Infinite Thoughts

Thoughts beyond imagination

ರಾಷ್ಟ್ರಪತಿ ಭವನಕ್ಕೆ ರಾಮನಾಥ ಕೋವಿಂದ । ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗತಿ ಗೋವಿಂದ ....!

ಪ್ರಧಾನಿ ಮೋದೀಜಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಜಿ ರಾಷ್ಟ್ರಪತಿ ಚುನಾವಣೆಗೆ ಬಿಹಾರದ ರಾಜ್ಯಪಾಲ ರಾಮನಾಥ ಕೋವಿಂದರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಬಹುತೇಕ ಎಲ್ಲಾ ರಾಜಕೀಯ ಪಂಡಿತರೂ ಆಶ್ಚರ್ಯಚಕಿತರಾಗಿದ್ದರು. ಅದೊಂದು ರೀತಿಯಲ್ಲಿ ಅತ್ಯಂತ ಚಾಣಾಕ್ಷ ರಾಜಕೀಯ ನಡೆಯಾಗಿದ್ದು ಅಲ್ಲದೆ ರಾಮನಾಥ ಕೋವಿಂದ ಸಹ ರಾಷ್ಟ್ರಪತಿ ಸ್ಥಾನಕ್ಕೆ ಅತ್ಯಂತ ಯೋಗ್ಯ ಆಯ್ಕೆಯಾಗಿದ್ದರು.

ಉತ್ತರ ಪ್ರದೇಶದ ಕಾನ್ಪುರದ ಬಳಿಯ ಪರೌಖ್ ಎಂಬ ಸಣ್ಣ ಹಳ್ಳಿಯ ಬಡ ದಲಿತ ಮನೆಯಲ್ಲಿ ಹುಟ್ಟಿದ್ದ ಕೋವಿಂದ ಬಳಿಕ ತಮ್ಮ ಪ್ರಯತ್ನ ಮತ್ತು ಪ್ರತಿಭೆಯಿಂದಲೇ ಅಸಾಧಾರಣ ಸಾಧನೆ ಮಾಡಿದವರು. ಅತ್ಯಂತ ಕಠಿಣವೆಂದೇ ಭಾವಿಸಲಾಗುವ ..ಎಸ್. ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದ ಪ್ರತಿಭಾವಂತ ಕೋವಿಂದ ನಂತರ ಸರಕಾರೀ ಕೆಲಸಕ್ಕೆ ಸೇರದೆ ದೆಹಲಿಯಲ್ಲಿ ವಕೀಲವೃತ್ತಿಯಲ್ಲೇ ಮುಂದುವರಿದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡು, ದಲಿತ ಮತ್ತು ಹಿಂದುಳಿದವರಿಗೆ ಉಚಿತವಾಗಿ ಕಾನೂನು ನೆರವನ್ನು ನೀಡತೊಡಗಿದರು.

ತುರ್ತುಪರಿಸ್ಥಿತಿಯ ನಂತರ ಅಧಿಕಾರಕ್ಕೆ ಬಂದ ಜನತಾ ಸರಕಾರದ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿಯವರಿಗೆ ಆಪ್ತ ಸಹಾಯಕರಾಗಿದ್ದರು. ಬಳಿಕ ಭಾರತ ಸರಕಾರದ ಪರ ಸುಪ್ರೀಂ ಕೋರ್ಟ್ ನಲ್ಲಿ ಖಾಯಂ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾದ ಕೋವಿಂದರು ಸಂಸತ್ತಿನ ಹಲವಾರು ಉಪಸಮಿತಿಗಳಲ್ಲಿ ಅದ್ವಿತೀಯ ಸೇವೆಸಲ್ಲಿಸಿ ನಂತರ ಬಿಹಾರದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಇಂಥಾ ಪ್ರತಿಭಾವಂತ ನಿಷ್ಕಳಂಕ ವ್ಯಕ್ತಿತ್ವದ ರಾಮನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದಾಗ ದೇಶದ ಮಾಧ್ಯಮಗಳೆಲ್ಲವೂ ಅವರನ್ನು ಸಂಘ ಪರಿವಾರದ ಓರ್ವ ದಲಿತ ಅಭ್ಯರ್ಥಿ ಎಂಬಂತೆಯೇ ಬಿಂಬಿಸಿದವು. ಹೀಗೆ ದಲಿತ ಎನ್ನುವ ಮೂಲಕ ಅವರ ಅರ್ಹತೆ ಯನ್ನೇ ಕಡೆಗಣಿಸಿದವು.

ಅದಕ್ಕಾಗಿಯೇ ಕಾಂಗ್ರೆಸ್ ಅನಿವಾರ್ಯವಾಗಿ ತಾನೂ "ದಲಿತ ಮಹಿಳೆ"ಯೆಂಬ ನೆಲೆಯಲ್ಲಿ ಹಿಂದೆ ದೇಶದ ಉಪಪ್ರಧಾನಿಯಾಗಿದ್ದ ಜಗಜೀವನರಾಂ ಮಗಳಾದ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿತು. ಒಂದೊಮ್ಮೆ ಮೈಮುನಾ ಬೇಗಮ್ ನಂಬಿಕೆಯ ಬಂಟನಾಗಿದ್ದ ಜಗಜೀವನರಾಂ ತುರ್ತು ಪರಿಸ್ಥಿತಿ ಸಮಯದಲ್ಲೂ ಆಕೆಯ ಜತೆಗೇ ಇದ್ದು ಪಾಪದ ದಿನಗಳಲ್ಲಿ ಭಾಗಿಯಾಗಿ ಕೊನೇ ಕ್ಷಣದಲ್ಲಿ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಹವೆ ಅರಿತು, ಪಕ್ಷ ತೊರೆದು ವಿಪಕ್ಷಗಳ ಜೊತೆಗೆ ಸೇರಿಕೊಂಡವರು. ನಂತರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಜನತಾ ಪಕ್ಷ ಅಧಿಕಾರ ಹಿಡಿದಾಗ ಮೊರಾರ್ಜಿ ದೇಸಾಯಿ ಪ್ರಧಾನಿಯಾದರೆ ಜಗಜೀವನರಾಮ್ ಉಪಪ್ರಧಾನಿಯಾದರು. ಇದೆ ಸಮಯದಲ್ಲಿ ರಾಮನಾಥ ಕೊವಿಂದರು ಪ್ರಧಾನಿ ಮೊರಾರ್ಜಿ ದೇಸಾಯಿಯವರಿಗೆ ಆಪ್ತ ಸಹಾಯಕರಾಗಿದ್ದದ್ದು. ತಂದೆಯಂತೆಯೇ ಮಗಳು ಮೀರಾ ಕುಮಾರ್ ಕೂಡಾ ಕಾಂಗ್ರೆಸ್ ನಿಂದಲೇ ಲೋಕಸಭೆಗೆ ಆಯ್ಕೆಯಾದವರು ಆದರೆ ೨೦೦೦ನೇ ಇಸವಿಯಲ್ಲಿ ಸೋನಿಯಾ ಗಾಂಧೀ ಅಧ್ಯಕ್ಷರಾಗಿದ್ದಾಗಲೇ ಮುನಿಸಿಕೊಂಡು ಕಾಂಗ್ರೆಸ್ ತೊರೆದಿದ್ದರು ಮತ್ತು ಎರಡು ವರ್ಷದ ಬಳಿಕ ಮತ್ತೆ ಮರಳಿದ್ದರು.

