Infinite Thoughts

Thoughts beyond imagination

ದಕ್ಷಿಣ ಕನ್ನಡದ "ಮುಸ್ಲಿಂ ಪ್ರಾಬ್ಲೆಮ್ " (ಭಾಗ ಮೂರು)

ಸೌತ್ ಕೆನರಾ ಸಲಾಫಿ ಮೂವ್ಮೆಂಟ್ ಸಂಘಟನೆಗೆ ಈಗಾಗಲೇ ೨೫ ವರ್ಷ ಆಯಸ್ಸು. ಸಂಘಟನೆಗೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಬ್ರಾಹಿಂ ಖಲೀಲ್ ಮಸೀದಿಯೇ ಕೇಂದ್ರ ಸ್ಥಾನ. ಕಳೆದ ೨೫ ವರ್ಷಗಳಲ್ಲಿ ಸೌತ್ ಕೆನರಾ ಸಲಾಫಿ ಮೂವ್ಮೆಂಟ್ ಸಂಘಟನೆ ದಕ್ಷಿಣ ಕನ್ನಡದ ಸುನ್ನಿ ಮುಸಲ್ಮಾನರಲ್ಲೇ ಒಡಕುಂಟು ಮಾಡಿ ಮುಸ್ಲಿಂ ಯುವಕರಲ್ಲಿ ಮೂಲಭೂತವಾದವನ್ನು ಬಿತ್ತತೊಡಗಿತು. ದಕ್ಷಿಣ ಕನ್ನಡದ ಮುಸ್ಲಿಮರು ಸಂಘಟನೆಯನ್ನು ಗುರುತಿಸುವುದೇ "ಅಹ್ಲೇ ಹದೀಸ್" ಎಂಬ ಹೆಸರಿನಿಂದ. ದೆಹಲಿಯ "ಜಮಾತ್ ಅಹ್ಲೇ ಹದೀಸ್" ಮಾತೃ ಸಂಸ್ಥೆ. ವಿಚಿತ್ರವೆಂದರೆ ದೆಹಲಿ ಬಿಟ್ಟರೆ ಸಂಸ್ಥೆಯ ಇನ್ನೆರಡು ಅಂಗ ಇರೋದು ಕರ್ನಾಟಕ ಮತ್ತು ಗೋವಾ ರಾಜ್ಯದಲ್ಲಿ ಮಾತ್ರ!

ಕರ್ನಾಟಕದಲ್ಲಿ ಮುಸ್ಲಿಂ ಮೂಲಭೂತವಾದದ ಹುಟ್ಟು ಆದದ್ದೇ ದಕ್ಷಿಣ ಕನ್ನಡದಲ್ಲಿ. ಇದಕ್ಕೆ ಮೂಲ ಕಾರಣ ಕೇರಳದ ನದ್ವತುಲ್ ಮುಜಾಹಿದೀನ್ ಸಂಘಟನೆ. ಇಸ್ಲಾಮಿಕ್ ಮೂಲಭೂತವಾದ ದೇಶದಲ್ಲಿ ಹರಡಲು ಬಾಬ್ರಿ ಮಸೀದಿಯ ನಾಶವೇ ಮೂಲ ಕಾರಣವಾಯಿತು ಅಂತ ನಮ್ಮ ಅರೆ ಬುದ್ಧಿಜೀವಿಗಳು ಬಾಯಿಬಡಿದುಕೊಳ್ಳುತ್ತಲೇ ಇದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ಬಾಬ್ರಿ ಮಸೀದಿಯ ನಿರ್ನಾಮವಾಗುವುದಕ್ಕಿಂತಲೂ ಮೊದಲೇ ಸಲಾಫಿ ಶೈಲಿಯ ಮೂಲಭೂತವಾದ ಕರಾವಳಿಗೆ ಕಾಲಿಟ್ಟಿತ್ತು.

