Infinite Thoughts

Thoughts beyond imagination

ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರಬಹುದು... ಆದರೆ ಮತದಾರ ಖಂಡಿತ ಕೈಬಿಟ್ಟಿಲ್ಲ......

ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರಬಹುದು... ಆದರೆ ಮತದಾರ ಖಂಡಿತ ಕೈಬಿಟ್ಟಿಲ್ಲ......  

ದುರಾದೃಷ್ಟದ ಆಟ.... ಮತ್ತು  ಕೈಕೊಟ್ಟ ನೋಟಾ....

ಪಂಚ ರಾಜ್ಯಗಳಲ್ಲಿ ಇತ್ತೀಚಿಗೆ ವಿಧಾನಸಭೆಗಳಿಗೆ ನಡೆದ ಚುನಾವಣೆಯನ್ನು ಮಾಧ್ಯಮಗಳು ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನ ನಡೆಯುವ ಸೆಮಿ ಫೈನಲ್ ಅಂತ ಬಿಂಬಿಸಿದರು.  ಜೊತೆಗೆಯೇ ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುತ್ತದೆ ಅಂತ ಕೂಡಾ ಪ್ರಚಾರ ಮಾಡಲಾಯಿತು. ಫಲಿತಾಂಶ ಬಂದ ಮೇಲಂತೂ  ರಾಜಸ್ಥಾನ, ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆದ ಸೋಲು ಭಾರೀ ದೊಡ್ಡ ಹಿನ್ನಡೆ... ಇದರ ಪರಿಣಾಮ ನೇರವಾಗಿ ಲೋಕಸಭಾ ಚುನಾವಣೆಯ ಮೇಲೆ ಆಗುತ್ತದೆ ಅಂತ ಈಗಾಗಲೇ ಭೇರಿ ನಗಾರಿ, ಕಹಳೆ ತುತ್ತೂರಿಗಳನ್ನೆಲ್ಲಾ ವ್ಯವಸ್ಥಿತವಾಗಿಯೇ ಊದಲಾಗಿದೆ.... ಕೆಲ ಎಡಚ ಮಾಧ್ಯಮಗಳಂತೂ ಇನ್ನೇನು ಮೋದಿಯವರ ಕತೆ ಮುಗಿದೇ ಹೋಯಿತು ಅಂತ ಕತೆ ಕಟ್ಟತೊಡಗಿದವು.... ರಾಹುಲ್ ಗಾಂಧಿ ನಾಮಾಂಕಿತ ರೌಲ್ ವಿನ್ಸಿ  ಪ್ರಧಾನಿಯಾದಂತೆ ಕನಸು ಕಾಣುತ್ತಾ ಪುಳಕ ಅನುಭವಿಸಿದವು.... ಇದೆಲ್ಲದರ ಅಡ್ಡ ಪರಿಣಾಮವೋ ಎಂಬಂತೆ ನಮ್ಮದೇ ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕಾರಣ ಸಂಬಂಧವೇ ಇಲ್ಲದೆ ಬಿಜೆಪಿ ನಾಯಕತ್ವದ ಮೇಲೆ, ಹೈಕಮಾಂಡ್ ಮೇಲೆ, ರಾಜ್ಯ ನಾಯಕರ ಮೇಲೆ, ಕೊನೆಗೆ ಮೋದಿಯವರ ಮೇಲೂ ಟೀಕೆಗಳ ಸುರಿಮಳೆಗರೆದದ್ದು.... ಸಾಮಾಜಿಕ ಜಾಲತಾಣಗಳಲ್ಲಿನ ಈ ಎಲ್ಲಾ ಟೀಕೆಗಳ ನಡುವೆ ಕಳ್ಳ ಹೆಸರಲ್ಲಿ ಮಳ್ಳರಂತೆ ಒಳ ನುಸುಳಿದ ಕಾಂಗ್ರೆಸ್ ಇತ್ಯಾದಿ ವಿರೋಧ ಪಕ್ಷಗಳ ಕಾರ್ಯಕರ್ತರೂ ಒಂದಷ್ಟು ಇಲ್ಲ ಸಲ್ಲದ ಟೀಕೆಗಳನ್ನು ಮಾಡಿ ಸದ್ದಿಲ್ಲದೇ ಗಾಯಬ್ ಆದರು...! 

ಆದರೆ ಚುನಾವಣಾ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಚ್ಚರಿ ಮೂಡಿಸುವ ಸಂಗತಿಗಳು ಬೆಳಕಿಗೆ ಬಂದವು... ಪ್ರಜಾಪ್ರಭುತ್ವದ ತಳಹದಿಯಂತೆ ಇರುವ ಈ ಚುನಾವಣೆಗಳು, ಮತದಾರರು, ಮತದಾನದ ಪ್ರಕ್ರಿಯೆಗಳು, ಮತದಾನ, ನಂತರ ಮತಗಳ ಎಣಿಕೆ ಇವೆಲ್ಲಾ ಅದೆಷ್ಟು ನಿರ್ಣಾಯಕ ಪಾತ್ರ ವಹಿಸುತ್ತವೋ ಅದೇ ರೀತಿಯಲ್ಲಿ ಅದೃಷ್ಟ ಕೂಡಾ ತನ್ನ ಆಟವನ್ನು ಆಡುತ್ತದೆ ಎಂಬುದು ಈ ಚುನಾವಣೆಯಲ್ಲಂತೂ ನಿಚ್ಚಳವಾಯಿತು. ದುರಾದೃಷ್ಠದಾಟದ ಜೊತೆಗೆಯೇ ಮತಪೆಟ್ಟಿಗೆಯಲ್ಲಿ ತಮಗೆ ಈ ಮೇಲಿನ ಯಾವ ಅಭ್ಯರ್ಥಿಗಳೂ ಬೇಡ ಅಂತ ಮತದಾರ ತನ್ನ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ಕೊಟ್ಟಿರುವ ನೋಟಾ ಎಂಬ ತೀರಾ ಅಸಂಬದ್ಧ ಮತ್ತು ಶುದ್ಧ ಅವಿವೇಕದ ಅವಕಾಶ ಕೂಡಾ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಹೇಗೆ ಕಂಟಕವಾಗುತ್ತದೆ ಎಂಬುದಕ್ಕೆ ಈ ಚುನಾವಣಾ ಒಂದು ಜ್ವಲಂತ ಉದಾಹರಣೆ.... 

ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಹದಿನೈದು ವರ್ಷಗಳ ಕಾಲ ತುಂಬಾ ಒಳ್ಳೆಯ ಆಡಳಿತ ಕೊಟ್ಟಿದ್ದರು.  ಆದರೂ ಜನರ ಮನಸ್ಸಿನಲ್ಲಿ ಒಂದು ರೀತಿಯ ಏಕತಾನತೆಯ ಭಾವ, ಹೊಸದನ್ನು ಬಯಸುವ ಮನಸ್ಥಿತಿ ಬರುವುದು ಕೂಡಾ ಅಸಹಜವಲ್ಲ... ಅದೂ ಕೂಡ ಸತತವಾಗಿ ಹದಿನೈದು ವರ್ಷಗಳ ಕಾಲ ಒಬ್ಬರೇ ಮುಖ್ಯಮಂತ್ರಿ ಆಡಳಿತ ನಡೆಸಿ ಮತ್ತೆ ಈಗ ನಾಲ್ಕನೆಯ ಅವಧಿಗೂ ಅವರೇ ಮುಖ್ಯಮಂತ್ರಿ ಅಭ್ಯರ್ಥಿ, ಅದೇ ಸರಕಾರ ಅಂದರೆ ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗುವುದು ಸಹಜ. ಹಾಗಾದಾಗ ಜನ ಬದಲಿ ಪಕ್ಷಕ್ಕೆ ಮತನೀಡುವುದು, ಆಡಳಿತ ಪಕ್ಷಕ್ಕೆ ವಿರುದ್ಧವಾಗಿ ಮತ ನೀಡುವುದು, ಆದುದರಿಂದ ಆಡಳಿತ ಪಕ್ಷಕ್ಕೆ ಮತಗಳ ಸಂಖ್ಯೆ ಕಡಿಮೆಯಾಗಿ ವಿರೋಧ ಪಕ್ಷ ಆಡಳಿತ ಪಕ್ಷಕ್ಕಿಂತ ಹೆಚ್ಚು ಮತ ಪಡೆದು ಅಧಿಕಾರಕ್ಕೆ ಏರುವುದು ತೀರಾ ಸಹಜವಾದ ಪ್ರಕ್ರಿಯೆ.... ಆದರೆ ಮಧ್ಯ ಪ್ರದೇಶದ ವಿಷಯದಲ್ಲಿ ಹಾಗಾಗಿಲ್ಲ ....! 

