ಪದ್ಮಶ್ರೀ ಪ್ರಶಸ್ತಿ ಅವಚಿ ಹಿಡಿದ ಸುಕ್ರಿಯಜ್ಜಿಗೆ ನೆನಪಾದದ್ದು ಆಕೆಯ ಮಗ!
ಸುಕ್ರಿ ಬೊಮ್ಮ ಗೌಡ ಅಂದ್ರೆ ಅಂಕೋಲದಲ್ಲಿ ಜನರ ಪ್ರೀತಿಯ ಸುಕ್ರಿಯಜ್ಜಿ! ಹಾಲಕ್ಕಿ ಜನಾಂಗದ ಈಕೆಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ, ಮತ್ತು ಇದರಿಂದ ಆ ಪ್ರಶಸ್ತಿಯ ತೂಕವೇ ಹೆಚ್ಚಿದೆ! ಸುಕ್ರಿಯಜ್ಜಿಗೆ ಈಗ ೭೫ರ ಹರೆಯ. ಈ ಬಾರಿ ರಾಷ್ಟ್ರದ ಅತ್ಯುನ್ನತ ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಯಾರದೇ ಪ್ರಭಾವ, ವಶೀಲಿ ಬಾಜಿಗಳು ನಡೆಯಲಿಲ್ಲ ಹಾಗಾಗಿ ಪ್ರಶಸ್ತಿ ಅನರ್ಹರ ಪಾಲಾಗಲಿಲ್ಲ. ಇದಕ್ಕಾಗಿ ಮೋದೀಜಿಯವರಿಗೆ ಧನ್ಯವಾದಗಳು. ಸುಕ್ರಿಯಜ್ಜಿಯಂಥ ಬಡ ಹಾಲಕ್ಕಿ ಮಹಿಳೆಯೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆಯೆಂದರೆ ಇದಕ್ಕಿಂತ ಬೇರೆ ಉದಾಹರಣೆ ಬೇಡ. ಇವತ್ತು ದೆಹಲಿಯಲ್ಲಿ ಸುಕ್ರಿಯಜ್ಜಿಗೆ ಪ್ರಶಸ್ತಿ ಫಲಕ ಪ್ರಧಾನವನ್ನು ಮಾನನೀಯ ರಾಷ್ಟ್ರಪತಿಗಳು ಮಾಡಿದರು. ಪ್ರಶಸ್ತಿಯನ್ನು ಎದೆಗವಚಿ ಹಿಡಿದ ಸುಕ್ರಿಯಜ್ಜಿಗೆ ಎದೆಯೊಳಗಿನ ಮಾತೃ ಪ್ರೇಮ ಉಕ್ಕಿ ಹರಿಯಿತು. ಸಾಕ್ಷಾತ್ ರಾಷ್ಟ್ರಪತಿಗಳೇ ಎದುರಿಗಿದ್ದರೂ ಸುಕ್ರಿಯಜ್ಜಿಗೆ ಇದೆಲ್ಲಕ್ಕಿಂತಲೂ ಹೆಚ್ಚಿನದ್ದು ಮಗನ ನೆನಪು. ತಾನು ಪ್ರಶಸ್ತಿ ಪಡೆದ ಸಂಭ್ರಮವನ್ನೂ ನಾನು ನನ್ನ ಮಗನಲ್ಲಿಯೇ ಹಂಚಿಕೊಳ್ಳಬೇಕು, ಪ್ರಶಸ್ತಿ ಫಲಕವನ್ನು ತನ್ನ ಮಗನಿಗೇ ಮೊದಲು ತೋರಿಸಬೇಕು ಎಂಬ ತಾಯ್ತನದ ಉತ್ಕಟ ಭಾವ. ಸುಕ್ರಿಯಜ್ಜಿ ತಡಮಾಡಲಿಲ್ಲ. ಕೂಡಲೇ ಮಗನ ಮನೆಗೆ ದೌಡಾಯಿಸಿದಳು! ಮಗ ದೆಹಲಿಯಲ್ಲೇ ಇದ್ದಾನಲ್ಲ..? ಸೀದಾ ಅವನ ಮನೆಗೇ ಹೋದಳು ಸುಕ್ರಿಯಜ್ಜಿ ಪ್ರಶಸ್ತಿಯನ್ನು ಭದ್ರವಾಗಿ ಎದೆಗವಚಿಕೊಳ್ಳುತ್ತಾ!!!
ಮಗನ ಮನೆ ತಲುಪಿ ಮಗನನ್ನು ಕಂಡೊಡನೆಯೇ ಸುಕ್ರಿಯಜ್ಜಿ ಮಗನ ಕಡೆಗೆ ಧಾವಿಸಿದಳು... ಪ್ರಶಸ್ತಿಯನ್ನು ಎತ್ತಿ ಹಿಡಿದು ತೋರಿಸುತ್ತಾ.. ಹೆಮ್ಮೆಯಿಂದ ತಲೆಯೆತ್ತಿ... ತನ್ನಂಥಾ ಸಹಸ್ರಾರು ಆದಿವಾಸಿ ಮಹಿಳೆಯರ ಪ್ರತೀಕವೇ ತಾನೆಂಬಂತೆ...! ತಾಯಿಯ ಬರುವನ್ನೇ ಕಾಯುತ್ತಿದ್ದ ಮಗ ಅಷ್ಟೇ ಪ್ರೀತಿ ಕಕ್ಕುಲಾತಿಯಿಂದ, ಎದೆತುಂಬಿದ ಮಾತೃ ಪ್ರೇಮದಿಂದ ತಾಯಿಯನ್ನು ಬರಮಾಡಿಕೊಂಡು ಅಪ್ಪಿಕೊಂಡ. ತಾಯಿ ಮಗನ ಸಮಾಗಮದಂತೆ...! ಇಬ್ಬರ ಕಣ್ಣಲ್ಲೂ ತುಂಬಿ ಕಣ್ಣೀರಾದ ಸಂತೋಷ.