ಇವತ್ತು ಬಿಳಿಗಡ್ಡಧಾರಿಯಾಗಿ ಸೌತ್ ಕೆನರಾ ಸಲಾಫಿ ಮೂವ್ಮೆಂಟ್ ಸಂಘಟನೆಯ ಮುಖಂಡನಾಗಿರುವ ಇಸ್ಮಾಯಿಲ್ ಶಫಿಯ ಹಿನ್ನೆಲೆ ದಕ್ಷಿಣ ಕನ್ನಡದ ಇಂದಿನ ಬಹುತೇಕ ಮುಸ್ಲಿಂ ಮುಖಂಡರಿಗೆ ಗೊತ್ತಿಲ್ಲ. ಇಸ್ಮಾಯಿಲ್ ಶಫಿ ಮೂಲತಃ ಪುತ್ತೂರಿನಾತ. ಬಹುಶ ಬಾಲ್ಯದಲ್ಲೇ ಪೋಲಿಯೋ ರೋಗಕ್ಕೆ ತುತ್ತಾಗಿಯೋ ಏನೋ ಒಂದು ಕಾಲು ಸಂಪೂರ್ಣ ಸ್ವಾಧೀನದಲ್ಲಿಲ್ಲ. ಚಿಕ್ಕಂದಿನಲ್ಲಿ ಪುತ್ತೂರಿನಲ್ಲಿ ನಾಟಕ ಕಲಾವಿದನಾಗಿ ಹಾಸ್ಯ ಪಾತ್ರವಹಿಸುತ್ತಿದ್ದ. ತಕ್ಕ ಮಟ್ಟಿಗೆ ಸಾಹಿತ್ಯ, ಬರವಣಿಗೆ ಮುಂತಾದುದರ ಕಡೆಗೆ ಒಲವಿದ್ದಾತ. ಇದರಿಂದಾಗಿಯೇ ಅರೆಕಾಲಿಕ ಪತ್ರಕರ್ತನಾದ. ತನ್ನದೇ ಒಂದು ವಾರಪತ್ರಿಕೆ ಪ್ರಾರಂಭಿಸಿ ಅದಕ್ಕೆ ತನ್ನದೇ ಹೆಸರಿನ ಅಕ್ಷರಗಳನ್ನು ಜೋಡಿಸಿ "ಇಶಾ ಪತ್ರಿಕೆ" ಅಂತ ಹೆಸರಿಟ್ಟ. ಪುತ್ತೂರಿನ ಮುಸ್ಲಿಮರಷ್ಟೇ ಅಲ್ಲದೆ ಹಿಂದೂಗಳೂ ಪತ್ರಿಕೆ ಖರೀದಿಸಿ ಓದುತ್ತಿದ್ದರು. ಇದು ಸುಮಾರು ೮೦ರ ದಶಕದ ಸಂಗತಿ.

ಇತ್ತೀಚಿಗೆ ಜಾಕೀರ್ ನಾಯ್ಕ್ ಯಾವ ರೀತಿ ಹಿಂದೂ ಧರ್ಮವನ್ನು ಹೀಗಳೆಯಯುತ್ತಿದ್ದನೋ ಅದನ್ನೇ ಇಸ್ಮಾಯಿಲ್ ಶಫಿ ೧೯೮೦ ದಶಕದಲ್ಲೇ ಮಾಡಿದ್ದ. ಭವಿಷ್ಯ ಪುರಾಣದಲ್ಲಿ ಪ್ರವಾದಿ ಮಹಮ್ಮದ್ ಬಗ್ಗೆ ಉಲ್ಲೇಖವಿದೆಯೆಂತಲೂ, ಶ್ರೀಕೃಷ್ಣನಿಗೆ ಹದಿನಾರು ಸಾವಿರ ವೇಶ್ಯೆಯರ ಸಂಘವಿತ್ತೆಂತಲೂ ತುಂಬಾ ಅವಹೇಳನಕಾರಿಯಾಗಿ ಬರೆದ. ಇಶಾ ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಪುತ್ತೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಮು ಗಲಭೆಗಳಾದವು. ದಿನಗಟ್ಟಲೆ ಸೆಕ್ಷನ್ ೧೪೪ ಜಾರಿಯಾಗಿ ಜನಜೀವನ ಸ್ಥಬ್ಧವಾಯಿತು. ಆಗ ಪುತ್ತೂರಿನಿಂದ ಓಡಿ ಹೋದ ಇಸ್ಮಾಯಿಲ್ ಶಫಿ, ನಂತರ ತಲೆ ಎತ್ತಿದ್ದೇ ಉಳ್ಳಾಲದಲ್ಲಿ. ಬಳಿಕ ಆತ ಸಲಾಫಿ ಮುಖಂಡನಾಗಿ ಹೊಸ ಅವತಾರ ಎತ್ತಿದ. ದಕ್ಷಿಣ ಕನ್ನಡದಲ್ಲಿ ಇಸ್ಲಾಮಿಕ್ ಮೂಲಭೂತವಾದವನ್ನು ಹರಡುವಲ್ಲಿ ಸಲಾಫಿಗಳ ಪಾತ್ರ ದೊಡ್ಡದೇ. ಮಂಗಳೂರಿಗೆ ಜಾಕೀರ್ ನಾಯ್ಕ್ ನನ್ನ ಕರೆತರುವ ಕಾರ್ಯಕ್ರಮ ರೂಪಿಸಿದ್ದು ಸೌತ್ ಕೆನರಾ ಸಲಾಫಿ ಮೂವ್ಮೆಂಟ್ ಸಂಘಟನೆಯೇ. ಸರಕಾರ ಇದಕ್ಕೆ ಬ್ರೇಕ್ ಹಾಕಿದಾಗ ಪಿಎಫ್ಐ ಕೂಡಾ ಸಲಾಫಿಗಳ ಬೆಂಬಲಕ್ಕೆ ನಿಂತುಕೊಂಡಿತು.

