Infinite Thoughts

Thoughts beyond imagination

ಅನಂತದ ಅರ್ಥ ಆ ಗಣಿತ ಗಾರುಡಿಗನಿಗೆ ಗೊತ್ತಿತ್ತು ....! ರಾಮಾನುಜನ್ ಜನಿಸಿ ಇವತ್ತಿಗೆ ವರ್ಷ ನೂರಾಮೂವತ್ತಾಯ್ತು...

ಅನಂತದ ಅರ್ಥ ಆ ಗಣಿತ ಗಾರುಡಿಗನಿಗೆ ಗೊತ್ತಿತ್ತು ....!  

ರಾಮಾನುಜನ್ ಜನಿಸಿ ಇವತ್ತಿಗೆ ವರ್ಷ ನೂರಾಮೂವತ್ತಾಯ್ತು... 

 

ಇಪ್ಪತ್ತೇಳು ವರ್ಷದ  ಹಿಂದೆ ಆ ಹೆಸರಿನ ಪುಸ್ತಕ ಪ್ರಕಟ ಆಗಿತ್ತು... ಅಮೆರಿಕಾದ ವಿಜ್ಞಾನ ಬರಹಗಾರ ರಾಬರ್ಟ್ ಕೆನ್ನಿಗೆಲ್ ಬರೆದ ಆ ಪುಸ್ತಕ ಆಧರಿಸಿಯೇ ಎರಡು ವರ್ಷದ ಹಿಂದೆ  ಮ್ಯಾಥ್ಯೂ ಬ್ರೌನ್ ಎಂಬಾತ ನಿರ್ದೇಶಿಸಿದ ಬ್ರಿಟಿಷ್ ಚಿತ್ರ ಬಂದಿತ್ತು... "ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ" ಅಂತ ಅದರ ಹೆಸರು... ಅನಂತವನ್ನು ಅರಿತವನು ಎಂಬ ಅರ್ಥದ ಆ ಚಿತ್ರದ ಬಗ್ಗೆ ನನಗಂತೂ ಕುತೂಹಲವಿತ್ತು.... ಯಾಕೆಂದರೆ ಮೊದಲನೆಯದಾಗಿ,  ಆ ಚಿತ್ರ ಭಾರತ ದೇಶ ಕಂಡ ಮಹಾನ್ ವಿಜ್ಞಾನಿ ಶ್ರೀನಿವಾಸ ರಾಮಾನುಜನ್ ಕುರಿತ ಚಿತ್ರವಾಗಿತ್ತು... ಎರಡನೆಯದಾಗಿ,  ಅನಂತ ಸತ್ಯದ ನಿರಂತರ ಅನ್ವೇಷಣೆ ನನಗೂ ಸಹ ಕುತೂಹಲವೇ....! 

ವೇದಗಳು ಅಪೌರುಷೇಯ ಎನ್ನಲಾಗುತ್ತದೆ... ಅಂದರೆ ಅದನ್ನು ರಚಿಸಿದವರು ಮನುಷ್ಯರಲ್ಲ ಅನ್ನುವುದು ಅದರ ಅರ್ಥ... ಇವತ್ತಿನ ವಿಚಾರ ವ್ಯಾಧಿಗಳು ಈ ಮಾತನ್ನು ಲಘುವಾಗಿ ತಳ್ಳಿ ಹಾಕಬಹುದು... ಆದರೆ ಶ್ರೀನಿವಾಸ ರಾಮಾನುಜನ್ ಎಂಬ ಈ ಅಸಾಧಾರಣ ವ್ಯಕ್ತಿಯ ಜೀವನದ ಬಗ್ಗೆ ತಿಳಿದುಕೊಂಡ ಯಾರೇ ಆದರೂ ವೇದಗಳು ಮನುಷ್ಯ ರಚಿತವಲ್ಲ, ಆ ಮಟ್ಟದ ಜ್ಞಾನ ಮನುಷ್ಯನ ಮಿದುಳಿನಲ್ಲಿ ಹುಟ್ಟಲಾರದು, ಹಾಗಾಗಿ ಇದು ಮನುಷ್ಯ ಮಾತ್ರರಿಂದ ಸೃಷ್ಟಿಯಾದದ್ದಲ್ಲ ಅನ್ನುವ ನಿರ್ಧಾರಕ್ಕೆ ಖಂಡಿತಾ ಬರುತ್ತಾರೆ...  

