ಸರಿಯಾದ ಉತ್ತರ ನೀಡಿದ ಉತ್ತರ ಪ್ರದೇಶ
ಸರಿಯಾದ ಉತ್ತರ ನೀಡಿದ ಉತ್ತರ ಪ್ರದೇಶ;. ಹದಿನಾಲ್ಕು ವರುಷದ ವನವಾಸ ಮುಗಿಸಿ ಹಿಂದಿರುಗಿದ ಶ್ರೀ ರಾಮ..
ಆ ರಾಜ್ಯದ ತುಂಬಾ ಕಮಲ ಅರಳಿದೆ...
ಸಮಾಜವಾದಿ ಸೈಕಲ್ ಪಂಕ್ಚರ್ ಆಗಿದೆ....
ಕೈಗೆ ಲಕ್ವಾ ಹೊಡೆದಿದೆ...
ಆನೆಗೆ ಗರ ಬಡಿದು ಸುಸ್ತಾಗಿ ಮಲಗಿದೆ!!!!
ನೋಟ್ ಬ್ಯಾನ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಸಾಹಸಕ್ಕೆ ಜನರ ಒಪ್ಪಿಗೆ ದೊರೆತಿದೆ... ಅಂತೂ ಇಂತೂ ಉತ್ತರ ಪ್ರದೇಶದ ಜನ ಸರಿಯಾದ ಉತ್ತರವನ್ನೇ ನೀಡಿದ್ದಾರೆ... ಹದಿನಾಲ್ಕು ವರ್ಷಗಳ ವನವಾಸದ ನಂತರ ಶ್ರೀ ರಾಮನೂ ತನ್ನ ಮೂಲಸ್ಥಾನಕ್ಕೆ ಮರಳಿದ್ದಾನೆ.. ಆದರೆ ನರೇಂದ್ರ ಮೋದಿಯವರ ನಾಮ ಬಲ ರಾಮ ನಾಮ ಬಲಕ್ಕಿಂತಲೂ ಬಹಳ ಹೆಚ್ಚು ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.. ಈ ಹಿಂದೆ 1991 ರಲ್ಲಿ ಬಿಜೆಪಿ ಅಯೋಧ್ಯ ರಾಮ ಮಂದಿರದ ವಿಷಯ ಎತ್ತಿಕೊಂಡು ಚುನಾವಣೆ ಎದುರಿಸಿದಾಗ, ಇಡೀ ದೇಶದೆಲ್ಲೆಡೆ ರಾಮ ಮಂದಿರ-ಬಾಬ್ರಿ ಮಸೀದಿಯ ವಿವಾದ ಸಡ್ಡು ಮಾಡಿದ್ದಾಗಲೂ ಬಿಜೆಪಿಗೆ ದೊರಕಿದ್ದು ಇನ್ನೂರ ಇಪ್ಪತ್ತೊಂದು ಸೀಟುಗಳು ಮಾತ್ರವೇ... ಆ ಬಳಿಕ ನಿಧಾನವಾಗಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಾ ಬಂದ ಪಕ್ಷ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಗಳಿಸಿದ್ದು ಕೇವಲ ನಲವತ್ತೇಳು ಸ್ಥಾನ ಮಾತ್ರ... ಆದರೆ ನಂತರದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸುನಾಮಿಯಲ್ಲಿ ಎಲ್ಲ ಪಕ್ಷಗಳೂ ಕೊಚ್ಚಿಕೊಂಡು ಹೋಗಿ ಬಿಜೆಪಿ ಶೇಕಡಾ 42.30 ಮತಗಳನ್ನು ಪಡೆದು, ಎಪ್ಪತ್ತೊಂದು ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲೂ ಮತ್ತೆ ಮೋದಿಯವರ ನಾಮ ಬಲ ಉತ್ತರ ಪ್ರದೇಶದ ಜನರ ಮೇಲೆ ಮೋಡಿ ಮಾಡಿತು. ಅಭೂತ ಪೂರ್ವವೆನ್ನುವಂತೆ ಒಟ್ಟು ನಾಲ್ಕುನೂರ ಮೂರು ಸ್ಥಾನಗಳ ಪಾಕಿ ಬಿಜೆಪಿ ಮುನ್ನೂರ ಇಪ್ಪತ್ತೈದು ಸ್ಥಾನಗಳನ್ನು ಪಡೆದು ಹೊಸ ದಾಖಲೆ ಬರೆದಿದೆ. ಮೋದಿ ಸುನಾಮಿಗೆ ಸಮಾಜವಾದಿ- ಕಾಂಗ್ರೆಸ್ ಮೈತ್ರಿ ಮತ್ತು ಅಖಿಲೇಶ್ - ರಾಹುಲ್ ಗಾಂಧಿ ದೋಸ್ತಿ ರಾಜಕಾರಣ ಧೂಳೀಪಟವಾಗಿದೆ. ಹತ್ತು ವರ್ಷದ ಹಿಂದೆ ಬಿಎಸ್ಪಿಯ ಮಾಯಾವತಿ ದಲಿತ- ಬ್ರಾಹ್ಮಣ ಕಾಂಬಿನೇಷನ್ನಿನಲ್ಲಿ ಗೆದ್ದಿದ್ದರು... ಈ ಬಾರಿ ದಲಿತ- ಮುಸ್ಲಿಮರ ಕಾಂಬಿನೇಷನ್ನನ್ನು ನೆಚ್ಚಿಕೊಂಡ ಮಾಯಾವತಿಯ ಆನೆ ಮುಗ್ಗರಿಸಿತು. ನೂರಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬೆಹೆನ್ ಜೀ ಕೈಯನ್ನು ಮುಸ್ಲಿಮರು ಹಿಡಿಯಲೇ ಇಲ್ಲವಾದರೆ... ದಲಿತರು ಚೆನ್ನಾಗಿಯೇ ಕೈ ಕೊಟ್ಟರು.. ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಹಿಡಿದ ಮೇಲೆ ಅವರನ್ನೇ ಮರೆತು ತನ್ನದೇ ತಿಜೋರಿ ತುಂಬಿಸಲು ಶುರು ಮಾಡಿದ್ದ ಮಾಯಾವತಿಗೆ ಈ ಬಾರಿ ದಲಿತರೇ ತಕ್ಕ ಪಾಠ ಕಲಿಸಿದರು. ಅತಿಯಾದ ಮುಸ್ಲಿಂ ಓಲೈಕೆಯಿಂದ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲವೆಂಬ ಪಾಠವನ್ನು ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಈ ಚುನಾವಣೆ ಕಲಿಸಿದೆ. ಆದರೆ ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಕೊಡದೇ ಇದ್ದದ್ದಕ್ಕಾಗಿ ಎಲ್ಲರಿಂದಲೂ ಟೀಕೆಗೊಳಗಾದ ಬಿಜೆಪಿ ಮುಸ್ಲಿಂ ಬಾಹುಳ್ಯವಿರುವಲ್ಲೂ ಗೆದ್ದು 'ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ' ಎಂಬ ಮೋದಿಯವರ ಅಭಿವೃದ್ಧಿ ಮಂತ್ರ ನಿಜವೆಂದು ಸಾಬೀತು ಮಾಡಿದೆ... ಕೆಲ ಸಮಯದಿಂದ ಕೋಮು ಹಿಂಸೆ ಕಾರಣಕ್ಕೆ ದೇಶ ವಿದೇಶಗಳಲ್ಲೂ ಸುದ್ದಿ ಮಾಡಿದ್ದ ದಾದ್ರಿ ಮುಜಾಫರ್ ನಗರ್ ಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಮುಜಾಫರ್ ನಗರ್ ನಲ್ಲಿ ಬಿಜೆಪಿಯ ಕಪಿಲ್ ದೇವ್ ಅಗರವಾಲ್ ಗೆದ್ದರೆ, ದಾದ್ರಿಯಲ್ಲಿ ತೇಜ್ ಪಾಲ್ ಸಿಂಗ್ ನಾಗರ್ ಗೆದ್ದರು. ಸಹರನ್ ಪುರ್, ಬರೇಲಿ, ಬಿಜನೋರ್, ಮೊರಾದಾಬಾದ್, ಮುಂತಾದ ಮುಸ್ಲಿಂ ಬಾಹುಳ್ಯವಿರುವಲ್ಲೂ ಬಿಜೆಪಿ ಈ ಬಾರಿ ಗೆದ್ದು ತನ್ನದು ಕೋಮು ರಾಜಕಾರಣವಲ್ಲ, ಬದಲಿಗೆ ಅಭಿವೃದ್ಧಿಯ ಸಕಾರಣ ರಾಜಕೀಯ ಎಂಬುದನ್ನು ಸಾಬೀತು ಮಾಡಿದೆ.