ಈಗ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಸರಕಾರ ರಚನೆ ಮಾಡುತ್ತಿದೆ. ಪ್ರಜಾಪ್ರಭುತ್ವದ ಆಶಯದ ಪ್ರಕಾರ ಜನಪ್ರಿಯ ಪಕ್ಷವೇ...  ಅಂದರೆ ರಾಜ್ಯದ ಅತಿ ಹೆಚ್ಚು ಜನ ಇಷ್ಟ ಪಡುವ ಪಕ್ಷವೇ, ಅತೀ ಹೆಚ್ಚು ಜನ ಮತ ಹಾಕಿರುವ ಪಕ್ಷವೇ ಸರಕಾರ ರಚಿಸಬೇಕು, ಆಡಳಿತ ನಡೆಸಬೇಕು ಅಲ್ಲವೇ..?  ಇದು ಪ್ರಪ್ರಭುತ್ವದ ಸಹಜವಾದ ಪ್ರಕ್ರಿಯೆಯಲ್ಲವೇ..?  ಆದರೆ ಮಧ್ಯ ಪ್ರದೇಶದಲ್ಲಿ ಹಾಗೆ ಆಗಲೇ ಇಲ್ಲ ಎಂಬುದು ದುಃಖದ ಸಂಗತಿ, ದುರಾದೃಷ್ಟದ ಸಂಗತಿ... ಯಾಕೆಂದರೆ ಅಲ್ಲಿ ಈಗ ಸರಕಾರ ರಚಿಸುತ್ತಿರುವ ಕಾಂಗ್ರೆಸ್ ಪಕ್ಷ ಪಡೆದಿರುವ ಮತಗಳಿಗಿಂತ ಬಿಜೆಪಿ ಪಡೆದಿರುವ ಮತಗಳ ಸಂಖ್ಯೆ ಹೆಚ್ಚು..! ಅಂದರೆ ಇವತ್ತಿಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿಯೇ ಅತ್ಯಂತ ಹೆಚ್ಚು ಮತಗಳನ್ನು ಪಡೆದ ಜನಪ್ರಿಯ ಪಕ್ಷ ..! 

ಮಧ್ಯಪ್ರದೇಶದಲ್ಲಿ ಬಿಜೆಪಿ ಪಡೆದ ಒಟ್ಟು ಮತಗಳು - 1,56,42,980 

ಅದೇ ವೇಳೆ ಕಾಂಗ್ರೆಸ್ಸಿಗೆ ದೊರೆತ ಒಟ್ಟು ಮತಗಳು - 1,55,95,153

ಅಂದರೆ ಮಧ್ಯಪ್ರದೇಶದಲ್ಲಿ ಚಲಾವಣೆಯಾದ ಒಟ್ಟಾರೆ ಮತಗಳ ಪೈಕಿ ಬಿಜೆಪಿಗೆ ಕಾಂಗ್ರೆಸ್ಸಿಗಿಂತ 47,827 ಮತಗಳು ಹೆಚ್ಚಿಗೆ ಬಿದ್ದಿವೆ! 

ಕಾಂಗ್ರೆಸ್ಸಿಗೆ ಶೇಕಡಾ 40.9  ಮತಗಳು ಬಂದಿದ್ದರೆ  ಬಿಜೆಪಿಗೆ  .01 ದಷ್ಟು ಹೆಚ್ಚು ಮತಗಳು ಅಂದರೆ ಶೇಕಡಾ  41.0 ಮತಗಳು ಬಂದಿವೆ! 

ಅಂದರೆ ಅದರ ಅರ್ಥ ಮಧ್ಯಪ್ರದೇಶದ ಜನ ಬಿಜೆಪಿ ಸರಕಾರವನ್ನೂ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೂ ಈ ಮಾಧ್ಯಮಗಳು ಅಥವಾ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಚಾರ ಮಾಡುತ್ತಿರುವ ಹಾಗೆ ತಿರಸ್ಕರಿಸಿಲ್ಲ...! ಬದಲಿಗೆ ಕಾಂಗ್ರೆಸ್ಸಿಗಿಂತಲೂ ಹೆಚ್ಚು ಮತಗಳನ್ನು ನೀಡಿ ಮೆಚ್ಚಿಕೊಂಡಿದ್ದಾರೆ...! 

