ನಡೆದಾಡುವ ದೇವರಿಗೆ ನೂರಾಹತ್ತು ವರುಷ, ಜನುಮ ದಿನದ ಹರುಷ
ಮೊನ್ನೆ ಮಾರ್ಚ್ ಮೂರನೇ ತಾರೀಖಿಗೆ ಭರ್ತಿ ಎಂಭತ್ತೇಳು ವರ್ಷಗಳು ತುಂಬಿದವು. ಮಾಗಡಿ ತಾಲೂಕಿನ ವೀರಾಪುರವೆಂಬ ಹಳ್ಳಿಯ ಪರಮ ದೈವಭಕ್ತ ಶರಣ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ ದಂಪತಿಗಳ ಕುಟುಂಬದಲ್ಲಿ ಜನಿಸಿದ ಶಿವಣ್ಣರೆಂಬ ಪುಣ್ಯ ಪುರುಷ ಸನ್ಯಾಸಾಶ್ರಮ ಸ್ವೀಕರಿಸಿದ್ದು ೧೯೩೦ರ ಮಾರ್ಚ್ ಮೂರನೇ ತಾರೀಕು. ಮಹಾನ್ ತಪಸ್ವೀ ಸಿದ್ಧ ಪುರುಷರಾದ ಶ್ರೀ ಉದ್ಧಾನೇಶ್ವರ ಶಿವಯೋಗಿಗಳ ದಿವ್ಯದೃಷ್ಟಿಗೆ ಗೋಚರವಾಗಿ ಅವರಿಂದಲೇ ನಿರಂಜನ ಜಂಗಮ ದೀಕ್ಷೆ ಪಡೆದು "ಶ್ರೀ ಶಿವಕುಮಾರ ಸ್ವಾಮೀಜಿ' ಎಂಬ ಹೊಸ ಅಭಿದಾನವನ್ನು ಪಡೆದ ವೀರಾಪುರದ ಶಿವಣ್ಣನವರು ಮುಂದೆ ಅಕ್ಷರಶಃ ಕಾಯಕ ಯೋಗಿಯೇ ಆದರು. ಎಂಭತ್ತೇಳು ವರ್ಷಗಳ ಸುಧೀರ್ಘ ಮತ್ತು ಅತ್ಯಪೂರ್ವ ಸನ್ಯಾಸ ಜೀವನದ ಪ್ರತಿಕ್ಷಣವನ್ನೂ ದೈವ ನಿಷ್ಠೆ, ಧರ್ಮ ನಿಷ್ಠೆ, ಕಾಯಕ ನಿಷ್ಠೆಯಿಂದ ಕಳೆದ ಮಹಾನ್ ತಪಸ್ವಿ. ಭಕ್ತ ಜನರ ಪಾಲಿನ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು ತಮ್ಮ ನೂರಾಹತ್ತನೆ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದಾರೆ.
ಶತ ಶತಮಾನಗಳ ಹಿಂದೆಯೇ ಶ್ರೀ ಘೋಸಲ ಸಿದ್ಧೇಶ್ವರರ ಅಭೂತಪೂರ್ವ ತಪಃಶಕ್ತಿಯಿಂದ ಅಲ್ಲಿನ ಗಂಗೆ ಆವಿರ್ಭವಿಸಿ ಸಿದ್ಧಗಂಗಾ ಕ್ಷೇತ್ರ ಸ್ಥಾಪನೆಯಾಯಿತು. ನಂತರದಲ್ಲಿ ಸಿದ್ಧ ಪುರುಷರಾದ ಶ್ರೀ ಉದ್ಧಾನೇಶ್ವರ ಶಿವಯೋಗಿಗಳ ಕಾಲದಲ್ಲಿ ಸಿದ್ಧಗಂಗೆಯಲ್ಲಿ ಪಾಠಶಾಲೆಗಳು ಪ್ರಾರಂಭವಾದವು. ಶ್ರೀ ಶಿವಕುಮಾರ ಸ್ವಾಮೀಜಿ ಯವರು ನಿರಂಜನ ಜಂಗಮರಾಗಿ ದೀಕ್ಷೆಪಡೆದು ಸಿದ್ದಗಂಗಾ ಕ್ಷೇತ್ರಕ್ಕೆ ಕಾಲಿಟ್ಟಾಗ ಅಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ನಲವತ್ತು! ಅಂದಿನಿಂದ ಶುರುವಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಕಾಯಕ ನಿಷ್ಠೆ ಸಿದ್ಧಗಂಗೆಯನ್ನು ಪ್ರಪಂಚದಲ್ಲೇ ಅತ್ಯದ್ಭುತ ಜ್ಞಾನಕೇಂದ್ರವನ್ನಾಗಿಸುವಲ್ಲಿ ಪವಾಡವನ್ನೇ ಮೆರೆದಿದೆ. ಇವತ್ತು ಸಿದ್ಧಗಂಗೆಯ ಆಶ್ರಯದಲ್ಲಿ ಒಟ್ಟು ೧೨೩ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಿದೆ. ಅಲೀಗ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತತ್ತಿರ ಐವತ್ತು ಸಾವಿರ! ಇದಿಷ್ಟೂ ಸಾಧನೆಯ ಹರಿಕಾರ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೀಗ ನೂರಾಹತ್ತನೆಯ ವಯಸ್ಸು.
