Infinite Thoughts

Thoughts beyond imagination

ನೇಗಿಲ ಯೋಗಿಗೆ ನಮೋ ಎನ್ನೋಣ... ಅನ್ನದಾತನಿಗೆ ಶಿರಬಾಗಿಸೋಣ...

ನೇಗಿಲ ಯೋಗಿಗೆ ನಮೋ ಎನ್ನೋಣ... 

ಅನ್ನದಾತನಿಗೆ ಶಿರಬಾಗಿಸೋಣ...

 

ಎಲ್ಲ ಕೃಷಿಕ ಬಾಂಧವರಿಗೂ ರಾಷ್ಟ್ರೀಯ ರೈತರ ದಿನದ ಶುಭಾಶಯಗಳನ್ನು ಹೇಳೋಣ!   

ಭಾರತದ ಐದನೆಯ ಪ್ರಧಾನಿ ಶ್ರೀ ಚೌಧರಿ ಚರಣ ಸಿಂಗರ ಹುಟ್ಟಿದ ದಿನವನ್ನು ನಾವು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸುತ್ತೇವೆ.  ಸ್ವತಃ ರೈತರಾಗಿದ್ದ, ರೈತ ನಾಯಕರೂ ಆಗಿದ್ದ ಶ್ರೀ ಚೌಧರಿ ಚರಣ್ ಸಿಂಗರ ಹುಟ್ಟಿದ ದಿನವನ್ನು

ಇವತ್ತು ಭಾರತದಾದ್ಯಂತ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ.  ಕೃಷಿ ಪ್ರಧಾನ ದೇಶ ಭಾರತಕ್ಕೆ ರೈತನೇ ಪ್ರಧಾನಿಯಾದದ್ದು ಒಂದು ಹೆಮ್ಮೆಯ ವಿಷಯ... ಆದರೆ  ಈ ರೈತ ಪ್ರಧಾನಿ, ದೇಶದ ಐದನೇ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದು ಕೂಡಾ ಕೇವಲ ಐದೂ ಚಿಲ್ಲರೆ ತಿಂಗಳು ಅನ್ನೋದು ದುರ್ದೈವ... ಅದೇ ವೇಳೆ ಈ ರೈತನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಕಾರಣರಾದವರು ರೈತವಿರೋಧಿ ಅಂತ ಕರೆಸಿಕೊಳ್ಳದೆ ಇದ್ದದ್ದು, ರೈತ ಚರಣ್ ಸಿಂಗ್ ಗೆ ಬೆಂಬಲವಾಗಿ ದೇಶದ ಯಾವುದೇ ರೈತ ಸಂಘಗಳೂ ಬೆಂಬಲವಾಗಿ ನಿಲ್ಲದೆ, ಜಾಥಾ... ಪ್ರತಿಭಟನೆಗಳನ್ನು ನಡೆಸದೆ ಮೌನವಾಗಿದ್ದದ್ದು ಇತಿಹಾಸದ ವ್ಯಂಗ್ಯವೇ ಸರಿ... !

ಕೃಷಿ, ಜಗತ್ತಿನ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲಿ ಒಂದು.  ಏನಿಲ್ಲವೆಂದರೂ ಈ ವೃತ್ತಿ ಅಂದಾಜು ಕೆಲವು ಸಾವಿರ ವರ್ಷಗಳಷ್ಟಾದರೂ ಹಳೆಯದು.  ನಾವು ಕೂಡಾ ಅದೇ ವೃತ್ತಿಯವನು ಅಂತ ಎದೆ ತಟ್ಟಿಕೊಂಡು ಹೇಳಬಲ್ಲ ಹೆಮ್ಮೆ ನನ್ನದು...!!  ನನಗೆ ಮತ್ತು ನನ್ನಂತಹ ಕೋಟ್ಯಾನುಕೋಟಿ ರೈತರಿಗೆಲ್ಲಾ ಹೆತ್ತಮ್ಮ ಬೇರೆ ಬೇರೆಯಾದರೂ, ಭೂಮಿತಾಯಿ ಮಾತ್ರ ಒಬ್ಬಳೇ... ಹಾಗಾಗಿಯೇ ನಾವೆಲ್ಲ ಒಂದೇ ತಾಯಿಯ ಮಕ್ಕಳು... ಮಣ್ಣಿನಮಕ್ಕಳು. ಅಣ್ಣ ತಮ್ಮಂದಿರು.. ಸಹೋದರ ಸಹೋದರಿಯರು. ...

