ಕರ್ನಾಟಕದ ಪ್ರಪ್ರಥಮ ವೈಟ್ ಸ್ಪೇಸ್ ಅಂತರಜಾಲ ಯೋಜನೆಯ ಪೈಲಟ್ ಅಧ್ಯಯನಕ್ಕೆ ಉತ್ತರ ಕನ್ನಡ ಜಿಲ್ಲೆಗೆ ಸಮ್ಮತಿ!
ಉತ್ತರ ಕನ್ನಡದ ದುರ್ಗಮ ಗುಡ್ಡಗಾಡುಗಳಲ್ಲಿ, ಅತಿ ಎತ್ತರದ ಪರ್ವತ ಪ್ರದೇಶ ಮತ್ತು ದಟ್ಟ ಅರಣ್ಯ ಇರುವ ಪ್ರದೇಶಗಳಲ್ಲಿ ದೂರಸಂಪರ್ಕ ವ್ಯವಸ್ಥೆ ಅನ್ನೋದು ಕನಸಿನ ಮಾತೇ ಸರಿ. ಇದು ಈ ಭಾಗದ ಸಮಸ್ಯೆ ಮಾತ್ರ ಅಲ್ಲ ಎತ್ತರದ ಪರ್ವತ, ಕಣಿವೆ, ದಟ್ಟ ಕಾಡುಗಳಿಂದ ಕೂಡಿದ ಎಲ್ಲಾ ಭೂಭಾಗಗಳಲ್ಲೂ ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕಗಳನ್ನು ಒದಗಿಸುವುದು ಅತ್ಯಂತ ಸವಾಲಿನ ವಿಶಯವೇ. ಇಂಥ ಪ್ರದೇಶಗಳಲ್ಲಿ ದೂರಸಂಪರ್ಕ ಕಲ್ಪಿಸುವುದಕ್ಕೆ ದೊಡ್ಡ ತೊಡಕಾಗಿರುವುದು ತಂತ್ರಜ್ಞಾನವೇ. ಆದುದರಿಂದ ದೂರವಾಣಿ ಮತ್ತು ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಇದೆ ಬಹು ದೊಡ್ಡ ಸವಾಲು.
ಯಾಕಂದರೆ ಈಗಿರುವ ೨ಜಿ, ೩ಜಿ, ೪ಜಿ, ಹೀಗೆ ಯಾವುದೇ ಇರಲಿ, ಅದನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ತಂತ್ರಜ್ಞಾನದ್ದೇ ದೊಡ್ಡ ಪಾತ್ರ ಹಾಗು ಸವಾಲು. ಮೊಬೈಲ್ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಅಂತರ್ಜಾಲ ಸಂಪರ್ಕ ಕಲ್ಪಿಸಲು ಮೊಬೈಲ್ ಟವರ್ ಅತ್ಯಾವಶ್ಯಕ. ಈಗ ಬಳಕೆಯಲ್ಲಿರುವ ತಂತ್ರಜ್ಞಾನದಲ್ಲಿ ಒಂದು ಟವರ್ ಗೆ ೫ ಕಿಲೋಮೀಟರುಗಳಷ್ಟು ರೇಂಜ್ ಇದೆ ಎಂದು ಹೇಳಲಾಗುತ್ತದಾದರೂ ಈ ಟವರ್ ಗಳಿಂದ ಹೊರಸೂಸುವ ತರಂಗಗಳು ಅತಿ ಹೆಚ್ಚಿನ ಫ್ರೀಕ್ವೆನ್ಸಿ ಹೊಂದಿರುವುದರಿಂದ ತುಂಬಾ ದೂರಕ್ಕೆ ಚಲಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಜೊತೆಗೆ ಈ ತರಂಗಗಳಿಗೆ ಅಡೆತಡೆಗಳಿದ್ದಾಗ ಅವುಗಳ ಚಾಲನೆ ಮತ್ತಷ್ಟು ಕುಂಠಿತವಾಗುತ್ತದೆ. ಉದಾಹರಣೆಗೆ ದಪ್ಪಗಿನ ಗೋಡೆಗಳೂ ಕೂಡಾ ಈ ತರಂಗಗಳನ್ನು ತಡೆಯಬಲ್ಲವು. ಇದನ್ನು ನೀವು ನಗರ ಪ್ರದೇಶಗಳಲ್ಲೇ ಅನುಭವಿಸಿರುತ್ತೀರಿ. ಮೊಬೈಲ್ ಟವರ್ ಹತ್ತಿರವೇ ಇದ್ದರೂ ಒಂದು ಕಟ್ಟಡದೊಳಗಿನ ಕೆಲವು ಕೊಠಡಿಗಳಲ್ಲಿ ನೆಟ್ ವರ್ಕ್ ಸಿಗುವುದಿಲ್ಲ. ಹೀಗಾಗಿಯೇ ಪಶ್ಚಿಮ ಘಟ್ಟದಲ್ಲಿ ಅವಿತಿರುವ ನಮ್ಮ ಉತ್ತರ ಕನ್ನಡ ಜಿಲ್ಲೆಗಳಂಥ ದುರ್ಗಮ ಬೆಟ್ಟ ಗುಡ್ಡಗಳಿರುವ, ಕಣಿವೆಗಳಿರುವ ಪ್ರದೇಶಗಳಿಗೆ ಮೊಬೈಲ್ ಸಿಗ್ನಲ್ ತಲುಪುವುದು ಅಸಾಧ್ಯವೇ. ಜೊತೆಗೆ ದೂರದ ಮಲೆನಾಡಿನ ಕಾನುಗಳ ನಡುವೆ ಟವರ್ ಗಳನ್ನು ಸ್ಥಾಪಿಸುವುದೂ ಅಸಾಧ್ಯವೇ.
