾವತಿಸುವವರ ಒಟ್ಟು ಸಂಖ್ಯೆ ಕೇವಲ 3.7 ಕೋಟಿ ಮಾತ್ರ!
ಈ ಪೈಕಿ ಇಡೀ ದೇಶದಲ್ಲಿ ಕೇವಲ 24 ಲಕ್ಷ ಮಂದಿ ಮಾತ್ರ ವರ್ಷಕ್ಕೆ ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸುತ್ತಾರೆ!
5 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸುವವರು ಕೇವಲ 76 ಲಕ್ಷವಾದರೆ ಇವರ ಪೈಕಿ 56 ಲಕ್ಷ ಜನ ತಿಂಗಳ ಸಂಬಳಕ್ಕೆ ದುಡಿಯುವವರು.
ಇನ್ನು ವರ್ಷಕ್ಕೆ 50 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೋರಿಸುವವರು ಕೇವಲ 1 ಲಕ್ಷದ 72 ಸಾವಿರ ಮಂದಿ ಮಾತ್ರ!.
ಇದಿಷ್ಟು ಮಾಹಿತಿಯನ್ನು ಒದಗಿಸಿದ ಜೇಟ್ಲಿಯವರು, ಈ ದೇಶದ ಜನ ಅದ್ಯಾವ ಮಟ್ಟಿಗೆ ತೆರಿಗೆಗಳ್ಳತನ ಮಾಡುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ಹೇಳಿದರು. ಇದನ್ನೆಲ್ಲಾ ಒಂದು ಪಕ್ಕಕ್ಕಿಟ್ಟು ಇನ್ನೊಂದು ವಿಷಯದತ್ತ ಗಮನ ಹರಿಸೋಣ...
ಕಳೆದ 5 ವರ್ಷದ ಅವಧಿಯೊಂದರಲ್ಲೇ ಭಾರತದಲ್ಲಿ 1 ಕೋಟಿ 25 ಲಕ್ಷ ಕಾರುಗಳು ಮಾರಾಟವಾಗಿವೆ!.
ಮತ್ತು ಕಳೆದ ಒಂದೇ ವರ್ಷದಲ್ಲಿ 2 ಕೋಟಿ ಜನ ವಿದೇಶ ಪ್ರವಾಸ ಮಾಡಿದ್ದಾರೆ!.
ಹಾಗಾದರೆ ಈ ದೇಶದ ಜನ ಸರಕಾರಕ್ಕೆ ತೆರಿಗೆ ಕಟ್ಟದೆ ಅದ್ಯಾವ ಮಟ್ಟಿಗೆ ವಂಚಿಸುತ್ತಿದ್ದಾರೆಂಬುದಕ್ಕೆ ಬೇರೆ ದಾಖಲೆ ಬೇಕೇ? ಅದೆಷ್ಟು ಮಂದಿಯ ಬಳಿ ಕಪ್ಪು ಹಣ ಇದ್ದಿರಬಹುದು? ಜೇಟ್ಲಿಯವರ ಮಾತುಗಳನ್ನು ಕೇಳಿ ಅರ್ಥಮಾಡಿಕೊಳ್ಳ ಬಲ್ಲವರಿಗೆ ಸಮಸ್ಯೆಯ ಆಳ ಅಗಲ ತಿಳಿದೀತು.