ಸಾವಿರ ವರ್ಷಗಳಿಂದಲೂ ತನ್ನೊಡಲನ್ನು ರೈತರ ನೇಗಿಲಿಗೆ ಒಡ್ಡಿಕೊಂಡ ಭೂಮಿ ತಾಯಿ ತನ್ನನ್ನು ನಂಬಿದವರನ್ನು ಕೈಬಿಟ್ಟಿಲ್ಲ... ತನ್ನೊಡಲೊಳಗೆ ಬಿತ್ತಿದನ್ನು ಬೆಳೆದು ಮತ್ತೆ ರೈತನಿಗೆ ವಾಪಸು ಕೊಟ್ಟಿದ್ದಾಳೆ...  ಹೀಗೆ ಪಡೆದ್ದದ್ದನ್ನು ರೈತ,  ಜನರಿಗೆ ಹಂಚಿ ಲೋಕದ ಜನರ ಹಸಿವನ್ನು ನೀಗಿಸಿದ್ದಾನೆ... ಆದರೆ ಅಂಥಾ ರೈತನೇ ಇವತ್ತು ಉಪವಾಸ ಬಿದ್ದು ನೇಣಿಗೆ ಶರಣಾಗುವ ಪರಿಸ್ಥಿತಿ ಬಂದಿದೆ... 

ಕೃಷಿ ಮೊದಲಿನಷ್ಟು ಲಾಭದಾಯಕವಾಗಿ ಉಳಿದಿಲ್ಲ... ಪ್ರಾಕೃತಿಕ ಕಾರಣಗಳ ಜೊತೆಗೆಯೇ ಸ್ವಯಂಕೃತಾಪರಾಧಗಳೂ ಇವೆ... ಅದೆಲ್ಲಕ್ಕಿಂಥಾ ಹೆಚ್ಚಾಗಿ ನಮ್ಮ ದೇಶದಲ್ಲಿ ಕೃಷಿ ಪದ್ಧತಿ ವೈಜ್ಞಾನಿಕವಾಗಿ ಇಲ್ಲದಿರುವುದು ಕೂಡಾ ಕಾರಣ.... 

ಅತಿಯಾದ ರಾಸಾಯನಿಕಗಳ ಬಳಕೆ, ನಮ್ಮ ಪ್ರಾಚೀನ ಕೃಷಿ ಪದ್ಧತಿಗಳ ಬಗ್ಗೆ ಅಸಡ್ಡೆ ತೋರಿಸಿದ್ದರಿಂದಾಗಿ ನಾಶವಾದ ಜ್ಞಾನ..... ರೈತನಿಗೆ ಸರಿಯಾಗಿ ಸಿಗದ ಸಲಹೆ ನಿರ್ದೇಶನ ಮಾರ್ಗದರ್ಶನಗಳು... ಮಾರುಕಟ್ಟೆಯಲ್ಲಿನ ತೊಂದರೆಗಳು, ಮಧ್ಯವರ್ತಿಗಳ ಹಿಡಿತ... ಹೀಗೆ ದೇಶದ ಬೆನ್ನೆಲುಬಾಗಿರುವ ರೈತನೇ ತನ್ನ ಬೆನ್ನೆಲುಬನ್ನು ನೆಟ್ಟಗೆ ಮಾಡಿಕೊಂಡು ನಿಲ್ಲಲಾಗದ ಅಸಹಾಯಕ ಪರಿಸ್ಥಿತಿ ಉಂಟಾಗಿದೆ... 