ಮಂಗಳೂರು ಸುತ್ತಮುತ್ತ ಚಿಕ್ಕಪುಟ್ಟ ಮುಸ್ಲಿಂ ಮತಾಂಧ ಯುವಕರ ಅಟ್ಟಹಾಸ ಮಿತಿಮೀರತೊಡಗಿದ್ದು ದಕ್ಷಿಣ ಕನ್ನಡಕ್ಕೆ ಪಿಎಫ್ಐ ಕಾಲಿಟ್ಟ ಮೇಲೆಯೇ. ಅಲ್ಲಿನ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಭಾವನೆಗಳಿಗೆ ಘಾಸಿಯುಂಟಾಗುವಂತೆ ಮುಸ್ಲಿಮ್ ಯುವಕರು ನಡೆದುಕೊಳ್ಳಲಾರಂಭಿಸಿದರು. ನಾನು ಮೊದಲೇ ಹೇಳಿದಂತೆ ಅಲ್ಲಿನ ಭೂತಾರಾಧನೆ, ನಾಗಾರಾಧನೆ ಮುಂತಾದ ವಿಶಿಷ್ಟ ಆಚರಣೆಗಳು ನಿರ್ದಿಷ್ಟ ಜಾಗಗಳಿಗೆ ಸಂಬಂಧಿಸಿದ್ದಾದುದರಿಂದ ಮುಸ್ಲಿಂ ಜನಸಂಖ್ಯೆಯಲ್ಲಿನ ಅತೀವ ಹೆಚ್ಚಳ ಸಹಜವಾಗಿಯೇ ಅಲ್ಲಿನ ಮೂಲನಿವಾಸಿಗಳಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗತೊಡಗಿತು. ಭೂತ ಕೋಲಾ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳೇ ಕಾಲಾಂತರದಲ್ಲಿ ದೊಡ್ಡ ಸ್ವರೂಪ ಪಡೆಯತೊಡಗಿತು. ಅದಕ್ಕೆ ಸರಿಯಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಶುರುವಾದ ಮೇಲೆ ಅನಾಮಿಕರಾಗಿಯೋ, ನಕಲಿ ಹೆಸರಿನಲ್ಲೋ ಪರಸ್ಪರರ ಧರ್ಮಗಳ ಅವಹೇಳನ ಮಾಡುವ ಪ್ರಕರಣಗಳು ಹೆಚ್ಚಾಗತೊಡಗಿತು. ಉದಾಹರಣೆಗೆ ಕಟೀಲು ದೇವಿಯ ಬಗ್ಗೆ ಮುಸ್ಲಿಂ ಹುಡುಗನೊಬ್ಬ ತೀರಾ ಅಸಹ್ಯಕರವಾಗಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬರೆದದ್ದು, ಆತ ದೇಶದಲ್ಲಿ ಕುಳಿತೇ ಕೆಲಸ ಮಾಡಿಸಿದ್ದ. ಇದರಿಂದಾಗಿ ಜಿಲ್ಲೆಯಲ್ಲಿ ಮೊದಲೇ ಸೂಕ್ಷ್ಮವಾಗಿದ್ದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಇದೊಂದು ಘಟನೆ ಚಿಕ್ಕ ಉದಾಹರಣೆ ಮಾತ್ರ. ಇದಲ್ಲದೆ ಹಿಂದೂ ಸಂಘಟನೆಗಳ ಮುಖಂಡರ ಮೇಲಿನ ಮಾರಣಾಂತಿಕ ದಾಳಿಗಳೂ ಕೊಲೆಗಳೂ ಹೆಚ್ಚಾದವು.

ಉಳ್ಳಾಲ ಸುತ್ತಮುತ್ತಲ ಪರಿಸರದ ಹಲವಾರು ಗ್ರಾಮಗಳಲ್ಲಿ ಈಗಾಗಲೇ ಮುಸ್ಲಿಮರೇ ಬಹುಸಂಖ್ಯಾಕರು. ಉದಾಹರಣೆಗೆ ಮಂಜನಾಡಿ ಗ್ರಾಮ (ಶೇ. ೮೦. ೨೨ ಮುಸ್ಲಿಮರು). ಇಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಮಲರಾಯ ಬಂಟ ದೈವಸ್ಥಾನವಿದೆ. ತುಳುನಾಡಿನ ಐತಿಹಾಸಿಕ ಪರಂಪರೆಯನ್ನೇ ಹಿಡಿದು ಮಾತಾಡಿದರೂ ಇಲ್ಲಿ ಏನಿಲ್ಲವೆಂದರೂ ೧೦೦ ವರ್ಷಗಳಷ್ಟು ಹಿಂದೆಯಾದರೂ ತುಳುನಾಡಿನ ಹಿಂದೂಗಳೇ ಬಹುಸಂಖ್ಯಾಕರಾಗಿದ್ದರು ಎಂಬುದಕ್ಕೆ ದೈವಸ್ಥಾನವೇ ಸಾಕ್ಷಿಯಲ್ಲವೇ. ಈಗ ಅಲ್ಲಿನ ಹಿಂದೂಗಳ ಸಂಖ್ಯೆ ಕೇವಲ ಶೇ. ೧೭. ೫೯ರಷ್ಟು ಮಾತ್ರ ಇದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪಿಎಫ್ಐ ಮತ್ತು ಸಲಾಫಿಗಳ ಮೂಲಭೂತವಾದ ಕಾಲಿಟ್ಟಿದೆ. ಮಂಜನಾಡಿಯ ಮುಸ್ಲಿಂ ಹುಡುಗರು ಅಪರಾಧ ಪ್ರಕರಣಗಳಲ್ಲಿ, ಹಿಂದೂ ಮುಖಂಡರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿದ್ದಾರೆ. ೨೦೧೩ರಲ್ಲಿ ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬಳ ಅಪಹರಣ- ಅತ್ಯಾಚಾರ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರ ಕೈವಾಡ ಇದ್ದದ್ದು ಬಯಲಾಗಿತ್ತು. ಆಗ ಬಂಧಿತರಾದ ಎಂಟು ಮಂದಿಯಲ್ಲಿ ಇದೇ ಪರಿಸರದ ಮುಸ್ಲಿಂ ಹುಡುಗರಿದ್ದರು. ಇವರಲ್ಲಿಯೇ ಇಬ್ಬರು ಮೊನ್ನೆ ಮೊನ್ನೆ ಉರ್ವಾ ಎಎಸ್ಐ ಐತಪ್ಪರ ಮೇಲೆ ಹಲ್ಲೆ ನಡೆಸಿದ ತಂಡದಲ್ಲೂ ಇದ್ದರು. ಅದಾಗಿ ೨೦೧೫ರಲ್ಲಿ ಉಳ್ಳಾಲ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಮನೆಗೆ ದಾಳಿ ನಡೆಸಿ ಅವರ ಅಳಿಯ ರಾಜೇಶ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಮುಸ್ಲಿಂ ಯುವಕರ ಪೈಕಿ ಮಂಜನಾಡಿಯ ಹುಡುಗರೂ ಇದ್ದರು. ಇನ್ನು ದನಗಳ್ಳತನ ಮಾಡಿ ಸಿಕ್ಕಿಬಿದ್ದ ಹಲವಾರು ಪ್ರಕರಣಗಳಲ್ಲೂ ಇಲ್ಲಿನ ಮುಸ್ಲಿಂ ಹುಡುಗರು ಇದ್ದಾರೆು. ಇಲ್ಲಿ ವಿಸ್ತಾರವಾದ ೨೫ ಎಕರೆ ಪ್ರದೇಶದಲ್ಲಿ ಅಲ್ ಮದೀನಾ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಮತ್ತದೇ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣವನ್ನೂ ನೀಡಲಾಗುತ್ತಿದೆ.