ಅಂದಹಾಗೆ ಶ್ರೀಗಳ ದಿನಚರಿಯನ್ನು ತಿಳಿದರೆ ಎಂಥವರೂ ಆಶ್ಚರ್ಯ ಚಕಿತರಾಗಬೇಕು. ಈ ವಯಸ್ಸಿನಲ್ಲೂ ದಿನದಲ್ಲಿ ಸುಮಾರು ಹದಿನೆಂಟರಿಂದ ಇಪ್ಪತ್ತು ಗಂಟೆಗಳ ಕಾಲ ಕಾಯಕದಲ್ಲಿ ನಿರತರಾಗುವ ಶ್ರೀ ಶಿವಕುಮಾರ ಸ್ವಾಮೀಜಿಗಳ ಚಟುವಟಿಕೆ ಆರಂಭವಾಗುವುದು ನಮ್ಮ ನಿಮ್ಮಂಥವರೆಲ್ಲ ಮನೆಯಲ್ಲಿ ಬೆಚ್ಚಗೆ ಸುಖನಿದ್ರೆಯಲ್ಲಿರುವ ಹೊತ್ತಿಗೆ! ಹೌದು... ಆಶ್ಚರ್ಯವಾದರೂ ನಿಜ! ಶ್ರೀ ಶಿವಕುಮಾರ ಸ್ವಾಮೀಜಿ ಇಂದಿಗೂ ಪ್ರಾತಃ ಕಾಲ ಎರಡೂವರೆ ಗಂಟೆಗೆ ಎದ್ದೇಳುತ್ತಾರೆ. ಸನ್ಯಾಸ ಸ್ವೀಕರಿಸಿದಂದಿನಿಂದಲೂ ನಿತ್ಯ ಜಪ-ತಪ ಅನುಷ್ಠಾನಗಳಲ್ಲಿ ಈ ಎಂಬತ್ತೇಳು ವರ್ಷಗಳಲ್ಲಿ ಒಂದೇ ಒಂದು ದಿನವೂ ಚ್ಯುತಿಯಾಗಿಲ್ಲ. ನಿತ್ಯಕರ್ಮಗಳನ್ನು ಪೂರೈಸಿ ಅಧ್ಯಯನದಲ್ಲಿ ತೊಡಗುವ ಶ್ರೀಗಳು ನಾಲ್ಕೂವರೆ ಘಂಟೆಗೆ ಇಷ್ಟಲಿಂಗ ಪೂಜೆಗೆ ತೊಡಗಿಕೊಳ್ಳುತ್ತಾರೆ. ನಂತರ ಆರು ಗಂಟೆಯಾಗುವಷ್ಟರಲ್ಲಿ ದಿನಪತ್ರಿಕೆಗಳನ್ನೆಲ್ಲ ಓದಿ ಕಚೇರಿಗೆ ಹಾಜರಾಗುತ್ತಾರೆ. ಸಿದ್ಧಗಂಗೆಯಲ್ಲಿರುವ ಎಂಟು ಸಾವಿರ ಮಕ್ಕಳ ಬೆಳಗ್ಗಿನ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ಬಳಿಕ ಅಷ್ಟೂ ವಿದ್ಯಾರ್ಥಿಗಳಿಗೆ ಪ್ರವಚನ ಮಾಡುತ್ತಾರೆ. ಆ ಬಳಿಕ ಸಾರ್ವಜನಿಕ ಭಕ್ತಾದಿಗಳಿಗೆ ದರುಶನ. ಇದು ಅಂತಿಂಥಾ ರೀತಿಯ ದರುಶನವಲ್ಲ. ಬದಲಿಗೆ ತಮ್ಮನ್ನು ಕಾಣಲು ಬರುವ ಎಲ್ಲ ಭಕ್ತರ ಕಷ್ಟಗಳಿಗೂ ಕಿವಿಯಾಗುತ್ತಾರೆ, ಸ್ಪಂದಿಸುತ್ತಾರೆ ಮತ್ತು ಸೂಕ್ತ ಸಮಾಧಾನವನ್ನೂ ಹೇಳುತ್ತಾರೆ! ಮಧ್ಯಾಹ್ನ ಮಠದಲ್ಲಿನ ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮತ್ತು ಮಠಕ್ಕೆ ನಿತ್ಯ ಭೇಟಿಕೊಡುವ ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ. ಸಿದ್ಧಗಂಗೆಯ ದಾಸೋಹದ್ದೂ ದೊಡ್ಡ ಕಥೆಯೇ! ಅಲ್ಲಿ ಎಲ್ಲರೂ ಸಮಾನರು. ಎಂಟು ಸಾವಿರ ವಿದ್ಯಾರ್ಥಿಗಳಿಗೆ ದಿನದ ಮೂರೂ ಹೊತ್ತು ಯಾವ ಆಹಾರ ಪದಾರ್ಥ ಮಾಡಲಾಗುತ್ತದೋ ಅದೇ ಆಹಾರ ಪದಾರ್ಥ ಮಠದ ಎಲ್ಲಾ ಭಕ್ತಾದಿಗಳಿಗೂ ಪರಿಚಾರಕ ಸಿಬ್ಬಂದಿಗೂ.. ಹಾಗಾಗಿ ನಿತ್ಯವೂ ಸಿದ್ಧಗಂಗೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ದಾಸೋಹವಿರುತ್ತದೆ! ಒಂದು ದಿನದಲ್ಲಿ ಕಡಿಮೆಯೆಂದರೂ ಇಪ್ಪತ್ತೈದು ಸಾವಿರ ಜನ ಅಲ್ಲಿ ಪ್ರಸಾದ ಸ್ವೀಕರಿಸುತ್ತಾರೆ.
೧೯೧೭ರಲ್ಲಿ ಶ್ರೀ ಉದ್ಧಾನ ಶಿವಯೋಗಿಗಳಿಂದ ಪ್ರಾರಂಭವಾದ ರಾಜ್ಯದ ಅತ್ಯಂತ ಹಳೆಯ ಸಂಸ್ಕೃತ ವೇದ ಪಾಠಶಾಲೆ ಸಿದ್ಧಗಂಗೆಯಲ್ಲಿದೆ. ಅದಲ್ಲದೆ ಅಲ್ಲಿನ ಎಂಟು ಸಾವಿರಕ್ಕಿಂತಲೂ ಅಧಿಕ ಮಕ್ಕಳಿಗೆ ಸಂಸ್ಕೃತ ಶಿಕ್ಷಣ ಕಡ್ಡಾಯ. ವಿದ್ಯಾರ್ಥಿಗಳಲ್ಲಿ ಎಲ್ಲಾ ಜಾತಿ, ಮತ, ಧರ್ಮಗಳವರೂ ಇದ್ದಾರೆ. ಎಲ್ಲರೂ ದಿನಕ್ಕೆರಡು ಬಾರಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಸಿದ್ಧಗಂಗೆಯಲ್ಲಿದ್ದಾಗಲೆಲ್ಲಾ ಎರಡೂ ಹೊತ್ತಿನ ಪ್ರಾರ್ಥನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗಿಯಾಗುತ್ತಾರೆ. ಸಂಜೆ ಆರರಿಂದ ಎಂಟರ ವರೆಗೆ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆ, ಧ್ಯಾನ, ಪ್ರವಚನಗಳಲ್ಲಿ ಕಳೆಯುವ ಶ್ರೀಗಳು ನಂತರ ಎಂಟರಿಂದ ರಾತ್ರಿ ಹನ್ನೊಂದರವರೆಗೂ ಮತ್ತೆ ತತ್ತ್ವ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗುತ್ತಾರೆ. ಇಷ್ಟು