Infinite Thoughts

Thoughts beyond imagination

ಉಗ್ರರ ಹುಟ್ಟಡಗಿಸಲು ಅವರು ಹುಟ್ಟಿದೂರಿಗೇ ಕಾಲಿಟ್ಟರು ಅಮಿತ್ ಷಾ

ಮೋದೀಜಿ ಮತ್ತು ಅಮಿತ್ ಷಾ ಜೋಡಿ ರೂಪಿಸುವ ತಂತ್ರಗಳೇ ಹಾಗೆ....ಅದು ಯಾವತ್ತೂ ಎದುರಾಳಿಯನ್ನು ಕಕ್ಕಾಬಿಕ್ಕಿಯಾಗಿಸುವಂತೆಯೇ ಇರುತ್ತದೆ. ಮುಂಬರುವ ಕೆಲ ವಿಧಾನಸಭಾ ಚುನಾವಣೆಗಳನ್ನೂ ಸೇರಿಸಿ ೨೦೧೯ರ ಲೋಕಸಭಾ ಚುನಾವಣೆಗೆ ಅಮಿತ್ ಷಾ - ಮೋದೀಜಿಯವರ ಜೋಡಿ ಈಗಿಂದಲೇ ತಯಾರಿ ಶುರುಮಾಡಿಕೊಂಡಿದೆ. ತಮ್ಮ ಎಲ್ಲರನ್ನೊಳಗೊಂಡ ಅಭಿವೃದ್ಧಿ ಮಂತ್ರ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಅನ್ನು ಮುಂದು ಮಾಡಿ ಮುಂದಿನ ಚುನಾವಣಾ ತಯಾರಿ ನಡೆಸುತ್ತಿರುವ ಅಮಿತ್ ಷಾ ಬಂಗಾಳ ವನ್ನು ಗುರಿಯಾಗಿರಿಸಿಕೊಂಡು ಅಲ್ಲಿ ಮೊನ್ನೆ ಬೂತ್ ಮಟ್ಟದ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು. ಅದಕ್ಕೆಂದು ಅವರು ಆರಿಸಿಕೊಂಡದ್ದು ಬಂಗಾಳದ ಉತ್ತರ ದಿಕ್ಕಿನಲ್ಲಿರುವ ದಾರ್ಜೀಲಿಂಗ್ ಜಿಲ್ಲೆಯ ಸಿಲಿಗುರಿಯಾ 'ನಕ್ಸಲ್ಬಾರಿ ' ಎಂಬ ಹಳ್ಳಿಯನ್ನು. ಸುಕ್ಮಾದಲ್ಲಿ ನಕ್ಸಲರು ನಮ್ಮ ವೀರಯೋಧರ ಮಾರಣಹೋಮ ಮಾಡಿದ ಮರುದಿನವೇ ಅಮಿತ್ ಷಾ ನಕ್ಸಲ್ಬಾರಿ ಗೆ ಕಾಲಿಟ್ಟರು. ಇದು ಮಾವೋವಾದಿ ಕಮ್ಯುನಿಷ್ಟ್ ಉಗ್ರರ ವಿರುದ್ಧ ಬಿಜೆಪಿ ಮೊಳಗಿಸಲಿರುವ ರಣಕಹಳೆಯ ಮುನ್ಸೂಚನೆಯಂತಿತ್ತು. ಅಮಿತ್ ಷಾ ನಕ್ಸಲರೆಂಬ ರಕ್ತಪಿಪಾಸುಗಳು ಹುಟ್ಟಿದ ನೆಲಕ್ಕೇ ಕಾಲಿಟ್ಟು ಅವರಿಗೆ ಸವಾಲೊಡ್ಡಿದ್ದರು.

