Infinite Thoughts

Thoughts beyond imagination

ಒಂದೇ ದೇಶ -ಒಂದೇ ತೆರಿಗೆ । ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ = ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್

ಮೊನ್ನೆ ಮಧ್ಯರಾತ್ರಿ ಐತಿಹಾಸಿಕ ಕ್ಷಣವೊಂದಕ್ಕೆ ಭಾರತ ಸಾಕ್ಷಿಯಾಯಿತು . ದೇಶದ ಎಪ್ಪತ್ತು ವರ್ಷದ ಹಳೆಯ ಆರ್ಥಿಕತೆ ಮೊನ್ನೆ ಮಧ್ಯರಾತ್ರಿಯ ಹೊತ್ತಿಗೆ ತನ್ನ ಮಗ್ಗುಲು ಬದಲಿಸಿತು. ಅದಕ್ಕಾಗಿಯೇ ಮಧ್ಯರಾತ್ರಿಯ ಐತಿಹಾಸಿಕ ಸಂಸತ್ ಜಂಟಿ ಅಧಿವೇಶನ ಏರ್ಪಾಡಾಗಿತ್ತು. ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ೧೯೪೭ರ ಆಗಸ್ಟ್ ೧೪ ನೇ ತಾರೀಕು ಮಧ್ಯರಾತ್ರಿಯಲ್ಲಿ ಇಂಥದ್ದೇ ಜಂಟಿ ಸಂಸತ್ ಅಧಿವೇಶನ ನಡೆದಿತ್ತು. ದಿನ ಭಾರತ ಬ್ರಿಟಿಷರ ದಾಸ್ಯ ದಿಂದ ಮುಕ್ತವಾಗಿ ಸ್ವತಂತ್ರ ದೇಶವಾಗಿ ಉದಯಿಸಿತ್ತು. ಇವತ್ತು ಎಪ್ಪತ್ತು ವರ್ಷಗಳ ಬಳಿಕ ಸಂಸತ್ತಿನ ಜಂಟಿ ಅಧಿವೇಶನವನ್ನು ದೇಶದ ಇತಿಹಾಸದಲ್ಲೇ ಬಹುಷಃ ನಾಲ್ಕನೆಯ ಬಾರಿಗೆ ಮಧ್ಯರಾತ್ರಿಯಲ್ಲಿ ಆಯೋಜಿಸಲಾಯಿತು . ( ಹಿಂದೆ ೧೯೭೨ರಲ್ಲಿ ಸ್ವಾತಂತ್ರ್ಯ ದಿನದ ೨೫ನೇ ವರ್ಷಾಚರಣೆಗೆ, ೧೯೯೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಐವತ್ತನೇ ವಾರ್ಷಿಕೋತ್ಸವಕ್ಕೆ ಮತ್ತು ಭಾರತದ ಸ್ವಾತಂತ್ರ್ಯ ದಿನದ ಐವತ್ತನೇ ವರ್ಷಾಚರಣೆಗೆ ಹೀಗೆಯೇ ಮಧ್ಯರಾತ್ರಿಯ ಅಧಿವೇಶನ ಕರೆಯಲಾಗಿತ್ತು) ಮೊನ್ನೆ ಮಧ್ಯರಾತ್ರಿ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುಳಿಯಿತು. ಮಧ್ಯರಾತ್ರಿ ಸರಿಯಾಗಿ ಹನ್ನೆರಡಕ್ಕೆ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಬಲ್ಲ ಜಿ.ಎಸ್.ಟಿ ಖಾಯ್ದೆ ಜಾರಿಯಾಯಿತು, ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಅಥವಾ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಮೂಲಕ ಮೊನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದೇಬಿಟ್ಟಿತು. ಎಪ್ಪತ್ತು ವರ್ಷಗಳ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶ ಹಲವಾರು ಚಿಕ್ಕಪುಟ್ಟ ಸಂಸ್ಥಾನಗಳಾಗಿ ವಿಭಜನೆಗೊಂಡಿತ್ತು. ಆಗ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಗಳಿಸಿದ್ದ ಗುಜರಾತಿ ಹಾಗು ಅಂದಿನ ದೇಶದ ಗೃಹ ಮಂತ್ರಿ ಸರ್ದಾರ್ ವಲ್ಲಭ್ ಭಾಯಿ ಪಟೇಲರು ದೇಶವನ್ನು ಒಂದುಗೂಡಿಸಿದರು. ಈಗ ಎಪ್ಪತ್ತು ವರ್ಷಗಳ ಬಳಿಕ ಆರ್ಥಿಕ ರಂಗದ, ತೆರಿಗೆ ವ್ಯವಸ್ಥೆಯೊಳಗೆ ಹರಿದು ಹಂಚಿ ಹೋಗಿದ್ದ ದೇಶ ಮತ್ತೊಮ್ಮೆ, ಮತ್ತೊಬ್ಬ ಗುಜರಾತಿ ಹಾಗು ಇಂದಿನ ದೇಶದ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟತನದ ಹೆಜ್ಜೆಯೊಂದಿಗೆ ಜಿ.ಎಸ್.ಟಿ ಖಾಯ್ದೆ ಜಾರಿಯಿಂದಾಗಿ ಒಂದಾಯಿತು.