ಒಂದು ಲೆಕ್ಕದಲ್ಲಿ ಮೀರಾ ಕುಮಾರ್ ಮತ್ತು ರಾಮನಾಥ ಕೋವಿಂದ ಇಬ್ಬರೂ ಸಮಕಾಲೀನರು. ಒಂದೇ ವಯಸ್ಸಿನವರು. ಆದರೆ ಅವರಿಬ್ಬರೂ ಬೆಳೆದ ರೀತಿ ಮಾತ್ರ ಬಹಳ ವ್ಯತ್ಯಾಸವಿದೆ. ಮೀರಾ, ಇಂಡಿಯನ್ ಫಾರಿನ್ ಸರ್ವಿಸ್ ಪರೀಕ್ಷೆ ಪಾಸು ಮಾಡಿ ಕೆಲವರ್ಷ ವಿದೇಶಾಂಗ ಇಲಾಖೆಯಲ್ಲಿ ರಾಯಭಾರಿಯಾಗಿ ಸೇವೆಸಲ್ಲಿಸಿದವರು. ರಾಮನಾಥರು ..ಎಸ್. ಪರೀಕ್ಷೆ ಪಾಸು ಮಾಡಿದ್ದರೂ ಸರಕಾರೀ ಸೇವೆಗೆ ಸೇರಲಿಲ್ಲ. ಆದರೆ ಮೀರಾಗಿಂತಲೂ ಮೊದಲೇ ದೆಹಲಿಯ ರಾಜಕೀಯ ಪಡಸಾಲೆಯೊಳಗೆ ಪ್ರವೇಶ ಮಾಡಿದ ರಾಮನಾಥರು ಮೀರಾ ತಂದೆ ಜಗಜೀವನರಾಂ ಉಪಪ್ರಧಾನಿಯಾಗಿದ್ದ ವೇಳೆಯೇ ಪ್ರಧಾನಿ ಮೊರಾರ್ಜಿಯವರ ಆಪ್ತ ಸಹಾಯಕರಾಗಿದ್ದರು. ಹಾಗಾಗಿ ಮೀರಾ ತಂದೆ ಜಗಜೀವನರಾಮ್ ಅವರ ಜೊತೆಗೂ ಒಡನಾಟ ಇದ್ದವರು.

ಮೀರಾ ಮತ್ತು ಅವರ ತಂದೆ ಜಗಜೀವನರಾಮ್ ಅಲ್ಪಕಾಲವಾದರೂ ತಮ್ಮ ಮೂಲ ಪಕ್ಷ ಕಾಂಗ್ರೆಸ್ ತೊರೆದು ಹೊರಹೋಗಿದ್ದರೆ, ಎಳವೆಯಲ್ಲೇ ಸಂಘಪರಿವಾರದ ಸಖ್ಯ ಬೆಳೆಸಿಕೊಂಡ ರಾಮನಾಥರದು ಮಾತ್ರ ಅಖಂಡವಾದ ಪಕ್ಷ ನಿಷ್ಠೆ. ಮೀರಾ ಕುಮಾರ್ ಖ್ಯಾತ ತಂದೆಯ ಮಗಳಾಗಿ ಜನಿಸಿದರೆ, ಕೋವಿಂದರು ಓರ್ವ ಬಡ ತಂದೆಯ ಮಗನಾಗಿ ಜನಿಸಿದರು. ಮೀರಾ ಅತ್ಯುತ್ತಮ ಶಾಲೆ ಮತ್ತು ಕಾಲೇಜುಗಳಲ್ಲಿ ಓದಿ .ಎಫ್.ಎಸ್. ಪರೀಕ್ಷೆ ಪಾಸು ಮಾಡಿದ್ದರೆ, ಬಡತನದಲ್ಲೇ ಸರಕಾರೀ ಶಾಲೆಗಳಲ್ಲಿ ದಿನನಿತ್ಯ ಕಿಲೋ ಮೀಟರುಗಟ್ಟಲೆ ನಡೆದುಕೊಂಡೇ ಹೋಗಿ ಓದಿದ ಕೋವಿಂದರೂ ..ಎಸ್. ಪರೀಕ್ಷೆ ಪಾಸು ಮಾಡಿದರು. ಹಾಗಾಗಿಯೇ ಬಾರಿಯ ರಾಷ್ಟ್ರಪತಿ ಚುನಾವಣೆ ಜಾತಿ ಮತ್ತು ಅರ್ಹತೆ ದೃಷ್ಟಿಯಲ್ಲಿ ಸಮಬಲವೆಂದೇ ವಾದ ಮಾಡುವವರಿಗೆ, ವಾಸ್ತವ ಅಂಶಗಳು ಕೊವಿಂದರ ತೂಕ ಹೆಚ್ಚೆಂದೆ ಹೇಳುತ್ತದೆ.

