Infinite Thoughts

Thoughts beyond imagination

ಎಲ್ಲರಿಗೂ ಯುಗಾದಿಯ ಶುಭಾಶಯಗಳು...

ಹಲವು ಭಾಷೆ, ಹಲವು ಜನ, ಎಲ್ಲರಿಗೂ ಒಂದೇ ಯುಗಾದಿ - ಸನಾತನ ನವ ವರ್ಷ!

ಸಾಜೀಬು ನೋಂಗ್ಮಾ ಪಾಂಬಾ ಅಥವಾ ಸಾಜೀಬು ಚೈರಾಓಬಾ ಅಂದರೆ ಮಂಡ್ಯದ ರೈತನಿಗೋ, ಬೆಳಗಾವಿಯ ವರ್ತಕನಿಗೋ, ಅರ್ಥವಾಗುವುದಿಲ್ಲ. ಛೇತೀ ಚಾಂದ್ ಅಂದರೂ ಕರ್ನಾಟಕದ ಕರಾವಳಿ ಭಾಗದವರಿಗೆ ಅದರರ್ಥ ಗೊತ್ತಿರುವುದಿಲ್ಲ..! ಗುಡಿ ಪಾಡ್ವಾ ಅಂದ್ರೆ ಆಂಧ್ರದವರಿಗೆ ಗೊತ್ತಿರುವುದಿಲ್ಲ. ತಪನಾ ಅನ್ನೋ ಶಬ್ದ ಕೂಡಾ ನಮಗೆ ಹೊಸತು. ಇನ್ನು ನ್ಯೇಪಿ ಅನ್ನೋದರ ಅರ್ಥವನ್ನು ನಾವು ಶಬ್ದಕೋಶದಲ್ಲಿ ಹುಡುಕಬೇಕು...!

ಭಾರತವೆಂಬ ದೇಶ ಒಂದು ಇತಿಮಿತಿಯೊಳಗೆ ಹಿಡಿದಿಡಲಾಗದ, ಹಲವು ಬಣ್ಣ ಬೆಡಗುಗಳ ಅದಮ್ಯ ತಾಣ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೆಲ ಉದಾಹರಣೆಗಳು ಸಾಕು. ಜಗತ್ತಿನ ಹಲವಾರು ಜನಾಂಗಗಳು, ಪಂಗಡಗಳು, ಪ್ರದೇಶಗಳು, ದಿನಗಳು, ತಿಂಗಳುಗಳು, ವರ್ಷಗಳನ್ನು ಲೆಕ್ಕ ಹಾಕಲು ಎರಡು ರೀತಿಯ ಲೆಕ್ಕಾಚಾರ ಮಾಡುತ್ತವೆ. ಒಂದು ಸೂರ್ಯನ ಚಲನೆಯ ಲೆಕ್ಕಾಚಾರ, ಮತ್ತು ಚಂದ್ರನ ಚಲನೆಯ ಲೆಕ್ಕಾಚಾರ. ಚಂದ್ರನ ಮತ್ತು ಸೂರ್ಯನ ಚಲನೆಗಳನ್ನು ಮೇಳೈಯಿಸಿದ ಲೆಕ್ಕಾಚಾರಗಳೂ ಇವೆ. ದಿನ ತಿಂಗಳುಗಳ ಲೆಕ್ಕಾಚಾರ ಹಾಕಿದ ಮೇಲೆ ವರ್ಷ ಮತ್ತು ಅದರ ಮೊದಲ ದಿನದ ಲೆಕ್ಕಾಚಾರವೂ ಸಹಜವೇ. ಹಾಗಾಗಿ ಹೊಸವರ್ಷದ ಮೊದಲ ದಿನವನ್ನು ಸಡಗರದಿಂದ ಬರಮಾಡಿಕೊಳ್ಳುವ ಹಬ್ಬದ ಆಚರಣೆ ಅನಾದಿ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರೂಢಿಯಲ್ಲಿದೆ.