ಹದಿನೇಳು ವರ್ಷಗಳ ಬಳಿಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ತೆರಿಗೆ ಪದ್ದತಿಯನ್ನು ಮೋದೀಜಿಯವರ ಸರಕಾರ ಜಾರಿಗೆ ತರುತ್ತಿರುವುದು ಒಂದು ಯೋಗಾಯೋಗ. ಆದರೆ ವಾಜಪೇಯಿಯವರ ಅನಾರೋಗ್ಯ ಹೊಸ ವ್ಯವಸ್ಥೆಯ ಉದ್ಘಾಟನೆಗೆ ಬರಲಾಗದಿರುವುದು ಮಾತ್ರ ಅತೀವ ನೋವಿನ ವಿದ್ಯಮಾನ. ಅವರದೆ ಕನಸು ಸಾಕಾರಗೊಳ್ಳುವ ಸಂದರ್ಭದಲ್ಲಿ ಅವರಿದ್ದು ಸಹ ಭಾಗಿಯಾಗದಿರುವುದು ದುರಂತವೇ ಸರಿ. ೨೦೦೦ನೇ ಇಸವಿಯಲ್ಲಿ ಅಂದಿನ ಪ್ರಧಾನಿ ವಾಜಪೇಯಿಯವರ ಕಾಲದಲ್ಲಿ ದೇಶಕ್ಕೊಂದೇ ತೆರಿಗೆ ವ್ಯವಸ್ಥೆ ಬೇಕೆಂಬ ಹಂಬಲದೊಂದಿಗೆ "ಜಿ.ಎಸ್.ಟಿ ಖಾಯ್ದೆ" ಕಲ್ಪನೆ ಹುಟ್ಟಿಕೊಂಡಿತು. ಆಗ ಪ್ರಪ್ರಥಮವಾಗಿ ಪಶ್ಚಿಮ ಬಂಗಾಳದ ಸಚಿವರಾಗಿದ್ದ ಅಸೀಮ್ ದಾಸ್ ಗುಪ್ತಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ತನ್ನ ಕಲ್ಪನೆಯ "ಜಿ.ಎಸ್.ಟಿ ಖಾಯ್ದೆ" ಗೆ ವಾಜಪೇಯಿ ಶ್ರಮಿಸಿದರು. ಬಳಿಕ ೨೦೦೩ರಲ್ಲಿ ಡಾ. ವಿಜಯ್ ಕೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ಇದಕ್ಕಾಗಿ ಟಾಸ್ಕ್ ಫೋರ್ಸ್ ಅನ್ನು ವಾಜಪೇಯಿಯವರು ರಚಿಸಿದ್ದರು. ಕೇಳ್ಕರ್ ೨೦೦೪ರಲ್ಲಿ ವರದಿ ನೀಡಿ ಹೊಸ ತೆರಿಗೆ ಪದ್ಧತಿಯನ್ನು ಸೂಚಿಸಿದರು. . "ಜಿ.