ಇದೇನಿದು ಹಿಂದೂ ಧರ್ಮದ ಮೂಲ ಆಕರವಾದ, ಹತ್ತಾರು ಸಾವಿರ ವರ್ಷಗಳಷ್ಟು ಪ್ರಾಚೀನವಾದ ವೇದಗಳಿಗೂ, ಕೇವಲ ನೂರ ಮೂವತ್ತು ವರ್ಷಗಳ ಹಿಂದೆ ಹುಟ್ಟಿದ್ದ ಈ ಗಣಿತ ಪಂಡಿತನಿಗೂ ಏನು ಸಂಬಂಧ ಅಂತ ನೀವು ಪ್ರಶ್ನಿಸಬಹುದು... ಇದು ನನ್ನ ಸ್ವಂತದ ಆಲೋಚನೆ ಮತ್ತು ನನ್ನದೇ ಆದ ವಿಶ್ಲೇಷಣೆ... ವೇದಗಳನ್ನು ರಚಿಸಿದ್ದು ಮನುಷ್ಯರೇ ಆಗಿರಬಹುದು ..... ಆದರೆ ಆ ಮನುಷ್ಯರಿಗೆ ಅನೂಹ್ಯವಾದಂತಹ ಹೊಳಹುಗಳು, ಕಾಣ್ಕೆಗಳು, ಆಲೋಚನೆಗಳು, ವಿಚಾರಗಳು, ಕಲ್ಪನೆಗಳು ಅದೆಲ್ಲಿಂದ ಸ್ಪುರಣಗೊಳ್ಳುತ್ತದೆ...?  ಅವರ ಮೆದುಳಿನಲ್ಲಿ ಅದೆಲ್ಲವೂ ಮೂಡುವುದು ಹೇಗೆ...?  ಮನುಷ್ಯನ ಮಿದುಳು ಅದೇನನ್ನು ಪ್ರೋಸೆಸ್ ಮಾಡಬೇಕಿದ್ದರೂ ಅದಕ್ಕೂ ನಮ್ಮ ಕಂಪ್ಯೂಟರ್ ರೀತಿಯೇ input ಗಳು ಬೇಕಲ್ಲ... ಆದರೆ ಅದ್ಯಾವುದೂ ಇಲ್ಲದೆಯೇ ಅತ್ಯಂತ ನವೀನ, ಹೊಚ್ಚ ಹೊಸದಾದ ಆಲೋಚನೆಗಳು ಮಿದುಳಿನ ಪದರಗಳೊಳಗೆ ಸೃಷ್ಟಿಯಾಗುವುದು ಹೇಗೆ?  ಇಂಥದೆಲ್ಲ ಪ್ರಶ್ನೆಗಳು ನಿಮ್ಮಲ್ಲೂ ಇದ್ದರೆ......  ಅದಕ್ಕೆಲ್ಲ ನೇರವಾದ ಸ್ಪಷ್ಟವಾದ ಉತ್ತರ ಶ್ರೀನಿವಾಸ ರಾಮಾನುಜನ್ ಮತ್ತವರ ಸಾಧನೆ...! 

೧೮೮೭ ರ ಡಿಸೆಂಬರ್ ೨೨ ರಂದು ತಮಿಳುನಾಡಿನ ಈರೋಡಿನ ಬಡ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಶ್ರೀನಿವಾಸ ರಾಮಾನುಜನ್ ಬಾಲ್ಯದಲ್ಲೇ ತುಂಬಾ ವಿಲಕ್ಷಣ ಬುದ್ದಿಮತ್ತೆ ಹೊಂದಿದ್ದವರು.  ಆತನ ಜೊತೆಯಲ್ಲಿದ್ದ ಹುಡುಗರಿಗೆ ರಾಮಾನುಜನ್ ಒಮ್ಮೊಮ್ಮೆ ಏನು ಮಾತಾಡುತ್ತಿದ್ದಾನೆ ಅಂತ ಅರ್ಥಾನೇ ಆಗುತ್ತಿರಲಿಲ್ಲ.  ಆತನನ್ನು ಯಾರೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲವಾದ್ದರಿಂದ ಆತನಿಗೆ ಸ್ನೇಹಿತರೂ ಇರಲಿಲ್ಲ.. ಹಾಗಾಗಿ ರಾಮಾನುಜನ್ ಗೆ ಶಾಲೆಗೇ ಹೋಗುವುದೆಂದರೇ ಅಲರ್ಜಿ...!  ಆತನ ತಂದೆ ರಾಮಾನುಜ ಶಾಲೆಗೆ ಸರಿಯಾಗಿ ಹಾಜರಾಗುವಂತೆ ಮಾಡಲು ಪೊಲೀಸರ ಮೊರೆ ಹೋಗಿದ್ದರು..!  ಗೆಳೆಯರಿಲ್ಲದೆ ಅದನ್ನೂ ಕೂಡಾ ಯಾರ ಸಹಾಯವೂ ಇಲ್ಲದೆ ರಾಮಾನುಜ ತಾನೇ ಸ್ವತಹ ಅಧ್ಯಯನ ಮಾಡಿದ್ದೂ ಅಲ್ಲದೆ... ತನ್ನದೇ ಆದ ಕ್ಲಿಷ್ಟ ಗಣಿತ ಪ್ರಮೇಯಗಳನ್ನು ರಚಿಸಲು ಶುರುಮಾಡಿದ.... ಆ ಹೊತ್ತಿಗೆ ಆತನಿಗೆ ಜಾಗತಿಕವಾಗಿ ಯಾವೆಲ್ಲ ಗಣಿತ ಶಾಸ್ತ್ರಜ್ಞರು ಏನೆಲ್ಲಾ ಕಂಡು ಹಿಡಿದಿದ್ದರು... ಯಾವೆಲ್ಲ ಸಂಶೋಧನೆಗಳನ್ನು ಮಾಡಿದ್ದರು ಅನ್ನುವ ಮಾಹಿತಿಯೇ ಇರಲಿಲ್ಲ.... ಅದು ಗೂಗಲ್ ದಿನಗಳಲ್ಲವಲ್ಲ..!  ಬಾಲಕ ರಾಮಾನುಜನಿಗೆ ಗಣಿತದ ಕಠಿಣ ಕ್ಲಿಷ್ಟ ಲೆಕ್ಕಾಚಾರಗಳೆಲ್ಲ ಹೀಗೆ ಸ್ವಾಭಾವಿಕವಾಗಿಯೇ ಹೊಳೆಯುತ್ತಿದ್ದವು... ಕೇವಲ ಹದಿಮೂರನೆಯ ವಯಸ್ಸಿಗೇ ಆತ ಭೂಮಧ್ಯ ರೇಖೆಯ ಒಟ್ಟು ಉದ್ದ ಎಷ್ಟು ಅಂತ ಲೆಕ್ಕ ಹಾಕಿದ್ದ..! 

