Infinite Thoughts

Thoughts beyond imagination

ಕಮ್ಯುನಿಸಂನ್ನು ತಿರಸ್ಕರಿಸಿದ್ದ ಬಾಬಾಸಾಹೇಬರು

ಕಮ್ಯುನಿಸಂನ್ನು ತಿರಸ್ಕರಿಸಿದ್ದ ಬಾಬಾಸಾಹೇಬರು

“ನನ್ನ ಇಬ್ಬರು ಅಕ್ಕಂದಿರು ತಮ್ಮ ಮಧುರವಾದ ಧ್ವನಿಯಲ್ಲಿ ಭಜನೆ ಹೇಳುತ್ತಿದ್ದಾಗ, ನನಗನಿಸುತ್ತಿದ್ದುದು ಮಾನವರಾಗಿ ಬದುಕಲು ಧರ್ಮ, ಧಾರ್ಮಿಕ ಶಿಕ್ಷಣ ನಮಗೆ ಅತ್ಯಗತ್ಯವೆಂದು. ನನ್ನನ್ನು ಅನೇಕರು ‘ಧರ್ಮಹೀನ’ ಎಂದು ತಿಳಿಯುತ್ತಾರೆ; ಅದು ಸರಿಯಲ್ಲ... ಧರ್ಮದ ವಿಷಯದಲ್ಲಿ ನನಗಿರುವ ಶ್ರದ್ಧೆ ಮತ್ತು ಪ್ರೀತಿ ಏನೆಂಬುದು ನನ್ನ ಸಂಪರ್ಕಕ್ಕೆ ಬಂದವರಿಗೆ ಚೆನ್ನಾಗಿ ಗೊತ್ತಿದೆ”

ಡಾ| ಬಾಬಾಸಾಹೇಬ ಅಂಬೇಡ್ಕರರ ಈ ಮೇಲಿನ ಹೇಳಿಕೆ ಅದೆಷ್ಟು ಮಹತ್ವದೆಂದರೆ; ಅವರಿಗೆ ಬದುಕಿನಲ್ಲಿ ಅಧ್ಯಾತ್ಮದ ಹಸಿವೆ ಎಷ್ಟು ತೀವ್ರವಾಗಿತ್ತು ಎನ್ನುವುದನ್ನು ತಿಳಿಯಲು ಈ ಹೇಳಿಕೆಯೇ ಸಾಕ್ಷಿ.  ಬಾಬಾ ಸಾಹೇಬರು ಬಾಲ್ಯದಲ್ಲಿ ಶ್ರದ್ಧೆಯ ಧಾರ್ಮಿಕ ವಾತಾವರಣದಲ್ಲಿ ಬೆಳೆದವರು.  ಮನೆಯಲ್ಲಿ ರಾಮಾಯಣ, ಪಾಂಡವ ಪ್ರತಾಪ, ಜ್ಞಾನೇಶ್ವರಿಗಳ ನಿತ್ಯ ಪಠಣವಿತ್ತು. ಪ್ರತಿದಿನ ಭಜನೆ ಮಾಡುತ್ತಿದ್ದರು.  ಅವರ ತಂದೆ ಕಬೀರ ಪಂಥದ ದೀಕ್ಷೆಯನ್ನೂ ಸ್ವೀಕರಿಸಿದರು.  ಬಾಬಾ ಸಾಹೇಬರು ವಕೀಲರಾಗಿ ವಿದ್ವಾಂಸರಾಗಿ ಪ್ರಸಿದ್ಧರಾದ ಮೇಲೂ ಮನೆಯಲ್ಲಿ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಇಂತಹದೊಂದು ಧಾರ್ಮಿಕ ಶ್ರದ್ಧೆಯುಳ್ಳ ಮನುಷ್ಯ ಕಮ್ಯುನಿಸಮ್ಮನ್ನು ಒಪ್ಪುವುದು ಸಾಧ್ಯವೆ!  ಮನುಷ್ಯನ ಅಂತರಂಗದ ವಿಕಾಸದ ಕುರಿತು ಕಣ್ಣು ಮುಚ್ಚಿಕೊಂಡಿರುವ ಸಾಮ್ಯವಾದವನ್ನು ಭಾವ ಸಮೃದ್ಧಿಯುಳ್ಳ ಯಾರೂ ಒಪ್ಪಲಾರರು.  ಒಮ್ಮೆ ಒಪ್ಪಿದ್ದರೆ ಅದು ಕೃತಕವಾಗುತ್ತದೆ, ಕಪಟವಾಗುತ್ತದೆ.  ವ್ಯವಸ್ಥೆಯಲ್ಲಿ ಶೋಷಣೆಗೊಳಗಾದವರಿಗೆಲ್ಲ ಇರುವ ಒಂದೇ ಮಾರ್ಗ ಕಮ್ಯೂನಿಸಂ ಎಂದು ಎಡ ಪಂಥದವರು ಹೇಳುತ್ತಲೇ ಇದ್ದಾರೆ.

