ಅರಗಿನಿಂದ ಅರಮನೆ ; ಕದಂಬ ಫೌಂಡೇಶನ್ ಸಾಧನೆ
ಅರಗಿನಿಂದ ಅರಮನೆ ; ಕದಂಬ ಫೌಂಡೇಶನ್ ಸಾಧನೆ | ಅರಗು ಕೃಷಿಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದೇ ನಮ್ಮ ಹೆಮ್ಮೆ!
ಮಹಾಭಾರತದಲ್ಲಿ ಕೌರವರು ಪಾಂಡವರನ್ನು ಹತ್ಯೆ ಮಾಡಲು ಹಲವಾರು ಬಾರಿ ಪ್ರಯತ್ನ ಪಟ್ಟಿದ್ದರು. ಅವುಗಳ ಪೈಕಿ ಕೌರವರು ಪಾಂಡವರಿಗೆಂದೇ ನಿರ್ಮಿಸಿದ 'ಲಾಕ್ಷ ಗೃಹ' ವೂ ಒಂದು. ಅರಗಿನಿಂದಲೇ ಅರಮನೆ ನಿರ್ಮಿಸಿ ಅದರಲ್ಲಿ ಪಾಂಡವರು ಇರುವಾಗ ಬೆಂಕಿ ಕೊಟ್ಟು ಅವರನ್ನು ಸಾಯಿಸುವ ತಂತ್ರ ಕೌರವರದ್ದು. ಆದರೆ ಅದರಲ್ಲಿ ಕೌರವರು ವಿಫಲರಾಗಿ ಪಾಂಡವರು ಪಾರಾಗುತ್ತಾರೆ. ಈ ಕಥೆಯನ್ನು ನಾವೆಲ್ಲರೂ ಬಾಲ್ಯದಲ್ಲೇ ಓದಿದ್ದೇವೆ. ಈ ಲಾಕ್ಷ ಅನ್ನುವ ನೈಸರ್ಗಿಕ ಅಂಟಿನ ಬಗ್ಗೆ, ಅದರ ಉಪಯೋಗಗಳ ಬಗ್ಗೆ ಭಾರತೀಯರಿಗೆ ಸಾವಿರಾರು ವರ್ಷಗಳ ಹಿಂದೆಯೇ ಅರಿವಿತ್ತು. ನಮ್ಮ 'ಅಥರ್ವ ವೇದ' ದಲ್ಲೂ ಈ ಲಾಕ್ಷ ದ ಉಲ್ಲೇಖವಿದೆ. ಪಾಲಾಶ ವೃಕ್ಷವನ್ನು ಅಥರ್ವ ವೇದದಲ್ಲಿ 'ಲಾಕ್ಷತರು' ಎಂದೇ ಕರೆದ್ದಿದ್ದಾರೆ. ಇಂಗ್ಲಿಷಿನಲ್ಲಿ ಈ ಅರಗನ್ನು 'ಲ್ಯಾಕ್' ಅಥವಾ 'ಗಮ್ ಲ್ಯಾಕ್' ಅಂತ ಕರೆಯುತ್ತಾರೆ. ಅಂದಹಾಗೆ ಭಾರತದ ಕಾಡುಗಳಲ್ಲಿ ಕೆಲವೊಂದು ನಿರ್ದಿಷ್ಟ ಮರಗಳ ತೊಗಟೆಗಳ ಮೇಲೆ ಈ 'ಲ್ಯಾಕ್' ಕೀಟಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಬೆಳೆದು ಅವು ಒಂದು ಬಗೆಯ ಅಂಟನ್ನು ಸ್ರವಿಸುತ್ತದೆ. ಈ ಅಂಟನ್ನೇ ಗಮ್ ಲ್ಯಾಕ್ ಅಂತ ಕರೆಯಲಾಗುತ್ತದೆ. ಅದನ್ನು ಸಂಗ್ರಹಿಸಿ ಬಣ್ಣಗಳ ತಯಾರಿಕೆಗೆ, ಮರದ ಉತ್ಪನ್ನಗಳಿಗೆ ಹೊಳಪು ನೀಡಲು, ಇತ್ಯಾದಿಯಾಗಿ ಉಪಯೋಗಿಸುತ್ತಾರೆ. ಒಂದು ಕಾಲದಲ್ಲಿ ಇಡೀ ಜಗತ್ತಿಗೆ ಅರಗು ಪೂರೈಸುತ್ತಿದ್ದ ಅಗ್ರಗಣ್ಯ ದೇಶ ಭಾರತವೇ. ಕಾಲಾಂತರದಲ್ಲಿ ಕೃತಕ ರಾಸಾಯನಿಕ ಉತ್ಪನ್ನಗಳಿಂದಾಗಿ ಭಾರತದ ಅರಗು ತನ್ನ ಬೇಡಿಕೆ ಕಳೆದುಕೊಂಡಿತು. ಆದರೆ ಇದೀಗ ಜಗತ್ತೇ ನೈಸರ್ಗಿಕ ಉತ್ಪನ್ನಗಳಿಗೆ ಮನಸೋತಿರುವ ಹೊತ್ತಿನಲ್ಲಿ ಭಾರತದ ಅರಗಿಗೆ ಮತ್ತೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಭಾರತದಲ್ಲಿ ಈಗ ಮತ್ತೊಮ್ಮೆ ಅರಗಿನ ಕೃಷಿ ಜನಪ್ರಿಯವಾಗುತ್ತಿದೆ.
