ಡೀಕೇಶಿ ಮೇಲೆ ಐ.ಟಿ. ದಾಳಿ.... ಹೀಗೊಂದು ವಿಶ್ಲೇಷಣೆ.....
ಸಂಸತ್ತಿನ ಕಲಾಪ ನಡೆಯುತ್ತಿದ್ದುದರಿಂದ ನಾನು ದೆಹಲಿಯಲ್ಲಿದ್ದರು, ಕರ್ನಾಟಕದಲ್ಲಿನ ಬೆಳವಣಿಗೆಗಳನ್ನಂತೂ ಗಮನಿಸುತ್ತಿದ್ದೆ. ಬಾಹುಬಲಿ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐ.ಟಿ.ದಾಳಿಯ ಬಗ್ಗೆ ರಾಜ್ಯದ ಮಾಧ್ಯಮಗಳಲ್ಲಿ ಮಾತ್ರವಲ್ಲ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗುತ್ತಿತ್ತು. ನಾನು ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷನಾದುದರಿಂದ ರಾಜ್ಯದಲ್ಲಿನ ಈ ಎಲ್ಲ ಬೆಳವಣಿಗೆಗಳನ್ನೆಲ್ಲ ಹತ್ತಿರದಿಂದಲೇ ಗಮನಿಸುವುದು ನನ್ನ ಪಾಲಿನ ಕರ್ತವ್ಯವೂ ಆಗಿತ್ತು. ಹಾಗಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ-ತಾಣಗಳಲ್ಲಿ ನಡೆಯುತ್ತಿದ್ದ ಚರ್ಚೆ - ವಿಶ್ಲೇಷಣೆಗಳನ್ನು ನನ್ನದೇ ದೃಷ್ಟಿಕೋನದಿಂದ ನೋಡುತ್ತಿದ್ದೆ. ಅದೇ ಹೊತ್ತಿಗೆ ನನ್ನ ಆತ್ಮೀಯ ಮಿತ್ರನೊಬ್ಬ ನನಗೊಂದು ವಾಟ್ಸ್ ಆಪ್ ಸಂದೇಶ ಕಳುಹಿಸಿದ. ಆತನೇನು ರಾಜಕೀಯ ವ್ಯಕ್ತಿಯಾಗಿರಲಿಲ್ಲ, ಬದಲಿಗೆ ಕಾರ್ಪೊರೇಟ್ ಸಂಸ್ಥೆಯ ಉದ್ಯೋಗದಲ್ಲಿದ್ದ. ಬಹಳ ಜಾಣ. ತುಂಬಾ ಓದಿಕೊಂಡಿದ್ದಾನೆ. ಇತಿಹಾಸದ ಜೊತೆಗೇ ವರ್ತಮಾನದ ವಿದ್ಯಮಾನಗಳ ಬಗೆಗೂ ಚೆನ್ನಾಗಿಯೇ ತಿಳಿದುಕೊಂಡಿದ್ದಾನೆ. ನನಗೆ ರಾಜಕೀಯಕ್ಕೆ ಹೊರತಾದ ಇಂಥಾ ಅನೇಕ ಸ್ನೇಹಿತರಿದ್ದಾರೆ. ಅವರ್ಯಾರೂ ನನ್ನ ಬಳಿ ರಾಜಕೀಯದ ಕುರಿತು ಮಾತಾಡುವುದೇ ಇಲ್ಲ. ನಾನೂ ಅಷ್ಟೇ... ಅವರೊಂದಿಗೆ ಯಾವತ್ತೂ ರಾಜಕೀಯ ಚರ್ಚಿಸುವುದಿಲ್ಲ.
ಆದರೆ ಈ ಬಾರಿ ನನ್ನ ಮಿತ್ರನಿಂದ ಬಂದಿದ್ದ ವಾಟ್ಸ್ ಆಪ್ ಸಂದೇಶ ಅಪರೂಪದ್ದಾಗಿತ್ತು. ಬಹುಶ ಬೇರೆ ದಿನಗಳಲ್ಲಾಗಿದ್ದರೆ ನಾನು ಈ ಸಂದೇಶವನ್ನು ನಿರ್ಲಕ್ಷಿಸುತ್ತಿದ್ದೆನೋ ಏನೋ, ಆದರೆ ಈ ಬಾರಿ ಯಾಕೋ ನನಗೊಂದು ಕೆಟ್ಟ ಕುತೂಹಲ ಉಂಟಾಯಿತು. ರಾಜಕೀಯದ ಯಾವ ಹಿನ್ನೆಲೆಯೂ ಇರದಿದ್ದ ಆ ಸ್ನೇಹಿತನಿಗೆ ಅದೆಷ್ಟರ ಮಟ್ಟಿಗಿನ ರಾಜಕೀಯ ಜ್ಞಾನವಿದೆ ಅಂತ ಸುಮ್ಮನೊಮ್ಮೆ ಪರೀಕ್ಷಿಸುವ ಮನಸ್ಸಾಯಿತು. ಹಾಗಾಗಿಯೇ ಬಂದ ಸಂದೇಶಕ್ಕೆ ಪ್ರತಿಕ್ರಿಯಿಸಿದೆ .....
ಆದರೆ ಆ ಮಿತ್ರನ ರಾಜಕೀಯ ತಿಳುವಳಿಕೆ ಮತ್ತು ವಿಶ್ಲೇಷಣಾ ಚಾತುರ್ಯ ನೋಡಿ ನನಗೆ ನಿಜಕ್ಕೂ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು. ನಮ್ಮ ನಡುವೆ ಆದ ಒಂದು ರೋಚಕ ಚರ್ಚೆಯ (ವಾಟ್ಸ್ ಆಪ್ನಲ್ಲಿ ಮೆಸೇಜುಗಳ ಮೂಲಕ ಮಾತ್ರ) ಒಂದಷ್ಟು ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಈ ಲೇಖನ. ಹಾಗಾಗಿ ಆ ಚರ್ಚೆಯ ಸ್ಥೂಲ ರೂಪವನ್ನು ಇಲ್ಲಿ ನೀಡುತ್ತಿದ್ದ್ದೇನೆ. ಸುಮ್ಮನೆ ಒಮ್ಮೆ ಓದಿ ನೋಡಿ.....