ಆದರೆ, ‘ಮನುಷ್ಯನನ್ನು ಸಮಗ್ರವಾಗಿ ಗ್ರಹಿಸಿದವರು, ಮನುಷ್ಯನನ್ನು ಅರ್ಥಪಶುವಾಗಿ ಕಾಣಲಾರರು.  ಸಾಮಾಜಿಕ ಸಾಮರಸ್ಯವೆಂದರೆ ಕೇವಲ ಸಮಾನತೆಯ ಆಧಾರದಲ್ಲಿ ಗಳಿಸಿದ ಸ್ಪರ್ಧಾತ್ಮಕ ಸಂಗತಿಯಲ್ಲ.  ದೈವ ಶ್ರದ್ಧೆಯ ಆಧಾರದಲ್ಲಿ ಪರಮಾತ್ಮನ ಅಂಶವೇ ಆಗಿರುವ ಸಕಲರನ್ನೂ ಗೌರವಿಸುವ ನೆಲೆಯಲ್ಲಿ ದಕ್ಕುವ ನೆಮ್ಮದಿ ಅದು’. ಎಂಬುದನ್ನು ಬಾಬಾಸಾಹೇಬರು ಹೇಳುತ್ತಲೇ ಬಂದಿದ್ದಾರೆ.

“ಕಾರ್ಲ್ ಮಾರ್ಕ್ಸ್ ಸಿದ್ಧಾಂತ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪ್ರತಿಪಾದಿತವಾಯಿತು.  ಅಂದಿನಿಂದಲೂ ಅದು ತುಂಬ ಟೀಕೆಗೆ ಒಳಗಾಗಿದೆ.  ಈ ಟೀಕೆಯ ಫಲವಾಗಿ ಮಾರ್ಕ್ಸ್ ಕಟ್ಟಿದ ವಿಚಾರಧಾರೆಯ ಸೌಧ ಬಹುಪಾಲು ಛಿದ್ರವಾಗಿದೆ.  ನನ್ನ ಸಮಾಜವಾದ ಅನಿವಾರ್ಯ ಎಂದು ಹೇಳಿದ ಮಾರ್ಕ್ಸ್ ನ ಮಾತು ಸಂಪೂರ್ಣವಾಗಿ ಸುಳ್ಳಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.  ಸಮಾಜವಾದದ ವೇದವಾಕ್ಯವಾದ ಅವನ ‘ದಾಸ್ ಕೆಪಿಟಲ್’ ಪ್ರಕಟಣೆಯಾದ ಸುಮಾರು ೭೦ ವರ್ಷಗಳ ಅವಧಿಯ ನಂತರ ೧೯೧೭ರಲ್ಲಿ ಒಂದೇ ಒಂದು ದೇಶದಲ್ಲಿ ಮೊಟ್ಟಮೊದಲಿಗೆ ಶ್ರಮಜೀವಿಗಳ ಪ್ರಭುತ್ವ ಸ್ಥಾಪನೆಯಾಯಿತು.  