ಕರ್ನಾಟಕಕ್ಕೆ ಆಧುನಿಕ ವೈಜ್ಞಾನಿಕ ಅರಗಿನ ಕೃಷಿಯನ್ನು ಪರಿಚಯಿಸಿದ ಹೆಮ್ಮೆ ಕದಂಬ ಫೌಂಡೇಶನ್ ನದ್ದು. ಅರಗನ್ನು ವೈಜ್ಞಾನಿಕವಾಗಿ ಬೆಳೆದು ಕೃಷಿಕರು ಲಾಭ ಪಡೆದು ಅರಮನೆಯಂಥ ಮನೆ ಕಟ್ಟಿ ಒಳ್ಳೆಯ ಜೀವನ ಮಾಡಬಹುದು.. ಅದು ತುಂಬಾ ಲಾಭದಾಯಕ ಬೆಳೆ.
೨೦೧೩ರಲ್ಲಿ ಈ ಬೆಳೆಯನ್ನು ಉತ್ತರ ಕನ್ನಡಕ್ಕೆ ಪರಿಚಯಿಸಿದ ನಮ್ಮ ಕದಂಬ ಫೌಂಡೇಶನ್, ಅದೇ ವರ್ಷವೇ ಜಾರ್ಖಂಡ್ ನ ರಾಂಚಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರಲ್ ರೆಸಿನ್ಸ್ ಅಂಡ್ ಗಮ್ ನ ಹಿರಿಯ ವಿಜ್ಞಾನಿಗಳ ತಂಡವನ್ನು ಶಿರಸಿ ಮತ್ತು ಖಾನಾಪುರಕ್ಕೆ ಕರೆಸಿ ಸ್ಥಳೀಯ ವಾತಾವರಣ ಅರಗು ಕೃಷಿಗೆ ಸೂಕ್ತವೇ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ಭಾರತದಲ್ಲಿ ಜಾರ್ಖಂಡ್, ಛತ್ತೀಸ್ ಘರ್, ಮಧ್ಯಪ್ರದೇಶ, ಬಂಗಾಳ ಮುಂತಾದ ಕಡೆ ಮಾತ್ರ ಬೆಳೆಯಲಾಗುತ್ತಿದ್ದ ಈ ಬೆಳೆಯನ್ನು ಮೊತ್ತ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ, ಅದರಲ್ಲೂ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗೆ ಕದಂಬ ಸಂಸ್ಥೆ ಪರಿಚಯಿಸಿತು. ಉತ್ತರ ಕನ್ನಡ ಜಿಲ್ಲೆಯ ಪರಿಸರ ಅಧ್ಯಯನ ನಡೆಸಿದ ವಿಜ್ಞಾನಿಗಳ ತಂಡಕ್ಕು ಇಲ್ಲಿನ ಭೂಮಿ, ವಾತಾವರಣ ಬೆಳೆಗೆ ಸೂಕ್ತವಾಗಿದೆ ಎಂದು ವರದಿ ನೀಡಿದ ಕೂಡಲೇ ಅಂದರೆ ೨೦೧೪ರಲ್ಲಿ ನಮ್ಮಲ್ಲಿನ ಆಯ್ದ ಕೃಷಿಕರನ್ನು, ಕರ್ನಾಟಕ ಸರಕಾರದ ಅಧಿಕಾರಿಗಳನ್ನು, ಕೃಷಿ ವಿಜ್ಞಾನಿಗಳ ತಂಡವನ್ನು ರಾಂಚಿಗೆ ಕರೆದೊಯ್ದು, ಅಲ್ಲಿ ಅರಗು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ 'ಇನ್ ಫಾರ್ಮ್' ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಕ್ರಮಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ನಬಾರ್ಡ್ ನೀಡಿದ ಸಹಕಾರ ಅಪೂರ್ವ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಗು ಕೃಷಿ ಶುರು ಮಾಡಲು ಪ್ರಥಮ ಬಾರಿಗೆ ಅರಗು ಕೀಟಗಳ ಸಂಕುಲ 'ಬ್ರೂಡ್ ಲ್ಯಾಕ್ ' ಅನ್ನು ಜಿಲ್ಲೆಗೆ ತರಲಾಯಿತು. ಇದೆ ಹೊತ್ತಿಗೆ 'ಆತ್ಮ ' ಯೋಜನೆಯಡಿ ಜಿಲ್ಲೆಗೆ ಅರಗು ಕೃಷಿಯ ಪರಿಚಯಮಾಡಿಸುವ ಕೆಲಸವೂ ಶುರುವಾಯ್ತು.
