ಜಿ.ಎಸ್.ಟಿ. ಕಾಯ್ದೆ- ನವ ಭಾರತದ ನವ ಪರಿಕಲ್ಪನೆಗೊಂದು ಮುನ್ನುಡಿ
ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಿದು. "ಒಂದು ದೇಶ, ಒಂದೇ ತೆರಿಗೆ" ಎಂಬ ಕಲ್ಪನೆ ಸಾಕಾರಗೊಂಡ ದಿನ. ದೇಶ ಸ್ವತಂತ್ರಗೊಂಡ ಇಷ್ಟು ವರ್ಷಗಳ ನಂತರ, ನಮ್ಮ ಸಂವಿಧಾನ ಅನುಷ್ಠಾನಗೊಂಡು ಭಾರತ ಗಣರಾಜ್ಯವೆಂದು ಘೋಷಿಸಿಕೊಂಡ ನಂತರದ ಅತಿ ಮಹತ್ವದ ದಿನ. ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯ ಪಡೆದಾಗ ಧರ್ಮದ ಆಧಾರದ ಮೇಲೆ ಇಬ್ಬಾಗವಾಗಿ ಜನರ ಅಖಂಡ ಭಾರತದ ಕನಸಿಗೆ ಕೊಳ್ಳಿಯಿಟ್ಟಂತಾಗಿತ್ತು. ಮತ್ತೆ ಬಂಗಾಳ ಪಾಕಿಸ್ತಾನದಿಂದ ಬೇರೆಯಾದರೂ ಭಾರತದ ಭಾಗವಾಗಲಿಲ್ಲ. ಕಾಶ್ಮೀರ ಹೊತ್ತಿ ಉರಿಯುತ್ತಲೇ ಇದೆ. ಭಾರತವನ್ನು ಒಂದು ಸಮಗ್ರ ದೇಶವಾಗಿ ಕಾಣುವ ಭಾರತೀಯ ಮನಸ್ಸಿನ ಮೇಲೆ ಬರೆ ಎಳೆಯುವಂಥಾ ಘಟನೆಗಳು ಮೇಲಿಂದ ಮೇಲೆ ನಡೆದವು. ಚೀನಾ ದ್ರೋಹವೆಸಗಿ ಭೂಮಿ ಕಬಳಿಸಿತು. ಕಾಶ್ಮೀರದೊಂದು ಭಾಗ ಪಾಕಿಸ್ತಾನ ನುಂಗಿತು. ಅದಾದ ನಂತರವೂ ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧೀ ಭಾವನೆಗಳನ್ನು ಹುಟ್ಟುಹಾಕಲು ನಮ್ಮವರೇ ಶ್ರಮಿಸಿದರು. ದೇಶವಾಳಿದ ಪಕ್ಷಗಳೂ ಇದಕ್ಕೆ ತುಪ್ಪ ಸುರಿದವು... ದೇಶಪ್ರೇಮ ಅಂದರೇನು? ಎಂಬ ಬಗ್ಗೆಯೇ ಚರ್ಚೆಗಳು ಶುರುವಾಗುವ ದಯನೀಯ ಸ್ಥಿತಿ ತಲುಪಿಬಿಟ್ಟೆವು. ದೇಶ ಒಡೆಯುವ, ದೇಶದ್ರೋಹಿಗಳನ್ನು ಬೆಂಬಲಿಸುವ ಮಾತುಗಳೂ 'ಅಭಿವ್ಯಕ್ತಿ ಸ್ವಾತಂತ್ರ್ಯ ಅಂತನ್ನಿಸಿಕೊಂಡವು. ಭಾರತದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೀಗಳೆಯುವುದೇ 'ಪ್ರಗತಿಪರತೆ' ಅನ್ನಿಸತೊಡಗಿತು. 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳೇ ಅಪಹಾಸ್ಯದ ಸರಕಾಗುವ ಅಪಾಯ ಎದುರಾಯಿತು. 'ಭಾರತ್ ಮಾತಾ ಕಿ ಜೈ' ಅಂತ ಯಾಕನ್ನಬೇಕು? ರಾಷ್ಟ್ರ ಗೀತೆ ಯಾಕೆ ಹಾಡಬೇಕು?, ಎದ್ದು ನಿಂತು ಗೌರವ ಯಾಕೆ ಸೂಚಿಸಬೇಕು? ಎಂದು ಪ್ರಶ್ನಿಸುವ ಧಾರ್ಷ್ಟ್ಯವನ್ನು ದುರಾದೃಷ್ಟವಶಾತ್ ನಮ್ಮ ಕೆಲ 'ಮಾಧ್ಯಮ'ಗಳೇ ತೋರಿದವು. ಹೀಗಾಗಿ ಎಷ್ಟೇ ವೈವಿಧ್ಯತೆಯಿದ್ದರೂ ಒಂದು ಸಾಂಸ್ಕೃತಿಕ ಏಕತೆಯ ಸೂತ್ರದೊಳಗೆ ಬಂಧಿಸಲ್ಪಟ್ಟ ನಮ್ಮ ರಾಷ್ಟ್ರೀಯ ಪ್ರಜ್ಞೆಗೆ ಕಳೆದ ಎಪ್ಪತ್ತು ವರ್ಷದಿಂದಲೂ ಸತತವಾಗಿ ಭಾರೀ ಏಟುಗಳೇ ಬಿದ್ದವು.