ಹೌದು. ಸುಮಾರು ಅರವತ್ತರ ದಶಕದಲ್ಲಿ ನೇಪಾಳದ ಗಡಿಯಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ನಕ್ಸಲಬಾರಿ ಎಂಬ ಪ್ರದೇಶದಲ್ಲಿ ಕೆಂಪು ಉಗ್ರವಾದ ಹುಟ್ಟಿಕೊಂಡಿತು. ಆಗಷ್ಟೇ ಚೈನಾ ಮತ್ತು ಸೋವಿಯತ್ ರಷ್ಯಾ ಮಧ್ಯೆ ವೈಮನಸ್ಸು ಉಂಟಾಗಿತ್ತು. ಜಗತ್ತಿನಾದ್ಯಂತವಿದ್ದ ಕಮ್ಯುನಿಷ್ಟ್ ರಾಷ್ಟ್ರಗಳ ಮಧ್ಯೆಯೇ ಒಡಕುಂಟಾಗಿತ್ತು. ಕಮ್ಯುನಿಷ್ಟ್ ಪಕ್ಷಗಳೂ ಒಡೆದು ಚೂರಾಗುತ್ತಾ ಒಂದೊಂದು ಬಣಗಳಾಗಿ ಬದಲಾಗುತ್ತಿದ್ದ ಕಾಲ. ಆಗ ತಲೆಕೆಟ್ಟ ಕಮ್ಯುನಿಸ್ಟ್ ನಾಯಕನಿಗೆ ಭಾರತದಲ್ಲಿ ಸಶಸ್ತ್ರ ಕ್ರಾಂತಿ ಮಾಡಲು ಸಮಯ ಪಕ್ವವಾಗಿದೆಯೆಂದು ಅನ್ನಿಸಿತು. ಆಗವನ ಕಣ್ಣಿಗೆ ಬಿದ್ದದ್ದೇ ನಕ್ಸಲ್ಬಾರಿ ಪ್ರದೇಶ. ಅಲ್ಲಿನ ರೈತಾಪಿ ವರ್ಗದವರನ್ನು ಅಲ್ಲಿನ ಜಮೀನ್ದಾರರ ವಿರುದ್ಧ ಎತ್ತಿಕಟ್ಟಿ ಭೂಮಿ, ಬೆಲೆ ವಶಪಡಿಸಿಕೊಳ್ಳುವ ಕ್ರಾಂತಿಯ ಭ್ರಮೆ ಹುಟ್ಟಿಸುವಲ್ಲಿ ಯಶಸ್ವಿಯಾದ ಚಾರು ಮುಜುಂದಾರ್ ಅಲ್ಲಿ ಗಲಭೆಗಳಿಗೆ ಕಾರಣನಾದ. ಜನ ಶಸ್ತ್ರಾಸ್ತ್ರ ಕೈಗೆತ್ತಿಕೊಂಡರು. ಓರ್ವ ಪೊಲೀಸ್ ಅಧಿಕಾರಿಯ ಹತ್ಯೆ ನಡೆಯಿತು. ಪೊಲೀಸರು ಜನರ ಮೇಲೆ ಗುಂಡು ಹಾರಿಸಿದರು. ಆದರೆ ವಿಪರ್ಯಾಸ ಹೇಗಿತ್ತೆಂದರೆ... ಪೊಲೀಸ್ ದಾಳಿ ನಡೆಯುವ ವೇಳೆಗಾಗಲೇ ಅವರನ್ನು ಹುರಿದುಂಬಿಸಿದ್ದ ಕಮ್ಯುನಿಸ್ಟ್ ನಾಯಕರು ಪರಾರಿಯಾಗಿದ್ದರು. ಅಲ್ಲಿ ಆವತ್ತು ಸತ್ತವರು ಅಷ್ಟೂ ಜನರೂ ಹೆಂಗಸರು ಮತ್ತಿಬ್ಬರು ಮಕ್ಕಳು. ಚಾರು ಮುಜುಂದಾರ್, ಕಾನೂ ಸನ್ಯಾಲ್, ಜಂಗಾಲ್ ಸಂತಾಲ್ ಮುಂತಾದ ನಾಯಕರು ಭೂಗತರಾದರು. ಅವರಿಗೆ ಚೈನಾದ ಮಾವೋ ಸರಕಾರದಿಂದ ನೇಪಾಳದ ಮೂಲಕ ಶಸ್ತ್ರಾಸ್ತ್ರ ಮದ್ದುಗುಂಡು, ಹಣಕಾಸಿನ ನೆರವು ದೊರಕಿತು. ಅದೇ ನಕ್ಸಲ್ ಉಗ್ರವಾದದ ಹುಟ್ಟಿಗೆ ಕಾರಣವಾಯಿತು. ಹಾಗೆ ೧೯೬೭ರ ಆಸುಪಾಸಿನಲ್ಲಿ ಹುಟ್ಟಿಕೊಂಡ ರಕ್ತಪಿಪಾಸು ಸಂತತಿ ಇವತ್ತಿಗೂ ಭಾರತದಲ್ಲಿ ರಕ್ತ ಹರಿಸುತ್ತಲೇ ಇದೆ....

