ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಒಂದು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಒಂದು.
"ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ" ಎಂಬ ಕೇರಳದಲ್ಲಿ ಹುಟ್ಟಿ ಕರ್ನಾಟಕ ತಮಿಳುನಾಡಲ್ಲಿ ಬೆಳೆದು ಈಗ ದೇಶವಿಡೀ ವಿಷದಂತೆ ವ್ಯಾಪಿಸುತ್ತಿರುವ ಇಸ್ಲಾಮಿಕ್ ಉಗ್ರ ಸಂಘಟನೆಯ ಸಂಪೂರ್ಣ ವಿವರಗಳುಳ್ಳ ಚಿತ್ರಣವಿದು.
ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವೋಟಿನಾಸೆಗಾಗಿ ಮುದ್ದಿನ ಗಿಣಿಯಂತೆ ಸಾಕಿ ಬೆಳೆಸುತ್ತಿರುವ ಪಿ.ಎಫ್.ಐ. ಈಗ ಸಾಕಿದವರನ್ನೇ ರಣಹದ್ದಾಗಿ ಕಚ್ಚ ತೊಡಗಿದೆ. ಮೊನ್ನೆ ಮಂಗಳೂರಿನಲ್ಲಿ ಪೊಲೀಸ್ ಮುಖ್ಯಸ್ಥರಿಗೇ ಮುತ್ತಿಗೆ ಹಾಕಿ ಪೋಲೀಸರ ಮೇಲೆಯೇ ದಾಳಿ ನಡೆಸಿ ಕಾಂಗ್ರೆಸ್ ಮಂತ್ರಿ ರಮಾನಾಥ ರೈಯವರ ಮೇಲೆಯೇ ತಿರುಗಿ ಬಿದ್ದಿದೆ. ಅದಕ್ಕೆ ಸರಿಯಾಗಿ ಅಲ್ಲಿನ ಮುಸ್ಲಿಂ ಕಾಂಗ್ರೆಸ್ ಲೀಡರುಗಳೂ ಪಿ.ಎಫ್.ಐ ಬೆನ್ನಿಗೆ ನಿಂತುಬಿಟ್ಟಿದ್ದಾರೆ. ಆದರೂ ಪಾಠ ಕಲಿಯದ ಸಿದ್ದರಾಮಯ್ಯ ಮತ್ತೆ ಪಿ.ಎಫ್.ಐ. ನಾಯಕರನ್ನು ಪಕ್ಕದಲ್ಲೇ ಕೂರಿಸಿಕೊಂಡು ಮುದ್ದು ಮಾಡಿಕಳಿಸಿದ್ದಾರೆ. ತನ್ನ ಸರಕಾರದ ಪೊಲೀಸ್ ಗುಪ್ತಚರ ವರದಿಯನ್ನೇ ನಂಬದ, ತನ್ನ ಸರಕಾರದ ಗೃಹ ಇಲಾಖೆಯ ಅಧಿಕಾರಿಗಳ ಮಾತಿಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆಲೆ ಕೊಡದೆ ಸಿದ್ದರಾಮಯ್ಯ ೨೦೧೫ರ್ ಜೂನ್ ತಿಂಗಳಲ್ಲಿ ಪಿ.ಎಫ್.ಐ.ನ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಹೂಡಲಾಗಿದ್ದ ನೂರಾ ಎಪ್ಪತ್ತೈದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಿದ್ದರು. ಹಾಸನ, ಶಿವಮೊಗ್ಗ, ಮೈಸೂರು, ಮಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಪಿ.ಎಫ್.ಐ ಕಾರ್ಯಕರ್ತರ ಮೇಲೆ ದಾಖಲಿಸಿದ ಎಲ್ಲಾ ಕೇಸುಗಳನ್ನು ಕಾಂಗ್ರೆಸ್ ಸರಕಾರದ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ರದ್ದು ಮಾಡಿದಾಗ ಹಲವು ಪೊಲೀಸ್ ಅಧಿಕಾರಿಗಳೇ ಅಸಾಮಾಧಾನಗೊಂಡಿದ್ದರು.
ಮೈಸೂರಿನಲ್ಲಿ, ಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪಿ.ಎಫ್.ಐ. ಕಾರ್ಯಕರ್ತರ ಮೇಲಿನ ಕೇಸುಗಳು ರದ್ದಾದಾಗ ಹಲ್ಲೆಗೊಳಗಾದ ಪೊಲೀಸರ ಮನಸ್ಥಿತಿ ಹೇಗಾಗಿರಬೇಡ...? ಆದರೆ ನಿರ್ಲಜ್ಜ ಕಾಂಗ್ರೆಸ್ ಸರಕಾರ ಆ ಮಟ್ಟಿಗೆ ಹೇಸಿಗೆಯ ಓಲೈಕೆ ರಾಜಕಾರಣ ಮಾಡಿತು. ಆದರೆ ಈಗ ಮಂಗಳೂರಿನಲ್ಲಿ ಪಿ.ಎಫ್.ಐ.ಮತ್ತೊಮ್ಮೆ ಪೊಲೀಸರ ಮೇಲೆಯೇ ದಾಳಿ ಮಾಡಿದೆ. ಉರ್ವಾ ಪೊಲೀಸ್ ಎ.ಎಸ್ ಐ ಐತಪ್ಪ ಅನ್ನುವವರ ಮೇಲೆ ಬೆಳಗಿನ ಜಾವ ಮೂರೂವರೆ ವೇಳೆಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಕಾಟಿಪಳ್ಳದ ಶಮೀರ್ ಮತ್ತು ಮೊಹಮ್ಮದ ನಿಯಾಜ್ ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮೇಲೂ ರೇಪ್ ಸಹಿತ ಹಲವಾರು ಕೇಸುಗಳಿವೆ. ಹೀಗೆ ಪೊಲೀಸರ ಮೇಲೆಯೇ ಪಿ.ಎಫ್.ಐ ಕಾರ್ಯಕರ್ತರು ಹಲ್ಲೆ ನಡೆಸುವುದು ಹೊಸದೇನಲ್ಲ... ಹಿಂದೆಯೂ ಮಂಗಳೂರಿನಲ್ಲಿ ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲೂ ಪಿ.ಎಫ್.ಐ. ಕಾರ್ಯಕರ್ತರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆದರೂ ಸಿದ್ದರಾಮಯ್ಯ ಪಿ.ಎಫ್.ಐ. ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಕೇಸುಗಳನ್ನು ತಮ್ಮ ಸಂಪುಟದ ಮೂಲಕವೇ ವಜಾ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಮೊನ್ನೆ ಮಂಗಳೂರಿನ ಘಟನೆಯ ನಂತರವೂ ತಮ್ಮಲ್ಲಿಗೆ ಬಂದ ಪಿ.ಎಫ್.ಐ. ನಿಯೋಗವೊಂದನ್ನು ತಮ್ಮ ಮನೆಯಲ್ಲೇ ಭೇಟಿಮಾಡಿದ ಸಿದ್ದರಾಮಯ್ಯ ಅವರಿಗೆ ಅಭಯ ನೀಡಿ ಕಳಿಸಿದ್ದಾರೆ.!