ನವೆಂಬರ್ 8ನೇ ತಾರೀಕು ನೋಟ್ ಬ್ಯಾನ್ ಆದಂದಿನಿಂದ ಈ ದೇಶದ ಬ್ಯಾಂಕ್ ಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಜಮೆಯಾದ ಮೊತ್ತ ಎಷ್ಟಿರಬಹುದು ಅಂತ ಒಮ್ಮೆ ಲೆಕ್ಕ ಹಾಕಿ ನೋಡಿ! ಚಲಾವಣೆಯಲ್ಲಿದ್ದ ಐನೂರು ಮತ್ತು ಸಾವಿರದ ಹಳೆ ನೋಟುಗಳಲ್ಲಿ ಬಹುಪಾಲು ನೋಟುಗಳು ಬ್ಯಾಂಕ್ ಗಳಿಗೆ ಮರಳಿ ಬಂದಿದೆ... ಹಾಗಾಗಿ ನೋಟ್ ಬ್ಯಾನ್ ನಿಂದಾಗಿ ಏನೂ ಪ್ರಯೋಜನವಾಗಿಲ್ಲ,ಕಪ್ಪು ಹಣ ಸಿಗಲೇ ಇಲ್ಲ ಅಂತ ಅಷ್ಟೂ ಜನ ಮೋದಿ ವಿರೋಧಿಗಳು ಬೊಬ್ಬೆ ಹೊಡೆಯುತ್ತಿದ್ದಾಗ, ಅಲ್ಲಿ ಮೋದಿಯವರ ಟೀಮ್ ಸಾವಕಾಶದಿಂದ ಆಧುನಿಕ ಡಿಜಿಟಲ್ ತಂತ್ರಜ್ಞಾನದ ನೆರವು ಪಡೆದು ಬ್ಯಾಂಕ್ ಅಕೌಂಟ್ ಗಳಲ್ಲಿ ಜಮೆಯಾದ ಹಣದ ಮೂಲವನ್ನು ಡೇಟಾ ಮೈನಿಂಗ್ ಮೂಲಕ ಕೆದಕಿ ಮಾಹಿತಿ ಕಲೆ ಹಾಕುತಿತ್ತು! ಈಗ ಹೆಚ್ಚಿನೆಲ್ಲ ಬ್ಯಾಂಕ್ ಅಕೌಂಟ್ ಗಳಲ್ಲಿನ ಹಣದ ಮಾಹಿತಿ ಪಡೆದಿರುವ ಸರಕಾರ ನಿಧಾನಕ್ಕೆ ಬೇನಾಮಿ ಹೆಸರಲ್ಲಿ ದುಡ್ಡು ಕೂಡಿಟ್ಟ ಕಾಳ ಧನಿಕರ ಬೇಟೆಗೆ ತೊಡಗಿದೆ.
ಈ ಬಗ್ಗೆಯೂ ಒಂದಿಷ್ಟು ಮಾಹಿತಿ ಬಿಚ್ಚಿಟ್ಟ ಜೇಟ್ಲಿಯವರು ಮೊನ್ನೆ ಡಿಸಂಬರ್ 30 ನೇ ತಾರೀಕಿನವರೆಗೆ ರೂ. 2 ಲಕ್ಷದಿಂದ 80 ಲಕ್ಷದವರೆಗೂ ಜಮೆ ಮಾಡಿದ 1 ಕೋಟಿ 9 ಸಾವಿರ ಅಕೌಂಟ್ ದಾರರ ಮಾಹಿತಿಯನ್ನು ಬಿಚ್ಚಿಟ್ಟರು. ಆದರೆ ಇಷ್ಟು ಅಕೌಂಟ್ ಗಳಲ್ಲಿ ಒಟ್ಟು ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ಮಾತ್ರ ಬಿಟ್ಟು ಕೊಡಲಿಲ್ಲ! ಅದಲ್ಲದೆ ರು. 80 ಲಕ್ಷಕ್ಕಿಂತಲೂ ಮೇಲ್ಪಟ್ಟ ಹಣವನ್ನು 1 ಕೋಟಿ ನಲವತ್ತು ಲಕ್ಷ ಅಕೌಂಟ್ ಗಳಲ್ಲಿ ಡಿಪಾಸಿಟ್ ಮಾಡಲಾಗಿದೆ ಎಂಬ ಮಾಹಿತಿ ನೀಡಿದರೂ ಒಟ್ಟು ಮೊತ್ತ ಎಷ್ಟು ಅಂತ ಗುಟ್ಟು ಬಿಟ್ಟು ಕೊಡಲಿಲ್ಲ! ಒಟ್ಟಿನಲ್ಲಿ ನೋಟ್ ಬ್ಯಾನ್ ನಿಂದಾಗಿ ಚಲಾವಣೆಯಲ್ಲಿದ್ದ ಬಹುಪಾಲು ಹಣ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದದ್ದೇ ಒಂದು ದೊಡ್ಡ ಸಾಧನೆ. ಇದರಿಂದಾಗಿ ಹಣದ ಮೂಲ ತಿಳಿಯಲು ಸಾಧ್ಯವಾಗುತ್ತೆ ಮತ್ತು ಇನ್ನು ಮೇಲೆ ಬ್ಯಾಂಕಿಂಗ್ ವ್ಯವಸ್ಥೆಯೊಳಗಿನಿಂದ ಹೊರಹೋಗುವ ಹಣದ ಬಗ್ಗೆ ನಿಗಾ ಇಡಲೂ ಸಾಧ್ಯವಾಗುತ್ತದೆ. ಇದೆಲ್ಲವನ್ನು ಆಧುನಿಕ ಡೇಟಾ ಮೈನಿಂಗ್ ಸಾಫ್ಟ್ ವೇರ್ ಗಳ ಮೂಲಕ ಮಾಡಬಹುದು.