ಶ್ರಮಜೀವಿಗಳ ಪ್ರಭುತ್ವಕ್ಕೆ ಇನ್ನೊಂದು ಹೆಸರಾದ ಸಾಮ್ಯವಾದ, ರಷ್ಯಾಕ್ಕೆ ಬಂದಾಗಲೂ ಕೂಡ ಅದು ಏನೋ ಅನಿವಾರ್ಯವೆಂಬಂತೆ ಯಾವುದೇ ರೀತಿಯ ಮಾನವ ಪ್ರಯತ್ನವಿಲ್ಲದೆ ಬರಲಿಲ್ಲ.  ವಿಪರೀತ ಹಿಂಸಾಚಾರ ಮತ್ತು ರಕ್ತಪಾತವನ್ನೊಳಗೊಂಡ ತುಂಬ ಉದ್ದೇಶ ಪೂರ್ವಕವಾದ ಯೋಜನೆಯಿಂದ ಮಹಾಕ್ರಾಂತಿಯಾಗಿ ಸಾಮ್ಯವಾದವು ರಷ್ಯಾದ ಒಳಗೆ ಕಾಲಿಟ್ಟಿತು.  ಶ್ರಮಜೀವಿಗಳ ವರ್ಗದ ಸರ್ವಾಧಿಕಾರಕ್ಕಾಗಿ ಉಳಿದ ದೇಶಗಳು ಇನ್ನೂ ಕಾಯುತ್ತಿವೆ.  ಮಾರ್ಕ್ಸ್ ವಾದವು

ಸಾಮಾನ್ಯವಾಗಿ ಸುಳ್ಳಾಗಿರುವುದು ಒತ್ತಟ್ಟಿಗಿರಲಿ, ಅವನು ಹೇಳಿದ ಇತರ ಅನೇಕ ವಾದಗಳೂ ತರ್ಕ ಮತ್ತು ಅನುಭವಗಳೆರಡರಿಂದಲೂ ಕೂಡ ಧ್ವಂಸವಾಗಿವೆ.  ಇತಿಹಾಸದ ಆರ್ಥಿಕ ವ್ಯಾಖ್ಯಾನವನ್ನು ಏಕೈಕ ವಿವರಣೆಯೆಂದು ಈಗ ಯಾರೂ ಒಪ್ಪುವುದಿಲ್ಲ.  ಶ್ರಮಿಕ ವರ್ಗ ಒಂದೇ ಸಮನೆ ಉದ್ದಕ್ಕೂ ದಿವಾಳಿಯಾಗಿದೆ ಎಂಬುದನ್ನೂ ಯಾರೂ ಒಪ್ಪುವುದಿಲ್ಲ.”

(ಈ ಅನಿಸಿಕೆಗಳು ‘ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು’ ಕೃತಿ ಸಂಪುಟ ಮೂರರಲ್ಲಿ ‘ಬುದ್ಧ ಮತ್ತು ಕಾರ್ಲ ಮಾರ್ಕ್ಸ್’ ಎಂಬ ಲೇಖನದಿಂದ ಆರಿಸಲಾಗಿದೆ)