ಹಾಗಾದರೆ ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ಕಡಿಮೆ ಸೀಟು ಬಂದದ್ದು ಹೇಗೆ..? ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದದ್ದು ಹೇಗೆ..? ಬಿಜೆಪಿ ಅಧಿಕಾರ ಕಳೆದುಕೊಂಡದ್ದು ಹೇಗೆ..? 

ಅದಕ್ಕೆ ಚಿಕ್ಕ ಚೊಕ್ಕ ಉತ್ತರವಿದೆ... ಆದರೆ ಆ ಉತ್ತರ ಕೇಳಿದರೆ ನೀವು ದಂಗು ಬಡಿದು ಹೋಗುತ್ತೀರಿ..! ಈಗ ಬಿಜೆಪಿ ಮಧ್ಯಪ್ರದೇಶದಲ್ಲಿ ಪಡೆದುಕೊಂಡ ಸ್ಥಾನಗಳ ಸಂಖ್ಯೆ 109. ಅದೇ ವೇಳೆ ಕಾಂಗ್ರೆಸ್ ಪಡೆದುಕೊಂಡ ಸ್ಥಾನಗಳು 114. 

ಒಂದು ವೇಳೆ ಬಿಜೆಪಿ ಕೇವಲ... ಕೇವಲ... 4337 ಮತಗಳು ಹೆಚ್ಚು ಬಂದರೂ ಸಾಕಿತ್ತು.... 

ಇಷ್ಟಾಗಿದ್ದರೆ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೆಯ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದರು ...

ಮತ್ತು ಬಿಜೆಪಿ ಕೂಡಾ ನಾಲ್ಕನೆಯ ಬಾರಿಗೆ ಸರಕಾರ ರಚಿಸುತ್ತಿತ್ತು ...  ಆದರೆ ಕೇವಲ 4337 ಮತಗಳ ಕೊರತೆಯಿಂದಾಗಿ ಎಲ್ಲವೂ ಉಲ್ಟಾ ಆಯಿತು... ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರ ಹಿಡಿಯಿತು.... ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲೆಲ್ಲ ನರೇಂದ್ರ ಮೋದಿಯವರ ಅಲೆ ಸತ್ತುಹೋಯಿತು... ಮೋದಿ ಸೋತು ಹೋದರು.... ರಾಹುಲ್ ಗೆದ್ದರು ... ಮುಂದಿನ ಪ್ರಧಾನಿಯನ್ನು ಜನ ಈಗಾಗಲೇ ಆಯ್ಕೆ ಮಾಡಿ ಆಯಿತು ಅಂತ ವಿರೋಧ ಪಕ್ಷಗಳೆಲ್ಲಾ ಕೀರಲು ಧ್ವನಿಯಲ್ಲಿ ಅರಚತೊಡಗಿದವು...! 

ಅದು ಹೇಗೆ ಕೇವಲ 4337 ಮತಗಳ ಅಂತರದಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಇಡೀ ರಾಜ್ಯವನ್ನೇ ಕಳೆದುಕೊಂಡಿತು ಅಂತ ಯೋಚಿಸುತ್ತಿದ್ದೀರಾ..? ಬಿಜೆಪಿಗೆ ಮಧ್ಯಪ್ರದೇಶದಲ್ಲಿ ಬಿದ್ದ ಒಟ್ಟು ಮತಗಳ ಸಂಖ್ಯೆ ಕಾಂಗ್ರೆಸ್ಸಿಗಿಂತಲೂ 47827 (ನಲವತ್ತೇಳು ಸಾವಿರದ ಎಂಟುನೂರ ಇಪ್ಪತ್ತೇಳು) ಮತಗಳನ್ನು ಹೆಚ್ಚು ಪಡೆದಿದ್ದರೂ ಕೇವಲ ನಾಲ್ಕು ಸಾವಿರದ ಮುನ್ನೂರ ಮೂವತ್ತೇಳು ಮತಗಳಿಂದ ಪೂರ್ತಿ ರಾಜ್ಯದ ಅಧಿಕಾರವೇ ಬಿಜೆಪಿಯ ಕೈತಪ್ಪಿ ಕಾಂಗ್ರೆಸ್ಸಿನ ಪಾಲಾಯಿತಾ...ಅಂತ ಮೂಗಿನ ಬೆರಳಿಟ್ಟು ಯೋಚಿಸುತ್ತಿದ್ದೀರಾ..? 

