ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ ಕೆಲಸ
ಖದೀಮರನ್ನು ಮಟ್ಟಹಾಕಲು ಹೊಸ ಕಾನೂನು ಮತ್ತು ಅಂತರಿಕ್ಷದ ಕಣ್ಣು
ಮೊನ್ನೆ ಬಜೆಟ್ ಮಂಡಿಸುತ್ತಾ ಅರುಣ್ ಜೇಟ್ಲಿಯವರು ಸಾಂಧರ್ಭಿಕವಾಗಿ ಕೇಂದ್ರ ಸರಕಾರ ಹೊಸದೊಂದು ಕಾನೂನನ್ನು ರೂಪಿಸುವ ಕುರಿತು ಹೇಳಿದರು. ದೇಶದಲ್ಲಿ ಭಾರೀ ಅವ್ಯವಹಾರ ಮಾಡಿ, ಇಲ್ಲಿನ ಕಾನೂನಿನ ಕಣ್ಣಿಗೆ ಮಣ್ಣೆರಚಿ ಕೊನೆಗೆ ದೇಶ ಬಿಟ್ಟೋಡುವ ಅಪರಾಧಿಗಳನ್ನು ಹಿಡಿದು ತರಲಾಗದೆ, ಶಿಕ್ಷಿಸಲಾಗದೆ ನಮ್ಮ ಸರಕಾರಗಳು ಕೈ ಕೈ ಹಿಸುಕಿಕೊಳ್ಳುವಂಥ ಪರಿಸ್ಥಿತಿ ಇದೆ. ಹಾಗಾಗಿ ಈಗ ಇರುವ ಕಾನೂನುಗಳಿಗೆ ಒಂದಷ್ಟು ತಿದ್ದುಪಡಿ ತರುವುದು ಅಥವಾ ಹೊಸದೊಂದು ಕಾನೂನನ್ನೇ ಜಾರಿಗೆ ತಂದು ಆ ಮೂಲಕ ಅಂಥ ಅಪರಾಧಿಗಳು ವಿದೇಶಗಳಲ್ಲಿ ಆಶ್ರಯ ಪಡೆದಿದ್ದರೂ ನಮ್ಮ ದೇಶದೊಳಗಿರುವ ಅವರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳೋದು ಇದರ ಉದ್ದೇಶ. ಹೀಗೆ ಮಾಡಲು ಒಂದು ಪ್ರಬಲ ಕಾನೂನಿನ ಅಗತ್ಯವಿದೆ.
ಆದರೆ ಜೇಟ್ಲಿಯವರು ಪ್ರಸ್ತಾಪಿಸಿದ ಕಾನೂನಿಗೆ ಇನ್ನೊಂದು ಉದ್ದೇಶವಿತ್ತು. ಕಪ್ಪು ಹಣದ ವಿರುದ್ಧದ ತಮ್ಮ ಹೋರಾಟದಲ್ಲಿ ಮೋದೀಜಿಯವರು ಯಾರ ಎಣಿಕೆಗೂ ಸಿಗದ ರೀತಿಯ ಹಲವಾರು ಕ್ರಮಗಳನ್ನು ಸದ್ದೇ ಇಲ್ಲದೆ ಕೈಗೊಳ್ಳುತ್ತಿದ್ದಾರೆ. ಬೇನಾಮಿ ಆಸ್ತಿ ಕಾನೂನಿಗೆ ತಂದ ತಿದ್ದುಪಡಿಯೂ ಇಂಥ ಕ್ರಮಗಳಲ್ಲೊಂದು. ಈ ಕಾನೂನಿಗೆ ತಿದ್ದುಪಡಿ ತಂದು ಈಗಾಗಲೇ ಜಾರಿಗೊಳಿಸಲು ಶುರುಮಾಡಿಯಾಗಿದೆ. ಬಜೆಟ್ ಮಂಡನೆಯಾಗೋದಕ್ಕಿಂತಲೂ ಮೊದಲೇ ನಲವತ್ತೆರಡು ಬ್ಯಾಂಕ್ ಅಕೌಂಟ್ ಗಳಲ್ಲಿನ ಕೋಟಿಗಟ್ಟಲೆ ರೂಪಾಯಿಗಳನ್ನು ಮುಟ್ಟುಗೋಲುಹಾಕಿಕೊಂಡು ಎಂಬತ್ತೇಳು ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಿಯಾಗಿದೆ. ಹಿಂದೆಲ್ಲ ಈ ರೀತಿಯ ಬೇನಾಮಿ ಅಸ್ತಿ ವಶಪಡಿಸಿಕೊಳ್ಳಲು ಕಾನೂನಿನ ತೊಡಕುಗಳಿದ್ದವು. ಹಾಗಾಗಿಯೇ ಸರಕಾರಗಳು ಅಸಹಾಯಕವಾಗಿದ್ದವು. ಈಗ ಸಶಕ್ತ ಬೇನಾಮಿ ಕಾಯ್ದೆಯ ಜೊತೆಗೇ ಈ ಹೊಸ ಕಾನೂನೂ ಜಾರಿಯಾದರೆ, ಯಾರ್ಯಾರ ಹೆಸರಲ್ಲೋ ಅಸ್ತಿ ಮಾಡಿಟ್ಟು, ದೇಶಬಿಟ್ಟು ಪಲಾಯನ ಮಾಡಿ ಪರದೇಶಗಳಲ್ಲಿ ಆಶ್ರಯ ಪಡೆದಿರೋ ಪಾತಕಿಗಳನ್ನು, ಖದೀಮರನ್ನು ಮಟ್ಟಹಾಕಲು ಸರಕಾರಕ್ಕೆ ಹೊಸ ಪ್ರಬಲ ಅಸ್ತ್ರವೊಂದು ಸಿಕ್ಕಂತಾಗುತ್ತದೆ. ಜೇಟ್ಲಿಯವರು ಇಂಥದ್ದೊಂದು ಕಾನೂನು ಜಾರಿಗೆ ತರಲಾಗುವುದು ಅಂತ ಹೇಳಿದಾಗ ಹೆಚ್ಚಿನೆಲ್ಲ ಜನರಿಗೆ ದಿಢೀರನೆ ಮನಸಿಗೆ ಬಂದ ಹೆಸರು ವಿಜಯ್ ಮಲ್ಯನದ್ದು. ಇದೇ ಧಾಟಿಯಲ್ಲಿ ಪತ್ರಿಕೆಗಳೂ ಬರೆದವು. ಆದರೆ ಜನರು ಮತ್ತು ಪತ್ರಿಕೆಗಳವರು ಮರೆತದ್ದು ದಾವೂದ್ ಇಬ್ರಾಹಿಂ, ಟೈಗರ್ ಮೆಮನ್, ಛೋಟಾ ಶಕೀಲ್ ಮುಂತಾದ ಖದೀಮ ದೇಶದ್ರೋಹಿಗಳ ಹೆಸರುಗಳನ್ನು.
1993ರ ರಿಂದ ಇಂದಿನವರೆಗೆ ಭಾರತ ಸರಕಾರಕ್ಕೆ ದಾವೂದ್ ಮತ್ತವನ ಪಾಪಿ ಪಟಾಲಮ್ಮಿನ ಮೇಲೆ ಕ್ರಮ ಕೈಗೊಳ್ಳಲು ಆಗಿರಲಿಲ್ಲ. ಇದ್ದದರಲ್ಲಿ ವಾಜಪೇಯಿಯವರ ಸರಕಾರವಿದ್ದಾಗಲೇ ಕೊಂಚ ಮಟ್ಟಿಗೆ ಇಂಥಾ ಪ್ರಕರಣಗಳಲ್ಲಿ ಸರಕಾರ ನಿರ್ಭೀತಿಯಿಂದ ಕ್ರಮ ಜರಗಿಸಿದ್ದಿದೆ . ಮುಂಬೈಯ ಡೋಂಗ್ರಿ ಯಲ್ಲಿನ ತೇಂಕರ್ ಮೊಹಲ್ಲಾ, ಮಝಗಾವ್ ನ ಬೇಕರ್ ಲೇನ್ ನ ಮೊಹಮ್ಮದ್ ಮ್ಯಾನ್ಷನ್, ತಾರ್ದೇವ್ ಜೀರಾಬಾಯಿ ಲೇನ್ ನ ಉಮೆರಾ ಇಂಜಿನಿಯರಿಂಗ್ ವರ್ಕ್ಸ್, ಯಾಕೂಬ್ ಸ್ಟ್ರೀಟ್ ನ ದಮರ್ ವಾಲಾ ಬಿಲ್ಡಿಂಗ್, ಮಾಂಡ್ವಿ ಯಲ್ಲಿನ ರಾಜಗರ ಮ್ಯಾನ್ಷನ್, ಪಾಕ್ ಮೋಡಿಯಾ ದಲ್ಲಿನ ರೌನಕ್ ಆಫ್ರೋ ಹೋಟೆಲ್, ನಾಗಪಡಾ ದಲ್ಲಿನ ಪಾರ್ಕಾರ್ ಮ್ಯಾನ್ಶನ್, ಮುಂತಾದ ದಾವೂದ್ ಇಬ್ರಾಹಿಂಗೆ ಸೇರಿದ ಬಹುಕೋಟಿ ಬೆಲೆಯ ಆಸ್ತಿಗಳನ್ನೂ ಮುಟ್ಟಗೋಲು ಹಾಕಿಕೊಳ್ಳಲು ವಾಜಪೇಯಿಯವರ ಸರಕಾರ ಶ್ರಮವಹಿಸಿತು .