ಎಸ್.ಟಿ ಖಾಯ್ದೆ" ಗೆ ಇದೇ ಮೂಲ ಆಧಾರ. ಹೀಗೆ ಹದಿನೇಳು ವರ್ಷಗಳ ಬಳಿಕ ಈಗ ಮಹತ್ವದ ಕಾಯ್ದೆ ಜಾರಿಯಾಗಿದೆ. ನಡುವೆ ಕಾಂಗ್ರೆಸ್ ನೇತೃತ್ವದ ಯು.ಪಿ.. ಸರಕಾರ ಕೂಡ ಜಿ.ಎಸ್.ಟಿ ಖಾಯ್ದೆ ರೂಪಿಸುವಲ್ಲಿ ತನ್ನ ಪಾತ್ರವನ್ನು ಸಹ ವಹಿಸಿತ್ತು. ಆದರೆ ಎಲ್ಲ ರಾಜ್ಯಗಳ ಸಹಮತ ಸಿಗಲು ಇಷ್ಟು ವರ್ಷಗಳಾದವು. ಹಲವಾರು ಬಾರಿ ಹಲವಾರು ಬದಲಾವಣೆಗಳಿಗೆ ಒಳಗಾಗಿ, ಹೊಸ ಖಾಯ್ದೆಯಿಂದ ರಾಜ್ಯಗಳ ಬೊಕ್ಕಸಕ್ಕೆ ಉಂಟಾಗುವ ನಷ್ಟವನ್ನು ಕೇಂದ್ರ ಸರಕಾರ ಮುಂದಿನ ಐದು ವರ್ಷಗಳ ಕಾಲ ತುಂಬಿಕೊಡಬೇಕೆಂಬ ಮಹತ್ವದ ಬೇಡಿಕೆಯೂ ಸೇರಿದಂತೆ ಎಲ್ಲ ರಾಜ್ಯಗಳ (ಅದರಲ್ಲಿ ಕಮ್ಯುನಿಸ್ಟ್, ಕಾಂಗ್ರೆಸ್, ಮತ್ತಿತರ ಪಕ್ಷಗಳು ಅಧಿಕಾರ ನಡೆಸುವ ರಾಜ್ಯಗಳೂ ಸೇರಿದಂತೆ) ಮುಖ್ಯಮಂತ್ರಿಗಳ, ವಿತ್ತ ಮಂತ್ರಿಗಳ ಒಪ್ಪಿಗೆಯನ್ನೂ ಪಡೆದು, ಎಲ್ಲ ಪ್ರತಿಪಕ್ಷಗಳ ಸಹಮತವನ್ನೂ ಪಡೆದು ಖಾಯ್ದೆ ಸಂಸತ್ತಿನಲ್ಲಿ ಒಪ್ಪಿತಗೊಂಡಿತು.