ಮಿತ್ರನ ವಾಟ್ಸ್ ಆಪ್ ಸಂದೇಶ: "ಹಾಯ್ ಅನಂತ್ ಜೀ, ಹೇಗಿದ್ದೀರಿ? ಕರ್ನಾಟಕದ ಪವರ್ ಮಿನಿಸ್ಟರ ಮೇಲೆಯೇ ಪವರ್ಫುಲ್ ದಾಳಿಯಾಯಿತಲ್ಲ..? ಇದರಿಂದ ಅತಿ ಹೆಚ್ಚು ಸಂತೋಷ ಪಡುವವರು ಯಾರು ಗೊತ್ತಾ...? "
ನಾನು ಸುಮ್ಮನೆ ಕುತೂಹಲದಿಂದ ಅದಕ್ಕೆ ಉತ್ತರವಾಗಿ ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಕಳಿಸಿದೆ. ಆ ಕಡೆಯಿಂದ ತಕ್ಷಣವೇ ಉತ್ತರ ಬಂತು. ...
" ಡೀಕೇಶಿ ಮೇಲೆ ಐ. ಟಿ. ದಾಳಿಯಿಂದ ನಿಜಕ್ಕೂ ಸಂತೋಷ ಪಡೋದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ .... ಯಾಕಂದರೆ ಮುಂದಿನ ಚುನಾವಣೆಯಲ್ಲಿ ಅವರು ಹೂಡಿರುವ ತಂತ್ರಕ್ಕೆ ಈ ದಾಳಿಯಿಂದ ತುಂಬಾ ಅನುಕೂಲವಾಗುತ್ತದೆ.."
ನಾನು ನನ್ನ ಮಿತ್ರನ ರಾಜಕೀಯ ಜ್ಞಾನ ಪರೀಕ್ಷಿಸಿ ನೋಡಿಯೇ ಬಿಡೋಣ ಅಂತ ನಿರ್ಧರಿಸಿ "ಅದು ಹೇಗೆ ? " ಅಂತ ಇನ್ನೊಂದು ಸಂದೇಶ ಕಳಿಸಿದೆ. ಕೊಂಚ ಹೊತ್ತಾದ ಬಳಿಕ ಅದಕ್ಕೂ ಮಿತ್ರ ಉತ್ತರ ಕಳಿಸಿದ್ದ. ಅದು ಹೀಗಿತ್ತು....
"ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲವೆಂಬುದು ಸಿದ್ದರಾಮಯ್ಯನವರಿಗೆ ಚೆನ್ನಾಗಿಯೇ ಗೊತ್ತಿದೆ. ನಿಜಕ್ಕೂ ಅವರಿಗೆ ಕಾಂಗ್ರೆಸ್ ಪಕ್ಷ ಗೆಲ್ಲುವುದೂ ಬೇಕಿಲ್ಲ. ಬದಲಿಗೆ ತಾವು ಇನ್ನೊಮ್ಮೆ ಮುಖ್ಯಮಂತ್ರಿಯಾದರೆ ಸಾಕು ಅನ್ನೋ ಅಸೆ ಮಾತ್ರ ಇದೆ. ಸಿದ್ದರಾಮಯ್ಯ ಜೀವನ ಪೂರ್ತಿ ಕಾಂಗ್ರೆಸ್ ವಿರೋಧೀ ರಾಜಕಾರಣವನ್ನೇ ಮಾಡಿದವರು. ಅವರೆದುರಿಸಿದ ಮೊಟ್ಟಮೊದಲ ಚುನಾವಣೆಯಿಂದ ಹಿಡಿದು ೨೦೦೬ರಲ್ಲಿ ಅವರು ಕಾಂಗ್ರೆಸ್ ಗೆ ಸೇರುವವರೆಗೆ ಅವರು ಪ್ರತಿಯೊಂದು ಚುನಾವಣೆಯಲ್ಲೂ ಕಾಂಗ್ರೆಸ್ ವಿರುದ್ಧ ಸೆಣಸಿಯೇ ಗೆದ್ದವರು. ಜನತಾ ಪರಿವಾರದಲ್ಲಿದ್ದುಕೊಂಡೇ ಉಪಮುಖ್ಯ ಮಂತ್ರಿಯ ಹುದ್ದೆ ಪಡೆಯುವವರೆಗೆ ಬೆಳೆದವರು. ಹಾಗಾಗಿಯೇ ಅವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಅಂಥ ಅಭಿಮಾನವೇನೂ ಇಲ್ಲ. ಡೀಕೇಶಿ ನಿಜಕ್ಕೂ ಕಾಂಗ್ರೆಸ್ ನ ಅತ್ಯಂತ ಪ್ರಭಾವೀ ಮುಖಂಡ. ಹಣ ಬಲ, ಜನ ಬಲ, ಜಾತಿ ಬಲಗಳ ಜೊತೆಗೆಯೇ ಚುನಾವಣಾ ತಂತ್ರ ರೂಪಿಸುವಲ್ಲೂ, ನಿಭಾಯಿಸುವುದರಲ್ಲೂ ಎತ್ತಿದ ಕೈ... ಹಾಗಾಗಿ ಮುಂಬರುವ ರಾಜ್ಯ ಚುನಾವಣೆಯಲ್ಲಿ ಡೀಕೇಶಿ ವಹಿಸುವ ಪಾತ್ರ ಬಹಳ ದೊಡ್ಡಮಟ್ಟದಲ್ಲಿರುತ್ತದೆ. ಹೈಕಮಾಂಡ್ ಗೆ ಕೂಡಾ ಡೀಕೇಶಿ ಶಕ್ತಿಯ ಬಗ್ಗೆ ಅರಿವಿದೆ. ಹಾಗಾಗಿ ಮುಂದಿನ ಚುನಾವಣಾ ಉಸ್ತುವಾರಿ ಡೀಕೇಶಿಯ ಕೈಗೆ ಹೋಗುತ್ತದೆ... ಹಾಗಾಗಿ ಆತ ಕೂಡಾ ಮುಖ್ಯ ಮಂತ್ರಿ ಪಟ್ಟಕೆ ಪ್ರಬಲ ಪೈಪೋಟಿ ನೀಡಬಲ್ಲ ವ್ಯಕ್ತಿಯೇ...