ಈ ಎಲ್ಲ ಅಂಕಿ ಅಂಶಗಳನ್ನು ನೋಡಿದಾಗ ಈಗಾಗಲೇ ಬ್ಯಾಂಕ್ ಗಳಲ್ಲಿ ಜಮೆಯಾಗಿರುವ ಹಣದಲ್ಲಿ ಅದೆಷ್ಟು ಕಪ್ಪು ಹಣ ಇದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗುತ್ತದೆ. ಆಗ ನೋಟ್ ಬ್ಯಾನ್ ಅನ್ನು ದೂಷಿಸಿದವರಿಗೆ ಉತ್ತರವೂ ದೊರಕುತ್ತದೆ. ಆದರೆ ಇದಿಷ್ಟೂ ವಿವರಗಳು ಕೇವಲ ರಾಷ್ಟ್ರೀಕೃತ ಬಂಕ್ ಗಳು ಮತ್ತು ರಾಷ್ಟ್ರಮಟ್ಟದ ಬ್ಯಾಂಕ್ ಗಳದ್ದು ಮಾತ್ರ. ಇದನ್ನು ಹೊರತು ಪಡಿಸಿ ಕೋ-ಅಪೇರೇಟಿವ್ ಬ್ಯಾಂಕ್ ಗಳಲ್ಲಿನ ಬೇನಾಮಿ ಖಾತೆಗಳದ್ದು ಬೇರೆಯೇ ಕತೆ. ಕೋ- ಆಪರೇಟಿವ್ ಬ್ಯಾಂಕ್ ಗಳಲ್ಲಿ ನೋಟ್ ಬ್ಯಾನ್ ಅದ ಮೇಲೆ ಲಕ್ಷಾಂತರ ಅಕೌಂಟ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳು ಜಮೆಯಾಗಿದೆ. ಇವುಗಳ ಪೈಕಿ ಹೆಚ್ಚಿನೆಲ್ಲ ಬೇನಾಮಿ ಅಕೌಂಟ್ ಗಳೇ. ಇವೆಲ್ಲವುಗಳ ಮಾಹಿತಿಯನ್ನೂ ಕಲೆಹಾಕಲಾಗಿದೆ.
ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ಈ ಎಲ್ಲ ಮಾಹಿತಿಗಳ ಅನಾಲಿಸಿಸ್ ಮಾಡೊದಕ್ಕೆಂದೇ ಕಳೆದ ವರ್ಷ ಜನವರಿಯಲ್ಲೇ ಎಲ್. ಅಂಡ್ ಟಿ. ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು "ಇನ್ ಸೈಟ್" ಎಂಬ ಡೇಟಾ ಮೈನಿಂಗ್ ತಂತ್ರಾಶವನ್ನು ಅಭಿವೃದ್ಧಿ ಪಡಿಸಿತ್ತು. ಈ ಸಾಫ್ಟ್ ವೇರ್ ಮೂಲಕ 22 ಕೋಟಿ 94 ಲಕ್ಷ ಪ್ಯಾನ್ ಕಾರ್ಡ್ ಗಳನ್ನು, ತಪಾಸಣೆ ಮಾಡಲಾಗುತ್ತದೆ. ಜೊತೆಗೆ ಕೋಟ್ಯಂತರ ಬ್ಯಾಂಕ್ ಖಾತೆಗಳನ್ನೂ, ಅದಕ್ಕೆ ಸಂಬದ್ಧ ಪಟ್ಟ ಹಾಗೆ ಆಧಾರ್ ಕಾರ್ಡ್ ಗಳನ್ನೂ ತಪಾಸಣೆ ಮಾಡಲಾಗುತ್ತದೆ. ಸದ್ದೇ ಇಲ್ಲದೆ ಪ್ಯಾನ್ ನಂಬರ್, ಆಧಾರ್ ಕಾರ್ಡ್ ನಂಬರ್ ಎರಡನ್ನೂ ಬ್ಯಾಂಕ್ ಖಾತೆಗೆ ಜೋಡಿಸುವ ಕೆಲಸ ಸದ್ದಿಲ್ಲದೇ ಆರಂಭವಾಗಿದೆ. ಅದುದರಿಂದ ಬೇನಾಮಿ ಅಕೌಂಟ್ ಗಳಲ್ಲಿ ಇರುವ ಹಣದ ಮೂಲ ಸುಲಭದಲ್ಲಿ ಪತ್ತೆ ಆಗುತ್ತದೆ. ಇದಲ್ಲದೆ ಈ "ಇನ್ ಸೈಟ್" ಸಾಫ್ಟ್ ವೇರ್ ಮೂಲಕ ಸಂಶಯಾಸ್ಪದ ವ್ಯಕ್ತಿಗಳ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಗಳ ಮೇಲೂ ಕಣ್ಣಿಡಲಾಗುತ್ತದೆ.ಇವೆಲ್ಲ ಮಾಹಿತಿ ಕ್ರೋಢೀಕರಣದ ಮೂಲಕ ಕಪ್ಪು ಹಣದ ಮತ್ತು ಬೇನಾಮಿ ವ್ಯವಹಾರಗಳ ಜಾಡು ಹಿಡಿದು ಬೇಟೆಯಾಡುವ ಕೆಲಸ ಇದೀಗ ಶುರುವಾಗಿದೆ.
ಇದಿಷ್ಟು ರಾಷ್ಟ್ರೀಕೃತ ಮತ್ತು ರಾಷ್ಟ್ರ ಮಟ್ಟದ ದೊಡ್ಡ ಬ್ಯಾಂಕ್ ಗಳಲ್ಲಿನ ಖಾತೆಗಳ ಕತೆಯಾದರೆ, ಸಹಕಾರಿ ಬ್ಯಾಂಕ್ ಗಳದ್ದೇ ಇನ್ನೊಂದು ದೊಡ್ಡ ಕತೆ. ನೋಟ್ ಬ್ಯಾನ್ ಆದ ನಂತರದಲ್ಲಿ ದೇಶಾದ್ಯಂತವಿರುವ ಸಹಕಾರಿ ಬ್ಯಾಂಕ್ ಗಳ ಶಾಖೆಗಳಲ್ಲಿ ಸಾವಿರಾರು ಕೋಟಿ ಗಳಷ್ಟು ಕಾಳ ಧನ ಶೇಖರಣೆಯಾಗಿದೆ. ಇವುಗಳೆಲ್ಲ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರುವುದಿಲ್ಲವಾದ್ದರಿಂದ, ಈ ಎಲ್ಲ ಸಹಕಾರಿ ಬ್ಯಾಂಕ್ ಖಾತೆಗಳ ಅಂಕಿಅಂಶಗಳನ್ನು ಈಗ ತಾನೇ ತನಿಖೆಗೊಳಪಡಿಸಲಾಗುತ್ತಿದೆ.