ಡಿಜಿಟಲ್ ಇಂಡಿಯ ಕಾರ್ಯಕ್ರಮದ ಮೂಲಕ ನಮ್ಮ ಕೇಂದ್ರ ಸರಕಾರ ದೇಶದ ಎಲ್ಲಾ ಗ್ರಾಮ ಪಂಚಾಯತಿಗಳನ್ನೂ ಫೈಬರ್ ಆಪ್ಟಿಕ್ ಮೂಲಕ ಬೆಸೆಯುವ ಯೋಜನೆ ಹಾಕಿಕೊಂಡಿದೆ. ಆದರೆ ಅಲ್ಲಿಂದ ಬಳಿಕ ಈ ಸಿಗ್ನಲ್ ಗಳನ್ನೂ ಪ್ರಸರಿಸುವುದು ನಮ್ಮ ಉತ್ತರ ಕನ್ನಡದ ಕಾಡಂಚಿನ ಹಳ್ಳಿಗಳ ವಿಚಾರದಲ್ಲಿ ಪ್ರಸ್ತುತ ಸಾಧ್ಯವಿಲ್ಲದ ಮಾತು. ಈಗ ಉತ್ತರ ಕನ್ನಡ ಜಿಲ್ಲೆಯ ಪಟ್ಟಣ ಪ್ರದೇಶದಲ್ಲಿ ತಕ್ಕ ಮಟ್ಟಿಗೆ ಮೊಬೈಲ್ ನೆಟ್ ವರ್ಕ್ ಲಭ್ಯವಿದ್ದರೂ ಅದನ್ನೇ ಗುಡ್ಡ ಬೆಟ್ಟಗಳ ಪ್ರದೇಶಗಳಿಗೆ ವಿಸ್ತರಿಸುವುದು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣವೇ ತಂತ್ರಜ್ಞಾನದ ಸೀಮಿತತೆ.
ಭಾರತದಲ್ಲಿ ಹಳ್ಳಿಗಾಡಿನ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್, ಅಂತರ್ಜಾಲ ಮುಂತಾದ ಆಧುನಿಕ ಸಂಪರ್ಕ ಸಾಧನಗಳ ಲಭ್ಯತೆ ಇಲ್ಲ. ನಗರ ಪಟ್ಟಣ ಪ್ರದೇಶಗಳ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಇರುವ ಅವಕಾಶ ಗ್ರಾಮೀಣ ಮಕ್ಕಳಿಗೆ ಇರುವುದಿಲ್ಲ. ಇದರಿಂದಾಗಿ ಇಡೀ ಜಗತ್ತಿನಲ್ಲಿ ಬಡ ಗ್ರಾಮೀಣ ಮಕ್ಕಳು ಮತ್ತು ಅನುಕೂಲವಿರುವ ನಗರವಾಸಿ ಮಕ್ಕಳ ನಡುವೆ ಒಂದು ಡಿಜಿಟಲ್ ತಾರತಮ್ಯ ಬಹಳ ವೇಗವಾಗಿ ಹಬ್ಬುತ್ತಿದೆ. ನಮ್ಮ ಕೇಂದ್ರ ಸರಕಾರ ಸರಕಾರೀ ಶಾಲಾ ಮಕ್ಕಳ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಕಂಪ್ಯೂಟರ್ ಆಧಾರಿತ ಶಿಕ್ಷಣ ಹಲವಾರು ಗ್ರಾಮೀಣ ಭಾಗದ ಮಕ್ಕಳಿಗೆ ಮರೀಚಿಕೆಯಾಗುತ್ತಿದೆ. ಅದಕ್ಕೆ ಮೂಲ ಕಾರಣವೆ ಅವರು ವಾಸಿಸುವ ದುರ್ಗಮ ಪ್ರದೇಶ.