ಪ್ರಧಾನಮಂತ್ರಿ ಮೋದೀಜಿಯವರು ಕೂಡ ಹಿಂದಿನ ಎಲ್ಲಾ ಸರಕಾರಗಳ ಕೊಡುಗೆಯನ್ನೂ ಸ್ಮರಿಸಿದರು. ಇದು ಓರ್ವ ವ್ಯಕ್ತಿಯ ಅಥವಾ ಒಂದು ಸರಕಾರದ ಸಾಧನೆಯಲ್ಲ. ಇದರ ಶ್ರೇಯಸ್ಸು ಎಲ್ಲರಿಗೂ ಸೇರಬೇಕೆಂದು ಪ್ರಾಂಜಲ ಮನಸ್ಸಿನಿಂದ ಹೇಳಿದರು. ಎಲ್ಲರನ್ನೂ, ಎಲ್ಲಾ ಪಕ್ಷದವರನ್ನೂ ಒಳಗೊಳಿಸಬೇಕೆಂದು ಸರಕಾರ ಎಷ್ಟೇ ಪ್ರಯತ್ನಿಸಿದರೂ ಕಾಂಗ್ರೆಸಿಗರು, ಕಮ್ಯುನಿಷ್ಟರು, ಮತ್ತವರ ಬಾಲಂಗೋಚಿಗಳು ಎಲ್ಲದಕ್ಕೂ ಕೊಂಕು ನುಡಿಯುತ್ತಾ, ಎಲ್ಲದರಲ್ಲೂ ತಪ್ಪು ಹುಡುಕುತ್ತಾ ಇಲ್ಲದ ಕಾರಣ ಮುಂದೊಡ್ಡಿ ಐತಿಹಾಸಿಕ ಅಧಿವೇಶನಕ್ಕೆ ಗೈರು ಹಾಜರಾದರು. ಕಾಂಗ್ರೆಸ್ ಅಂತೂ ಜವಾಬ್ದಾರಿಯೇ ಇಲ್ಲದೆ " ಅಧಿವೇಶನ ಸ್ವಾತಂತ್ರ್ಯ ಸಿಕ್ಕಿದ ದಿನದ ಮೊತ್ತ ಮೊದಲ ಮಧ್ಯರಾತ್ರಿಯ ಅಧಿವೇಶನಕ್ಕೆ ಮಾಡುತ್ತಿರುವ ಅವಮಾನ" ಅಂತ ಹೇಳಿ ದೇಶದ ಅಭಿವೃದ್ಧಿಗೂ ತನಗೂ ಸಂಬಂಧವೇ ಇಲ್ಲದಂತೆ ವರ್ತಿಸಿತು.

ಜಿ. ಎಸ್.ಟಿ ಖಾಯ್ದೆ ಎಂಬುದನ್ನು ಜಾರಿಗೆ ತರುವುದು ಅಷ್ಟು ಸುಲಭದ ಸಂಗತಿಯೇನಾಗಿರಲಿಲ್ಲ. ಖಾಯ್ದೆ ಜಾರಿಗೆ ಬಂದರೆ ಅದರಿಂದ ಹೆಚ್ಚಿನ ತೊಂದರೆಯಾಗುವುದು ಕಳ್ಳ ವ್ಯಾಪಾರೀ ವರ್ಗಕ್ಕೇ ಮಾತ್ರ. ಅಂದರೆ ದೇಶದ ಕಾನೂನಿಗೆ ಮಣ್ಣೆರಚುತ್ತ ತೆರಿಗೆ ಕಳ್ಳತನ ಮಾಡುತ್ತಿದ್ದ ಕಳ್ಳ ವ್ಯಾಪಾರಿಗಳಿಗೆ ಹಿಂದೆಲ್ಲಾ ಬಿಲ್ಲುಗಳನ್ನೇ ಮಾಡದೆ, ಮೂಲಕ ಸರಕಾರಕ್ಕೆ ತೆರಿಗೆ ಕೊಡದೆ ವಂಚಿಸುತ್ತಿದ್ದ ವ್ಯಾಪಾರಿಗಳು ದೇಶದಲ್ಲಿ ಕಪ್ಪು ಹಣ ಹೆಚ್ಚಲು ನೇರ ಕಾರಣ ವಾಗಿದ್ದರು. ರಾಜಕೀಯ ಪಕ್ಷಗಳು ಇಂಥಹ ಪ್ರಭಾವಿ ವ್ಯಕ್ತಿಗಳನ್ನು ಎದುರುಹಾಕಿಕೊಳ್ಳುವ ಧೈರ್ಯ ಮಾಡುವುದು ಕಷ್ಟವಿತ್ತು. ಆದರೆ ಮೋದೀಜಿಯವರು ನೋಟು ರದ್ದು ಮಾಡಿದಂಥದ್ದೇ ರೀತಿಯಲ್ಲಿ ಬಹಳ ಕಟ್ಟುನಿಟ್ಟಿನ, ಬಹಳ ಪಾರದರ್ಶಕವಾದ ಜಿ.