ಈಗ ಚುನಾವಣೆ ನಡೆದು ಫಲಿತಾಂಶ ಕೂಡಾ ಬಂದಾಗಿದೆ.. ಬಿಜೆಪಿಯ ಅಭ್ಯರ್ಥಿ ದಲಿತ ಸಮುದಾಯದವರು ಎಂಬ ಒಂದೇ ಒಂದು ಕಾರಣಕ್ಕೆ ಮೀರಾ ಕುಮಾರ್ ಅವರನ್ನು ಸ್ಪರ್ಧೆಗಿಳಿಸಿದ ಕಾಂಗ್ರೆಸ್, ರಾಷ್ಟ್ರಪತಿ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಸಂಘರ್ಷ ಅಂತ ಬಿಂಬಿಸಿತು. ಕಾಂಗ್ರೆಸ್ ಜೊತೆ ಸೇರಿದ ಎಡಪಂಥೀಯರದ್ದೂ ಅದೇ ರಾಗ. ಸ್ವತಹಾ ಮೀರಾ ಕುಮಾರ್ ಕೂಡಾ ಅದನ್ನೇ ಹಾಡಿದರು. ಯಾವ ಸಿದ್ಧಾಂತಗಳ ನಡುವಿನ ಸ್ಪರ್ಧೆ ಇದು? ಹಾಗೆಂದು ಅವರೇನು ವಿವರಣೆ ಏನು ನೀಡಲಿಲ್ಲ. ಆದರೆ ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ ಅದೇ ಹಳಸಲು ವಾಸನೆಯ ಉತ್ತರ ಸಿಗುತ್ತದೆ. ಇದು ಜಾತಿವಾದ ಮತ್ತು ಕೋಮುವಾದದ ವಿರುದ್ಧ "ಜಾತ್ಯತೀತ" ಶಕ್ತಿಗಳ ಹೋರಾಟ ಅಂತೆ !.... ಬಾರಿಯ ರಾಷ್ಟ್ರಪತಿ ಚುನಾವಣೆ ಹೀಗೆ ಎರಡು ಸಿದ್ಧಾಂತಗಳ ನಡುವಿನ ಕಾಳಗವೇ ಆಗಿದ್ದರೆ... ಆಗ... ಪ್ರಜಾಪ್ರಭುತ್ವದ ಭದ್ರ ನೆಲೆಗಟ್ಟಿನ ಮೇಲೆ ನಿಂತಿರುವ ದೇಶದಲ್ಲಿ ... ಚುನಾವಣೆಯಲ್ಲಿ ಕಾಂಗ್ರೆಸ್ಸು ಮತ್ತದರ ಬಾಲಂಗೋಚಿಗಳ ಸಿದ್ಧಾಂತ ಸೋತ ಹಾಗಲ್ಲವೇ ??? ಬಹುಮತ ಯಾರಿಗೆ ದಕ್ಕುತ್ತದೋ ಅವರೇ ಸರಿಯೆಂದು ಜನ ಒಪ್ಪಿದ ಹಾಗಾಯಿತಲ್ಲ...? ಹಿಂದಿನ ಚುನಾವಣೆಗಳಲ್ಲಿ ಗೆದ್ದಾಗ ಏನು ಕಾರಣ ನೀಡಿದ್ದರು? ಇಲ್ಲೇ ಇರೋದು ಮಜಾ. ರಾಷ್ಟ್ರಪತಿ ಚುನಾವಣೆಯಲ್ಲಿ ನಿರೀಕ್ಷೆಯಂತೆ ರಾಮನಾಥ ಕೋವಿಂದರೆ ಗೆದ್ದರು. ಆದರೆ ಇಷ್ಟೇ ಅಲ್ಲ. ಕಾಂಗ್ರೆಸ್ ಮತ್ತದರ ಬಾಲಂಗೋಚಿ ಪಕ್ಷಗಳ ಸದಸ್ಯರೂ ಮೀರಾ ಕುಮಾರ್ ಅವರಿಗೆ ಮತ ನೀಡದೆ ಕೊವಿಂದರ ಪರವೇ ಮತ ಚಲಾಯಿಸಿದರಲ್ಲಾ ...? ಇದಕ್ಕೇನು ಹೇಳೋಣ..?