ರೈತನ ಸಮಸ್ಯೆಗೆ ಪರಿಹಾರಗಳೇನು..? ಪ್ರಾಕೃತಿಕ ಕಾರಣಗಳಿಂದಾಗಿ ಆಗುವ ಫಸಲು ನಷ್ಟಗಳನ್ನು ಹೊರತುಪಡಿಸಿದರೆ ರೈತರ ಬಹುತೇಕ ಸಮಸ್ಯೆಗಳಿಗೆಲ್ಲಾ ವೈಜ್ಞಾನಿಕವಾಗಿಯೇ ಪರಿಹಾರವನ್ನು ಕಂಡು ಕೊಳ್ಳಬಹುದು... ನಮ್ಮ ಪಾರಂಪರಿಕ ಕೃಷಿ ಜ್ಞಾನ, ಪದ್ಧತಿಗಳ ಜೊತೆಗೆಯೇ ಆಧುನಿಕ ವೈಜ್ಞಾನಿಕ ಪದ್ಧತಿಗಳನ್ನು ಅನುಸಂಧಾನ ಮಾಡಿಕೊಂಡು ಒಂದು ಹೊಸ ವ್ಯವಸ್ಥೆಯನ್ನು ಆವಿಷ್ಕಾರ ಮಾಡುವ ಕೆಲಸ ಈಗಾಗಲೇ ಬಹಳಷ್ಟು ನಡೆದಿದೆ.  ಅಂತ ಪ್ರಯತ್ನಗಳು ಕೇಂದ್ರ ಸರಕಾರದ ಮಟ್ಟದಲ್ಲೂ ನಡೆದಿದೆ... ಜೊತೆಗೆ ಸಾಕಷ್ಟು ಸರ್ಕಾರೇತರ ಸಂಸ್ಥೆಗಳು ಕೂಡಾ... ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದೆ.... 

ನನ್ನ ವೈಯುಕ್ತಿಕ ಅನುಭವಗಳೇ ಸಾಕಷ್ಟಿದೆ... ನಾನು ಕೃಷಿಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಪ್ರಾರಂಭ ಮಾಡಿದ 'ಕದಂಬ ಫೌಂಡೇಶನ್' ಕಳೆದ ಎರಡು ದಶಕಗಳಿಂದ ನಿರಂತರವಾಗಿ ಕೃಷಿ ಮತ್ತು ಕೃಷಿಕರಿಗೆ ಹೆಚ್ಚಿನ ಒತ್ತು  ನೀಡಿ  ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ... ನಮ್ಮ ಜಿಲ್ಲೆಯ ಅಡಿಕೆ ಕೃಷಿಕರ ಸ್ಪಂದಿಸುವ ನಿಟ್ಟಿನಲ್ಲಿ ಅಡಿಕೆ ಕೃಷಿಯ ಜೊತೆಗೆ ಬೆಳೆಯಬಹುದಾದ ಕೋಕೋ, ವೆನಿಲ್ಲಾ ಮತ್ತಿತರ ಪರ್ಯಾಯ ಬೆಳೆಗಳ ಬಗ್ಗೆ, ಪರ್ಯಾಯ ಕೃಷಿಯ ಬಗ್ಗೆ  ಸಂಪೂರ್ಣ ಮಾಹಿತಿ, ಬೇಕಾದ ತಾಂತ್ರಿಕ ಆರ್ಥಿಕ ಸಹಾಯದ ಜೊತೆಗೆ ಅವರ ಕೃಷಿಯುತ್ಪನ್ನಗಳ ಮರುಖರೀದಿಯನ್ನೂ ಮಾಡಿ ಕೃಷಿಕರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಕದಂಬ ಫೌಂಡೇಶನ್ ಮೂಲಕ ಸಾಕಾರಗೊಳಿಸಿದ ಸಾಕಾರ ಭಾವ ನನ್ನದು... 