ಹದಿನಾರನೆಯ ವಯಸ್ಸಿನಲ್ಲಿ ರಾಮಾನುಜನ್ ಅವರ ಕೈಗೆ "A Synopsis of Elementary Results in Pure & Applied Mathematics" ಸಿಕ್ಕಿತು.  ಇದುವೇ ಅವರ ಜೀವನದ ಮಹತ್ತರ ತಿರುವು.... ಯಾವ ಗುರುಗಳ ಸಹಾಯವೂ ಇಲ್ಲದೆ ಸ್ವಯಂ ಅಧ್ಯಾಯ ಮಾಡಿ ಗಣಿತದಲ್ಲಿ ಮೊದಲೇ ಪಾರಂಗತನಾಗಿದ್ದ ರಾಮಾನುಜನ್ ಕೈಗೆ ಜಿ.ಎಸ್ ಕಾರ್ರ್ ರಚಿಸಿದ್ದ ಸುಮಾರು ಐದು ಸಾವಿರ ಗಣಿತ ಪ್ರಮೇಯಗಳಿದ್ದ ಈ ಪುಸ್ತಕದಲ್ಲಿನ ಪ್ರಮೇಯಗಳನ್ನು ಅಭ್ಯಸಿಸ ತೊಡಗಿದ್ದರು.  ಅಷ್ಟರಲ್ಲಿ ಆತನಿಗೆ ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ಕಲಿಯಲು ವಿದ್ಯಾರ್ಥಿ ವೇತನ ದೊರಕಿತು.  ಆದರೆ ರಾಮಾನುಜನ್ ಅವರಿಗೆ ಗಣಿತದ ಹುಚ್ಚು ಹಿಡಿದಿತ್ತು.... ಗಣಿತವನ್ನು ಹೊರತು ಪಡಿಸಿ ಅವರಿಗೆ ಬೇರಾವುದೆ ವಿಷಯಗಳ ಬಗ್ಗೆ ಆಸಕ್ತಿಯೇ ಇರಲಿಲ್ಲ... ಹಾಗಾಗಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದುಕೊಂಡ ರಾಮಾನುಜನ್ ಬೇರೆಲ್ಲಾ ವಿಷಯಗಳಲ್ಲಿ ಫೇಲ್ ಆಗಿ scholarship ಕಳೆದುಕೊಂಡರು.... ! 

ತಂದೆ ಬಟ್ಟೆಯಂಗಡಿ ಒಂದರಲ್ಲಿ ಗುಮಾಸ್ತ... ಮನೆಯಲ್ಲಿ ಅದೆಂಥ ಬಡತನವೆಂದರೆ ಬರೆಯಲು ಪೆನ್-ಪೇಪರ್ ಖರೀದಿ ಮಾಡಲೂ ಸಾಧ್ಯವಿರಲಿಲ್ಲ.. ಆದರೆ ರಾಮಾನುಜನ್ ಮೆದುಳಿನ ಪದರು ಪದರುಗಳೊಳಗೂ ಗಣಿತದ ಬೀಜಗಳು ಮೊಳೆಯುತ್ತಿದ್ದವು.... ಅದು ಹೇಗೆ ಯಾಕೆ ಅಂತ ವಿವರಿಸಲು ವಿಜ್ಞಾನಕ್ಕೆ ಖಂಡಿತಾ ಸಾಧ್ಯವಾಗುವುದಿಲ್ಲ... ಮೆದುಳಿನಾಳದಲ್ಲಿ ರೂಪುಗೊಳ್ಳುತ್ತಿದ್ದ ಕ್ಲಿಷ್ಟ ಗಣಿತ ಸೂತ್ರಗಳನ್ನು ಹೊರಗೆಡವದೆ ಸುಮ್ಮನಿರಲು ರಾಮಾನುಜನ್ ಗೆ ಸಾಧ್ಯವೇ ಇರಲಿಲ್ಲ....  ಆದರೆ ಅವನ್ನೆಲ್ಲ ಬರೆದು ಜೋಡಿಸಲು ಪೇಪರ್ ಪೆನ್ನು ತರಲು ಕಾಸೇ ಇರಲಿಲ್ಲವಲ್ಲ....! ಹಾಗಾಗಿ ತಮ್ಮ ಮನಸ್ಸಿನಲ್ಲಿ ಹುಟ್ಟುತ್ತಿದ್ದ ಗಣಿತದ ಸೂತ್ರ ಪ್ರಮೇಯಗಳನ್ನೆಲ್ಲಾ ರಾಮಾನುಜನ್ ಸ್ಲೇಟಿನಲ್ಲಿ ಬರೆದು ಅವುಗಳನ್ನು ಬಿಡಿಸಿ.... ಪ್ರಮೇಯಗಳನ್ನು ಸಾಧಿಸಿ... ಉತ್ತರಗಳನ್ನು ಪಡೆಯುತ್ತಿದ್ದರು... ಆದರೆ ಇದನ್ನು ಸ್ಲೇಟಿನಲ್ಲಿ ತಾವು ಬರೆದಿದ್ದ ವಿವರಣೆಗಳನ್ನೆಲ್ಲ ಬಿಟ್ಟು ಹಾಕಿ  ಕೇವಲ ಸೂತ್ರ ಮತ್ತು ಪ್ರಮೇಯಗಳನ್ನು ನೇರವಾಗಿ ಒಂದು ನೋಟು ಪುಸ್ತಕದಲ್ಲಿ ಬರೆದಿಡುತ್ತಿದ್ದರು... ಆದರೆ ಅದನ್ನೆಲ್ಲ ಇನ್ನೊಬ್ಬರಿಗೆ ತೋರಿಸಲು ಅವರಿಗೆ ಸಾಧ್ಯವೇ ಆಗುತ್ತಿರಲಿಲ್ಲ... ಯಾಕೆಂದರೆ ಅದೆಲ್ಲಾ ಯಾರಿಗೂ ಅರ್ಥ ಆಗುತ್ತಿರಲಿಲ್ಲ.... ! ತನ್ನ ಸಹಪಾಠಿಗಳಿಗೂ... ತನ್ನ ಗುರುಗಳಿಗೂ ತಾನು ಸೃಷ್ಟಿಸಿದ ಗಣಿತ ಸೂತ್ರಗಳು, ಪ್ರಮೇಯಗಳು ಅರ್ಥವೇ ಆಗುತ್ತಿರಲಿಲ್ಲವಾದ್ದರಿಂದ ರಾಮಮಾನುಜ ಮನೆ ಊರು ತೊರೆದು ಅಂದಿನ  ಮದರಾಸಿಗೆ ಪರಾರಿಯಾದರು... ಇತ್ತ ತಾಯಿ ಗಾಬರಿಯಿಂದ ಪೊಲೀಸರಿಗೆ ದೂರು ನೀಡಿ ಮಗ ಕಾಣೆಯಾಗಿದ್ದಾನೆ ಅಂತ ಪತ್ರಿಕೆಗಳಿಗೂ ಜಾಹೀರಾತು ನೀಡಿದ್ದರು...! 