ಆದರೆ ೨೦೧೪ ರ ಚುನಾವಣಾ ದೇಶಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಿತು. ಅದೃಷ್ಟವಶಾತ್ ಮಾಹಿತಿ ಕ್ರಾಂತಿಯಿಂದಾಗಿ ಜನ ಸುಳ್ಳನ್ನು ಬೇರ್ಪಡಿಸಿ ಸತ್ಯವನ್ನು ಶೋಧಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಯಿತು. ದೇಶದ ಯುವಜನತೆಯನ್ನು ಸತತವಾಗಿ ದಾರಿ ತಪ್ಪಿಸಿ, ಯುವ ಶಕ್ತಿಯ ಆತ್ಮ ಸ್ಥೈರ್ಯವನ್ನೇ ದುರ್ಬಲಗೊಳಿಸಿದ್ದ ಸ್ಥಾಪಿತ ಹಿತಾಸಕ್ತಿಗಳ ಆಟ ನಡೆಯಲಿಲ್ಲ. ಅವರು ಹೆಣೆದ ಸುಳ್ಳುಗಳ ಬಲೆಯನ್ನು ಕಿತ್ತು ಹಾಕಿ ಜನ ಹೊಸ ಯೋಚನೆಗಳಿಗೆ ತೆರೆದುಕೊಂಡರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಏಳು ದಶಕಗಳ ಕಾಲ ಕವಿದಿದ್ದ ಕರಾಳ ನೆರಳು, ಆವರಿಸಿದ್ದ ಮಂಕು, ಮರೆಗೆ ಸರಿಯಲಾರಂಭಿಸಿತು. ಹೊಸ ಅಖಂಡ ಭಾರತದ ನವ ಪರಿಕಲ್ಪನೆ ಗರಿಗೆದರಿತು. ಭಾರತ ಜಗತ್ತಿನ ಬೃಹತ್ ಶಕ್ತಿಯಾಗುವತ್ತ ಸಧೃಡ ಹೆಜ್ಜೆಯಿಡತೊಡಗಿತು. ದೇಶದ ಆರ್ಥಿಕತೆಯ ಮಗ್ಗುಲನ್ನೇ ಬದಲಿಸುವಂಥ ಈ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 'ಒಂದು ದೇಶ- ಒಂದೇ ತೆರಿಗೆ" ಎಂಬ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ. ಇದರ ಜೊತೆಗೇ 'ತ್ರಿವಳಿ ತಲಾಖ್' ವಿಚಾರವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯ ಇವತ್ತು ಸಾಂವಿಧಾನಿಕ ಪೀಠಕ್ಕೊಪ್ಪಿಸಿದೆ... ಇದರ ಜೊತೆಗೆ 'ಒಂದು ದೇಶ- ಒಂದೇ ಕಾನೂನು' ಎಂಬ ಆಶಯ ಸಾಕಾರಗೊಳ್ಳುವುದರ ಕಡೆಗೂ ಒಂದು ಮಹತ್ವದ ಹೆಜ್ಜೆಯಿಟ್ಟಂತಾಗಿದೆ.
