ಚಿರನಿದ್ರಾವಶರಾದರೂ, ಚಿಟ್ಟಾಣಿ ನೆನಪು ಚಿರಂತನ....
ಚಿಟ್ಟೆಯಂತೆಯೇ ಚುರುಕಾಗಿ, ನವಿಲನ್ನೂ ನಾಚಿಸುವಂತೆ ಲಾಸ್ಯದಿಂದ ನರ್ತಿಸುತ್ತ, ಪಾತ್ರೋಚಿತವಾಗಿ ಆಡುವ ಒಂದೊಂದು ಮಾತನ್ನೂ ಅಣಿಮುತ್ತಾಗಿಸುವ ಅಪೂರ್ವ ಕಲೆ ಸಿದ್ಧಿಸಿದ್ದ ಅಭಿಜಾತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂಬ ಜೀವಂತ ದಂತಕಥೆ ಜೀವ ಕಳೆದುಕೊಂಡಿದೆ. ಆ ಮಹಾನ್ ಚೇತನ ಇನ್ನೂ ನೆನಪು ಮಾತ್ರ. ಆದರೆ ಯಕ್ಷಗಾನವೆಂಬ ಕಲೆ ಜೀವಂತವಿರುವವರೆಗೂ ಆ ನೆನಪು ಶಾಶ್ವತ.
ಯಕ್ಷಗಾನ ಶಾಸ್ತ್ರೀಯ ಕಲೆಯೂ ಹೌದು ಜನಪದವೂ ಹೌದು. ಇಂಥ ವಿಶಿಷ್ಟ ಕಲೆಯನ್ನು ಎಂದೂ ಶಾಸ್ತ್ರೀಯವಾಗಿ ಕಲಿಯದ ಚಿಟ್ಟಾಣಿಯವರದು ನಿಜಕ್ಕೂ ಅಭಿಜಾತ ದೈತ್ಯ ಪ್ರತಿಭೆಯೇ ಸರಿ. ನಿಂತ ನೆಲವನ್ನೇ ರಂಗಸ್ಥಳವಾಗಿ ಪರಿವರ್ತಿಸುವ ಅಪರಿಮಿತ ಕೌಶಲ್ಯದ ಅದ್ಭುತ ಕಲಾವಿದ ಚಿಟ್ಟಾಣಿ ಚಿಕ್ಕ ಮಗುವಾಗಿದ್ದಾಗಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದವರು. ಏಳನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಚಿಟ್ಟಾಣಿ ತನ್ನ ಎಂಭತ್ತನಾಲ್ಕನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆಯುವುದಕ್ಕೆ ಕೇವಲ ಮೂರ್ನಾಲ್ಕು ದಿನದ ಹಿಂದಿನವರೆಗೂ ನಿರಂತರವಾಗಿ ಕಲಾಸೇವೆಗೈದವರು.
ಕೇವಲ ಎರಡನೆಯ ತರಗತಿಯವರೆಗೆ ಮಾತ್ರ ಓದಿದ್ದ ಚಿಟ್ಟಾಣಿಯವರು ಯಕ್ಷಗಾನದಲ್ಲಿ ಸಾಧಿಸಿದ ಔನತ್ಯ ಅಸದೃಶ. ಅಸೌಖ್ಯದಿಂದಾಗಿ ಆಸ್ಪತ್ರೆ ಸೇರುವುದಕ್ಕೆ ಮೂರು ದಿನ ಮೊದಲು ಬಂಗಾರಮಕ್ಕಿಯ ನವರಾತ್ರಿ ಉತ್ಸವದಲ್ಲಿ ಅವರು ಮಾಡಿದ್ದ ಶಂತನು ಚಕ್ರವರ್ತಿಯ ಪಾತ್ರ ಅವರ ಕೊನೆಯ ವೇಷ.