ಮದರಾಸಿನಲ್ಲಿ ಬೇರೆ ಬೇರೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪ್ರಯತ್ನ ಪಡುತ್ತ, ಮಕ್ಕಳಿಗೆ ಗಣಿತದ ಟ್ಯೂಷನ್ ನೀಡುತ್ತಾ.. ಚಿಕ್ಕ ಪುಟ್ಟ ನೌಕರಿ ಮಾಡಿ ಹೊಟ್ಟೆ ತುಂಬಿಸಲು ಸಾಹಸ ಮಾಡುತ್ತ ತೀರಾ ಬಡತನದ ಜೀವನ ನಡೆಸುತ್ತಿದ್ದರೂ ರಾಮಾನುಜನ್ ಗಣಿತದ ಸಂಶೋಧನೆ ಮಾಡುವುದನ್ನು ಬಿಟ್ಟಿರಲಿಲ್ಲ... ಅವರನ್ನು ಆವರಿಸಿಕೊಂಡಿದ್ದ ಗಣಿತವೂ ಅವರನ್ನು ತೊರೆಯಲಿಲ್ಲ... ಮದರಾಸು ಹಡಗುಕಟ್ಟೆಯಲ್ಲಿ ಅಕೌಂಟಿಂಗ್ ಕ್ಲರ್ಕ್ ಆಗಿ ರಾಮಾನುಜನ್ ಅವರಿಗೆ ಕೆಲಸ ಸಿಕ್ಕಿತು... 