ಆದರೆ ಪಿ.ಎಫ್.ಐ. ಎಂಬ ಈ ಸಂಘಟನೆ ಯಾವಾಗ? ಹೇಗೆ? ಯಾಕಾಗಿ ಹುಟ್ಟಿಕೊಂಡಿತು ಎಂಬ ಬಗ್ಗೆ ನಮ್ಮ ಪೊಲೀಸರಲ್ಲಿ ಮಾಹಿತಿ ಇಲ್ಲವೇ? ಕೇವಲ ಹತ್ತೇ ವರ್ಷಗಳಲ್ಲಿ ಈ ಸಂಘಟನೆ ಇಷ್ಟೊಂದು ವ್ಯಾಪಕವಾಗಿ, ಪ್ರಬಲವಾಗಿ ಬೆಳೆದದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ?... ಈ ಸಂಘಟನೆಯ ಹಿನ್ನೆಲೆಯೇನು? ಅವರಿಗಿರುವ ಸಂಪರ್ಕಗಳೇನು? ಈ ಎಲ್ಲಾ ವಿವರಗಳೂ ನಮ್ಮ ಪೊಲೀಸ್ ಇಲಾಖೆಗೆ, ನಮ್ಮ ಗುಪ್ತಚರ ಇಲಾಖೆಗೆ ಗೊತ್ತಿದೆ... ಆದರೆ ಏನು ಮಾಡೋದು... ಆಳುವ ಸರಕಾರಗಳೇ ದೇಶದ್ರೋಹಿಗಳ ಬೆನ್ನಿಗೆ ನಿಂತು ಬಿಟ್ಟರೆ ಪೊಲೀಸರಾದರೂ ಏನು ಮಾಡೋದಕ್ಕಾಗುತ್ತದೆ. ಪಿ.ಎಫ್.ಐ ಎಂಬ ಅಕ್ಷರಶಃ ದೇಶದ್ರೋಹಿ ಉಗ್ರ ಸಂಘಟನೆಯ ಬೆನ್ನಿಗೆ ನಿಂತಿರುವ ನಿರ್ಲಜ್ಜ ರಾಜಕಾರಣಿಗಳು, ಸೋಕಾಲ್ಡ್ ಬುದ್ಧಿಜೀವಿಗಳು ಪಾಠ ಕಲಿಯುವ ದಿನ ದೂರವಿಲ್ಲ
ಈ ಪಿ.ಎಫ್.ಐ ಸಂಘಟನೆ ಹುಟ್ಟಿಕೊಂಡದ್ದು ೨೦೦೬ರಲ್ಲಿ ಕೇರಳದ ನ್ಯಾಷನಲ್ ಡೆವೆಲಪ್ಮೆಂಟ್ ಫ್ರಂಟ್(ಎನ್.ಡಿ.ಎಫ್), ತಮಿಳುನಾಡಿನ 'ಮನಿದ ನೀತಿ ಪಸರೈ ' (ಎಂ. ಎನ್.ಪಿ.) ಮತ್ತು 'ಕರ್ನಾಟಕ ಫೋರಂ ಫ಼ಾರ್ ಡಿಗ್ನಿಟಿ' (ಕೆ.ಎಫ್.ಡಿ.) ಮೂರೂ ಸಂಘಟನೆಗಳೂ ಸೇರಿ ರೂಪುಗೊಂಡದ್ದೇ "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ". ಪಿ.ಎಫ್.ಐ ಹುಟ್ಟುವಲ್ಲಿ ಕರ್ನಾಟಕದ ಪಾತ್ರವೂ ಪ್ರಮುಖವೇ. ಆದುದರಿಂದಲೇ ಹುಟ್ಟಿದ ವರ್ಷವೇ ಅದು ಕರ್ನಾಟಕದಲ್ಲಿ ತನ್ನ ಕರಾಳ ಮುಖದ ಅನಾವರಣ ಮಾಡಿತು. ನಿಮಗೆಲ್ಲ ನೆನಪಿರಬಹುದು... ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿ ನಂತರ ಅಲ್ಲಿನ ಸರ್ವಾಧಿಕಾರಿ ಸದ್ದಾಮ್ ಹುಸೇನ್ ನನ್ನ ಸೆರೆ ಹಿಡಿದದ್ದು. ನಂತರ ಸದ್ದಾಮ್ ಹುಸೇನನ ವಿಚಾರಣೆ ನದೆದು ಆತನನ್ನು ಗಲ್ಲಿಗೇರಿಸಲಾಯಿತಲ್ಲಾ ..... ಅದಕ್ಕೆ ಭಾರತದಲ್ಲಿ... ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
೨೦೦೭ರ ಜನವರಿ ೧೭ನೇ ತಾರೀಕಿನ ಶುಕ್ರವಾರದಂದು ಬೆಂಗಳೂರಿನ ಶಿವಾಜಿನಗರದ ಮೈದಾನದಲ್ಲಿ ಸದ್ದಾಮ್ ಹುಸ್ಸೇನ್ ನೇಣು ಶಿಕ್ಷೆಯ ವಿರುಧ್ದ ಭಾರೀ ಪ್ರತಿಭಟನಾ ಸಭೆ ಏರ್ಪಡಿಸಲಾಯಿತು. ಅಂದರೆ ೨೦೦೬ರ ಡಿಸೆಂಬರ್ ಮೂವತ್ತನೇ ತಾರೀಕಿಗೆ ಸದ್ದಾಮ್ ನೇಣಿಗೇರಿದ್ದರೆ.... ಹದಿನೇಳನೆಯ ದಿನ ಈ ಸಭೆಯನ್ನು