ಎಸ್.ಟಿ ಖಾಯ್ದೆ ಜಾರಿಗೆ ತಂದೆ ಬಿಟ್ಟರು. ನೋಟು ರದ್ದತಿಯನ್ನು ಆಗ ಯಾರೆಲ್ಲಾ ವಿರೋಧಿಸಿದ್ದರೋ ಅವರೇ ಇವತ್ತು ಜಿ.ಎಸ್.ಟಿ ಯನ್ನೂ ವಿರೋಧಿಸುತ್ತಿದ್ದಾರೆ. ಆದರೆ ನೇರವಾಗಿ ಹೇಳಿದರೆ ತಾವೇ ಕಳ್ಳರೆಂದು ಬಿಂಬಿತರಾಗುತ್ತೇವೆ ಹಾಗು ಧೈರ್ಯ ಸಾಲದೇ ಇಲ್ಲದ ಸಬೂಬು ಹೇಳುತ್ತಿದ್ದಾರೆ. ನೋಟು ಬ್ಯಾನ್ ಆದ ಮೇಲೆ ಮತ್ತು ಆನಂತರ ಜಾರಿಗೆ ಬಂದ ಆಸ್ತಿ ಖಾಯ್ದೆಯಿಂದಾಗಿ ಇವತ್ತು ಕೇಂದ್ರ ಸರಕಾರದ ಬಳಿಯಲ್ಲಿ ದೇಶದ ಹಣವಂತರ ವ್ಯವಹಾರದ ಜಾತಕವೆಲ್ಲ ಇದೆ. ಹಾಗಾಗಿಯೇ ದೇಶಾದ್ಯಂತ ನಿರಂತರ ದಾಳಿಗಳಾಗುತ್ತಿವೆ. ಈಗ ಜಿ.ಎಸ್.ಟಿ ಖಾಯ್ದೆ ಕೂಡಾ ಜಾರಿಯಾಗಿರೋದರಿಂದ ದೇಶದಲ್ಲಿ ಯಾರೂ ಕೂಡಾ ತೆರಿಗೆಗಳ್ಳತನ ಮಾಡಲು ಸಾಧ್ಯವೇ ಇಲ್ಲದಂಥ ಬಿಗಿ ಕಾನೂನು ಬಂತು. ನೋಟು ರದ್ಧತಿಯಿಂದಾಗಿ ಏನು ಪ್ರಯೋಜನವಾಯಿತು ಅಂತ ಬಾಯಿಬಡಿದುಕೊಳ್ಳುವ ಕಾಂಗ್ರೆಸ್ ಮತ್ತವರ ಬಾಲಂಗೋಚಿಗಳಿಗೆ ಸರಿಯಾದ ಉತ್ತರವೇ ಸಿಕ್ಕಿತ್ತು.

ಇಡೀ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇಕಡ ನಾಲ್ಕರಷ್ಟು ಜನ ಮಾತ್ರ ಆದಾಯ ತೆರಿಗೆ ಕಟ್ಟುತ್ತಿದ್ದರು. ಅದರಲ್ಲೂ ಕೇವಲ ೪೯ ಸಾವಿರ ಜನ ಮಾತ್ರ ವರ್ಷಕ್ಕೆ ಒಂದು ಕೋಟಿಯಷ್ಟು ವರಮಾನ ತೋರಿಸುತ್ತಿದ್ದರು. ನಮ್ಮ ದೇಶದ ನೂರಿಪ್ಪತ್ತು ಕೋಟಿ ಜನರ ಪೈಕಿ ಕೇವಲ ೨೫ ಲಕ್ಷ ಜನರಷ್ಟೇ ಆದಾಯ ತೆರಿಗೆ ಪಾವತಿಸುತ್ತಿದ್ದರು.! ಆದರೆ ನಮ್ಮ ದೇಶದಲ್ಲಿ ಪ್ರತಿವರ್ಷವೂ ೨೫ ಲಕ್ಷ ಕಾರುಗಳು ಮಾರಾಟವಾಗುತ್ತಿದ್ದವು.! ಆದರೆ ನೋಟು ರದ್ದಾದ ಬಳಿಕ ಹೊಸದಾಗಿ ೯೧ ಲಕ್ಷ ಜನ ಆದಾಯ ತೆರಿಗೆ ಸಲ್ಲಿಸತೊಡಗಿದ್ದಾರೆ ! ಹೇಗಿದೆ ಮೋದೀಜಿಯವರ ಮ್ಯಾಜಿಕ್ಕು!

