Infinite Thoughts

Thoughts beyond imagination

ಸಂವಿಧಾನಶಿಲ್ಪಿ ಬಾಬಾ ಸಾಹೇಬರ ಜನ್ಮ ದಿನ!

ಏಪ್ರಿಲ್ ಹದಿನಾಲ್ಕನೆಯ ತಾರೀಕು ೧೮೯೧, ಭಾರತದ ಮಟ್ಟಿಗೊಂದು ಅವಿಸ್ಮರಣೀಯ ದಿನ. ಅವತ್ತು ನಮ್ಮ ದೇಶದ ಹೆಮ್ಮೆಯ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಜನಿಸಿದ ದಿನ. ಬಾಬಾ ಸಾಹೇಬ ಅಂಬೇಡ್ಕರ್ ಎಂಬ ಮಹಾನ್ ಚೇತನ, ದೇಶ ಕಂಡ ಅದ್ಭುತ ಜ್ಞಾನಿ, ಬಹುಶ್ರುತ ವಿದ್ವಾಂಸ ಮತ್ತು ಅತ್ಯಂತ ಮೇಧಾವಿ ಕಾನೂನು ಪಂಡಿತ. ವರ್ಷ ಅವರ ೧೨೬ನೆಯ ಹುಟ್ಟುಹಬ್ಬದ ಆಚರಣೆಯ ಸಂಭ್ರಮ.

ಸಂದರ್ಭದಲ್ಲಿ ಬಾಬಾ ಸಾಹೇಬರ ಜೀವನದಲ್ಲಿನ ಕೆಲ ಮಹತ್ತರ ಘಟನೆಗಳ ಪುನರಾವಲೋಕನ ಮಾಡಬೇಕೆಂದೆನಿಸಿತು. ಅದರಲ್ಲೂ ಅವರ ರಾಜಕೀಯ ಜೀವನದಲ್ಲಿನ ಹಲವಾರು ಏಳುಬೀಳುಗಳು, ಅವರಿಗಾದ ಸೋಲು, ಅದರಿಂದಾದ ಆಘಾತ ಮತ್ತು ಭ್ರಮನಿರಸನ, ಅವರ ಜೀವನವನ್ನು ಮೊಟಕುಗೊಳಿಸಿತು. ಅವರು ತಮ್ಮ ಅರವತ್ತೈದನೇ ವಯಸ್ಸಿಗೇ ಕಾಲವಾದದ್ದು ದೇಶಕ್ಕಾದ ಅತ್ಯಂತ ಬಹುದೊಡ್ಡ ನಷ್ಟ. ಇದಲ್ಲವಾಗಿದ್ದರೆ ದೇಶಕ್ಕೆ ಇನ್ನೂ ಏನಿಲ್ಲವೆಂದರೂ ಎರಡು ದಶಕಗಳ ಕಾಲವಾದರೂ ಅವರ ಸೇವೆ ಲಭ್ಯವಾಗುತ್ತಿತ್ತು. ಒಂದು ವೇಳೆ ಅವರು ಚುನಾವಣೆ ಸೋಲದಯೇ ಇರುತ್ತಿದ್ದರೆ...? ಬಹುಷಃ ದೇಶದ ಚಿತ್ರಣವೇ ಬದಲಾಗಿ ಬಿಡುತ್ತಿತ್ತೋ ಏನೋ? ಆದರೆ ವಿಚಿತ್ರವೆಂದರೆ ಯಾವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಅಂದಿನಿಂದ ಇಂದಿನವರೆಗೆ ಡಾ. ಅಂಬೇಡ್ಕರರನ್ನು ಗುತ್ತಿಗೆ ತೆಗೆದುಕೊಂಡವರಂತೆ, ದಲಿತೋದ್ಧಾರದ ಕನಸನ್ನು ಬಿತ್ತುತ್ತಾ ದಲಿತರನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡು ಅವರ ಮತ ಪಡಯುತ್ತಾ ಅಧಿಕಾರ ಅನುಭವಿಸಿತೋ ಅದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳೇ ಪಿತೂರಿ ಮಾಡಿ ಡಾ.ಅಂಬೇಡ್ಕರ್ ಹೀನಾಯವಾಗಿ ಸೋಲುವಂತೆ ಮಾಡಿ ಅವರನ್ನೆಂದಿಗೂ ಲೋಕಸಭೆ ಪ್ರವೇಶಿಸದಂತೆ ಮಾಡಿದ್ದವು.