ಶಿವಾಜಿನಗರದಲ್ಲಿ ಆಯೋಜಿಸಿದ್ದು ಆಗಷ್ಟೇ ಹುಟ್ಟಿಕೊಂಡಿದ್ದ "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ". ಎಲ್ಲಿಯ ಸದ್ದಾಮ್ ಹುಸೇನ್?, ಎಲ್ಲಿಯ ಬೆಂಗಳೂರಿನ ಮುಸ್ಲಿಮರು? ಸದ್ದಾಮಗೆ ಶಿಕ್ಷೆ ವಿಧಿಸಿದ್ದು ಮುಸ್ಲಿಂ ಜಡ್ಜ್ ಗಳೇ ... ಆದರೂ ಇಲ್ಲಿ ಬೆಂಗಳೂರಿನಲ್ಲಿ ಪಾಪ್ಯುಲರ್ ಫ್ರಂಟ್ ಭಾರೀ ಸಭೆ ಸಂಘಟಿಸಿತು. ಸರಿಯಾಗಿ ಶುಕ್ರವಾರವೇ ಸಭೆ ನಿಗದಿಯಾಯಿತು. ಆಗ ಕುಮಾರಸ್ವಾಮಿ ಅನ್ನುವವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಯಾವ್ಯಾವ ರೀತಿಯ ರಾಜಕೀಯ ಪಗಡೆಯಾಟ ನಡೆಯಿತೋ... ಅಂತೂ ಕೆ.ಜಿ.ಹಳ್ಳಿಯಿಂದ ಪಾಪ್ಯುಲರ್ ಫ್ರಂಟ್ನ ಮೆರವಣಿಗೆ ಹೊರಟಿತು. ಭಾರತೀ ನಗರದ ಬಳಿಯ ಸೆಪ್ಪಿಂಗ್ಸ್ ರಸ್ತೆಯಲ್ಲಿ ಈ ಗುಂಪು ಕೆಲ ಬ್ಯಾನರ್ಗಳನ್ನು ಸುಟ್ಟಿತು. ಕೆಲ ಅಂಗಡಿಗಳಿಗೆ ಕಲ್ಲೆಸೆಯಿತು. ಸುಲಭದಲ್ಲೇ ಗಲಭೆ ಭುಗಿಲೆದ್ದಿತು. ಮುಸ್ಲಿಮರ ಭಾರೀ ಗುಂಪು ತಿಮ್ಮಯ್ಯ ರಸ್ತೆ, ನಾರಾಯಣ ಪಿಳ್ಳೆ ಬೀದಿ, ಶಿವಾಜಿನಗರ, ಭಾರತೀ ನಗರ, ಫ್ರೇಸರ್ ಟೌನ್ ಮುಂತಾದ ಕಡೆಗಳಲ್ಲಿ ಹಿಂದೂಗಳ ಮನೆಗಳನ್ನು ಅಂಗಡಿಗಳನ್ನು ಕೊಳ್ಳೆಹೊಡೆದು ಸುಡಲಾಯಿತು. ಫ್ರೇಸರ್ ಟೌನ್ ಎಸಿಪಿ ಪುಟ್ಟತಿಮ್ಮೇಗೌಡ, ಸಬ್-ಇನ್ಸ್ಪೆಕ್ಟರ್ ಮಹಾಲಿಂಗಯ್ಯ ಕಾನ್ಸ್ಟೇಬಲ್ ಗಳಾದ ರತ್ನಾಕರ್, ಸಿದ್ದರಾಮಯ್ಯ, ಮುಂತಾದ ಇಪ್ಪತ್ತಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರ ಗಾಯಗಳಾದವು. ಕಾರು, ಆಟೋ , ಬೈಕ್ ಸೇರಿದಂತೆ ಐವತ್ತಕ್ಕೂ ಹೆಚ್ಚು ವಾಹನಗಳನ್ನು ಸುಡಲಾಯಿತು. ಹೀಗೆ ಕರ್ನಾಟಕಕ್ಕೆ ಕಾಲಿಟ್ಟ ಕೂಡಲೇ ಪಾಪ್ಯುಲರ್ ಫ್ರಂಟ್ ಕೋಮು-ದಳ್ಳುರಿಗೆ ನಾಂದಿ ಹಾಡಿತು. ಅಲ್ಲಿಂದ ಬಳಿಕ ಪಾಪ್ಯುಲರ್ ಫ್ರಂಟ್ ಸತತವಾಗಿ ರಾಜ್ಯದಲ್ಲಿನ ಕೋಮು ಗಲಭೆಗಳಿಗೆಲ್ಲ ನೇರಾನೇರ ಹೊಣೆಗಾರನಾಗುತ್ತಾ ಸಾಗಿತು. ಆದರೆ ನಂತರ ಬಂದ ನಮ್ಮದೇ ಬಿಜೆಪಿ ಸರ್ಕಾರ ಕೂಡ ಇದರ ಮುಂದಿನ ಪರಿಣಾಮಗಳನ್ನು ಅಂದಾಜಿಸುವುದರಲ್ಲಿ ವಿಫಲವಾದರು ಸಹ ಅದರ ಚಟುವಟಿಕೆಗಳಿಗೆ ಅಂದಿನ ದಕ್ಷ ಗೃಹ ಮಂತ್ರಿಗಳಾದ ದಿ. ಡಾ. ವಿ ಎಸ್ ಆಚಾರ್ಯ ಅವರು ಕಡಿವಾಣ ಹಾಕಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಶತಾಯ ಗತಾಯ ಪಾಪ್ಯುಲರ್ ಫ್ರಂಟ್ ಬೆಂಬಲಕ್ಕೆ ನಿಂತು ಬಿಟ್ಟಿತು.