ಆದರೆ ನಂತರ ಬಂದ ಸರಕಾರಗಳದ್ದು ಪಕ್ಕಾ ಸೆಕ್ಯೂಲರ್ ಆಡಳಿತವಾದ್ದರಿಂದ, ಅವರು ತುಂಬಾ ಸಹಿಷ್ಣುಗಳಾದರು, ದಾವೂದ್ನನ್ನು ವಿಶ್ವ ಸಂಸ್ಥೆಯೇ ಉಗ್ರಗಾಮಿ ಎಂದು ಘೋಷಿಸಿದ್ದರೂ, ನಮ್ಮ ಜಾತ್ಯಾತೀತ ಪ್ರಗತಿಪರ ರಾಜಕೀಯ ಪಕ್ಷಗಳಿಗೆ ದಾವೂದ್ ಇಬ್ರಾಹಿಂನ ಜಾತಿಯೇ ಮುಖ್ಯವಾಯಿತು. ಆತ ಮುಂಬಯಿಯಲ್ಲಿ ನಡೆಸಿದ ಸರಣಿ ಸ್ಫೋಟಗಳು ನಗಣ್ಯವಾದವು. ಎಷ್ಟಾದರೂ ಒಸಾಮಾ ಬಿನ್ ಲಾಡೆನ್ನನ್ನು "ಒಸಾಮಾಜೀ" ಅಂತ ಕರೆದವರಲ್ಲವೇ? ಅದೇ ಮುಂಬೈ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮನ್ ಮತ್ತೆ ಮನೆಮನೆಯಲ್ಲೂ ಹುಟ್ಟಿ ಬರಬೇಕು ಹಾರೈಸುವ ಮನಸ್ಥಿತಿ ಇವರದು. ಆದುದರಿಂದಲೇ ದಾವೂದ್ ಪಾಕಿಸ್ತಾನದಲ್ಲಿದ್ದರೂ ಇಲ್ಲಿನ ಅವನ ಅಂಡರ್ ವರ್ಲ್ಡ್ ದಂಧೆಯನ್ನು ಯಾರಿಗೂ ಕ್ಯಾರೇ ಅನ್ನದೆ ಮುಂದುವರಿಸಿಕೊಂಡು ಬಂದ.
ದಾವೂದ್ ಮತ್ತಿತರರ ಇಂಥ ಬೇನಾಮಿ ಆಸ್ತಿ ಮುಟ್ಟುಗೋಲು ಹಾಕಲು ಸ್ಮಗ್ಲಿಂಗ್ ಅಂಡ್ ಫಾರಿನ್ ಎಕ್ಸ್ ಚೇಂಜ್ ಮ್ಯಾನಿಪುಲೇಟರ್ಸ್ ಆಕ್ಟ್ ಎಂಬ 1976 ರ ಹಳೆಯ ಹಲ್ಲಿಲ್ಲದ ಕಾನೂನು ಬಿಟ್ಟರೆ ನಮಗೆ ಬೇರೆ ಗತಿಯಿರಲಿಲ್ಲ. ಹೇಗಾದರೂ ಮಾಡಿ ಅಧಿಕಾರಿಗಳು ಆಸ್ತಿ ವಶಪಡಿಸಿಕೊಂಡರೆ ನಮ್ಮ ದೇಶದ ಕೋರ್ಟ್ ಗಳೇ ತಡೆಯಾಜ್ಞೆ ನೀಡುತ್ತಿದ್ದವು. ಹೀಗಾಗಿ ದಾವೂದ್ ನ ಬೇನಾಮಿ ಆಸ್ತಿಗಳನ್ನು ಸರಕಾರ ಏನೂ ಮಾಡುವಂತಿರಲಿಲ್ಲ. ಮುಂಬಯಿಯ ಮುಸಾಫಿರ್ ಖಾನಾ ಬಳಿಯ ಮುನೀಮ್ ಕಾಂಪೌಂಡ್ ನಲ್ಲಿರುವ ದಾವೂದ್ ಒಡೆತನದ ಸಾರಾ - ಸಹಾರಾ ಶಾಪಿಂಗ್ ಕಾಂಪ್ಲೆಕ್ಸ್ ನ ಗೋಳು ಇವತ್ತಿಗೂ ಮುಗಿದಿಲ್ಲ. ಸೆಂಟ್ರಲ್ ಪಿ.ಡಬ್ಲ್ಯೂ.ಡಿ. ಒಡೆತನದ ಈ ಜಾಗದಲ್ಲಿ ದಾವೂದ್ ಅಕ್ರಮವಾಗಿ ನಿರ್ಮಿಸಿದ ಈ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಹತ್ತು ವರ್ಷದಷ್ಟು ಹಿಂದೆಯೇ ಸುಪ್ರೀಮ್ ಕೋರ್ಟ್ ಆದೇಶದ ಮೇರೆಗೆ ಒಡೆದುಹಾಕಲಾಗಿತ್ತು. ಆದರೆ ದಾವೂದ್ ಎಂಜಲು ತಿನ್ನುವ ರಾಜಕಾರಣಿಗಳು ಇನ್ನೂ ಭಾರತದಲ್ಲಿ ಬದುಕಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿ ಆ ಕಟ್ಟಡ ಮತ್ತೆ ತಲೆಯೆತ್ತಿತು. ಆಶ್ಚರ್ಯ ಎಂದರೆ ನಮ್ಮ ಕಾನೂನುಗಳೂ, ನ್ಯಾಯಾಂಗ ವ್ಯವಸ್ಥೆಯೂ ಜಡ್ಡುಗಟ್ಟಿರೋದರಿಂದ ಒಂದು ವೇಳೆ ಸರಕಾರವೋ, ಅಧಿಕಾರಿಗಳೋ ಇಂಥಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ "ಯಥಾಸ್ಥಿತಿ ಕಾಪಾಡಿ" ಅಂತ "ಸ್ಟೇಟಸ್ ಕೋ" ಆರ್ಡರ್ ನೀಡುವ ಕೋರ್ಟ್ ಗಳೂ ನಮ್ಮಲ್ಲೇ ಇರೋದು ದುರಾದೃಷ್ಟಕರ.
ಆದರೆ ಮೋದೀಜಿ ಬಂದ ನಂತರ ದೇಶದ್ರೋಹಿಗಳ ಗುಂಡಿಗೆಯಲ್ಲಿ ನಡುಕ ಶುರುವಾಗಿದೆ. ಮೋದಿಜಿಯವರು ಅರಬ್ ಸಂಯುಕ್ತ ರಾಜಸಂಸ್ಥಾನದ ಜೊತೆ ರಾಜತಾಂತ್ರಿಕ ಭಾಂದವ್ಯ ವೃದ್ಧಿ ಪಡಿಸಿಕೊಂಡದ್ದು, ಅಲ್ಲಿಗೆ ಭೇಟಿ ನೀಡಿದಾಗ ಹಿಂದೂ ದೇವಾಲಯ ಕಟ್ಟಲು ಜಾಗ ದೊರಕಿಸಿಕೊಂಡದ್ದು, ನಂತರ ಅಲ್ಲಿನ ರಾಜಕುವರನನ್ನು ಗಣರಾಜ್ಯೋತ್ಸವದ ಅತಿಥಿಯಾಗಿಸಿದ್ದು, ಈ ಎಲ್ಲ ನಡೆಗಳಿಂದ ಪಾಕಿಸ್ತಾನ ಮತ್ತು ಅದರ ಆಶ್ರಯದಲ್ಲಿರುವ ದಾವೂದ್ ಇಬ್ರಾಹಿಂಗೆ ಇರಿಸು ಮುರಿಸು ಉಂಟಾಗಿದೆ. ದಾವೂದ್ ನ ಯು.ಎ.ಇ ನಲ್ಲಿನ ಸಾವಿರಾರು ಕೋಟಿ ರೂಪಾಯಿಯ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇದೀಗ ಅಲ್ಲಿನ ಸರಕಾರ ನಿರ್ಧರಿಸಿದೆ. ಇದು ಮೋದೀಜಿಯವರ ರಾಜತಾಂತ್ರಿಕ ಕೌಶಲ್ಯಕ್ಕೊಂದು ಸಾಕ್ಷಿ. ಈಗ ಇಲ್ಲಿ ಭಾರತದ ಮುಂಬೈಯಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಹರಡಿಕೊಂಡಿರುವ ದಾವೂದ್ ನ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಜೇಟ್ಲಿಜಿ ಮತ್ತು ಮೋದಿಜಿ ದೇಶದ ರಕ್ಷಣಾ ಸಲಹೆಗಾರ ಅಜಿತ್ ಡೋವಲ್ ಜೊತೆ ಸೇರಿ ಜಬರ್ದಸ್ತ್ ತಂತ್ರ ಹೆಣೆದಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ನೋಟು ರದ್ದತಿಯಾಯ್ತು. ಈಗ ಬೇನಾಮಿ ಅಸ್ತಿ ಕಾಯಿದೆ ಜಾರಿಗೆ ಬಂದಿದೆ. ಜೊತೆಗೆ ದೇಶ ಬಿಟ್ಟು ಪರಾರಿಯಾಗಿರುವ ಪಾತಕಿಗಳ ಅಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇನ್ನೊಂದು ಕಠಿಣ ಕಾನೂನು ಜಾರಿಗೆ ಬರಲಿದೆ.
