Infinite Thoughts

Thoughts beyond imagination

ಅಗರ್ ವುಡ್ ಕೃಷಿ ಯೋಜನೆಗೆ ಕದಂಬ ಫೌಂಡೇಶನೇ ಹರಿಕಾರ ।

ಒಂದು ಲೆಕ್ಕಾಚಾರದ ಪ್ರಕಾರ ಅಗರ್ ವುಡ್ ಶ್ರೀಗಂಧಕ್ಕಿಂತಲೂ ಹೆಚ್ಚು ಲಾಭದಾಯಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕೃಷಿಯೇ ಪ್ರಧಾನ. ಹಲ ತಲೆಮಾರುಗಳಿಂದಲೂ ಇಲ್ಲಿನ ಬಹುತೇಕ ಕೃಷಿಕರು ಅಡಿಕೆಯನ್ನೇ ಪ್ರಧಾನ ಬೆಳೆಯನ್ನಾಗಿ ನಂಬಿಕೊಂಡಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ. ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆ, ರೋಗ ಭಾದೆ, ಇದೆಲ್ಲಾ ಸಂಕಷ್ಟಗಳ ಜೊತೆಗೆ ಇನ್ನೊಂದು ವಿಚಿತ್ರ ವಿಷಮ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರ ಸಿಲುಕಿಕೊಂಡಿದ್ದಾನೆ. ಅದೆಂದರೆ ಜಗತ್ತಿನಾದ್ಯಂತ ತಂಬಾಕು ಬಳಕೆಗೆ ಹೆಚ್ಚುತ್ತಿರುವ ವಿರೋಧ. ಅಡಿಕೆಗೆ ಇರುವ ಮಾರುಕಟ್ಟೆ ತಂಬಾಕಿನೊಂದಿಗೆ ತಳುಕು ಹಾಕಿಕೊಂಡಿರುವ ಕಾರಣ ತಂಬಾಕು ಬೆಳೆಗಾರರು ಕಷ್ಟಕ್ಕೆ ಸಿಲುಕಿಕೊಂಡಂತೆಯೇ ಅಡಿಕೆ ಬೆಳೆಗಾರ ಕೂಡಾ ಪರಿತಪಿಸುವಂತಾಗಿದೆ.

ಜಿಲ್ಲೆಯ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಕದಂಬ ಫೌಂಡೇಶನ್ ದಶಕಗಳಿಂದಲೂ ಮಾಡಿಕೊಂಡು ಬಂದಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಈಗಾಗಲೇ ಅಂತರ ಬೆಳೆಯಾಗಿ ಕೊಕೊ ವೆನಿಲಾ ಇತ್ಯಾದಿಗಳನ್ನು ಪ್ರೋತ್ಸಾಹಿಸಲು ಕದಂಬ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದರ ಜೊತೆಗೇ ಇಂದಿನ ಸಂಕಷ್ಟದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿಗೆ ನೆರವು ನೀಡಲು ಹಲವಾರು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಹಿಡಿಯಲು ನಿರಂತರ ಶ್ರಮ ವಹಿಸಿದ ಕದಂಬ ತಂಡ ಉತ್ತಮ ಪರಿಹಾರವಾಗಿ ಕಂಡುಕೊಂಡದ್ದು ಅಗರ್ ವುಡ್ ಕೃಷಿಯನ್ನು.

ಅಗರ್ ವುಡ್ ಅಂತ ಕರೆಸಿಕೊಳ್ಳುವ ಮರ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಿನ ಬೇಡಿಕೆಯಿರುವ ಔಧ್ ಎಂಬ ಸುವಾಸನಾ ದ್ರವ್ಯಕ್ಕೆ ಬಳಕೆಯಾಗುವಂಥದ್ದು, ಇದರ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖವಿರುವುದು ನಮ್ಮ ವೇದಗಳಲ್ಲೇ. ಹಾಗಾಗಿ ಸಾವಿರಾರು ವರ್ಷಗಳ ಹಿಂದೆಯೇ ಇದರ ಉಪಯೋಗ ಭಾರತೀಯರಿಗೆ ತಿಳಿದಿತ್ತು. ಸಂಸ್ಕೃತದಲ್ಲಿ ಇದನ್ನು ಅಗುರು ಅನ್ನುವ ಹೆಸರಿನಿಂದ ಕರೆಯುತ್ತಾರೆ. ಕನ್ನಡದಲ್ಲೂ ಅದೇ ಹೆಸರು ಬಳಕೆಯಲ್ಲಿದೆ. ಆಕ್ವಿಲೇರಿಯಾ ಅಂತ ವೈಜ್ಞಾನಿಕವಾಗಿ ಕರೆಯಲ್ಪಡುವ ಒಂದು ಸಸ್ಯಪ್ರಭೇಧವೇ ಅಗರ್ ವುಡ್. ಮಳೆಕಾಡುಗಳಲ್ಲಿ ಬೆಳೆಯುವ ಮರದಲ್ಲಿ ಸುಮಾರು ಹದಿನೇಳು ಉಪಜಾತಿಗಳಿವೆ.