ಮನುಷ್ಯನನ್ನು ಕೇವಲ ಅರ್ಥಪಶುವಾಗಿ ಕಾಣುವ ಕಮ್ಯುನಿಸಂ ಬಗ್ಗೆ ಬಾಬಾಸಾಹೇಬರಿಗೆ ಸ್ವಲ್ಪವೂ ಗೌರವವಿರಲಿಲ್ಲ.  ಅಷ್ಟೇ ಅಲ್ಲದೆ ಅವರೇ ಹೇಳಿದಂತೆ “ಸಾಮ್ಯವಾದವನ್ನು ಸ್ಥಾಪಿಸಲು ಇರುವುದು ಎರಡೇ ಸಾಧನಗಳೆಂದು ಕಮ್ಯುನಿಸ್ಟರು ಹೇಳುತ್ತಾರೆ; ಮೊದಲನೇಯದು ಹಿಂಸಾಚಾರ, ಎರಡನೇಯದು ಸರ್ವಾಧಿಕಾರ. ಇದನ್ನು ಬಿಟ್ಟರೆ ಬೇರಾವುದರಿಂದಲೂ ಹೊಸ ವ್ಯವಸ್ಥೆಯನ್ನು ಮುಂದುವರಿಸಲು ಸಾಧ್ಯವಿಲ್ಲ” ಇಂತಹ ಕ್ರೂರ ಸಿದ್ಧಾಂತ ಮತ್ತು ಅದರ ಕಾರ್ಯವಿಧಾನಗಳೆರಡನ್ನೂ ಕರುಣಾರ್ದ್ರ ಹೃದಯದ ಬಾಬಾಸಾಹೇಬರು ತಿರಸ್ಕರಿಸುತ್ತಾರೆ.

ಕಮ್ಯುನಿಸ್ಟ್ ಸಿದ್ಧಾಂತ ಅದೆಷ್ಟು ಅಮಾನವೀಯ ಎನ್ನುವುದನ್ನು ಹೇಳುತ್ತ ಅಂಬೇಡ್ಕರ್ ಬರೆಯುತ್ತಾರೆ “ಮಾನವ ಜನಾಂಗ ಕೇವಲ ಆರ್ಥಿಕ ಮೌಲ್ಯಗಳನ್ನು ಬಯಸುವುದಿಲ್ಲ.  ಅದು ಅಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಳ್ಳಲೂ ಕೂಡ ಇಚ್ಛಿಸುತ್ತದೆ.  ನಿರಂತರ ಸರ್ವಾಧಿಕಾರ ಅಧ್ಯಾತ್ಮಿಕ ಮೌಲ್ಯಗಳಿಗೆ ಯಾವ ಗಮನವನ್ನೂ ನೀಡಿಲ್ಲ.  ನೀಡುವಂತೆ ಕಾಣುವುದೂ ಇಲ್ಲ. ರಾಜಕೀಯ ಅರ್ಥಶಾಸ್ತ್ರವನ್ನು ಹಂದಿ ಸಿದ್ಧಾಂತವೆಂದು ಕಾರ್ಲೈಲ್ ಕರೆದಿದ್ದಾನೆ. ವಾಸ್ತವವಾಗಿ ಕಾರ್ಲೈಲ್‌ನ ಅಭಿಪ್ರಾಯ ಅಸಾಧು.  ಏಕೆಂದರೆ ಮನುಷ್ಯ ಭೌತಿಕ ಸೌಲಭ್ಯಗಳನ್ನು ಬಯಸುತ್ತಾನೆ.  ಕಮ್ಯುನಿಸ್ಟ್ ಸಿದ್ಧಾಂತವೂ ಕೂಡ ಅಷ್ಟೇ ಅಸಾಧುವಾಗಿದೆ. ಏಕೆಂದರೆ ಕಮ್ಯುನಿಸ್ಟ್ ತತ್ವ ಕೂಡ ಮನುಷ್ಯರು ಹಂದಿಗಳಿಗಿಂತ ಹೆಚ್ಚಲ್ಲ ಎಂದು ಮನುಷ್ಯರನ್ನು ಹಂದಿಗಳಂತೆ ಕೊಬ್ಬಿಸುವುದೇ ಆಗಿದೆ.” 

