Infinite Thoughts

Thoughts beyond imagination

ಜಿ.ಎಸ್.ಟಿ. ಏನೇನು ಅನುಕೂಲ, ಏನೇನು ಲಾಭ, ದೇಶದ ಅಭಿವೃದ್ಧಿ ಹೇಗೆ?

ಜಿ.ಎಸ್.ಟಿ. ಏನೇನು ಅನುಕೂಲ, ಏನೇನು ಲಾಭ, ದೇಶದ ಅಭಿವೃದ್ಧಿ ಹೇಗೆ? ಹೀಗೊಂದು ಪ್ರಶ್ನೆ ಸುಮಾರು ಮಂದಿಯಲ್ಲಿ ಸುಳಿ ಸುತ್ತುತ್ತಲೇ ಇದೆ.

ದೇಶದ ತೆರಿಗೆ ವ್ಯವಸ್ಥೆಗೊಂದು ಏಕರೂಪತೆ ಜಿ.ಎಸ್.ಟಿ. ಯಿಂದ ದೊರಕುತ್ತದೆ. ಹಿಂದೆಲ್ಲ ಕೇಂದ್ರದ ತೆರಿಗೆಗಳೊಂದಿಗೆ ರಾಜ್ಯದ ತೆರಿಗೆಗಳೂ ಸೇರಿ ತೆರಿಗೆಯ ಮೇಲೆಯೇ ತೆರಿಗೆ ಬೀಳುತ್ತಾ ಅದರಿಂದಾಗಿ ಕೊನೆಗೆ ಗ್ರಾಹಕರ ಮೇಲೆಯೇ ಹೆಚ್ಚಿನ ಹೊರೆ ಬೀಳುವಂತಾಗುತ್ತಿತ್ತು. ಭಾರತೀಯ ತೆರಿಗೆ ಪದ್ದತಿಯಲ್ಲಿ ಪರೋಕ್ಷ ತೆರಿಗೆಗಳದ್ದೇ ದೊಡ್ಡ ಮೊತ್ತವಿತ್ತು. ಸುಮಾರು ಹದಿನೇಳು ವಿವಿಧ ತೆರಿಗೆಗಳು ಎಲ್ಲಾ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುತ್ತಿತ್ತು. ಆದರೆ ಜಿ.ಎಸ್.ಟಿ. ಯಲ್ಲಿ ಎಲ್ಲಾ ತೆರಿಗೆಳೂ ಹೋಗಿ ಒಂದೇ ತೆರಿಗೆ ಬರಲಿದೆ. ಅಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ವಿವಿಧ ರೀತಿಯ ತೆರಿಗೆ ವಿಧಿಸುತ್ತಿದ್ದವು. ಒಮ್ಮೆ ತೆರಿಗೆ ವಿಧಿಸಿದ ಮೇಲೆ ಏರಿಕೆಯಾದ ಮೊತ್ತದ ಮೇಲೆಯೇ ಇನ್ನೊಂದು ರೀತಿಯ ತೆರಿಗೆ ಬೀಳುತ್ತಿದ್ದರಿಂದ ಸರಕುಗಳ ದರದಲ್ಲಿ ತುಂಬಾ ಹೆಚ್ಚಳವಾಗುತ್ತಿತ್ತು. ಹೀಗಾಗಿ ವಿಪರೀತವಾದ ತೆರಿಗೆ ಭಾರದಿಂದಾಗಿ ವ್ಯಾಪಾರಿಗಳು ಮಾತ್ರವಲ್ಲ ನಮ್ಮ ನಿಮ್ಮಂಥಾ ಗ್ರಾಹಕರೂ ಬಿಲ್ಲುಗಳಿಲ್ಲದೆ ವಸ್ತುಗಳನ್ನು ಮಾರುವುದು ಕೊಳ್ಳುವುದು ಮಾಡುತ್ತ ಇದ್ದರು. ಇದರಿಂದಾಗಿ ಸರಕಾರಕ್ಕೆ ತೆರಿಗೆ ವಂಚನೆಯಾಗಿ, ಹೀಗೆ ತೆರಿಗೆ ವಂಚಿಸಿದ ಹಣವನ್ನು ಎಲ್ಲರೂ ಸರಕಾರಕ್ಕೆ ಲೆಕ್ಕ ಒಪ್ಪಿಸದೆ ಕೂಡಿಟ್ಟು ಅದೇ ಕಾಳ ಧನದ ಹೆಚ್ಚಳಕ್ಕೆ ಕಾರಣವಾಗುತ್ತಿತ್ತು. ಉದಾಹರಣೆಗೆ ಕೇಂದ್ರ ಸರಕಾರ ಸರಕುಗಳಿಗೆ ಸರ್ವಿಸ್ ಟ್ಯಾಕ್ಸ್, ಎಕ್ಸೈಸ್ ಟ್ಯಾಕ್ಸ್, ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್, ಕಸ್ಟಮ್ಸ್ ಡ್ಯೂಟಿ, ಸೆಂಟ್ರಲ್ ವ್ಯಾಟ್ ಹಾಗೆಯೇ ರಾಜ್ಯ ಸರಕಾರಗಳು ವ್ಯಾಟ್, ಎಂಟ್ರಿ ಟ್ಯಾಕ್ಸ್, ಆಕ್ಟ್ರಾಯ್, ಟರ್ನೋವರ್ ಟ್ಯಾಕ್ಸ್, ಲಕ್ಸುರೀ ಟ್ಯಾಕ್ಸ್ ಮುಂತಾದವುಗಳನ್ನು ವಸೂಲಿ ಮಾಡುತ್ತಿತ್ತು. ಜೊತೆಗೆ ಹಲವಾರು ಸೆಸ್ಸ್ ಗಳೂ ಇದಕ್ಕೆ ಸೇರುತ್ತಿದ್ದವು. ಒಮ್ಮೆ ಒಂದು ಸರಕಿಗೆ ಒಂದು ತೆರಿಗೆ ವಿಧಿಸಲ್ಪಟ್ಟು ಬೆಲೆ ಏರಿಕೆಯಾದ ಮೇಲೆ, ಅದೇ ಏರಿಕೆಯಾದ ಬೆಳೆಯ ಮೇಲೆಯೇ ಇನ್ನೊಂದು ತೆರಿಗೆ ಬಿದ್ದು ಅದರ ದರ ಹಲವಾರು ಪಟ್ಟು ಹೆಚ್ಚಳ ವಾಗುತ್ತಿತ್ತು. ಈಗ ಜಿ.ಎಸ್.ಟಿ. ಯಿಂದಾಗಿ ಎಲ್ಲ ಹದಿನೇಳು ವಿವಿಧ ತೆರಿಗೆಗಳು ರದ್ದುಗೊಂಡು ಒಂದೇ ರೀತಿಯ ಏಕರೂಪ ತೆರಿಗೆ ವಿಧಿಸಲಾಗುತ್ತದೆ.

ಸಿ.ಜಿ.ಎಸ್.ಟಿ ಅಂದರೆ ಕೇಂದ್ರ ಜಿ.ಎಸ್.ಟಿ., ಎಸ್. ಜಿ.ಎಸ್.ಟಿ.ಅಂದರೆ ರಾಜ್ಯ ಜಿ.ಎಸ್.., ಜೊತೆಗೆ ಅಂತರ ರಾಜ್ಯ ಮತ್ತು ಅಂತರ ರಾಷ್ಟ್ರ ಸರಕು ಸಾಗಾಣಿಕೆಯ ವೇಳೆ . ಜಿ.ಎಸ್.ಟಿ.ಅಂದರೆ ಇಂಟಿಗ್ರೇಟೆಡ್ ಜಿ.ಎಸ್.ಟಿ.ವಿಧಿಸಲಾಗುತ್ತದೆ. ಮೇಲಾಗಿ ಒಮ್ಮೆ ತೆರಿಗೆ ವಿಧಿಸಿದ ವಸ್ತುವಿಗೆ ಪುನಃ ತೆರಿಗೆ ವಿಧಿಸುವಂತಾದರೆ ಅದನ್ನು ಮರಳಿ ಪಡೆಯುವ ಹಕ್ಕೂ ವ್ಯಾಪಾರಿಗಳಿಗಿರುತ್ತದೆ. ಉದಾಹರಣೆಗೆ ಹಿಂದೆಲ್ಲ ಒಂದು ರಾಜ್ಯದಿಂದ ಸರಕನ್ನು ಇನ್ನೊಂದು ರಾಜ್ಯಕ್ಕೆ ಸಾಗಿಸಬೇಕೆಂದರೆ ತುಂಬಾ ಕಷ್ಟವಿತ್ತು. ಸರಕು ಯಾವೆಲ್ಲ ರಾಜ್ಯಗಳ ಮೂಲಕ ಸಾಗುತ್ತಿತ್ತೋ, ಅವೆಲ್ಲ ರಾಜ್ಯಗಳೂ ಒಂದೊಂದು ದರದಲ್ಲಿ ತೆರಿಗೆ ವಿಧಿಸುತ್ತಿದ್ದವು. ಇದರಿಂದಾಗಿ ಸರಕುಗಳ ಬೆಲೆಯಲ್ಲಿ ಹೆಚ್ಚಳ ಮಾತ್ರವಲ್ಲದೆ, ಆಯಾ ರಾಜ್ಯಗಳ ತೆರಿಗೆ ಅಧಿಕಾರಿಗಳ ಕಿರುಕುಳಕ್ಕೂ ಒಳಗಾಗಬೇಕಾಗುತ್ತಿತ್ತು. ಇಷ್ಟೇ ಅಲ್ಲ ನಿಮಗೆ ಆಶ್ಚರ್ಯವಾಗುವಂತಹ ಒಂದು ಚಿಕ್ಕ ಸಂಗತಿಯೊಂದಿದೆ. ನಮ್ಮ ದೇಶದಲ್ಲಿ ಸರಕು ಸಾಗಾಣಿಕ ವೆಚ್ಚ ಹೇಗೆ ಹೆಚ್ಚೋ ಹಾಗೆಯೇ ಸರಕು ಸಾಗಾಣಿಕೆಗೆ ಬೇಕಾದ ಸಮಯವೂ ಹೆಚ್ಚೇ. ಭಾರತದಲ್ಲಿ ಸರಕು ಸಾಗಾಣಿಕೆಯ ವೇಗ ದಿನವೊಂದಾಕೆ ಕೇವಲ ೨೮೦ ಕಿಲೋಮೀಟರುಗಳು ಮಾತ್ರ. ಅದೇ ಅಮೆರಿಕಾದಲ್ಲಿ ಅದು ದಿನಕ್ಕೆ ಎಂಟುನೂರು ಕಿಲೋಮೀಟರುಗಳಷ್ಟು. ಇದಕ್ಕೆ ಕೆಟ್ಟ ರಸ್ತೆಗಳು ಮಾತ್ರ ಕಾರಣವಲ್ಲ(ಈಗ ರಸ್ತೆಗಳ ಗುಣಮಟ್ಟ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತುಂಬಾ ಸುಧಾರಿಸಿದೆ) ತೆರಿಗೆ ಪದ್ಧತಿಯೂ ಕಾರಣವೆ.. ಗೂಡ್ಸ್ ಲಾರಿಗಳು ಸರಕುಗಳನ್ನು ಸಾಗಿಸುವಾಗ ತುಂಬಾ ಕಡೆಗಳಲ್ಲಿ ತಪಾಸಣೆ ಎದುರಿಸುತ್ತವೆ. ತೆರಿಗೆಗಳ್ಳತನ ತಪ್ಪಿಸಲಿಕ್ಕಾಗಿಯೇ ವ್ಯವಸ್ಥೆ ಮಾಡಲಾಗಿದೆಯಾದರೂ ಇದರಿಂದ ತೆರಿಗೆ ಅಧಿಕಾರಿಗಳಲ್ಲಿ ಲಂಚಕೋರತನವೂ ಹೆಚ್ಚುತ್ತದೆ. ಹಾಗಾಗಿ ತೆರಿಗೆಗಳ್ಳತನವೂ ಜಾಸ್ತಿಯಾಗುತ್ತದೆ. ಆದರೆ ಈಗ ಒಂದೇ ಏಕರೂಪ ತೆರಿಗೆ ಪದ್ಧತಿ ಬಳಕೆಗೆ ಬರುವುದರಿಂದ ತೊಂದರೆ ತಪ್ಪುತ್ತದೆ. ಅಂದರೆ ಯಾವುದೇ ತೆರಿಗೆಯಾದರೂ ಒಂದು ಸರಕಿಗೆ ಒಂದೇ ಬಾರಿ ವಿಧಿಸಲಾಗುತ್ತದೆ. ಅದು ಸರಕು ಗ್ರಾಹಕನಿಗೆ ಬಿಕರಿಯಾಗುವ ಸಮಯ ಮತ್ತು ಸ್ಥಳದಲ್ಲಿ ವಿಧಿಸಲಾಗುತ್ತದೆ.