ಇದು ರಾಮಾನುಜನ್ ಅವರ ಪಾಲಿನ ಇನ್ನೊಂದು ಮುಖ್ಯ ತಿರುವು... ಅಲ್ಲಿ ಆತನ ಮೇಲಧಿಕಾರಿಯಾಗಿದ್ದ ಎಸ್ ನಾರಾಯಣ  ಅಯ್ಯರ್  ಓರ್ವ ಪ್ರಖಾಂಡ ಗಣಿತ ತಜ್ಞರೂ, Indian Mathematical Society ಯ ಸ್ಥಾಪಕ ಸದಸ್ಯರೂ ಆಗಿದ್ದರು.  ಅವರು, ರಾಮಾನುಜನ್ ತಮ್ಮ ಪುಸ್ತಕದಲ್ಲಿ ರಚಿಸಿದ್ದ ಗಣಿತದ ಸೂತ್ರ, ಪ್ರಮೇಯಗಳನ್ನು ನೋಡಿ ದಂಗು ಬಡಿದು ಹೋದರು... ರಾಮಾನುಜನ್ ಓರ್ವ ಅಸಾಧಾರಣ ಪ್ರತಿಭಾವಂತ ಅನ್ನುವುದು ಅವರಿಗೆ ಅಂದೇ ಖಚಿತವಾಗಿತ್ತು... ಹಾಗಾಗಿ ಅವರು ಇಂಗ್ಲೆಂಡಿನಲ್ಲಿರುವ ಖ್ಯಾತ ಗಣಿತ ಶಾಸ್ತ್ರಜ್ಞರನ್ನು ಸಂಪರ್ಕಿಸಿ ಈ ರಾಮಾನುಜನ್ ಎಂಬ ವಿಸ್ಮಯದ ಬಗ್ಗೆ ಹೇಳಿದರು... ರಾಮಾನುಜನ್ ಬರೆದಿಟ್ಟ ಹೆಚ್ಚಿನ  ಗಣಿತ ಸೂತ್ರಗಳೆಲ್ಲಾ ಇಂಗ್ಲೆಂಡಿನಲ್ಲೂ ಯಾರಿಗೂ ಅರ್ಥವಾಗಲಿಲ್ಲ.... ಯಾಕೆಂದರೆ ರಾಮಾನುಜನ್ ಅವರೆಲ್ಲರಿಗಿಂತ ಬುದ್ಧಿಮತ್ತೆಯಲ್ಲಿ ಕಡಿಮೆಯೆಂದರೂ ಒಂದು ನೂರು ವರ್ಷವೇ ಮುಂದಿದ್ದರು... ಆದುದರಿಂದ ರಾಮಾನುಜನ್ ಬರೆದಿದ್ದ ಗಣಿತ ಸೂತ್ರಗಳನ್ನು ತಿರಸ್ಕರಿಸಿ ರಾಮಾನುಜ ಓರ್ವ ವಂಚಕ .... ಆತ ಬರೆದದ್ದಕ್ಕೆ ತಲೆಬುಡ ಇಲ್ಲ ಅಂತ ಹೇಳಿದರು...!  ಅದಕ್ಕೊಂದು ಕಾರಣವೂ ಇತ್ತು .. ರಾಮಾನುಜನ್ ತನಗೆ ಚಿಕ್ಕಂದಿನಲ್ಲಿ ಸಿಕ್ಕಿದ್ದ "A Synopsis of Elementary Results in Pure & Applied Mathematics" ಪುಸ್ತಕದಲ್ಲಿನ ರೀತಿಯೇ ಕೇವಲ ಗಣಿತ ಸೂತ್ರ ಮತ್ತು ಪ್ರಮೇಯಗಳನ್ನು ನೇರವಾಗಿ ಬರೆಯುತ್ತಿದ್ದರು... ಆದರೆ ಅವುಗಳನ್ನು ಹಂತ ಹಂತವಾಗಿ ಬಿಡಿಸಿ, ವಿವರಿಸಿ ಅರ್ಥವಾಗುವಂತೆ ಬರೆಯುತ್ತಲೇ ಇರಲಿಲ್ಲ... ಹಾಗಾಗಿ ರಾಮಾನುಜನ್ ಬರೆದ ಗಣಿತ ಸೂತ್ರಗಳನ್ನು ನೋಡಿದರೆ ಅವರ್ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ... ! 

ಆದರೆ... ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಖ್ಯಾತ ಗಣಿತ ಶಾಸ್ತ್ರದ ಪ್ರೊಫೆಸರ್ ಜಿ. ಎಚ್. ಹಾರ್ಡಿಯವರಿಗೆ ರಾಮಾನುಜನ್ ಬರೆದ ಒಂಭತ್ತು ಪುಟಗಳ ಮತ್ತು ನೋಟ್ಸ್ ನೋಡಿ ಆಶ್ಚರ್ಯಾಘಾತವಾಗಿತ್ತು... ಹಾರ್ಡಿ ತಮ್ಮ ಸ್ನೇಹಿತ ಜೆ.ಈ ಲಿಟ್ಲ್ ವುಡ್ ಜೊತೆಗೆ ಸೇರಿಕೊಂಡು ರಾಮಾನುಜನ್ ಒಂಭತ್ತು ಪುಟಗಳಲ್ಲಿ ಬರೆದಿದ್ದ ಸಂಕೀರ್ಣ ಗಣಿತ ಸೂತ್ರಗಳ ಅಧ್ಯಯನ ನಡೆಸಿದರು.... ಅವರಿಗೂ ಇದೇನೆಂದು ಅರ್ಥವಾಗಲಿಲ್ಲವಾದರೂ... ರಾಮಾನುಜನ್ ಒಳಗೊಬ್ಬ ಅಸಾಧಾರಣ ಗಣಿತ ವಿಜ್ಞಾನಿ ಇದ್ದಾನೆ ಎಂಬುದು ಅರ್ಥವಾಯಿತು.  ಇಲ್ಲಿಂದ ನಂತರ ರಾಮಾನುಜನ್ ಅವರ ಬದುಕು ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ... 