ಇದೆ ನಿಜವಾದ ಸತ್ಯ... 

ಬಿಜೆಪಿಯ ಪಾಲಿಗೆ...   

ಇದೆ ಪ್ರಜಾಪ್ರಭುತ್ವದ ವ್ಯಂಗ್ಯ.... ಕ್ರೂರ ಕುಹಕ.... 

ಪ್ರಪಂಚದ್ದಾದ್ಯಂತ ಇರುವ ಅದರ ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ನುಂಗಲಾರದ ತುತ್ತಾಗಿ ಬಿಟ್ಟ ದುರಂತ.... ಅದುವೇ ದುರಾದೃಷ್ಟದ ಆಟ .... 

ಒಂದು ವೇಳೆ ನಾಲ್ಕು ಸಾವಿರದ ಮುನ್ನೂರ ಮೂವತ್ತೇಳು ಜನ ಬಿಜೆಪಿಯ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಿದ್ದರೆ ಬಿಜೆಪಿ ಪಡೆದ 109 ಸ್ಥಾನಗಳಿಗೆ ಇನ್ನೂ ಏಳು ಸ್ಥಾನಗಳು ಹೆಚ್ಚುವರಿಯಾಗಿ ಸೇರಿ ಸ್ಪಷ್ಟ ಬಹುಮತ ಪಡೆಯುತ್ತಿತ್ತು...! 

ಸ್ಪಷ್ಟ ಬಹುಮತಕ್ಕೆ ಕೊರತೆಯಾದ ಆ ಏಳೂ ಸ್ಥಾನಗಳಲ್ಲಿ ಬಿಜೆಪಿ ಸೋತ ಮತಗಳ ಅಂತರ ಒಂದು ಸಾವಿರಕ್ಕಿಂತಲೂ ಕಡಿಮೆ... ! ಆ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತುಹೋದ ಅಂತರ ಹೀಗಿದೆ.... 

ಗ್ವಾಲಿಯರ್ ದಕ್ಷಿಣ - 121

ಸುಸ್ವಾರಾ - 350

ಜಬಲ್ಪುರ ಉತ್ತರ- 578

ರಾಜ್ ನಗರ್- 732

ದಾಮೋಹ್ - 798

ಬಿಯಾವೋರಾ - 826

ರಾಜ್ ಪುರ್ - 932 

ಈ ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲಲು ಕೊರತೆಯಾದ ಮತಗಳು ಕೇವಲ 4337 ಮಾತ್ರ...  ಸ್ಪಷ್ಟ ಬಹುಮತಕ್ಕೆ ಬಿಜೆಪಿಗೆ ಕೊರತೆಯಾದದ್ದು ಕೂಡಾ ಏಳು ಸ್ಥಾನ ಮಾತ್ರ... ಕಡಿಮೆ ಅಂತರದಿಂದ ಸೋತ ಈ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿಯೇ ನಾಲ್ಕನೆಯ ಬಾರಿಗೆ ಸರಕಾರ ರಚಿಸುತ್ತಿತ್ತು... 

ಇದು ಒಂದು ರೀತಿಯಲ್ಲಿ ದುರಾದೃಷ್ಟದ ಆಟವಾಗಿದ್ದರೆ.... ಇನ್ನೊಂದು ಕೈಕೊಟ್ಟದ್ದು ನೋಟಾ ಎಂಬ ವಿಚಿತ್ರ ಮತ್ತು ಅಸಂಭದ್ಧ ಮತದಾನದ ಹಕ್ಕು.  ಇಡೀ ಮಧ್ಯ ಪ್ರದೇಶದಲ್ಲಿ ಸುಮಾರು 5. 42 ಲಕ್ಷ ಮತದಾರರು ನೋಟಾ ಚಲಾವಣೆ ಮಾಡಿದ್ದಾರೆ... ಅಂದರೆ ಅಷ್ಟು ಮತಗಳು ಯಾವುದೇ ಪಕ್ಷಕ್ಕೆ ಬೀಳಲಿಲ್ಲ... ಹಾಗಾಗಿ ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿನ ಎದುರು ಸೋತು ಹೋಯಿತು ಅನ್ನುವುದಕ್ಕಿಂತ ಹೆಚ್ಚಾಗಿ ನೋಟಾದ ಎದುರು ಸೋತು ಹೋಯಿತು ಅನ್ನುವುದೇ ಹೆಚ್ಚು ಸೂಕ್ತ... ! ಅದಕ್ಕೆ ಉತ್ತರ ಇಲ್ಲಿದೆ... 