ಕಾಂಗ್ರೆಸ್ ಪಕ್ಷ ಮತ್ತದರ ಪಾಳಯದಲ್ಲಿದ್ದ ದೇಶದ ಸುಮಾರು ನೂರಾ ಅರವತ್ತೇಳು ಮಂದಿ ಚುನಾಯಿತ ಪ್ರತಿನಿಧಿಗಳು ಮೀರಾ ಕುಮಾರ್ ಬದಲಿಗೆ ಕೋವಿಂದರ ಪರವೇ ಮತ ನೀಡಿದರು! ಇದರಿಂದ ಕಾಂಗ್ರೆಸ್ಸಿನ ಚರಮ ಗೀತೆಯ ಮೊದಲ ಪ್ಯಾರಾ ಶುರು ಆಗಿಯೇ ಬಿಟ್ಟಿತು! ಕೋವಿಂದರಿಗೆ ಶೇ. ೬೩ರಷ್ಟು ಮತ ಬೀಳಬೇಕಿದ್ದು, ಅಂದು ಅವರಿಗೆ ದೊರೆತದ್ದು ಶೇ. ೬೫ ರಷ್ಟು ಮತ. ಅದಕ್ಕೆ ಸರಿಯಾಗಿ ಕಾಂಗ್ರೆಸ್, ಎಡಪಕ್ಷಗಳು ಮತ್ತದರ ಬಾಲಂಗೋಚಿಗಳು ಹಾಗು ಸ್ವತಹಾ ಅಭ್ಯರ್ಥಿ ಮೀರಾ ಕುಮಾರ್ ಕೂಡಾ ಹೋದ ಬಂದಲ್ಲೆಲ್ಲಾ "ಎಲ್ಲರೂ ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ ನೀಡಿ " ಅಂತ ಬೇರೆ ಹೇಳಿದ್ದಾರಲ್ಲಾ..!

ಹಾಗಾಗಿಯೇ ಹಲವಾರು ಕಾಂಗ್ರೆಸ್ ಸದಸ್ಯರು ಸೋನಿಯಾ- ರಾಹುಲ್ ಗಾಂಧಿಯವರ ಮುಖವನ್ನು ನೆನಪಿಸಿಕೊಂಡೆ ತಮ್ಮ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಬಿಜೆಪಿಯ ರಾಮನಾಥ ಕೋವಿಂದರ ಪರ ಮತ ನೀಡಿದರು!