ಮರಗಳಿಗೆ ಒಂದು ರೀತಿಯ ಶಿಲೀಂದ್ರ (ಫಂಗಸ್) ಸೋಂಕು ಉಂಟಾಗಿ ಮರಗಳ ತಿರುಳಿನ ಭಾಗದಲ್ಲಿ ದಟ್ಟ ಕಂದು - ಕಪ್ಪು ಬಣ್ಣದ ಅಂಟು ಸ್ರವಿಸುತ್ತದೆ ಮತ್ತು ಕೆಲ ವರ್ಷಗಳಲ್ಲಿ ಮರದ ತಿರುಳು ಗಟ್ಟಿಯಾಗಿ ಕಡು ಕಂದುಬಣ್ಣಕ್ಕೆ ತಿರುಗುತ್ತದೆ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು ಇದನ್ನು ಉರಿಸಿದರೆ ಆಹ್ಲಾದಕರವಾದ ಪರಿಮಳ ಬರುತ್ತದೆ. ಇದರಿಂದ ತೈಲವನ್ನೂ ತಯಾರಿಸಲಾಗುತ್ತದೆ. ಹಾಗಾಗಿ ಇದಕ್ಕೆ ಜಾಗತಿಕವಾಗಿ ಬಹಳಷ್ಟು ಬೇಡಿಕೆ ಮತ್ತು ಬಹಳ ಬೆಲೆಯೂ ಇದೆ. ಹೆಚ್ಚಾಗಿ ಯುರೋಪ್ ಮತ್ತು ಅರಬ್ ದೇಶಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಸುಗಂಧ ದ್ರವ್ಯ ತಯಾರಿಕಾ ಕೈಗಾರಿಕೆಗಳೂ ಇದನ್ನು ಬಳಸಿಕೊಂಡು ಅತ್ಯುಕೃಷ್ಟವಾದ ಸುಗಂಧವನ್ನು ತಯಾರಿಸುತ್ತದೆ. ಫ್ರಾನ್ಸ್ ದೇಶದ ಖ್ಯಾತ ಪರ್ಫ್ಯೂಮ್ ಕಂಪೆನಿಗಳು ಔಧ್ ಹೆಸರಿನ ಅತ್ಯುಕೃಷ್ಟ ಮತ್ತು ಅತಿ ಬೆಲೆಬಾಳುವ ಸುಗಂಧವನ್ನು ತಯಾರಿಸುತ್ತವೇ. ಹೀಗಾಗಿ ಅಗರ್ ವುಡ್ ಗೆ ಜಾಗತಿಕವಾಗಿ ಒಳ್ಳೆಯ ಬೇಡಿಕೆ ಮತ್ತು ಬೆಲೆ ಎರಡೂ ಇದೆ.

ಮಾಮೂಲಿಯಾಗಿ ದಟ್ಟ ಮಳೆಕಾಡುಗಳಲ್ಲಿ ಬೆಳೆಯುವ ಆಕ್ವಿಲೇರಿಯಾ ಪ್ರಭೇದದ ಹಲವಾರು ಉಪಜಾತಿಯ ಮರಗಳಿಗೆ ಒಂದು ನಿರ್ದಿಷ್ಟ ಶಿಲೀಂಧ್ರ ಸೋಂಕು ಉಂಟಾಗಿ ಮರದ ತಿರುಳಿನಲ್ಲಿ ಅಗರ್ ವುಡ್ ಉತ್ಪತ್ತಿಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಕ್ವಿಲೇರಿಯಾ ಜಾತಿಯ ಮರಗಳು ವಿನಾಶದ ಅಂಚಿನಲ್ಲಿದ್ದು ಕಾಡಿನಲ್ಲಿ ಸಹಜವಾಗಿ ಸಿಗುವ ಅಗರ್ ವುಡ್ ತೀರಾ ದುರ್ಲಭವಾಗಿದೆ.