ಜಿ.ಎಸ್.ಟಿ. ಯಿಂದ ಸರಕುಗಳ ಮತ್ತು ಸೇವೆಯ ಮೇಲೆ ಬೀಳುತ್ತಿದ್ದ ತೆರಿಗೆಯ ಮೇಲಿನ ತೆರಿಗೆಯ ಕಾಟ ತಪ್ಪುತ್ತದೆ. ತೆರಿಗೆ ಸಂಗ್ರಹ ಹೆಚ್ಚ ಆಗುವುದಲ್ಲದೆ ದೇಶಕ್ಕೆ ಆದಾಯ ಹೆಚ್ಚುತ್ತದೆ. ಎಲ್ಲವೂ ಆನ್ ಲೈನ್ ವ್ಯವಹಾರವೇ ಆದುದರಿಂದ, ಎಲ್ಲರೂ ಸುಲಭವಾಗಿಯೇ ತೆರಿಗೆ ಪಾವತಿಸಬಹುದು, ಅಷ್ಟೇ ಅಲ್ಲದೆ ಎರಡೆರಡು ಬಾರಿ ತೆರಿಗೆ ಪಾವತಿಸುವಂತಾದರೆ ಅದನ್ನು ಆನ್ ಲೈನ್ ಮೂಲಕವೇ ಮರಳಿ ಪಡೆಯುವ ಸುಲಭ ಅವಕಾಶವೂ ಇದೆ. ಅಂತರ ರಾಜ್ಯ ಮತ್ತು ಅಂತರ ರಾಷ್ಟ್ರ ವ್ಯವಹಾರಗಳು ತೀರಾ ಸುಲಭವಾಗಲಿದ್ದು, ಇಂಪೋರ್ಟ್ ಎಕ್ಸ್ಪೋರ್ಟ್ ವ್ಯವಹಾರ ಹೆಚ್ಚಲಿದೆ. ಹಿಂದೆ ಪೂರ್ತಿ ದರದ ಮೇಲೆ ವಿವಿಧ ತೆರಿಗೆಗಳು ವಿಧಿಸಲ್ಪಟ್ಟು ಸರಕುಗಳ ವೆಚ್ಚ ಅಧಿಕವಾಗುತ್ತಿತ್ತು. ಆದರೆ ಇಲ್ಲಿ ಎಲ್ಲ ಹಂತಗಳಲ್ಲೂ ಅಂದರೆ ಉತ್ಪಾದನೆಯ ಹಂತದಿಂದ ಗ್ರಾಹಕ ಕೊಳ್ಳುವ ಹಂತದವರೆಗೂ ಹಲವಾರು ತೆರಿಗೆಗಳು ವಿಧಿಸಲ್ಪಡುತ್ತಿದ್ದವು. ಜಿ.ಎಸ್.ಟಿ.ಕೂಡಾ ಎಲ್ಲ ಹಂತಗಳಲ್ಲೂ ವಿಧಿಸಲ್ಪಟ್ಟರೂ, ಕೊನೆಗೆ ಗ್ರಾಹಕನಿಗೆ ಮಾರಾಟವಾಗುವ ಸಂದರ್ಭದಲ್ಲಿ ಸಂಪೂರ್ಣ ತೆರಿಗೆ ವಿಧಿಸಲಾಗುವುದರಿಂದ. ಅದೇ ಸರಕಿಗೆ ಹಿಂದೆ ಎಲ್ಲಾ ಹಂತಗಳಲ್ಲೂ ಪಾವತಿಯಾದ ತೆರಿಗೆಯನ್ನು ಪಾವತಿ ಮಾಡಿದವರು ಮರಳಿ ಪಡೆಯುವ ಅವಕಾಶ ಒದಗಿಸಲಾಗಿದೆ. ಹಾಗಾಗಿ ಸರಕು ಒಂದು ಬಾರಿ ಮಾತ್ರ ತೆರಿಗೆಗೊಳಗಾಗಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ವ್ಯಾಪಾರಿಗಳೂ ಕೂಡ ತಮ್ಮ ಟ್ಯಾಕ್ಸ್ ರಿಟರ್ನ್ಸ್ ಅನ್ನು ಆನ್ ಲೈನ್ ಮೂಲಕವೇ ಪಾವತಿಸುವುದರಿಂದ ತೆರಿಗೆಗಳ್ಳತನ ಹಂತಹಂತವಾಗಿ ನಿಂತೇ ಹೋಗುತ್ತದೆ. ಇದರಿಂದ ಎಲ್ಲ ವ್ಯವಹಾರಗಳೂ ಪಾರದರ್ಶಕವಾಗಿರುತ್ತದೆ. ಜಿ.ಎಸ್.ಟಿ.ಜಾರಿಯಾಗಿ ಕೆಲ ಸಮಯದ ನಂತರ ಅದರ ಲಾಭ ಜನಸಾಮಾನ್ಯನಿಗೆ ತಲುಪುತ್ತದೆ. ಈಗಿನ ವ್ಯವಸ್ಥೆಯಲ್ಲಿ ಅಂದಾಜು ಶೇಕಡಾ ಇಪ್ಪತ್ತೆಂಟರಷ್ಟು ತೆರಿಗೆ ಸರಕುಗಳ ಮೇಲೆ ಬೀಳಲಿದೆ. ಹಾಗಾಗಿ ಜಿ.ಎಸ್.ಟಿ.ಜಾರಿಯಾದರೆ ಹಲವಾರು ದಿನಬಳಕೆಯ ವಸ್ತುಗಳ ಬೆಲೆ ಅಗ್ಗವಾಗಲಿದೆ. ಅದೇ ವೇಳೆ ಸೇವೆಯ ತೆರಿಗೆ ದರದಲ್ಲಿ ಹೆಚ್ಚಳವಾಗಬಹುದಾದ ಸಾಧ್ಯತೆಯೂ ಇದೆ. ಇದರಿಂದ ಒಂದು ವೇಳೆ ಮನರಂಜನೆ, ಪ್ರಯಾಣ ಮುಂತಾದದ್ದರ ದರ ಹೆಚ್ಚಾಗುವ ಸಂಭವವೂ ಇದೆ. ಆದರೆ ಒಟ್ಟಿನಲ್ಲಿ ಜಿ.ಎಸ್.ಟಿ.ಬಂದರೆ ಹಲವಾರು ಉತ್ಪನ್ನಗಳ ಬೆಲೆ ಕಾಲಾನುಕ್ರಮೇಣ ಕಡಿಮೆಯಾಗುತ್ತದೆ.

ಆದುದರಿಂದಲೇ ಜಿ.ಎಸ್.ಟಿ.ಯಿಂದಾಗಿ ತೆರಿಗೆಗಳ್ಳತನ ತೀರಾ ಕಡಿಮೆಯಾಗಿ, ಮೂಲಕ ದೇಶದ ಬೊಕ್ಕಸಕ್ಕೆ ಹೆಚ್ಚು ಹಣ ಹರಿದು ಬರುವಂತಾಗುತ್ತದೆ. ಇದೆಲ್ಲದರಿಂದಾಗಿ ಕಾಳ ಧನದ ಪ್ರಮಾಣ ಬಹಳಷ್ಟು ಕಡಿಮೆಯಾಗಲಿದೆ. ಒಟ್ಟಿನಲ್ಲಿ ದೇಶದ ಆರ್ಥಿಕತೆಗೆ, ಆಮದು-ರಫ್ತ್ತು ಉದ್ಯಮಕ್ಕೆ, ಹೊರಗಿನಿಂದ ಹರಿದು ಬರುವ ವಿದೇಶೀ ಬಂಡವಾಳಕ್ಕೆ ಬಹಳಷ್ಟು ಉತ್ತೇಜನ ಸಿಗಲಿದೆ.

Related posts