ಕೇರಳದ ಕೋಆಪರೇಟಿವ್ ಬ್ಯಾಂಕ್ ಗಳಲ್ಲಿ ದೊಡ್ಡ ಪ್ರಮಾಣದ ಬ್ಲ್ಯಾಕ್ ಮನಿ ಜಮೆಯಾಗಿರುವುದು ಈಗಾಗಲೇ ಗೊತ್ತಾಗಿದೆ. ಕೇರಳ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ, ಉತ್ತರಪ್ರದೇಶ ಮತ್ತಿತರ ಹಲವಾರು ಕಡೆ ಈಗಾಗಲೇ ದಾಳಿಗಳೂ ನಡೆದಿವೆ. ಕರ್ನಾಟಕದ ಸಹಕಾರಿ ಬ್ಯಾಂಕ್ ಗಳೂ ಈ ವಿಚಾರದಲ್ಲಿ ಕಡಿಮೆ ಇಲ್ಲ. ನಮ್ಮ ರಾಜ್ಯದಲ್ಲಿ ಸುಮಾರು ಇನ್ನೂರ ಎಂಬತ್ತೈದು ಕೋಆಪರೇಟಿವ್ ಬ್ಯಾಂಕ್ ಗಳಿದ್ದು, ಇವುಗಳಲ್ಲಿನ ಸುಮಾರು ಸಾವಿರದ ಮುನ್ನೂರು ಖಾತೆಗಳಲ್ಲಿ ಸಂಶಯಾಸ್ಪದವಾದ ಠೇವಣಿ ಜಮೆಯಾಗಿದ್ದು, ಇದರ ಮೊತ್ತ ಅಂದಾಜು ಏಳು ಸಾವಿರ ಕೋಟಿ ರೂಪಾಯಿ ಇದೆ. ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿನ ಕಾಳ ಧನದ ಮೂಲ ಪತ್ತೆ ಮಾಡಲು ಇನ್ನು ಕೆಲವು ದಿನಗಳು ಹಿಡಿಯಬಹುದು. ಇನ್ನು ಮುಂದೆ ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿ ಹೀಗೆ ಬೇನಾಮಿ ಖಾತೆಗಳಲ್ಲಿ ಕಪ್ಪು ಹಣ ಠೇವಣಿಯಾಗದಂತೆ ನೋಡಿಕೊಳ್ಳಲು ಈ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ಕೋ-ಆಪರೇಟಿವ್ ಬ್ಯಾಂಕ್ ಗಳ ಶಾಖೆಗಳನ್ನು ಗಣಕೀಕರಣಗೊಳಿಸಿ, ಅಲ್ಲೂ ಕೂಡ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಈಗಾಗಲೇ ಇನ್ಫೋಸಿಸ್ ಮತ್ತು ಟಿ.ಸಿ.ಎಸ್. ಕಂಪೆನಿಗಳಿಗೆ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸುವ ಕೆಲಸವನ್ನು ಸರಕಾರ ಒಪ್ಪಿಸಿದೆ. ಮುಂದಿನ ವರ್ಷದೊಳಗೆ ದೇಶದಲ್ಲಿನ ಅಷ್ಟು ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿನ ವ್ಯವಹಾರಗಳು ಪಾರದರ್ಶಕವಾಗಲಿದ್ದು, ಸಂಪೂರ್ಣ ಮಾಹಿತಿ ಅರ.ಬಿ.ಐ. ಗೆ ಸಿಗಲಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿನ ಬೇನಾಮಿ ವ್ಯವಹಾರ ಸಂಪೂರ್ಣ ಬಂದ್ ಆಗಲಿದೆ.
ಇದರ ಜೊತೆಗೇ ರೂಪಾಯಿ 3 ಲಕ್ಷಕ್ಕಿಂತ ಮೇಲ್ಪಟ್ಟ ಯಾವುದೇ ವಹಿವಾಟಿಗೂ ನಗದು ಬಳಸುವಂತಿಲ್ಲ. ಎಲ್ಲ ವ್ಯವಹಾರವೂ ಬ್ಯಾಂಕ್ ಮುಖಾಂತರವೇ ಆಗಬೇಕು. ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸುವಾಗಲು ಈ ಹಿಂದೆ ಇಪ್ಪತ್ತು ಸಾವಿರದವರೆಗೆ ನಗದು ರೂಪದಲ್ಲಿ ದೇಣಿಗೆ ಸ್ವೀಕರಿಸಬಹುದಿತ್ತು. ಅಂಥಾ ಸಂದರ್ಭಗಳಲ್ಲಿ ದೇಣಿಗೆ ನೀಡಿದಾತನ ಹೆಸರನ್ನೇ ಉಲ್ಲೇಖಿಸದೆ ಮರೆಮಾಚಬಹುದಿತ್ತು. ಅಲ್ಲೇ ಕಾಳ ಧನಿಕರ ಆಟ ನಡೆಯುತ್ತಿದ್ದದ್ದು.