ಪಕ್ಕಾ ಕಮ್ಯುನಿಸ್ಟರ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಪಕ್ಷಕ್ಕೆ ಒಬ್ಬ ಸದಸ್ಯನೂ ಇಲ್ಲ ಆದರೂ ಅಲ್ಲಿ ಕೊವಿಂದರಿಗೆ ಏಳು ಮತ ಬಿದ್ದಿದೆ. ಅಂದರೆ ಇಲ್ಲಿನ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ಶಾಸಕರು ಕೋವಿಂದರಿಗೆ ಮತಹಾಕಿದ್ದಾರೆ. ಅಸ್ಸಾಮಿನಲ್ಲಿ ಮೀರಾ ಕುಮಾರ್ ಪರ ೩೯ ಮತ ಬರಬೇಕಿತ್ತು ಆದರೆ ಬಂದದ್ದು ೩೫ ಮಾತ್ರ! ಹಾಗಾಗಿ ಅಲ್ಲಿ ಕಾಂಗ್ರೆಸ್ ಪಾಳಯದ ನಾಲ್ಕು ಮಂದಿ ಶಾಸಕರು ಬಿಜೆಪಿಯ ಕೋವಿಂದರಿಗೆ ಮತನೀಡಿದ್ದಾರೆ.

ಇನ್ನು ಮುಮ್ತಾಜ್ ಬೇಗಮ್ಮಳ ಬಂಗಾಳದಲ್ಲಿ ಬಿಜೆಪಿಗೆ ಕೇವಲ ಮೂರು ಶಾಸಕರು ಮಾತ್ರ ಇದ್ದಾರೆ. ಆದರೆ ಕೋವಿಂದರಿಗೆ ಅಲ್ಲಿ ಹನ್ನೊಂದು ಮತ ಬಿದ್ದಿದೆ! ಘೋರ್ಖಾ ಜನ ಮುಕ್ತಿ ಮೋರ್ಚಾದ ಮೂರು ಮಂದಿ ಬಿಜೆಪಿ ಪರ ಮತಚಲಾಯಿಸಿದರೆಂದು ಇಟ್ಟುಕೊಂಡರೂ ಆರು ಮತಗಳಷ್ಟೇ ಆಯಿತು. ಉಳಿದ ಐದು ಮತಗಳನ್ನು ತೃಣಮೂಲ ಕಾಂಗ್ರೆಸ್, ಕಮ್ಯುನಿಷ್ಟ್ ಮತ್ತು ಕಾಂಗ್ರೆಸ್ಸಿನ ಶಾಸಕರೇ ಮೀರಾ ಕುಮಾರ್ ಹೇಳಿದಂತೆ ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದಾರೆ!

ಇತ್ತೀಚಿನವರೆಗೂ ಕಾಂಗ್ರೆಸ್ ಭದ್ರಕೋಟೆಯೆಂದೇ ಹೆಸರಾಗಿದ್ದ ಆಂಧ್ರ ಪ್ರದೇಶದಲ್ಲಿ ಮೀರಾ ಕುಮಾರ್ ಗೆ ಶೂನ್ಯ ಪ್ರಾಪ್ತಿ!

ಇನ್ನು ಉತ್ತರ ಪ್ರದೇಶದಲ್ಲಿ ಮೀರಾಗೆ ೭೪ ವೋಟು ಬೀಳಬೇಕಿತ್ತು, ಆದರೆ ಬಿದ್ದದ್ದು ೬೫ ವೋಟು ಮಾತ್ರ! ಅಂದರೆ ಸುಮಾರು ಒಂಭತ್ತು ಶಾಸಕರು ಬಿಜೆಪಿ ಪರ ಹೆಚ್ಚುವರಿಯಾಗಿ ಮತಚಲಾಯಿಸಿದ್ದಾರೆ! ದೆಹಲಿಯಲ್ಲಿ ಇಬ್ಬರು ಆಮ್ ಆದ್ಮಿ ಪಾರ್ಟಿಯ ಶಾಸಕರು ಕೋವಿಂದರ ಪರ ಮತ ಚಲಾಯಿಸಿದ್ದಾರೆ. ಗೋವಾದಲ್ಲಿ ಕನಿಷ್ಠ ಮೂರು ಜನ ವಿಪಕ್ಷದ ಶಾಸಕರು ಕೋವಿಂದರಿಗೆ ಮತಹಾಕಿದ್ದು ಲೆಕ್ಕಾಚಾರದ ಮೂಲಕ ತಿಳಿಯುತ್ತದೆ. ಮಧ್ಯಪ್ರದೇಶದಲ್ಲಿ ವಿಪಕ್ಷಗಳ ೬೨ ಸದಸ್ಯರಿದ್ದು ಅವರಲ್ಲಿ ಐದು ಜನ ಕೋವಿಂದರಿಗೆ ಮತನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ವಿಪಕ್ಷಗಳ ೮೩ ಸದಸ್ಯರಿದ್ದು ಮೀರಾಗೆ ೭೭ ಜನ ಮತ ನೀಡಿದ್ದಾರೆ. ಅಂದರೆ ಐದು ಜನ ಬಿಜೆಪಿಗೆ ಮತ ನೀಡಿದ್ದಾರೆ.