೧೯೧೪ರಲ್ಲಿ ಹಾರ್ಡಿ ಮತ್ತವರ ಸ್ನೇಹಿತರ ಪ್ರಯತ್ನದಿಂದಾಗಿ ರಾಮಾನುಜನ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಪ್ರವೇಶಿಸುತ್ತಾರೆ...!  ಅವರಿಗೆ ವಿಶ್ವವಿದ್ಯಾಲಯ ಪೂರ್ವ ಅಭ್ಯಾಸವೇ ಇರಲಿಲ್ಲ... ಆತ ಅಂದಿನವರೆಗೂ ಯಾರ ಬಳಿಯೂ ಗಣಿತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲೇ ಇಲ್ಲ... ಕೆಂಬ್ರಿಡ್ಜಿಗೆ ಕಾಲಿಡುವುದಕ್ಕೂ ಮುನ್ನವೇ ಆತ ಭಾರತದಲ್ಲೇ ರಚಿಸಿದ್ದ ಸಾವಿರಾರು ಗಣಿತ ಸೂತ್ರಗಳನ್ನು ಎರಡು ಮೂರು ನೋಟುಬುಕ್ಕುಗಳ ತುಂಬಾ ಬರೆದುಕೊಂಡು ಹೋಗಿದ್ದರು..!  ಅಲ್ಲಿಗೆ ಹೋಗಿ ಎರಡೇ ವರ್ಷದೊಳಗೆ ಆತನ ಅಗಾಧ ಪಾಂಡಿತ್ಯಕ್ಕೆ ವಿಶ್ವವಿದ್ಯಾಲಯವೇ  ಬೆರಗಾಗಿ  ಅವರಿಗೆ ಪಿ.ಎಚ್.ಡಿ ಗೆ ಅಥವಾ ಡಾಕ್ಟರೇಟ್ ಗೆ ಸಮಾನವಾದ ಪದವಿ ನೀಡಿ ಪುರಸ್ಕರಿಸಿತ್ತು...! (ಯಾಕೆಂದರೆ ಆಗಿನ್ನೂ ಪಿ.ಎಚ್.ಡಿ ಗೆ ಅಥವಾ ಡಾಕ್ಟರೇಟ್ ಪದವಿಯೇ ಇನ್ನೂ ಶುರುವಾಗಿರಲಿಲ್ಲ) .. 

ರಾಮಾನುಜನ್ ಇಂಗ್ಲೆಂಡಿನಲ್ಲಿ ಅನಾರೋಗ್ಯಕ್ಕೆ ಈಡಾದರು ... ಭಾರತದಲ್ಲಿ ಇರುವಾಗಲೇ ಜೀರ್ಣಾಂಗಕ್ಕೆ ಸಂಬಂಧಪಟ್ಟ ಖಾಯಿಲೆಗೆ ತುತ್ತಾಗಿದ್ದ ಅವರು ಪಕ್ಕಾ ಸಸ್ಯಾಹಾರಿಯಾಗಿದ್ದರಿಂದ ಇಂಗ್ಲೆಂಡಿನಲ್ಲೂ  ಆಹಾರದ ಸಮಸ್ಯೆ ಎದುರಾಗಿತ್ತು... ಭಾರತದಲ್ಲಿ ತಮ್ಮ ಹದಿನಾರನೆಯ ವಯಸ್ಸಿನಿಂದ ಇಪ್ಪತ್ತಮೂರನೆಯ ವಯಸ್ಸಿನ ವರೆಗೆ ಸರಿಯಾಗಿ ಹೊಟ್ಟೆಗೆ ತಿನ್ನಲೂ ಆಹಾರವಿಲ್ಲದೆ ಬಡತನದಲ್ಲೇ ದಿನ ದೂಡಿದ್ದ ರಾಮಾನುಜನ್ ಆಗ ತಾನು ಹಾರ್ಡಿಗೆ ಪತ್ರವೊಂದರಲ್ಲಿ "ತಾನು  ಈಗಾಗಲೇ ಅರೆಹೊಟ್ಟೆಯಲ್ಲಿ ಜೀವಿಸುತ್ತಿದ್ದೇನೆ... ನನ್ನ ಮೆದುಳನ್ನು ಬದುಕಿಸಿಕೊಳ್ಳಲಿಕ್ಕಾದರೂ ನನಗೆ ಆಹಾರ ಬೇಕು...!"  ಈ ಮಾತುಗಳು ಅವರ ದಯನೀಯ ಪರಿಸ್ಥಿತಿಯ ದರ್ಶನ ಮಾಡಿಸುತ್ತದೆ... ಇಂಗ್ಲೆಂಡಿನಿಂದ ಭಾರತಕ್ಕೆ ಒಂಭತ್ತು ವರ್ಷಗಳ ಬಳಿಕ ಮರಳಿದ ರಾಮಾನುಜನ್ ಆ ಬಳಿಕ ಬದುಕಿದ್ದು ಕೇವಲ ಒಂದೇ ವರ್ಷ... ಆದರೆ ಸಾಯುವ ಮೂರು ದಿನಗಳ ಹಿಂದಿನ ವರೆಗೂ ಆತ ನಿರಂತರವಾಗಿ ಗಣಿತ ಸೂತ್ರಗಳ ಅನ್ವೇಷಣೆಯಲ್ಲೇ ತೊಡಗಿದ್ದರು.... 