ಮಾಧ್ಯಮಗಳ ಮಂದಿ, ಸರಕಾರ ವಿಜಯ್ ಮಲ್ಯನನ್ನು ಟಾರ್ಗೆಟ್ ಮಾಡಿಯೇ ಈ ಕಾನೂನು ರೂಪಿಸುತ್ತಿದೆ ಅಂತ ಹೇಳಿಕೊಂಡರೂ, ಇದರ ಹಿನ್ನೆಲೆಯಲ್ಲಿ ದಾವೂದ್ ನಂಥ ಪಾತಕಿಗಳು ದೇಶವ್ಯಾಪಿ ಹೂಡಿಕೆ ಮಾಡಿರುವ ರಿಯಲ್ ಎಸ್ಟೇಟ್ ಕಂಪೆನಿಗಳು, ಮತ್ತು ವಿದೇಶಿ ದೇಣಿಗೆ ಪಡೆದು ಭಾರತದಲ್ಲಿ ಟೆರರ್ ಸ್ಲೀಪರ್ ಸೆಲ್ ಗಳು ಖರೀದಿಸಿರುವ ಬೇನಾಮಿ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ತಂತ್ರ ಅಡಗಿದೆ.
ಇದರೊಂದಿಗೇ ಇನ್ನೊಂದು ಮಾರಕ ಯೋಜೆನೆಯೊಂದನ್ನು ರೂಪಿಸುತ್ತಿರುವ ಮೋದೀಜಿ ಅದಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕೂಡಾ ಬಳಸಿಕೊಳ್ಳುತ್ತಿದ್ದಾರೆ. ದೇಶ ಬಹುಪಾಲು ರಾಜ್ಯಗಳಲ್ಲಿ ಭೂ ದಾಖಲೆಗಳು ಡಿಜಿಟಲೀಕರಣಗೊಂಡಿದ್ದು ಇನ್ನು ಮುಂದಿನ ಹಂತದಲ್ಲಿ ಈ ಭೂ ದಾಖಲೆಗಳಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನಂಬರ್ ಗಳನ್ನೂ ಜೋಡಿಸುವ ಕೆಲಸ ಪ್ರಾರಂಭವಾಗುತ್ತದೆ. ಈ ಮಹತ್ತರ ಕಾರ್ಯ ಪೂರ್ಣಗೊಂಡರೆ, ನಂತರ ಅತ್ಯಾಧುನಿಕ ಸ್ಪೇಶಿಯಲ್ ಡೇಟಾ ಮೈನಿಂಗ್ ಸಾಫ್ಟ್ ವೇರ್ ಮೂಲಕ ಆಸ್ತಿದಾಖಲೆಗಳ ಖರೀದಿಯ ಸಮಯ, ಪಾವತಿಯಾದ ಮೊತ್ತ, ಖರೀದಿದಾರರ ಹೆಸರು, ಅವರ ಆರ್ಥಿಕ ಹಿನ್ನೆಲೆ, ಅಸ್ತಿ ಖರೀದಿಗೆ ಮುನ್ನ ಮತ್ತು ನಂತರ ಅವರ ತೆರಿಗೆ ಪಾವತಿಯ ಇತಿಹಾಸ, ಅವರ ಆದಾಯಮೂಲ, ಇದೆಲ್ಲಾ ಮಾಹಿತಿಗಳ ಕ್ರೋಢೀಕರಣವಾಗಿ ಸಾಫ್ಟ್ ವೇರ್ ಮೂಲಕ ಆಟೋಮ್ಯಾಟಿಕ್ ಆಗಿ ತಪಾಸಣೆ ನಡಯುತ್ತದೆ. ಯಾವುದೇ ಸಂಶಯಾಸ್ಪದ ಅಸ್ತಿ ಖರೀದಿ ಪ್ರಕ್ರಿಯೆ ನಡೆದಿದ್ದರೂ ಅದು ಸಾಫ್ಟ್ ವೇರ್ ಕಣ್ಣಿಗೆ ಬೀಳುತ್ತದೆ. ಅಲ್ಲಿಗೆ ಬೇನಾಮಿ ಆಸ್ತಿ ಗಳಿಸಿದವರ ಜಾತಕ ಬಿಚ್ಚಿಕೊಳ್ಳುತ್ತದೆ ಮತ್ತು ಅಂಥವರು ಕಾನೂನಿನ ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುತ್ತಾರೆ!.
