Infinite Thoughts

Thoughts beyond imagination

ಇವತ್ತು ಡಿಸೆಂಬರ್ ಹದಿನಾರು...ಬಾಂಗ್ಲಾ ವಿಜಯ ದಿವಸಕ್ಕೆ ವರ್ಷ ನಲವತ್ತಾರು .... ಪಾಕಿಸ್ತಾನದ ನಡು ಮುರಿದು ಎರಡು ಮಾಡಿದ ದಿವಸ...

ಇವತ್ತು ಡಿಸೆಂಬರ್  ಹದಿನಾರು...   

ಬಾಂಗ್ಲಾ ವಿಜಯ ದಿವಸಕ್ಕೆ ವರ್ಷ ನಲವತ್ತಾರು ....    

ಪಾಕಿಸ್ತಾನದ ನಡು ಮುರಿದು ಎರಡು ಮಾಡಿದ ದಿವಸ...

ಬಾಂಗ್ಲಾ ಎಂಬ ಹೊಸ ದೇಶವನ್ನು ನಾವು ಹುಟ್ಟಿಸಿದ ದಿವಸ ...! 

1971 ರ  ಮಾರ್ಚ್ 27 ಅಂದಿನ ಪೂರ್ವ ಪಾಕಿಸ್ತಾನದ (ಇಂದಿನ ಬಾಂಗ್ಲಾ) ರಾಜಧಾನಿ ಢಾಕಾದಲ್ಲಿನ ಶತಮಾನಗಳಷ್ಟು ಹಳೆಯ ರಾಮ್ನಾ ಕಾಳೀ ಮಂದಿರದೊಳಕ್ಕೆ ಪಾಕಿಸ್ತಾನದ ಸೇನಾ ಜನರಲ್ ಎ.  ಎ. ಕೆ. ನಿಯಾಝಿಯ ಆಜ್ಞೆಯಂತೆ ನುಗ್ಗಿದ ಪಾಕಿಸ್ತಾನಿ ಸೇನೆ ಅಲ್ಲಿದ್ದ ಸುಮಾರು ಎಂಭತ್ತೈದು ಹಿಂದೂಗಳನ್ನು ಕೊಂದು ಹಾಕಿತು. ಬಂಗಾಳಿಗಳನ್ನು ಮೂರನೆಯ ದರ್ಜೆ ನಾಗರಿಕರಂತೆ ಕಾಣುವ ಪಾಕಿಸ್ತಾನದ ದಮನಕಾರಿ ಮಿಲಿಟರಿ ಆಡಳಿತದ ವಿರುದ್ಧ ಬಂಗಾಳಿ ಮುಸ್ಲಿಮರು ಬಂಗಬಂಧು ಶೇಕ್ ಮುಜಿಬುರ್ ರೆಹಮಾನ್ ನಾಯಕತ್ವದಲ್ಲಿ ತಿರುಗಿಬಿದ್ದರು..  ಆಗ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿಯಾಗಿದ್ದ ಯಾಹ್ಯಾ ಖಾನ್ ಬಾಂಗ್ಲಾದಲ್ಲಿನ ಚಳವಳಿಕಾರರನ್ನು ಹುಡುಕಿ ಹುಡುಕಿ ಕೊಂದು ಹಾಕುವಂತೆ ಜನರಲ್ ಎ. ಎ. ಕೆ. ನಿಯಾಝಿಗೆ ಆಜ್ಞೆ ಮಾಡಿದ್ದ.... ಈ ಕಾರ್ಯಾಚರಣೆಗೆ ಆಪರೇಷನ್ ಸರ್ಚ್ ಲೈಟ್ ಎಂಬ ಕ್ರೂರ ಅನ್ವರ್ಥ ನಾಮವನ್ನೂ ನೀಡಲಾಯಿತು.. "ಮೂರು ಲಕ್ಷ ಜನರನ್ನು ಗುಂಡಿಟ್ಟು ಸಾಯಿಸಿಬಿಟ್ಟರೆ ಬಾಂಗ್ಲಾದಲ್ಲಿನ ಚಳವಳಿ ತನ್ನಿಂದ ತಾನೇ ತಣ್ಣಗಾಗುತ್ತದೆ... ಪೂರ್ವ ಪಾಕಿಸ್ತಾನದ ಬಂಗಾಳಿ, ಮುಸ್ಲಿಮರು ತಟ್ಟೆ ಹಿಡಿದು ನಮ್ಮಲ್ಲಿ ಭಿಕ್ಷೆ ಬೇಡಲು ಬರುತ್ತಾರೆ.... " ಅಂತ ಯಾಹ್ಯಾ ಖಾನ್ ಉಢಾಫೆಯ ಮಾತಾಡಿದ್ದ... !