ಹಾಗಾಗಿ ಅಗರ್ ವುಡ್ ಕೃಷಿ ಶುರುವಾಯಿತು. ಆಕ್ವಿಲೇರಿಯಾ ಮರಗಳಲ್ಲಿ ಕೆಲವು ಉಪಜಾತಿಗಳನ್ನು ಗುರುತಿಸಿ ಅವುಗಳಿಗೆ ಶಿಲೀಂಧ್ರವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಕೃತಕವಾಗಿ ಸೋಂಕಿಗೊಳಪಡಿಸಲಾಗುತ್ತದೆ. ಹೀಗೆ ಶಿಲೀಂದ್ರ ಸೋಂಕಿಗೊಳಗಾದ ಮರಗಳ ತಿರುಳಿನಲ್ಲಿ ವಿಶಿಷ್ಟ ಪರಿಮಳದ ಅಂಟು ಉತ್ಪತ್ತಿಯಾಗಿ ಕೆಲ ವರ್ಷಗಳಲ್ಲಿ ಅದು ತಿರುಳಿನ ತುಂಬಾ ವ್ಯಾಪಿಸಿ ಗಟ್ಟಿಯಾಗುತ್ತದೆ. ಇದೇ ಅಗರ್ ವುಡ್. ಭಾರತದಲ್ಲಿ ಮೊದಲಿಗೆ ಅಸ್ಸಾಮ್ ನಲ್ಲಿ ರೀತಿ ಅಗರ್ ವುಡ್ ಕೃತಕ ಕೃಷಿ ಪ್ರಾರಂಭವಾಯಿತು.

ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಳ ಬೆಲೆಯಿದೆ. ಅಗರವುಡ್ ಗಿರುವ ಮಾರುಕಟ್ಟೆಯಿಂದಾಗಿ ಅದು ಸಂಕಷ್ಠದ್ಲಲಿರುವ ಅಡಿಕೆ ಕೃಷಿಕರಿಗೆ ಒಳ್ಳೆಯ ವರಮಾನ ತರುವ ಉಪಬೆಳೆ ಯಾಗಬಹುದಾದ ಸಾಧ್ಯತೆಯನ್ನು ಮನಗಂಡು ಕದಂಬ ೨೦೦೯ ರಿಂದಲೇ ಇದರ ಬಗ್ಗೆ ಸಂಶೋಧನೆ ನಡೆಸಿದೆ.

ಅಗರ್ ವುಡ್ ಉತ್ತರ ಕನ್ನಡ ಜಿಲ್ಲೆಯ ಗುಡ್ಡ ಬೆಟ್ಟ ಪ್ರದೇಶ, ಅಲ್ಲಿನ ಮಣ್ಣು, ಅಲ್ಲಿನ ಮಳೆಯ ವಾತಾವರಣದಲ್ಲಿ ಚೆನ್ನಾಗಿಯೇ ಬೆಳೆಯುತ್ತದೆ ಎಂಬುದು ಮನದಟ್ಟಾದ ಮೇಲೆ ಕದಂಬ ಬೆಳೆಯನ್ನು ಉತ್ತರ ಕನ್ನಡಕ್ಕೆ ಪರಿಚಯಿಸುವ ಕೆಲಸಕ್ಕೆ ತೊಡಗಿತು. ಕರ್ನಾಟಕದಲ್ಲಿ ವನದುರ್ಗಿ ಅಗರ್ ವುಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿಟ್ಟಿನಲ್ಲಿ ತುಂಬಾ ವಿಸ್ತಾರವಾಗಿ ಕೆಲಸ ಮಾಡಿದೆ. ಕದಂಬ ಕಳೆದ ಹಲವಾರು ವರ್ಷಗಳಿಂದ ವನದುರ್ಗಿ ಸಂಸ್ಥೆಯ ಜೊತೆಗೂಡಿ ಕೆಲಸ ಮಾಡುತ್ತಿದೆ. ಕದಂಬ ಸಂಸ್ಥೆಯ ಪ್ರಯತ್ನದಿಂದಾಗಿ ಈಗ ಉತ್ತರಕನ್ನಡ ಜಿಲ್ಲೆಯಾದ್ಯಂತ ಸಾವಿರದೈನೂರು ಕೃಷಿಕರು ಅಗರ್ ವುಡ್ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಅಗರ್ ವುಡ್ ಕೃಷಿ ಪ್ರದೇಶವನ್ನು ಇನ್ನಷ್ಟು ವಿಸ್ತಾರಗೊಳಿಸಲು ಕದಂಬ ಸತತವಾಗಿ ಪ್ರಯತ್ನಿಸುತ್ತಿದೆ.

ಒಂದು ಲೆಕ್ಕಾಚಾರದ ಪ್ರಕಾರ ಅಗರ್ ವುಡ್ ಶ್ರೀಗಂಧಕ್ಕಿಂತಲೂ ಹೆಚ್ಚು ಲಾಭದಾಯಕ.

ಈಗಾಗಲೇ ಅಗರ್ ವುಡ್ ಕುರಿತ ಹಲವಾರು ಮಾಹಿತಿ ಕಾರ್ಯಾಗಾರಗಳನ್ನು ಕದಂಬ ಸಂಸ್ಥೆಯು ಜಿಲ್ಲೆಯಾದ್ಯಂತ ನಡೆಸುತ್ತ ಬಂದಿದೆ. ನಿಟ್ಟಿನಲ್ಲಿ ವನದುರ್ಗಿ ಸಂಸ್ಥೆಯ ಧರ್ಮೇಂದ್ರ ಹೆಗ್ಡೆ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಮೊದಲಿಗೆ ೨೦೦೯ ರಲ್ಲಿ ಅಗರ್ ವುಡ್ ಬೆಳೆಯ ಬಗ್ಗೆ ಮಾಹಿತಿ ನೀಡಲು ಒಂದು ಮಾಹಿತಿ ಕಾರ್ಯಾಗಾರವನ್ನು ಕದಂಬ ವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರಕ್ಕೆ ಹಲವಾರು ಪ್ರಗತಿಪರ ಕೃಷಿಕರು ಬಂದು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಶಿರಸಿ ಯಲ್ಲಿ ನಡೆದ ಪ್ರಥಮ ಕಾರ್ಯಾಗಾರದಲ್ಲೇ ಕೃಷಿಕರಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ನಾವು ತಡಮಾಡಲಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗರ್ ವುಡ್ ಕೃಷಿಯನ್ನು ದೊಡ್ಡ ಮಟ್ಟದಲ್ಲೇ ಪರಿಚಯಿಸಿದೆವು.

ವನದುರ್ಗಿ ಸಂಸ್ಥೆಯ ಧರ್ಮೇಂದ್ರ ಹೆಗ್ಡೆ ಮತ್ತು ಕದಂಬ ಸಂಸ್ಥೆಯ ವತಿಯಿಂದ ನಾನು ಮೊಟ್ಟಮೊದಲ ಇನ್ನೋಕ್ಯುಲೇಷನ್ ಕಾರ್ಯಕ್ರಮವನ್ನು ಸಿದ್ದಾಪುರದ ಗೋಳಿಮಕ್ಕಿಯಲ್ಲಿ ನಡೆಸಿದೆವು. ಇನ್ನೋಕ್ಯುಲೇಷನ್ ಅಂದರೆ ಅದೊಂದು ವೈಜ್ಞಾನಿಕ ಪ್ರಕ್ರಿಯೆ. ಮರಗಳ ಕಾಂಡಗಳಿಗೆ ತೂತು ಕೊರೆದು ನಂತರ ಶಿಲೀಂದ್ರಗಳ ದ್ರಾವಣವನ್ನು ಇಂಜೆಕ್ಷನ್ ಮೂಲಕ ಒಳಸೇರಿಸುವುದೇ ಇನ್ನೋಕ್ಯುಲೇಷನ್ ಪ್ರಕ್ರಿಯೆ. ಇದೇನಪ್ಪ ಮರಗಳಿಗೂ ಇಂಜೆಕ್ಷನ್ ಚುಚ್ಚಬೇಕಾ? ಅಂತ ಕೃಷಿಕರು ಗಾಬರಿಗೊಳ್ಳದಿರಲಿ ಅಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನೇ ಖುದ್ದಾಗಿ ಹಲವು ಮರಗಳಿಗೆ ಅಲ್ಲಿ ಸೇರಿದ್ದ ಕೃಷಿಕರ ಎದುರಿಗೇ ಇನ್ನೋಕ್ಯುಲೇಷನ್ ಮಾಡಿ ಅವರಲ್ಲಿರಬಹುದಾಗಿದ್ದ ಗೊಂದಲಗಳನ್ನು ದೂರ ಮಾಡಿದೆ. ಇನ್ನೋಕ್ಯುಲೇಷನ್ ಅನ್ನೋದು ತುಂಬಾ ಸರಳ ಸುಲಭ ಮತ್ತು ಇದನ್ನು ಮಾಡಲು ಸಮಯವೂ ತುಂಬಾ ಬೇಕಿಲ್ಲ... ಯಾರು ಬೇಕಾದರೂ ಕೊಂಚ ತರಬೇತಿ ಪಡೆದು ಮಾಡಬಹುದಾದ ಸಂಗತಿ ಎಂದು ಅಂತ ಅಂದು ಅವರೆಲ್ಲರಿಗೆ ಮನದಟ್ಟು ಮಾಡಿಸಿದೆ. ಇನ್ನೋಕ್ಯುಲೇಷನ್ ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು.