ಆತ ರಚಿಸಿದ್ದ ಅನೇಕ ಸೂತ್ರಗಳನ್ನು ಪ್ರಮೇಯಗಳನ್ನು ಇವತ್ತಿಗೂ ಅರ್ಥೈಸಿಕೊಳ್ಳಲು ಸಾಧ್ಯವೇ ಆಗಿಲ್ಲ... ಅದಕ್ಕೂ ಹೆಚ್ಚಾಗಿ ಇಂಥ ಕ್ಲಿಷ್ಟ ಸೂತ್ರಗಳೆಲ್ಲ ಅವರಿಗೆ ಹೇಗೆ ಹೊಳೆಯುತ್ತಿದ್ದವು ಎಂಬುದು ಇವತ್ತಿಗೂ ಕಗ್ಗಂಟೇ...!  ಖ್ಯಾತ ಅಣು ವಿಜ್ಞಾನಿ ನೀಲ್ಸ್ ಬೊಹ್ರ್ ಪ್ರಥಮವಾಗಿ nucleus ನ ಕುರಿತು ಸಂಶೋಧನೆ ನಡೆಸುವಾಗಲೂ ಆತ ಬಳಸಿದ್ದು ರಾಮಾನುಜನ್ ರಚಿಸಿ ಹೋಗಿದ್ದ ಗಣಿತ ಸೂತ್ರವನ್ನೇ... ನೂರ ಮೂವತ್ತು ವರ್ಷಗಳ ಹಿಂದೆ ರಾಮಾನುಜನ್ ಮಂಡಿಸಿದ್ದ mock theta functions ಆಗ ಯಾರಿಗೂ ಸರಿಯಾಗಿ ಅರ್ಥವೇ ಆಗಿರಲಿಲ್ಲ... ಆದರೆ ಅವುಗಳ ಬಳಕೆ ಈಗ black hole ಅಧ್ಯಯನದಲ್ಲಿ, ಕ್ವಾಂಟಮ್ ಫಿಸಿಕ್ಸ್ ಅಧ್ಯಯನದಲ್ಲಿ ಬಳಕೆಯಾಗುತ್ತಿದೆ... ಅದೆಲ್ಲಾ ಹೋಗಲಿ ಆಧುನಿಕ computer algorithm ಗಳಲ್ಲೂ ರಾಮಾನುಜನ್ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ... ಅಷ್ಟಲ್ಲದೇ ಇವತ್ತಿಗೂ ರಾಮಾನುಜನ್ ರಚಿಸಿ ಹೋದ ಸಾವಿರಾರು ಪ್ರಮೇಯಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.... 

ಅತ್ಯಂತ ಕ್ಲಿಷ್ಟವಾದ , ಮಾನವನಿಂದ ಸಾಧ್ಯವೇ ಇಲ್ಲದ ಗಣಿತದ ಲೆಕ್ಕಾಚಾರಗಳನ್ನು ಹಾಕಲೆಂದೇ ಸಿದ್ಧಪಡಿಸಲಾದ wolfram language ಮತ್ತು wolfram mathematica ಅನ್ನುವ ಈಗಿನ ಅತ್ಯಾಧುನಿಕ ಕಂಪ್ಯೂಟರ್ ಕೂಡಾ ರಾಮಾನುಜನ್ ನೂರು ವರ್ಷಗ ಹಿಂದೆ ರಚಿಸಿದ್ದ ಪ್ರಮೇಯಗಳನ್ನು ಬಿಡಿಸಿ ವಿಚಾರಿಸಲು ಹೆಣಗಾಡುತ್ತಿದೆ... 

ಹಾಗಾದರೆ ಈ ಮನುಷ್ಯ ರಾಮಾನುಜನ್ ಗೆ .... ಗಣಿತವನ್ನು ಶಾಸ್ತ್ರೀಯವಾಗಿ ಯಾವತ್ತಿಗೂ ಅಭ್ಯಾಸ ಮಾಡದೆಯೇ ಇದ್ದ, ಯಾವುದೇ ಪದವಿ ಶಿಕ್ಷಣವನ್ನೂ ಪಡೆಯದ... ತನ್ನಷ್ಟಕ್ಕೆ ತಾನೇ ಗಣಿತವನ್ನು ಅಭ್ಯಾಸ ಮಾಡಿದ ರಾಮಾನುಜನ್ ಗೆ ಇದೆಲ್ಲಾ ಹೇಗೆ ಸ್ಪುರಣಗೊಳ್ಳುತ್ತಿದ್ದವು...?  ಆತನ ಮಿದುಳಿನೊಳಕ್ಕೆ ತನ್ನಷ್ಟಕ್ಕೆ ತಾನೇ ಉದ್ಭವವಾಗುತ್ತಿದ್ದ ಗಣಿತ ಸೂತ್ರಗಳ ಮೂಲ ಯಾವುದು..?  ಇದನ್ನು ಇದುವರೆಗೆ ಯಾರೂ, ಯಾವ ವಿಜ್ಞಾನಿಯೂ ವಿವರಿಸಿಲ್ಲ.... ಆದರೆ... 