ಯಾಹ್ಯಾ ಖಾನನ ಈ ಆಪರೇಷನ್ ಸರ್ಚ್ ಲೈಟ್ ಅನ್ನು ಅವನ ಬಂಟ ಜನರಲ್ ಎ. ಎ. ಕೆ. ನಿಯಾಝಿ ಶುರುಮಾಡಿದ್ದು ರಾಮ್ನಾ ಕಾಳೀಮಂದಿರದಲ್ಲಿ ಹಿಂದೂಗಳ ನರಮೇಧ ಮಾಡುವ ಮೂಲಕ..  1971 ರ ಮಾರ್ಚ್ 27ರಂದು ಇಲ್ಲಿನ ಕಾಳೀ ಮಂದಿರಕ್ಕೆ ನುಗ್ಗಿದ ಪಾಕ್ ಸೈನಿಕರು ಅಲ್ಲಿದ್ದ  85 ಹಿಂದೂ ಭಕ್ತಾದಿಗಳನ್ನು ನಿರ್ದಯವಾಗಿ ಗುಂಡಿಟ್ಟು ಸುಟ್ಟು ಹಾಕಿದರು... ನಿಯಾಝಿಯ ಎರಡನೆಯ ಟಾರ್ಗೆಟ್ ಢಾಕಾ ವಿಶ್ವವಿದ್ಯಾನಿಲಯದಲ್ಲಿನ ಹಿಂದೂ ವಿದ್ಯಾರ್ಥಿಗಳು ಉಳಿದುಕೊಂಡಿದ್ದ ಹಾಸ್ಟೆಲ್ "ಜಗನ್ನಾಥ ಹಾಲ್"..... ಇಲ್ಲಿಗೂ ಸೈನ್ಯ ನುಗ್ಗಿಸಿ ಅಲ್ಲಿನ ನೂರಾರು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಬರ್ಭರವಾಗಿ ಹತ್ಯೆ ಮಾಡಲಾಯಿತು... ಆ ದಿನ ಢಾಕಾ ನಗರದಲ್ಲಿ ಸರ್ಚ್ ಲೈಟ್ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಸೇನೆ ಒಟ್ಟು ಕೊಂದು ಹಾಕಿದ ನಾಗರಿಕರ ಸಂಖ್ಯೆ ಕಡಿಮೆಯೆಂದರೂ ಏಳು ಸಾವಿರ..! ಅದರಲ್ಲಿ ಮುಕ್ಕಾಲು ಪಾಲು ಹಿಂದೂಗಳೇ.. 

