Infinite Thoughts

Thoughts beyond imagination

ಸಂವಿಧಾನ ರೂಪಿಸಿದ ಬಾಬಾಸಾಹೇಬರು...... ಅವಕಾಶವಿದ್ದಲ್ಲಿ ಅದನ್ನು ಸುಡುವ ಮೊದಲಿಗ ನಾನೇ ಎಂದರು....!

ಸಂವಿಧಾನ ರೂಪಿಸಿದ ಬಾಬಾಸಾಹೇಬರು...... 
ಅವಕಾಶವಿದ್ದಲ್ಲಿ ಅದನ್ನು ಸುಡುವ ಮೊದಲಿಗ ನಾನೇ ಎಂದರು....!

“ಪ್ರಜಾಪ್ರಭುತ್ವವು ಒಂದು ಆಡಳಿತದ ಪದ್ದತಿಯಷ್ಟೇ ಅಲ್ಲ, ಅದು ಮೂಲತಃ ಸಾಮೂಹಿಕ ಜೀವನದ ಪದ್ಧತಿಯಾಗಿದೆ. ಅದರಲ್ಲಿರುವುದೇ ಸಾಮೂಹಿಕತೆ; ಎಲ್ಲವನ್ನೂ ಪರಸ್ಪರ ವಿನಿಮಯ ಮಾಡಿಕೊಳ್ಳುವ ಅನುಭವವೇ ಅದಕ್ಕೆ ಆಧಾರ. ತಮ್ಮ ಜತೆಯಿರುವವರೊಂದಿಗೆ ಪರಮ ಆದರದ ಭಾವನೆಯಿಂದ ವ್ಯವಹರಿಸುವುದೇ ಪ್ರಜಾಪ್ರಭುತ್ವ”.

ಇದು ಪ್ರಜಾಪ್ರಭುತ್ವದ ಕುರಿತ ಡಾ. ಅಂಬೇಡ್ಕರ್ ಅವರ ವ್ಯಾಖ್ಯೆ. ಪ್ರಜಾಪ್ರಭುತ್ವ ಎನ್ನುವುದೊಂದು ‘ಜೀವನ ಪದ್ಧತಿ’ ಎನ್ನುವ ಅವರ ಮಾತು ಬಹಳ ಮಹತ್ವದ್ದು. ಭಾರತೀಯ ಪಾರಂಪರಿಕ ಆಡಳಿತ ನೀತಿಯ ಲಕ್ಷ್ಯ ಇದ್ದುದು ಎಲ್ಲರ ಕಲ್ಯಾಣದಲ್ಲಿ. ಹಾಗಾಗಿಯೇ ಶಾಂತಿ ಮಂತ್ರ ಹೇಳುವುದೂ “ಸರ್ವೇಪಿ ಸುಖಿನಸ್ಸಂತು ಸರ್ವೇ ಸಂತು ನಿರಾಮಯಾಃ, ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ ಭವೇತ್” ಎಲ್ಲರೂ ಸುಖಿಗಳಾಗಿರಲಿ, ಎಲ್ಲರೂ ಆರೋಗ್ಯವಂತರಾಗಿರಲಿ, ಎಲ್ಲರೂ ಸುರಕ್ಷಿತರಾಗಿರಲಿ, ಯಾರೂ ದುಃಖಿಗಳಾಗದಿರಲಿ ಎನ್ನುವುದೇ ಆಶಯ. ಪ್ರಜಾಪ್ರಭುತ್ವವೆಂದರೆ ಬಹುಮತದ ಅಧಿಕಾರ. ‘ಹೆಚ್ಚು ಜನರ ಹೆಚ್ಚು ಸುಖ’ ಎಂದಾದರೆ ಉಳಿದವರ ಕಥೆ ಏನು? ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಬಹುಸಂಖ್ಯಾತರ ಆಡಳಿತದಲ್ಲಿ ಅಲ್ಪ ಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು ಎನ್ನುವ ಮಾತು ಬಂದಿರುವುದು.