ನೋಟ್ ಬ್ಯಾನ್ ಮಾಡಿ ಕಾಳ ಧನವೆಂಬ ಹೆಮ್ಮಾರಿಗೆ ಮರ್ಮಾಘಾತವಾಗುವಂಥ ಏಟು ನೀಡಿದ ಮೋದೀಜಿಯವರು ಜಿ.ಎಸ್.ಟಿ. ಕಾಯ್ದೆ ಮೂಲಕ ಇನ್ನೊಂದು ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟರು ಎಲ್ಲರೂ ಇಲ್ಲದ ತಗಾದೆ ತೆಗೆದು ಜಿ.ಎಸ್.ಟಿ.ಗೆ ಅಡ್ಡಿಪಡಿಸಿದ್ದು ನೋಡಿದರೆ ಅವರ ಶೋಚನೀಯ ಸ್ಥಿತಿ ಬಗ್ಗೆ ಅನುಕಂಪ ಹುಟ್ಟುವಂತಿತ್ತು. ಭಾರತದಲ್ಲಿ ಕಾಳ ಧನದ ಜಾಡ್ಯ ಹೆಚ್ಚಲು ಕಾರಣವಾದದ್ದೇ ನೆಹರುವಿನ ಸಮಾಜವಾದಿ ಸಿದ್ದಾಂತ ಪ್ರೇರಿತ ನಮ್ಮ ತೆರಿಗೆ ವ್ಯವಸ್ಥೆಯಿಂದಲೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆಯ ಜೊತೆಗೆ ಕೇಂದ್ರ ಸರಕಾರದ ತೆರಿಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಕುಗಳು ಸಾಗಾಣಿಕೆಯಾಗುವಾಗ ವಿಧಿಸುತ್ತಿದ್ದ ತೆರಿಗೆ, ಹೀಗೆ ಹಲವಾರು ತೆರಿಗೆಗಳು ಒಟ್ಟು ಸೇರಿ ವಸ್ತುಗಳ ವೆಚ್ಚ ಹೆಚ್ಚಾಗುತ್ತಿತ್ತು. ಹೀಗಾಗಿಯೇ ವರ್ತಕರು ತೆರಿಗೆಗಳ್ಳತನಕ್ಕಿಳಿದು ಲೆಕ್ಕ ತೋರಿಸದ ತೆರಿಗೆ ಕಟ್ಟದ ಕಾಳ ಧನ ಸಂಗ್ರಹವಾಗುತ್ತಿತು. ಆದರೆ ಜಿ.ಎಸ್.ಟಿ.ಯಿಂದಾಗಿ ಈ ಎಲ್ಲ ರಗಳೆಗಳು ಕೊನೆಗೊಂಡು ತೆರಿಗೆಗಳ್ಳತನ ಇನ್ನುಮುಂದೆ ಸಾಧ್ಯವೇ ಆಗದ ರೀತಿಯಲ್ಲಿ ವ್ಯವಸ್ಥೆ ಕಟ್ಟುನಿಟ್ಟಾಗಿರಲಿದೆ. ೧೯೫೭ರಿಂದ ಅಸ್ತಿತ್ವದಲ್ಲಿದ್ದ ಸೇಲ್ಸ್ ಟ್ಯಾಕ್ಸ್, ೧೯೮೫ರಿಂದ ಇದ್ದ ಎಕ್ಸೈಸ್ ಡ್ಯೂಟಿ, ೧೯೯೪ರಿಂದ ಚಾಲ್ತಿಯಲ್ಲಿದ್ದ ಸರ್ವಿಸ್ ಟ್ಯಾಕ್ಸ್, ವ್ಯಾಟ್, ಸೆನ್ ವ್ಯಾಟ್, ಎಂಟ್ರಿ ಟ್ಯಾಕ್ಸ್, ಲಕ್ಸುರಿ ಟ್ಯಾಕ್ಸ್, ಮುಂತಾದ ಎಲ್ಲ ಟ್ಯಾಕ್ಸ್ ಗಳೂ ರದ್ದಾಗಿ ಸೆಂಟ್ರಲ್ ಜಿ.