ಅಂದ ಹಾಗೆ ಈ ಪಾಪ್ಯುಲರ್ ಫ್ರಂಟ್ ನ ಹಿನ್ನೆಲೆಯೇನು..? ಇದು ಹೀಗೇ ಏಕಾಏಕಿ ಹುಟ್ಟಿಕೊಂಡಿದ್ದಲ್ಲ ... ಅದಕ್ಕೊಂದು ಹಿನ್ನೆಲೆಯಿದೆ... ಕುಖ್ಯಾತ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಯನ್ನು ಇಸ್ಲಾಮಿಕ್ ಉಗ್ರವಾದದ ಹಿನ್ನೆಲೆಯಲ್ಲಿ ೨೦೦೧ರ ಸೆಪ್ಟೆಂಬರ್ ೨೭ರಂದು ಮೊದಲ ಬಾರಿಗೆ ಮೂರು ವರ್ಷಗಳಿಗೆ ನಿಷೇಧಿಸಲಾಯಿತು. ಆ ಬಳಿಕ ಮತ್ತೆ ಪುನಃ ಎರಡು ವರ್ಶಗಳಿಗೆ ಬ್ಯಾನ್ ಮಾಡಲಾಯಿತು. ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್. ಡಿ. ಎ . ಸರಕಾರ ನಿಷೇಧಿಸಿದ್ರೆ, ನಂತರ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಬ್ಯಾನ್ ಮಾಡಿತು. ಆ ಬಳಿಕ ೨೦೦೬ ರಲ್ಲಿ ಮತ್ತೊಮ್ಮೆ ಯು.ಪಿ.ಎ. ಸರಕಾರ ಸಿಮಿ ಯನ್ನು ನಿಷೇಧಿಸಿತು. ಇದಾದದ್ದು ಫೆಬ್ರವರಿ ೨ನೇ ತಾರೀಕಿಗೆ ಆದರೆ ಅದೇ ವರ್ಷ ಆಗಸ್ಟ್ ಹದಿನೆಂಟನೇ ತಾರೀಕಿಗೆ ಕೇರಳದ ಕೊಚ್ಚಿಯ ಬಿನಾನಿ ಪುರಂ ಎಂಬಲ್ಲಿ ಒಂದು ಉಗ್ರ ತರಬೇತಿ ಶಿಬಿರ ನಡೆಯಿತು. ಇದರಲ್ಲಿ ನಿಷೇಧಿತ ಸಿಮಿಯ ಹದಿನೆಂಟು ಸದಸ್ಯರು ಪಾಲ್ಗೊಂಡಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದರೂ ಕೂಡಾ ಹೆಚ್ಚಿನ ತನಿಖೆಯಿಲ್ಲದೆ ರಾಜಕೀಯ ಒತ್ತಡದಿಂದಾಗಿ ಬಿಡುಗಡೆ ಮಾಡಬೇಕಾಯಿತು. ಅಂದಹಾಗೆ ಸಿಮಿಯ ಈ ಹಿಂದಿನ ಅಧ್ಯಕ್ಷ ಏರೊನಾಟಿಕಲ್ ಇಂಜಿನೀಯರ್ ಸಿ.ಎ. ಎಂ. ಬಷೀರ್ ಕೊಚ್ಚಿಯವನೇ. ಆತ ಪೊಲೀಸರಿಂದ ತಲೆಮರೆಸಿಕೊಂಡಿದ್ದರೂ ಇವತ್ತಿಗೂ ದುಬಾಯಿಯಿಂದ ಮತ್ತು ಪಾಕಿಸ್ತಾನದಿಂದ ಭಾರತದ ಉಗ್ರಸಂಘಟನೆಗಳನ್ನು ನಿಯಂತ್ರಿಸುತ್ತಿದ್ದಾನೆ.