ಸ್ವತಃ  ರಾಮಾನುಜನ್ ಅವರೇ ತನಗೆ ಈ ಗಣಿತ ಸೂತ್ರಗಳೆಲ್ಲ ಹೇಗೆ ಹೊಳೆಯುತ್ತಿದ್ದವು ಅಂತ ಹೇಳಿದ್ದಾರೆ... ಅವರ ಮಾತಿನ ಪ್ರಕಾರ " ದೈವತ್ವದ ವಿಚಾರವಿಲ್ಲದ  ದೈವತ್ವದ ಪ್ರೇರಣೆಯಿಲ್ಲದ ಯಾವುದೇ ಗಣಿತ ಸೂತ್ರವೂ ನನ್ನ ಪಾಲಿಗೆ ಅರ್ಥಹೀನ... "  ಮಹಾ ದೈವಭಕ್ತನಾಗಿದ್ದ ರಾಮಾನುಜನ್ ಗೆ ತನ್ನ ಕುಲದೇವತೆ ಮಹಾಲಕ್ಷ್ಮಿಯ ಮೇಲೆ ಅಪರಿಮಿತ ವಿಶ್ವಾಸ... ನಾಮಕ್ಕಲ್ ನ ಮಹಾಲಕ್ಷ್ಮಿ ದೇವಿಯ ಜೊತೆಗೆ ಆತ ಆರಾಧಿಸುತ್ತಿದ್ದುದು ನರಸಿಂಹ ಸ್ವಾಮಿಯನ್ನು ... ತನಗಾಗುತ್ತಿದ್ದ ವಿಶೇಷ ಅನುಭವಗಳನ್ನು ಸ್ವತಹ ರಾಮಾನುಜನ್ ಹೀಗೆ ಹೇಳಿಕೊಂಡಿದ್ದರು...." ನಿದ್ರೆಯಲ್ಲಿದ್ದಾಗ ನನಗೆ ವಿಲಕ್ಷಣ ಅನುಭವಗಳಾಗುತ್ತಿದ್ದವು... ಕಣ್ಣ ಮುಂದೆ ಕೆಂಪು ತೆರೆ- ಹರಿಯುವ ರಕ್ತದ ತೆರೆಯೊಂದು ಮೂಡುತ್ತಿತ್ತು... ಅದನ್ನು ನಾನು ಹಾಗೆಯೆ ಗಮನಿಸುತ್ತಿದ್ದೆ.  ತತ್ ಕ್ಷಣವೇ ಒಂದು ಕೈ ಅದರಲ್ಲಿ ಬರೆಯಲು ಪ್ರಾರಂಭಿಸುತಿತ್ತು... ನಾನು ಸಂಪೂರ್ಣ ಜಾಗೃತನಾಗುತ್ತಿದ್ದೆ... ಆ ಕೈ ಅಸಂಖ್ಯಾತ ಧೀರ್ಘ ವೃತ್ತಗಳ ಸಮಗ್ರ ಸಂಖ್ಯೆಗಳನ್ನು ಬರೆಯುತ್ತ ಹೋಗುತ್ತಿತ್ತು... ಅದು ನನ್ನ ಮನಸ್ಸಿನಲ್ಲಿ ಅಚ್ಹೊತ್ತಿದಂತೆ ದಾಖಲಾಗುತ್ತಿದ್ದವು.... ಅದನ್ನೇ ಮರುದಿನ ನಾನು ಬರೆದಿಟ್ಟುಕೊಳ್ಳುತ್ತಿದ್ದೆ... " 

ಇದು ತಮಗಾಗುತ್ತಿದ್ದ ಅಂತಃ ಸ್ಫುರಣದ ಬಗ್ಗೆ ರಾಮಾನುಜನ್ ಹೇಳುತ್ತಿದ್ದ ಮಾತುಗಳು... ಜಗತ್ತಿನಲ್ಲಿ ಯಾರಿಗೂ ಹೊಳೆಯದ, ಅದೆಷ್ಟು ಅಧ್ಯಯನ ನಡೆಸಿದರೂ ಒಲಿಯದ ತರ್ಕ, ವಿಚಾರಗಳು ಅಚಾನಕ್ಕಾಗಿ ಅದು ಹೇಗೆ ರಾಮಾನುಜನ್ ಮಿದುಳಿನೊಳಗೆ ಹುಟ್ಟಿಕೊಳ್ಳುತ್ತಿತ್ತು? ಹಿಂದಿನ ವೇದಕಾಲದ ನಮ್ಮ ಋಷಿಗಳನ್ನು ಮಂತ್ರ ದೃಷ್ಠಾರರೆಂದು ಕರೆಯುತ್ತಾರೆ... ಅವರಿಗೆ ಮಂತ್ರಗಳ ರೂಪದಲ್ಲಿ ಜ್ಞಾನದ ಹೊಳಹುಗಳು ಸ್ಫುರಣೆಗಳು ತನ್ನಿಂದ ತಾನೇ ಬರುತ್ತಿದ್ದವು ಅಂತ ಅಂಬೋಣವಿದೆ... ಬಹುಶ ಅದಕ್ಕಾಗಿಯೇ ಏನೋ ವೇದಗಳನ್ನು ಅಪೌರುಷೇಯ ಅಂತ ಕರೆದದ್ದು... ವೇದಮಂತ್ರಗಳೂ ಆ ಋಷಿಗಳ ಮಸ್ತಿಷ್ಕ ದೊಳಗಿನ ಅಂತಃ ಸ್ಫುರಣಗಳೇ ಆಗಿರಬೇಕು.... ನಮ್ಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್...! 

ಅಂದ ಹಾಗೆ ಇವತ್ತಿಗೆ ರಾಮಾನುಜನ್ ಎಂಬ ಆ ಮೇಧಾವಿ ಜನಿಸಿ ನೂರಾಮೂವತ್ತು ವರ್ಷಗಳೇ ಕಳೆದವು... ಅವರ ನೆನಪಿಗಾಗಿ ನಮ್ಮ ದೇಶ ಈ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಘೋಷಿಸಿದೆ.... 

ವಿಜ್ಞಾನದ ಅನ್ವೇಷಣೆಗಳು ಮುಂದುವರಿಯಲು ಗಣಿತವೇ ಮೂಲಾಧಾರ .... ನಾಡಿನ ದೇಶದ ಎಲ್ಲಾ ಗಣಿತಜ್ಞರಿಗೂ, ಗಣಿತ ವಿಜ್ಞಾನಿಗಳಿಗೂ, ಗಣಿತದ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಗಣಿತ  ದಿನದ ಶುಭಾಶಯಗಳು!!!

Related posts