ಈಗ ಗುಜರಾತ್ ಶಾಸಕರ ಸಂಪೂರ್ಣ ಜವಾಬ್ದಾರಿ ಡೀಕೇಶಿಯೇ ನೋಡಿಕೊಳ್ಳುತ್ತಿರುವುದರಿಂದ ಆತ ಸೋನಿಯ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ.. ಹೀಗಾದರೆ ಅದು ಸಿದ್ದರಾಮಯ್ಯನವರಿಗೆ ಕುತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಪ್ರ್ರಾರಂಭದಲ್ಲಿ ಡೀಕೇಶಿಯನ್ನು ತಮ್ಮ ಮಂತ್ರಿಮಂಡಲಕ್ಕೆ ಸೇರಿಸಿ ಕೊಳ್ಳಲೇ ಇಲ್ಲ. ಆಗ ಕೋಪಗೊಂಡಿದ್ದ ಡೀಕೇಶಿ ಶಾಸಕನಾಗಿ ಪ್ರಮಾಣವಚನವನ್ನೇ ಸ್ವೀಕರಿಸದೆ ಸುದ್ದಿ ಮಾಡಿದ್ದರು. ತಮ್ಮ ಸುತ್ತ ತಮ್ಮ ಹಳೆಯ ಜನತಾ ದಳದ ಗೆಳೆಯರನ್ನೇ ಇಟ್ಟುಕೊಂಡು ಓಡಾಡುವ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಸತ್ಯವೇ... ಜೊತೆಗೆಯೇ ಹಲವಾರು ಸಂದರ್ಭದಲ್ಲಿ ತಾವು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಅನ್ನೋದನ್ನೂ ಮರೆತು ಸಿದ್ದರಾಮಯ್ಯ ಕಾಂಗ್ರೆಸ್ಸಿಗೇ ಬೈದದ್ದೂ ಇದೆ. ಹಾಗಾಗಿ ಮಾನಸಿಕವಾಗಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಲೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಡೀಕೇಶಿ ಮಹತ್ವದ ಪಾತ್ರ ವಹಿಸುವುದು ಖಚಿತ ಅಂತ ಗೊತ್ತಿರುವ ಸಿದ್ದರಾಮಯ್ಯ ಈ ಐ. ಟಿ. ದಾಳಿಯಿಂದ ಡೀಕೇಶಿ ಪ್ರಾಬಲ್ಯ ಕುಸಿದರೆ ಸಂತೋಷ ಪಡದಿರುತ್ತಾರೆಯೇ....
ಮೋದಿಯವರು ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆಂದು ಹೊರಟಿದ್ದಾರೆ. ಅದರಲ್ಲಿ ಬಹಳಷ್ಟು ಯಶಸ್ಸನ್ನೂ ಕಂಡಿದ್ದಾರೆ. ಕರ್ನಾಟಕವನ್ನೂ ಕಾಂಗ್ರೆಸ್ ಮುಕ್ತ ಮಾಡಬೇಕೆಂದು ಬಿಜೆಪಿಯ ಎಲ್ಲಾ ನಾಯಕರೂ ಹೇಳುತ್ತಿರುತ್ತಾರೆ. ಆದರೆ ನಿಜಕ್ಕೂ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವುದು ಸಿದ್ದರಾಮಯ್ಯನವರೇ. .."
ಮಿತ್ರನ ವಾಟ್ಸ್ ಆಪ್ ಸಂದೇಶ ನೋಡಿ ಅವಾಕ್ಕಾದೆ. ರಾಜಕೀಯೇತರ ವ್ಯಕ್ತಿಯಾಗಿದ್ದರೂ ರಾಜ್ಯ ರಾಜಕೀಯದ ಬಗ್ಗೆ ಆತ ಹೊಂದಿರುವ ಒಳನೋಟ ಕಂಡು ಮೆಚ್ಚಿಗೆಯುಂಟಾಯಿತು. ಇನ್ನಷ್ಟು ಕುತೂಹಲದೊಂದಿಗೆ "ಅದು ಹೇಗೆ ?" ಎಂಬ ಸಂದೇಶ ಕಳಿಸಿದೆ. ಅದಕ್ಕೆ ಉತ್ತರ ಹೀಗಿತ್ತು.....
" ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಅದೃಷ್ಟಶಾಲಿ ನಾಯಕ. ೧೯೮೩ರಲ್ಲಿ ಮೊದಲ ಬಾರಿಗೆ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಜಯದೇವರಾಜೇ ಅರಸರ ವಿರುದ್ಧ ಆಶ್ಚರ್ಯಕರವಾಗಿ ೩೫೦೦ ಮತಗಳಿಂದ ಗೆದ್ದರು. ಆಗ ಅವರು ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಚರಣ ಸಿಂಗರ ಭಾರತೀಯ ಲೋಕದಳ ಪಕ್ಷದಿಂದ ಗೆದ್ದರು. ಅದಾದ ಬಳಿಕ ಜನತಾ ಪಕ್ಷ ಸೇರಿಕೊಂಡ ಸಿದ್ದರಾಮಯ್ಯ ಎರಡೇ ವರ್ಷದೊಳಗೆ ನಡೆದ ೧೯೮೫ರ ಚುನಾವಣೆಯಲ್ಲಿ ಮತ್ತೆ ಗೆದ್ದರು. ಶಾಸಕರಾದ ಎರಡೇ ವರ್ಷದಲ್ಲಿ ಎರಡನೇ ಚುನಾವಣೆ ಎದುರಿಸಿ ಗೆದ್ದ ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಪಶುಸಂಗೋಪನಾ ಸಚಿವರಾದರು! ೧೯೮೯ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ ರಾಜಶೇಖರ ಮೂರ್ತಿಯವರ ವಿರುದ್ಧ ಸೋತರು. ನಂತರ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ೧೯೯೪ರ ಚುನಾವಣೆಯಲ್ಲಿ ಕಾಂಗ್ರೇಸಿನ ಗುರುಸ್ವಾಮಿಯ ಎದುರು ಗೆದ್ದರು. ಬಳಿಕದ ಚುನಾವಣೆಯಲ್ಲಿ ಅದೇ ಗುರುಸ್ವಾಮಿಯ ಎದುರು ಸೋತೂ ಹೋದರು. ಹೀಗೆ ಜೀವನಪೂರ್ತಿ ಕಾಂಗ್ರೆಸ್ ವಿರೋಧೀ ರಾಜಕಾರಣ ಮಾಡಿದ ಸಿದ್ದರಾಮಯ್ಯನವರನ್ನು ಬೆಳೆಸಿದ್ದು ಮಾತ್ರ ದೇವೇಗೌಡರೇ.
ದೇವೇಗೌಡರು ಮುಖ್ಯ ಮಂತ್ರಿಯಾದಾಗ ಸಿದ್ದರಾಮಯ್ಯನವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ಮಾತ್ರವಲ್ಲದೆ ನಂತರ ಪ್ರಧಾನಿಯಾಗಿ ದೆಹಲಿಗೆ ತೆರಳುವಾಗ ಜೆ.ಎಚ್. ಪಟೇಲರ ಸಂಪುಟದಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಲೂ ದೇವೇಗೌಡರೇ ಕಾರಣರಾದರು. ಬಳಿಕ ಪಟೇಲರು ಉಪ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನನ್ನು ವಜಾಗೊಳಿಸಿದಾಗಲೂ ಬೆಂಬಲಕ್ಕೆ ನಿಂತದ್ದು ದೇವೇಗೌಡರೇ. ಸಿದ್ದರಾಮಯ್ಯ ದೇವೇಗೌಡರ ಜೆಡಿಎಸ್ ಸೇರಿ ಅದರ ರಾಜ್ಯ ಅಧ್ಯಕ್ಷರೂ ಆದರು. ಬಳಿಕ ೨೦೦೪ರಲ್ಲಿ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಸಮ್ಮಿಶ್ರ ಸರಕಾರ ಆಗಿ ಧರ್ಮ ಸಿಂಗ್ ಮುಖ್ಯಮಂತ್ರಿಯಾದಾಗ ದೇವೇಗೌಡರ ಆಶೀರ್ವಾದದಿಂದಲೇ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿಯಾದರು.
ಹೀಗೆ ಅಲ್ಲಿಯವರೆಗೆ ಸಿದ್ದರಾಮಯ್ಯನವರು ಎದುರಿಸಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅನ್ನು ವಾಚಾಮಗೋಚರವಾಗಿ ಬೈದವರೇ. ಅದರ ಬಳಿಕ ಸಿದ್ದರಾಮಯ್ಯ ದೇವೇಗೌಡರ ಅವಕೃಪೆಗೆ ಪಾತ್ರರಾಗಿ ಧರ್ಮ ಸಿಂಗ್ ಸಂಪುಟದಿಂದ ಹೊರದಬ್ಬಿಸಿಕೊಂಡರು. ಆಗ ಅವರ ಜೊತೆಗೆ ಸಂಪುಟದಿಂದ ಹೊರಬಂದವರು ಎಚ್.ಸಿ.ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ. ಅಲ್ಲಿಗೆ ಸಿದ್ದರಾಮಯ್ಯ ದೇವೇಗೌಡರ ಜೊತೆಗೆ ಸಂಬಂಧ ಕಡಿದುಕೊಂಡರು ಮತ್ತು ತಾವು ಸತತವಾಗಿ ರಾಜಕೀಯವಾಗಿ ಎದುರಿಸಿಕೊಂಡೇ ಬಂದಿದ್ದ ಕಾಂಗ್ರೆಸ್ಸಿಗೆ ಸೇರಿದರು. ಹೀಗೆ ಸಿದ್ದರಾಮಯ್ಯ ಹೇಗಾದರೂ ಮುಖ್ಯಮತ್ರಿಯಾಗಬೇಕೆಂಬ ತಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಅವಕಾಶವಾದಿಯಾದರು.
೨೦೦೪ ರವರೆಗೆ ಸೋನಿಯರನ್ನು ಟೀಕಿಸಿಕೊಂಡೇ ರಾಜಕೀಯ ಮಾಡಿದ್ದ ಸಿದ್ದರಾಮಯ್ಯ, ೨೦೦೬ರಲ್ಲಿ ಆಕೆಯನ್ನೇ ಅಧಿನಾಯಕಿ ಅಂತ ಒಪ್ಪಿಕೊಂಡು ಆಕೆಯ ಪದತಲಕ್ಕೆ ಶರಣಾದರು. ಅದರಿಂದಾಗಿ ಕಾಂಗ್ರೆಸ್ಸಿಗೆ ಸೇರಿದ ೭ ವರ್ಷದಲ್ಲೇ ಮುಖ್ಯಮಂತ್ರಿಯೂ ಆದರು. ಕಾಂಗ್ರೆಸ್ಸಿನಲ್ಲೇ ಮೂರ್ನಾಲ್ಕು ದಶಕಗಳಿಂದ ಇದ್ದು ಪ್ರಬಲ ನಾಯಕರಾಗಿ ಹೊರಹೊಮ್ಮಿದರೂ, ಗಾಂಧೀ ಕುಟುಂಬಕ್ಕೆ ಅಚಲವಾದ ನಿಷ್ಠೆ ತೋರಿದ್ದರೂ, ಮಲ್ಲಿಕಾರ್ಜುನ ಖರ್ಗೆಯಂಥವರು ಮುಖ್ಯಮಂತ್ರಿಯಾಗಲಿಲ್ಲ....