ಮಂಜನಾಡಿ ಅಷ್ಟೇ ಅಲ್ಲ ಇಲ್ಲಿನ ಸುತ್ತಮುತ್ತಲ ಗ್ರಾಮಗಳಾದ ಬೆಳ್ಮ, ಸಜೀಪ ನಡು, ಮುನ್ನೂರು, ಕೈರಂಗಳ, ತಲಪಾಡಿ, ಉಳ್ಳಾಲಗಳಲ್ಲೂ ಹಿಂದೂಗಳೇ ಅಲ್ಪಸಂಖ್ಯಾಕರು ಮತ್ತು ಮುಸ್ಲಿಮರೇ ಬಹುಸಂಖ್ಯಾಕರು. ಎಲ್ಲಾ ಗ್ರಾಮ, ಪಟ್ಟಣ ಪ್ರದೇಶಗಳಲ್ಲೂ ತುಳುನಾಡಿನ ಜಾನಪದೀಯ ಹಿನ್ನೆಲೆಯ ಭೂತಾರಾಧನೆಯ ಕೇಂದ್ರಗಳಿವೆ.

ಮಾತೆತ್ತಿದರೆ ವೈದಿಕ ಸಂಸ್ಕೃತಿ, ಪುರೋಹಿತಶಾಹಿ ಹಿಂದೂ ಧರ್ಮ ಅಂತೆಲ್ಲ ಬಡಬಡಿಸುವ ಎಡಬಿಡಂಗಿ ಬುದ್ಧಿಜೀವಿಗಳಿಗೆ, ದಕ್ಷಿಣ ಕನ್ನಡದ ನೆಲದ ವಾಸನೆಯಿರುವ, ಇಲ್ಲಿನ ಮೂಲನಿವಾಸಿಗಳ ಧಾರ್ಮಿಕ ನಂಬಿಕೆಗಳ ಆಚರಣೆಗಳಿಗೆ ಹೊರಗಿನಿಂದ ಬಂದ ಪರಕೀಯರಿಂದ ತೊಂದರೆಯುಂಟಾದರೆ ಅದು ಕಾಣಿಸುವುದಿಲ್ಲವೇ?

ಇಲ್ಲಿ ಪ್ರಶ್ನೆ ಇರುವುದು ಜಾಗದ್ದೆ..! ಯಾಕಂದರೆ ತಾವು ನಂಬಿದ ನಾಗಗಳನ್ನು, ದೈವಗಳನ್ನು ಅವುಗಳ ಮೂಲಸ್ಥಾನದಲ್ಲೇ ಆರಾಧಿಸುವುದು ಅಲ್ಲಿನ ತುಳುಜನರ ನಂಬಿಕೆ ಮತ್ತು ಹಕ್ಕು ಕೂಡ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ತಮ್ಮ ಮೂಲ ನೆಲೆಗಳಲ್ಲೇ ಅಲ್ಪಸಂಖ್ಯಾತರಾಗುತ್ತಿರುವ ಅಲ್ಲಿನ ಜನರಿಗೆ ಸ್ವಾಭಾವಿಕವಾಗಿಯೇ ಆತಂಕಗಳಾಗುತ್ತವೆ. ಅದರಲ್ಲೂ ತಮ್ಮ ನಂಬಿಕೆಯನ್ನು ಗೌರವಿಸದ, ಅದನ್ನು ಅವಹೇಳನ ಮಾಡುವ, ಅಪಹಾಸ್ಯ ಮಾಡುವ, ಜನರ ಸಂಖ್ಯೆಯೇ ಹೆಚ್ಚಾದಾಗ ಅಲ್ಲಿನ ಮೂಲನಿವಾಸಿಗಳು ತಮಗೆ ತೋಚಿದ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಹಜವಲ್ಲವೇ....?

ಮುಂದಿನ ಭಾಗದಲ್ಲಿ ದಕ್ಷಿಣ ಕನ್ನಡದ ಹಿಂದೂ ಮುಸ್ಲಿಂ ರಕ್ತಸಿಕ್ತ ಅಧ್ಯಾಯಗಳು ಮತ್ತು ಓಲೈಕೆ ರಾಜಕಾರಣದ ಬಗ್ಗೆ ಬರೆಯುತ್ತೇನೆ.

Related posts