ಬಳಿಕ ಶಿರಸಿಯ ಶೀಗೇಹಳ್ಳಿಯಲ್ಲೂ ಇದೆ ರೀತಿಯ ಕಾರ್ಯಕ್ರಮ ನಡೆಯಿತು. ಇಲ್ಲೂ ನಾನೇ ಖುದ್ದಾಗಿ ಇನ್ನೋಕ್ಯುಲೇಷನ್ ಅನ್ನು ಎಲ್ಲರೆದುರಿಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದೆ. ಹೀಗೆ ೨೦೦೯ರಲ್ಲಿ ನಾವು ಕದಂಬ ಫೌಂಡೇಶನ್ ವತಿಯಿಂದ ನಮ್ಮ ಉತ್ತರಕನ್ನಡ ಜಿಲ್ಲೆಗೆ ಅಗರ್ ವುಡ್ ಕೃಷಿಯನ್ನು ಪರಿಚಯಿಸಿ ಅದಕ್ಕೆ ಬೇಕಾದ ಎಲ್ಲ ನೆರವು ನೀಡಿ ಪ್ರೋತ್ಸಾಹಿಸಿದೆವು. ಅಲ್ಲಿಂದ ನಿರಂತರವಾಗಿ ಕದಂಬ ಫೌಂಡೇಶನ್ ಅಗರ್ ವುಡ್ ಕೃಷಿಯನ್ನು ಬೆಂಬಲಿಸುತ್ತಾ, ವಿಸ್ತರಿಸುತ್ತ ಬಂದಿದೆ.

ಶಿರಸಿಯಲ್ಲಿ ಅಗರ್ ವುಡ್ ಸಸಿಗಳನ್ನು ಬೆಳೆಸಲಿಕ್ಕಾಗಿ ನರ್ಸರಿಯನ್ನು ಕೂಡಾ ಕದಂಬ ಪ್ರಾರಂಭಿಸಿತು. ೨೦೦೯ರಿಂದಲೂ ಜಿಲ್ಲೆಯಲ್ಲಿ ಅಗರ್ ವುಡ್ ಕೃಷಿಯ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕದಂಬ ಸಂಸ್ಥೆ, ಈಗ ವರ್ಷದಲ್ಲಿ ಮೊದಲ ಇಳುವರಿಯಾಗಿ ಮೂವತ್ತೆಂಟು ಕೋಟಿ ರೂಪಾಯಿಗೂ ಹೆಚ್ಚಿನ ಅಗರ್ ವುಡ್ ಉತ್ಪಾದನೆಯ ನಿರೀಕ್ಷೆಯಲ್ಲಿದೆ. ಇದರಿಂದಾಗಿ ಸುಮಾರು ಒಂದೂವರೆ ಸಾವಿರ ಕೃಷಿಕರ ಜೀವನದಲ್ಲಿ ಖುಷಿ ತರುವ, ಅವರ ಮೊಗದಲ್ಲಿ ಸಂತೃಪ್ತಿಯ ನಗು ಮೊಡಿಸುವ, ಆತಂಕವನ್ನು ದೂರಾಗಿಸಿ ನೆಮ್ಮದಿಯನ್ನು ತರುವ ಕೆಲಸ ಕದಂಬ ಫೌಂಡೇಶನ್ ನಿಂದ ಆಗಿದೆ ಎಂಬುದೇ ನಮಗೆ ಖುಷಿಯ ವಿಚಾರ.

Related posts