Infinite Thoughts

Thoughts beyond imagination

ಕುಲಭೂಷಣ್ ಪಾಕಿಸ್ತಾನದ ಕಪಿಮುಷ್ಟಿಯಿಂದ ಪಾರಾಗಿ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಲಿ

ಸೈತಾನಿ ಪಾಕಿಸ್ತಾನ್ ಕ್ಕೆ ಅಂತಾರಾಷ್ಟ್ರೀಯ ಕಪಾಲ ಮೋಕ್ಷ ಬದಲಾದ ಭಾರತೀಯ ಸಮರ್ಥನೀಯ ತಂತ್ರಗಾರಿಕೆಗೆ ಸಂದ ಜಯ

ಸರಬ್ಜಿತ್ ರನ್ನು ಉಳಿಸಿಕೊಳ್ಳಲಾಗದ ಷಂಡ ಸರ್ಕಾರದಂತಲ್ಲ ನಮ್ಮದು!!

ಇವತ್ತು ದೇಶದಲ್ಲಿ ಕುಲಭೂಷಣ್ ಜಾಧವರದ್ದೇ ದೊಡ್ಡ ಸುದ್ದಿ. ಭಾರತೀಯ ನೌಕಾಸೇನೆಯ ಮಾಜೀ ಅಧಿಕಾರಿ ಕುಲಭೂಷಣ್ ಜಾಧವರನ್ನು ಮೋಸದಿಂದ ಅಪಹರಿಸಿದ ಪಾಕಿಸ್ತಾನ ಅವರಿಗೆ ಗೂಢಚಾರನ ಪಟ್ಟಕಟ್ಟಿ, ಮಿಲಿಟರಿ ಕೋರ್ಟ್ ನಲ್ಲಿ ವಿಚಾರಣೆಯ ನಾಟಕವಾಡಿ ಮರಣದಂಡನೆ ಶಿಕ್ಷೆ ವಿಧಿಸಿತು. ಹಿಂದೆ ಕೂಡ ಸರಬ್ಜಿತ್ ಸಿಂಗ್ ಪ್ರಕರಣದಲ್ಲಿ ಹೀಗೆಯೇ ಆಗಿತ್ತು. ಆದರೆ ಅಂದಿನ ಭ್ರಷ್ಟ ರಾಣಿಯ ಗುಲಾಮರ ನೇತ್ರತ್ವದಲ್ಲಿದ್ದ ಭಾರತ ಸರಕಾರ ಸರಬ್ಜಿತ್ ಪ್ರಾಣ ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಯಿತು. ಆಗ ಭಾರತ ಇಂತಹ ಒಂದು ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲಿಲ್ಲ. ಭಾರತ ಸರಕಾರ ಸರಬ್ಜಿತ್ ಪ್ರಕರಣದಲ್ಲಿ ಅಂದು ನಿಷ್ಕ್ರಿಯವಾಗಿದ್ದರಿಂದಲೇ ಆತನ ಪ್ರಾಣ ಉಳಿಸಲಾಗಲಿಲ್ಲ. ಮರಣದಂಡನೆಗೆ ಗುರಿಯಾಗಿ ಪಾಕಿಸ್ತಾನದ ಜೈಲಲ್ಲಿದ್ದಾಗಲೇ ಅಲ್ಲಿನ ಮುಸ್ಲಿಂ ಮತಾಂಧ ಖೈದಿಗಳಿಂದ ತೀವ್ರ ರೀತಿಯ ಹಲ್ಲೆಗೊಳಗಾಗಿ ಕೋಮಾ ಸ್ಥಿತಿಗೆ ಹೋಗಿ ಹಾಗೆಯೇ ಮರಣವನ್ನಪ್ಪಿದ. ಬಳಿಕ ಆತನಿಗೆ ಭಾರತದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು. ಪಂಜಾಬನ ಓರ್ವ ಬಡ ರೈತನಾಗಿದ್ದ ಸರಬ್ಜಿತ್ ಅಮಲಿನಲ್ಲಿ ಭಾರತದ ಗಡಿದಾಟಿ ಪಾಕಿಸ್ತಾನದೊಳಕ್ಕೆ ಕಾಲಿಟ್ಟಿದ್ದ. ಆದರೆ ಪಾಕಿಸ್ತಾನೀಯರು ಅವನನ್ನು ಮಂಜೀತ್ ಸಿಂಗ್ ಅಂತಲೇ ಸಾಧಿಸಿ ಲಾಹೋರ್ ಬಾಂಬ್ ಸ್ಪೋಟದ ಆರೋಪದಲ್ಲಿ ಅವನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು.

ಈಗ ಕುಲಭೂಷಣ್ ಜಾಧವರನ್ನು ಇರಾನ್ ನಿಂದಲೇ ಅಪಹರಿಸಿ ಅವರನ್ನೂ ಭಾರತದ ಗೂಢಚಾರ ಎಂಬ ಸುಳ್ಳು ಆರೋಪ ಹೊರಿಸಿ, ವಿಚಾರಣೆಯ ನಾಟಕ ನಡೆಸಿ ಈಗ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಕುಲಭೂಷಣ್ ಗೆ ರಾಜತಾಂತ್ರಿಕ ನೆಲೆಯಲ್ಲಿ 'ಕಾನ್ಸ್ಯುಲಾರ್ ಆಕ್ಸೆಸ್ " ಅಂದರೆ ಭಾರತದ ರಾಜತಾಂತ್ರಿಕರಿಗೆ ಕುಲಭೂಷರನ್ನು ಭೇಟಿ ಮಾಡುವ ಅವಕಾಶ ಕೊಡಬೇಕೆಂದು ಭಾರತ ಸರಕಾರ ಹಲವಾರು ಬಾರಿ ಮನವಿ ಮಾಡಿಕೊಂಡರೂ ಅದಕ್ಕೆ ಸೊಪ್ಪು ಹಾಕದೆಯೇ ಕುಲಭೂಷಣ್ ರನ್ನು ಭೇಟಿಯಾಗುವ ಅವಕಾಶ ಒದಗಿಸಲಿಲ್ಲ ಪಾಕಿಸ್ತಾನ. ಕೊನೆ ಪಕ್ಷ ಕುಲಭೂಷಣ್ ಮನೆಯವರಿಗೂ ಆತನನ್ನು ಒಮ್ಮೆ ಕೂಡ ಭೇಟಿಯಾಗಲು ಅವಕಾಶವನ್ನೇ ನೀಡಿರಲಿಲ್ಲ. ಅಷ್ಟೇ ಅಲ್ಲ, ಕುಲಭೂಷಣರನ್ನು ನಾಗರಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದೆ, ಅಂತರರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಮಿಲಿಟರಿ ನ್ಯಾಯಾಲಯದಲ್ಲಿ ಅವರ ವಿಚಾರಣೆ ನಡೆಸಿತು. ವಿಚಾರಣೆಯ ನಾಟಕ ನಡೆಸಿ ಕೇವಲ ನಾಲ್ಕೇ ಕಲಾಪ ನಡೆಸಿ ಕುಲಭೂಷಣ್ ಗೆ ಮರಣದಂಡನೆ ಶಿಕ್ಷೆಯನ್ನೂ ವಿಧಿಸಿತು. ಸಂದರ್ಭದಲ್ಲಿ ಅವರ ಪರ ಕನಿಷ್ಠ ವಕೀಲನನ್ನೂ ನೇಮಿಸುವ ಸೌಜನ್ಯವನ್ನೂ ತೋರಿಸದೆ ಪಾಕಿಸ್ತಾನ ತನ್ನ ಹೇಯ ಪೈಶಾಚಿಕ ಮುಖವನ್ನು ತೋರಿಸಿತ್ತು. ಕುಲಭೂಷಣ್ ವಿರುದ್ಧ ಯಾವುದೇ ಪ್ರಬಲ ಸಾಕ್ಷಿ ಇಲ್ಲದೆ ಇದ್ದರೂ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಮರಣದಂಡನೆ ನೀಡಿದ ಪಾಕಿಸ್ತಾನದ ವಿಶ್ವಾಸಘಾತುಕತನವನ್ನು ಸಹಿಸದ ಭಾರತ ಸರಕಾರ ಒಂದು ಮಹತ್ವದ ಐತಿಹಾಸಿಕ ರಾಜತಾಂತ್ರಿಕ ನಿರ್ಣಯ ಕೈಗೊಂಡಿತು.

ತನ್ನ ಪ್ರಜೆಯಾದ ಕುಲಭೂಷಣರನ್ನು ಶತಾಯಗತಾಯ ರಕ್ಷಿಸಲೇ ಬೇಕೆಂಬ ಹಠ ತೊಟ್ಟ ಮೋದೀಜಿಯವರ ಸರಕಾರ ಕುಲಭೂಷಣ್ ಪ್ರಕರಣವನ್ನು ಅಂತರರಾಷ್ತ್ರೀಯ ನ್ಯಾಯಾಲಯಕ್ಕೆ ಕೊಂಡೈಯ್ದು ಹದಿನೆಂಟು ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ಪಾಕಿಸ್ತಾನ ಅಂತರರಾಷ್ತ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾಯಿತು.