ರಾಜ್ಯದಲ್ಲಿ ಶೇ. ೨೩ ದಷ್ಟಿರುವ ದಲಿತರಿಗೆ ಕಾಂಗ್ರೆಸ್ ಮುಖ್ಯಮಂತ್ರಿಯಾಗುವ ಅವಕಾಶ ನೀಡದೆ ಕೇವಲ ಶೇ. ೮ ರಷ್ಟ್ಟಿರುವ ಕುರುಬರ ಬಗ್ಗೆ ಒಲವು ತೋರಿಸಿ ಸಿದ್ದರಾಮಯ್ಯನವರಿಗೆ ಮಣೆ ಹಾಕಿತು. ರಾಜಕೀಯ ಜೀವನದುದ್ದಕೂ ರಾಜೀವ್ ಗಾಂಧಿಯನ್ನು, ಸೋನಿಯ ಗಾಂಧಿಯನ್ನು ಬೈದುಕೊಂಡೇ ಓಡಾಡಿದ್ದ ಸಿದ್ದರಾಮಯ್ಯ ಅದೇ ಕಾಂಗ್ರೆಸ್ಸಿನಿಂದ ರಾಜ್ಯದ ಮುಖ್ಯಮಂತ್ರಿಯಾದದ್ದು ಅತ್ಯಂತ ದೊಡ್ಡ ರಾಜಕೀಯ ವಿಪರ್ಯಾಸ. ಹೀಗೆ ಅವಕಾಶವಾದಿಯಾದ ಸಿದ್ದರಾಮಯ್ಯ ತಮ್ಮ ಅಸೆ ಪೂರೈಸಿಕೊಳ್ಳುವುದಕ್ಕೆ ಯಾರನ್ನು ಬೇಕಾದರೂ ಓಲೈಸಲು ಸಿದ್ಧವಿರುವ ರಾಜಕಾರಣಿ. ಈಗ ಮತ್ತೊಮ್ಮೆ ಶತಾಯ ಗತಾಯ ಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಅವರು ತನ್ನನು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ಸಿಗೇ ಬೆನ್ನಿಗಿರಿಯುವ ಕೆಲಸ ಮಾಡಲು ಹೇಸುವವರಲ್ಲ. ಕಾಂಗ್ರೆಸ್ ಈ ಬಾರಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಅಸಾಧ್ಯ ವೆಂದು ಮನದಟ್ಟಾಗಿರುವ ಸಿದ್ದರಾಮಯ್ಯ ಈಗ ಕಾಂಗ್ರೆಸ್ಸನ್ನೇ ಒಡೆದು ಮತ್ತೊಮ್ಮೆ ತಮ್ಮ ಹಳೆಯ ಪಕ್ಷದ ಜೊತೆಗೆ, ಹಳೆ ಬಾಸ್ ದೇವೇಗೌಡರ ಜೊತೆಗೆ ಕೈಜೋಡಿಸಲು ಒಳಗಿಂದೊಳಗೆಯೇ ತಂತ್ರ ರೂಪಿಸಿದ್ದಾರೆ. ಅದಕ್ಕೆ ಅವರಿಗೆ ಆದರ್ಶವಾಗಿರುವುದು ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಸೇರಿ ಆಡಿದ ಟ್ವೆಂಟಿ -ಟ್ವೆಂಟಿ ಆಟ. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಟ್ವೆಂಟಿ - ಟ್ವೆಂಟಿ ಆಟಕ್ಕೆ ರೆಡಿಯಾಗುತ್ತಿದ್ದಾರೆ."
ಮಿತ್ರನ ರಾಜಕೀಯ ತಿಳುವಳಿಕೆಯ ಆಳ ನೋಡಿ ಆಶ್ಚರ್ಯದ ಜೊತೆಗೆ ಖುಷಿಯೂ ಆಯಿತು. ಆತ ಹೇಳಿದ್ದ ಸಿದ್ದರಾಮಯ್ಯನವರ ಇತಿಹಾಸವೆಲ್ಲಾ ನನಗೂ ಗೊತ್ತಿರುವುದಾದರೂ, ಕೊನೆಯಲ್ಲಿ ಹೇಳಿದ ಟ್ವೆಂಟಿ -ಟ್ವೆಂಟಿ ಆಟದ ಬಗ್ಗೆ ಕೊಂಚ ಕುತೂಹಲ ಹುಟ್ಟಿತು. ಸುಮ್ಮನೊಮ್ಮೆ ಕೆಣಕುವ ಉದ್ದೇಶದಿಂದ "ಇನ್ನೊಂದು ಟ್ವೆಂಟಿ -ಟ್ವೆಂಟಿ ಹೇಗಪ್ಪಾ?" ಅಂತ ಚಿಕ್ಕದೊಂದು ಪ್ರಶ್ನೆ ಕಳಿಸಿದೆ. ಮರುದಿನ ಬೆಳಗ್ಗೆ ನೋಡುವಾಗ ಒಂದು ಧೀರ್ಘ ಉತ್ತರವೇ ಆತನಿಂದ ಬಂದಿತ್ತು.
" ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬರೋದಿಲ್ಲವೆಂಬುದು ಸಿದ್ದರಾಮಯ್ಯನವರಿಗೆ ಚೆನ್ನಾಗಿಯೇ ಗೊತ್ತಿದೆ. ಹಾಗಂತ ಅವರು ಸೋಲೊಪ್ಪಿಕೊಂಡುಬಿಡುವ ಜಾಯಮಾನದವರಲ್ಲ. ಹಾಗಂತ ಅವರು ಮತ್ತವರ ಬೆಂಬಲಿಗರಿಗೆ (ಅಷ್ಟೂ ಮಂದಿಯೂ ಮೂಲ ಕಾಂಗ್ರೆಸ್ಸಿನವರೇ ಅಲ್ಲ! ಅವರೆಲ್ಲರೂ ಜನತಾದಳ ದಿಂದ ಕಾಂಗ್ರೆಸ್ಸಿಗೆ ಬಂದವರೇ....!) ಕಾಂಗ್ರೆಸ್ಸನ್ನು ಗೆಲ್ಲಿಸುವ ಶಕ್ತಿಯೂ ಇಲ್ಲ. ಅದಕ್ಕಾಗಿ ಸಿದ್ದರಾಮಯ್ಯ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ತಮ್ಮ ಹಳೆಯ ಗುರು ದೇವೇಗೌಡರ ಜೊತೆಗೆ ಕೈಜೋಡಿಸಿ ಒಂದು ರಹಸ್ಯ ಒಪ್ಪಂದ ಮಾಡಿಕೊಂಡು ಈ ಬಾರಿಯ ಚುನಾವಣಾ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಸಾಧ್ಯವಾದಷ್ಟೂ ತಮ್ಮ ಕಟ್ಟಾ ಬೆಂಬಲಿಗರಿಗೆ ಟಿಕೆಟ್ ಕೊಡಿಸುವುದು ಮೊದಲ ತಂತ್ರ. ಅಂಥ ಕ್ಷೇತ್ರಗಳಲ್ಲಿ ಜೆಡಿಎಸ್ ದುರ್ಬಲ ಅಭ್ಯರ್ಥಿಗಳನ್ನು ಹಾಕುವಂತೆ ನೋಡಿಕೊಂಡು, ಜೆಡಿಎಸ್ ಗೆಲ್ಲಬಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನಿಂದಲೂ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು. ಇದರ ಟ್ರಯಲ್ ಮೊನ್ನೆ ನಡೆದ ಎರಡು ಉಪಚುನಾವಣೆಗಳಲ್ಲೂ ಬಳಸಲಾಗಿದೆ. ಹಾಗಾಗಿ ಕಾಂಗ್ರೆಸ್ ಅಂದಾಜು ೮೦-೯೦ ಸೀಟುಗಳನ್ನು ಗಳಿಸಿ ಅದರಲ್ಲಿ ಬಹುಪಾಲು ತಮ್ಮ ನಿಷ್ಠಾವಂತರೇ ಆಯ್ಕೆಯಾಗುವಂತೆ ಮಾಡಿಕೊಳ್ಳುವುದು, ಜೊತೆಗೆಯೇ ಜೆಡಿಎಸ್ ಕೂಡಾ ೫೦-೬೦ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಸಹಕಾರ ನೀಡುವುದು.