ತುಂಬಾ ಲಾಭದಾಯಕ ವಾಣಿಜ್ಯ ಉದ್ದೇಶದ ಅಗರ್ ವುಡ್ ಕೃಷಿ ನಮ್ಮ ಜಿಲ್ಲೆಗೆ ಅತ್ಯಂತ ಹೊಂದುವಂಥದ್ದಾಗಿದ್ದು ೨೦೦೯ ರಲ್ಲಿ ಇದನ್ನು ಕದಂಬ ಸಂಸ್ಥೆ ತುಂಬಾ ದೊಡ್ಡ ಮಟ್ಟದಲ್ಲೇ ಜಿಲ್ಲೆಗೆ ಪರಿಚಯಿಸಿತು... ಇದಕ್ಕೆ ಬೇಕಾದ ಎಲ್ಲ ರೀತಿಯ ಮಾಹಿತಿ, ತರಬೇತಿ ಎಲ್ಲವನ್ನು ಕೂಡ ಒದಗಿಸಲಾಯಿತು.  ವಿದೇಶಗಳಲ್ಲಿ ಅತ್ಯಂತ ಬೇಡಿಕೆಯಿರುವ, ಬೆಲೆ ಬಾಳುವ ಅಗರವುಡ್ ಸುವಾಸನಾ ದ್ರವ್ಯದ ಕೃಷಿಯ ಜೊತೆಗೆಯೇ ಜಿಲ್ಲೆಯಲ್ಲಿ ಹಲವಾರು ಸುಗಂಧ ಸಸ್ಯಗಳ ಕೃಷಿಯನ್ನು ಕೂಡಾ ಕದಂಬ ಪರಿಚಯಿಸಿತು... 

ಇನ್ನೊಂದು ಲಾಭದಾಯಕ ಉಪಬೆಳೆಯಾಗಿ ರಾಜ್ಯಕ್ಕೆ ಪ್ರಪ್ರಥಮ ಬಾರಿಗೆ ಅರಗು ಕೃಷಿಯನ್ನು ಕೂಡಾ ಕದಂಬ ಸಂಸ್ಥೆಯ ಮೂಲಕ ಪರಿಚಯಿಸಿದ ಹೆಮ್ಮೆ ನಮಗಿದೆ.  ಮೊದಲು ನಮ್ಮ ಜಿಲ್ಲೆಯ ಕೃಷಿಕರಿಗೆ ಈ ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಅವರಲ್ಲಿ ಪ್ರೇರಣೆ ಮೂಡಿಸಿ ಅರಗು ಕೃಷಿ ಶುರುಮಾಡಲು ಬೇಕಾದ ಸಸಿಗಳನ್ನು ಕೂಡ ವಿತರಿಸಿ, ಅರಗು ಬೆಳೆಯನ್ನು ಪರಿಚಯಿಸಿದ ನಂತರ ಕರ್ನಾಟಕದ ಇತರ ಜಿಲ್ಲೆಗಳ ರೈತರೂ ಉತ್ಸುಕರಾಗಿ ಮುಂದೆ ಬಂದರು... ಮೈಸೂರಿನಲ್ಲಿ  ತಂಬಾಕು ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಅರಗನ್ನು ಪರ್ಯಾಯ ಬೆಳೆಯನ್ನಾಗಿ ಅಲ್ಲಿಯೂ ದೊಡ್ಡ ಮಟ್ಟದಲ್ಲಿ ಪರಿಚಯಿಸುವ ಕೆಲಸಗಳಾಗಿವೆ... 

ಭಾರತ ಮೂಲದ ವಿದೇಶೀ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ Soil Health Management System (ಮಣ್ಣಿನ ಆರೋಗ್ಯ ಸುಧಾರಣೆಯ ವ್ಯವಸ್ಥೆ)ಯನ್ನು ಪರಿಚಯಿಸಲಾಗಿದೆ.. ಸಾವಯವ ಕೃಷಿಯ ಬಗ್ಗೆಯೂ ಕದಂಬದಿಂದ ಸಾಕಷ್ಟು ಕೆಲಸಗಳಾಗಿವೆ... 

