ಬಹು ಸಂಭ್ರಮದೊಂದಿಗೆ ಸ್ವಾಗತಿಸೋಣ ಮುಂಗಾರು ಮಳೆಯನ್ನೂ....
ಮತ್ತೆ ಮುಂಗಾರು ಮಳೆಯ ಹನಿಗಳಿಂದ ಯಾವ ನೆಲವು ಹಸಿರಾಗುವುದೋ.. ! ಷೇರು ಪೇಟೆಯಲ್ಲಿ ಶುರು ಅಬ್ಬರ... ಏನು ನಿನ್ನ ಹನಿಗಳ ಲೀಲೆ!!
ದೇಶವೊಂದರ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಷೇರು ಪೇಟೆಯಲ್ಲಿನ ವಹಿವಾಟು ಕೂಡಾ ಸಹಾಯ ಮಾಡುತ್ತದೆ. ಕಳೆದ ದಶಕದ ಕೊನೆಯ ಅರ್ಧ ಭಾಗದಲ್ಲಿ ಭಾರತೀಯ ಷೇರು ಪೇಟೆ ಸ್ಥಿತಿ ಚಿಂತಾಜನಕವಾಗಿತ್ತು. ಆಗೆಲ್ಲಾ ಹಲವು ವಾಣಿಜ್ಯ ಮಾಧ್ಯಮಗಳು, ಹಲವಾರು ಷೇರು ಪೇಟೆ ಪಂಡಿತರು ಉದಾಹರಣೆ ಸಮೇತ ಷೇರು ಪೇಟೆಯಲ್ಲಿನ ಚೇತರಿಕೆಗೂ, ಅಥವಾ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಹೆಚ್ಚುವುದಕ್ಕೂ ಮುಂಗಾರು ಮಳೆಗೂ ಸಂಬಂಧ ಇಲ್ಲವೆಂದೇ ವಾದಿಸಿ ಹಲವಾರು ಉದಾಹರಣೆಗಳ ಸಮೇತ ಹಲವಾರು ಲೇಖನಗಳನ್ನು ಬರೆದಿದ್ದರು... ಆದರೆ ಇವರೆಲ್ಲರ ಲೆಕ್ಕಾಚಾರಗಳನ್ನು ಬುಡ-ಮೇಲು ಮಾಡುವಂತೆ ಪ್ರತಿಬಾರಿಯೂ ಮುಂಗಾರು ಮಳೆ ಚೆನ್ನಾಗಿ ಆಗುತ್ತದೆ ಅಂತ ನಮ್ಮ "ಇಂಡಿಯನ್ ಮೀಟಿಯೊರೊಲಾಜಿಕಲ್ ಡಿಪಾರ್ಟ್ಮೆಂಟ್" ಅಂದರೆ ಹವಾಮಾನ ಇಲಾಖೆ ಭವಿಷ್ಯ ನುಡಿದಾಗಲೆಲ್ಲಾ ಷೇರು ಪೇಟೆ ಸೂಚ್ಯಂಕ ಚಂಗನೆ ಮೇಲಕ್ಕೆ ಜಿಗಿಯುತ್ತದೆ! ಹಿಂದಿನ ಯು.ಪಿ.ಏ.ಆಡಳಿತದ ಅವಧಿಯಲ್ಲಿ ಪಾತಾಳ ತಲುಪಿದ್ದ ಸೂಚ್ಯಂಕ ಮತ್ತೆ ತಲೆ ಎತ್ತಬೇಕಾದರೆ ಮೋದೀಜಿಯೇ ಪ್ರಧಾನಿಯಾಗಿ ಬರಬೇಕಾಯಿತು!.