ಯಡ್ಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಪ್ರಬಲವಾದ ಬಿಜೆಪಿಯನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಭಾರೀ ತಂತ್ರವನ್ನೇ ಹೆಣೆದರು. ಈಶ್ವರಪ್ಪ ನವರ ಬಂಡಾಯದ ಹಿಂದೆ ಇದ್ದ ವ್ಯಕ್ತಿಗಳನ್ನೇ ಒಮ್ಮೆ ನೋಡಿ. ಅಹಿಂದದ ಅಷ್ಟೂ ಮಂದಿ ಕುರುಬ ನಾಯಕರನ್ನು ಮುಕುಡಪ್ಪನವರ ನೇತೃತ್ವದಲ್ಲಿ ಈಶ್ವರಪ್ಪನವರ ಬಳಿಗೆ ಕಳುಹಿಸಿದ್ದೇ ಸಿದ್ದರಾಮಯ್ಯ. ಮುಂದೆ ಜನ ಬೆಂಬಲ ಹಾಗು ಹಣ ಬೆಂಬಲ ದಳದಿಂದಲೂ ಸಿಗುವಂತೆ ನೋಡಿಕೊಂಡರು. ಮತ್ತೆ ಈಶ್ವರಪ್ಪನವರು ದಳದ ಬಾಗಿಲು ತಟ್ಟಿ ಬಂದದ್ದು ಆಯ್ತು. ಆದರೆ ಬಿಜೆಪಿ ಹೈಕಮಾಂಡ್ ಈಶ್ವರಪ್ಪನವರನ್ನು ನಿಯಂತ್ರಿಸಿದ್ದರಿಂದ ರಾಯಣ್ಣ ಬ್ರಿಗೇಡ್ ಆಟ ನಡೆಯಲಿಲ್ಲ. ಆದರೂ ಬಿಜೆಪಿ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನೇ ಕುಂದಿಸುವ ಮಟ್ಟಿಗೆ ಈ ತಂತ್ರ ಯಶಸ್ವಿಯಾಯಿತು. ಜೊತೆಗೆ ಬಿಜೆಪಿ ಮತ್ತು ಯಡ್ಯೂರಪ್ಪನವರ ಪ್ರಾಬಲ್ಯ ಕುಗ್ಗಿಸಲು ಕನ್ನಡ ಬಾವುಟದ ವಿಷಯ, ವೀರಶೈವ -ಲಿಂಗಾಯತ ಜನರ ನಡುವೆ ಕಿತ್ತಾಟ ತಂದದ್ದು, ಪ್ರತ್ಯೇಕ ಧರ್ಮದ ವಿಚಾರವನ್ನೆಲ್ಲ ಎತ್ತಿದ್ದು, ಸಿದ್ದರಾಮಯ್ಯ ಬಹಳ ನಿಪುಣತೆಯಿಂದಲೇ ಉಪಯೋಗಿಸಿದರು. ಜೆಡಿಎಸ್ ಜೊತೆಗಿನ ತಮ್ಮ ರಹಸ್ಯ ಒಪ್ಪಂದವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದರೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ತಮ್ಮವರ ಬಳಿಯೇ ಇರಬೇಕೆಂಬುದು ಸಿದ್ದರಾಮಯ್ಯ ಅಪೇಕ್ಷೆಯಾಗಿತ್ತು. ಹಾಗಾಗಿ ತಮ್ಮವರನ್ನೇ (ಎಸ್ಆರ್ ಪಾಟೀಲ್) ಯಾರನ್ನಾದರೂ ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ಸಿದ್ದರಾಮಯ್ಯ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆದರೆ ಡೀಕೇಶಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗದಂತೆ ತಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ಪರಮೇಶ್ವರರನ್ನು ಹೇಗಾದರೂ ಮ್ಯಾನೇಜ್ ಮಾಡಬಹುದು ಎಂಬುದು ಸಿದ್ಧಣ್ಣನ ಲೆಕ್ಕಾಚಾರ.
ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಮ್ಮಿಶ್ರ ಸರಕಾರ ರಚಿಸುವಂಥ ವಾತಾವರಣ ಸೃಷ್ಟಿಸಿ ೨೦-೨೦ ಮಾದರಿಯಲ್ಲಿ ತಾವು ಇನ್ನೊಮ್ಮೆ ಮುಖ್ಯಮಂತ್ರಿಯಾಗುವ ತಂತ್ರ ಸಿದ್ದರಾಮಯ್ಯನವರದ್ದು. ಆದ್ರೆ ಅದಕ್ಕೆ ಕಾಂಗ್ರೆಸ್ಸಿನಲ್ಲಿ ಡೀಕೇಶಿ ತೊಡಕಾದರೆ, ಜೆಡಿಎಸ್ ನಲ್ಲಿ ಕುಮಾರಸ್ವಾಮಿಯೇ ತೊಡಕು. ಸಿದ್ದರಾಮಯ್ಯನವರಿಗೂ ರೇವಣ್ಣನವರಿಗೂ ಮೊದಲಿಂದಲೂ ಗಳಸ್ಯ ಕಂಠಸ್ಯ ಸ್ನೇಹವಿದೆ. ರೇವಣ್ಣ ಮತ್ತು ತಾನು ಪಾಲುದಾರಿಕೆಯಲ್ಲಿ ೨೦-೨೦ ಮ್ಯಾಚು ಆಡಬೇಕಾದರೆ ಕುಮಾರಸ್ವಾಮಿಯನ್ನು ನಿಯಂತ್ರಿಸಲೆ ಬೇಕು. ಅದಕ್ಕೋಸ್ಕರವೇ ಕುಮಾರಸ್ವಾಮಿಗೆ ಮೂಗುದಾರ ಹಾಕಲು ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಜೀವ ಕೊಡಲಾಯಿತು. ಕುಮಾರಸ್ವಾಮಿಯ ಪ್ರಭಾವವನ್ನು ಇನ್ನಷ್ಟು ತಗ್ಗಿಸಲು ಪ್ರಜ್ವಲ್ ರೇವಣ್ಣನನ್ನೂ ಬಳಸಿಕೊಳ್ಳಲಾಗುತ್ತಿದೆಯೋ ಎಂಬ ಸಂಶಯವೂ ದಟ್ಟವಾಗಿಯೇ ಇದೆ....!
ಕಳೆದೊಂದು ವರ್ಷದಿಂದಲೂ ಸಿದ್ದರಾಮಯ್ಯ ದೇವೇಗೌಡರ ಜೊತೆಗೆ ಸಂಬಂಧ ಪುನಃಸ್ಥಾಪಿಸಿಕೊಂಡಿದ್ದಾರೆ. ರೇವಣ್ಣ - ಸಿದ್ರಾಮಣ್ಣ ಜೋಡಿಯಾಗಿ ೨೦-೨೦ ಆಟ ಆಡುವುದಿದ್ದರೆ ಅದರಿಂದ ದೇವೇಗೌಡರಿಗೆ ಖುಷಿಯೇ... ಯಾಕಂದರೆ ಈ ಒಂದು ನೆವದಲ್ಲಾದರೂ ಅವರ ಮತ್ತೊಬ್ಬ ಪುತ್ರ ರೇವಣ್ಣನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಒಂದು ಅವಕಾಶ ಸಿಗುತ್ತದಲ್ಲಾ! ಕುಮಾರಸ್ವಾಮಿ ಯಡ್ಯೂರಪ್ಪನವರೊಂದಿಗೆ ಸೇರಿ ೨೦-೨೦ ಆಡಿದಾಗ ಮಾಡಿದಂಥದ್ದೇ ನಾಟಕ ಈಗಲೂ ಮಾಡಬಹುದು.! ರೇವಣ್ಣ ನನ್ನ ಮಾತು ಕೇಳದೇ ಸಿದ್ದರಾಮಣ್ಣನೊಂದಿಗೆ ಹೋಗಿಬಿಟ್ಟ ಅಂತ ದೊಡ್ಡಗೌಡರು ಒಂದೆರಡು ತಿಂಗಳು ಕಣ್ಣೀರು ಹಾಕಿದರೆ ಪ್ರಾಬ್ಲಮ್ ಸಾಲ್ವ್! ಅಲ್ಲದೆ ಸಿದ್ರಾಮಣ್ಣ ಕೋಮುವಾದಿ ಅಲ್ಲವಲ್ಲ ಎಂಬ ತಾಂತ್ರಿಕ ನೆರವು ಪಡೆಯಬಹುದು.
ಇನ್ನು ಕುಮಾರಣ್ಣ ಇದಕ್ಕೇನಾದರೂ ಆಕ್ಷೇಪಿಸಿದರೆ ಜಂತಕಲ್ ಅಸ್ತ್ರ ಇದ್ದೇ ಇದೆ! ಈ ೨೦-೨೦ ಪ್ಲಾನ್ ಗೆ ದೊಡ್ಡಮಟ್ಟದ ತೊಡಕೂ ಅಂತ ಇದ್ದರೆ ಅದು ಕಾಂಗ್ರೆಸ್ಸಿನೊಳಗೆ ಡೀಕೇಶಿ ಮಾತ್ರ..! ಈಗ ಈ ಐ.ಟಿ. ದಾಳಿಯಿಂದ ಡೀಕೇಶಿ ಹೈರಾಣಾಗಿದ್ದಾರೆ. ಇನ್ನು ಬೇನಾಮಿ ಆಸ್ತಿ ಮಾಡಿದ ದಾಖಲೆ ಪತ್ರಗಳೇನಾದರೂ ಐ.ಟಿ.ಗೆ ದೊರಕಿದರೆ Enforcement Directorate ಕೂಡ ಡೀಕೇಶಿ ಮೇಲೆ ಕೇಸು ದಾಖಲಿಸಿ ಬಂದಿಸಲೂ ಬಹುದು... ಅಗ ಅದರಿಂದ ಸಿದ್ದರಾಮಣ್ಣನಿಗೇ ಅನುಕೂಲ ಹೆಚ್ಚು.