ತುಂಬಾ ಕುತೂಹಲಕಾರಿ ಫಲಿತಾಂಶ ಬಂದದ್ದು ಗುಜರಾತ್ ನಲ್ಲಿ. ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣಾ ನಡೆಯಲಿದ್ದು, ಬಾರಿ ನರೇಂದ್ರ ಮೋದಿಯವರಿಲ್ಲದ ಗುಜರಾತ್ ನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಹುದೆಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತು. ಆದರೆ ಗುಜರಾತ್ ನಲ್ಲಿ ಪರಿಸ್ಥಿತಿ ಉಲ್ಟಾ ಹೊಡೆಯಿತು. ೧೮೨ ಜನ ಸದಸ್ಯರಿರುವ ಗುಜರಾತ್ ವಿಧಾಸಭೆಯಲ್ಲಿ ಬಿಜೆಪಿಯ ೧೨೧ ಜನ ಶಾಸಕರಿದ್ದಾರೆ. ಕಾಂಗ್ರೆಸ್ಸಿನ ೫೭, ಎನ್.ಸಿ.ಪಿ ಎರಡು, ಜೆಡಿಯು ಮತ್ತು ಗುಜರಾತ್ ಪರಿವರ್ತನ್ ಪಾರ್ಟಿಯ ತಲಾ ಒಬ್ಬರು ಸದಸ್ಯರಿದ್ದಾರೆ. ಆದರೆ ಕೋವಿಂದರಿಗೆ ಇಲ್ಲಿ ಹೆಚ್ಚುವರಿಯಾಗಿ ಹನ್ನೊಂದು ಮತಗಳು ಬಂದಿವೆ. ಅಂದರೆ ಮೀರಾಗೆ ಕಾಂಗ್ರೆಸ್ಸಿನ ೫೭ ಶಾಸಕರ ಮತವೂ ಪೂರ್ತಿಯಾಗಿ ದೊರೆಯದೆ ೪೯ ಮತಗಳಷ್ಟೇ ಬಂದದ್ದು. ಕಾಂಗ್ರೆಸ್ಸಿನ ಎಂಟು ಮಂದಿ ಶಾಸಕರು ಕೋವಿಂದರಿಗೆ ಮತ ನೀಡಿದ್ದಾರೆ.

ಹೀಗೆ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ನೂರಾಹದಿನಾರು ಸಂಸದ-ಶಾಸಕರು ಮೀರಾ ಕುಮಾರ್ ಪರ ಮತ ಹಾಕದೆ ಕೋವಿಂದರನ್ನು ಬೆಂಬಲಿಸಿದ್ದಾರೆ. ಅಂದರೆ ಇಷ್ಟೂ ಮಂದಿಗೆ ಕಾಂಗ್ರೆಸ್ ಮತ್ತು ಅದರ ಅಭ್ಯರ್ಥಿ ಪರ ಒಲವಿಲ್ಲ ಅಂತ ಅರ್ಥ. ಅಷ್ಟೇ ಅಲ್ಲದೆ ಅವರು ತಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ!