ಕಮ್ಯುನಿಸ್ಟರ ಸಮಾನತೆಯ ಹೆಗ್ಗಳಿಕೆಯನ್ನೂ ಅಂಬೇಡ್ಕರ್ ಪ್ರಶ್ನಿಸುತ್ತಾರೆ.  ಅವರೆನ್ನುತ್ತಾರೆ “ಸಮಾನತೆಯ ಸ್ಥಾಪನೆಗಾಗಿ ಸಮಾಜದ ಸೋದರತ್ವ ಅಥವಾ ಸ್ವಾತಂತ್ರ್ಯವನ್ನು ಬಲಿಕೊಡಲಾಗುವುದಿಲ್ಲ. ಈ ಕಾರಣದಿಂದಾಗಿ ಸಮಾನತೆಗೆ ವಿಪರೀತ ಒತ್ತು ಕೊಡಬಾರದು. ಸೋದರತ್ವ ಮತ್ತು ಸ್ವಾತಂತ್ರ್ಯ ಇಲ್ಲದಿದ್ದರೆ ಸಮಾನತೆಗೆ ಬೆಲೆಯಿಲ್ಲ.  ಬುದ್ಧನ ಮಾರ್ಗವನ್ನು ಅನುಸರಿಸುವುದರಿಂದ ಮಾತ್ರ ಸೋದರತ್ವ ಮತ್ತು ಸಮಾನತೆ ತತ್ವಗಳು ಜೊತೆ ಜೊತೆಯಾಗಿ ಬಾಳಬಲ್ಲವು.  

ಕಮ್ಯುನಿಸಂ ಯಾವುದಾದರೂ ಒಂದನ್ನು ಕೊಡುತ್ತದೆ, ಎಲ್ಲವನ್ನೂ ಅಲ್ಲ.  ಹೀಗೆ ಎಡ ಪಂಥವನ್ನು ಬಲವಾಗಿಯೇ ಅಲ್ಲಗಳೆದ ಡಾ. ಅಂಬೇಡ್ಕರ್ ಅವರನ್ನು ತಮ್ಮ ಆರಾಧ್ಯ ದೈವವೆಂಬಂತೆ ತೋರಿಸುವ ನಮ್ಮ ಎಡಬಿಡಂಗಿಗಳಿಗೆ ಅಂಬೇಡ್ಕರರ ವಿಚಾರಗಳು ತಿಳಿದಿಲ್ಲವೋ ಅಥವಾ ತಿಳಿದರೂ ಉಳಿದವರನ್ನು ವಂಚಿಸುವ ಹುನ್ನಾರವೋ?  ನಾವಂತೂ ಜಾಗೃತರಾಗಿರಬೇಕಲ್ಲ!  ದೈವ ಶ್ರದ್ಧೆಯನ್ನು ರೂಢಿಸಿಕೊಂಡಿದ್ದ, ಆತ್ಮ ವಿಕಾಸದಲ್ಲಿ ಆಸ್ತೆಯಿದ್ದ, ಅಧ್ಯಾತ್ಮದ ಆನಂದಕ್ಕಾಗಿ ನಿರಂತರ ತುಡಿದಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರರು ಅಪ್ಪಟ ಭಾರತೀಯ ವಿಚಾರ ಧಾರೆಯನ್ನು ಮೈಗುಡಿಸಿಕೊಂಡವರು.  ಪರಂಪರೆಯ ಶ್ರದ್ಧೆಯಲ್ಲಿ ಬದುಕನ್ನು ಕಟ್ಟಿಕೊಂಡವರು.  ಆ ಶ್ರದ್ಧೆಯಲ್ಲಿ ಪಾಲ್ಗೊಳ್ಳುವ ಧಾರ್ಮಿಕ ಸ್ವಾತಂತ್ರ್ಯ ತನ್ನೆಲ್ಲ ಸಹೋದರರಿಗೂ ದಕ್ಕ ಬೇಕೆಂದು ಹೋರಾಡಿದವರು. ಅವರನ್ನು ನೆನೆಯುವುದೆಂದರೆ ಭಾರತೀಯ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಂಡಂತೆಯೇ ಸರಿ.

Related posts