ಈಗ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಾದ್ಯಂತ ರೈತರು ಅರಗು ಕೃಷಿ ಮಾಡತೊಡಗಿದ್ದಾರೆ. ಎಲ್ಲಕ್ಕಿಂತ ವಿಶೇಷವೆಂದರೆ ಮೈಸೂರಿನ ತಂಬಾಕು ಬೆಳೆಗಾರರ ಪ್ರಯತ್ನ. ಸಂಕಷ್ಟಕ್ಕೆ ಸಿಲುಕಿದ ತಂಬಾಕು ಬೆಳೆಗಾರರು ಪರ್ಯಾಯ ಬೆಳೆಯ ಹುಡುಕಾಟದಲ್ಲಿದ್ದಾಗ ಅವರಿಗೆ ವರವಾಗಿ ದೊರಕಿದ್ದು ಇದೆ ಅರಗು ಕೃಷಿ. ನಾನೇ ಈ ಬಗ್ಗೆ ಮುತುವರ್ಜಿ ವಹಿಸಿ ಅಲ್ಲಿನ ಕೃಷಿಕರಿಗೆ ಅರಗು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ನೆರವನ್ನು ನಮ್ಮ ಕದಂಬ ಸಂಸ್ಥೆ ಮೂಲಕ ಒದಗಿಸಿದೆ. ಹುಣಸೂರು ಮತ್ತು ಪಿರಿಯಾಪಟ್ಟಣದ ತಂಬಾಕು ಬೆಳೆಗಾರರು ಅರಗು ಕೃಷಿ ಕಡೆ ಮುಖ ಮಾಡಿದ್ದಾರೆ. ರೈತರ ಈ ಪ್ರಯತ್ನ ಸಾಮಾಜಿಕ ಬದ್ಧತೆಯ ಪ್ರತೀಕವಾಗಿದೆ. ಪರಿಸರ ಮಾರಕವಾದ ಹೊಗೆಸೊಪ್ಪಿನ ತಯಾರಿ ಪದ್ಧತಿಯನ್ನು ಕೈ ಬಿಟ್ಟು, ಸಮಾಜದ ಆರೋಗ್ಯದ ಸುಧಾರಣೆಗೆ ಕೈ ಜೋಡಿಸಿ ಅರಗು ಬೆಳೆಯನ್ನು ಬದಲಿ ಬೆಳೆಯಾಗಿ ತೆಗೆದುಕೊಂಡಿರುವುದು ರೈತರ ಸಾಮಾಜಿಕ ಕಾಳಜಿ ಅಭಿನಂದನಾರ್ಹ!! ಅರಗು ಕೃಷಿಯ ಬಗ್ಗೆ ಅರಿತುಕೊಂಡ ನಮ್ಮ ಜಿಲ್ಲೆಯ ಮತ್ತು ರಾಜ್ಯದ ರೈತರು ಹೆಚ್ಚುಹೆಚ್ಚಾಗಿ ಈ ಕೃಷಿಯ ಕಡೆ ಒಲವು ತೋರಿಸುತ್ತಿದ್ದಾರೆ. ರೈತರ ಮುಖದಲ್ಲಿ ನಗು ಸಂತೋಷ ನೋಡಿದಾಗ ಆಗುವ ಸಂತೃಪ್ತಿಯೇ ಬೇರೆ.
http://www.deccanherald.com/content/461634/lac-farming-marks-its-foray.html