ಜಿ.ಎಸ್.ಟಿ ಖಾಯ್ದೆಯ ಅಡಿಯಲ್ಲಿ ಇಂದು ರೂಪಿತ ಗೊಂಡಿರುವುದು ತೆರಿಗೆ ಸಹ ಸಾಮಾಜಿಕ ಕಳಕಳಿಯೊಂದಿಗೆ ಜೋಡಿಸಿಕೊಂಡಿದೆ. ಬಡ ಜನರು ಉಪಯೋಗಿಸುವ ವಸ್ತುಗಳಿಗೆ Tax Exemption ಅಥವ ಶೇಕಡ ರಷ್ಟು ಮಾತ್ರ ತೆರಿಗೆ ಕಂಡರೆ, ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳಿಗೆ ಶೇಕಡ ೧೨ ರಷ್ಟು ತೆರಿಗೆ ರೂಪಿಸಲಾಗಿದೆ. ಇನ್ನು ಅತ್ಯಂತ ಶ್ರೀಮಂತ ಮತ್ತು ಅಹಿತಕರ ವಸ್ತುಗಳಿಗೆ ಶೇಕಡ ೨೮ ರಷ್ಟು ತೆರಿಗೆ ವಿಧಿಸಿ ಮೋದಿಯವರ ಸರ್ಕಾರ ಜನಪರವೆಂದು ಸಾಬೀತು ಪಡಿಸಿದೆ.

ಕಳ್ಳ-ಲೆಖ್ಖ ಬರೆದು ಕಾರುಗಳಲ್ಲಿ ಓಡಾಡುತ್ತಿದ್ದವರೆಲ್ಲಾ ತೆರಿಗೆ ಕಟ್ಟದೆ ದೇಶಕ್ಕೆ ವಂಚಿಸುತ್ತಿದ್ದಾರಲ್ಲಾ ... ಅಂಥವರೆಲ್ಲಾ ಈಗ ತೆಪ್ಪಗೆ ಬಾಯಿ ಮುಚ್ಚಿಕೊಂಡು ತೆರಿಗೆ ಕಟ್ಟತೊಡಗಿದ್ದಾರೆ. ನೋಟು ಬ್ಯಾನ್ ಆದ ನಂತರ ಕೇಂದ್ರ ಸರಕಾರಕ್ಕೆ ಬರುವ ಸೆಂಟ್ರಲ್ ಎಕ್ಸೈಸ್ ಡ್ಯೂಟಿ ಶೇಕಡಾ ೩೩. ರಷ್ಟು ಹೆಚ್ಚಿತು! ಇದು ಕೇವಲ ಮೂರೇ ತಿಂಗಳಲ್ಲಾದ ಬದಲಾವಣೆ! ಈಗ ಜಿ.ಎಸ್.ಟಿ ಖಾಯ್ದೆ ಬಂದ ಮೇಲೆ ಯಾವುದೇ ವ್ಯಾಪಾರಿಗೂ ಬಿಲ್ ಇಲ್ಲದೆ ವ್ಯಾಪಾರ ಮಾಡುವುದು ಸಾಧ್ಯವೇ ಇಲ್ಲ! ಆರಂಭಿಕ ಹಂತದಲ್ಲಿ ಕಾಯ್ದೆ ಜಾರಿಗೆ ಕೆಲವೊಂದು ತೊಡಕುಂಟಾಗಬಹುದಾದರೂ ಸ್ವಲ್ಪವೇ ಸಮಯದಲ್ಲಿ ಎಲ್ಲವೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಹಾಗಾದಾಗ ಕಪ್ಪು ಹಣದ ಉತ್ಪತ್ತಿಯೇ ಅದರಲ್ಲೂ ಸಾಮನ್ಯರಲ್ಲಿ ಸಹ ಆಗದಂಥ ಪರಿಸ್ಥಿತಿ ಉಂಟಾಗುತ್ತದೆ. ಈಗ ನಮ್ಮ ನಿಮ್ಮಂಥ ಜನ ಸಾಮಾನ್ಯರು ಅಂಗಡಿಗಳಲ್ಲಿ ಯಾವುದೇ ವಸ್ತು ತೆಗೆದುಕೊಂಡರೂ ಬಹುತೇಕ ಅಂಗಡಿಯವರು ನಮಗೆ ಬಿಲ್ ಕೊಡುವುದಿಲ್ಲವಾದರೂ ನಮ್ಮ ಬಳಿ ತೆರಿಗೆ ಸೇರಿಸಿಯೇ ದರ ವಸೂಲು ಮಾಡುತ್ತಾರೆ. ಆದರೆ ಹಾಗೆ ನಮ್ಮಲ್ಲಿ ವಸೂಲು ಮಾಡಿದ ತೆರಿಗೆಯನ್ನು ಸರಕಾರಕ್ಕೆ ಕಟ್ಟದೇ ವಂಚಿಸುತ್ತಾರೆ. ಆದರೆ ಜಿ.ಎಸ್.ಟಿ ಖಾಯ್ದೆ ಜಾರಿಯಾದ ಮೇಲೆ ಹಾಗೆ ಮಾಡುವುದು ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಏರ್ಪಡುತ್ತದೆ. ಯಾಕಂದರೆ ತೆರಿಗೆ ಪಾವತಿಯ ಕೆಲಸಗಳೆಲ್ಲ ಆನ್ ಲೈನ್ ಮೂಲಕವೇ ಆಗುತ್ತದೆ... ತೆರಿಗೆ ವಂಚಿಸುವುದು ಅಸಾಧ್ಯವೇ ಸರಿ.

ಹಾಗಾಗಿ ಮೋದೀಜಿಯವರ ಎದೆಗಾರಿಕೆಗೆ ಮೆಚ್ಚಲೇ ಬೇಕು. ಇಷ್ಟರವರೆಗೆ ದೇಶ ಕಂಡ ಯಾವ ರಾಜಕಾರಣಿಯೂ ಎದುರು ಹಾಕಿಕೊಳ್ಳಲು ಧೈರ್ಯ ಮಾಡದ ವರ್ಗವೊಂದನ್ನು ಮೋದೀಜಿಯವರು ಧೈರ್ಯದಿಂದ ಎದುರಿಸಿದ್ದಾರೆ. ದೇಶವನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ಯಲು ಎಂಥ ರಿಸ್ಕ್ ಬೇಕಾದರೂ ತೆಗೆದುಕೊಳ್ಳಬಲ್ಲೆ ಎಂಬ ಸಂದೇಶವನ್ನು ಸ್ಪಷ್ಟವಾಗಿಯೇ ಸಾರಿದ್ದಾರೆ.