ಅಸಲಿಗೆ ಭಾರತದ ಷೇರು ಪೇಟೆ ಸೂಚ್ಯಂಕದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅಧಪತನ ಕಂಡ ಹತ್ತು ಉದಾಹರಣೆಗಳನ್ನು ನೀವೊಮ್ಮೆ ಗಮನಿಸಬೇಕು. ೧೯೯೨ ಬಿಟ್ಟರೆ ಭಾರತದ ಇತಿಹಾಸದಲ್ಲೇ ಅತ್ಯಂತ ಕಳಪೆ ಸೂಚ್ಯಂಕಗಳು ದಾಖಲಾದದ್ದು ನಮ್ಮ ದೇಶವನ್ನು ಖ್ಯಾತ ಆರ್ಥಿಕ ತಜ್ಞ ಶ್ರೀ ಮನಮೋಹನ್ ಸಿಂಗ್ ಆಳುತ್ತಿದ್ದಾಗಲೇ..! ಇಲ್ಲೊಂದು ತಮಾಷೆಯಿದೆ... ೨೦೦೪ ರ ಮೇ ತಿಂಗಳ ಹತ್ತನೇ ತಾರೀಕಿಗೆ ಲೋಕಸಭಾ ಚುನಾವಣೆಗಳು ಮುಗಿದು ಸಮೀಕ್ಷೆಗಳೂ ಮಾಧ್ಯಮಗಳಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬಹುಮತ ಬರುವುದಿಲ್ಲವೆಂಬ ಸುದ್ದಿ ಪ್ರಸಾರ ಮಾಡಿತ್ತು. ನಾಲ್ಕೇ ದಿನದೊಳಗೆ ಅಂದರೆ... ಮೇ ೧೪ನೇ ತಾರೀಕಿಗೆ ಷೇರುಪೇಟೆಗೆ ದೊಡ್ಡ ಹೊಡೆತ ಬಿತ್ತು ... ೩೩೦ ಪಾಯಿಂಟ್ ಕುಸಿತ ಕಂಡಿತು ಸೂಚ್ಯಂಕ... ಅಲ್ಲಿಂದ ಬಳಿಕ ಮೇ ಹದಿನೇಳನೆಯ ತಾರೀಕಿಗೆ ವಾಜಪೇಯಿ ಸರಕಾರದ ಬದಲು ಎಡಪಕ್ಷಗಳೊಂದಿಗೆ ಸೇರಿ ಕಾಂಗ್ರೆಸ್ ಸರಕಾರ ಬರುವುದು ನಿಚ್ಚಳವಾಗುತ್ತಿದ್ದಂತೆಯೇ ಷೇರು ಪೇಟೆ ಸೂಚ್ಯಂಕ ೫೬೫ ಪಾಯಿಂಟ್ ಗಳಷ್ಟು ಭಾರೀ ಕುಸಿತ ಕಂಡಿತು... ಇದು ಭಾರತದ ಶೇರುಪೇಟೆ ಇತಿಹಾಸದಲ್ಲೇ ಮೂರನೆಯ ಅತ್ಯಂತ ದೊಡ್ಡ ಕುಸಿತ..! ಆಗ ದೇಶದ ಪ್ರಧಾನಿಯಾಗಿ ತಥಾ ಕಥಿತ ಖ್ಯಾತ ಆರ್ಥಿಕ ತಜ್ಞ ಮನಮೋಹನ ಸಿಂಗ್ ಕುರ್ಚಿಯೇರಲು ಬಹುತೇಕ ಸಿದ್ಧವಾಗಿದ್ದರು... ಬಳಿಕ ೨೦೦೬ ನೇ ಇಸವಿಗೆ ಬೆನ್ನು ಬೆನ್ನಿಗೆ ಕೆಲವೇ ದಿನಗಳ ಅಂತರದಲ್ಲಿ ಷೇರು ಪೇಟೆ ತೀರಾ ಅವಮಾನಕಾರವಾಗಿ ಕುಸಿಯಿತು. ಆ ವರ್ಷ ಮೇ ತಿಂಗಳ ೧೫, ೧೮, ೧೯ ಮತ್ತು ೨೨ರಂದು, ಸತತವಾಗಿ ಸೂಚ್ಯಂಕ ಕುಸಿಯಿತು. ಅದರಲ್ಲೂ ಮೇ ೧೮ ನೇ ತಾರೀಕಿನ ಕುಸಿತ ಇದುವರೆಗೆ ದೇಶದ ಶೇರುಪೇಟೆ ಇತಿಹಾಸದಲ್ಲೇ ಒಂದು ರೀತಿಯ ಕಪ್ಪು ಚುಕ್ಕ್ರೆ. ಆ ಒಂದೇ ದಿನದಲ್ಲಿ ಸೂಚ್ಯಂಕ ೮೨೬ ಪಾಯಿಂಟ್ ಗಳಷ್ಟು ಕುಸಿಯಿತು.