ಚಾಂದ್ರಮಾನ ಹೊಸವರ್ಷದ ಮೊದಲ ದಿನ (ಚೈತ್ರ ಶುಧ್ದ ಪಾಡ್ಯಮಿ) ಅಂದರೆ ಚೈತ್ರ ಮಾಸದ ಮೊದಲ ದಿನವೇ ಸಾಜೀಬು ನೋಂಗ್ಮಾ ಪಾಂಬಾ ಎಂಬ ಹಬ್ಬವನ್ನು ಮಣಿಪುರ ರಾಜ್ಯದ ನಮ್ಮ ಸಹೋದರರು ಆಚರಿಸುತ್ತಾರೆ.. ಸ್ವಾತಂತ್ರ್ಯ ದೊರಕಿದಾಗ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಹರಿದು ಹಂಚಿ ಹೋಗಿರುವ ಸಿಂಧೀ ಜನಾಂಗ ಛೇತೀ ಚಾಂದ್ ಹಬ್ಬವನ್ನು ಅದೇ ದಿನ ಆಚರಿಸುತ್ತಾರೆ. ಇನ್ನು ದೇಶದ ಮುಕುಟ ಮಣಿಯಂತಿರುವ ಕಾಶ್ಮೀರದ ಪಂಡಿತರು ಇದೆ ದಿನವನ್ನು ನವರೇಹ್ ಅಂತ ಆಚರಿಸುತ್ತಾರೆ. ರಾಜಸ್ಥಾನದ ಮಂದಿ ತಪನಾ ಅನ್ನೋ ಹೆಸರಿನ ಹಬ್ಬವನ್ನೂ ಅದೇ ದಿನ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇನ್ನು ಮರಾಠರೊ ಗುಡಿ ಪಾಡ್ವಾ ಎಂಬ ಹಬ್ಬವನ್ನು ವೈಭವದಿಂದ ಆಚರಿಸುತ್ತಾರೆ. ನಮಗೆ ಅಂದರೆ ಕರ್ನಾಟಕದ ಕನ್ನಡಿಗರಿಗೆ, ಆಂಧ್ರ, ತೆಲಂಗಾಣದ ತೆಲುಗರಿಗೆ ಇದು ಅಚ್ಚುಮೆಚ್ಚಿನ ಯುಗಾದಿ.!