ಗ್ರಾಮೀಣ ಭಾಗದ ರೈತರಿಗೆ ಉತ್ತಮ ಬೆಲೆ ಸಿಗಬೇಕೆಂದು ಗ್ರಾಮೀಣ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡಾ ಕದಂಬ ಶುರು ಮಾಡಿದೆ... 

ಇತ್ತೀಚಿಗೆ 'ಡ್ರ್ಯಾಗನ್ ಫ್ರೂಟ್' (Dragon Fruit)

ಕೃಷಿ ಮತ್ತು 'ಕಪ್ಪು ಅರಿಶಿನ' (Black turmeric) ಕೃಷಿಯನ್ನೂ ಕೂಡ ಜಿಲ್ಲೆಗೆ ಪರಿಚಯಿಸಿದ್ದೇವೆ... ಹೀಗೆ ಕದಂಬ ಎರಡು ದಶಕಗಳಿಂದ ನಮ್ಮ ಜಿಲ್ಲೆಯ ಮಾತ್ರವಲ್ಲದೆ ಕರ್ನಾಟಕದ ಉಳಿದ ಜಿಲ್ಲೆಗಳ ರೈತರಿಗೂ ಕೃಷಿಯ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ತರಬೇತಿ ನೀಡುವ ಜಾಗೃತಿ ಮೂಡಿಸುವ... ಕೃಷಿಗೆ ಬೇಕಾದ ಸಹಾಯ, ಕೃಷಿ ಉತ್ಪನ್ನ ಖರೀದಿಗೆ ವ್ಯವಸ್ಥೆ, ಹೀಗೆ ಹಲವು ಕೆಲಸಗಳಲ್ಲಿ ತೊಡಗಿಸಿ ಕೊಂಡದಿದ್ದೇವೆ ಎಂಬ ಅಲ್ಪ ತೃಪ್ತಿ ನನ್ನದು... 

ಜೊತೆಗೆ ನಮ್ಮ ಕೇಂದ್ರ ಸರಕಾರ ಕೂಡಾ ರೈತರಿಗೆ, ಅವರ ಬೆಳೆಗಳಿಗೆ ವಿಮಾ ಸೌಲಭ್ಯ ಒದಗಿಸುವ  ಫಸಲ್  ಬಿಮಾ ಯೋಜನ, soil health cardಗಳು.. (ಇದುವರೆಗೆ ೧೩ ಕೋಟಿ ಕಾರ್ಡ್ ಗಳನ್ನೂ ವಿತರಿಸಲಾಗಿದೆ) ಯೂರಿಯಾ ಕಾಳಸಂತೆಯಲ್ಲಿ ಬಿಕರಿಯಾಗುವುದನ್ನು ತಪ್ಪಿಸಲು ಯೂರಿಯಾಗೆ ಬೇವಿನ ರಸದ ಹೊದಿಕೆ... ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ ಅಡಿಯಲ್ಲಿ ೨೮. ೫ ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ... ಕೃಷಿ ವೆಚ್ಚದ ನೂರೈವತ್ತು ಶೇಕಡಾ ಹೆಚ್ಚು ಬೆಂಬಲ ಬೆಲೆ ನೀಡುವ ಚಾರಿತ್ರಿಕ ಹೆಜ್ಜೆ... ಕೃಷಿಗೆ ಮೀಸಲು ಅನುದಾನವನ್ನು ೬೨, ೩೭೬ ಕೋಟಿ  ರೂಪಾಯಿಗೆ ಏರಿಸಿದ್ದು... ಕೃಷಿಯ ಸಂಪೂರ್ಣ ಬದಲಾವಣೆಗಾಗಿ ಹಮ್ಮಿಕೊಂಡಿರುವ ವೈಜ್ಞಾನಿಕ ತಳಹದಿಯ ಬಹು ಆಯಾಮಗಳುಳ್ಳ ಬೃಹತ್ ಯೋಜನೆ- "ಬೀಜ್ ಸೆ ಬಜಾರ್ ತಕ್" ಹೀಗೆ ಯಾವ ಸರ್ಕಾರದ ಕಾಲದಲ್ಲೂ ಆಗದಷ್ಟು ರೈತ ಪರ ಕೆಲಸಗಳು ಈ ಬಾರಿ ಆಗಿದೆ... 