ಜನರಲ್ ನಿಯಾಝಿ ಮತ್ತು ಯಾಹ್ಯಾ ಖಾನ್ ಬಂಗಾಳಿಗಳ ಚಳವಳಿಯನ್ನು ಹಿಂಸಾತ್ಮಕವಾಗಿ ಹತ್ತಿಕುವ ತಂತ್ರ ಹೆಣೆಯಲು ಮುಖ್ಯ ಹೇತುವಾದಾತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಟಿಕ್ಕಾ ಖಾನ್ ಮತ್ತು ನಸುಗುನ್ನಿಯಂಥಾ ಝುಲ್ಫಿಖರ್ ಅಲಿ ಭುಟ್ಟೋ ಕೂಡಾ ಇದ್ದ. ಬಾಂಗ್ಲಾದಲ್ಲಿದ್ದ ಪಾಕಿಸ್ತಾನದ ಸೇನೆಗೆ ಸಹಾಯಮಾಡಲೆಂದೇ ರಜಾಕಾರ ಒಂದು ಅನಧಿಕೃತ ಅರೆಸೇನಾ ಪಡೆಯೊಂದನ್ನು ತರಬೇತಿ ಸಿದ್ಧಪಡಿಸಲಾಯಿತು.... (ಇದೇ ರೀತಿಯ ರಜಾಕಾರರ ಪಡೆಯೊಂದನ್ನು ನಮ್ಮ ಹೈದರಾಬಾದಿನ ನಿಜಾಮನ ಬೆಂಬಲಕ್ಕೆ ರಚಿಸಲಾಗಿತ್ತು... ಅದನ್ನು ಸರದಾರ್ ಪಟೇಲರು ಬಗ್ಗುಬಡಿದ್ದಿದರು) ರಜಾಕಾರರ ಸೇನೆಯನ್ನು ರಚಿಸಲಿಕ್ಕಾಗಿಯೇ ಪಾಕಿಸ್ತಾನ ಸರಕಾರ ಸುಗ್ರೀವಾಜ್ಞೆಯೊಂದನ್ನು 1971 ರ ಜೂನ್ 1ನೇ ತಾರೀಕಿಗೆ ಜಾರಿಮಾಡಿತು.. ಜನರಲ್ ಟಿಕ್ಕಾ ಖಾನ್ ರಜಾಕಾರರನ್ನು ಭರ್ತಿ ಮಾಡಲಿಕ್ಕೆಂದೇ ಒಂದು ವಿಶೇಷ ಸಮಿತಿ ರಚಿಸಿದ... ಅದಕ್ಕೆ ಆತ ಇತ್ತ ಹೆಸರು..."ಶಾಂತಿ ಸಮಿತಿ...!" ಈ ಅರೆಸೈನ್ಯಕ್ಕೆ ಮತಾಂಧ ಮುಸ್ಲಿಮರನ್ನೇ ಸೇರ್ಪಡೆ ಗೊಳಿಸಲಾಯಿತು... ಅಲ್ ಬದ್ರ್ ಮತ್ತು ಅಲ್ ಶಮ್ಸ್ ಬ್ರಿಗೇಡ್ ಹೆಸರಿನಲ್ಲಿ ರಜಾಕಾರರ ಎರಡು ಪಡೆಗಳು ತಯಾರಾದವು.  ಈ ಪಡೆಗಳಲ್ಲಿ ಹೆಚ್ಚಾಗಿ ಇದ್ದದ್ದು ಜಮಾತೆ ಇಸ್ಲಾಮಿ ಸಂಘಟನೆಯ ಮಂದಿ.  ಇವರೆಲ್ಲ ಹೆಚ್ಚಾಗಿ ಬಿಹಾರಿ ಮುಸ್ಲಿಮರೇ... 