ಕರ್ನಾಟಕದವರು ನಾವು ಬೇವುಬೆಲ್ಲ ತಿಂದು ಇತರರಿಗೂ ತಿನಿಸಿ ಸಿಹಿ ಕಹಿಗಳೆರಡನ್ನೂ ಸಮನಾಗಿ ಸ್ವೀಕರಿಸುತ್ತೇವೆ ಎಂಬ ದೊಡ್ಡ ತತ್ತ್ವವನ್ನು ಕೃತಿಯಲ್ಲಿ ಮಾಡಿತೋರಿಸುತ್ತೇವೆ.. ಆಂಧ್ರದ ತೆಲುಗರೂ ನಮ್ಮಂತೆಯೇ ಷಡ್ರುಚಿಲು ಎಂಬ ಹೆಸರಿನಲ್ಲಿ ಆರು ರುಚಿಗಳನ್ನು ಸೇರಿಸಿ ಅಂದರೆ ಬೇವು, ಬೆಲ್ಲದ ಜೊತೆಗೆ ಹಸಿ ಮೆಣಸು, ಉಪ್ಪು, ಹುಣಸೆ ಹಣ್ಣು ಮತ್ತು ಮಾವಿನಕಾಯಿ ಸೇರಿಸಿ ಯುಗಾದಿ ಪಚಡಿಯನ್ನು ಮಾಡಿ ಹಂಚುತ್ತಾರೆ. ನಮ್ಮಲ್ಲೂ ರೀತಿಯ ಸಂಪ್ರದಾಯ ಕೆಲವೊಂದು ಭಾಗದಲ್ಲಿ ಇದೆ. ಮರಾಠರು ಪೂರಣ್ ಪೋಳಿ ಮಾಡಿದರೆ, ಕನ್ನಡಿಗರು ಒಬ್ಬಟ್ಟು ಮಾಡುತ್ತಾರೆ, ಅದೇ ಆಂಧ್ರದ ಮಂದಿ ಬೊಬ್ಬಟ್ಲು ಅಂತ ಹೆಸರಿರುವ ಸಿಹಿತಿಂಡಿ ಮಾಡುತ್ತಾರೆ.. ಎಲ್ಲವೂ ಹೋಳಿಗೆಗಳೇ !! ಕಾಶ್ಮೀರದ ಪಂಡಿತರಾಗಲೀ, ಪಾಕಿಸ್ತಾನ, ಭಾರತದಲ್ಲಿರುವ ಸಿಂಧೀ ಜನಾಂಗದವರಾಗಲೀ, ರಾಜಸ್ಥಾನದ ಜನ, ಮಣಿಪುರದ ಮಂದಿ ಎಲ್ಲರೂ ಬೇರೆ ಬೇರೆ ಹೆಸರಿನಲ್ಲಿ ಆಚರಿಸುವುದು ಒಂದೇ ಹಬ್ಬವನ್ನೇ.. ಅದನ್ನೇ ನಾವು ಯುಗಾದಿ ಅಂತನ್ನೋ ಹೆಸರಿನಿಂದ ಕರೀತೇವೆ. ಹಳೆಯ ವರ್ಷ ಕಳೆದು ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿರುವ ನಾವು ಹೊಸವರ್ಷವನ್ನು ಹೊಸ ಯುಗದ ಪ್ರಾರಂಭ ಎಂಬ ರೀತಿಯಲ್ಲಿ ಪರಿಭಾವಿಸಿ ಸಂಭ್ರಮ ಪಡುತ್ತೇವೆ.

ನಮ್ಮ ಹೆಮ್ಮೆಯ ದೇಶದ, ನಮ್ಮ ಹೆಮ್ಮೆಯ ಸಂಸ್ಕೃತಿಯ ವೈಶಿಷ್ಟ್ಯವೇ ಅದು. ಆಚಾರ, ವಿಚಾರ, ಆಹಾರ, ಉಡುಗೆ, ತೊಡುಗೆ, ಮಾತು, ಲಿಪಿ, ಯಾವುದರ ವ್ಯತ್ಯಾಸವಿದ್ದರೂ ನಮ್ಮೆಲ್ಲರನ್ನೂ ಒಂದು ಶ್ರೇಷ್ಠ ಸಂಸ್ಕೃತಿ ಅನೂಹ್ಯವಾಗಿ ಬಂಧಿಸಿರುತ್ತದೆ. ಅಂದ ಹಾಗೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲೂ ಯುಗಾದಿಯ ಸಂಭ್ರಮಾಚರಣೆಯಿದೆ... ಬಾಲಿನೀಯರು ಅದನ್ನು ನ್ಯೇಪಿ ಅಂತನ್ನೋ ಹೆಸರಿನಿಂದ ಕರೆಯುತ್ತಾರೆ.

ಇದೆ ಸನಾತನ ಧರ್ಮದ ಮೂಲ ತತ್ವವು ಆಗಿದೆ!!

ಹೀಗಾಗಿ ಹಲವು ಭಾಷೆ, ಹಲವು ಜನ, ಎಲ್ಲರಿಗೂ ಒಂದೇ ಯುಗಾದಿ! ಮತ್ತು ಎಲ್ಲರಿಗೂ ಯುಗಾದಿಯ ಶುಭಾಶಯಗಳು... ಹೇಮಲಂಬಿ ಸಂವತ್ಸರ ನಿಮಗೆ ಬೇವಿನ ಕಹಿಗಿಂತ ಬೆಲ್ಲದ ಸಿಹಿಯನ್ನೇ ಹೆಚ್ಚು ತರಲೆಂದು ಆಶಿಸುತ್ತೇನೆ...

Related posts