ಯು.ಪಿ.ಏ. ಕಾಲದಲ್ಲಿನ ಆರ್ಥಿಕತೆಯ ಅವನತಿಯನ್ನು ಮತ್ತೆ ಪುನರುತ್ಥಾನ ಗೊಳಿಸಲು ಒಬ್ಬ ಸಾಮಾನ್ಯ ಚಾಯ್ ವಾಲಾ ಬರಬೇಕಾಯಿತು. ೨೦೧೪ರ ಚುನಾವಣೆಯ ಫಲಿತಾಂಶ ಬರುವ ಮೊದಲೇ, ಮತ ಎಣಿಕೆ ನಡೆಯುತ್ತಿರುವಾಗಲೇ ೧,೪೭೦ ಪಾಯಿಂಟ್ ಗಳಷ್ಟು ದಾಖಲೆಯ ಏರಿಕೆ ಕಂಡ ಷೇರು ಸೂಚ್ಯಂಕ ಅದುವರೆಗಿನ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅಂದರೆ ೨೫,೩೭೫ ಪಾಯಿಂಟ್ ಗಳಷ್ಟಾಗಿತ್ತು. ಆದರೆ ಮೋದೀಜಿಯವರು ಪ್ರಧಾನಿಗಳಾದ ಮೇಲೆ ಎರಡು ವರ್ಷ ಸತತವಾಗಿ ಮುಂಗಾರು ವಿಫಲವಾಯಿತು... ಆದರೂ ಮೋದೀಜಿಯವರ ಸರಕಾರದ ಉತ್ತಮ ಕಾರ್ಯವೈಖರಿಯಿಂದ ಷೇರು ಪೇಟೆ ಏರುಗತಿಯಲ್ಲೇ ಸಾಗಿತು... ಈಗ ಈ ಬಾರಿ ಅತ್ಯುತ್ತಮ ರೀತಿಯಲ್ಲಿ ಮುಂಗಾರು ಮಳೆ ಆಗಲಿದೆ ಎಂಬ ಶುಭ ಸಮಾಚಾರ ಯಾವಾಗ ಹೊರಬಿತ್ತೋ ಆಗಲೇ ಶೇರುಪೇಟೆ ದೇಶದ ಇತಿಹಾಸದಲ್ಲೇ ಒಂದು ಸಾರ್ವಕಾಲಿಕ ಹೊಸ ದಾಖಲೆ ಬರೆಯಿತು. ಮೊನ್ನೆ ಎರಡು ಮೂರು ದಿನಗಳ ಹಿಂದೆ ಶೇರುಪೇಟೆ ಸೂಚ್ಯಂಕ ೩೦,೨೫೬ ಪಾಯಿಂಟ್ ಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆಯಿತು. ಕೆಲ ಪಂಡಿತರು ಅದೆಷ್ಟೇ ಅಂಕಿಸಂಖ್ಯೆಗಳನ್ನು ತಂದು ಗುಡ್ಡೆ ಹಾಕಿ ಮುಂಗಾರು ಮಳೆಗೂ ಷೇರುಪೇಟೆಗೂ ಸಂಬಂಧವಿಲ್ಲ ಅಂತ ಎಷ್ಟೇ ಹೇಳಲಿ... ಮುಂಗಾರು ಮಳೆ ಈ ಬಾರಿ ಚೆನ್ನಾಗಿದೆ ಅಂತ ಯಾವಾಗೆಲ್ಲ ಹವಾಮಾನ ಇಲಾಖೆ ಮುನ್ಸೂಚನೆ ನೀಡುತ್ತದೋ ಆಗೆಲ್ಲ ಶೇರುಪೇಟೆ ಅತ್ಯುತ್ತಮ ಸೂಚ್ಯಂಕಗಳನ್ನು ದಾಖಲಿಸಿದೆ... ಆದರೆ ಈ ಬಾರಿ ವಿಶೇಷ ವೆಂದರೆ ಎರಡು ವರ್ಷಗಳ ಮುಂಗಾರು ವೈಫಲ್ಯದ ಬಳಿಕ ಈ ಬಾರಿ ಅತ್ಯುತ್ತಮ ಮುಂಗಾರು ಮಳೆಯಾಗಲಿದೆ ಅನ್ನೋದು ಒಂದು ಕಾರಣವಾದರೆ... ಇನ್ನೊಂದು ನೇರ ಕಾರಣ ಮೋದೀಜಿಯವರ ಸರಕಾರದ ದಕ್ಷ ಆಡಳಿತ.... ಮುಂಗಾರು ವಿಫಲವಾಗಿದ್ದರೂ ಕೃಷಿ ಮತ್ತು ರೈತರಿಗೆ ಉಪಯುಕ್ತವಾಗುವಂತ ಯೋಜನೆಗಳನ್ನು ನೀಡಿದ ಮೋದೀಜಿಯವರ ಸರಕಾರ ಫಸಲು ವಿಮಾ ಮುಂತಾದ ಯೋಜನೆಗಳನ್ನೂ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವುದರಿಂದ ಈ ಬಾರಿಯ ಮುಂಗಾರು ಹೊಸ ಭರವಸೆಯನ್ನೇ ಮೂಡಿಸಿದೆ...