ಅದೇ ವರ್ಷ ಅಂದರೆ ಸಿಮಿ ಮೂರನೇ ಬಾರಿ ನಿಷೇಧಕ್ಕೊಳಗಾದ ೨೦೦೬ರಲ್ಲೇ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನೆಯಾಯಿತು. ಸಿಮಿಯ ಹಿಂದಿನ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷನಾದ. ಸಿಮಿಯ ಕೇರಳ ರಾಜ್ಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಹಮೀದ್ ಮಾಸ್ಟರ್ ಕೇರಳ ಪಾಪ್ಯುಲರ್ ಫ್ರಂಟ್ ನ ಕಾರ್ಯದರ್ಶಿಯಾದ... ಹೀಗೆ ಸಿಮಿಯಲ್ಲಿದ್ದ ಹೆಚ್ಚಿನ ಕಾರ್ಯಕರ್ತರು ಹೊಸದಾಗಿ ಶುರುವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಗುರುತಿಸಿಕೊಂಡರು.
ನಿಧಾನವಾಗಿ ಕೇರಳದಲ್ಲಿ ಉಗ್ರ ತರಬೇತಿ ಶಿಬಿರಗಳು ಸದ್ದಿಲ್ಲದೇ ಶುರುವಾದವು ಬಿನಾನಿ ಪುರಂನಲ್ಲಿ ಪೊಲೀರು ಬಂಧಿಸಿದ್ದ ಹದಿನೆಂಟು ಮಂದಿಯ ಪೈಕಿ ಐವರನ್ನು ಬಿಟ್ಟು ಉಳಿದವರನ್ನು ಬಿಡುಗಡೆ ಮಾಡಲಾಗಿತ್ತು. ಈ ಐವರಲ್ಲಿ ಅನ್ಸಾರ್ ಮೌಲವಿ, ಶಾದುಲಿ, ನಿಜಾಮುದ್ದೀನ್, ಅಬ್ದುಲ್ ರಫೀಕ್ ಮತ್ತು ಶಂಸು ಕೂಡ ಬೇಲ್ ಪಡೆದು ಬಿಡುಗಡೆಯಾದರು ಆ ಬಳಿಕ ೨೦೦೮ ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಅರವತ್ತಕ್ಕೂ ಹೆಚ್ಚು ಜನ ಸತ್ತು, ಇನ್ನೂರಕ್ಕಿಂತಲೂ ಹೆಚ್ಚು ಜನ ಗಾಯಗೊಂಡರು. ಈ ಪ್ರಕರಣದಲ್ಲಿ ಇದೇ ಅನ್ಸಾರ್ ಮೌಲವಿ, ಶಾದುಲಿಯನ್ನು ಬಂಧಿಸಲಾಯಿತು. ಆಗ ತಾವು ಕೇರಳದಲ್ಲಿ ಬಿನಾಣಿಪುರಂ ನ ಉಗ್ರ ಶಿಬಿರವಲ್ಲದೆ ಇಡುಕ್ಕಿಯ ವಾಗಮೋನ್ ನಲ್ಲಿ ಇನ್ನೆರಡು ಉಗ್ರ ಶಿಬಿರಗಳಲ್ಲಿ ಭಾಗವಹಿಸಿದ ಸಂಗತಿಯನ್ನು ಬಯಲುಗೊಳಿಸಿದರು. ಕೇರಳದ ರಾಜಕೀಯ ಅದು ಹೇಗೆ ದೇಶದ ಭದ್ರತೆಯ ಜೊತೆಗೆ ಆಟವಾಡಿತೋ ನೋಡಿ. ಅವತ್ತೇನಾದರೂ ಅನ್ಸಾರ್ ಮೌಲವಿ, ಶಾದುಲಿ ಇಬ್ಬರನ್ನು ಸರಿಯಾಗಿ ವಿಚಾರಣೆಗೊಳಪಡಿಸಿ, ಅವರ ಜಾಮೀನಿಗೆ ಕೇರಳ ಸರಕಾರ ಅಡ್ಡಿಪಡಿಸಿದ್ದರೆ ಜೈಪುರ ಸರಣಿ ಬಾಂಬ್ ಸ್ಫೋಟ ತಪ್ಪಿಸಬಹುದಿತ್ತೇನೋ? ಆದರೆ ಹಾಗಾಗಲಿಲ್ಲ.
ನಂತರ ಗುಜರಾತಿನಲ್ಲಿ ಅಮಾದವಾದ್ ಸರಣಿ ಬಾಂಬ್ ಸ್ಪೋಟದಲ್ಲಿ ಐವತ್ಮೂರು ಜನ ಸತ್ತರು. ಆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉಗ್ರರು ತಾವು ಕೇರಳದ ಇಡುಕ್ಕಿಯ ವಾಗಮೋನ್ ಉಗ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದನು ಬಾಯಿಬಿಟ್ಟರು. ಆಗಲೂ ಕೇರಳದ ರಾಜಕಾರಣಿಗಳು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಬ್ಬರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬುದು ಸಿಮಿಯ ಪುನರಾವತಾರ ಎಂಬುದನ್ನೂ, ಅದು ಕೇರಳದಲ್ಲಿ ಇಸ್ಲಾಮಿಕ್ ಉಗ್ರವಾದವನ್ನು ಪೋಷಿಸುತ್ತಿದೆ ಎಂಬುದನ್ನಾಗಲೀ ಒಪ್ಪಿಕೊಳ್ಳಲು ಹಿಂಜರಿದರು. ಅಷ್ಟರಲ್ಲಾಗಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನದೇ ಆದ "ತೇಜಸ್" ದಿನ ಪತ್ರಿಕೆಯನ್ನು ಕೇರಳದಲ್ಲಿ ನಾಲ್ಕು ಬೇರೆ ಬೇರೆ ಆವೃತ್ತಿಗಳಲ್ಲಿ ಪ್ರಕಟಿಸತೊಡಗಿತು. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯಾವಾಗ "ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ" ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿತೊ.. ಆಗ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಬ್ಬರೂ ಎಚ್ಛೆತ್ತರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷನಾಗಿ ಅಬೂಬಕರ್ ಎಂಬ ಮಾಜೀ ಸಿಮಿ ಸದಸ್ಯ ಆಯ್ಕೆಯಾದ.