ಇಲ್ಲೀವರೆಗೆ ಬಂದಂಥ ಎಲ್ಲಾ ಕಾಂಗ್ರೆಸ್ ಸರಕಾರಗಳೂ ನಕ್ಸಲರ ವಿರುದ್ಧವೇ ಇದ್ದಂತೆ ವರ್ತಿಸಿದರು, ಅವರನ್ನು ಬೆಂಬಲಿಸುವ ಎಡಪಂಥೀಯ ಲದ್ಧಿ-ಜೀವಿಗಳನ್ನು ತನ್ನ ಪಕ್ಕದಲ್ಲೇ ಕೂರಿಸಿಕೊಂಡು ಪೋಷಿಸುತ್ತಾ ಬಂತು. ಕಾಂಗ್ರೆಸ್ ಕೃಪಾಕಟಾಕ್ಷದಡಿ ಪತ್ರಕರ್ತರಾಗಿ, ಸಾಹಿತಿಗಳಾಗಿ, ಯೂನಿವರ್ಸಿಟಿಗಳಲ್ಲಿ ಬೋಧಕರಾಗಿ, ಇತಿಹಾಸಕಾರರಾಗಿ ನಾಟಕ ಸಿನಿಮಾರಂಗಗಳಲ್ಲಿ ಹೆಸರು ಪ್ರಶಸ್ತಿ ಬಾಚುತ್ತಾ... ಸೊಂಪಾಗಿ ಬೆಳೆದರು. ಮೊನ್ನೆ ಮೊನ್ನೆ ಕೇಂದ್ರದಲ್ಲಿ ಮೋದೀಜಿಯವರ ಸರಕಾರ ಬರುವವರೆಗೂ ಆಯಕಟ್ಟಿನ ಸರಕಾರೀ ಜಾಗಗಳಲ್ಲಿ ಕೂತು ನೀತಿ ರೂಪಿಸುತ್ತಿದ್ದವರೂ ಇವರೇ. ಮಾನವ ಹಕ್ಕು ಸಂಘಟನೆ, ಏನ್.ಜಿ. ಗಳ ಹೆಸರಿನಲ್ಲಿ ದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಗಾಲು ಹಾಕುತ್ತಿದ್ದದ್ದೂ ಇದೆ ಮಂದಿಯೇ. ಈಗ ಮೋದೀಜಿಯವರ ಸರಕಾರ ಬಂದಮೇಲೆ ಇವರಿಗೆಲ್ಲಾ ಗತಿಯಿಲ್ಲದಂತಾಗಿದೆ.