ಎಸ್.ಟಿ, ಸ್ಟೇಟ್ ಜಿ.ಎಸ್.ಟಿ, ಮತ್ತು ಇಂಟೆಗ್ರೇಟೆಡ್ ಜಿ.ಎಸ್.ಟಿ. ಇರಲಿದ್ದು ಸರಕಿರಲಿ, ಸೇವೆಯೇ ಇರಲಿ, ರಾಜ್ಯದಿಂದ ರಾಜ್ಯಕ್ಕೆ, ತೆರಿಗೆಯ ಮೇಲೆ ತೆರಿಗೆ ಬೀಳುವ ವ್ಯವಸ್ಥೆ ನಿಂತು ಹೋಗುತ್ತದೆ. ಇದರಿಂದಾಗಿ ಕಾಳ ಧನದ ಮೂಲಕ್ಕೆ ಕೊಡಲಿಯೇಟು ಬೀಳಲಿದೆ. ಆದರೆ ವರ್ತಕರಿಗಾಗಲಿ, ಸೇವಾ ಒದಗಣೆದಾರರಿಗಾಗಲಿ ಹೆಚ್ಚು ಹೊರೆಬೀಳದಂತೆ ತೆರಿಗೆ ವ್ಯವಸ್ಥೆ ಇರಲಿದ್ದು, ಎಲ್ಲ ತೆರಿಗೆ ವಹಿವಾಟುಗಳೂ ಅಂತರ್ಜಾಲದ ಮೂಲಕವೇ ಆನ್ ಲೈನ್ ಆಗಿ ನಡೆಯೋದರಿಂದ ಎಲ್ಲ ವ್ಯವಹಾರಗಳೂ ಪಾರದರ್ಶಕವಾಗಲಿದೆ.
ಇದಕ್ಕೆಂದೇ ೧೩೮೦ ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಅತ್ಯಾಧುನಿಕ ಸಾಫ್ಟ್ ವೇರ್ ಸಿದ್ಧಪಡಿಸಿದೆ. ಪ್ಯಾನ್ ಕಾರ್ಡ್ ಸಂಖ್ಯೆಯ ಜೊತೆಗೆ ಸಂಯೋಜನೆಗೊಂಡ ಜಿ.ಎಸ್.ಟಿ. ನೋಂದಾವಣೆಯಿಂದ ತೆರಿಗೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ ಒಂದೇ ಕಡೆ ಕ್ರೋಡೀಕರಣವಾಗಲಿದೆ. ಈಗ ವಾಹನಕ್ಕೆ ಜಿ.ಪಿ.ಎಸ್. ಅಳವಡಿಸಿ ವಾಹನ ಸಾಗುವ ಪಥವನ್ನು ಪತ್ತೆ ಹಚ್ಚಬಹುದಾದಂತೆ ಯಾವ ವಸ್ತು ಎಲ್ಲಿ ತಯಾರಾಗಿ, ಎಲ್ಲಿಗೆ ಹೋಗಿ, ಯಾರ ಮೂಲಕ ಯಾರಿಗೆ ಮಾರಾಟವಾಯಿತೆಂಬ ಅಷ್ಟೂ ಮಾಹಿತಿಗಳು ಜಿ.ಎಸ್.ಟಿ. ಮೂಲಕ ಲಭ್ಯವಾಗಲಿದೆ. ಈಗಾಗಲೇ ದೇಶದ ಹೆಚ್ಚಿನೆಲ್ಲಾ ವ್ಯಾಪಾರಿಗಳು ಜಿ.ಎಸ್.