ಇದರೊಂದಿಗೆ ಕೇರಳದ ಕ್ರಿಶ್ಚಿಯನ್ನರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ "ಲವ್ ಜಿಹಾದ್" ನಡೆಸುತ್ತಿದೆ ಎಂದು ಆರೋಪಿಸಿ ಒಂದು ವರದಿ ಸಿದ್ಧಪಡಿಸಿದರು. ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರಿಶ್ಚಿಯನ್ಸ್ ೨,೮೬೮ ಹುಡುಗಿಯರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ನ ಹುಡುಗರು ಪ್ರೀತಿಯ ಹೆಸರಲ್ಲಿ ಮತಾಂತರ ಮಾಡಿದ್ದಾರೆಂದು ಆರೋಪಿಸಿತು. ಕೇರಳ ಕ್ರಿಶ್ಚಿಯನ್ ಬಿಷಪ್ ಕೌನ್ಸಿಲ್ ನ ಬಿಷಪ್ ಮ್ಯಾಥ್ಯೂ ಅನಿಕುಳಿಕಟ್ಟಿಲ್ ಎಂಬಾತ ಈ ವರದಿ ನೀಡಿದ್ದ. ಇದರಲ್ಲಿ ಪಾಪ್ಯುಲರ್ ಫ್ರಂಟ್ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಪ್ರೀತಿಯ ಬಲೆಗೆ ಕೆಡವಿ ಮತಾಂತರ ಮಾಡಿ ನಂತರ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತದೆಂಬ ಆರೋಪ ಮಾಡಿದ್ದ. ಹಾಗಾಗಿಯೇ "ಲವ್ ಜಿಹಾದ್" ಬಗ್ಗೆ ಎಚ್ಚರಿಕೆಯುಳ್ಳ ಪೋಸ್ಟರ್ ಗಳನ್ನೂ ಕ್ರಿಶ್ಚಿಯನ್ನರೇ ತಮ್ಮ ಶಾಲಾ ಕಾಲೇಜುಗಳಲ್ಲಿ ಅಂಟಿಸಿದರು. ಅದಾದ ನಂತರವೇ ವಿಶ್ವ ಹಿಂದೂ ಪರಿಷದ್ ಈ ವಿಷಯವನ್ನೆತ್ತಿಕೊಂಡದ್ದು. (ಆದರೆ ಈ "ಲವ್ ಜಿಹಾದ್" ಎಂಬುದು ಸಂಘ ಪರಿವಾರದ ಕಾಲ್ಪನಿಕ ಸೃಷ್ಟಿ ಎಂದೇ ನಮ್ಮ ಮಾಧ್ಯಮಗಳು ಬಿಂಬಿಸಿದವು)
ಆದರೆ ಕೇರಳದ ಕಮ್ಯುನಿಸ್ಟ್ ಸರಕಾರದ ಅಂದಿನ ಮುಖ್ಯಮಂತ್ರಿ ಅಚ್ಯುತಾನಂದನ್ ಪಾಪ್ಯುಲರ್ ಫ್ರಂಟ್ ನ ಈ ಮುಖವನ್ನು ತಾವೇ ತೆರೆದಿಟ್ಟರು. ದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುವಾಗ ಅಚ್ಯುತಾನಂದನ್ ಅವರೇ ಇನ್ನು ಇಪ್ಪತ್ತು ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸಬೇಕೆಂಬ ಗುರಿಯೊಂದಿಗೆ ಪಾಪ್ಯುಲರ್ ಫ್ರಂಟ್ ಕೆಲಸ ಮಾಡುತ್ತಿದೆ ಅಂತ ನೇರವಾಗಿಯೇ ಹೇಳಿದರು. ಮತ್ತು ಲವ್ ಜಿಹಾದ್ ಎಂಬುದೊಂದು ನಿಜಕ್ಕೂ ಇದೆ ಎಂಬುದನ್ನು ಪಕ್ಕಾ ಕಮ್ಯುನಿಸ್ಟ್ ಮುಖ್ಯಮಂತ್ರಿಯೇ ಒಪ್ಪಿಕೊಂಡರು. ಆದರೂ ನಮ್ಮ ದೇಶದ ಎಡಪಂಥೀಯರು ಮಾತ್ರ ಪಾಪ್ಯುಲರ್ ಫ್ರಂಟ್ ಅನ್ನು ಬೆಂಬಲಿಸುತ್ತಾ, ಸಂಘ ಪರಿವಾರವನ್ನೇ ದೂಷಿಸತೊಡಗಿದರು...