ಇದೆಲ್ಲಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಯಾಗುವ ಹೊತ್ತಿನಲ್ಲೇ ಗುಜರಾತ್ ಕಾಂಗ್ರೆಸ್ಸಿನ ನಾಯಕ ಶಂಕರ್ ಸಿನ್ಹ ವಘೇಲಾ ತನ್ನ ಎಪ್ಪತ್ತೇಳನೆಯ ಜನ್ಮದಿನದಂದೇ ಕಾಂಗ್ರೆಸ್ಸಿನಿಂದ ಹೊರಬಂದಿದ್ದಾರೆ. ಮೂಲತಃ ಆರೆಸ್ಸೆಸ್ಸಿನ ಸದಸ್ಯರಾಗಿದ್ದು, ಬಿಜೆಪಿಯ ನಾಯಕರಾಗಿದ್ದ ವಘೇಲಾ ೧೯೯೫ರಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು. ಗುಜರಾತ್ ನಲ್ಲೀಗ ಹೆಚ್ಚೂ ಕಡಿಮೆ ಕಾಲು ಶತಮಾನದಿಂದ ಅಧಿಕಾರ ವಂಚಿತವಾಗಿ ಬಿಜೆಪಿಯ ಕೈಗೆ ರಾಜ್ಯ ಒಪ್ಪಿಸಿರುವ ಕಾಂಗ್ರೆಸ್ ಬಾರಿಯಾದರೂ ನರೇಂದ್ರ ಮೋದಿಯವರ ಅನುಪಸ್ಥಿತಿಯಲ್ಲಿ ಗುಜರಾತಿನಲ್ಲಿ ಏನಾದರೂ ಗಿಟ್ಟಬಹುದಾ ಎಂದು ಮನಸಿನ್ನಲ್ಲಿಯೇ ಮಂಡಿಗೆ ತಿನ್ನುವ ಸ್ಥಿತಿಯಲ್ಲಿತ್ತು, ಆದರೆ ರಾಷ್ಟ್ರಪತಿ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಮರ್ಮಾಘಾತವನ್ನೇ ನೀಡಿದೆ ! ಇನ್ನು ಅದು ವಘೇಲಾ ನೀಡಿದ ಹೊಡೆತದಿಂದ ಪಾರಾಗುವುದು ಹೇಗೆ ಎಂದು ಯೋಚಿಸಲಿ!

ಹೀಗೆ ರಾಷ್ಟ್ರಪತಿ ಚುನಾವಣೆ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಸ್ಪಷ್ಟ ಸೂಚನೆ ನೀಡಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ಮೋದಿಯವರ ಕನಸು ನಿಧಾನವಾಗಿ ಅವರ ಪಕ್ಷದ ಪ್ರತಿನಿಧಿಗಳೇ ಈಡೇರುಸುತ್ತಾ ಸಾಗಿದ್ದಾರೆ. ರಾಮನಾಥ ಕೋವಿಂದರು ರಾಷ್ಟ್ರಪತಿ ಭವನಕ್ಕೆಕಾಲಿಡುತ್ತಿರುವ ಶುಭಸಂದರ್ಭದಲ್ಲೇ ಹಿಂದೆ ರಾಷ್ಟ್ರೀಯ ಪಕ್ಷ ಎನ್ನಿಸಿಕೊಂಡ ಕಾಂಗ್ರೆಸ್ ಗತಿ ಗೋವಿಂದ ಅಂತ ಆಗತೊಡಗಿದೆ... ಮುಂದಿನ ಹೆಜ್ಜೆ ಕರ್ನಾಟಕದ ಕಡೆಗೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದರೆಡೆಗೆ...

ಚಿತ್ರ ಕೃಪೆ: ನಮ್ಮ ಜಿಲ್ಲೆಯ ಹೆಮ್ಮೆಯ ಕಲಾವಿದ ಗೋಕರ್ಣದ ರವಿ ಗುನಗರ ಕೈ ಚಮತ್ಕಾರ!

Related posts