ಪಾಕಿಸ್ತಾನದ ಸೈನ್ಯದ ಆಪರೇಷನ್ ಸರ್ಚ್ ಲೈಟ್ ಜೊತೆಗೆಯೇ ಈ ರಜಾಕಾರರ ಅನಧಿಕೃತ ಮಿಲಿಟರಿಯ ಭಯಾನಕ ಹಿಂಸಾಚಾರ ಯಾವುದೇ ಎಗ್ಗುಸಿಗ್ಗಿಲ್ಲದೆ ನಡೆಯಿತು... ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳೇ ಇವರ ಮುಖ್ಯ ಬೇಟೆಗಳಾದರು.... ಜೊತೆಗೆಯೇ ಪಾಕಿಸ್ತಾನವನ್ನು ವಿರೋಧಿಸಿ ಪ್ರತ್ಯೇಕ ಬಂಗಾಲಕ್ಕಾಗಿ ಹೊರಡುವ ಬಂಗಾಲೀ ಮುಸ್ಲಿಮರ ಮುಕ್ತಿವಾಹಿನಿಯೂ ಇವರ ಟಾರ್ಗೆಟ್ ಆಯಿತು. ಕೇವಲ ಕೇವಲ ಏಳೆಂಟು ತಿಂಗಳಲ್ಲೇ ಈ ರಕ್ತಪಿಪಾಸು ರಜಾಕಾರರ ಮತ್ತು ಪಾಕಿಸ್ತಾನ ಸೇನೆಯ ಭಯಾನಕ ದೌರ್ಜನ್ಯಕ್ಕೆ ಅಂದಾಜು ಮೂವತ್ತು ಲಕ್ಷ ಜನ ಪ್ರಾಣ ತೆತ್ತರು....! ಇಷ್ಟೂ ಜನರನ್ನು ಭೀಕರವಾಗಿ ಹತ್ಯೆಗೈಯ್ಯಲಾಯಿತು.... ಸುಮಾರು ನಾಲ್ಕು ಲಕ್ಷ ಹೆಣ್ಣು ಮಕ್ಕಳನ್ನು ಅತ್ಯಾಚಾರ ಎಸಗಿ ಕೊಲ್ಲಲಾಯಿತು... ಅಂದಿನ ಬಾಂಗ್ಲಾದ ಒಟ್ಟು ಜನಸಂಖ್ಯೆಯ ಶೇ. ನಾಲ್ಕುರಷ್ಟು ಜನರ ಹತ್ಯೆಯಾಯಿತು....! ಅಂದಿನ ಬಾಂಗ್ಲಾದ ಒಟ್ಟು ಹಿಂದೂಗಳ ಸಂಖ್ಯೆಯ ಇಪ್ಪತ್ತು ಶೇಕಡಾ ಜನರನ್ನು ಬರ್ಭರವಾಗಿ ಹತ್ಯೆಗೈಯ್ಯಲಾಯಿತು.... ಬಾಂಗ್ಲಾದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಅಲ್ಲಿನ ಪಾಕಿಸ್ತಾನೀ ಬೆಂಬಲಿತ ಮುಸ್ಲಿಂ ಮೌಲ್ವಿಗಳು ಬಹಿರಂಗವಾಗಿಯೇ ಬೆಂಬಲಿಸಿ ಇನ್ನಷ್ಟು ಅತ್ಯಾಚಾರವೆಸಗುವಂತೆ ಕರೆಕೊಟ್ಟರು... ಬಾಂಗ್ಲಾ ಮಹಿಳೆಯರನ್ನು (ಹಿಂದೂಗಳು ಮಾತ್ರವಲ್ಲ... ಮುಸ್ಲಿಮ ಮಹಿಳೆಯರೂ ಸೇರಿಸಿ) ಬಾಂಗ್ಲಾ ಮಹಿಳೆಯರನ್ನು "ಗೊನಿಮೋತೆರ್ ಮಾಲ್" ಅಂತ ಘೋಷಿಸಲಾಯಿತು (ಮಾಲ್ -ಈ-ಘನಿಮತ್  ಅನ್ನೋದು ಇಸ್ಲಾಮಿನ ಪ್ರಕಾರ ಯುದ್ಧದಲ್ಲಿ ಗೆದ್ದುಕೊಂಡಂಥ ಮಹಿಳೆಯರು... ಈ ಮಹಿಳೆಯರನ್ನು ಹೇಗೆ ಬೇಕಾದರೂ ಉಪಯೋಗಿಸುವ ಹಕ್ಕು ಯುದ್ಧದಲ್ಲಿ ಗೆದ್ದವರಿಗೆ ಇದೆ) ಪಾಕಿಸ್ತಾನದಲ್ಲಿದ್ದ ಸುನ್ನೀ ಧರ್ಮಗುರುಗಳು ಫತ್ವಾ ಹೊರಡಿಸಿ ಬಂಗಾಳಿ ಮಹಿಳೆಯರೆಲ್ಲಾ ಮುಸ್ಲಿಮರೇ ಅಲ್ಲ ... ಅವರೆಲ್ಲಾ ಹಿಂದೂಗಳು... ಅವರೆಲ್ಲ  ಮಾಲ್ -ಈ-ಘನಿಮತ್.... ಅವರನ್ನು ಪಾಕಿಸ್ತಾನದ ಸೈನ್ಯ ಹೇಗೆ ಬೇಕಾದರೂ ಬಳಸಿ ಕೊಳ್ಳಬಹುದು.... ಈ ಘೋಷಣೆ ಹೊರಬಿದ್ದ ಮೇಲೆ ಹೆಂಗಸರ ಮೇಲಿನ ಅತ್ಯಾಚಾರ ಇನ್ನಷ್ಟು ಭಯಾಂಕರವಾಗಿ ಬಿಟ್ಟಿತು... ಪಾಕಿಸ್ತಾನದ ಸೇನೆ ಮಹಿಳೆಯರನ್ನು ಮಾತ್ರವಲ್ಲ.. ಪುರುಷರನ್ನು ಕೂಡಾ ಅತ್ಯಾಚಾರಗೈದಿತು.... ಬಂಧಿಸಲ್ಪಟ್ಟ ಪುರುಷರು ಸುನ್ನತ್ ಮಾಡಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಪುರುಷರ ಮೇಲೂ ಪಾಕ್ ಸೈನಿಕರು ಅತ್ಯಾಚಾರ ಎಸಗಿದ್ದನ್ನು ನೆದರ್ಲ್ಯಾಂಡ್ ನ ಇತಿಹಾಸಕಾರ್ತಿ  ಜೆನ್ನೆಕೆರ್ ಆರೆನ್ಸ್ ದಾಖಲಿಸಿದ್ದಾರೆ... ಇಂತಹ ಲಕ್ಷಾಂತರ ಅತ್ಯಾಚಾರಗಳಿಂದ ಸಾವಿರಾರು ಮಹಿಳೆಯರು ಗರ್ಭಿಣಿಯರಾಗಿ ಬಾಂಗ್ಲಾದಲ್ಲಿ ಅಪ್ಪ ಯಾರೆಂದೇ ತಿಳಿಯದ ಗತಿಗೋತ್ರವಿಲ್ಲದ ಸಾವಿರಾರು ಮಕ್ಕಳು (ವಾರ್ ಚಿಲ್ಡ್ರನ್) ಹುಟ್ಟಿಕೊಂಡು ಒಂದು ರೀತಿಯ Bastard Societyಯೇ ಸೃಷ್ಟಿಯಾಯಿತು.... 