ಆದರೆ ಪ್ರೊಫೆಸರ್ ಜೋಸೆಫ್ ತಮ್ಮ ಪ್ರವಾದಿಯನ್ನು ದೂಷಿಸಿದರು ಎಂಬ ಕಾರಣವೊಡ್ಡಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಹಾಡಹಗಲಲ್ಲೆ ಜೋಸೆಫ್ ಕುಟುಂಬದವರ ಕಣ್ಣೆದುರಿಗೆ ಅವರ ಕೈಯನ್ನು ಕಡಿದಾಗ ಕೇರಳದ ಕಮ್ಯುನಿಸ್ಟ್ ಸರಕಾರ ಬೆಚ್ಚಿ ಬಿದ್ದಿತು. ಈ ಸಂಬಂಧ ಪೊಲೀಸರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿದಾಗ ಅಲ್ಲಿ ಅವರಿಗೆ ಹಿಜಬುಲ್ ಮುಜಾಹಿದ್ದೀನ್, ಲಷ್ಕರ್ ಎ ತೊಯ್ಬಾ ಮತ್ತು ಅಲ್-ಕಾಯ್ದಾದೊಂದಿಗೆ ಪಾಪ್ಯುಲರ್ ಫ್ರಂಟ್ ಗೆ ಸಂಪರ್ಕವಿರುವ ಸಾಕ್ಷಿಗಳು ಪತ್ತೆಯಾದವು. ಕೇರಳ ಸರಕಾರದ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಆರ್. ರಾಜಶೇಖರನ್ ಕೇರಳ ಹೈಕೋರ್ಟ್ ಗೆ ಈ ಬಗ್ಗೆ ಅಫಿದಾವಿತ್ತನ್ನೂ ಸಲ್ಲಿಸಿದರು. ಕೇರಳ ಕಮ್ಯುನಿಸ್ಟ್ ಸರಕಾರವೇ ಪಾಪ್ಯುಲರ್ ಫ್ರಂಟ್ ಒಂದು ಭಯೋತ್ಪಾದಕ ಸಂಘಟನೆ, ಅದಕ್ಕೆ ಮೇಲೆ ಹೇಳಿದ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆ ಅಂತ ನ್ಯಾಯಾಲಯಕ್ಕೆ ಹೇಳಿಕೆ ನೀಡಿದರೂ ನಮ್ಮ 'ಸೆಕ್ಯುಲರ್' ಮಾಧ್ಯಮಗಳು ಇದನ್ನೊಂದು ದೊಡ್ಡ ವಿಷಯ ಮಾಡಲೇ ಇಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷ ಕೇಸರೀ ಭಯೋತ್ಪಾದನೆಯ ನಾಟಕ ರಚಿಸಿದ್ದನ್ನು, ಇದೆ ಮಾಧ್ಯಮದ ಮಂದಿ ವರ್ಣರಂಜಿತವಾಗಿ ತಮ್ಮ ಸಂಡಾಸು ಪತ್ರಿಕೆಗಳಲ್ಲಿ ಚಿತ್ರಿಸಿದರು.
ಆದರೆ ಕೇರಳದಲ್ಲಿ ನಂತರ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಸದನದಲ್ಲೇ ಒಂದು ಕುತೂಹಲಕರ ಅಂಕಿಅಂಶ ಬಿಚ್ಚಿಟ್ಟರು. ೨೦೧೨ರಲ್ಲಿ ಜೂನ್ ೨೭ರಂದು ಕೇರಳ ಉಚ್ಚ ನ್ಯಾಯಾಲಯ ಹಿಂದೂ ಹುಡುಗಿಯೊಬ್ಬಳನ್ನು ಮುಸ್ಲಿಂ ಹುಡುಗನೊಬ್ಬ ಲವ್ ಹೆಸರಲ್ಲಿ ಹಾರಿಸಿಕೊಂಡು ಹೋದ ಪ್ರಕರಣವೊಂದರಲ್ಲಿ ಕೋಯಿಕ್ಕೋಡ್ ನ ಸಿಟಿ ಪೊಲೀಸ್ ಕಮಿಷನರ್ ತನಿಖೆ ಕೈಗೊಳ್ಳುವಂತೆ ಆದೇಶಿಸಿತ್ತು. ಅದಾದ ಬಳಿಕ ಒಂದೇ ತಿಂಗಳಲ್ಲಿ ದೀಪಾ ಚೇರಿಯನ್ ಎನ್ನುವ ಕ್ರಿಶ್ಚಿಯನ್ ಗೃಹಿಣಿಯೊಬ್ಬಳನ್ನು ಓರ್ವ ಮುಸ್ಲಿಂ ಮತಾಂತರ ಮಾಡಿ ಮದುವೆಯಾಗಿದ್ದ. ಈ ದೀಪಾ ಚೇರಿಯನ್ ಎರಡು ಸಿಮ್ ಕಾರ್ಡ್ ಗಳನ್ನೂ ಜೈಲಿನಲ್ಲಿರುವ ಉಗ್ರನೊಬ್ಬನಿಗೆ ಪೂರೈಸಿದ್ದಳು. ಈ ಪ್ರಕರಣವೂ ತನಿಖೆಯಾಗಿ ಕೇರಳದ ಕ್ರಿಶ್ಚಿಯನ್ ಸಮುದಾಯ ವ್ಯಗ್ರಗೊಂಡಿತ್ತು. ಅದೇ ಸಮಯ ಸಿಪಿಎಂ ಸದಸ್ಯೆ ಕೆ.ಕೆ.