ಅದಕ್ಕೆ ತಕ್ಕ ಹಾಗೆ ಒಂದಷ್ಟು ಹವಾಮಾನ ವೈಪರೀತ್ಯಗಳ ನಡುವೆಯೂ ಭೂಮಿ ತಾಯಿ ಈ ಬಾರಿ ಒಲಿದಿದ್ದಾಳೆ... ಚಾರಿತ್ರಿಕ ಎನ್ನುವ ರೀತಿಯಲ್ಲಿ ೨೭೯. ೫೧ ಮಿಲಿಯನ್ ಟನ್ನುಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗಿದೆ... 

ರೈತ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ... 

गणयन्ति न ये सूर्यं वृष्टिं शीतं च कर्षकाः |

यतन्ते सस्यलाभाय तैः साकं हि वसामि अहं ||  

ಗಣಯಂತಿ ನ ಯೇ ಸೂರ್ಯಮ್, ವೃಷ್ಟಿಮ್, ಶೀತಮ್ ಚ ಕರ್ಷಕಾಹ 

ಯತಂತೇ ಸಸ್ಯಲಾಭಾಯ ತೈಹಿ ಸಾಕಂ ಹಿ ವಸಂ ಅಹಂ... 

ಈ ಸುಭಾಷಿತ ತುಂಬಾ ಅದ್ಭುತ ಮತ್ತು ಅರ್ಥಗರ್ಭಿತ... 

"ರೈತ ಸೂರ್ಯನ ಬಿಸಿಲನ್ನು, ಮಳೆಯನ್ನೂ, ಚಳಿಯನ್ನು ಲೆಕ್ಕಿಸದೆ ತಾನು ಬಿತ್ತಿ ಬೆಳೆದ ಸಸ್ಯಗಳಿಂದ ಒಳ್ಳೆಯ ಫಸಲನ್ನು ಪಡೆಯಲು ನಿರಂತರವಾಗಿ ಶ್ರಮಿಸುತ್ತಾನೆ.. ಹಾಗಾಗಿಯೇ ಭಗವಂತನು ರೈತನ ಜೊತೆಗೇ ಇರುತ್ತಾನೆ..." ಎಂಬುದು ಈ ಸುಭಾಷಿತದ ಭಾವಾರ್ಥ... ಎಂಥಾ ಅದ್ಭುತವಾದ ಸಾಲುಗಳಿವು... ನಿಜಕ್ಕೂ ರೈತನ ಜೊತೆಗೆ ದೇವರಿರುತ್ತಾನೆ... ಅಷ್ಟೇ ಅಲ್ಲ... ಲೋಕಕ್ಕೆ ಅನ್ನ ಹಾಕುವ ರೈತ ಕೂಡಾ ದೇವರ ಸಮಾನನೇ ಅಲ್ಲವೇ...? 

ಈ ಸಂಧರ್ಭದಲ್ಲಿ ನಾಡಿನ ಪ್ರತಿಯೊಬ್ಬ ರೈತನಿಗೂ, ರೈತ ಕುಟುಂಬಗಳಿಗೂ ರಾಷ್ಟ್ರೀಯ ರೈತರ ದಿನದ ಶುಭಾಶಯಗಳನ್ನು ಪ್ರಣಾಮಗಳೊಂದಿಗೆ ಸಲ್ಲಿಸುತ್ತಿದ್ದೇನೆ...! 

ಮತ್ತೊಮ್ಮೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು... 

 

Related posts