ಇಂಥ ಸ್ಥಳಗಳಿಗೆ ಆಧುನಿಕ ತಂತ್ರಜ್ಞಾನವನ್ನು ಎಷ್ಟು ಹಣಖರ್ಚು ಮಾಡಿದರೂ ಕೊಂಡೊಯ್ಯಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಫೈಬರ್ ಆಪ್ಟಿಕ್ ಕೇಬಲ್ ಗಳನ್ನಾಗಲೀ ಅಥವಾ ಇತರ ಸಾಧನಗಳನ್ನಾಗಲೀ ಇಂಥ ಪ್ರದೇಶಗಳಿಗೆ ಕೊಂಡೊಯ್ದು ಸಂಪರ್ಕ ಕಲ್ಪಿಸುವುದು ಅಸಾಧ್ಯದ ಮಾತು. ಹೀಗೆ ತಂತ್ರಜ್ಞಾನದ ಅಲಭ್ಯತೆಯಿಂದ ಗ್ರಾಮೀಣ ಭಾಗದ ಮಕ್ಕಳಷ್ಟೇ ಅಲ್ಲದೆ, ದೊಡ್ಡವರೂ, ಮಹಿಳೆಯರೂ, ರೈತರೂ ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ವಂಚಿತರಾಗಬೇಕಾಗುತ್ತದೆ. ಜೊತೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅತೀ ಅದ್ಭುತ ಪ್ರಾಕೃತಿಕ ತಾಣಗಳನ್ನು ಪ್ರವಾಸೀ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವುದರ ಹಿಂದೆಯೂ ಈ ತಂತ್ರಜ್ಞಾನದ ಅಲಭ್ಯತೆ ಬಹು ದೊಡ್ಡ ಸವಾಲೇ. ಹಾಗಾಗಿ ಆಧುನಿಕ ಸಂಹವನ ಸಾಧನಗಳ ಮೂಲಕ ನಮ್ಮ ಜಿಲ್ಲೆಯ ದೂರದ ಮೂಲೆಯಲ್ಲಿನ ಗುಡ್ಡ ಬೆಟ್ಟಗಳ ನಡುವಿನ ಪ್ರದೇಶಗಳನ್ನು ಬೆಸೆಯುವುದು ಅಷ್ಟು ಸುಲಭದ ಕೆಲಸವಲ್ಲ.
ಈ ಹಿನ್ನಲೆಯಲ್ಲಿ ಕಳೆದ ೩-೪ ವರ್ಷಗಳಿಂದಲೂ ಹಲವಾರು ತಾಂತ್ರಿಕ ಸಾಧ್ಯತೆಗಳ ಬಗ್ಗೆ ಅವಲೋಕನ ಹಾಗು ಹುಡುಕಾಟ ನಮ್ಮ ಕಡೆಯಿಂದ ನಿರಂತರವಾಗಿ ನಡೆಯುತ್ತಿತ್ತು. ಈ ಅನ್ವೇಷಣೆಯ ಹಾದಿಯಲ್ಲಿ ಗೋಚರಿಸಿದ್ದೆ ಹೊಸ ತಂತ್ರಜ್ಞಾನದ ಹೊಸ ಪೀಳಿಗೆಯ ಬ್ರಾಡ್ ಬ್ಯಾಂಡ್ ಯೋಜನೆಯ ಅಗಾಧ ಸಾಧ್ಯತೆ. ನಮ್ಮ ಉತ್ತರ ಕನ್ನಡ ಜಿಲ್ಲೆಯಂಥ ಅಸಾಧಾರಣ ಪ್ರಾಕೃತಿಕ ಭೂಭಾಗಕ್ಕೆ ಹೇಳಿ ಮಾಡಿಸಿದ ಹಾಗಿದೆ ಈ ತಂತ್ರಜ್ಞಾನ.