ದೇಶಕ್ಕೆ ಸ್ವಾತಂತ್ರ್ಯ ಸಿಗೋದಕ್ಕಿಂತಲೂ ಮೊದಲೇ ಮಹಾತ್ಮಾ ಗಾಂಧೀಜಿಗೂ ಅಂಬೇಡ್ಕರರಿಗೂ ಶೀತಲ್ ಯುದ್ಧ ಶುರುವಾಗಿತ್ತು. ನಂತರ ನೆಹರೂ ಮತ್ತವರ ಕಾಂಗ್ರೆಸ್ ಒಡನಾಡಿಗಳು ಅಂಬೇಡ್ಕರರನ್ನು ಸಾಧ್ಯವಾದಷ್ಟರ ಮಟ್ಟಿಗೆ ದೂರವೇ ಇಡಲು ಸತತ ಪ್ರಯತ್ನ ನಡೆಸಿದರು. ಆಶ್ಚರ್ಯವೆಂದರೆ ಸ್ವಾತಂತ್ರ್ಯ ಸಿಗೋದಕ್ಕೂ ಮೊದಲೇ ರಚಿಸಲಾದ "ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ" ಗೆ ಅಂಬೇಡಕರ್ ಆಯ್ಕೆಯೇ ಆಗದಂತೆ ಕಾಂಗ್ರೆಸ್ ನೋಡಿಕೊಂಡಿತು. ಕೊನೆಗೂ ಅಂಬೇಡ್ಕರ್ ಅವಿಭಜಿತ ಬಂಗಾಳದ ಜೆಸ್ಸೋರ್-ಖುಲ್ನಾ ದಿಂದ ಆಯ್ಕೆಯಾಗಲು ಸಹಕರಿಸಿದ್ದು ಬಂಗಾಳದ ಇನ್ನೋರ್ವ ದಲಿತ ಮೇಧಾವಿ ಜೋಗೇಂದ್ರನಾಥ್ ಮೊಂಡಲ್. ಆದರೆ ದೇಶ ವಿಭಜನೆಯಾಗುವಾಗ ಜೆಸ್ಸೋರ್-ಖುಲ್ನಾ ಪಾಕಿಸ್ತಾನಕ್ಕೆ ಸೇರುವಂಥ ಒಂದು ಕುಯುಕ್ತಿ ನಡೆಯಿತು. ಆಗ ಅಂಬೇಡ್ಕರ್ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾದರು. ಅಷ್ಟಾಗುವಾಗ ಅಂಬೇಡ್ಕರರಿಗಿದ್ದ ಅಗಾಧವಾದ ಸಾಂವಿಧಾನಿಕ ಜ್ಞಾನ ಮತ್ತವರ ವೃತ್ತಿಪರತೆ ಅನಿವಾರ್ಯವೆನಿಸಿ ಕಾಂಗ್ರೆಸ್ ಪ್ರಭಾವಿ ಮುಖಂಡರಾದ ಸರ್ದಾರ್ ಪಟೇಲ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಅಂಬೇಡ್ಕರ್ ಆಯ್ಕೆಯಾಗಲು ಶ್ರಮಿಸಿದರು. ಆದುದರಿಂದಲೇ ಅಂಬೇಡ್ಕರ್ ಸಂವಿಧಾನ ರಚಿಸುವ ಕರಡು ಸಮಿತಿಯ ಅಧ್ಯಕ್ಷರಾದದ್ದು ಮತ್ತು ದೇಶದ ಪ್ರಥಮ ಕಾನೂನು ಮಂತ್ರಿಯಾದದ್ದು.

ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ, ಭಾರತೀಯ ಉಪಖಂಡದ ಇಂದಿನ ಮೂರು ರಾಷ್ಟ್ರಗಳ (ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶ) ಸಂವಿಧಾನ ಪಿತಾಮಹರು ಇಬ್ಬರು ದಲಿತ ಮೇಧಾವಿಗಳೇ- ಒಂದು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಆದರೆ, ಅಂದಿನ ಅವಿಭಜಿತ ಪಾಕಿಸ್ತಾನದ ಸಂವಿಧಾನದ ಶಿಲ್ಪಿ ಜೋಗೇಂದ್ರನಾಥ್ ಮೊಂಡಲ್ ಇನ್ನೊಬ್ಬ ಪ್ರಖಂಡ ಕಾನೂನು ತಜ್ಞ. ಆದರೆ ಇದೆ ಮೊಂಡಲ್ ಅವರು ಕೊನೆಗೆ ಪಾಕಿಸ್ತಾನದ ಬಗ್ಗೆ ಭ್ರಮನಿರಸನಗೊಂಡು ಭಾರತಕ್ಕೆ ವಾಪಸ್ ಬಂದರು. ಅದರ ಬಗ್ಗೆ ಮುಂದೆ ಸುವಿಸ್ತಾರವಾಗಿ ಮುಂದೆ ಬರೆಯಲಿದ್ದೇನೆ.