ಚಿಟ್ಟಾಣಿಯವರು ನಮ್ಮ ಪೌರಾಣಿಕ ಪಾತ್ರಗಳಿಗೆ ಜೀವತುಂಬುತ್ತಿದ್ದ ಪರಿ ಅನನ್ಯ. ಭಸ್ಮಾಸುರ, ಕೀಚಕ, ಕಾರ್ತವೀರ್ಯ, ಕರ್ಣ, ರಾವಣ, ದುಷ್ಟಬುದ್ಧಿ ಮುಂತಾದ ಖಳ ವೇಷಗಳನ್ನೂ, ಪ್ರತಿನಾಯಕ ವೇಷಗಳನ್ನೂ ಯಕ್ಷರಸಿಕರು ಪ್ರೀತಿಸುವಂತೆ ಮಾಡಿದ್ದ ಚಿಟ್ಟಾಣಿ ಎಲ್ಲಾ ರೀತಿಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದವರು. ಅವರ ಆಂಗಿಕಾಭಿನಯ, ನರ್ತನಶೈಲಿ, ಭಾವಾಭಿವ್ಯಕ್ತಿಗಳೆಲ್ಲ ಯಕ್ಷಗಾನ ಕಲಾಪ್ರಕಾರಕ್ಕೊಂದು ಹೊಸ ಭಾಷ್ಯವನ್ನೇ ಬರೆದಿತ್ತು. ನನಗಂತೂ ಗದಾಯುದ್ಧದ ಅವರ ಕೌರವ ಯಾವತ್ತೂ ಮರೆಯಲಾಗದ ರೀತಿಯಲ್ಲಿ ಹೃದಯದಲ್ಲಿ, ಮನಸ್ಸಿನಲ್ಲಿ ದಾಖಲಾಗಿ ಹೋಗಿದೆ.
ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ "ಪದ್ಮಶ್ರೀ" ಪ್ರಶಸ್ತಿಗೂ ಭಾಜನರಾದ ಚಿಟ್ಟಾಣಿ ತಮ್ಮ ಸುಧೀರ್ಘ ೭೭ ವರ್ಷಗಳ ರಂಗಬದುಕಿನಲ್ಲಿ ಲಕ್ಷೋಪಲಕ್ಷ ಅಭಿಮಾನಿಗಳನ್ನು ಸೃಷ್ಟಿಸಿದ್ದರು. ಈ ಅವಧಿಯಲ್ಲಿ ಬಂದ ಅನೇಕಾನೇಕ ನವ ಯುವ ಕಲಾವಿದರೆಲ್ಲ ಚಿಟ್ಟಾಣಿಯವರನ್ನೇ, ಅವರ ಶೈಲಿಯನ್ನೇ ಅನುಕರಿಸಿದ್ದೂ ಆಯಿತು. ಆದರೆ ಚಿಟ್ಟಾಣಿ ಮಾತ್ರ ತಮ್ಮ ವಿಶಿಷ್ಟ ಶೈಲಿಯ ನರ್ತನ ಅಭಿನಯಕ್ಕೆ ಅವರಿಗವರೇ ಸಾಟಿಯೆನಿಸಿಕೊಂಡಿದ್ದವರು.
ಯಾರಾದರೂ ತೀರಿಕೊಂಡಾಗ "ಅವರ ಸಾವು ತುಂಬಲಾರದ ನಷ್ಟ" ಎಂಬ ಪದಪುಂಜದ ಬಳಕೆ ಸರ್ವೇ ಸಾಮಾನ್ಯ. ಆದರೆ ಚಿಟ್ಟಾಣಿಯವರ ನಿಧನದಿಂದಾಗಿ ಯಕ್ಷರಂಗಕ್ಕೆ ನಿಜಕ್ಕೂ ಆಗಿರುವುದು "ತುಂಬಲಾರದ ನಷ್ಟವೇ" ಚಿಟ್ಟಾಣಿಯವರ ಜಾಗವನ್ನು ತುಂಬಬಲ್ಲ ಕಲಾವಿದ ಇನ್ನೂ ಹುಟ್ಟಿಲ್ಲ, ಹುಟ್ಟುವುದೂ ಅಸಾಧ್ಯವೆಂದೇ ನನ್ನ ಅನಿಸಿಕೆ. ಅವರು ಬಿಟ್ಟು ಹೋದ ಜಾಗವನ್ನು ತುಂಬಲು ಅವರೇ ಮತ್ತೊಮ್ಮೆ ಹುಟ್ಟಿಬರಬೇಕು.
ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ, ಹತ್ತಿರದ ಬಂದು-ಬಳಗ ಹಾಗು ಅಭಿಮಾನಿಗಳಿಗೆ ಅವರ ಅಗಲಿಕೆಯ ಶೋಕ ಭರಿಸುವ ಶಕ್ತಿ ಆ ಭಗವಂತ ನೀಡಲೆಂದು ಮತ್ತು ಅಗಲಿದ ಚಿಟ್ಟಾಣಿಯವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಓಂ ಶಾಂತಿ ಶಾಂತಿ ಶಾಂತಿಃ ।
ಚಿತ್ರ ಕೃಪೆ: ಮಿತ್ರ Ravi Gunaga, ಗೋಕರ್ಣ - ಧನ್ಯವಾದಗಳೊಂದಿಗೆ