ಸುಕ್ರಿಯಜ್ಜಿ ಅಂದರೆ ನಮ್ಮ ಅಂಕೋಲದ ಸುಕ್ರಿ ಬೊಮ್ಮ ಗೌಡ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳಕೊಂಡವರು. ಪತಿ ಬೊಮ್ಮಗೌಡ ಮದ್ಯದ ಚಟದಿಂದ ಪ್ರಾಣಕಳಕೊಂಡದ್ದು ಸುಕ್ರಿ ಬೊಮ್ಮ ಗೌಡ ಮದ್ಯಪಾನ ವಿರೋಧಿ ಚಳವಳಿಗೆ ಧುಮುಕುವಂತೆ ಮಾಡಿತು. ಆದರೆ ಸುಕ್ರಿ ಬೊಮ್ಮ ಗೌಡ ದೇಶದಾದ್ಯಂತ ಹೆಸರು ಮಾಡಿದ್ದು ತನ್ನ ಹಾಡುಗಳಿಂದ! ಹಾಲಕ್ಕಿ ಕನ್ನಡವೆಂಬ ತನ್ನ ಆಡುಭಾಷೆಯ ಗಿರಿಜನರ ಜಾನಪದ ಹಾಡುಗಳ ಕಣಜ ಆಕೆ. ಆಕೆಯ ನೆನಪಿನ ಕೋಶದಲ್ಲಿ ಅಂದಾಜು ಐದು ಸಾವಿರಕ್ಕೂ ಮೀರಿದ ಹಾಡಿನ ಸಂಗ್ರಹವಿದೆ... ಅಷ್ಟೂ ಹಾಡುಗಳನ್ನೂ ಆಕೆ ಸುಶ್ರಾವ್ಯವಾಗಿ ಹಾಡಬಲ್ಲರೂ ಕೂಡ! ಹಾಗಾಗಿಯೇ ಆಕೆ ಹಾಲಕ್ಕಿ ಕೋಗಿಲೆ. ಪರಂಪರಾಗತವಾಗಿ ಬಾಯ್ದೆರೆಯಾಗಿ ಬಂದ ಈ ಹಾಡುಗಳ ಸಂಗ್ರಹವನ್ನು ಓದು ಬರಹ ಬಾರದ ಸುಕ್ರಿಯಜ್ಜಿ ತನ್ನ ನೆನಪಿನ ಬುತ್ತಿಯೊಳಗೇ ಬಚ್ಚಿಟ್ಟುಕೊಂಡಿದ್ದ ಅಪರೂಪದ ಸಾಧಕಿ. ಇಂಥ ಅದ್ಭುತ ಜಾನಪದ ಪ್ರತಿಭೆಯನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬಂದವು. ನಮ್ಮ ರಾಜ್ಯದ ಜಾನಪದ ಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾ ನುಡಿಸಿರಿ ಪ್ರಶಸ್ತಿಗಳ ಜೊತೆಗೀಗ ರಾಷ್ಟ್ರದ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯ ಗರಿ ಬೇರೆ.
ಸುಕ್ರಿಯಜ್ಜಿ ಇವತ್ತು ಪ್ರಶಸ್ತಿ ಸ್ವೀಕರಿಸಿದೊಡನೆಯೇ ಓಡಿ ಬಂದದ್ದು ನನ್ನ ದೆಹಲಿಯ ಮನೆಗೆ. ನನ್ನನ್ನಾಕೆ 'ಮಗ' ಅಂತಲೇ ಕರೆಯೋದು ಮತ್ತು 'ಮಗ' ಅಂತಲೇ ಭಾವಿಸಿಕೊಂಡಿದ್ದಾಳೆ. ಆಕೆಯದು ನಿಷ್ಕಲ್ಮಶ, ನಿರ್ವಾಜ್ಯ ಮಾತೃಪ್ರೇಮ. ನನಗೂ ಆಕೆ ಅಮ್ಮನೇ! ನಮ್ಮಿಬ್ಬರ ನಡುವಿನ ಭಾಂದವ್ಯ ಕಳೆದ ಹಲವಾರು ವರ್ಷಗಳಿಂದಲೂ ತಾಯಿ ಮಗನಂತೆ. ಹಾಗಾಗಿಯೇ ಆಕೆ ತನಗೆ ಸಿಕ್ಕಿದ ಪ್ರಶಸ್ತಿಯನ್ನು ಮೊದಲು ನನಗೇ ತೋರಿಸಬೇಕೆನ್ನುವ ಧಾವಂತದಿಂದ ಧಾವಿಸಿ ನನ್ನಲ್ಲಿಗೆ ಬಂದದ್ದು. ಪದ್ಮಶ್ರೀ ಪ್ರಶಸ್ತಿ ಬಂದದ್ದು ನನ್ನ ಹೆತ್ತಮ್ಮನಿಗೆ ಎಂಭ ಭಾವ ನನ್ನಲ್ಲಿ .... ಇಬ್ಬರ ಕಣ್ಣಲ್ಲೂ ಆನಂದಭಾಷ್ಪ.....