ಆದರೆ ಯಾವಾಗ ಅಂಬೇಡ್ಕರ್ ಸಂವಿಧಾನದ ರಚನೆ ಮುಗಿಸಿ ಅದನ್ನು ದೇಶಕ್ಕರ್ಪಿಸಿದರೋ.... ಆಗಲೇ ನೆಹರೂ ತಮ್ಮ ಬಣ್ಣ ಬದಲಿಸಿದರು. ಅಂಬೇಡ್ಕರ್ ಸರಕಾರಕ್ಕೆ ರಾಜೀನಾಮೆ ಇತ್ತು ೧೯೫೨ರ ಲೋಕಸಭಾ ಚುನಾವಣೆಗೆ ತಮ್ಮದೇ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ ನಿಂದ ಮುಂಬೈಯ ದಾದರ್ ನಿಂದ ಸ್ಪರ್ಧಿಸಿದರು ಅದು ಕಾಲದ ದ್ವಿಸದಸ್ಯ ಕ್ಷೇತ್ರವಾದುದರಿಂದ ಒಂದೇ ಕ್ಷೇತ್ರದಿಂದ ಎರಡು ಅಭ್ಯರ್ಥಿಗಳು ಆಯ್ಕೆಯಾಗಬೇಕಾಗಿತ್ತು. ದೇಶಕ್ಕಾಗಲೇ ಸಂವಿಧಾನ ನೀಡಿದ್ದ ಅಂಬೇಡ್ಕರರಂಥ ಮಹಾನ್ ದಲಿತ ನಾಯಕನ ಎದುರು ಕಾಂಗ್ರೆಸ್ ಸ್ಪರ್ಧಿಯನ್ನೇ ಹಾಕದೆ ಅವರು ಲೋಕಸಭೆಗೆ ಆಯ್ಕೆಯಾಗಿ ಬರುವಂತೆ ಮಾಡಬೇಕಾಗಿತ್ತು. ಆದರೆ ನೆಹರೂಗೆ ಅಂಬೇಡ್ಕರ್ ಲೋಕಸಭೆಯಲ್ಲಿರೋದು ಬೇಕಾಗಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಎರಡು ಸ್ಪರ್ಧಿಗಳನ್ನು ಹಾಕಿತು. ಒಂದು ವಿಠ್ಠಲ್ ಬಾಲಕೃಷ್ಣ ಗಾಂಧಿಯಾದರೆ ಇನ್ನೊಬ್ಬ ದಲಿತ ಅಭ್ಯರ್ಥಿ. ಬೇರಾರೂ ಅಲ್ಲ, ಹಿಂದೆ ಅಂಬೇಡ್ಕರರಿಗೇ ಸಹಾಯಕರಾಗಿದ್ದ ನಾರಾಯಣ ಸಾಡೂಬಾ ಕಾರಜೋಳ್ಕರ್ ! ಅಂಬೇಡ್ಕರ್ ತಾವು ಸೋಷಿಯಲಿಸ್ಟ್ ಪಾರ್ಟಿಯ ಅಶೋಕ್ ರಂಜಿತರಾಮ್ ಮೆಹತಾ ಅವರೊಂದಿಗೆ ಸೇರಿಕೊಂಡು ಚುನಾವಣೆಗೆ ಸ್ಪರ್ಧಿಸಿದರು. ಇಲ್ಲಿ ಇನ್ನೂ ಒಂದು ಕುತೂಹಲದ ವಿಷಯವಿದೆ. ಕಾಲದ ಕಮ್ಯುನಿಸ್ಟ್ ನಾಯಕ, ಕಾರ್ಮಿಕ ಮುಖಂಡ ಶ್ರೀಪಾದ್ ಅಮೃತ್ ಡಾಂಗೆಗೆ ಅಂಬೇಡ್ಕರ್ ಅಂದ್ರೆ ಮಹಾ ದ್ವೇಷ. ಯಾಕೆಂದರೆ ಅಂಬೇಡ್ಕರ್ ಕಮ್ಯುನಿಸ್ಟರನ್ನು ಕಟುವಾಗಿ ಟೀಕಿಸುತ್ತಿದ್ದರು ಮತ್ತು ಅವರೂ ಕೂಡಾ ಕಮ್ಯುನಿಸ್ಟರಿಗೆ ಎದುರಾಗಿ ಕಾರ್ಮಿಕ ಸಂಘಟನೆಯೊಂದನ್ನು ನಡೆಸುತ್ತಿದ್ದರು. ಹೀಗಾಗಿ ಅಂಬೇಡ್ಕರ್ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಶ್ರೀಪಾದ್ ಅಮೃತ್ ಡಾಂಗೆ ತಾನೇ ಸ್ವತಃ ಅಂಬೇಡ್ಕರ್ ವಿರುದ್ಧ ಚುನಾವಣೆಗೆ ನಿಂತರು. ಅಷ್ಟೇ ಎಲ್ಲ ಒಬ್ಬೊಬ್ಬ ಮತದಾರರಿಗೂ ಎರಡೆರಡು ಮತವಿದ್ದುದರಿಂದ ಡಾಂಗೆ "ನೀವು ಏನೇ ಆದರೂ ಅಂಬೇಡ್ಕರ್ ರಿಗೆ ಮತ ನೀಡಲೇ ಬೇಡಿ, ನಿಮ್ಮ ಒಂದು ಮತ ನಷ್ಟವಾದರೂ ಪರವಾಗಿಲ್ಲ, ಆದರೆ ಅಂಬೇಡ್ಕರ್ ಗೆ ಮಾತ್ರ ಮತ ನೀಡಬೇಡಿ" ಅಂಥಾ ಒಕ್ಕಣಿಕೆಯಿರುವ ಕರಪತ್ರವೊಂದನ್ನು ಮುದ್ರಿಸಿ ಹಂಚಿದರು. ಸಾಲದ್ದಕ್ಕೆ ನೆಹರೂ ಮುಂಬೈಗೆ ಬಂದು ಅಂಬೇಡ್ಕರ್ ವಿರುದ್ಧವಾಗಿ ಹಲವಾರು ಪ್ರಚಾರ ಸಭೆಗಳನ್ನು ನಡೆಸಿ, ವಿಠ್ಠಲ್ ಬಾಲಕೃಷ್ಣ ಗಾಂಧಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾರಾಯಣ ಸಾಡೂಬಾ ಕಾರಜೋಳ್ಕರ್ ಪರ ಪ್ರಚಾರ ಮಾಡಿದರು. ಹೀಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ದೊಡ್ಡ ಮಟ್ಟದಲ್ಲಿ ಅದರಲ್ಲೂ ಜಂಟಿಯಾಗಿ ಅಂಬೇಡ್ಕರರನ್ನು ವಿರೋಧಿಸಿದರು.