ಇನ್ನು ಒಂದು ವೇಳೆ ಕಾಂಗ್ರೆಸ್ಸಿನಿಂದ ಆಯ್ಕೆಯಾದ ಶಾಸಕರಲ್ಲಿ ಒಂದಷ್ಟು ಮಂದಿ ತನ್ನ ಮಾತೇನಾದರೂ ಕೇಳದೆ ಜೆಡಿಎಸ್ ಜೊತೆಗೆ ಸೇರಲು ಒಪ್ಪದಿದ್ದ ಪಕ್ಷದಲ್ಲಿ, ಆಗ ತಮ್ಮ ಬೆಂಬಲಿಗೆ ಶಾಸಕರೊಂದಿಗೆ ಸಿದ್ದರಾಮಣ್ಣ ಕಾಂಗ್ರೆಸ್ಸನ್ನೇ ಒಡೆದು ರೇವಣ್ಣ ಜೊತೆಗೊಂದು ೨೦-೨೦ ಆಟ ಆಡಿಬಿಡಬಹುದು.! ದೇವೇಗೌಡರು ಯಥಾ ಪ್ರಕಾರ ಒಳಗಿಂದೊಳಗೆ ಸಂತೋಷಪಟ್ಟು, ಹೊರಗಿನಿಂದ ಕಣ್ಣೀರು ಸುರಿಸಿ ಕೃತಾರ್ಥರಾಗಬಹುದು. ಹಾಗಾಗಿ ಬಿಜೆಪಿಯನ್ನು ೮೦-೯೦ ಸೀಟುಗಳೊಳಗೆ ನಿಯಂತ್ರಿಸಿ, ಉಳಿದಂತೆ ಕಾಂಗ್ರೆಸ್ಸಿನ ತಮ್ಮ ಬೆಂಬಲಿಗ ಶಾಸಕರೊಂದಿಗೆ ರೇವಣ್ಣ- ಸಿದ್ದಣ್ಣ ೨೦-೨೦ ಮ್ಯಾಚ್ ಆಡುವ ಸ್ಕೆಚ್ಚು ರೆಡಿಯಾಗುತ್ತಿದೆ.
ಹಾಗಾಗಿಯೇ ನಾನು ಹೇಳಿದ್ದು... ಡೀಕೇಶಿ ಸಾಮ್ರಾಜ್ಯದ ಮೇಲೆ ಐ.ಟಿ. ರೇಡ್ ಆದಾಗ ಬಿಜೆಪಿಯವರಿಗಿಂತಲೂ ಖುಷಿ ಪಟ್ಟದ್ದು ಸಿದ್ದರಾಮಯ್ಯನವರೇ... ನನ್ನ ಮನಸ್ಸಿನಲ್ಲಿ ಮೂಡಿದ ಈ ಅನಿಸಿಕೆಗಳು ನೂರಕ್ಕೆ ನೂರು ಸತ್ಯ ಅಂತ ಅನ್ನಿಸಿದ್ದು ದೊಡ್ಡಾಲದ ಹಳ್ಳಿಯ ಗೌರಮ್ಮನವರು ಟಿವಿ ಚಾನೆಲ್ ಗಳಿಗೆ ನೀಡಿದ ಸಂದರ್ಶನ.... ಮಕ್ಕಳ ಕಷ್ಟ ತಾಯಿಗೆ ಖಂಡಿತಾ ಗೊತ್ತಿರುತ್ತೆ. ಹಾಗಾಗಿಯೇ ಡೀಕೇಶಿಯವರ ತಾಯಿ ಗೌರಮ್ಮ ನಿಜಕ್ಕೂ ತಮ್ಮ ಮನಸ್ಸಿನೊಳಗಿನ ಮಾತುಗಳನ್ನು ಒಂದಿಷ್ಟೂ ಅಳುಕದೆ ಹೇಳಿದ್ದಾರೆ.."
ಸ್ನೇಹಿತ ಕಳುಹಿಸಿದ ಈ ವಿಶ್ಲೇಷಣೆ ಓದಿ ನಾನು ಎರಡು ಕಾರಣಕ್ಕೆ ಆಶ್ಚರ್ಯ ಚಕಿತನಾದೆ. ಒಂದು, ರಾಜಕೀಯದಲ್ಲೇ ಇಲ್ಲದ, ಓರ್ವ ಸಾಮಾನ್ಯ ವ್ಯಕ್ತಿ ಕೂಡಾ ರಾಜ್ಯದ ರಾಜಕೀಯವನ್ನು ಅದೆಷ್ಟು ಹತ್ತಿರದಿಂದ ಅದೆಷ್ಟು ಆಸ್ಥೆಯಿಂದ ಗಮನಿಸುತ್ತಾರೆ ಅಂತ ಅಚ್ಚರಿಯಾಯಿತು. ಇನ್ನೊಂದು, ನಮ್ಮ ಜನ ಅದೆಷ್ಟರ ಮಟ್ಟಿಗೆ ರಾಜಕೀಯ ಪ್ರಜ್ಞಾವಂತಿಕೆ ಗಳಿಸಿದ್ದಾರೆ ಅಂತ ಭಯಮಿಶ್ರಿತ ಆಶ್ಚರ್ಯವೂ ಆಯಿತು.
ಮಿತ್ರ ಕಳಿಸಿದ ಈ ಧೀರ್ಘ ಸಂದೇಶ್ ಓದಿ ನೋಡಿ ನಾನು ಕಾಮೆಂಟ್ ಮಾಡಲಿಕ್ಕೆ ಹೋಗಲಿಲ್ಲ , ಬದಲಿಗೆ ನಮಸ್ಕಾರ ಮಾಡುವ, ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಹಾಕಿ ಕಣ್ಣುಮುಚ್ಚಿಕೊಂಡು ಯೋಚಿಸತೊಡಗಿದೆ.
ಡೀಕೇಶಿ ಮೇಲೆ ಐಟಿ ದಾಳಿಯಾದಾಗ ಸಿದ್ದರಾಮಯ್ಯ ಮೀಸೆಯಡಿಯಲ್ಲೇ ನಕ್ಕರು! ನಗುವ ಧೈರ್ಯವಿಲ್ಲದ ಪರಮೇಶ್ವರ್ ಒಳಗೊಳಗೇ ಸಂತೋಷ ಪಟ್ಟರು. ದೇವೇಗೌಡರ ಸಂತೋಷವನ್ನು ಕಷ್ಟಪಟ್ಟು ನುಂಗಿಕೊಂಡಂತೆ ಕಾಣಿಸಿತು! ಆದರೆ ಪ್ರತಿಪಕ್ಷ ಬಿಜೆಪಿಯ ನಾಯಕರು ಸಂಪೂರ್ಣ ಮೌನಕ್ಕೆ ಶರಣಾಗಿದ್ದರು. ಮೌನಕ್ಕೆ ನೂರಾರು ಅರ್ಥಗಳು. ಈ ಮೌನ ಮುಂದೆ ರಾಜಕೀಯ ಚಿತ್ರ ಬದಲಾವಣೆಗೆ ವೇದಿಕೆಯಾಗುವುದೋ...... ಕಾಲಾಯ ತಸ್ಮೇಯ ನಮಃ!!!