ಗ್ವಾಲಿಯರ್ ದಕ್ಷಿಣದಲ್ಲಿ ಬಿಜೆಪಿಯ ಸೋಲಿನ ಅಂತರ ಕೇವಲ 121  ಆದರೆ ನೋಟಾಗೆ ಬಿದ್ದ ಮತ 1,550!

ಸುಸ್ವಾರಾ ಕ್ಷೇತ್ರದಲ್ಲಿ ಬಿಜೆಪಿ ಸೋತದ್ದು ಕೇವಲ  350 ಮತಗಳಿಂದಾದರೆ... ನೋಟಾಗೆ ಬಿದ್ದದ್ದು 2,976 ಮತಗಳು!

ಜಬಲ್ಪುರ ಉತ್ತರದಲ್ಲಿ  ಬಿಜೆಪಿಯ ಸೋಲಿನ ಅಂತರ ಕೇವಲ 578 ಮತಗಳು... ಅದೇ ವೇಳೆ ನೋಟಾ 1209 ಮತಗಳು!

ರಾಜ್ ನಗರ್ ದಲ್ಲಿ ಬಿಜೆಪಿ 732  ಮತಗಳಿಂದ ಸೋತಿತು.. ಆದರೆ ಅಲ್ಲಿ ನೋಟಾ 2,485 ಮತಗಳಾಗಿತ್ತು. 

ದಾಮೋಹ್ ನಲ್ಲಿ ಬಿಜೆಪಿ ಸೋತದ್ದು 798 ಮತಗಳಿಂದ... ಆದ್ರೆ ನೋಟಾಗೆ 1,299  ಮತಗಳು ಚಲಾವಣೆಯಾಗಿತ್ತು. 

ಬಿಯಾವೋರಾ ದಲ್ಲಿ ಬಿಜೆಪಿಗೆ  826  ಮತಗಳಷ್ಟು ಕೊರತೆಯಾಗಿದ್ದರೆ... ನೋಟಾಗೆ 1,481 ಮತಗಳು ಬಿದ್ದವು!

ಇದಲ್ಲದೆ ಇತರ ಹಲವಾರು ಕ್ಷೇತ್ರಗಳಲ್ಲಿ ಹೀಗೆಯೇ ಬಿಜೆಪಿ ಸೋಲಿನ ಅಂತರದಿಂದ ನೋಟಾಗೆ ಬಿದ್ದ ಮತಗಳು ಹೆಚ್ಚಿದ್ದವು .. ಉದಾಹರಣೆಗೆ  ಮಾಂಧಾತಾ, ನೇಪಾನಗರ್, ಜೋಬಾತ್, ಗುನ್ನಾಓರ್, ಪೆಟಾಲಾವಾಡ್ ಮುಂತಾದ ಕಡೆಗಳಲ್ಲೆಲ್ಲ ಬಿಜೆಪಿ ಸೋತ ಮತಗಳಿಗಿಂತ ಹೆಚ್ಚಾಗಿ ನೋಟಾಗೆ ಮತಗಳು ಬಿದ್ದಿವೆ... ಅಂದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಎದುರಾಗಿ ಸೋತದ್ದಕ್ಕಿಂತ ನೋಟಾ ವಿರುದ್ಧವೇ ಸೋತಿತು... ಒಂದು ಸಾವಿರದಿಂದ ಎರಡು ಸಾವಿರದ ಒಳಗಿನ ಅಂತರದಲ್ಲಿ ಬಿಜೆಪಿ ಸೋತ ಹದಿಮೂರು ಸ್ಥಾನಗಳಲ್ಲಿ ನೋಟಾಗೆ ಹೆಚ್ಚು ಮತಗಳು ಬಿದ್ದಿದ್ದವು... ಇಲ್ಲಿ ಬಿಜೆಪಿ ಕೂಡಾ ಒಂದಷ್ಟು ಆತ್ಮಾವಲೋಕನ ಮಾಡಬೇಕಾದ ಅವಶ್ಯಕತೆ ಇದೆ.... 