ಎಲ್ಲರೂ ವಿರುದ್ಧವಿದ್ದುದರಿಂದ ಅಂಬೇಡ್ಕರ್ ಚುನಾವಣೆಯಲ್ಲಿ ತನ್ನ ಮಾಜೀ ಸಹಾಯಕನ ಕೈಯಲ್ಲೇ ಸೋತರು ಮಾತ್ರವಲ್ಲ ಅವಮಾನಕಾರವಾಗಿ ನಾಲ್ಕನೆಯ ಸ್ಥಾನ ಪಡೆದರು. ಹೀಗೆ ಅಂಬೇಡ್ಕರರು ಲೋಕಸಭೆ ಪ್ರವೇಶಿಸದಂತೆ ಮಾಡುವಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಬ್ಬರೂ ಯಶಸ್ವಿಯಾದರು. ಆದರೆ ಅಂಬೇಡ್ಕರರನ್ನು ಸಂಪೂರ್ಣ ಮೂಲೆಗುಂಪು ಮಾಡಿದರೆ ದಲಿತರು ಮುನಿಸಿಕೊಂಡಾರೆಂದು ಕಾಂಗ್ರೆಸ್ ಅವರನ್ನು ರಾಜ್ಯ ಸಭೆಗೆ ನೇಮಕ ಮಾಡಿತು. ಆದರೆ ಅಂಬೇಡ್ಕರ್ ಮತ್ತೆ ಲೋಕಸಭೆಗೆ ಆಯ್ಕೆಯಾಗಲು ೧೯೫೪ ಭಂಡಾರ ಉಪಚುನಾವಣೆಯಲ್ಲಿ ಶ್ರಮಿಸಿದರು. ಆದರೆ ಆಗಲೂ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಎದುರು ಪರಾಜಯ ಅನುಭವಿಸಿದರು. ಇದೆಲ್ಲದರಿಂದ ಅಂಬೇಡ್ಕರ್ ಘಾಸಿಗೊಂಡರು. ಅವರ ಅರೋಗ್ಯ ಹದಗೆಡುತ್ತಾ ಸಾಗಿತು. ಹೀಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಸತತವಾಗಿ ಪ್ರಯತ್ನಿಸಿತು. ಆದರೆ ವಿಪರ್ಯಾಸ ನೋಡಿ ಎರಡೂ ಪಕ್ಷಗಳೂ "ಅಂಬೇಡ್ಕರ್' ಎಂಬ ಹೆಸರಿನಲ್ಲಿರುವ ಮ್ಯಾಜಿಕ್ ಅನ್ನು ಅವರ ಮರಣದ ನಂತರ ತಮ್ಮವರೆಂದು ಹೇಳಿಕೊಂಡು ಬಳಸಿಕೊಂಡಿತು, ಮತ್ತು ದಲಿತರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯು ಆಯಿತು. ಕಾಂಗ್ರೆಸ್ ಅಂಬೇಡ್ಕರರಿಗೆ ಮಾತ್ರವಲ್ಲ ದಲಿತರಿಗೂ ಇಷ್ಟು ವರ್ಷಗಳಲ್ಲಿ ಇನ್ನು ಮೋಸ ಮಾಡುತ್ತಲೇ ಬಂದಿದೆ. ಕಮ್ಯುನಿಸ್ಟರಂತೂ ಮಾತೆತ್ತಿದರೆ ದಲಿತರ ಪರ ಮಾತಾಡುವವರು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಒಬ್ಬೇ ಒಬ್ಬ ದಲಿತನನ್ನೂ ಪಾಲಿಟ್ ಬ್ಯುರೋ ಸದಸ್ಯನ್ನಾಗಿ, ಸೆಂಟ್ರಲ್ ಕಮಿಟಿ ಸದಸ್ಯ ನ್ನಾಗಿ ಇದುವರೆಗೂ ಮಾಡಿಲ್ಲ. ಅದು ಹೋಗಲಿ ಅಂಬೇಡ್ಕರ್ ಅಂಥಾ ಮಹಾನುಭಾವನಿಗೆ ಭಾರತ ರತ್ನ ಕೊಡಿಸಲಿಲ್ಲ. ಅದಕ್ಕೆ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಕಾಂಗ್ರೆಸ್ಸೇತರ ಸರ್ಕಾರವೇ ಬರಬೇಕಾಯಿತು. ಲೋಕಸಭೆಯ ಸೆಂಟ್ರಲ್ ಹಾಲ್ ನಲ್ಲೂ ಅಂಬೇಡ್ಕರರ ಭಾವಚಿತ್ರ ಅನಾವರಣ ಮಾಡುವಲ್ಲಿಯೂ ಕಾಂಗ್ರೆಸ್ ತನ್ನ ಚಿಲ್ಲರೆ ಬುದ್ಧಿ ತೋರಿಸಿತು.