ಅದುವೇ ವೈಟ್ ಸ್ಪೇಸ್! ಇದನ್ನು ಟಿ.ವಿ. ವೈಟ್ ಸ್ಪೇಸ್ ಅಂತಲೂ ಕರೀತಾರೆ. ಇದು ಅನಾಲಾಗ್ ಟಿ.ವಿ. ಚಾನೆಲ್ ಗಳನ್ನೂ ಬಿತ್ತರ ಮಾಡಲು ಉಪಯೋಗಿಸುತ್ತಿದ್ದ (ಈಗ ಟಿವಿ ಸಂಕೇತಗಳೆಲ್ಲಾ ಭಾರತದಲ್ಲಿ ಡಿಜಿಟಲೀಕರಣಗೊಂಡಿದೆ) ತರಂಗಾಂತರ. ಸಾಮಾನ್ಯವಾಗಿ ಭಾರತದಲ್ಲಿ ಟಿ.ವಿ. ಸಿಗ್ನಲ್ ಗಳು ವಿ.ಎಚ್.ಎಫ್. ಮತ್ತು ಯು.ಎಚ್.ಎಫ್. ತರಂಗಾಂತರದ ಗುಚ್ಛಗಳಲ್ಲಿ (ಸ್ಪೆಕ್ಟ್ರಮ್ - ಬ್ಯಾಂಡ್ ) ಪ್ರಸಾರವಾಗುತ್ತಿತ್ತು. ಟಿ.ವಿ. ವೈಟ್ ಸ್ಪೇಸ್ ಅಂದರೆ ಇಂಥ ಎರಡು ಟಿ.ವಿ. ಚಾನೆಲ್ ಗಳು ಪ್ರಸಾರವಾಗುತ್ತಿದ್ದ ತರಂಗಾಂತರದ ಮಧ್ಯೆಯಿದ್ದ ಖಾಲೀ ಜಾಗ (ಬಫರ್ ಜೋನ್). ಈ ಜಾಗದಲ್ಲಿ ಬೇರೇನನ್ನಾದರೂ ಪ್ರಸಾರ ಮಾಡಲು ವಿಜ್ಞಾನಿಗಳೇ ಸಂಶೋಧನೆ ನಡೆಸಿ, ಅದರಲ್ಲಿ ಯಶಸ್ಸನ್ನೂ ಪಡೆದರು.
ಅಷ್ಟರಲ್ಲಿ ಪ್ರಪಂಚದಾದ್ಯಂತ ಹೆಚ್ಹೂ ಕಡಿಮೆ ಎಲ್ಲಾ ಕಡೆಯೂ ಟಿ.ವಿ. ಚಾನೆಲ್ ಗಳು ಡಿಜಿಟಲೀಕರಣಗೊಂಡ ಮೇಲೆ ಈ ಬಫರ್ ಜೋನ್ ಮಾತ್ರವಲ್ಲ ಪೂರ್ತಿ ವಿ.ಎಚ್.ಎಫ್. ಮತ್ತು ಯು.ಎಚ್.ಎಫ್. ತರಂಗಾಂತರದ ಗುಚ್ಛವೇ ಸಂಪೂರ್ಣವಾಗಿ ಫ್ರೀಯಾಗಿ ದೊರೆಯಿತು. ಅಂದರೆ ಈ ತರಂಗಾಂತರದಲ್ಲಿ ಯಾವುದೇ ಪ್ರಸಾರವೂ ಇಲ್ಲದೆ, ಅವು ಬೇರಿನ್ಯಾವುದಾದರೂ ಪ್ರಸಾರ ಮಾಧ್ಯಮಕ್ಕೆ ಲಭ್ಯವಿದ್ದವು. ಈ ಲಭ್ಯವಿರುವ ವಿ.ಎಚ್.ಎಫ್. ಮತ್ತು ಯು.ಎಚ್.ಎಫ್. ತರಂಗಾಂತರದ ಗುಚ್ಛಗಳಲ್ಲಿ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಪ್ರಸಾರ ಮಾಡಬಹುದೆಂಬ ಆಲೋಚನೆ ವಿಜ್ಞಾನಿಗಳಿಗೆ ದೊರಕಿದ ಕೂಡಲೇ ಅವರೆಲ್ಲ ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾದರು. ಪ್ರಪಂಚದಾದ್ಯಂತ ಮುಂದುವರಿಯುತ್ತಿರುವ ಮತ್ತು ಬಡ ದೇಶಗಳ ಗ್ರಾಮೀಣ ಭಾಗದ ಜನರನ್ನು ಈ ವೈಟ್ ಸ್ಪೇಸ್ ಬ್ರಾಡ್ ಬ್ಯಾಂಡ್ ಮೂಲಕ ಬೆಸೆಯುವ ಕೆಲಸಗಳು ಪ್ರಾರಂಭವಾದವು.
ಕಳೆದ ಎರಡು ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ಈ ಬಗ್ಗೆ ಯಶಸ್ವೀ ಪ್ರಯೋಗಗಳು ನಡೆಯುತ್ತಿದ್ದಂತೆಯೇ ಭಾರತದಲ್ಲೂ ಪ್ರಾಯೋಗಿಕ ಯೋಜನೆಗಳು ಶುರುವಾದವು. ಮೋದೀಜಿಯವರ ಕನಸಿನ ಡಿಜಿಟಲ್ ಇಂಡಿಯ ಯೋಜನೆಗೆ ಸಂವಾದಿಯಾಗಿ ಭಾರತದ ಹಳ್ಳಿಗಳನ್ನು ಬ್ರಾಡ್ ಬ್ಯಾಂಡ್ ಅಂತರ್ಜಾಲದ ಮೂಲಕ ಬೆಸೆಯುವ ಕನಸಿಗೆ ತೊಡಕಾಗಿದ್ದದ್ದೇ ಭಾರತದ ಭೂ ಪ್ರದೇಶಗಳ ಮೇಲ್ಮೈ ಲಕ್ಷಣಗಳು. ಈ ತಂತ್ರಜ್ಞಾನವು ನಮ್ಮ ಕ್ಷೇತ್ರದ ಮುಂದಿನ ಅಗತ್ಯಗಳಿಗೆ ಹಾಗು ಪ್ರಸ್ತುತ ಬೇಡಿಕೆಗಳಿಗೆ ಸೂಕ್ತ ಪರಿಹಾರ ಒದಗಿಸಲಿದೆ. ಕ್ಷೇತ್ರ ಹಾಗು ಜಿಲ್ಲೆಯ ಬಹುತೇಕ ಗುಡ್ಡಗಾಡು ಸ್ಥಳಗಳಲ್ಲಿ ಈಗಿರುವ ಅಸಮರ್ಪಕ ಸಂಪರ್ಕದ ವ್ಯವಸ್ಥೆಗೆ ಈ ತಂತ್ರಜ್ಞಾನವು ಬಹು ಉಪಯುಕ್ತವಾಗಲಿದ್ದು, ಜನರಿಗೆ ಸಂಪರ್ಕ ಹಾಗು data ವಿನಿಮಯಕ್ಕೆ ಸಹಕಾರಿಯಾಗಲಿದೆ. ಈ ತಂತ್ರಜ್ಞಾನವು, ಜನರಿಗೆ ಹೆಚ್ಚಿನ ಗುಣಮಟ್ಟದ ಹಾಗು ದುಬಾರಿಯಲ್ಲದ, ಸಮಂಜಸವಾದ ಸೇವೆ ಒದಗಿಸಲಿದೆ.
ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಈಗಾಗಲೇ ಇದಕ್ಕೆಂದೇ ಒಂದು ಪ್ರತ್ಯೇಕ ಸಂಸ್ಥೆಯೊಂದನ್ನು ಪ್ರಾರಂಭ ಮಾಡಿದ್ದು ಅದಕ್ಕೆ ಮೈಕ್ರೋಸಾಫ್ಟ್ ವೈಟ್ ಸ್ಪೇಸ್ ಅಂತಲೇ ಹೆಸರಿಟ್ಟಿದೆ. ಅದೀಗ ಸೀಮಾಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ರವರ ಸರಕಾರದೊಂದಿಗೆ ಸೇರಿಕೊಂಡು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ವೈಟ್ ಸ್ಪೇಸ್ ಬ್ರಾಡ್ ಬ್ಯಾಂಡ್ ಯೋಜನೆಯ pilot study ಪ್ರಾರಂಭಿಸಿದೆ. ಇದರೊಂದಿಗೆಯೇ ದೇಶದ ಎರಡನೆಯ ಯೋಜನೆ ಮಹಾರಾಷ್ಟ್ರದ ಐ.ಐ.ಟಿ. ಮತ್ತು ವೈಟ್ ಸ್ಪೇಸ್ ಅಲಾಯನ್ಸ್ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಥಾಣೆ ಜಿಲ್ಲೆಯ ಪಾಲ್ಗಢ ತಾಲೂಕಿನ ಖಾಮ್ಲೋಲಿ ಎಂಬ ಹಳ್ಳಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.