ಆದರೆ ರೈತರ ಆತ್ಮಹತ್ಯೆ... ರೈತರ ಸಂಕಷ್ಟಗಳು... ರೈತರ ಪರವಾದ ಕಾಂಗ್ರೆಸ್ ಹೋರಾಟ, ರೈತರ ಸಾಲ ಮನ್ನಾ ಮಾಡುತ್ತೇವೆ ಅಂತ ಕಾಂಗ್ರೆಸ್ ನೀಡಿದ ಭರವಸೆ... ಶಿವರಾಜ್ ಸಿಂಗ್ ಮುಖ್ಯಮಂತ್ರಿಯಾಗಿ ರೈತರ ಕಷ್ಟಗಳಿಗೆ ಸ್ಪಂದಿಸಲು ಸೋತದ್ದೇ ಬಿಜೆಪಿಯ ಸೋಲಿಗೆ ಕಾರಣ ಅಂತೆಲ್ಲ ಕೆಲವೊಂದಷ್ಟು ಸುದ್ದಿ  ಮಾಧ್ಯಮಗಳು, ಪತ್ರಿಕೆಗಳು ಈ ಫಲಿತಾಂಶವನ್ನು ವಿವರಿಸಿವೆ... ಆದರೆ ಅದು ಸಂಪೂರ್ಣ ಸುಳ್ಳು ಅನ್ನೋದನ್ನು ಅಂಕಿ ಅಂಶಗಳೇ ಹೇಳುತ್ತವೆ.. ಮಧ್ಯಪ್ರದೇಶ ರೈತ ಹೋರಾಟ ಶುರುವಾದದ್ದು... ನಿಯಂತ್ರಣಕ್ಕೆ ಸಿಗದಂತೆ ಆದದ್ದು, ಗೋಲೀಬಾರಿನಿಂದ ರೈತರು ಸತ್ತದ್ದು ... ಹೀಗೆ ಎಲ್ಲವೂ ಮಾಂಡ್ ಸೌರ್ ನಲ್ಲೆ ಆದದ್ದು.. ಆದರೆ ಅಲ್ಲಿ ಕಾಂಗ್ರೆಸ್ ಎಲ್ಲಾ ಕಡೆ ಸೋತು ಬಿಜೆಪಿಯೇ ಗೆದ್ದಿತು.  ಕೇವಲ ಸುಸ್ವಾರಾದಲ್ಲಿ ಮಾತ್ರ ಕೇವಲ 350 ಅಲ್ಪಮತಗಳ ಅಂತರದಿಂದ ಗೆದ್ದಿತು! 

ಹೀಗೆ ಮಧ್ಯ ಪ್ರದೇಶದಲ್ಲಿ ಒಟ್ಟು ಮತಗಳು ಕಾಂಗ್ರೆಸ್ಸಿನಿಂದ ಬಿಜೆಪಿಗೇ ಹೆಚ್ಚು ದೊರೆತಿದ್ದರೂ, ಬಿಜೆಪಿಯ ದುರಾದೃಷ್ಟದಿಂದ ಕೇವಲ ಏಳು ಸ್ಥಾನಗಳ ಕೊರತೆಯಿಂದ ಸ್ಪಷ್ಟ ಬಹುಮತ ಪಡೆಯಲು ವಿಫಲವಾಯಿತು... ಅಷ್ಟೇ ಅಲ್ಲ ಒಂದು ವೇಳೆ ಇತರ ಆರು ಕ್ಷೇತ್ರಗಳಲ್ಲಿ ಅರ್ಧದಷ್ಟು ನೋಟಾ ಮತಗಳು ಬಿಜೆಪಿಗೆ ಬೀಳುತ್ತಿದ್ದರೂ ಒಟ್ಟು ಹದಿಮೂರು ಸ್ಥಾನಗಳು ಬಿಜೆಪಿಗೆ ಹೆಚ್ಚುವರಿಯಾಗಿ ದೊರೆಯುತ್ತಿತ್ತು... 

ರಾಜಸ್ಥಾನದಲ್ಲೂ ಮೇಲ್ನೋಟಕ್ಕೆ ಕಾಂಗ್ರೆಸ್ ಬಿಜೆಪಿಗಿಂತ ಅತಿ ಹೆಚ್ಚು ಮತಗಳನ್ನು ಪಡೆದು ತುಂಬಾ ಮುಂದಿದೆ ಅಂತ ಭಾಸವಾದರೂ ಅಲ್ಲಿ ಪಡೆದ ಒಟ್ಟು ಮತಗಳನ್ನು  ಗಮನಿಸಿದಾಗ ಇದು ನಿಚ್ಚಳವಾಗುತ್ತದೆ.. 