ಅಂಬೇಡ್ಕರ್ ಜೀವಿತಾವಧಿಯಲ್ಲಿ ಅವರಿಗೆ ಸಾಕಷ್ಟು ನೋವು ನೀಡಿದ ಕಾಂಗ್ರೆಸ್ ಹಾಗು ಕಮ್ಯುನಿಸ್ಟ್ ಪಕ್ಷಗಳು ಇಂದು ತಾವು ಅಂಬೇಡ್ಕರ್ ವಾರಸುದಾರರಂತೆ ವರ್ತಿಸುತಿರುವುದು ಮಾತ್ರ ಅಂಬೇಡ್ಕರ್ ರಿಗೆ ಮಾಡಿದ ದೊಡ್ಡ ದ್ರೋಹವೆ ಸರಿ.

ಈಗ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಿದೆ. ಅಂಬೇಡ್ಕರರ ಜೀವನ ಸಾಧನೆಗಳನ್ನು ಅಜರಾಮರವಾಗಿಸುವ ಹಲವಾರು ಅದ್ಭುತ ಕೆಲಸಗಳನ್ನು ಮೋದೀಜಿಯವರ ಸರಕಾರ ಮಾಡಿದೆ. ಅಂತೂ ವಿಷು ಸಂಕ್ರಮಣ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಹೊತ್ತಿನಲ್ಲಿ ಇದೆಲ್ಲಾ ನೆನಪಿಗೆ ಬಂತು. ಭಾರತ ಮಾತೆಯ ಹೆಮ್ಮೆಯ ಪುತ್ರ ಬಾಬಾ ಸಾಹೇಬ ಅಂಬೇಡ್ಕರರು ಮತ್ತೊಮ್ಮೆ ಪುಣ್ಯಭೂಮಿಯಲ್ಲಿ ಹುಟ್ಟಿಬರಲಿ... ಜೈ ಭೀಮ್....!

Related posts