ಅಯೋಧ್ಯೆಯಲ್ಲಿ ವೇದ್ ಪ್ರಕಾಶ್ ಗುಪ್ತ ಗೆದ್ದಿದ್ದಾರೆ. ಆದರೆ ವಿಶೇಷ ಗೆಲುವು ಅಲ್ಕಾ ರಾಯ್ ಎಂಬ ಹೆಣ್ಣು ಮಗಳದ್ದು. 2005ರಲ್ಲಿ ಗಾಝಿ ಪುರದಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಜೊತೆಗೆ ಇತರ ಐವರನ್ನು ಮುಸ್ಲಿಂ ಗೂಂಡಾಗಳು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಸಿ.ಬಿ.ಐ. ರೌಡಿ ಎಮ್ಮೆಲ್ಲೆ ಮುಖ್ತಾರ್ ಅನ್ಸಾರಿಯನ್ನು ಬಂದಿಸಿತ್ತು. ಈ ಬಾರಿ ಆತ ಮಾಯಾವತಿಯ ಬಿಎಸ್ಪಿಗೆ ಸೇರಿದ. ಆತನ ತಮ್ಮ ಸಿಗ್ಬತುಲ್ಲಾಹ್ ಅನ್ಸಾರಿ ಮೊಹಮ್ಮದಾಬಾದ್ನಲ್ಲಿ ಸ್ಪರ್ಧಿಸಿದ್ದ. ಈತನ ವಿರುಧ್ದ ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಿದ್ದು ಮೃತ ಕೃಷ್ಣಾನಂದ ರಾಯ್ ಪತ್ನಿ ಅಲಕಾ ರಾಯ್. ಪತಿ ಹಂತಕನ ತಮ್ಮನ ವಿರುಧ್ದವೇ ಕಣಕ್ಕಿಳಿದ ವೀರ ವನಿತೆ ಅಲಕಾ ಮೊಹಮ್ಮದಾಬಾದ್ ನಲ್ಲಿ ಗೆದ್ದಿದ್ದಾರೆ. ಇದು ನಿಜಕ್ಕೊ ಖುಷಿಕೊಡುವ ವಿಚಾರ... ಹತ್ಯಾ ರಾಜಕಾರಣವನ್ನು ಉತ್ತರ ಪ್ರದೇಶದ ಜನ ವಿರೋಧಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಭಾರೀ ಜಯಭೇರಿ ಸುದ್ದಿಯಾಗುವ ಹೊತ್ತಿಗೆ, ಎಲ್ಲರೂ ಹೆಚ್ಚಾಗಿ ನರೇಂದ್ರ ಮೋದಿಯವ ಬಗ್ಗೆಯೇ ಮಾತಾಡುತ್ತಿದ್ದರು. ಆದರೆ ಈ ಜಯದಲ್ಲಿ ಮೋದಿಯವರಷ್ಟೇ ಪಾಲನ್ನು ಪಕ್ಷದ ಅಧ್ಯಕ್ಷ ಶ್ರೀ ಅಮಿತ್ ಷಾ ಎಂಬ ಪ್ರಚಂಡ ಸಂಘಟಕ, ಚಾಣಾಕ್ಷ ಚುನಾವಣಾ ತಂತ್ರಗಾರ ಕೂಡಾ ಪಡೆದುಕೊಳ್ಳುತ್ತಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯ ಕಾಲದಲ್ಲೇ ಉತ್ತರ ಪ್ರದೇಶಕ್ಕೊಂದು ಪ್ರತ್ಯೇಕ ಸ್ಟ್ರಾಟಜಿ ರೂಪಿಸಿದ್ದ ಅಮಿತ್ ಷಾ ನಿಧಾನವಾಗಿ 2017 ರ ಈ ಚುನಾವಣೆಗೆ ಭರ್ಜರಿ ಪ್ಲ್ಯಾನ್ ಒಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಹೆಚ್ಚು ಕಡಿಮೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ಥಿತ್ವವೇ ಇರಲಿಲ್ಲ. ಅಂಥಲ್ಲಿ ಅಭ್ಯರ್ಥಿಗಳನ್ನು ಹಾಕಿ ಗೆಲ್ಲುವುದೆಂದರೆ ಅದು ಸಾಮಾನ್ಯ ತಂತ್ರಗಾರಿಕೆಯಲ್ಲ. ಆದರೆ ಅದರಲ್ಲಿ ಯಶಸ್ವಿಯಾದ ಅಮಿತ್ ಷಾ ಮುಖ್ಯ ಮಂತ್ರಿ ಅಭ್ಯರ್ಥಿ ಯಾರೆಂಬುದನ್ನೇ ಹೇಳದೆ ಚುನಾವಣೆಯನ್ನು ಭಾರೀ ಅಂತರದಲ್ಲಿ ಗೆದ್ದದ್ದು ಮಾತ್ರವಲ್ಲದೆ, ಇನ್ನು ಸಧ್ಯಕ್ಕೆ ಎದ್ದೇಳುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ವಿರೋಧ ಪಕ್ಷಗಳನ್ನೂ ಧೂಳೀಪಟ ಮಾಡುವುದರಲ್ಲಿ ಯಶಸ್ವಿಯಾದರು. ಇದರಿಂದ ಮುಂದಿನ 2019 ರ ಲೋಕಸಭಾ ಚುನಾವಣೆಗೆ ದಾರಿ ಸುಗಮವಾಗಿಸಿಕೊಂಡರು...