ಲತಿಕಾ ಕೇರಳದಲ್ಲಿ ಹುಡುಗಿಯರ ಮತಾಂತರದ ಬಗ್ಗೆ ಸದನದಲ್ಲೇ ಪ್ರಶೆ ಕೇಳಿ ಕಾಂಗ್ರೆಸ್ ಅನ್ನು ಮುಜುಗರಕ್ಕೆ ಸಿಕ್ಕಿ ಹಾಕಿಸಿದರು. ಕೇರಳದ ರಾಜಕೀಯ ಒಂದಿಷ್ಟು ವಿಚಿತ್ರ. ಅಲ್ಲಿ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಿದಷ್ಟು ಕಮ್ಯುನಿಷ್ಟರು ಓಲೈಸುವುದಿಲ್ಲ. ಯಾಕೆಂದರೆ ಅವರೆಷ್ಟೇ ತಿಪ್ಪರಲಾಗ ಹಾಕಿದರೂ ಅವರಿಗಲ್ಲಿ ಮುಸ್ಲಿಮರ ಓಟು ಬೀಳೋದಿಲ್ಲ. ಹಾಗಾಗಿಯೇ ದೇಶದೆಲ್ಲೆಡೆ ಕಮ್ಯುನಿಷ್ಟರು ಮುಸ್ಲಿಂ ಮೂಲಭೂತವಾದಿಗಳನ್ನು ಬೆಂಬಲಿಸಿದರೂ ಕೇರಳದ ಕಮ್ಯುನಿಸ್ಟರು ಆ ಪ್ರಮಾಣದಲ್ಲಿ ಬೆಂಬಲಿಸುವುದಿಲ್ಲ. ಹಾಗಾಗಿಯೇ ಲತಿಕಾ ಕಾಂಗ್ರೆಸ್ ಗೆ ಮತಾಂತರದ ಬಗ್ಗೆ ಪ್ರಶ್ನೆ ಇಕ್ಕಟ್ಟಿಗೆ ಸಿಕ್ಕಿಸಿದ್ದು. ಈ ಪ್ರಶ್ನೆಗೆ ಸ್ವತಃ ಮುಖ್ಯಮಂತ್ರಿ ಊಮ್ಮೆನ್ ಚಾಂಡಿಯವರೇ ಅಂಕಿಅಂಶಗಳ ಸಹಿತ ಉತ್ತರಿಸಿದರು. ೨೦೦೬ರಿಂದ (ಪಾಪ್ಯುಲರ್ ಫ್ರಂಟ್ ಅಸ್ಥಿತ್ವಕ್ಕೆ ಬಂದ ವರ್ಷ) ೨೦೧೨ ರ ವರೆಗೆ ಒಟ್ಟು ಏಳು ಸಾವಿರದ ಏಳುನೂರಾ ಹದಿಮೂರು ಮಂದಿ ಇಸ್ಲಾಮಿಗೆ ಮತಾಂತರ ಹೊಂದಿದ್ದಾರೆ. ಅದರಲ್ಲೂ ೨೦೦೯ ಮತ್ತು ೨೦೧೨ ರ ಮಧ್ಯೆ ಇಸ್ಲಾಮಿಗೆ ಮತಾಂತರ ಹೊಂದಿದವರ ಪೈಕಿ ಎರಡು ಸಾವಿರದ ಆರುನೂರ ಅರವತ್ತೈದು ಮಂದಿಯೂ ಯುವತಿಯರೇ ಆಗಿದ್ದು ಅವರ ಪೈಕಿ ಎರಡು ಸಾವಿರದ ನೂರಾತೊಂಭತ್ತೈದು ಮಂದಿ ಹಿಂದೂ ಹುಡುಗಿಯರಾಗಿದ್ದು, ಉಳಿದ ನಾಲ್ಕುನೂರರ ತೊಂಭತ್ತೆರಡು ಮಂದಿ ಕ್ರಿಶ್ಚಿಯನ್ ಹುಡುಗಿಯರು ಅಂತ ಅಂಕಿ ಅಂಶ ಒದಗಿಸಿದರು. ಜೊತೆಗೆ ಇನ್ನೊಂದು ಆಶ್ಚರ್ಯ ಹುಟ್ಟಿಸುವ ವಿಷಯವನ್ನೂ ಹೇಳಿದರು. ಅದೆಂದರೆ ಎರಡು ಸಾವಿರದ ಎಂಟುನೂರಾ ಮೂರು ಮಂದಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆಂಬ ಸಂಗತಿ. ಆದರೂ ಪಟ್ಟು ಬಿಡದ ಊಮ್ಮೆನ್ ಚಾಂಡಿ ಈ 'ಲವ್ ಜಿಹಾದ್' ಎಲ್ಲ ಸುಳ್ಳು ಅಂತ ಕೀರಲು ಸ್ವರದಲ್ಲಿ ಅಂದರು...
ಪ್ರತಿಯೊಬ್ಬ ರಾಜಕೀಯ ಮುಖಂಡನಿಗೂ ಪಾಪ್ಯುಲರ್ ಫ್ರಂಟ್ ಏನೆಂಬುದು ಗೊತ್ತಿದೆ. ಆದರೆ ಬಿಜೆಪಿಯವರನ್ನು ಬಿಟ್ಟರೆ ಯಾರೂ ಸಾರ್ವಜನಿಕವಾಗಿ ಹೇಳುತ್ತಿಲ್ಲ ಅಷ್ಟೇ. ಇದ್ದದ್ದರಲ್ಲಿ ಒಂದಿಷ್ಟು ಕಮ್ಯುನಿಸ್ಟರೇ ಈ ವಿಚಾರದಲ್ಲಿ ಪರವಾಗಿಲ್ಲ. ಯಾಕೆಂದರೆ ಪಾಪ್ಯುಲರ್ ಫ್ರಂಟ್ ನ ಉಗ್ರಗಾಮಿಗಳು ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೂ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ...
ಪಾಪ್ಯುಲರ್ ಫ್ರಂಟ್ ಎಂಬ ಈ ಸಂಘಟನೆ ಅದು ಹೇಗೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದೆ, ಅದಕ್ಕಿರುವ ಅಂತಾರಾಷ್ಟ್ರೀಯ ಸಂಪರ್ಕಗಳೇನು ಎಂಬುದನ್ನು ಮುಂದಿನ ಭಾಗಗಳಲ್ಲಿ ವಿವರಿಸುವೆ.