ನಿಜಕ್ಕೂ ತಾವು ಬಂಡವಾಳಶಾಹಿಗಳ ವಿರುದ್ಧ ಇರುವವರು ಅಂತ ಬಂಬಡಾ ಬಜಾಯಿಸುವ ಎಡಪಂಥೀಯರು, ಸಮಾಜವಾದಿಗಳು, ಸಮಾಜವಾದಿಗಳ ವೇಷ ಹಾಕಿಕೊಂಡಿರುವ ಕಾಂಗ್ರೆಸಿಗರು, ಮತ್ತವರ ಭಟ್ಟಂಗಿಗಳು ನಿಜಕ್ಕಾದರೆ ಜಿ.ಎಸ್.ಟಿ ಖಾಯ್ದೆಯನ್ನು ಬೆಂಬಲಿಸಬೇಕು. ಯಾಕಂದರೆ ಖಾಯ್ದೆಯಿಂದಾಗಿ ಬಂಡವಾಳಶಾಹಿಗಳು ತೆರಿಗೆ ವಂಚಿಸುವಂತೆಯೇ ಇಲ್ಲ. ಯಾವುದೇ ದೊಡ್ಡ ವ್ಯಾಪಾರಸ್ಥರೂ ಜಿ.ಎಸ್.ಟಿ ಖಾಯ್ದೆಯಿಂದ ಬಚಾವಾಗುವುದು ಸಾಧ್ಯವೇ ಆಗದ ಮಾತು. ಹಾಗಾಗಿಯೇ ಶ್ರೀಮಂತ ಬಂಡವಾಳಶಾಹಿಗಳು ಜಿ.ಎಸ್.ಟಿ ಖಾಯ್ದೆಯನ್ನು ಶತಾಯಗತಾಯ ವಿರೋಧಿಸಬೇಕು... ಆದರೆ ವಿಪರ್ಯಾಸ ನೋಡಿ ಈಗ ಖಾಯ್ದೆ ವಿರುದ್ಧ, ಬಿಜೆಪಿ ನೇತೃತ್ವದ ಎನ್.ಡಿ. ವಿರುದ್ಧ, ಪ್ರಧಾನಿ ಮೋದೀಜಿಯವ ವಿರುದ್ಧ ಬಾಯಿ ಬಾಯಿ ಬಡಿದುಕೊಳ್ಳುವವರು ಇದೇ ಎಡಪಂಥೀಯರು, ಸಮಾಜವಾದಿಗಳು. ಕಾಂಗ್ರೆಸಿಗರು ಇತ್ಯಾದಿ.!

ಏನೇ ಆಗಲಿ ಬಹು ನಿರೀಕ್ಷೆಯ ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ ಕಾಯ್ದೆ ಜಾರಿಯಾಗಿದೆ. ಇದು ಸಂಪೂರ್ಣವಾಗಿ ಪರಿಪಕ್ವವಾಗಿ ಜಾರಿಯಾಗಲು ಕೊಂಚ ಸಮಯ ಬೇಕಾಗಬಹುದು. ಹಾಗಾಗಿ ಜನಸಾಮಾನ್ಯರ ಮೇಲೆ ಇದು ಪರಿಣಾಮ ಬೀರುವಂತಾಗಲೂ ಕೆಲ ಸಮಯ ಬೇಕಾಗುತ್ತದೆ. ಎಲ್ಲವೂ ಕಂಪ್ಯೂಟರ್ ಮತ್ತು ಅಂತರ್ಜಾಲದ ಮೂಲಕವೇ ಆಗುವುದರಿಂದ ಹೆಚ್ಚಿನ ಪಾರದರ್ಶಕತೆ ಇರುತ್ತದೆ. ವಂಚನೆ ಸಾಧ್ಯವಾಗದ ಮಾತು. ಇಡೀ ದೇಶಕ್ಕೊಂದೇ ತೆರಿಗೆ. ಇದು ಮುಂದೆ ಇಡೀ ದೇಶಕ್ಕೊಂದೇ ಕಾನೂನು, ಎಲ್ಲರಿಗೂ ಒಂದೇ ಕಾನೂನು ಎಂಬ ಆಶಯದ ಮೊದಲ ಹೆಜ್ಜೆ. ಸ್ವಲ್ಪ ತಾಳ್ಮೆಯಂತೂ ಬೇಕು. ಅದು ನಮ್ಮ ಭಾರತೀಯರಲ್ಲಿ ಖಂಡಿತ ಇದೆ.

ಮೋದೀಜಿಯವರು ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ ಎಂಬುದಕ್ಕೆ ಹೊಸದೊಂದು ವ್ಯಾಖ್ಯಾನವನ್ನು ನೀಡಿದ್ದಾರೆ. ಜಿ.ಎಸ್.ಟಿ. ಅಂದರೆ ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ ಹೇಗೋ ಹಾಗೆಯೇ ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್ ಕೂಡಾ ಹೌದು. ಇವತ್ತು ಖಾಯ್ದೆಯನ್ನು ವಿರೋಧಿಸಿದವರೆಲ್ಲಾ ಮುಂದೊಂದು ದಿನ ಹಾಸ್ಯಾಸ್ಪದವಾಗುವುದು ಖಂಡಿತ!!

Related posts