ಭಾರತ ಏನೇ ಆದರೂ ಕೃಷಿ ಪ್ರಧಾನ ದೇಶ ಮತ್ತು ಕೇಂದ್ರ ಸರಕಾರದ ಉತ್ತಮ ಯೋಜನೆಗಳಿಂದಾಗಿ ಮತ್ತು ಉತ್ತಮ ಮುಂಗಾರಿನಿಂದಾಗಿ ಈ ಬಾರಿ ದೇಶದ ಕೃಷಿ ಉತ್ಪನ್ನ ಭಾರೀ ಏರಿಕೆಯಾಗುವುದು ನಿಚ್ಚಳವಾದದ್ದರಿಂದ, ಷೇರು ಮಾರುಕಟ್ಟೆ ಅದ್ಭುತ ಪ್ರಗತಿಕಂಡಿದೆ. ದೇಶದ ರೈತ ಉತ್ತಮ ಫಸಲು ಪಡೆದರೆ, ಅವನ ಕೈತುಂಬಾ ಹಣ ಬಂದು ಅವನು ಕಷ್ಟ ಕಾರ್ಪಣ್ಯಗಳಿಂದ ಮುಕ್ತನಾದರೆ ಅದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ದೇಶದ ಒಟ್ಟು ಜಿಡಿಪಿ ಯಲ್ಲಿ ಶೇಕಡಾ ೧೫ ಕ್ಕೂ ಹೆಚ್ಚು ಕೃಷಿಯಿಂದಲೇ ಬರುತ್ತದೆ. ನೀರಾವರಿ ಸೌಲಭ್ಯಗಳ ಅಲಭ್ಯತೆಯಿಂದ ದೇಶದ ಅಕ್ಕಿ ಉತ್ಪನ್ನದ ಶೇಕಡಾ ೯೫ರಷ್ಟು ಮುಂಗಾರು ಮಳೆಯ ಮೇಲೆಯೇ ಅವಲಂಬಿತವಾಗಿದೆ... ಉತ್ತಮ ಬೆಳೆಬಂದರೆ ಕೃಷಿಯನ್ನೇ ಅವಲಂಬಿಸಿರುವ ದೇಶದ ಶೇಕಡಾ ಐವತ್ತರಷ್ಟು ಗ್ರಾಮೀಣ ಜನರ ಕೈಯಲ್ಲಿ ಹಣ ಓಡಾಡುತ್ತದೆ... ಅವರ ಕೊಳ್ಳುವ ಶಕ್ತಿಯೂ ಹೆಚ್ಚುತ್ತದೆ. ಹಾಗಾದಾಗ ದೇಶದ ವಹಿವಾಟು ಖಂಡಿತವಾಗಿಯೂ ಹೆಚ್ಚಳವಾಗುತ್ತದೆ. ಕಳೆದ ವರ್ಷ ಶೇಕಡಾ ೧.೨ ರಷ್ಟು ಮಾತ್ರ ಏರಿಕೆ ಕಂಡಿದ್ದ ಕೃಷಿ ವಲಯ ಈ ಬಾರಿ ಶೇಕಡಾ ೪ ಕ್ಕಿಂತಲೂ ಹೆಚ್ಚಿನ ದರದಲ್ಲಿ ಅಭಿವೃದ್ಧಿಯಾಗಲಿದೆ... ಹಾಗಾಗಿ ದೇಶದ ಅನ್ನದಾತ ರೈತ ಉದ್ಧಾರವಾದರೆ ದೇಶವೇ ಉದ್ಧಾರವಾಗುತ್ತದೆ... ಮುಂಗಾರು ಮಳೆಯ ಅಬ್ಬರ ಜೋರಾದರೆ ಷೇರು ಪೇಟೆಯಲ್ಲಿಯೂ ಉಬ್ಬರವಾಗುತ್ತದೆ... ದೇಶವೇ ಉದ್ಧಾರವಾಗುತ್ತದೆ...
ಈ ಬಾರಿ ಮುಂಗಾರು ಎಂದಿಗಿಂತ ಒಂದು ವಾರ ಮೊದಲೇ ಬರುವ ನಿರೀಕ್ಷೆ ಉಂಟು ಮಾಡಿದೆ.... ಬಹು ಸಂಭ್ರಮದೊಂದಿಗೆ ಸ್ವಾಗತಿಸೋಣ ಮುಂಗಾರು ಮಳೆಯನ್ನೂ.... ನಮ್ಮನ್ನೆಲ್ಲ ತೋಯ್ದು ತೊಪ್ಪೆ ಮಾಡುವಂತವನಾಗು ... ವರುಣ ದೇವನೇ!