ವಯಸ್ಸಿನಲ್ಲೂ ಕನ್ನಡಕದ ಹಂಗೇ ಇಲ್ಲದೆ ಓದುವ ಶ್ರೀ ಶಿವಕುಮಾರ ಸ್ವಾಮೀಜಿ ನಿತ್ಯವೂ ಬರೆಯುತ್ತಾರೆ. ಅದಲ್ಲದೆ ಪ್ರತೀ ಅಮಾವಾಸ್ಯೆಯಂದೂ ಸಿದ್ಧಗಂಗೆಗೆ ಸಾವಿರಾರು ಭಕ್ತರು ವಿಶೇಷವಾದ ತಾಯತ ಕಟ್ಟಿಸಿಕೊಳ್ಳಲು ಬರುತ್ತಾರೆ. ವಿಶೇಷವೆಂದರೆ ಅಂಥಾ ದಿನ ಅಂದಾಜು ಮುನ್ನೂರು-ನಾಲ್ಕು ನೂರು ಜನರಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳೇ ಸ್ವತಃ ತಮ್ಮ ಕೈಯ್ಯಾರೆ ತಾಯತ ಕಟ್ಟುತ್ತಾರೆ! ಅಷ್ಟೇ ಅಲ್ಲ ಈ ಇಷ್ಟೂ ತಾಯತಗಳನ್ನೂ ಶ್ರೀಗಳೇ ಖುದ್ದಾಗಿ ಬರೆಯುತ್ತಾರೆ!
ಪವಾಡಪುರುಷರಾದ ಶ್ರೀ ಶಿವಕುಮಾರ ಸ್ವಾಮೀಜಿಗಳು ತಾವೇ ಸ್ವತಃ ಒಂದು ಅದ್ಭುತ ಪವಾಡವೆನ್ನುವಂತೆ ನಮ್ಮಗಳ ಕಣ್ಣಿಗೆ ಭಾಸವಾಗುತ್ತಾರೆ. ಸಿದ್ಧಗಂಗೆಯ ಭಕ್ತರು ಮಾತ್ರವಲ್ಲ ಇಡೀ ಜಗತ್ತೇ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು"ನಡೆದಾಡುವ ದೇವರು" ಅಂತ ಗೌರವಿಸುತ್ತದೆ. ಅವರದು ಅವಿಚ್ಚಿನ್ನವಾದ ತಪಸ್ಸು. ಮಾನವ ಮಾತ್ರದಿಂದ ಸಾಧ್ಯವಾಗದ ಸಾಧನೆ. ಅವರ ಜೀವನವೇ ಒಂದು ಪ್ರೇರಣೆ. ನಾವು ಯುಗಪುರುಷ ಎಂಬ ಶಬ್ದವನ್ನು ತಿಳಿದುಕೊಂಡಿದ್ದೇವೆ. ಇತಿಹಾಸದಲ್ಲಿ ಆಗಿಹೋದ ಹಲವಾರು ಯುಗಪುರುಷರೆಂದು ಖ್ಯಾತಿಗಳಿಸಿದವರ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಆದರೆ ನಮ್ಮೆಲ್ಲರ ಸುದೈವವಶಾತ್ ಅಂಥ ಒಬ್ಬ ಯುಗಪುರುಷನನ್ನು ಕಣ್ಣಾರೆ ಕಾಣುವ ಸುಯೋಗ ಶ್ರೀ ಶಿವಕುಮಾರ ಸ್ವಾಮೀಜಿಗಳ ರೂಪದಲ್ಲಿ ನಮ್ಮ ಕಣ್ಣೆದಿರಿಗಿದೆ. ನಿಜಾರ್ಥದಲ್ಲಿ ನಿಷ್ಕಲ್ಮಶ ಕಾಯಕ ಸೇವೆ ಮಾಡುವ ನೈಜ ಸಂತನಿಗೆ ನಮೋ ನಮಃ!