ಎಂಟು ತಿಂಗಳ ಕಾಲ ನಡೆದ ಈ ಭೀಕರ ಹತ್ಯಾಕಾಂಡ ಅತ್ಯಾಚಾರಗಳ ಸರಣಿ ಪ್ರಪಂಚದ ಅತ್ಯಂತ ಭಯಾನಕ ನರಮೇಧ ಪ್ರಕರಣಗಳಲ್ಲಿ ಒಂದಾಗಿದ್ದು ಈ ಪಟ್ಟಿಯಲ್ಲಿ ಬಾಂಗ್ಲಾ ನರಮೇಧ ಎಂಬ ಹೆಸರಿನಲ್ಲಿ ಹನ್ನೆರಡನೆಯ ಸ್ಥಾನ ಪಡೆದಿದೆ...  ಹೀಗೆ ಪಾಕಿಸ್ತಾನದ ಸೈನ್ಯ ಮತ್ತು ಮತಾಂಧ ರಜಾಕಾರರ ಹಿಂಸಾಚಾರಕ್ಕೆ ಗುರಿಯಾದ ಬಾಂಗ್ಲಾದಲ್ಲಿನ ಹಿಂದೂಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾರತದೊಳಕ್ಕೆ ಬರಲು ಶುರುಮಾಡಿದಾಗ ಭಾರತ ಸರಕಾರ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆ ಮಾಡಿದ್ದೂ... ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ಎರಡು ಗಡಿಯಲ್ಲೂ ಪಾಕಿಸ್ತಾನದ ಮೇಲೆ ದಾಳಿ ಸಂಘಟಿಸಿದ ಭಾರತ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿದ್ದು ಈಗ ಇತಿಹಾಸ. 

1971 ರ ಡಿಸೆಂಬರ್ ೧೬ನೇ ತಾರೀಕು ಬಾಂಗ್ಲಾದೇಶದೊಳಗಿದ್ದ ಸುಮಾರು ಎಂಭತ್ತೊಂಭತ್ತು ಸಾವಿರ ಪಾಕಿಸ್ತಾನೀ ಸೈನಿಕರು. ಸುಮಾರು ಹನ್ನೆರಡು ಸಾವಿರ ನಾಗರಿಕರು (ಇದರಲ್ಲಿ ಪಾಕ್ ಸೈನ್ಯಾಧಿಕಾರಿಗಳ ಕುಟುಂಬ ಸದಸ್ಯರು, ಒಂದುಷ್ಟು ರಜಾಕಾರರು ಸೇರಿದ್ದರು) ಹೀಗೆ 93,000+ ಜನರು ಭಾರತ ಸೇನೆಯೆದುರು ಶರಣಾದದ್ದು ಒಂದು ಐತಿಹಾಸಿಕ ಧಾಖಲೆ.  ಜಗತ್ತಿನ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮಿಲಿಟರಿ ಶರಣಾಗತಿ... 

ನಮ್ಮ ಭಾರತದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ ಷಾ ಅವರ ಯುದ್ಧತಂತ್ರದ ಪ್ರತಿಫಲವಿದು..  ಪಾಕಿಸ್ತಾನಿ ಸೈನ್ಯ ಮಣ್ಣು ಮುಕ್ಕಿತ್ತು.  ಭಾರತ ಪಾಕಿಸ್ತಾನದ ನಡು ಮುರಿದು ಎರಡು ಮಾಡಿತ್ತು ... ಬಾಂಗ್ಲಾ ಎಂಬ ಹೊಸ ದೇಶವನ್ನು ಹುಟ್ಟಿಸಿತ್ತು...

ಆ ದಿನವನ್ನು ಇಂದಿಗೂ ನಾವು ನೆನೆಯುವುದು ವಿಜಯ ದಿವಸ ಮೂಲಕವೇ.  

Related posts