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಡೆದ ಒಟ್ಟು ಮತಗಳು - 1,39,35,201

ರಾಜಸ್ಥಾನದಲ್ಲಿ ಬಿಜೆಪಿ ಪಡೆದ ಒಟ್ಟು ಮತಗಳು  - 1,37,57,502 

ಕಾಂಗ್ರೆಸ್ಸಿಗೆ ದೊರಕಿದ ಹೆಚ್ಚು ಮತಗಳು - 1,77,699

ಅಂದರೆ ಇಡೀ ರಾಜಸ್ಥಾನ ರಾಜ್ಯದಲ್ಲಿ ಒಂದು ಲಕ್ಷದ ಎಪ್ಪತ್ತೇಳು ಸಾವಿರದ ಆರುನೂರ ತೊಂಭತ್ತೊಂಭತ್ತು ಮತಗಳನ್ನಷ್ಟೇ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚುವರಿಯಾಗಿ ಪಡೆಯಿತಾದರೂ ಒಟ್ಟು ಲೆಕ್ಕಾಚಾರದಲ್ಲಿ ೨೬ ವಿಧಾನಸಭಾ ಸ್ಥಾನಗಳನ್ನು  ಬಿಜೆಪಿಗಿಂತ ಹೆಚ್ಚು ಪಡೆಯುವಲ್ಲಿ ಸಫಲವಾಯಿತು.. 

ಹೀಗಾಗಿ ಛತ್ತೀಸಘಡದ ಒಂದು ಆಘಾತಕಾರೀ ಫಲಿತಾಂಶವನ್ನು ಹೊರತುಪಡಿಸಿ ಈ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಿಜಕ್ಕೂ ದೊಡ್ಡ ಮಟ್ಟದಲ್ಲಿ ಸೋತಿಲ್ಲ .... ಬದಲಿಗೆ ... ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿರಬಹುದು..... ಮತದಾರ ಕೈಬಿಟ್ಟಿಲ್ಲ... ಎಂಬುದನ್ನು ಎದೆ ತಟ್ಟಿ ಹೇಳಬಹುದು... 

ಜೊತೆಗೆ ಬಿಜೆಪಿಯ ಸೋಲಿಗೆ ಕಾರಣ .... 

ದುರಾದೃಷ್ಟದ ಆಟ ಮತ್ತು ಕೈಕೊಟ್ಟ ನೋಟಾ ..... ಅಂತ ಧೈರ್ಯವಾಗಿ ಹೇಳಬಹುದು.... 

ಮಧ್ಯಪ್ರದೇಶ ಮತ್ತು ರಾಜಸ್ಥಾನ ಎರಡೂ ಕಡೆಗಳಲ್ಲಿಯೂ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಸಚಿನ್ ಪೈಲಟ್ ಎಂಬ ಯುವನಾಯಕರನ್ನೇ ಮುಖ್ಯ ಮಂತ್ರಿ ಅಭ್ಯರ್ಥಿ ಅಂತ ಪ್ರದರ್ಶಿಸಿತ್ತು... ಯಾವಾಗ ಚುನಾವಣೆ ಗೆದ್ದು ಸರಕಾರ ರಚಿಸುವ ಸಮಯ ಬಂದಾಗ ಅದೇ ಕಮಲ್ ನಾಥ್, ಅಶೋಕ್ ಗೆಹಲೋಟ್ ಅನ್ನುವ ಹಳೆಯ ಮುಖಗಳನ್ನೇ ಮುಖ್ಯಮಂತ್ರಿಗಳಾಗಿ ನೇಮಿಸಿದೆ.... ಯುವನಾಯಕರನ್ನು ರಾಜ್ಯಗಳ ಮುಖ್ಯಮಂತ್ರಿಗಳನ್ನಾಗಿಸಿದರೆ ಮುಂದೆ ಇವರು ಬೆಳೆದು ರೌಲ್ ವಿನ್ಸಿಗೆ ಅಡ್ಡಿಯಾಗಬಹುದೆಂಬ  ದೂರಾಲೋಚನೆಯೋ ಏನೋ....! 

Related posts