ಕಾಂಗ್ರೆಸ್ ನ ದೇಣಿಗೆಗಳ ಪೈಕಿ ಎಂಬತ್ತಮೂರು ಶೇಕಡಾ ಬೇನಾಮಿ ರೂಪದಲ್ಲಿದ್ದರೆ, ಬಿ.ಜೆ.ಪಿ.ಯದ್ದು ಶೇಕಡಾ ಅರವತ್ತೈದರಷ್ಟು ದೇಣಿಗೆ ಬೇನಾಮಿಯಾಗಿದೆ.
ಆದರೆ ಪ್ರಾದೇಶಿಕ ಪಕ್ಷಗಳ ವಿಚಾರ ಇದಕ್ಕಿಂತಲೂ ಹದಗೆಟ್ಟಿದೆ. ಸಮಾಜವಾದಿ ಪಕ್ಷದ ಶೇಕಡಾ ತೊಂಬತ್ತನಾಲ್ಕರಷ್ಟು ಫಂಡ್ ಬೇನಾಮಿಯಾಗಿದ್ದರೆ, ಮಾಯಾವತಿಯ ಬಹುಜನ ಸಮಾಜ ಪಕ್ಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೇಕಡಾ ನೂರಕ್ಕೆ ನೂರರಷ್ಟೂ ಪಾರ್ಟಿ ಫಂಡ್ ಬೇನಾಮಿ ಮೂಲದಿಂದ ಬಂದಿದೆ ಅಂತ ಘೋಷಿಸಿಕೊಂಡಿದೆ!
ಆದರೆ ಇನ್ನು ಮುಂದೆ ಪಾರ್ಟಿ ಫಂಡ್ ಗಳ ಬೇನಾಮಿ ರೂಪದ ಕಾಳ ಧನಕ್ಕೂ ಬ್ರೇಕ್ ಬೀಳುತ್ತದೆ. ಯಾವ ರಾಜಕೀಯ ಪಕ್ಷವೂ ಎರಡು ಸಾವಿರಕ್ಕಿಂತ ಹೆಚ್ಚಿನ ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಏನೇ ಇದ್ದರು ಅದು ಬ್ಯಾಂಕ್ ಮೂಲಕವೇ ಸಂದಾಯ ಆಗಬೇಕು. ಇದಕ್ಕೆಂದೇ ಈ ಬಜೆಟ್ ನಲ್ಲಿ ಎಲೆಕ್ಷನ್ ಫಂಡ್ ಗೆಂದೇ ದೇಣಿಗೆ ನೀಡುವವರಿಗಾಗಿ ಸರಕಾರ ಬಾಂಡ್ ಒಂದನ್ನು ಜಾರಿಗೆ ತರುತ್ತಿದೆ. ಈ ಬಾಂಡ್ ಅನ್ನು ಯಾರು ಬೇಕಾದರೂ ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಬಹುದು. ನಂತರ ಈ ರಾಜಕೀಯ ಪಕ್ಷಗಳು ಅದನ್ನು ಬ್ಯಾಂಕ್ ಗೆ ಸಲ್ಲಿಸಿ ನಗದನ್ನು ಪಡೆಯಬಹುದು. ಈ ಒಂದು ಕ್ರಮದಿಂದಾಗಿ ಯಾವುದೇ ರಾಜಕೀಯ ಪಕ್ಷ ಗಳು ಚುನಾವಣೆಯಲ್ಲಿ ಕಪ್ಪು ಹಣದ ಬಲ ಪ್ರದರ್ಶನ ಮಾಡೋದು ಅಸಾಧ್ಯದ ಮಾತು. ಈ ಒಂದು ಐತಿಹಾಸಿಕ ಕ್ರಮ ಕೈಗೊಂಡ ಜೇಟ್ಲಿಯವರು ಮತ್ತು ಇದರ ಹಿಂದಿನ ಧೀಶಕ್ತಿ ಪ್ರಧಾನಿ ನರೇಂದ್ರ ಮೋದಿಯವರು ನಿಜಕ್ಕೂ ಅಭಿನಂದನಾರ್ಹರು.
ಹೀಗಾಗಿಯೇ ನಾನು ಹೇಳಿದ್ದು "ಬಜೆಟ್ ನೊಳಗಿದೆ ಕೆಲವೊಂದು ಗುಟ್ಟು - ಕಾಳ ಧನಿಕರ ಮೂಲಕ್ಕೇ ಬೀಳಲಿದೆ ಪೆಟ್ಟು." ಅಂತ !!!