ಡಾ. ಅಂಬೇಡ್ಕರ್ ಅವರು ಪ್ರತಿಪಾದಿಸಿರುವುದು ಭಾರತೀಯ ಆಶಯವಾದ ಸರ್ವರ ಸುಖವನ್ನೂ ಸಾಧಿಸುವ ಪ್ರಜಾಪ್ರಭುತ್ವವನ್ನು. ಅದು ನಮ್ಮ ಸಂವಿಧಾನದ ಸಹಜ ಲಕ್ಷಣವೇ ಆಗಬೇಕೆಂದು ಬಾಬಾಸಾಹೇಬರು ಬಯಸಿದ್ದರು. ಅದಕ್ಕೆ ಸ್ಪಷ್ಟ ನಿದರ್ಶನವೂ ಇದೆ. ೧೯೪೮ರ ನವೆಂಬರ್‌ನಲ್ಲಿ ಸೇರಿದ್ದ ಸಂವಿಧಾನ ಸಮಿತಿಯ ಸಭೆಯಲ್ಲಿ ಬಿಹಾರವನ್ನು ಪ್ರತಿನಿಧಿಸುತ್ತಿದ್ದ ಶ್ರೀ ಕೆ.ಟಿ.ಶಾ ಅವರು ಒಂದು ಪ್ರಸ್ತಾವನೆಯನ್ನು ಮಂಡಿಸಿದರು. “ದೇಶದ ಎಲ್ಲ ಜನರಿಗೆ ಸಮಾನ ನ್ಯಾಯ, ಸಮಾನ ಅವಕಾಶಗಳನ್ನು ಭರವಸೆಯಾಗಿ ನೀಡುವುದಕ್ಕೆ ಬೇಕಾಗಿ, ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎಂಬೆರಡು ಶಬ್ದಗಳನ್ನು ಸೇರಿಸಬೇಕು. ಇದರಿಂದ ಜನಸಾಮಾನ್ಯನೊಬ್ಬ ಮರ್ಯಾದೆಯುತ ನಾಗರಿಕ ಬದುಕಿಗೆ ಬೇಕಾದ ಎಲ್ಲವನ್ನೂ ಪಡೆಯುವ ಅವಕಾಶವನ್ನು ಖಾತ್ರಗೊಳಿಸಿದಂತಾಗುತ್ತದೆ” ಎಂದು ಕೆ.ಟಿ.ಶಾ ಹೇಳಿದರು. ಶಾ ಅವರ ಸಲಹೆಯನ್ನು ತಿರಸ್ಕರಿಸಿದ ಬಾಬಾಸಾಹೇಬರು ತಮ್ಮ ನಿಲುವಿಗಾಗಿ ನೀಡಿದ ಸಮರ್ಥನೆಯಲ್ಲಿ ಅವರ ಭಾರತೀಯ ಚಿಂತನೆಯ ಸಾರ ಸರ್ವಸ್ವವಿದೆ. ಬಾಬಾಸಾಹೇಬರು ಹೇಳಿದ್ದು “ಜಾತ್ಯತೀತತೆ ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿದೆ. ಅದನ್ನು ಪ್ರತ್ಯೇಕವಾಗಿ ಪೀಠಿಕೆಯಲ್ಲಿ ಉಲ್ಲೇಖಿಸುವುದು ಅನಾವಶ್ಯಕ. ಸಮಾಜವಾದ ಒಂದು ಅರ್ಥನೀತಿ. ಸರಕಾರದ ನೀತಿ ಏನಿರಬೇಕು, ಯಾವ ಸಾಮಾಜಿಕ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಆಯಾ ಕಾಲ ಮತ್ತು ಸಂದರ್ಭಕ್ಕನುಗುಣವಾಗಿ ಜನತೆಯೇ ನಿರ್ಧರಿಸುತ್ತಾರೆ. ಇಂಥದೇ ಅರ್ಥ ನೀತಿಯನ್ನು ಅನುಸರಿಸಬೇಕೆಂದು ಸಂವಿಧಾನದ ಪೀಠಿಕೆಯಲ್ಲಿ ವಿಧಿ ಬದ್ಧಗೊಳಿಸುವುದು ಪ್ರಜಾಪ್ರಭುತ್ವವಕ್ಕೆ ವಿರೋಧವಾದುದಾಗಿದೆ. ಅದು ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತದೆ”.

ಸಂವಿಧಾನ ಕಾಪಾಡಬೇಕಾದ ಶಾಶ್ವತ ಮೌಲ್ಯಗಳಾವವು, ಅದರ ಮಾರ್ಗದರ್ಶನದಲ್ಲಿ ರೂಪಿತವಾಗಬೇಕಾದ ನೀತಿ ನಿಯಮಗಳಾವವು ಎನ್ನುವುದನ್ನು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಮೂಲತಃ ಸಂವಿಧಾನವೊಂದು ಎಲ್ಲರ ಪರವಾಗಿರುತ್ತದೆ. ದೇಶದ ಪ್ರತಿ ಪ್ರಜೆಯ ವಿಕಾಸಕ್ಕೆ ಬೇಕಾದ ಅವಕಾಶದ ಭರವಸೆಯನ್ನು ನೀಡುತ್ತದೆ. ಸಂವಿಧಾನ ಬಡವರ ಪರ, ಶ್ರೀಮಂತರ ಪರ ಎಂದೆಲ್ಲ ಹೇಳುವುದು ಅಜ್ಞಾನದ ಪ್ರದರ್ಶನವಾಗುತ್ತದೆ. ಹಾಗೆ ಆಯ್ದ ಕೆಲವರ ಪರವಾಗಿ ಮಾತ್ರ ಸಂವಿಧಾನ ನಿಲ್ಲುತ್ತದಾದರೆ ಅದು ಸರ್ವಸಮ್ಮತವಾಗಲಾರದು. ಭಾರತದ ಸಂವಿಧಾನ ಶಿಲ್ಪಿ ಎನಿಸಿಕೊಂಡ ಬಾಬಾಸಾಹೇಬರ ಅಧ್ಯಯನ, ಚಿಂತನ, ಪರಿಶ್ರಮಗಳೆಲ್ಲವೂ ಅಪಾರವಾದವು.