2002 ರಿಂದಲೂ ನರೇಂದ್ರ ಮೋದಿಯವರ ವಿರುಧ್ದ ಪುಂಖಾನುಪುಂಖವಾಗಿ ಸುಳ್ಳು ಸುದ್ದಿಗಳನ್ನೇ ಪ್ರಕಟಿಸುತ್ತಾ ಮೋದಿಯವರ ಚಾರಿತ್ರ್ಯ ಹರಣವನ್ನೇ ತಮ್ಮ ಕಸುಬಾಗಿಸಿಕೊಂಡಿದ್ದ ಹಲವಾರು ಪತ್ರಕರ್ತರ ಸ್ಥಿತಿ ಇವತ್ತು ಚಿಂತಾಜನಕವಾಗಿದೆ. ಮೋದಿ ಅಲೆಯಲ್ಲಿ ಕೊಚ್ಚಿಹೋದ ಎಸ್ಪಿ- ಕಾಂಗ್ರೆಸ್ ಮೈತ್ರಿ, ಅಖಿಲೇಶ್ ರಾಹುಲ್ ಜೋಡಿ, ಅಡ್ಡಡ್ಡ ಮಲಗಿದ ಮಾಯಾವತಿಯ ಆನೆ, ಕೋಮುವಾದದ ಸತತ ಆರೋಪಗಳ ನಡುವೆಯೂ ಎಲ್ಲರ ಲೆಕ್ಕಾಚಾರಗಳನ್ನೂ ಮೀರಿ ಸುನಾಮಿ ಸೃಷ್ಟಿಸಿದ ಬಿಜೆಪಿ, ಇದನ್ನೆಲ್ಲಾ ಇವತ್ತು ವರದಿ ಮಾಡಲೇ ಬೇಕಾದ, ಮೋದಿಯವರನ್ನು, ಅವರ ಅಭಿವೃದ್ಧಿ ಮಂತ್ರವನ್ನು ಒಪ್ಪಲೇ ಬೇಕಾದ ಸಂಧಿಗ್ಧದಲ್ಲಿ ಸಿಲುಕಿ ಹ್ಯಾಪು ಮೊರೆ ಹಾಕಿಕೊಂಡು ಟಿ.ವಿ.ಚಾನೆಲ್ ಗಳಲ್ಲಿ ಬಿಜೆಪಿ ವಿಜಯದ ಸುದ್ದಿಯನ್ನು ಹೇಳುವ ನಮ್ಮ ಸೆಕ್ಯುಲರ್ ಜರ್ನಲಿಸ್ಟ್ ಗಳನ್ನೂ ನೋಡೋದೇ ಒಂದು ಚಂದ... ಉತ್ತರಾಖಂಡದಲ್ಲೂ ಬಿಜೆಪಿ ವಿಜಯ ಪತಾಕೆ ಹಾರಿಸಿದೆ.. ಮಣಿಪುರದಲ್ಲೂ ಕಾಂಗ್ರೆಸ್ ಕೋಟೆಗೆ ಲಗ್ಗೆ ಹಾಕಿ ನುಚ್ಚುನೂರು ಮಾಡುವಲ್ಲಿ ಸಫಲವಾಗಿದೆ.. ಆದರೆ ಗೋವಾದಲ್ಲಿ ಆದ ಕೊಂಚ ಹಿನ್ನಡೆ, ಪಂಜಾಬ್ ನಲ್ಲಿ ಆದ ನಿರೀಕ್ಷಿತ ಹಿನ್ನಡೆಯನ್ನೇ ವಿಜೃಂಭಿಸಿ ಹೇಳುವ ಕೆಲ ಮಾಧ್ಯಮದ ಮಂದಿ ತಮ್ಮ ಅತೃಪ್ತ ವಿಕೃತ ಆತ್ಮಗಳನ್ನು ಸಮಾಧಾನ ಪಡಿಸಿಕೊಳ್ಳಲು ಹೆಣಗುತ್ತಿದ್ದಾರೆ . ಇದನ್ನು ಬರೆಯುವ ಹೊತ್ತಿಗೆ ಇನ್ನೂ ಅಧಿಕೃತ ಫಲಿತಾಂಶ ಘೋಷಣೆಯಾಗಿಲ್ಲವಾದರೂ ಬಿಜೆಪಿಯ ಭಾರೀ ಜಯಭೇರಿಯ ಸುದ್ದಿಯಂತೂ ಖಾತರಿಯೇ.. ನಿಖರ ವಿಶ್ಲೇಷಣೆಯನ್ನು ನಾಳೆ ಮಾಡುತ್ತೇನೆ...