ಇದಲ್ಲದೆ ದೇಶದಲ್ಲಿ ಸರಕಾರೀ ಯೋಜನೆಗಳಲ್ಲಾಗುವ ಮೋಸವನ್ನು ತಡೆಗಟ್ಟಲೂ ಕೂಡ ಆಧುನಿಕ ತಂತ್ರಜ್ಞಾನದ ಬಳಕೆಗೆ ಈ ಬಜೆಟ್ ಮುನ್ನುಡಿ ಬರೆದಿದೆ. ಕಳ್ಳರ ಮೇಲೆ ಅಂತರಿಕ್ಷದಿಂದಲೇ ಕಣ್ಗಾವಲಿಡುವ ಮಹತ್ತರವಾದ ಹೆಜ್ಜೆಯನ್ನು ಮೋದೀಜಿ ಸದ್ದೇ ಇಲ್ಲದೆ ಶುರು ಮಾಡಿದ್ದಾರೆ. ಇಸ್ರೋ ದ ದೆಹಲಿಯಲ್ಲಿರುವ "ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್" ನಿಂದ "ಭುವನ್" ತಂತ್ರಾಂಶದ ಸಹಾಯದೊಂದಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ನಡೆಯುವ ಕಾಮಗಾರಿಗಳ ಮೇಲೆ ಕಣ್ಣಿಡಲಾಗುತ್ತದೆ. ಮೊತ್ತ ಮೊದಲಿಗೆ "ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ" (ನರೇಗಾ) ಯಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. 2005ರಲ್ಲಿ ಜಾರಿಯಾದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿತ್ತು. ಇದೇ ಫೆಬ್ರವರಿಗೆ ಈ ಯೋಜನೆಗೆ ಹನ್ನೊಂದು ವರ್ಷ ತುಂಬಿತು. ಈ ಅವಧಿಯಲ್ಲಿ ಈ ಯೋಜನೆ ಕಬಳಿಸಿದ ಹಣ ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿತ್ತು. ಕೆಲವೊಂದು ಅಧ್ಯಯನಗಳ ಪ್ರಕಾರ ಈ ಯೋಜನೆಯಲ್ಲಿ ಶೇಕಡಾ ಎಂಭತ್ತರಷ್ಟು ಸೋರಿಕೆಯಾಗುತ್ತದೆಯಂತೆ. ಸುಳ್ಳು ಸುಳ್ಳೇ ದಾಖಲೆ ತೋರಿಸಿ ನಡೆಯದೇ ಇರುವ ಕಾಮಗಾರಿಗಳಿಗೆ ಬಿಲ್ ಮಾಡಿ, ಸರಕಾರದ ಅನುದಾನ ಕಬಳಿಸುವ ಕೆಲಸ ಎಲ್ಲ ಕಡೆಯೂ ನಡೆದಿತ್ತು. ಕಾಂಗ್ರೆಸ್ ಪುಢಾರಿಗಳಿಗೆ ಇದೊಂದು ಅಕ್ಷಯ ಪಾತ್ರೆಯಂತಾಗಿ ಹೋಗಿತ್ತು. ಯಾವಾಗ ಮೋದೀಜಿ ನೇತೃತ್ವದ ಸರಕಾರ ಬಂತೋ ಇದಕ್ಕೆಲ್ಲ ಕಡಿವಾಣ ಹಾಕುವ ಕೆಲಸ ಶುರುವಾಯಿತು. ನಿಧಾನವಾಗಿ ಜನರ ಕೂಲಿ ಹಣವನ್ನು ದಲ್ಲಾಳಿಗಳಿಗೆ ನೀಡದೆ ಜನರ ಬ್ಯಾಂಕ್ ಖಾತೆಗೇ ನೇರವಾಗಿ ಪಾವತಿಸುವ ಕೆಲಸ ಶುರುವಾಯಿತು. ಮೊದಲಿಗೆ ಫಂಡ್ ಗಳನ್ನೂ ನಿಯಂತ್ರಿಸಿ, ನಂತರ ಯೋಜನೆಯ ಎಲ್ಲ ಕಾಮಗಾರಿಗಳೂ ರೈತ ಕೇಂದ್ರಿತವಾಗಿರಬೇಕು, ನೀರಾವರಿಗೆ ಸಂಬಂಧಿಸಿದ್ದಾಗಿರಬೇಕು ಅಂತ ಪಟ್ಟನ್ನು ಬಿಗಿಗೊಳಿಸಲಾಯಿತು. ಆದರೆ ಕಾಂಗ್ರೆಸ್ ಮಾತ್ರ ಒಳಗೊಳಗೇ ಇದನ್ನೆಲ್ಲಾ ಸಹಿಸಿಕೊಳ್ಳಲಾಗದೆ ಮೋದೀಜಿ ನಮ್ಮ ಯೋಜನೆಯನ್ನು ಹಾಳು ಮಾಡಿದರು ಅಂತ ಬಾಯಿಬಾಯಿ ಬಡಿದುಕೊಳ್ಳಲಾರಂಭಿಸಿತು.
ಆದರೂ ಮೋದೀಜಿ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ, ಅತ್ಯಂತ ಆಧುನಿಕ ವೈಜ್ಞಾನಿಕ ಸ್ಪರ್ಶ ನೀಡಿ ಉಪಗ್ರಹದ ಮೂಲಕ ಕಣ್ಗಾವಲು ಇಡುವ ಭಾರಿ ಯೋಜನೆ ಹಾಕಿಕೊಂಡರು. ಅದಕ್ಕೋಸ್ಕರ ಇಸ್ರೋ ದ ಉಪಗ್ರಹದ ಮೂಲಕ ನರೇಗಾದ ಅಡಿಯಲ್ಲಿ ನಿರ್ವಹಿಸಲಾದ ಕಾಮಗಾರಿಗಳನ್ನು "ಭುವನ್ ಸಾಫ್ಟ್ ವೇರ್" ಮೂಲಕ ಜಿಯೋ ಟ್ಯಾಗಿಂಗ್ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಲಾಯಿತು. ಅಂದರೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ನರೇಗಾದ ಅಡಿ ನಡೆದ ಕಾಮಗಾರಿ ಯಾವುದು? ಅದರ ಜಾಗ, ಗಾತ್ರ, ಅದರ ಫೋಟೋ ಸಹಿತ ಎಲ್ಲ ವಿವರಗಳು ಭುವನ್ ಸಾಫ್ಟ್ ವೇರ್ ಗೆ ಜೋಡಿಸಿ ಈ ದೇಶದಲ್ಲಿ ಎಲ್ಲಿ ಯಾವುದೇ ಕಾಮಗಾರಿ ನಡೆದಿರಲಿ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಕ್ರೋಢೀಕರಿಸುವ ಕೆಲಸ ಕಳೆದ ವರ್ಷವೇ ಪ್ರಾರಂಭವಾಯಿತು. ಕಾಮಗಾರಿ ನಡೆದ ಸಮಯ, ಬಿಲ್ ಪಾವತಿಯಾದ ಸಮಯದ ಮಾಹಿತಿ ಕೂಡಾ ಟೈಮ್ ಸ್ಟಾಂಪಿಂಗ್ ಮೂಲಕ ಈ ತಂತ್ರಾಂಶದಲ್ಲಿ ದಾಖಲಾಗುತ್ತದೆ. ಆದುದರಿಂದ ಇದರ ಮೂಲಕ ದೇಶದೆಲ್ಲೆಡೆ ನಡೆಯುವ ನರೇಗಾ ಕಾಮಗಾರಿಗಳಲ್ಲಿ ಎಲ್ಲೇ ಏನೇ ಅಕ್ರಮವಾದರೂ ಕಂಡುಹಿಡಿಯಬಹುದು. ಇದನ್ನು ಈ ಬಾರಿಯ ಬಜೆಟ್ನಲ್ಲೇ ಘೋಷಿಸಲಾಯಿತು ಮತ್ತು "ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ"ಗೆ ಈ ಬಾರಿ ಐತಿಹಾಸಿಕವಾಗಿ ಅತ್ಯಂತ ಹೆಚ್ಚು ಮೊತ್ತವನ್ನು ಮೀಸಲಿಡಲಾಯಿತು. (48 ಸಾವಿರ ಕೋಟಿ ರೂಪಾಯಿ.) ಇದರಿಂದ ಕಾಂಗ್ರೆಸಿಗರ ಬಾಯಿಗೆ ಬೀಗ ಬಿತ್ತು.