ಆ ಕಾಲದ ಘನ ವಿದ್ವಾಂಸರಾಗಿದ್ದ ಬಾಬಾಸಾಹೇಬರು ಜೀವನಾನುಭವದಲ್ಲಿಯೂ ದೊಡ್ಡವರಾಗಿದ್ದರು. ಅಸಾಧ್ಯವಾದುದನ್ನು ಸಾಧಿಸಿದ ಸಾಧಕರಾಗಿದ್ದರು. ಆದರೆ ಸಂವಿಧಾನ ರಚನೆಯಲ್ಲಿ ಅವರ ವಿದ್ಯೆ ವಿವೇಕಗಳಿಗೆ ಪೂರ್ಣ ಸ್ವಾತಂತ್ರ್ಯವಿತ್ತೇ ಎನ್ನುವುದೂ ಮುಖ್ಯವಾಗುತ್ತದೆ. ಒಂದು ಉದಾಹರಣೆ ನೋಡಿ; ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅನುಚ್ಛೇದ ೩೭೦ನ್ನು ಸೇರಿಸುವ ಪ್ರಸ್ತಾವ ಬಂದಾಗ ಬಾಬಾಸಾಹೇಬರು ಹೇಳಿದ ಮಾತು, “ಭಾರತ, ನಿಮ್ಮ ಗಡಿಗಳನ್ನು ರಕ್ಷಿಸಬೇಕು, ನಿಮ್ಮಲ್ಲಿ ರಸ್ತೆಗಳನ್ನು ನಿರ್ಮಿಸಬೇಕು, ನಿಮಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಿರಬೇಕು ಮತ್ತು ಕಾಶ್ಮೀರಕ್ಕೆ ಭಾರತದಂತೆ ಸಮಾನ ಸ್ಥಾನಮಾನ ಬೇಕು, ಆದರೆ ಭಾರತ ಸರಕಾರಕ್ಕೆ ಸೀಮಿತ ಅಧಿಕಾರ ಮತ್ತು ಭಾರತೀಯರಿಗೆ ಕಾಶ್ಮೀರದಲ್ಲಿ ಯಾವ ಅಧಿಕಾರವೂ ಇರಬಾರದು. ಈ ಪ್ರಸ್ತಾವನೆಗೆ ನಾನು ಒಪ್ಪಿಗೆ ಕೊಡುವುದೆಂದರೆ ಭಾರತದ ಹಿತಾಸಕ್ತಿಗೆ ದ್ರೋಹಬಗೆದಂತೆ. ಕಾನೂನು ಸಚಿವನಾಗಿ ನಾನಿದನ್ನು ಮಾಡಲಾರೆ”.

ಅಂಬೇಡ್ಕರರಿಗೆ ಇಷ್ಟವೇ ಇಲ್ಲದ ಅನುಚ್ಛೇದ ೩೭೦ ಸಂವಿಧಾನದಲ್ಲಿ ಸೇರಿಕೊಂಡಿತು. ಇಂದಿಗೂ ಕಾಶ್ಮೀರ ನಮಗೆ ಸಮಸ್ಯೆಯಾಗಿರುವುದು ಅದೇ ಕಾರಣದಿಂದಲೇ. ಈ ವಿಷಯದಲ್ಲಿ ಬಾಬಾಸಾಹೇಬರ ನಿಲುವು ಯೋಗ್ಯವಾಗಿತ್ತು, ವ್ಯಾವಹಾರಿಕವಾಗಿತ್ತು. ಆದರೆ ನೆಹರು ಮತ್ತು ಅವರ ಸಂತಾನಕ್ಕೆ ಅದು ಬೇಕಾಗಿರಲಿಲ್ಲ! ಇಂತಹ ಅದೆಷ್ಟೋ ಮುಜುಗರಗಳನ್ನೂ, ಒತ್ತಡಗಳನ್ನೂ ಎದುರಿಸುತ್ತಲೇ ಸಂವಿಧಾನವನ್ನು ರಚಿಸಬೇಕಾಯಿತು ಎನ್ನುವುದು ಇತಿಹಾಸದ ಸತ್ಯ. ಈ ಕುರಿತ ತಮ್ಮ ಅಸಮಾಧಾನವನ್ನೂ ಅತೃಪ್ತಿಯನ್ನೂ ಬಾಬಾಸಾಹೇಬರು ವ್ಯಕ್ತಪಡಿಸಿದ್ದಾರೆ.