ಟಿ. ನೋಂದಾವಣೆ ಮಾಡಿಸಿಯಾಗಿದೆ. ವ್ಯಾಪಾರಿಗಳ ವ್ಯವಹಾರ ಪಾರದರ್ಶಕವಾದಂತೆಯೇ ಅವರ ಆದಾಯ ಕೂಡಾ ಪಾರದರ್ಶಕವಾದ ಮೇಲೆ, ಅವರು ಆದಾಯ ತೆರಿಗೆ ತಪ್ಪಿಸುವ ಪ್ರಶ್ನೆಯೇ ಇರುವುದಿಲ್ಲ. ಒಮ್ಮೆ ಆದಾಯ ತೆರಿಗೆ ಸರಿಯಾಗಿ ಸಂದಾಯವಾಯಿತೆಂದರೆ ಆದಷ್ಟೂ ವೈಟ್ ಮನಿಯೇ ಆಗುತ್ತದಲ್ಲ!. ಸರಕಾರಕ್ಕೆ ತೆರಿಗೆ ಸಂಗ್ರಹವೂ ನ್ಯಾಯಯುತವಾಗಿಯೇ ಹೆಚ್ಚಾಗುತ್ತದೆ. ಆಗ ಸರಕಾರವೂ ಜನರ ಸೌಲಭ್ಯಗಳಿಗೋಸ್ಕರ ಹೆಚ್ಚಿನ ಹಣವನ್ನು ವ್ಯಯಿಸಲು ಸಾಧ್ಯವಾಗುತ್ತದೆ. ಇನ್ನು ಲಂಚ ಅಥವಾ ಹಗರಣಗಳ ಮೂಲಕ ಹಣ ಕೊಳ್ಳೆ ಹೊಡೆದವರೂ ಕೂಡ ಆ ಹಣದಿಂದ ಏನನ್ನು ಕೊಂಡರೂ ಅದರ ಸರಕಾರಕ್ಕೆ ನೇರವಾಗಿ ಸಿಗುವುದರಿಂದ, ಅಕ್ರಮವಾಗಿ ಹಣಗಳಿಸಿದವರಿಗೆ, ಗಳಿಸಿದ ಹಣವನ್ನು ಖರ್ಚು ಮಾಡಲಿಕ್ಕೇ ಸಾಧ್ಯವಾಗದಂಥ ಪರಿಸ್ಥಿತಿ ಉಂಟಾಗಲಿದೆ. ಆದುದರಿಂದ ಜಿ.ಎಸ್.ಟಿ. ಜಾರಿಯಾಗಿ ಒಂದೆರಡು ವರ್ಷಗಳ ಒಳಗಾಗಿ ದೇಶದಲ್ಲಿನ ಆರ್ಥಿಕ ಅಕ್ರಮಗಳು ಸಹಜವಾಗಿಯೇ ಕಡಿಮೆಯಾಗಲಿದೆ.
"ಒಂದು ದೇಶ- ಒಂದೇ ತೆರಿಗೆ" ಎಂಬುದು ನನಸಾಗುತ್ತಿದ್ದ ಹಾಗೆಯೇ "ಒಂದು ದೇಶ- ಒಂದೇ ಕಾನೂನು" ಎಂಬುದೂ ನನಸಾಗುವ ದಿನ ಹತ್ತಿರ ಬರುತ್ತಿದೆ. ದೇಶದ ಪ್ರಜೆ ಯಾವುದೇ ಮತ, ಧರ್ಮದವನಾಗಿರಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ. ಇದಕ್ಕೆ ಪೂರಕವಾಗಿ ಮುನ್ನುಡಿ ಎಂಬಂತೆ ತ್ರಿವಳಿ ತಲಾಖ್ ವಿಚಾರವೀಗ ಸುಪ್ರೀಂ ಕೋರ್ಟ್ ನಲ್ಲಿ ಸಾಂವಿಧಾನಿಕ ಪೀಠದಿಂದ ವಿಚಾರಣೆಗೊಳಪಡಲಿದೆ. ದೇಶ ಹಲವು ದಶಕಗಳ ಕಾಲದ ದುರಾಡಳಿತದ ಪ್ರಭಾವದಿಂದ ನಿಧಾನವಾಗಿ ಹೊರಬರುತ್ತಿದ್ದು, ಒಂದು ಹೊಸ ವಾತಾವರಣ ನಿರ್ಮಾಣವಾಗತೊಡಗಿದೆ. ನಮ್ಮ ಪ್ರಧಾನ ಮಂತ್ರಿ ಮೋದಿ ಜಿ ಹೇಳಿದಂತೆ, ನವ ಭಾರತದ ನವ ಪರಿಕಲ್ಪನೆ ಜನರ ಮನದಲ್ಲಿ ಮೂಡತೊಡಗಿದೆ. ನವ ಹುಮಸ್ಸು ಯುಗಾದಿಯ ಮತ್ತಷ್ಟು ಎಂದೇ ಹೇಳಬೇಕು.