ಮುಂದೆ ಇದೇ ತಂತ್ರಜ್ಞಾನವನ್ನು ಎಲ್ಲ ಸಿವಿಲ್ ಕಾಮಗಾರಿಗಳಿಗೂ, ಮೈನಿಂಗ್ ಕ್ಷೇತ್ರಕ್ಕೂ ಅಳವಡಿಸುವ ಕೆಲಸ ನಿಧಾನಕ್ಕೆ ಆರಂಭವಾಗಲಿದೆ. ಇದರಿಂದ ರಸ್ತೆಯನ್ನೇ ಮಾಡದೇ ಬರೀ ಪೇಪರ್ ನಲ್ಲಿ ಮಾತ್ರ ರಸ್ತೆ ತೋರಿಸಿ, ಬಾವಿ- ಕೆರೆಗಳನ್ನೇ, ಚರಂಡಿ- ಸೇತುವೆಗಳನ್ನೇ ನಿರ್ಮಿಸದೆ ಬರಿ ಬಿಲ್ ಮಾಡುವ ಕಳ್ಳರಿಗೆಲ್ಲ ಗ್ರಹಚಾರ ಕೈಕೊಡಲಿದೆ. ಉಪಗ್ರಹದಿಂದಲೇ ಕಾಮಗಾರಿಗಳ ಪರಿಶೀಲನೆ ನಡೆದು ಬಿಟ್ಟರೆ, ಮೋಸದಿಂದ ದುಡ್ಡು ಹೊಡೆಯೋದು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಈ ಬಾರಿ ನರೇಗಾದ ಮೂಲಕ ಅತಿಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಕೃಷಿ ಹೊಂಡ ಮುಂತಾದ ನೀರಾವರಿ ಯೋಜನೆಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಇಸ್ರೋ ದ ಉಪಗ್ರಹದಿಂದ ಈ ಎಲ್ಲ ಕಾಮಗಾರಿಗಳಿಗೆ ಜಿಯೊ ಟ್ಯಾಗಿಂಗ್ ಮಾಡಿಸಲಾಗುತ್ತದೆ. ಮುಂದೆ ಇದೇ ರೀತಿಯ ಜಿಯೋ ಟ್ಯಾಗಿಂಗ್ ಎಲ್ಲ ಯೋಜನೆಗಳಿಗೂ ಬರಲಿದೆ.
ಅಲ್ಲಿಗೆ ಡಿಜಿಟಲ್ ತಂತ್ರಜ್ಞಾನವು ವ್ಯವಸ್ಥಿತ ಭ್ರಷ್ಟಾಚಾರ, ದೇಶದ್ರೋಹದ ಚಟುವಟಿಕೆ, ಭಯೋತ್ಪಾದಕ ಕಾರ್ಯಗಳಿಗೆ ಒಂದು ಅಂಕುಶ ಹಾಕಲಿದೆ ಎಂದೇ ಹಾರೈಸುತ್ತೇನೆ. ಮೊತ್ತ ಮೊದಲ ಬಾರಿಗೆ ನಮ್ಮ ದೇಶದಲ್ಲಿ ಕೇಂದ್ರ ಸರಕಾರವೊಂದು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ ಕೆಲಸಕ್ಕೆ ಕೈ ಹಾಕಿದೆ. ಭಾರತೀಯ ಜನತಾ ಪಕ್ಷಕ್ಕೆ ಈ ನಿಟ್ಟಿನಲ್ಲಿ ಎಷ್ಟು ಬದ್ಧತೆಯಿದೆಯೆಂಬುದಕ್ಕೆ ಈ ಎಲ್ಲಾ ಆಡಳಿತಾತ್ಮಕ ಬದಲಾವಣೆಗಳೇ ಸಾಕ್ಷಿ!!