ಅಂದಹಾಗೆ ಕೆಂಪು ಉಗ್ರರ ಹುಟ್ಟೂರು ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕಮ್ಯುನಿಸ್ಟರನ್ನು ಸಹಿಸಿಕೊಂಡಿತು. ಕೊನೆಗೂ ಎಂಭತ್ತರ ದಶಕದಲ್ಲಿ ಮುಗ್ಧ ಹಳ್ಳಿಜನಕ್ಕೆ ಎಡಪಂಥೀಯರ ಮೋಸ ನಿಧಾನವಾಗಿ ಅರ್ಥವಾಗಿ ಕಮ್ಯುನಿಸ್ಟರು ಅಲ್ಲಿ ಚುನಾವಣೆಗಳಲ್ಲಿ ಸೋಲತೊಡಗಿದರು. ಅಲ್ಲಿನ ಜನ ಕಾಂಗ್ರೆಸ್ಸಿಗೆ ವೋಟು ಹಾಕತೊಡಗಿದರು. ಆದರೆ ಸಂಘಪರಿವಾರ ಅಲ್ಲಿ ನಿಧಾನವಾಗಿ ಬೇರೂರತೊಡಗಿತು. ಹಳ್ಳಿಯ ಜನರಿಗೆ ನಿಜವಾದ ಸಮಾಜ ಸೇವೆಯೇನೆಂಬುದರ ಪರಿಚಯ ಮಾಡ ತೊಡಗಿತು. ಅಲ್ಲಿನ ಜನ ನಿಧಾನವಾಗಿ ಬಿಜೆಪಿಯತ್ತ ಆಕರ್ಷಿತರಾಗತೊಡಗಿದರು. ೨೦೧೧ರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಅಲ್ಲಿ ಪಡೆದದ್ದು ಕೇವಲ ಪರ್ಸೆಂಟ್ ಮತಗಳನ್ನು ಮಾತ್ರ.... ಆದರೆ ಬಿಜೆಪಿ ಇಲ್ಲಿ ನಿಧಾನವಾಗಿ ಮತಪ್ರಮಾಣ ಹೆಚ್ಚುಮಾಡುತ್ತ ಸಾಗಿ ೨೦೧೬ರ ಚುನಾವಣೆಯಲ್ಲಿ ೨೦ ಪರ್ಸೆಂಟ್ ಮತಗಳನ್ನು ಪಡೆಯಿತು. ಅಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಯ ಸಾಧನಾ ಮಂಡಲ್ ಗೆದ್ದು ಬಿಜೆಪಿ ತನ್ನ ಅಕೌಂಟ್ ತೆರೆದಿದೆ. ಅಮಿತ್ ಷಾ ಅಲ್ಲಿನ ರಾಜು ಮತ್ತು ಗೀತಾ ಮಹಾಲೀ ಎಂಬ ದಲಿತ ದಂಪತಿಗಳ ಮನೆಯಲ್ಲೇ ಭೋಜನ ಸ್ವೀಕರಿಸಿದರು. ನಂತರ ಪುಷ್ಪ ಸಿದ್ಧಾ, ಮಹಮ್ಮದ್ ಶಾಬುದ್ದೀನ್, ಧೀರೇನ್ ಸಿಂಘಾ ಮೊದಲಾದವರ ಮನೆಗೆ ಖುದ್ದಾಗಿ ಭೇಟಿ ನೀಡಿದರು. ಮನೆ ಮನೆಗೆ ತೆರಳಿ ಬಿಜೆಪಿ ಪರ ಪ್ರಚಾರ ಮಾಡುವ ಕಾರ್ಯಕ್ರಮವನ್ನು ಅಮಿತ್ ಷಾ ತಾವೇ ಮುಂದೆ ನಿಂತು ಒಂದು ಕಾಲದ ಕೆಂಪು ಉಗ್ರರ ಹುಟ್ಟೂರಾದ ನಕ್ಸಲಬಾರಿ ಯಲ್ಲೇ ಮಾಡಿದ್ದು ವಿಶೇಷ. ದೀನದಯಾಳ್ ವಿಸ್ತಾರಕ ಯಾತ್ರಾ ಅಂಗವಾಗಿ ಮನೆ ಮನೆಗೆ ತೆರಳಿ ಬಿಜೆಪಿ ಸಿದ್ಧಾಂತವನ್ನು ಪ್ರಚಾರ ಮಾಡುವ ಮಹಾ ಅಭಿಯಾನಕ್ಕೆ ನಕ್ಸಲಬಾರಿಯಲ್ಲಿ ಅಮಿತ್ ಷಾ ಚಾಲನೆ ನೀಡಿದರು. ಅಲ್ಲಿಂದ ಅವರು ತೆರಳಿದ್ದು ಇಸ್ಲಾಮಿಕ್ ಉಗ್ರರ ನೆಲವೀಡಾದ ಕಾಶ್ಮೀರಕ್ಕೆ... ಉಗ್ರವಾದದ ಹುಟ್ಟಡಗಿಸಲು ಅಭಿವೃದ್ಧಿ ಮಂತ್ರದೊಂದಿಗೆ ಉಗ್ರರ ಹುಟ್ಟೂರಿಗೆ ಕಾಲಿಟ್ಟು ಸವಾಲೆಸೆದಿರುವ ಅಮಿತ್ ಷಾಗೆ ನನ್ನ ಕಡೆಯಿಂದ ಗೌರವಪೂರ್ವಕ ನಮಸ್ಕಾರ...ಅಲ್ಲೀಗ ಜೈ ಬಿಜೆಪಿ ... ಜೈ ಶ್ರೀ ರಾಮ್ ಘೋಷಣೆ ಮೊಳಗತೊಡಗಿದೆ... . ಅವರ ಭಾರೀ ಯೋಜನೆಗೆ ಅದ್ಭುತ ಯಶಸ್ಸು ಸಿಗಲೆಂದು ಹಾರೈಕೆ....

ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಇಂದು ಕಟ್ಟ ಕಡೆಯ ನಾಗರಿಕರನ್ನು ಸಂಪರ್ಕಿಸುವ ದೊಡ್ಡ ಅಭಿಯಾನದಲ್ಲಿ ತೊಡಗಿಸಿಕೊಂಡಾಗ ನಮ್ಮ ಜವಾಬ್ದಾರಿಯನ್ನು ಪ್ರಶ್ನಿಸಿಕೊಂಡು ಕಾರ್ಯಮುಖವಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ರಾಜ್ಯದ ಜನರು ಸ್ವಾಭಾವಿಕವಾಗಿ ಉತ್ತೇಜನಗೊಂಡು ನಮ್ಮಿಂದ ಬಹು ದೊಡ್ಡ ನಿರೀಕ್ಷೆಗಳ್ಳನಿಟ್ಟುಕೊಂಡಾಗ ನಾವು ಅವರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಅದನ್ನು ಬಿಟ್ಟು ನಮ್ಮ ಸ್ವಹಿತಾಸಕ್ತಿ ಪೋಷಿಸಿಕೊಂಡು, ಕೀಳುಮಟ್ಟದ ರಾಜಕಾರಣ ಮಾಡಿದರೆ ಅದು ರಾಜಕೀಯ ಆತ್ಮಹತ್ಯೆ ಮಾತ್ರವಲ್ಲದೆ ಅದು ಜನರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಉತ್ತಮ ನಾಯಕತ್ವದ ಆಡಳಿತ ನೀಡುತ್ತಿರುವ ಪ್ರಧಾನಿ ಮೋದಿ ಹಾಗು ಅಹೋ ರಾತ್ರಿ-ಹಗಲ್ಲೆನ್ನದೆ ದೇಶವ್ಯಾಪಿ ಪಕ್ಷ ಕಟ್ಟುತ್ತಿರುವ ಅಮಿತ್ ಷಾ ರವರಿಗೆ ದ್ರೋಹ ಬಗೆದಂತೆಯೇ ಸರಿ!!!!

Related posts