ಆಗಿನಿಂದಲೂ ನಮ್ಮ ತಂಡ ಈ ಯೋಜನೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೆ ತಂತ್ರಜ್ಞಾನದ ಪೈಲಟ್ ಯೋಜನೆಯೊಂದನ್ನು ಪ್ರಾರಂಭಿಸಲು ಉತ್ಸುಕವಾಗಿತ್ತು. ಇದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಒಂದಷ್ಟು ಮಂದಿ ತಜ್ಞರ ಸಲಹೆ ಸಹಕಾರ ಪಡೆದು ಒಂದು ವಿಸ್ತೃತ ಪ್ರಾಯೋಗಿಕ ಪ್ರಸ್ತಾಪವನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಮಂತ್ರಿಗಳಾದ ಶ್ರೀ. ಮನೋಜ್ ಸಿನ್ಹ ರವರಿಗೆ ಸಲ್ಲಿಸಿ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು pilot programme ಪ್ರಾರಂಭಿಸುವ ಬಗ್ಗೆ ಪ್ರಸ್ತಾಪಿಸಲಾಯ್ತು. ಈ ಪ್ರಸ್ತಾಪಕ್ಕೆ ಕೂಡಲೇ ಸ್ಪಂದಿಸಿದ ಮಂತ್ರಿಗಳು ಇಂಥದ್ದೊಂದು ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ಉತ್ತರ ಕನ್ನಡ ಜಿಲ್ಲೆಯ terrain & topography (ಭೂ ಮೇಲ್ಮೈ ಲಕ್ಷಣ) ತುಂಬಾ ಸೂಕ್ತವೆಂದೂ ಹೇಳಿ, ಕೂಡಲೇ ಸಮ್ಮತಿ ಸೂಚಿಸಿದರು!
ಈ ಅನುಮತಿ ಅತ್ಯಂತ ಪ್ರಮುಖ ಸಂಗತಿಯಾಗಿತ್ತು. ಯಾಕೆಂದರೆ ಈ ವಿ.ಎಚ್.ಎಫ್. ಮತ್ತು ಯು.ಎಚ್.ಎಫ್. ತರಂಗಾಂತರದ ಗುಚ್ಛಗಳ ಬಳಕೆಗೆ ಕೇಂದ್ರ ಸರಕಾರದ ಅನುಮತಿ ಅತ್ಯಗತ್ಯ. ಈಗ ಅನುಮತಿಯೇನೋ ಸಿಕ್ಕಿತು. ಇನ್ನು ಮುಂದಿರುವುದು ಬಹು ದೊಡ್ಡ ಪ್ರಯೋಗದ ಕಾರ್ಯ. ಇದಂತೂ, ಅತಿ ದುರ್ಗಮ ಪ್ರದೇಶಗಳಲ್ಲೂ ಈ ತಂತ್ರಜ್ಞಾನ ಕಾರ್ಯ ನಿರ್ವಹಿಸಬಲ್ಲದು ಎಂಬುದನ್ನು ಪ್ರಯೋಗ ನಡೆಸಿ ಕಂಡುಕೊಳುವಲ್ಲಿ ನಾವು ಯಶಸ್ವಿಯಾದರೆ ಅದರಿಂದ ನಮ್ಮ ಗ್ರಾಮೀಣ ಜನಗಳಿಗಷ್ಟೇ ಅಲ್ಲ ಇಡೀ ದೇಶದಲ್ಲೇ ಈ ರೀತಿಯ ನವೀನ ಯೋಜನೆಗಳನ್ನು ಜಾರಿಗೆ ತರುವಲ್ಲಿ ಬಹಳ ಅನುಕೂಲವಾಗಲಿದೆ. ವೈಟ್ ಸ್ಪೇಸ್ ಬ್ರಾಡ್ ಬ್ಯಾಂಡ್ ಅಂತರ್ಜಾಲದ ಈ ಪ್ರಾಯೋಗಿಕ ಪೈಲಟ್ ಪ್ರಾಜೆಕ್ಟ್ ನಮ್ಮ ರಾಜ್ಯದಲ್ಲೇ ಮೊದಲನೆಯದು ಮತ್ತು ಇಡೀ ದೇಶದಲ್ಲೇ ಮೂರನೆಯದು.