ಭಾರತದ ಪರ ಸಮರ್ಥ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ಶ್ರೀ ಹರೀಶ್ ಸಾಳ್ವೆ ಪಾಕಿಸ್ತಾನದ ವಾದವನ್ನು ಧೂಳೀಪಟ ಮಾಡಿದರು. ಪ್ರಾರಂಭಿಕ ಹಂತದಲ್ಲೇ ಅಂತರರಾಷ್ಟ್ರೀಯ ನ್ಯಾಯಾಲಯ ಭಾರತದ ವಾದವನ್ನು ಹಿಡಿದೆತ್ತಿ ಕುಲಭೂಷಣರ ಮರಣದಂಡನೆಗೆ ತಡೆಯಾಜ್ಞೆ ನೀಡಿತು. ಎರಡನೇ ಹಂತದಲ್ಲಿ ವಿಯೆನ್ನಾ ಒಪ್ಪಂದದಂತೆ ಭಾರತಕ್ಕೆ ಕುಲಭೂಷಣ್ ಗೆ ರಾಜತಾಂತ್ರಿಕ ಸಹಾಯ ಒದಗಿಸುವ ತನ್ನ ಹಕ್ಕನ್ನು ಪ್ರತಿಪಾದಿಸಿದ ಭಾರತದ ವಾದಕ್ಕೆ ಪ್ರತಿವಾದ ಮಂಡಿಸಿದ್ದ ಪಾಕಿಸ್ತಾನ, ಭಯೋತ್ಪಾದನೆಯಂಥ ಕೃತ್ಯದಲ್ಲಿ ವಿಯೆನ್ನಾ ಒಪ್ಪಂದ ಅನುಸರಿಸಬೇಕೆಂದೇನೂ ಇಲ್ಲ, ಜೊತೆಗೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಪ್ರಕರಣವನ್ನು ವಿಚಾರಣೆ ನಡೆಸಲು ಅಧಿಕಾರವೇ ಇಲ್ಲ ಅಂತ ಮೊಂಡು ವಾದವನ್ನು ಮಂಡಿಸಿತು. ಆದರೆ ಇವತ್ತು ಬಗ್ಗೆ ತೀರ್ಪು ನೀಡಿದ ಅಂತರರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನದ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿ ಸರ್ವಾನುಮತದಿಂದ ಭಾರತದ ವಾದವನ್ನು ಎತ್ತಿ ಹಿಡಿಯಿತು. ಭಾರತಕ್ಕೆ ಭಾರೀ ಗೆಲುವು ಸಿಕ್ಕಿದರೆ, ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕಪಾಲಮೋಕ್ಷದೊಂದಿಗೆ ತೀವ್ರ ಮುಖಭಂಗವಾಗಿದೆ!!

ಭಾರತದ ವಿದೇಶಾಂಗ ನೀತಿಯನ್ನು ದೇಶದೊಳಗೆ ಕುಳಿತೇ ಟೀಕಿಸುತ್ತಿದ್ದ ನಮ್ಮ ಲದ್ಧಿ ಜೀವಿಗಳಿಗೆ, ಪಾಕಿಸ್ತಾನವನ್ನು ಒಳಗಿಂದೊಳಗೆ ಬೆಂಬಲಿಸಿ ವಿಕೃತ ಸಂತೋಷ ಪಡುತ್ತಿದ್ದವರಿಗೆ, ಮೋದೀಜಿ ಮತ್ತು ಸುಶ್ಮಾ ಸ್ವರಾಜ್ ಅವರ ವಿದೇಶ ನೀತಿಯನ್ನು ಟೀಕಿಸುತ್ತಿದ್ದ ನಮ್ಮ ಪ್ರತಿಪಕ್ಷಗಳಿಗೆ ಈಗ ಭಾರತಕ್ಕೆ ಸಿಕ್ಕಿದ ಭಾರೀ ಜಯದಿಂದಾಗಿ ಖಂಡಿತ ಇರಿಸು ಮುರುಸಾಗಿದೆ. ಈಗ ಕುಲಭೂಷಣ್ ಪ್ರಕರಣದಲ್ಲಿ ಮೋದೀಜಿಯವರ ಸರಕಾರ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಇದು ನಿಜಕ್ಕೂ ಮೋದೀಜಿ ಸರಕಾರಕ್ಕೆ ಸಿಕ್ಕಿದ ಭಾರೀ ಯಶಸ್ಸು.

ಆದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಮೋದೀಜಿಯವರ ಸರಕಾರ ವಿದೇಶೀ ನೀತಿಗಳಲ್ಲಿ ಸಾಕಷ್ಟು ಆಕ್ರಮಣಕಾರೀ ನೀತಿ ಅನುಸರಿಸುತ್ತಿದೆ.... ಅದಕ್ಕೆ ಒಂದು ಉದಾಹರಣೆಯೆಂದರೆ ಇದೆ ಕುಲಭೂಷಣ್ ಜಾಧವ್ ಪ್ರಕರಣ. ಆತ ನಿಜಕ್ಕೂ ಗೂಢಚಾರನಲ್ಲದೆಯೇ ಇರಬಹುದು. ಪಾಕಿಸ್ತಾನ ಆತನನ್ನು ಗೂಢಚಾರ ಎಂಬ ಆರೋಪ ಹೊರಿಸಿ ಮರಣದಂಡನೆ ವಿಧಿಸಿದೆ. ಅದಕ್ಕಾಗಿಯೇ ಆತನನ್ನು ಶತಾಯಗತಾಯ ಪಾರು ಮಾಡಲೇ ಬೇಕೆಂದು ಹಠ ತೊಟ್ಟಿರುವ ಮೋದೀಜಿಯವರ ಸರಕಾರ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲೇ ಎದುರಿಸಿದೆ. ಮೊದಲ ಹಂತದಲ್ಲಿ ಯಶಸ್ಸೂ ದೊರಕಿದೆ... ನಮ್ಮ ಪರ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ ಪ್ರಖ್ಯಾತ ವಕೀಲ ಶ್ರೀ ಹರೀಶ್ ಸಾಳ್ವೆ ಕೇವಲ ಒಂದೇ ರೂಪಾಯಿ ಸಂಭಾವನೆ ಸ್ವೀಕರಿಸಿ ದೇಶಭಕ್ತಿ ಮೆರೆದಿದ್ದಾರೆ.

ಹಿಂದೆ ಸರ್ಕಾರಗಳು ಗೂಢಚಾರಿಕೆಯನ್ನು ಒಪ್ಪಿಕೊಂಡ ಹಾಗೆ ಆಗುತ್ತದೆ ಎಂಬ ಹೆದರಿಕೆಯಿಂದ, ಗೂಢಚಾರರನ್ನು ರಕ್ಷಿಸಲು ಮುಂದೆ ಬರುತಿರಲಿಲ್ಲ. ಕಾಲ ಬದಲಾಗುತ್ತಿದೆ. ಭಾರತ ಬದಲಾಗುತ್ತಿದೆ... ವಿದೇಶೀ ನೀತಿಯಲ್ಲಿ ಮೋದೀಜಿಯವರು ಸಾಂಪ್ರದಾಯಿಕ ರೀತಿ-ನೀತಿಗಳಿಗೆ ತಿಲಾಂಜಲಿ ನೀಡಿ ಹೊಸ ಆಕ್ರಮಣಕಾರೀ ನಿಲುವುಗಳನ್ನು ತೆಗೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಡೆಯೇನೆಂಬುದನ್ನು ಜಾಹೀರು ಮಾಡಿದ್ದಾರೆ.

ಕುಲಭೂಷಣ್ ಜಾಧವ್ ಕೇಸಿನಲ್ಲಿ ಇದೀಗ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನ್ಯಾಯಾಲಯ ಪಾಕಿಸ್ತಾನದ ವಾದವನ್ನು ಸಾರಾಗಟಾಗಿ ತಳ್ಳಿಹಾಕಿ ಭಾರತದ ವಾದವನ್ನು ಎತ್ತಿಹಿಡಿದಿದೆ. ಈಗ ಅಂತರರಾಷ್ಟ್ರೀಯ ನ್ಯಾಯಾಲಯ ಕುಲಭೂಷಣ್ ಅವರಿಗೆ ರಾಜತಾಂತ್ರಿಕ ನೆರವು ಲಭಿಸುವಂತೆ ಪಾಕಿಸ್ತಾನ ಸರಕಾರ ಎಲ್ಲ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ, ಮತ್ತು ಈಗ ವಿಧಿಸಿರುವ ಮರಣದಂಡನೆಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆಯನ್ನೂ ನೀಡಿದೆ. ಆದರೆ ಪಾಕಿಸ್ತಾನದಂಥ ಪರಂಘಾತುಕ ದೇಶವನ್ನು ನಂಬುವುದು ಹೇಗೆ? ಒಂದು ವೇಳೆ ಅದು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೂ ಬೆಲೆ ಕೊಡದೆ ಕುಲಭೂಷಣ್ ಪ್ರಾಣಕ್ಕೇನಾದರೂ ಕುತ್ತು ತಂದರೆ?

ಪ್ರಾಯಶಃ ಅಂತಹ ಸಂದರ್ಭದಲ್ಲಿ, ಒಂದು ನಿರ್ಣಾಯಕ ಯುದ್ಧವೇ ಸಾಕ್ಷಿಯಾಗಬಹುದು!

ಕುಲಭೂಷಣ್ ಪಾಕಿಸ್ತಾನದ ಕಪಿಮುಷ್ಟಿಯಿಂದ ಪಾರಾಗಿ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಲಿ ಅಂತ ನಾವೆಲ್ಲಾ ಸಂದರ್ಭದಲ್ಲಿ ಪ್ರಾರ್ಥಿಸೋಣ...

Related posts