ಸಂವಿಧಾನವನ್ನು ರಚಿಸಿದವರು ನೀವೇ ಎಂದು ಅವರ ವಿರೋಧಿಗಳು ಚುಚ್ಚಿದಾಗ ಬಾಬಾಸಾಹೇಬರು ಹೇಳಿದ ಮಾತು “ಇಲ್ಲ ಸ್ವಾಮಿ, ನಾವು ಒಂದು ಪರಂಪರೆಯ ವಾರಸುದಾರರು. ನೋಡಿ, ಸಂವಿಧಾನ ರಚಿಸಿದವರು ಎಂದು ಜನರು ನನಗೆ ಹೇಳುತ್ತಲೇ ಇದ್ದಾರೆ. ಅದಕ್ಕೆ ನನ್ನ ಉತ್ತರ: ನಾನು ದುಡಿತದ ಕತ್ತೆ ಮಾತ್ರವಾಗಿದ್ದೆ. ನನಗೆ ಏನನ್ನು ಮಾಡಲು ತಿಳಿಸಲಾಗಿತ್ತೋ, ನಾನದನ್ನು ಬಹುತೇಕ ನನ್ನಿಚ್ಛೆಗೆ ವಿರುದ್ಧವಾಗಿ ಮಾಡಿರುವೆ”.

ಇಷ್ಟೇ ಅಲ್ಲ ಒಂದು ಬಾರಿಯಂತೂ “ನಾನು ಸಂವಿಧಾನವನ್ನು ರಚಿಸಿದೆ ಎಂದು ಹೇಳುತ್ತಾರೆ. ಆದರೆ ಅದನ್ನು ಸುಟ್ಟುಹಾಕುವುದಕ್ಕೆ ನಾನೇ ಸದಾಸಿದ್ಧ...! ಮೊದಲಿಗ ಎಂದು ಹೇಳಲು ಇಷ್ಟಪಡುತ್ತೇನೆ. ನನಗದು ಬೇಕಾಗಿಲ್ಲ....!. ನನ್ನ ಸ್ವಭಾವಕ್ಕೆ ಅದು ಒಪ್ಪಿಗೆಯಾಗುವಂತಿಲ್ಲ” ಎಂದಿದ್ದರು. ಆಗ ಬಾಬಾಸಾಹೇಬರ ಕುತ್ತಿಗೆಯ ಮೇಲೆ ಒತ್ತಾಯದ ನೊಗ ಹೇರಿದವರು ನೆಹರು ನೇತೃತ್ವದ ಕಾಂಗ್ರೆಸ್ಸು, ಅವರ ನೆರಳಿನಂತಿದ್ದ ಕಮ್ಯುನಿಸ್ಟರೇ ಅಲ್ಲವೆ? ಮುಂದೆಯೂ ತುರ್ತು ಪರಿಸ್ಥಿತಿಯನ್ನು ಹೇರಿ, ಎಗ್ಗಿಲ್ಲದೆ ನಮ್ಮ ಸಂವಿಧಾನಕ್ಕೆ ಅನಾವಶ್ಯಕ ತಿದ್ದುಪಡಿಗಳನ್ನು ತಂದವರೂ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಕೂಟವೇ! ಆಗ ಸಂವಿಧಾನ ರಚನೆಯಲ್ಲಿ ತೊಡಕಾಗಿದ್ದವರು, ತಿದ್ದುಪಡಿಯನ್ನು ತಂದು ಅದರ ಆಶಯವನ್ನೇ ಕೊಂದವರು, ಈಗ ಅಂಬೇಡ್ಕರರ ವಾರಸುದಾರರು ತಾವೇ ಎನ್ನುತ್ತಿದ್ದಾರೆ..... ಎಂಥ ವಿಚಿತ್ರ!

ಡಾ. ಬಾಬಾಸಾಹೇಬ ಅಂಬೇಡ್ಕರರ ಅನುಭವ ವಿವೇಕಗಳಿಂದ ಮಾಗಿದ ಸಂವಿಧಾನ ನಿರ್ಮಾಣವಾಗುವ ಸದವಕಾಶವನ್ನು ತಪ್ಪಿಸಿದವರ ಬಗ್ಗೆ ಮತ್ತು ಆ ತಪ್ಪನ್ನು ಈಗಲೂ ಸಮರ್ಥಿಸುವವರ ಬಗ್ಗೆ ನಾವೇ ಎಚ್ಚೆತ್ತುಕೊಳ್ಳಬೇಕು.

Related posts